ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಸಂಸದರಾದ ಶ್ರೀಮತಿ ಸುಧಾ ಮೂರ್ತಿ ಅವರು ಬರೆದಿರುವ 'ಟೈಡ್ಸ್ ಆಫ್ ಟೈಮ್: ಭಾರತ್ಸ್ ಹಿಸ್ಟರಿ ಥ್ರೂ ಮ್ಯೂರಲ್ಸ್ ಇನ್ ಪಾರ್ಲಿಮೆಂಟ್' ಪುಸ್ತಕವನ್ನು ಬಿಡುಗಡೆ ಮಾಡಿದ  ಉಪರಾಷ್ಟ್ರಪತಿ


ಸಂವಿಧಾನ ಸದನದಲ್ಲಿನ ಭಿತ್ತಿಚಿತ್ರಗಳು ಕೇವಲ ಕಲಾಕೃತಿಗಳಲ್ಲ, ಬದಲಿಗೆ ಭಾರತದ ನಾಗರಿಕ ಪಯಣವನ್ನು ಪ್ರತಿಬಿಂಬಿಸುವ ದೃಶ್ಯ ನಿರೂಪಣೆಗಳಾಗಿವೆ ಎಂದು ಉಪರಾಷ್ಟ್ರಪತಿ ಹೇಳಿದರು

ಸಂಸದೀಯ ಭಿತ್ತಿಚಿತ್ರಗಳ ಕಾಲಾತೀತ ಸೌಂದರ್ಯ ಮತ್ತು ಆಳವಾದ ಸಾಂಕೇತಿಕತೆಯನ್ನು ಸೆರೆಹಿಡಿದಿದ್ದಕ್ಕಾಗಿ ಶ್ರೀಮತಿ ಸುಧಾಮೂರ್ತಿ ಅವರನ್ನು ಶ್ಲಾಘಿಸಿದ ಉಪರಾಷ್ಟ್ರಪತಿ

ಭಾರತದ ನಿರಂತರವಾದ, ಎಲ್ಲರನ್ನೂ ಒಳಗೊಂಡ ಮತ್ತು ಆಳವಾಗಿ ಬೇರೂರಿರುವ ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಒತ್ತಿ ಹೇಳಿದ ಉಪರಾಷ್ಟ್ರಪತಿಗಳು, ಭಾರತವನ್ನು "ಪ್ರಜಾಪ್ರಭುತ್ವದ ತಾಯಿ" ಎಂದು ಬಣ್ಣಿಸಿದರು

