ಕಾನೂನು ಮತ್ತು ನ್ಯಾಯ ಸಚಿವಾಲಯ
azadi ka amrit mahotsav

ಭಾರತ ಸರ್ಕಾರದಿಂದ ವ್ಯಾಜ್ಯಗಳ ಸಮರ್ಪಕ ಮತ್ತು ಪರಿಣಾಮಕಾರಿ ನಿರ್ವಹಣೆ ಕುರಿತ ಸಮ್ಮೇಳನ 


ಸಮ್ಮೇಳನದ ವಿಷಯ "2047ರ ವೇಳೆಗೆ ವಿಕಸಿತ ಭಾರತಕ್ಕಾಗಿ ಸಾಂಸ್ಥಿಕ ವ್ಯಾಜ್ಯ ನಿರ್ವಹಣೆ ಆಡಳಿತದ ಬಲವರ್ಧನೆ"

ಪ್ರಕಟಣಾ ದಿನಾಂಕ: 28 FEB 2026 8:54PM by PIB Bengaluru

"ಸರ್ಕಾರಿ ವ್ಯಾಜ್ಯಗಳ ದಕ್ಷ ಮತ್ತು ಪರಿಣಾಮಕಾರಿ ನಿರ್ವಹಣೆ" ಕುರಿತಂತೆ ಕೇಂದ್ರ ಕಾರ್ಯದರ್ಶಿಗಳು ಮತ್ತು ಕಾನೂನು ಅಧಿಕಾರಿಗಳ ರಾಷ್ಟ್ರೀಯ ಸಮ್ಮೇಳನವು 2026ರ ಫೆಬ್ರವರಿ 28 ರಂದು ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಿತು. ಮೊಕದ್ದಮೆ ಪದ್ಧತಿಗಳನ್ನು ಬಲಪಡಿಸುವ ಮತ್ತು ಸಾಂಸ್ಥಿಕ ದಕ್ಷತೆಯನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಲು, ಈ ಸಮ್ಮೇಳನವು ಕಾರ್ಯದರ್ಶಿಗಳು, ಹಿರಿಯ ಸರ್ಕಾರಿ ಅಧಿಕಾರಿಗಳು, ಜ್ಞಾನಿ ಕಾನೂನು ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಪ್ರತಿನಿಧಿಗಳು ಒಗ್ಗೂಡಿಸಿತ್ತು.  

ಈ ಕಾರ್ಯಕ್ರಮದಲ್ಲಿ ಕೇಂದ್ರ ಕಾನೂನು ಮತ್ತು ನ್ಯಾಯ ರಾಜ್ಯ ಖಾತೆ ಸಚಿವರಾದ (ಸ್ವತಂತ್ರ ನಿರ್ವಹಣೆ) ಶ್ರೀ ಅರ್ಜುನ್ ರಾಮ್ ಮೇಘವಾಲ್; ಸಂಪುಟ ಕಾರ್ಯದರ್ಶಿಗಳಾದ ಡಾ. ಟಿ.ವಿ. ಸೋಮನಾಥನ್; ಭಾರತದ ಅಟಾರ್ನಿ ಜನರಲ್ ಶ್ರೀ ಆರ್. ವೆಂಕಟರಮಣಿ; ಭಾರತದ ಸಾಲಿಸಿಟರ್ ಜನರಲ್ ಶ್ರೀ ತುಷಾರ್ ಮೆಹ್ತಾ, ನ್ಯಾಯ ಇಲಾಖೆಯ ಕಾರ್ಯದರ್ಶಿ ಡಾ. ನೀರಜ್ ವರ್ಮಾ ಮತ್ತು ಕಾನೂನು ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಡಾ. ರಾಜೀವ್ ಮಣಿ ಉಪಸ್ಥಿತರಿದ್ದರು.

