ರೈಲ್ವೇ ಸಚಿವಾಲಯ
azadi ka amrit mahotsav

ಮಿಜೋರಾಂನಲ್ಲಿ ಆಹಾರ ಧಾನ್ಯ ಪೂರೈಕೆ ಸರಣಿಯಲ್ಲಿ ಹೊಸ ಮೈಲಿಗಲ್ಲು: ರೈಲು ಮೂಲಕ ಪಂಜಾಬ್‌ನಿಂದ ಸೈರಾಂಗ್ ತಲುಪಿದ 25,900 ಕ್ವಿಂಟಾಲ್ ಅಕ್ಕಿ, ಆಹಾರ ಪೂರೈಕೆಯಲ್ಲಿ ಸುಧಾರಣೆ


ಸೈರಾಂಗ್ ನಲ್ಲಿ ಎಫ್‌ಸಿಐ ಸರಕು ರೈಲಿನ ಐತಿಹಾಸಿಕ ಅಕ್ಕಿ ಚೀಲಗಳನ್ನು ಕೆಳಗಿಳಿಸುವ ಕಾರ್ಯಾಚರಣೆಯ ಸಾಮರ್ಥ್ಯ ವೃದ್ಧಿ ಮತ್ತು ಮಿಜೋರಾಂನ ಲಾಜಿಸ್ಟಿಕ್ಸ್ ಮತ್ತು ಆಹಾರ ವಿತರಣಾ ಜಾಲ ಬಲವರ್ಧನೆ

ಪ್ರಕಟಣಾ ದಿನಾಂಕ: 05 MAR 2026 4:00PM by PIB Bengaluru

ಪ್ರಯಾಣಿಕ ಮತ್ತು ಸರಕು ರೈಲು ಸೇವೆಗಳ ಆರಂಭದೊಂದಿಗೆ, ಮಿಜೋರಾಂ ರಾಜ್ಯಾದ್ಯಂತ ಪ್ರಯಾಣಿಕರ ಸಂಚಾರ ಮತ್ತು ಸರಕುಗಳ ಸಾಗಾಣೆ ಎರಡರಲ್ಲೂ ಗಮನಾರ್ಹ ಪರಿವರ್ತನೆ ಕಂಡು ಬಂದಿದೆ. ಈ ಅಭಿವೃದ್ಧಿಯು ಸಂಪರ್ಕವನ್ನು ಸುಧಾರಿಸುವುದಲ್ಲದೆ, ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಿದೆ ಮತ್ತು ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಬಲವರ್ಧನೆಗೊಳಿಸಿದೆ.

ಮಹತ್ವದ ಐತಿಹಾಸಿಕ ಮೈಲಿಗಲ್ಲಿನಲ್ಲಿ, ಭಾರತೀಯ ಆಹಾರ ನಿಗಮ (ಎಫ್‌ಸಿಐ)ದ ಮೊದಲ ಆಹಾರ ಧಾನ್ಯ ಸರಕು ರೈಲು 2026ರ ಮಾರ್ಚ್ 3 ರಂದು ಸೈರಾಂಗ್ ರೈಲು ನಿಲ್ದಾಣಕ್ಕೆ ಆಗಮಿಸಿತು. ಸರಕು ರೈಲು ಪಂಜಾಬ್‌ನಿಂದ ಸುಮಾರು 25,900 ಕ್ವಿಂಟಾಲ್ ಅಕ್ಕಿಯನ್ನು ಸಾಗಿಸುವ 42 ವ್ಯಾಗನ್‌ಗಳನ್ನು ಒಳಗೊಂಡಿತ್ತು. ರಾಜ್ಯದಲ್ಲಿ ರೈಲು ಆಧಾರಿತ ಸರಕು ಸಂಪರ್ಕವನ್ನು ಬಲಪಡಿಸುವಲ್ಲಿ ಮತ್ತು ಅಗತ್ಯ ಸರಕುಗಳ ಪೂರೈಕೆ ಸರಣಿಯನ್ನು ಸುಧಾರಿಸುವಲ್ಲಿ ಇದು ಒಂದು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ. ಸೈರಾಂಗ್ ನಲ್ಲಿ ಒಳಮುಖವಾಗಿ ಎಫ್‌ಸಿಐ ಆಹಾರ ಧಾನ್ಯದ ರೇಕ್ ಅನ್ನು ಯಶಸ್ವಿಯಾಗಿ ಇಳಿಸುವುದು ನಿಲ್ದಾಣದ ಬೆಳೆಯುತ್ತಿರುವ ಕಾರ್ಯಾಚರಣೆಯ ಸಾಮರ್ಥ್ಯವನ್ನು ಸೂಚಿಸುತ್ತದೆ ಮತ್ತು ಮಿಜೋರಾಂನ ಸರಕು ಸಾಗಾಣೆ (ಲಾಜಿಸ್ಟಿಕ್ಸ್) ಮತ್ತು ಆಹಾರ ವಿತರಣಾ ಜಾಲವನ್ನು ಬೆಂಬಲಿಸುವಲ್ಲಿ ರೈಲ್ವೆ ಮೂಲಸೌಕರ್ಯದ ಮಹತ್ವದ ಪಾತ್ರವನ್ನು ಉಲ್ಲೇಖಿಸುತ್ತದೆ.

