ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಭಾರತ ಎಐ ಪ್ರಭಾವ ಶೃಂಗಸಭೆ 2026ರಲ್ಲಿ ಜಾಗತಿಕ ನಾಯಕರು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿ ಹೆಚ್ಚುತ್ತಿರುವ ಎಐ ಬಳಕೆಯೊಂದಿಗೆ ಮಾನವ ಕೇಂದ್ರಿತ ಆಡಳಿತಕ್ಕೆ ಒತ್ತು ನೀಡಿದರು
ಭಾರತದ ಡಿಜಿಟಲ್ ಮಹತ್ವಾಕಾಂಕ್ಷೆಯು ಜಾಗತಿಕ ಎಐ ಆಡಳಿತವನ್ನು ರೂಪಿಸುತ್ತಿದೆ: ಅಲರ್ ಕರಿಸ್, ಎಸ್ಟೋನಿಯಾ ಗಣರಾಜ್ಯದ ಅಧ್ಯಕ್ಷ
ಭಾರತ ಎಐ ಶೃಂಗಸಭೆಯು ಸಮಗ್ರ ಜಾಗತಿಕ ದಕ್ಷಿಣ ಸಂವಾದದ ಮಹತ್ವವನ್ನು ಪ್ರದರ್ಶಿಸುತ್ತದೆ
ಪ್ರಕಟಣಾ ದಿನಾಂಕ:
18 FEB 2026 5:56PM by PIB Bengaluru
ಭಾರತದ ಎಐ ಪ್ರಭಾವ ಶೃಂಗಸಭೆ 2026ರ ಮೂರನೇ ದಿನದಂದು, "ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿ (ಡಿಪಿಐ) ಸುರಕ್ಷಿತ ಮತ್ತು ಜವಾಬ್ದಾರಿಯುತ ಎಐ ಯನ್ನು ನಿರ್ವಹಿಸುವುದು" ಎನ್ನುವ ಅಧಿವೇಶನವು ಜಾಗತಿಕ ನಾಯಕರು ಮತ್ತು ತಜ್ಞರನ್ನು ಒಟ್ಟುಗೂಡಿಸಿ ಕೃತಕ ಬುದ್ಧಿಮತ್ತೆಯನ್ನು ಸಾರ್ವಜನಿಕ ವ್ಯವಸ್ಥೆಗಳಲ್ಲಿ ಸುರಕ್ಷಿತ, ಜವಾಬ್ದಾರಿಯುತ ಮತ್ತು ಸಮಗ್ರ ರೀತಿಯಲ್ಲಿ ಹೇಗೆ ಸಂಯೋಜಿಸಬಹುದು ಎನ್ನುವುದರ ಬಗ್ಗೆ ವಿಮರ್ಶಿಸಿದವು.
ಆರೋಗ್ಯ, ಶಿಕ್ಷಣ, ಸಾಮಾಜಿಕ ಭದ್ರತೆ ಮತ್ತು ಸಾರ್ವಜನಿಕ ಆಡಳಿತದಲ್ಲಿ ಸೇವಾ ವಿತರಣೆಯು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿ ಬಲವಾದ ನೆಲೆಯನ್ನು ಪಡೆಯುತ್ತಿದೆ. ಆದ್ದರಿಂದ, ಈ ಚೌಕಟ್ಟುಗಳಲ್ಲಿ ಸಂಯೋಜಿಸಲ್ಪಟ್ಟ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳು ನಿರ್ಧಾರ ತೆಗೆದುಕೊಳ್ಳುವಿಕೆ, ಸಂಪನ್ಮೂಲ ಹಂಚಿಕೆ ಮತ್ತು ಅಧಿಕಾರದ ಪ್ರಯೋಗದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ ಎಂದು ಅಧಿವೇಶನವು ಒತ್ತಿಹೇಳಿತು. ಅಂತಹ ಸಂದರ್ಭಗಳಲ್ಲಿ, ನಂಬಿಕೆ, ಕಾನೂನುಬದ್ಧತೆ ಮತ್ತು ಹೊಣೆಗಾರಿಕೆಯನ್ನು ಕೇವಲ ತಾಂತ್ರಿಕ ಲಕ್ಷಣಗಳಾಗಿ ಪರಿಗಣಿಸದೆ ಆಡಳಿತದ ಮೂಲಭೂತ ತತ್ವಗಳಾಗಿ ರೂಪಿಸಲಾಯಿತು.
