ಕೃಷಿ ಸಚಿವಾಲಯ
azadi ka amrit mahotsav

ಭಾರತದ ಭವಿಷ್ಯದ ಕೃಷಿ ಉತ್ತೇಜನಕ್ಕೆ ವೇಗ ನೀಡಲು ಧನ-ಧಾನ್ಯ ಕೃಷಿ ಯೋಜನೆ (ಡಿಡಿಕೆವೈ): 100 ಜಿಲ್ಲೆಗಳಿಗೆ ಆದ್ಯ ಗಮನ 

ಪ್ರಕಟಣಾ ದಿನಾಂಕ: 24 MAR 2026 6:12PM by PIB Bengaluru

ಪ್ರಧಾನಮಂತ್ರಿ ಧನ- ಧಾನ್ಯ ಕೃಷಿ ಯೋಜನೆ (ಡಿಡಿಕೆವೈ) ಅಡಿಯಲ್ಲಿ ಕಡಿಮೆ ಬೆಳೆ ಇಳುವರಿ, ಕಡಿಮೆ ಬೆಳೆ ತೀವ್ರತೆ ಮತ್ತು ಕಡಿಮೆ ಕೃಷಿ ಸಾಲ ವಿತರಣೆ ಎಂಬ ಮೂರು ಪ್ರಮುಖ ಸೂಚಕಗಳ ಆಧಾರದ ಮೇಲೆ 100 ಜಿಲ್ಲೆಗಳನ್ನು ಗುರುತಿಸಲಾಗಿದೆ.

ಪಂಚಾಯತ್ ಮತ್ತು ಬ್ಲಾಕ್ ಮಟ್ಟದಲ್ಲಿ ಕೊಯ್ಲಿನ ನಂತರದ ಸಂಗ್ರಹಣೆ ಹೆಚ್ಚಿಸುವ, ಬೆಳೆ ಇಳುವರಿ ವರ್ಧಿಸುವ; ವ್ಯಾಪಕ ಬೆಳೆ ವೈವಿಧ್ಯೀಕರಣದೊಂದಿಗೆ ಸುಸ್ಥಿರ ಕೃಷಿ ಪದ್ಧತಿ ಅಳವಡಿಸುವ, ನೀರಾವರಿ ಸೌಲಭ್ಯ ಸುಧಾರಿಸುವ ಹಾಗೂ ದೀರ್ಘಾವಧಿ ಮತ್ತು ಅಲ್ಪಾವಧಿ ಸಾಲದ ಲಭ್ಯತೆ ಸುಗಮಗೊಳಿಸುವ ಗುರಿಯನ್ನು ಡಿಡಿಕೆವೈ ಯೋಜನೆ ಹೊಂದಿದೆ.

ಡಿಡಿಕೆವೈ ಜಿಲ್ಲೆಗಳ ಜಿಲ್ಲಾ ಕ್ರಿಯಾ ಯೋಜನೆ (ಡಿಎಪಿ) ಗಳನ್ನು ಜಿಲ್ಲಾ ಧನ-ಧಾನ್ಯ ಕೃಷಿ ಯೋಜನಾ ಸಮಿತಿಯು ಸಿದ್ಧಪಡಿಸಿ ಅನುಷ್ಠಾನಗೊಳಿಸಲಿದೆ. 11 ಇಲಾಖೆಗಳ 36 ಕೇಂದ್ರ ಯೋಜನೆಗಳು, ರಾಜ್ಯ ಯೋಜನೆಗಳು ಮತ್ತು ಖಾಸಗಿ ವಲಯದ ಸಮ್ಮಿಲಿತ ಭಾಗವಹಿಸುವಿಕೆಯೊಂದಿಗೆ ಈ ಯೋಜನೆ ರೂಪಿಸಲಾಗಿದೆ. ತೋಟಗಾರಿಕಾ ಸಮಗ್ರ ಅಭಿವೃದ್ಧಿ ಮಿಷನ್‌ (ಎಂಐಡಿಹೆಚ್) ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್‌ ಕೆ ವಿ ವೈ) ಸೇರಿದಂತೆ ಸಂಬಂಧಿತ ಯೋಜನೆಗಳ ಒಗ್ಗೂಡಿಸುವಿಕೆಯ ಮೂಲಕ ಸ್ಥಳೀಯ ಅಡಚಣೆಗಳನ್ನು ಗುರುತಿಸಿ, ಅವುಗಳನ್ನು ಪರಿಹರಿಸಲು ಡಿಎಪಿಗಳು ಪ್ರಯತ್ನಿಸಲಿವೆ. ಹವಾಮಾನ-ನಿರೋಧಕ ಕೃಷಿ ತಂತ್ರಜ್ಞಾನಗಳ ಸಂಯೋಜನೆ ಹಾಗೂ ಸಂರಕ್ಷಿತ ಕೃಷಿ, ಸೂಕ್ಷ್ಮ ನೀರಾವರಿ ಮತ್ತು ಕೊಯ್ಲಿನ ನಂತರದ ಮೂಲಸೌಕರ್ಯದಂತಹ ಹವಾಮಾನ-ಚತುರ ಸ್ವತ್ತುಗಳನ್ನು ಸೃಜಿಸುವ ನಿರ್ದಿಷ್ಟ ಮಧ್ಯಸ್ಥಿಕೆಗಳನ್ನು ಡಿಎಪಿಗಳಲ್ಲಿ ಪರಿಹರಿಸಬಹುದಾಗಿದೆ.

ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಡಿಡಿಕೆವೈ ಸಮಿತಿಗಳು ಸಮಾಲೋಚನೆಗಳು ಮತ್ತು ಅಂತರ ಇಲಾಖಾ ಸಮನ್ವಯದೊಂದಿಗೆ ಡಿಎಪಿ ರೂಪಿಸಲಿವೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪರಿಣಾಮಕಾರಿ ಮೇಲ್ವಿಚಾರಣೆಗಾಗಿ ಕ್ರಮವಾಗಿ, ರಾಜ್ಯ ಧನ-ಧಾನ್ಯ ಕೃಷಿ ಯೋಜನಾ ಸಮಿತಿ ಹಾಗೂ ರಾಷ್ಟ್ರೀಯ ಕಾರ್ಯಕಾರಿ ಮತ್ತು ರಾಷ್ಟ್ರೀಯ ಮೇಲ್ವಿಚಾರಣಾ ಸಮಿತಿಗಳನ್ನು ಸ್ಥಾಪಿಸಲಾಗಿದೆ.

ಇದಲ್ಲದೆ, ಕ್ಷೇತ್ರ ಭೇಟಿ ಹಾಗೂ ಜಿಲ್ಲೆಗಳ ಕಾರ್ಯಕ್ಷಮತೆ ಪರಿಶೀಲನೆ ಮತ್ತು ಮೇಲ್ವಿಚಾರಣೆಗಾಗಿ ಪ್ರತಿ ಡಿಡಿಕೆವೈ ಜಿಲ್ಲೆಗಳಿಗೆ ಕೇಂದ್ರ ನೋಡೆಲ್ ಅಧಿಕಾರಿಗಳನ್ನು (ಸಿಎನ್ಒ) ನಿಯೋಜಿಸಲಾಗಿದೆ.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವರಾದ ಶ್ರೀ ರಾಮನಾಥ್ ಠಾಕೂರ್ ಅವರು ಲೋಕಸಭೆಗೆ ಇಂದು ನೀಡಿದ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2244795) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी , Urdu