ಭಾರತ ಸದಾ ಒಂದಾಗಿದೆ ಮತ್ತು ಎಂದೆಂದಿಗೂ ಒಂದಾಗಿ ಉಳಿಯುತ್ತದೆ ಎಂದು ಉಪರಾಷ್ಟ್ರಪತಿ ಹೇಳಿದರು

ಪ್ರಕಟಣಾ ದಿನಾಂಕ: 01 APR 2026 12:48PM by PIB Bengaluru

ಭಾರತದ ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಸಭಾಪತಿಗಳಾದ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಇಂದು ನವದೆಹಲಿಯ ʻಸಂವಿಧಾನ್ ಸದನʼದಲ್ಲಿ ಸಂಸದರಾದ (ರಾಜ್ಯಸಭಾ ಸದಸ್ಯರಾದ) ಶ್ರೀಮತಿ ಸುಧಾ ಮೂರ್ತಿ ಅವರು ಬರೆದ, ಲೋಕಸಭಾ ಸಚಿವಾಲಯ ಪ್ರಕಟಿಸಿದ 'ಟೈಡ್ಸ್ ಆಫ್ ಟೈಮ್: ಭಾರತ್ಸ್ ಹಿಸ್ಟರಿ ಥ್ರೂ ಮ್ಯೂರಲ್ಸ್ ಇನ್ ಪಾರ್ಲಿಮೆಂಟ್' ಪುಸ್ತಕವನ್ನು ಬಿಡುಗಡೆ ಮಾಡಿದರು.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, ಕಾರ್ಯಕ್ರಮದ ಬಗ್ಗೆ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಇದೇವೇಳೆ, "ಸಂಸದೀಯ ಭಿತ್ತಿಚಿತ್ರಗಳ ಕಾಲಾತೀತ ಸೌಂದರ್ಯ ಮತ್ತು ಆಳವಾದ ಸಾಂಕೇತಿಕತೆಯನ್ನು" ತಮ್ಮ ರಚನೆಯಲ್ಲಿ ಸೆರೆಹಿಡಿದಿದ್ದಕ್ಕಾಗಿ ಹಾಗೂ ಇತಿಹಾಸವನ್ನು ತಲೆಮಾರುಗಳಾದ್ಯಂತ ಜನರಿಗೆ ಹತ್ತಿರ ತರುವಲ್ಲಿ ಮಾಡಿದ ಪ್ರಯತ್ನಗಳಿಗಾಗಿ ಶ್ರೀಮತಿ ಸುಧಾ ಮೂರ್ತಿ ಅವರನ್ನು ಶ್ಲಾಘಿಸಿದರು. ಸಂವಿಧಾನ ಸದನದಲ್ಲಿನ ಭಿತ್ತಿಚಿತ್ರಗಳು ಕೇವಲ ಕಲಾಕೃತಿಗಳಲ್ಲ, ಬದಲಿಗೆ ಭಾರತದ ನಾಗರಿಕ ಪ್ರಯಾಣವನ್ನು ಪ್ರತಿಬಿಂಬಿಸುವ ದೃಶ್ಯ ನಿರೂಪಣೆಗಳಾಗಿವೆ ಎಂದು ಅವರು ಬಣ್ಣಿಸಿದರು.

ಉತ್ತರದ ವೈಶಾಲಿಯಿಂದ ದಕ್ಷಿಣದ ಕುಡವೊಲೈ ವ್ಯವಸ್ಥೆಯವರೆಗೆ, ಭಾರತದಲ್ಲಿ ಪ್ರಜಾಪ್ರಭುತ್ವ ಆಚರಣೆಗಳು ನಿರಂತರವಾಗಿವೆ, ಎಲ್ಲರನ್ನೂ ಒಳಗೊಂಡಿವೆ ಮತ್ತು ಸಮಾಜದಲ್ಲಿ ಆಳವಾಗಿ ಬೇರೂರಿವೆ ಎಂದು ಅವರು ಒತ್ತಿ ಹೇಳಿದರು. ಈ ಸಂಪ್ರದಾಯಗಳು ಚರ್ಚೆ, ಸಹಮತ ಮತ್ತು ವೈವಿಧ್ಯಮಯ ಅಭಿಪ್ರಾಯಗಳನ್ನು ಗೌರವಿಸುವ ವಿಶಾಲ ನಾಗರಿಕ ಭಾವನೆಯ ಭಾಗವಾಗಿವೆ. ಇವು ಭಾರತವನ್ನು ಭಾರತವನ್ನು "ಪ್ರಜಾಪ್ರಭುತ್ವದ ತಾಯಿ" ಯನ್ನಾಗಿ ಮಾಡಿವೆ ಎಂದು ಅವರು ಹೇಳಿದರು.