2025 ರ ಸೆಪ್ಟೆಂಬರ್ 13 ರಂದು ಗೌರವಾನ್ವಿತ ಪ್ರಧಾನಮಂತ್ರಿಗಳು 51.38 ಕಿಮೀ ಬೈರಾಬಿ-ಸೈರಾಂಗ್ ರೈಲು ಮಾರ್ಗವನ್ನು ಉದ್ಘಾಟಿಸಿದ್ದು, ಮಿಜೋರಾಂ ಜನರಿಗೆ ಒಂದು ಐತಿಹಾಸಿಕ ಮೈಲಿಗಲ್ಲು ಎಂದು ಉಲ್ಲೇಖಿಸಬಹುದು. ಈ ಪ್ರಮುಖ ಮೂಲಸೌಕರ್ಯ ಯೋಜನೆಯು ಐಜ್ವಾಲ್ ಅನ್ನು ರಾಷ್ಟ್ರೀಯ ರೈಲ್ವೆ ಜಾಲಕ್ಕೆ ನೇರವಾಗಿ ಸಂಪರ್ಕಿಸುವ ಮೂಲಕ ಭಾರತದ ರೈಲ್ವೆ ನಕ್ಷೆಯಲ್ಲಿ ಸೇರಿಸಿದೆ. ಸಾರಿಗೆ ಸಂಪರ್ಕವನ್ನು ಸುಧಾರಿಸುವುದರ ಜೊತೆಗೆ ಹೊಸ ರೈಲು ಮಾರ್ಗವು ಆರ್ಥಿಕ ಬೆಳವಣಿಗೆಗೆ ಗಮನಾರ್ಹ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಪ್ರದೇಶದಾದ್ಯಂತ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಮಿಜೋರಾಂನಲ್ಲಿ ಸರಕು ಸಾಗಣೆ ಕಾರ್ಯಕ್ಷಮತೆ