ಸೇವೆ, ಪಿಂಚಣಿ ಮತ್ತು ಉದ್ಯೋಗ ವಿಷಯಗಳು; ಮೂಲಸೌಕರ್ಯ, ಪರಿಹಾರ ಮತ್ತು ಒಪ್ಪಂದದ ವಿವಾದಗಳು; ಹಣಕಾಸು, ತೆರಿಗೆ ಮತ್ತು ಕಂದಾಯ ಪ್ರಕರಣಗಳು; ಹಾಗೂ ನಿಯಂತ್ರಕ, ಜಾರಿ ಮತ್ತು ಅನುಸರಣೆ-ಸಂಬಂಧಿತ ಮೊಕದ್ದಮೆ ಎಂಬ ನಾಲ್ಕು ಪ್ರಮುಖ ವಿಷಯಾಧಾರಿತವಾಗಿ ಮೊಕದ್ದಮೆ ಸನ್ನಿವೇಶದ ಕುರಿತು ಸಮ್ಮೇಳದಲ್ಲಿ ಚರ್ಚಿಸಲಾಯಿತು. ಏಕರೂಪ ಕಾನೂನಿನ ಅನುಷ್ಠಾನವಿಲ್ಲದ ಕಾರಣ ಪುನರಾವರ್ತನೆಯಾಗುವ ಸೇವಾ ಮೊಕದ್ದಮೆಗಳು; ಕೌಂಟರ್ ಅಫಿಡವಿಟ್ಗಳನ್ನು ಸಲ್ಲಿಸುವ ಮುನ್ನ ಸಮರ್ಪಕವಾದ ಸಮಾಲೋಚನೆಯ ಕೊರತೆ; ವಿವಿಧ ಸಚಿವಾಲಯಗಳು ಹೊಂದುವ ವಿಭಿನ್ನ ನಿಲುವುಗಳು; ಇಲಾಖೆಗಳು ಮತ್ತು ಪ್ಯಾನೆಲ್ ಸಲಹೆಗಾರರ ನಡುವಿನ ಸಮನ್ವಯದ ಕೊರತೆ ಹಾಗೂ ಪರಿಗಣಿತ ನೀತಿ ನಿರ್ಧಾರಕ್ಕಿಂತ ಪೂರ್ವನಿಯೋಜಿತ ಪ್ರತಿಕ್ರಿಯೆಯಾಗಿ ಮೇಲ್ಮನವಿಗಳನ್ನು ಸಲ್ಲಿಸುವ ಪ್ರವೃತ್ತಿ ಮೊದಲಾದ ಪ್ರಮುಖ ಸವಾಲುಗಳ ಬಗ್ಗೆ ಸಮ್ಮೇಳನದ ಭಾಗೀದಾರರು ಗಮನ ಸೆಳೆದರು.

ಮೂಲಸೌಕರ್ಯ ಮತ್ತು ಪರಿಹಾರ ಪ್ರಕರಣಗಳಲ್ಲಿ, ಹೆಚ್ಚುತ್ತಿರುವ ಭೂ ಪರಿಹಾರ ವ್ಯಾಜ್ಯಗಳು ಮತ್ತು ಹೆಚ್ಚುತ್ತಿರುವ ಬಡ್ಡಿ ಹೊಣೆಗಾರಿಕೆಗಳು, ಮಧ್ಯಸ್ಥಿಕೆ ನಿರ್ಧಾರಗಳ ಸಂಬಂಧ ದಿನನಿತ್ಯದ ಸವಾಲುಗಳು, ಅಸಮರ್ಪಕ ಕಾನೂನು ಪರಿಶೀಲನೆಗೆ ಕಾರಣವಾಗುವ ಮೂಲಸೌಕರ್ಯ ಒಪ್ಪಂದಗಳಲ್ಲಿನ ತಾಂತ್ರಿಕ ಸಂಕೀರ್ಣತೆ, ತಾಂತ್ರಿಕ ವಿಭಾಗಗಳು ಮತ್ತು ಕಾನೂನು ತಂಡಗಳ ನಡುವೆ ಸಮನ್ವಯದ ವಿಘಟನೆ ಹಾಗೂ ಪರ್ಯಾಯ ವಿವಾದ ಪರಿಹಾರ (ಎಡಿಆರ್) ಮತ್ತು ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಯ ಅಸಮರ್ಪಕ ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಲಾಯಿತು.