ಶ್ರೇಷ್ಠ ತಮಿಳು ಕವಿ ಸುಬ್ರಮಣ್ಯ ಭಾರತಿ ಅವರನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಯವರು, ಭಾರತದ ಬುದ್ಧಿವಂತಿಕೆ, ಘನತೆ, ದಾನ ಮತ್ತು ಸಾಂಸ್ಕೃತಿಕ ಆಳದ ಶ್ರೀಮಂತಿಕೆಯನ್ನು ಒತ್ತಿ ಹೇಳಿದರು. ಅಂತಹ ಅಡಿಪಾಯವು ಸ್ವಾಭಾವಿಕವಾಗಿ ಎಲ್ಲರ ಧ್ವನಿಗಳಿಗೆ ಒಳಗೊಳ್ಳುವಿಕೆ ಮತ್ತು ಗೌರವವನ್ನು ಬೆಳೆಸುತ್ತದೆ ಎಂದು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಂಸತ್ ಭವನದಲ್ಲಿ ಸಾಂಪ್ರದಾಯಿಕ ಚಿಹ್ನೆಗಳ ಏಕೀಕರಣವನ್ನು ಅವರು ಶ್ಲಾಘಿಸಿದರು. ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿಗಳು ಮಾಡಿದ ಭಾಷಣದಲ್ಲಿ ಚೋಳ ರಾಜವಂಶದ ಪವಿತ್ರ ʻಸೆಂಗೋಲ್ʼನ ವಿಧ್ಯುಕ್ತ ಪ್ರದರ್ಶನವನ್ನು ಅವರು ಉಲ್ಲೇಖಿಸಿದರು, ಇದು ಆಧುನಿಕ ಭಾರತವನ್ನು ಅದರ ನಾಗರಿಕ ಬೇರುಗಳೊಂದಿಗೆ ಸಂಪರ್ಕಿಸುವ ಪ್ರಬಲ ಸಂಕೇತವಾಗಿದೆ ಎಂದು ಬಣ್ಣಿಸಿದರು.

ಸಂಸತ್ತು ಸದೃಢ ಪ್ರಜಾಪ್ರಭುತ್ವ, ಸಂವಾದ, ಚರ್ಚೆ, ಭಿನ್ನಾಭಿಪ್ರಾಯ ಮತ್ತು ಸಮಾಲೋಚನೆಯ ಪ್ರಮುಖ ತತ್ವಗಳನ್ನು ಪ್ರತಿನಿಧಿಸುತ್ತದೆ ಎಂದು ಉಪರಾಷ್ಟ್ರಪತಿ ಹೇಳಿದರು. ಚರ್ಚೆ, ಸಮಾಲೋಚನೆ ಮತ್ತು ಭಿನ್ನಾಭಿಪ್ರಾಯ ಅತ್ಯಗತ್ಯವಾಗಿದ್ದರೂ, ಅವು ಅಂತಿಮವಾಗಿ ರಾಷ್ಟ್ರೀಯ ಹಿತದೃಷ್ಟಿಯಿಂದ ರಚನಾತ್ಮಕ ನಿರ್ಧಾರ ತೆಗೆದುಕೊಳ್ಳಲು ನೆರವಾಗಬೇಕು ಎಂದು ಅವರು ಪ್ರತಿಪಾದಿಸಿದರು.