ಬೈರಾಬಿ-ಸೈರಾಂಗ್ ವಿಭಾಗದಲ್ಲಿ ಸರಕು ಸಾಗಣೆ ಕಾರ್ಯಾಚರಣೆಗಳು ಕಾರ್ಯಾರಂಭ ಮಾಡಿದ ನಂತರ ಗಮನಾರ್ಹ ವೇಗವನ್ನು ಪಡೆದುಕೊಂಡಿವೆ. ಉದ್ಘಾಟನೆಯ ಸ್ವಲ್ಪ ಸಮಯದ ನಂತರ 21 ಸಿಮೆಂಟ್ ವ್ಯಾಗನ್‌ಗಳನ್ನು ಒಳಗೊಂಡಿರುವ ಮೊದಲ ಸರಕು ಸಾಗಣೆ ರೇಕ್ ಅನ್ನು ಯಶಸ್ವಿಯಾಗಿ ಸೈರಾಂಗ್‌ಗೆ ಸ್ಥಳಾಂತರಿಸಲಾಯಿತು, ಇದು ರಾಜ್ಯಕ್ಕೆ ನಿಯಮಿತ ಸರಕು ಸಾಗಣೆಯ ಆರಂಭವನ್ನು ಸೂಚಿಸುತ್ತದೆ. ಏಪ್ರಿಲ್ 2025 ರಿಂದ ಮಾರ್ಚ್ 2026 ರವರೆಗೆ, ಸೈರಾಂಗ್ ಟರ್ಮಿನಲ್ 30 ಕ್ಕೂ ಅಧಿಕ ಸರಕು ಸಾಗಣೆ  ಬೋಗಿಗಳು/ರೇಕ್‌ಗಳನ್ನು ನಿರ್ವಹಿಸಿತು, ಇದು ಮಿಜೋರಾಂನಲ್ಲಿ ರೈಲು ಆಧಾರಿತ ಸರಕು ಸಾಗಾಣೆಯ ಕ್ರಮೇಣ ಅಭಿವೃದ್ಧಿಯನ್ನು ಸೂಚಿಸುತ್ತದೆ. ಈ ಅವಧಿಯಲ್ಲಿ, ಟರ್ಮಿನಲ್‌ನಲ್ಲಿ 3.5 ರೇಕ್‌ಗಳ ಸಿಮೆಂಟ್ ಅನ್ನು ಇಳಿಸಲಾಯಿತು. ಸಿಮೆಂಟ್ ಜೊತೆಗೆ, ರೈಲು ಮೂಲಕ ನಿರ್ವಹಿಸಲ್ಪಡುವ ಇತರ ಸರಕುಗಳಲ್ಲಿ ಆಟೋಮೊಬೈಲ್‌ಗಳು (2 ಬೋಗಿಗಳು/ರೇಕ್‌ಗಳು), ರಸಗೊಬ್ಬರಗಳು (0.5 ರೇಕ್‌ಗಳು), ಸ್ಟೋನ್ ಚಿಪ್ಸ್ (20.5 ರೇಕ್‌ಗಳು) ಮತ್ತು ಮರಳು (4 ರೇಕ್‌ಗಳು) ಸೇರಿವೆ. ಈ ವೈವಿಧ್ಯಮಯ ಸರಕುಗಳ ನಿರ್ವಹಣೆಯು ಉದಯೋನ್ಮುಖ ಸರಕು ಕೇಂದ್ರವಾಗಿ ಸಾಯಿರಾಂಗ್‌ನ ಹೆಚ್ಚುತ್ತಿರುವ ಬಳಕೆಯನ್ನು ಪ್ರದರ್ಶಿಸುತ್ತದೆ, ಮೂಲಸೌಕರ್ಯ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ ಮತ್ತು ರಾಜ್ಯದಲ್ಲಿ ನಿರ್ಮಾಣ ಸಾಮಗ್ರಿಗಳು ಮತ್ತು ಅಗತ್ಯ ವಸ್ತುಗಳ ಪೂರೈಕೆಯನ್ನು ಸುಧಾರಿಸುತ್ತದೆ.

ಗಮನಾರ್ಹವಾಗಿ 119 ಪ್ರಯಾಣಿಕ ವಾಹನಗಳನ್ನು ಸಾಗಿಸುವ ಮೊದಲ ಒಳಮುಖ ಆಟೋಮೊಬೈಲ್ ರೇಕ್ ಅನ್ನು ಡಿಸೆಂಬರ್ 2025 ರಲ್ಲಿ ಸೈರಾಂಗ್‌ನಲ್ಲಿ ಸ್ವೀಕರಿಸಲಾಯಿತು, ಇದು ಹೆಚ್ಚಿನ ಮೌಲ್ಯದ ಬೃಹತ್ ಸರಕುಗಳನ್ನು ನಿರ್ವಹಿಸುವ ಮಾರ್ಗದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ತೋಟಗಾರಿಕಾ ಮತ್ತು ಹಾಳಾಗುವ ಉತ್ಪನ್ನಗಳ ಸಾಗಣೆಗೆ ಅನುಕೂಲವಾಗುವಂತೆ ಶೈತ್ಯೀಕರಿಸಿದ ಪಾರ್ಸೆಲ್ ವ್ಯಾನ್ ಸೇವೆಗಳನ್ನು ಪರಿಚಯಿಸುವುದು ಸೇರಿದಂತೆ ಸರಕು ಸಾಗಾಣೆ ಲಾಜಿಸ್ಟಿಕ್ಸ್ ಅನ್ನು ಬಲಪಡಿಸಲು ಭಾರತೀಯ ರೈಲ್ವೆ ಕ್ರಮಗಳನ್ನು ಆರಂಭಿಸಿದೆ, ಇದರಿಂದಾಗಿ ಸ್ಥಳೀಯ ರೈತರು ಮತ್ತು ವ್ಯಾಪಾರಿಗಳಿಗೆ ಮಾರುಕಟ್ಟೆ ಲಭ್ಯತೆಯನ್ನು ವಿಸ್ತರಿಸುತ್ತದೆ.