ಅನಗತ್ಯ ವಿಷಯಗಳನ್ನು ತೆಗೆದು ಹಾಕುವಿಕೆ, ಉತ್ತಮ ಸಮನ್ವಯತೆ ಮತ್ತು ಆರಂಭಿಕ ವಿವಾದ ಪರಿಹಾರದ ಮೂಲಕ ಮೊಕದ್ದಮೆ ಸಲ್ಲಿಕೆಯಲ್ಲಿನ ವಿಳಂಬ ತಗ್ಗಿಸುವುದು ಹಾಗೂ ವ್ಯಾಜ್ಯರಹಿತವಾಗಿ ಪರಿಹಾರ ಕಂಡುಕೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆಯಲ್ಲಿ ಪ್ರಮುಖವಾಗಿ ಒತ್ತು ನೀಡಲಾಯಿತು. ಸೇವೆ ಮತ್ತು ಇತರ ವಿಚಾರಗಳಲ್ಲಿ ಮೇಲ್ಮನವಿಗೆ ಅರ್ಹವೇ ಎಂಬುದನ್ನು ತಿಳಿಸುವ ಸ್ಪಷ್ಟವಾದ ಮಾನದಂಡಗಳು, ವ್ಯಾಜ್ಯಗಳ ಸಂಘಟಿತ ನಿರ್ವಹಣೆಗಾಗಿ ಪ್ರತಿ ಇಲಾಖೆಯಲ್ಲಿ ಗೊತ್ತುಪಡಿಸಿದ ಅಧಿಕಾರಿಯ ನಾಮನಿರ್ದೇಶನ ಹಾಗೂ ಪುನರಾವರ್ತಿತ ಮತ್ತು ಆದೇಶ ಉಲ್ಲಂಘನೆಯ ಮೊಕದ್ದಮೆಗಳನ್ನು ಕಡಿಮೆ ಮಾಡಲು ನ್ಯಾಯಾಲಯದ ತೀರ್ಪುಗಳ ಕಾಲಮಿತಿಯ ಅನುಷ್ಠಾನಕ್ಕೆ ಕಾರ್ಯವಿಧಾನಗಳನ್ನು ಸಮ್ಮೇಳನವು ಶಿಫಾರಸು ಮಾಡಿದೆ. ಎಲ್ಲಾ ಸಚಿವಾಲಯಗಳಲ್ಲಿ ಸ್ಥಿರವಾದ ಕಾನೂನು ನಿಲುವು ಕೈಗೊಳ್ಳುವಂತಾಗಲು ಪ್ರಮುಖ ಮತ್ತು ನೀತಿ ಸೂಕ್ಷ್ಮ ಪ್ರಕರಣಗಳಲ್ಲಿ ಕಾನೂನು ವ್ಯವಹಾರಗಳ ಇಲಾಖೆ ಮತ್ತು ಕಾನೂನು ಅಧಿಕಾರಿಗಳೊಂದಿಗೆ ನಿಕಟ ಮತ್ತು ರಚನಾತ್ಮಕ ಸಮನ್ವಯಕ್ಕೆ ಒತ್ತು ನೀಡಲಾಗಿದೆ.