ಈ ಪುಸ್ತಕವು ಭಾರತದ ನಾಗರಿಕತೆಯ ಪ್ರಯಾಣಕ್ಕೆ ಅತ್ಯುತ್ತಮ ಗೌರವ ಎಂದು ಬಣ್ಣಿಸಿದ ಉಪರಾಷ್ಟ್ರಪತಿಗಳು, ಇದು 124 ಭಿತ್ತಿಚಿತ್ರಗಳ ವಿವರಣೆಗಳ ಮೂಲಕ ಇತಿಹಾಸಕ್ಕೆ ಜೀವ ತುಂಬುತ್ತದೆ ಎಂದು ಹೇಳಿದರು. ಈ ಪುಸ್ತಕದ ವಿಚಾರವು ಸಿಂಧೂ ಕಣಿವೆಯ ನಾಗರಿಕತೆಯಿಂದ ಹಿಡಿದು ಮಹರ್ಷಿ ವಾಲ್ಮೀಕಿ ಮತ್ತು ಚಾಣಕ್ಯರಂತಹ ಮಹಾನ್ ಚಿಂತಕರ ಬುದ್ಧಿವಂತಿಕೆ ಹಾಗೂ ಮಹಾವೀರ ಮತ್ತು ಗೌತಮ ಬುದ್ಧನ ಆಧ್ಯಾತ್ಮಿಕ ಬೋಧನೆಗಳವರೆಗೆ ಸವಿಸ್ತಾರವಾಗಿ ವ್ಯಾಪಿಸಿದೆ ಎಂದು ಅವರು ಒತ್ತಿ ಹೇಳಿದರು. ಇದು ಭಾರತದ ಆರಂಭಿಕ ಪ್ರಜಾಪ್ರಭುತ್ವ ಸಂಪ್ರದಾಯಗಳು, ಅಶೋಕ ಮತ್ತು ಛತ್ರಪತಿ ಶಿವಾಜಿ ಮಹಾರಾಜರಂತಹ ಆಡಳಿತಗಾರರ ಸಾಧನೆಗಳು ಹಾಗೂ ಕೊನಾರ್ಕ್ ಸೂರ್ಯ ದೇವಾಲಯದಂತಹ ಸ್ಮಾರಕಗಳಲ್ಲಿ ಪ್ರತಿಫಲಿಸುವ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಭಕ್ತಿ ಚಳವಳಿಯಂತಹ ಸಾಮಾಜಿಕ ಆಂದೋಲನಗಳನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು.

ʻದಂಡಿ ಸತ್ಯಾಗ್ರಹʼದಂತಹ ಚಳವಳಿಗಳು ಹಾಗೂ ಮಹಾತ್ಮ ಗಾಂಧಿ ಮತ್ತು ಸುಭಾಷ್ ಚಂದ್ರ ಬೋಸ್ ಅವರಂತಹ ದಿಗ್ಗಜರ ನಾಯಕತ್ವ ಸೇರಿದಂತೆ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಈ ಪುಸ್ತಕವು ಗೌರವ ಸಲ್ಲಿಸುತ್ತದೆ ಎಂದು ಅವರು ಹೇಳಿದರು.

ʻವಿಕಸಿತ ಭಾರತ@2047ʼ ಸಾಧನೆಗಾಗಿ ಪ್ರಧಾನಮಂತ್ರಿಯವರ ದೂರದೃಷ್ಟಿಯನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಗಳು, ಅಭಿವೃದ್ಧಿ ಮತ್ತು ಪರಂಪರೆಯನ್ನು ಪರಸ್ಪರ ಪೂರಕವಾಗಿ ನೋಡುವ "ವಿಕಾಸ್ ಭಿ, ವಿರಾಸತ್ ಭಿ" ತತ್ವವನ್ನು ಪುನರುಚ್ಚರಿಸಿದರು. ಸಂಸದೀಯ ಭಿತ್ತಿಚಿತ್ರಗಳು ಅಸ್ಮಿತೆ, ಮೌಲ್ಯಗಳು ಮತ್ತು ನಿರಂತರತೆಯೊಂದಿಗೆ ಪ್ರಗತಿಯನ್ನು ಬೆಸೆಯುವ ಮೂಲಕ ಈ ತತ್ವವನ್ನು ಸಾಕಾರಗೊಳಿಸುತ್ತವೆ ಎಂದು ಅವರು ಹೇಳಿದರು.

