ಔಷಧೀಯ ಇಲಾಖೆ
ಹಲವಾರು ಸ್ಥಳಗಳಲ್ಲಿ ಭಾರಿ ಸಾರ್ವಜನಿಕ ಸಹಭಾಗಿತ್ವ ಮತ್ತು ಜಾಗೃತಿ ಅಭಿಯಾನದೊಂದಿಗೆ 'ಜನೌಷಧಿ ಸಪ್ತಾಹ'ದ ಎರಡನೇ ದಿನದ ಆಚರಣೆ
ಪ್ರಕಟಣಾ ದಿನಾಂಕ:
02 MAR 2026 6:10PM by PIB Bengaluru

ಕರ್ನಾಟಕದ ಉಡುಪಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ
ವಾರವಿಡೀ ನಡೆಯುವ 'ಜನೌಷಧಿ ಸಪ್ತಾಹ 2026' ಸಂಭ್ರಮಾಚರಣೆಯು ಇಂದು ಯಶಸ್ವಿಯಾಗಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಕೈಗೆಟುಕುವ ದರದ ಮತ್ತು ಗುಣಮಟ್ಟದ ಜನರಿಕ್ ಔಷಧಿಗಳ ಪ್ರಚಾರವನ್ನು ಮತ್ತಷ್ಟು ತೀವ್ರಗೊಳಿಸಿದೆ. ಉದ್ಘಾಟನಾ ದಿನದ ಉತ್ಸಾಹಭರಿತ ಪ್ರತಿಕ್ರಿಯೆಯ ಬೆನ್ನಲ್ಲೇ, 2026ರ ಮಾರ್ಚ್ 7ರಂದು ನಡೆಯಲಿರುವ 8ನೇ ಜನೌಷಧಿ ದಿವಸಕ್ಕೆ ಮುನ್ನುಡಿಯಾಗಿ ದೇಶಾದ್ಯಂತ 60ಕ್ಕೂ ಹೆಚ್ಚು ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿತ್ತು.
ಹಲವು ಸ್ಥಳಗಳಲ್ಲಿ ಫಲಾನುಭವಿಗಳು ಉಚಿತ ಜನರಿಕ್ ಔಷಧಿಗಳನ್ನು ಸಹ ಪಡೆದರು. ಈ ಕಾರ್ಯಕ್ರಮಕ್ಕೆ ಒಟ್ಟಾರೆ ಪ್ರತಿಕ್ರಿಯೆಯು ಆಶಾದಾಯಕವಾಗಿದ್ದು, ಪಾಲ್ಗೊಂಡವರು ಒದಗಿಸಲಾದ ಸೇವೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಬಿಹಾರ ಸರ್ಕಾರದ BC ಮತ್ತು EBC ಕಲ್ಯಾಣ ಸಚಿವೆ ಶ್ರೀಮತಿ ರಮಾ ನಿಶಾದ್ ಅವರು ಬಿಹಾರದ ಮುಜಫರ್‌ಪುರದ ಔರೈನಲ್ಲಿ ಆರೋಗ್ಯ ತಪಾಸಣಾ ಶಿಬಿರಕ್ಕೆ ಭೇಟಿ ನೀಡಿದರು

ಜಾರ್ಖಂಡ್‌ನ ಜಮ್ಶೆಡ್‌ಪುರದಲ್ಲಿ ಆರೋಗ್ಯ ತಪಾಸಣಾ ಶಿಬಿರ
ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿರುವ ಭಾರತೀಯ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ಬ್ಯೂರೋ (PMBI), 2026ರ ಮಾರ್ಚ್ 1 ರಿಂದ 5ರವರೆಗೆ ದೇಶಾದ್ಯಂತ 250ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಉಪಕ್ರಮದ ನೇತೃತ್ವ ವಹಿಸುತ್ತಿದೆ.
“ಜನೌಷಧಿ ಸಸ್ತಿ ಭಿ, ಭರೋಸೇಮಂದ್ ಭಿ - ಸೇಹತ್ ಕಿ ಬಾತ್, ಬಚತ್ ಕೆ ಸಾಥ್” (ಜನೌಷಧಿ ಅಗ್ಗವೂ ಹೌದು, ನಂಬಿಕಸ್ಥವೂ ಹೌದು - ಆರೋಗ್ಯದ ಮಾತು, ಉಳಿತಾಯದ ಜೊತೆಗೆ) ಎಂಬ ಘೋಷವಾಕ್ಯದೊಂದಿಗೆ, ಈ ಶಿಬಿರಗಳು ಜನೌಷಧಿ ಕೇಂದ್ರಗಳ ಮೂಲಕ ಮೂಲಭೂತ ರೋಗನಿರ್ಣಯ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸಲು ಸಹಾಯ ಮಾಡುತ್ತಿವೆ. ಎರಡನೇ ದಿನದಂದು ಉಡುಪಿ (ಕರ್ನಾಟಕ), ಜಮ್ಶೆಡ್ ಪುರ (ಜಾರ್ಖಂಡ್), ಡೆಹ್ರಾಡೂನ್ (ಉತ್ತರಾಖಂಡ), ಜೈಪುರ (ರಾಜಸ್ಥಾನ), ಕೃಷ್ಣ ಮತ್ತು ಶ್ರೀಕಾಕುಳಂ (ಆಂಧ್ರಪ್ರದೇಶ) ಹಾಗೂ ಝಜ್ಜರ್ (ಹರಿಯಾಣ) ಸೇರಿದಂತೆ ಹಲವು ಸ್ಥಳಗಳಲ್ಲಿ ಶಿಬಿರಗಳನ್ನು ಆಯೋಜಿಸಲಾಗಿತ್ತು.

ಮಹಾರಾಷ್ಟ್ರದ ನಲಸೋಪರದ ವಿಧಾನಸಭಾ ಸದಸ್ಯರು (ಶಾಸಕರು) ಶ್ರೀ ರಾಜನ್ ನಾಯಕ್ ಅವರು ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರಕ್ಕೆ ಭೇಟಿ ನೀಡಿದರು
ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರಿಕರು ಮತ್ತು ಮಹಿಳೆಯರು ಈ ಶಿಬಿರಗಳಲ್ಲಿ ಭಾಗವಹಿಸಿದ್ದರು. ಶಾಲಾ ಮಕ್ಕಳು ಸಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ವಿವಿಧ ಸ್ಥಳಗಳಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿದರು. ಸಾಮಾನ್ಯ ಆರೋಗ್ಯ ತಪಾಸಣೆಯ ಜೊತೆಗೆ, ಥೈರಾಯ್ಡ್ ಪರೀಕ್ಷೆ, ಮಕ್ಕಳ ಆರೈಕೆ ಮತ್ತು ದೀರ್ಘಕಾಲದ ಕಾಯಿಲೆಗಳ ಸಮಾಲೋಚನೆಯಂತಹ ಇತರ ರೋಗನಿರ್ಣಯ ಸೇವೆಗಳನ್ನು ಸಹ ಹಲವಾರು ಸ್ಥಳಗಳಲ್ಲಿ ಒದಗಿಸಲಾಯಿತು. ಇದರೊಂದಿಗೆ, ಕೈಗೆಟುಕುವ ದರದ ಮುಟ್ಟಿನ ನೈರ್ಮಲ್ಯ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸಲು ಮಹಿಳೆಯರಿಗೆ ಜನೌಷಧಿ ಸ್ಯಾನಿಟರಿ ಪ್ಯಾಡ್ ಗಳನ್ನು ವಿತರಿಸಲಾಯಿತು. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳ (PMBJKs) ಮೂಲಕ ಗುಣಮಟ್ಟದ ಜನರಿಕ್ ಔಷಧಿಗಳು ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಬಗ್ಗೆ ಜನರಿಗೆ ತಿಳಿಸಲು ಜಾಗೃತಿ ಸಭೆಗಳನ್ನು ಸಹ ನಡೆಸಲಾಯಿತು.


ಶ್ರೀ ರಾಜಣ್ಣ ಕೊರವಿ, ಅಧ್ಯಕ್ಷರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (HDMC), ಆರೋಗ್ಯ ತಪಾಸಣಾ ಶಿಬಿರದಲ್ಲಿ
ರಾಜ್ಯ ಸಚಿವರು, ಶಾಸಕರು ಮತ್ತು ಇತರ ಗಣ್ಯರು ಸೇರಿದಂತೆ ಸಾರ್ವಜನಿಕ ಪ್ರತಿನಿಧಿಗಳು ಶಿಬಿರಗಳಿಗೆ ಭೇಟಿ ನೀಡಿದರು. ಕೈಗೆಟುಕುವ ದರದ ಮತ್ತು ವಿಶ್ವಾಸಾರ್ಹ ಆರೋಗ್ಯ ಸೇವೆಯನ್ನು ಖಾತರಿಪಡಿಸುವಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ (PMBJP) ಪಾತ್ರವನ್ನು ಅವರು ಶ್ಲಾಘಿಸಿದರು. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 18,000ಕ್ಕೂ ಹೆಚ್ಚು ಕೇಂದ್ರಗಳಲ್ಲಿ ತಮಗೆ ಹತ್ತಿರವಿರುವ ಕೇಂದ್ರವನ್ನು ಸುಲಭವಾಗಿ ಪತ್ತೆಹಚ್ಚಲು ‘ಜನೌಷಧಿ ಸುಗಮ್’ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿಕೊಳ್ಳುವಂತೆ ಅವರು ಸಾರ್ವಜನಿಕರಿಗೆ ಕರೆ ನೀಡಿದರು.
ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಯಾವುದೇ ನಾಗರಿಕರು ಅಗತ್ಯ ಔಷಧಿಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ, ಮಾರ್ಚ್ 2027 ರ ವೇಳೆಗೆ 25,000 ಕೇಂದ್ರಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು PMBI ಹಾಕಿಕೊಂಡಿದೆ.
*****
(ಪ್ರಕಟಣೆ ಐ.ಡಿ.: 2234857)
ವಿಸಿಟರ್ ಕೌಂಟರ್ : 51