ಮೂಲಸೌಕರ್ಯ, ಪರಿಹಾರ ಮತ್ತು ಒಪ್ಪಂದ ವ್ಯಾಜ್ಯಗಳಿಗೆ, ವಿಶೇಷವಾಗಿ ಭೂಮಿ ಮತ್ತು ಮೂಲಸೌಕರ್ಯ ವಿವಾದಗಳಿಗೆ ರಚನಾತ್ಮಕ ಪೂರ್ವ-ವ್ಯಾಜ್ಯ ಎಡಿಆರ್ ಸಾಂಸ್ಥಿಕಗೊಳಿಸುವುದನ್ನು ಮತ್ತು ದೀರ್ಘಕಾಲದ ನ್ಯಾಯಾಲಯದ ಕದನಗಳನ್ನು ತಪ್ಪಿಸಲು ಪರಿಹಾರ ವಿಷಯಗಳಲ್ಲಿ ರಚನಾತ್ಮಕ ಇತ್ಯರ್ಥಗಳಿಗೆ ಸಮ್ಮೇಳನ ಅನುಮೋದನೆ ನೀಡಿದೆ.  ಅಲ್ಲದೆ, ಸಮಿತಿಗಳ ಮೂಲಕ ಸಮಾಲೋಚನೆಗಳೊಂದಿಗೆ ಮಧ್ಯಸ್ಥಿಕೆ ತೀರ್ಪುಗಳನ್ನು ಪ್ರಶ್ನಿಸುವ ಮೊದಲು ಹಣಕಾಸಿನ ಮಾನ್ಯತೆ ಮಿತಿಗಳನ್ನು ಅನ್ವೇಷಿಸಬೇಕು ಮತ್ತು ಪರಿಶೀಲಿಸಬೇಕು, ಇದರಿಂದಾಗಿ ಗಣನೀಯ ಕಾನೂನು ಅಥವಾ ಆರ್ಥಿಕ ಪರಿಣಾಮಗಳನ್ನು ಹೊಂದಿರುವ ಪ್ರಕರಣಗಳಲ್ಲಿ ಮಾತ್ರ ಮೇಲ್ಮನವಿ ಸಲ್ಲಿಸಬಹುದಾಗುತ್ತದೆ. ತ್ವರಿತ ಮತ್ತು ನ್ಯಾಯಯುತ ವಿವಾದ ಪರಿಹಾರಕ್ಕಾಗಿ ಸದೃಢ ಆಂತರಿಕ ವ್ಯವಸ್ಥೆಯ ಜೊತೆಗೆ ಪ್ರಕರಣಗಳ ಮುಕ್ತಾಯ, ಅನರ್ಹಗೊಳಿಸುವಿಕೆ ಮತ್ತು ಇತರ ಹೆಚ್ಚಿನ ಮೌಲ್ಯದ ಒಪ್ಪಂದ ನಿರ್ಧಾರಗಳನ್ನು ಮುಂಚಿತವಾಗಿ ಮತ್ತು ಕಡ್ಡಾಯವಾಗಿ ಕಾನೂನು ಪರಿಶೀಲನೆ ಒಳಪಡಿಸುವುದು ಹೊಸ ಮೊಕದ್ದಮೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ನಿರ್ಣಾಯಕ ಹಂತಗಳೆಂದು ಗುರುತಿಸಲಾಗಿದೆ. ಹಣಕಾಸು, ತೆರಿಗೆ, ಕಂದಾಯ ಹಾಗೂ ನಿಯಂತ್ರಕ/ಜಾರಿ ಮೊಕದ್ದಮೆಗಳ ಮೇಲಿನ ಚರ್ಚೆಗಳು, ವಿವಾದಗಳನ್ನು ಆರಂಭಿಕ ಹಂತಗಳಲ್ಲಿಯೇ ಪರಿಹರಿಸಲು ಮತ್ತು ಅನಗತ್ಯ ವಿಷಯಗಳನ್ನು ಉನ್ನತ ವೇದಿಕೆಗಳಿಗೆ ಕೊಂಡೊಯ್ಯದಂತೆ ಜಾರಿ ತಂತ್ರಗಳು ಮತ್ತು ಅನುಸರಣೆ ಕಾರ್ಯವಿಧಾನಗಳನ್ನು ವ್ಯವಸ್ಥಿತಗೊಳಿಸುವ ಅಗತ್ಯವನ್ನು ವಿವರಿಸಿವೆ.

ಒಟ್ಟಾರೆಯಾಗಿ, ವ್ಯಾಜ್ಯವಾಗದಂತೆ ತಪ್ಪಿಸಬಹುದಾದ ಪ್ರಕರಣಗಳನ್ನು ಕಡಿಮೆ ಮಾಡುವ, ಸಕಾಲಿಕ ಅರ್ಜಿ ಸಲ್ಲಿಕೆ ಮತ್ತು ಅನುಷ್ಠಾನ ಖಾತರಿಪಡಿಸಿಕೊಳ್ಳುವ, ಪರ್ಯಾಯ ವಿವಾದ ಪರಿಹಾರವನ್ನು ಬಲಪಡಿಸುವ, ವ್ಯವಹಾರ ಸುಲಲತೆಯನ್ನು ವರ್ಧಿಸುವ ಮತ್ತು 2047ರ ವೇಳೆಗೆ ವಿಕಸಿತ ಭಾರತದ ಗುರಿಗಳ ಸಾಧನೆಗೆ ಸರ್ಕಾರಿ ಪ್ರಕ್ರಿಯೆಗಳಲ್ಲಿ ನಾಗರಿಕರ ವಿಶ್ವಾಸವನ್ನು ಹೆಚ್ಚಿಸುವತ್ತ ಗಮನಹರಿಸುವ ಮೂಲಕ ಜವಾಬ್ದಾರಿಯುತ ಮತ್ತು ಶಿಸ್ತುಬದ್ಧ ವ್ಯಾಜ್ಯಗಳಿಗೆ ಭಾರತ ಸರ್ಕಾರದ ಬದ್ಧತೆಯನ್ನು ಸಮ್ಮೇಳನ  ಪುನರುಚ್ಚರಿಸಿದೆ.

 

*****


(ಪ್ರಕಟಣೆ ಐ.ಡಿ.: 2234866) ವಿಸಿಟರ್ ಕೌಂಟರ್ : 31
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati