ಔಷಧೀಯ ಇಲಾಖೆ
azadi ka amrit mahotsav

ಜನೌಷಧಿ ಸಪ್ತಾಹ 2026ರ 3ನೇ ದಿನವು ಆರೋಗ್ಯ ಶಿಬಿರಗಳ ಸಂಖ್ಯೆ ಮತ್ತು ಸಾರ್ವಜನಿಕರ ಭಾಗವಹಿಸುವಿಕೆಯಲ್ಲಿ ಭಾರಿ ಏರಿಕೆಗೆ ಸಾಕ್ಷಿಯಾಗಿದೆ

ಪ್ರಕಟಣಾ ದಿನಾಂಕ: 03 MAR 2026 5:41PM by PIB Bengaluru

ಅಸ್ಸಾಂನ ಶ್ರೀಭೂಮಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ

ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಜನರಿಕ್ ಔಷಧಗಳನ್ನು ಉತ್ತೇಜಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ರಾಷ್ಟ್ರವ್ಯಾಪಿ ಉಪಕ್ರಮವಾದ 'ಜನೌಷಧಿ ಸಪ್ತಾಹ 2026' ಇಂದು ತನ್ನ ಮೂರನೇ ದಿನವನ್ನು ಯಶಸ್ವಿಯಾಗಿ ಪೂರೈಸಿದೆ. ಮಾರ್ಚ್ 7, 2026 ರಂದು ನಡೆಯಲಿರುವ '8ನೇ ಜನೌಷಧಿ ದಿವಸ'ದ ಮುಂಚಿತವಾಗಿ ಈ ಅಭಿಯಾನವು ಹೆಚ್ಚಿನ ವೇಗವನ್ನು ಪಡೆದುಕೊಳ್ಳುತ್ತಿದೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧೀಯ ಇಲಾಖೆಯ ಅಡಿಯಲ್ಲಿರುವ ಫಾರ್ಮಾಸ್ಯುಟಿಕಲ್ಸ್ ಮತ್ತು ಮೆಡಿಕಲ್ ಡಿವೈಸಸ್ ಬ್ಯೂರೋ (PMBI) ಆಯೋಜಿಸಿರುವ ಮಾರ್ಚ್ 1 ರಿಂದ 5 ರವರೆಗಿನ ಈ ಅಭಿಯಾನವು ಭಾರತದಾದ್ಯಂತ 250 ಕ್ಕೂ ಹೆಚ್ಚು ಸ್ಥಳಗಳಲ್ಲಿ ಹರಡಿಕೊಂಡಿದೆ.

ಮಣಿಪುರದ ಬಿಷ್ಣುಪುರದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ

“ಜನೌಷಧಿ ಸಸ್ತಿ ಭಿ, ಭರೋಸೆಮಂದ್ ಭಿ, ಸೆಹತ್ ಕಿ ಬಾತ್, ಬಚತ್ ಕೆ ಸಾಥ್” (ಜನೌಷಧಿ ಅಗ್ಗವೂ ಹೌದು, ನಂಬಿಕಸ್ಥವೂ ಹೌದು, ಉಳಿತಾಯದೊಂದಿಗೆ ಆರೋಗ್ಯದ ಮಾತು) ಎಂಬ ಈ ವರ್ಷದ ಘೋಷವಾಕ್ಯದ ಅಡಿಯಲ್ಲಿ, ಮೂರನೇ ದಿನದ ಕಾರ್ಯಕ್ರಮವಾಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಯಿತು. ಈ ಶಿಬಿರಗಳಲ್ಲಿ ಸ್ಥಳದಲ್ಲೇ ರೋಗನಿರ್ಣಯ ಪರೀಕ್ಷೆಗಳು, ಉಚಿತ ಸಮಾಲೋಚನೆ ಮತ್ತು ಜನೌಷಧಿ ಔಷಧಿಗಳ ವ್ಯಾಪಕ ವಿತರಣೆಯನ್ನು ಮಾಡಲಾಯಿತು. ಪೂರ್ವನಿಯೋಜಿತ 44 ಶಿಬಿರಗಳ ಗುರಿಯನ್ನು ಮೀರಿ, ಒಟ್ಟು 47 ಶಿಬಿರಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಈ ಕಾರ್ಯಕ್ರಮವು ಸಾವಿರಾರು ಜನರನ್ನು ತಲುಪಿದೆ. ಇದರಲ್ಲಿ ಮಹಿಳೆಯರು, ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಒದಗಿಸುವ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಕರ್ನಾಟಕದ ಹುಬ್ಬಳ್ಳಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ

ಸುತ್ತಮುತ್ತಲಿನ ಪ್ರದೇಶಗಳ ಜನರು ಈ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಉಚಿತ ಆರೋಗ್ಯ ತಪಾಸಣಾ ಸೇವೆಗಳ ಪ್ರಯೋಜನ ಪಡೆದರು ಮತ್ತು ಆರೋಗ್ಯ ವೃತ್ತಿಪರರೊಂದಿಗೆ ಸಂವಾದ ನಡೆಸಿದರು. ಅಗತ್ಯ  ವೈದ್ಯಕೀಯ ಸೇವೆಗಳನ್ನು ಒದಗಿಸುವುದರ ಜೊತೆಗೆ, ಈ ಶಿಬಿರಗಳು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳ ಬಗ್ಗೆ ಮತ್ತು ಕೈಗೆಟುಕುವ ದರದಲ್ಲಿ ಗುಣಮಟ್ಟದ ಜೆನೆರಿಕ್ ಔಷಧಿಗಳ ಲಭ್ಯತೆಯ ಬಗ್ಗೆ ಜಾಗೃತಿ ಮೂಡಿಸಿದವು.

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ

3ನೇ ದಿನದ ಶಿಬಿರಗಳು ಹುಬ್ಬಳ್ಳಿ (ಕರ್ನಾಟಕ), ಮಲಪ್ಪುರಂ (ಕೇರಳ), ಶ್ರೀಭೂಮಿ (ಅಸ್ಸಾಂ), ರಾಯ್‌ಪುರ (ಛತ್ತೀಸ್ ಗಢ), ತಿರುವಳ್ಳೂರು (ತಮಿಳುನಾಡು), ಹಮೀರಪುರ (ಹಿಮಾಚಲ ಪ್ರದೇಶ), ವೈಶಾಲಿ (ಬಿಹಾರ) ಮತ್ತು ಬಿಷ್ಣುಪುರ (ಮಣಿಪುರ) ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಡೆದವು. ಮೊದಲ ದಿನ 50 ಶಿಬಿರಗಳು ಮತ್ತು ಎರಡನೇ ದಿನ 60ಕ್ಕೂ ಹೆಚ್ಚು ಶಿಬಿರಗಳಲ್ಲಿ ಕಂಡುಬಂದ ಉತ್ಸಾಹಭರಿತ ಭಾಗವಹಿಸುವಿಕೆಯು ಇಂದೂ ಮುಂದುವರೆಯಿತು. ಸೇವೆಗಳಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ರಕ್ತದೊತ್ತಡ ಮತ್ತು ಥೈರಾಯ್ಡ್ ಪರೀಕ್ಷೆಗಳು, ಮಕ್ಕಳ ಆರೈಕೆ, ಮಧುಮೇಹ ಮತ್ತು ನೆಫ್ರಾಲಜಿಯಂತಹ ದೀರ್ಘಕಾಲದ ಕಾಯಿಲೆಗಳಿಗೆ ತಜ್ಞರ ಸಮಾಲೋಚನೆ, ಫಿಸಿಯೋಥೆರಪಿ, ಕಣ್ಣಿನ ತಪಾಸಣೆ ಮತ್ತು ಮಕ್ಕಳ ಆರೋಗ್ಯದ ಉಪಕ್ರಮಗಳು ಸೇರಿದ್ದವು. ಜನೌಷಧಿ ಪರಿಯೋಜನೆಯ ಕುರಿತು ಜಾಗೃತಿ ಅಭಿಯಾನಗಳ ಜೊತೆಗೆ ಮಹಿಳೆಯರಿಗೆ 'ಸುವಿಧಾ' ಸ್ಯಾನಿಟರಿ ಪ್ಯಾಡ್ ‌ಗಳನ್ನು ಉಚಿತವಾಗಿ ವಿತರಿಸಲಾಯಿತು.

ನವದೆಹಲಿಯ ಜಾಮಿಯಾ ನಗರದಲ್ಲಿ ಆರೋಗ್ಯ ತಪಾಸಣಾ ಶಿಬಿರ

ಶಿಬಿರದಲ್ಲಿ ಭಾಗವಹಿಸಿದ್ದ ವಿವಿಧ ಗಣ್ಯರು, ಸುಲಭವಾಗಿ ಲಭ್ಯವಾಗುವ ಆರೋಗ್ಯ ಸೇವೆಯ ಮೇಲೆ 'ಜನೌಷಧಿ ಪರಿಯೋಜನೆ' ಬೀರುತ್ತಿರುವ ಪರಿವರ್ತಕ ಪ್ರಭಾವವನ್ನು ಶ್ಲಾಘಿಸಿದರು. ನಂಬಿಕೆಯೊಂದಿಗೆ ಉಳಿತಾಯಕ್ಕಾಗಿ ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು ಅಳವಡಿಸಿಕೊಳ್ಳುವಂತೆ ಮತ್ತು ಕಾರ್ಯನಿರ್ವಹಿಸುತ್ತಿರುವ 18,000ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಹತ್ತಿರದ ಕೇಂದ್ರಗಳನ್ನು ಪತ್ತೆಹಚ್ಚಲು ‘ಜನೌಷಧಿ ಸುಗಮ್’ (Jan Aushadhi Sugam) ಆ್ಯಪ್ ಅನ್ನು ಬಳಸಿಕೊಳ್ಳುವಂತೆ ಅವರು ಸಾರ್ವಜನಿಕರನ್ನು ಒತ್ತಾಯಿಸಿದರು. ಔಷಧಗಳ ವಿತರಣೆಯನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ನಿಟ್ಟಿನಲ್ಲಿ, ಮಾರ್ಚ್ 2027 ರ ವೇಳೆಗೆ ದೇಶಾದ್ಯಂತ 25,000 ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು PMBI ಹೊಂದಿದೆ.

 

*****


(ಪ್ರಕಟಣೆ ಐ.ಡಿ.: 2235210) ವಿಸಿಟರ್ ಕೌಂಟರ್ : 81
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Tamil