ಲೇಖಕರನ್ನು ಶ್ಲಾಘಿಸಿದ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು, ಶ್ರೀಮತಿ ಸುಧಾಮೂರ್ತಿ ಅವರು ಸಾರ್ವಜನಿಕ ಜೀವನದಲ್ಲಿ ಜ್ಞಾನ, ನಮ್ರತೆ ಮತ್ತು ಸಾಮಾಜಿಕ ಬದ್ಧತೆಯ ಅಪರೂಪದ ಸಂಗಮವನ್ನು ಪ್ರತಿನಿಧಿಸುತ್ತಾರೆ ಎಂದು ಹೇಳಿದರು. ಕಾರ್ಪೊರೇಟ್ ಜಗತ್ತಿನಿಂದ ಸಮಾಜ ಸೇವೆ ಮತ್ತು ಸಂಸತ್ತಿನವರೆಗೆ ಅವರ ಪ್ರಯಾಣವನ್ನು ಉಲ್ಲೇಖಿಸಿದ ಅವರು, ಸುಧಾ ಮೂರ್ತಿ ಅವರ ಕೊಡುಗೆಗಳ ಹಿಂದೆ ಸದಾ ದೊಡ್ಡ ಮಟ್ಟದ ಸಾರ್ವಜನಿಕ ಒಳಿತು ಅಡಗಿರುತ್ತದೆ ಎಂದು ಹೇಳಿದರು. ಈ ಪ್ರಕಟಣೆಯನ್ನು ಹೊರತರುವಲ್ಲಿ ಲೋಕಸಭಾ ಸಚಿವಾಲಯದ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.

ಸುಬ್ರಮಣ್ಯ ಭಾರತಿ ಅವರನ್ನು ಮತ್ತೊಮ್ಮೆ ಉಲ್ಲೇಖಿಸಿದ ಉಪರಾಷ್ಟ್ರಪತಿಗಳು, ಭಾಷೆ, ಪ್ರದೇಶ ಮತ್ತು ಸಂಸ್ಕೃತಿಯಲ್ಲಿ ವೈವಿಧ್ಯತೆಯ ಹೊರತಾಗಿಯೂ, ಭಾರತವು ತನ್ನ ರಾಷ್ಟ್ರೀಯ ಉದ್ದೇಶದಲ್ಲಿ ಒಗ್ಗಟ್ಟಾಗಿದೆ ಎಂದು ಒತ್ತಿ ಹೇಳಿದರು. ಭಾರತವು ಯಾವಾಗಲೂ ಒಂದಾಗಿದೆ ಮತ್ತು ಶಾಶ್ವತವಾಗಿ ಒಂದಾಗಿ ಉಳಿಯುತ್ತದೆ ಎಂದು ಅವರು ಹೇಳಿದರು.

"ದೇಶ ಮೊದಲು" ಎಂಬ ಮನೋಭಾವವನ್ನು ಅಳವಡಿಸಿಕೊಳ್ಳುವಂತೆ ನಾಗರಿಕರಿಗೆ ಕರೆ ನೀಡಿದ ಉಪರಾಷ್ಟ್ರಪತಿಗಳು, ಪ್ರತಿಯೊಬ್ಬರೂ ಬದ್ಧತೆ, ಸಮಗ್ರತೆ ಮತ್ತು ಹೆಮ್ಮೆಯಿಂದ ರಾಷ್ಟ್ರದ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಲೋಕಸಭೆಯ ಸ್ಪೀಕರ್ ಶ್ರೀ ಓಂ ಬಿರ್ಲಾ; ಕೇಂದ್ರ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಮತ್ತು ಶ್ರೀ ಮನೋಹರ್ ಲಾಲ್; ರಾಜ್ಯಸಭೆಯ ಉಪಸಭಾಪತಿ ಶ್ರೀ ಹರಿವಂಶ್; ರಾಜ್ಯಸಭಾ ಸದಸ್ಯರಾದ ಮತ್ತು ಪುಸ್ತಕದ ಲೇಖಕಿ ಶ್ರೀಮತಿ ಸುಧಾ ಮೂರ್ತಿ, ಸಂಸತ್ ಸದಸ್ಯರು ಹಾಗೂ ಲೋಕಸಭೆ ಮತ್ತು ರಾಜ್ಯಸಭಾ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

*****


(ಪ್ರಕಟಣೆ ಐ.ಡಿ.: 2247647) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Gujarati