ಮಿಜೋರಾಂನಲ್ಲಿ ಪ್ರವಾಸೋದ್ಯಮಕ್ಕೆ ಹೊಸ ವೇಗ

ಮಿಜೋರಾಂನಲ್ಲಿ ಹೊಸದಾಗಿ ತೆರೆಯಲಾದ ರೈಲು ಮಾರ್ಗವು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದೆ. ಕಳೆದ ಆರು ತಿಂಗಳುಗಳಲ್ಲಿ ರಾಜ್ಯವು ಪ್ರವಾಸಿಗರ ಸಂಖ್ಯೆಯಲ್ಲಿ ಸ್ಥಿರವಾದ ಏರಿಕೆಯನ್ನು ಕಂಡಿದೆ. 2026ರ ಫೆಬ್ರವರಿ 12 ರಂದು "ಈಶಾನ್ಯ ಅನ್ವೇಷಣೆ" ಸರ್ಕ್ಯೂಟ್ ಅಡಿಯಲ್ಲಿ ಮೊದಲ ಬಾರಿಗೆ ಸೈರಾಂಗ್ ರೈಲು ನಿಲ್ದಾಣಕ್ಕೆ ಭಾರತ್ ಗೌರವ್ ಡಿಲಕ್ಸ್ ಎಸಿ ಪ್ರವಾಸಿ ರೈಲು ಆಗಮನದೊಂದಿಗೆ ಮಿಜೋರಾಂನಲ್ಲಿ ರೈಲ್ವೆ ಸೇವೆಗಳು ಹೊಸ ಮೈಲಿಗಲ್ಲನ್ನು ತಲುಪಿವೆ.

ಭಾರತದ ವಿವಿಧ ಭಾಗಗಳಿಂದ ಹಾಗೂ ಅಮೆರಿಕ ಮತ್ತು ನೇಪಾಳದಂತಹ ಇತರ ರಾಷ್ಟ್ರಗಳಿಂದ 81 ಪ್ರವಾಸಿಗರನ್ನು ಹೊತ್ತೊಯ್ಯುವ ಈ ಪ್ರೀಮಿಯಂ ಪ್ರವಾಸಿ ರೈಲು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ಮಿಜೋರಾಂನ ಬೆಳೆಯುತ್ತಿರುವ ಗೋಚರತೆಯನ್ನು ಒತ್ತಿಹೇಳುತ್ತದೆ. ಸುಧಾರಿತ ಲಭ್ಯತೆ ಸಾಧ್ಯತೆಯು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಿದೆ, ಇದು ಆತಿಥ್ಯ ಮತ್ತು ಸಂಬಂಧಿತ ವಲಯಗಳಲ್ಲಿ ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡುತ್ತಿದೆ, ಪರಿಸರ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿದೆ ಮತ್ತು ಸಮಗ್ರ ಬೆಳವಣಿಗೆ ಮತ್ತು ಪ್ರಾದೇಶಿಕ ಏಕೀಕರಣದ ವಿಶಾಲ ದೃಷ್ಟಿಕೋನದ ಅಡಿಯಲ್ಲಿ ಮಿಜೋರಾಂ ಅನ್ನು ಈಶಾನ್ಯದಲ್ಲಿ ಉದಯೋನ್ಮುಖ ತಾಣವಾಗಿರಿಸುತ್ತಿದೆ.

ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆ

2025ರ ಸೆಪ್ಟೆಂಬರ್ ನಲ್ಲಿ ಬೈರಾಬಿ - ಸೈರಾಂಗ್ ಮಾರ್ಗದಲ್ಲಿ ರೈಲು ಸೇವೆಗಳು ಆರಂಭವಾದಾಗಿನಿಂದ ಸಾರ್ವಜನಿಕ ಪ್ರತಿಕ್ರಿಯೆ ಅಗಾಧವಾಗಿದೆ. ಸೈರಾಂಗ್-ಆನಂದ್ ವಿಹಾರ್ ರಾಜಧಾನಿ ಎಕ್ಸ್‌ಪ್ರೆಸ್ ಎರಡೂ ದಿಕ್ಕುಗಳಲ್ಲಿ ಶೇ.150 ಕ್ಕಿಂತ ಅಧಿಕ ಪ್ರಯಾಣಿಕರ ಸಂಖ್ಯೆಯನ್ನು ದಾಖಲಿಸಿದೆ. ಸೈರಾಂಗ್-ಗುವಾಹಟಿ ಎಕ್ಸ್‌ಪ್ರೆಸ್ ಮತ್ತು ಸೈರಾಂಗ್-ಕೋಲ್ಕತ್ತಾ ಎಕ್ಸ್‌ಪ್ರೆಸ್ ಇದೇ ರೀತಿ ಶೇ.100 ಕ್ಕಿಂತ ಅಧಿಕ ಪ್ರಯಾಣಿಕರ ಸಂಖ್ಯೆಯನ್ನು ದಾಖಲಿಸಿವೆ, ಇದು ಸೈರಾಂಗ್‌ನಿಂದ ರೈಲ್ವೆ ಸೇವೆಗಳಿಗೆ ಬಲವಾದ ಬೇಡಿಕೆ ಮತ್ತು ಬಲವಾದ ಸಾರ್ವಜನಿಕ ಸ್ವೀಕಾರವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. 2026ರ ಫೆಬ್ರವರಿ 9 ರಂದು ಸೈರಾಂಗ್‌ನಿಂದ ಸಿಲ್ಚಾರ್‌ಗೆ ಹೊಸ ರೈಲು ಸೇವೆಯನ್ನು ಆರಂಭಿಸಲಾಯಿತು, ಇದು ಪ್ರಾದೇಶಿಕ ಸಾರಿಗೆಯನ್ನು ಮತ್ತಷ್ಟು ಬಲಪಡಿಸಿತು ಮತ್ತು ಮಿಜೋರಾಂ ಅನ್ನು ಅಸ್ಸಾಂನ ಬರಾಕ್ ಕಣಿವೆಯ ಪ್ರಮುಖ ಶೈಕ್ಷಣಿಕ, ವೈದ್ಯಕೀಯ ಮತ್ತು ವಾಣಿಜ್ಯ ಕೇಂದ್ರದೊಂದಿಗೆ ಸಂಪರ್ಕಿಸುತ್ತದೆ.

ರೈಲ್ವೆ ಸಂಪರ್ಕದ ವಿಸ್ತರಣೆಯು ಮಿಜೋರಾಂಗೆ ಒಂದು ಮಹತ್ವದ ತಿರುವಾಗಿದೆ. ಸಾರಿಗೆ ಸುಧಾರಣೆ, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಮೂಲಕ, ರೈಲ್ವೆಗಳು ರಾಜ್ಯದ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಮೂಲಸೌಕರ್ಯವು ಅಭಿವೃದ್ಧಿ ಹೊಂದುತ್ತಿರುವಂತೆ, ಮಿಜೋರಾಂ ಈಶಾನ್ಯ ಭಾರತದಲ್ಲಿಸುಲಭವಾಗಿ ಕೈಗೆಟುಕುವ ಮತ್ತು ಆಕರ್ಷಕ ತಾಣವಾಗಿ ಸ್ಥಿರವಾಗಿ ಹೊರಹೊಮ್ಮುತ್ತಿದೆ.

 

*****


(ಪ್ರಕಟಣೆ ಐ.ಡಿ.: 2235603) ವಿಸಿಟರ್ ಕೌಂಟರ್ : 59
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Gujarati , Telugu