ಎಸ್ಟೋನಿಯಾ ಗಣರಾಜ್ಯದ ಅಧ್ಯಕ್ಷರಾದ ಅಲರ್ ಕರಿಸ್, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿ ಭಾರತದ ಮುಂದಾಳತ್ವವನ್ನು ಶ್ಲಾಘಿಸಿದರು, ಇದು ತಂತ್ರಜ್ಞಾನ, ಆಡಳಿತ ಮತ್ತು ಸೇರ್ಪಡೆಯ ಕುರಿತು ಜಾಗತಿಕ ಚರ್ಚೆಯನ್ನು ರೂಪಿಸುತ್ತಿದೆ ಎಂದು ಹೇಳಿದರು. ಆಧುನಿಕ ಸರ್ಕಾರಗಳ ಸಾಮರ್ಥ್ಯದಲ್ಲಿ ಡಿಪಿಐನ ರಚನಾತ್ಮಕ ಪಾತ್ರವನ್ನು ಒತ್ತಿಹೇಳುತ್ತಾ, ಎಸ್ಟೋನಿಯಾದ ಅಧ್ಯಕ್ಷರಾದ ಗೌರವಾನ್ವಿತ ಅಲರ್ ಕರಿಸ್ ಅವರು "ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಇನ್ನು ಮುಂದೆ ಸೇವಾ ವಿತರಣೆಗೆ ಕೇವಲ ತಾಂತ್ರಿಕ ಬೆನ್ನೆಲುಬಲ್ಲ; ಇದು ಆಧುನಿಕ ಸರ್ಕಾರಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎನ್ನುವುದರ ತಳಹದಿಯಾಗಿದೆ. ಕೃತಕ ಬುದ್ಧಿಮತ್ತೆಯನ್ನು ಈ ವ್ಯವಸ್ಥೆಗಳಲ್ಲಿ ಸೇರಿಸಿದಾಗ, ಅಲ್ಗಾರಿದಮಿಕ್ ಪಾರದರ್ಶಕತೆ ಮತ್ತು ಮಾನವ ಮೇಲ್ವಿಚಾರಣೆ ಎನ್ನುವುದು ಇನ್ನು ಮುಂದೆ ಐಚ್ಛಿಕ ಅಂಶಗಳಲ್ಲ; ಅವು ಸಾರ್ವಜನಿಕ ನಂಬಿಕೆ ಮತ್ತು ಕಾನೂನುಬದ್ಧತೆಗೆ ಅಗತ್ಯವಾದ ಷರತ್ತುಗಳಾಗಿವೆ” ಎಂದು ಹೇಳಿದರು.

ಕೃತಕ ಬುದ್ಧಿಮತ್ತೆಯಿಂದ ಸಕ್ರಿಯಗೊಳಿಸಿದ ಆಡಳಿತದಲ್ಲಿ ಸಾರ್ವಜನಿಕ ಸಂಸ್ಥೆಗಳ ಜವಾಬ್ದಾರಿಯ ಬಗ್ಗೆ ಹೇಳುತ್ತಾ, ಸ್ವಿಟ್ಜರ್ಲೆಂಡ್ ನ ರಾಜ್ಯ ಕಾರ್ಯದರ್ಶಿ ಮತ್ತು ಫೆಡರಲ್ ಕಮ್ಯುನಿಕೇಷನ್ಸ್ ಕಚೇರಿಯ ಮುಖ್ಯಸ್ಥರಾದ ಘನತೆವೆತ್ತ ಬರ್ನಾರ್ಡ್ ಮಾಸನ್, ಅಂತರರಾಷ್ಟ್ರೀಯ ಸಹಕಾರ ಮತ್ತು ಸಾಮರ್ಥ್ಯ ವೃದ್ಧಿಯು ವಿಶ್ವಾದ್ಯಂತ ಉತ್ತಮ ಆಡಳಿತಕ್ಕಾಗಿ ಎಐ ಅನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಅತ್ಯಗತ್ಯ ಪಾತ್ರ ವಹಿಸುತ್ತದೆ ಎಂದು ಹೇಳಿದರು. ದೇಶಗಳ ನಡುವೆ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವುದು ಪರಸ್ಪರ ಕಲಿಯಲು ಮತ್ತು ಮುನ್ನಡೆಯಲು ಸಹಾಯ ಮಾಡುತ್ತದೆ. ಎಐ ಆಡಳಿತದ ಮೇಲೆ ಕೇಂದ್ರೀಕರಿಸಿದ ಸಮಗ್ರ ಜಾಗತಿಕ ದಕ್ಷಿಣದಲ್ಲಿ ಸಮ್ಮೇಳನದ ಮಹತ್ವವನ್ನು ಭಾರತ ಎಐ ಶೃಂಗಸಭೆ ಎತ್ತಿ ತೋರಿಸುತ್ತದೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಮಾನವ ಹಕ್ಕುಗಳು, ಹೊಣೆಗಾರಿಕೆ, ಒಳಗೊಳ್ಳುವಿಕೆ ಮತ್ತು ಪಾರದರ್ಶಕತೆಯ ಅತ್ಯುನ್ನತ ಮಾನದಂಡಗಳನ್ನು ಪ್ರತಿಬಿಂಬಿಸಬೇಕು. ವ್ಯವಸ್ಥೆಗಳನ್ನು ಖಾಸಗಿ ಸಂಸ್ಥೆಗಳು ಅಭಿವೃದ್ಧಿಪಡಿಸಿದರೂ ಅಥವಾ ನಿರ್ವಹಿಸಿದರೂ ಸಹ, ಎಐ ತೆಗೆದುಕೊಳ್ಳುವ ಅಥವಾ ಬೆಂಬಲಿಸುವ ನಿರ್ಧಾರಗಳಿಗೆ ಸಾರ್ವಜನಿಕ ಅಧಿಕಾರಿಗಳು ಜವಾಬ್ದಾರರಾಗಿರುತ್ತಾರೆ. ಹೊಣೆಗಾರಿಕೆ ಇಲ್ಲದೆ, ವಿಶ್ವಾಸವನ್ನು ಉಳಿಸಿಕೊಳ್ಳಲಾಗದು.” ಎಂದು ಹೇಳಿದರು.

ಇದಲ್ಲದೆ, ಲಿಥುವೇನಿಯಾದ ಉಪ ಮಂತ್ರಿಗಳಾದ ಘನತೆವೆತ್ತ ಟೌರಿಮಾಸ್ ವೆಲಿಸ್ ಅವರು ವಿನ್ಯಾಸದಲ್ಲಿಯೇ ಸುರಕ್ಷತಾ ಕ್ರಮಗಳ ಅಗತ್ಯವನ್ನು ಒತ್ತಿ ಹೇಳಿದರು, ಜವಾಬ್ದಾರಿಯುತ ಎಐ ಬಲವಾದ ಸಾರ್ವಜನಿಕ ವಲಯದ ತಳಹದಿಯೊಂದಿಗೆ ಪ್ರಾರಂಭವಾಗುತ್ತದೆ ಎಂದು ಹೇಳಿದರು. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿ ಎಐ ಎಂದಿಗೂ ಕಣ್ಗಾವಲು ಅಥವಾ ತಾರತಮ್ಯಕ್ಕೆ ಸಾಧನವಾಗಬಾರದು; ತಂತ್ರಜ್ಞಾನವು ಜನರ ಪರವಾಗಿ ಸೇವೆ ಸಲ್ಲಿಸಬೇಕು, ವಿರುದ್ಧವಾಗಿ ಅಲ್ಲ, ಹಾಗು ಸೇರ್ಪಡೆಯನ್ನು ವಿನ್ಯಾಸದ ಮೂಲಕ ವ್ಯವಸ್ಥೆಗಳಲ್ಲಿ ನಿರ್ಮಿಸಬೇಕು” ಎಂದು ಹೇಳಿದರು.

ಪ್ರಜಾಪ್ರಭುತ್ವದ ನ್ಯಾಯಸಮ್ಮತತೆಯನ್ನು ಕೇಂದ್ರವಾಗಿರಿಸಿಕೊಂಡು ಡಿಪಿಐ ಒಳಗಿನ ಆಡಳಿತದ ಬಗ್ಗೆ ಹೇಳುತ್ತಾ, ನೆದರ್ಲ್ಯಾಂಡ್ಸ್ ವಿದೇಶಾಂಗ ಸಚಿವಾಲಯದ ಕೃತಕ ಬುದ್ಧಿಮತ್ತೆಯ ರಾಯಭಾರಿ ಘನತೆವೆತ್ತ ಹ್ಯಾರಿ ವರ್ವೀಜ್, “ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿ ಎಐ ಆಡಳಿತವು ಸಾರ್ವಜನಿಕ ನಂಬಿಕೆ ಮತ್ತು ಪ್ರಜಾಪ್ರಭುತ್ವದ ನ್ಯಾಯಸಮ್ಮತತೆಗೆ ಸಂಬಂಧಿಸಿದೆ. ಮಾನವ ಹಕ್ಕುಗಳು, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸೇರ್ಪಡೆ ಐಚ್ಛಿಕ ಅಂಶಗಳಲ್ಲ; ಅವು ಮೂಲಭೂತ ವಿನ್ಯಾಸ ತತ್ವಗಳಾಗಿವೆ ಮತ್ತು ದಕ್ಷತೆಯು ಎಂದಿಗೂ ಘನತೆ ಮತ್ತು ನ್ಯಾಯಸಮ್ಮತತೆಯ ಪರ್ಯಾಯವಾಗಿರಲು ಸಾಧ್ಯವಿಲ್ಲ” ಎಂದು ಹೇಳಿದರು.

ನಿಯೋಗದ ಮುಖ್ಯಸ್ಥರ ಭಾಷಣಗಳ ನಂತರ, ಒಂದು ತಜ್ಞ ಸಮಿತಿಯ ಚರ್ಚೆಯು ಪ್ರಾಯೋಗಿಕ ಆಡಳಿತ ಕಾರ್ಯವಿಧಾನಗಳು, ಜೀವನಚಕ್ರ ಹೊಣೆಗಾರಿಕೆ ಮತ್ತು ಜಾಗತಿಕ ದಕ್ಷಿಣ ನಿಯೋಜನೆಗಳಿಂದ ಪಾಠಗಳನ್ನು ಪರಿಶೀಲಿಸುವ ಮೂಲಕ ಚರ್ಚೆಯನ್ನು ವಿಷಯದ ಆಳಕ್ಕಿಳಿಸಿತು. ಚರ್ಚೆಯು ಅಲ್ಗಾರಿದಮಿಕ್ ಪಾರದರ್ಶಕತೆ, ಪ್ರಭಾವದ ಮೌಲ್ಯಮಾಪನಗಳು, ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳು ಮತ್ತು ಭಾಗವಹಿಸುವಿಕೆಯ ವಿನ್ಯಾಸ ಪ್ರಕ್ರಿಯೆಗಳು ಸೇರಿದಂತೆ ಹಕ್ಕುಗಳನ್ನು ಗೌರವಿಸುವ ಮತ್ತು ಮಾನವ-ಕೇಂದ್ರಿತ ಆಡಳಿತ ಚೌಕಟ್ಟುಗಳ ಮೇಲೆ ಕೇಂದ್ರೀಕರಿಸಿತು. ಆಡಳಿತ ವೈಫಲ್ಯಗಳು ಸಾಮಾನ್ಯವಾಗಿ ನಿಯೋಜನೆಗೆ ಮುಂಚೆಯೇ, ಸಾಂಸ್ಥಿಕ ವಿನ್ಯಾಸ ಮತ್ತು ರಾಜಕೀಯ ನಿರ್ಧಾರ ತೆಗೆದುಕೊಳ್ಳುವಿಕೆಯ ಮಟ್ಟದಲ್ಲಿ ಹುಟ್ಟಿಕೊಳ್ಳುತ್ತವೆ, ಆರಂಭಿಕ ಹಂತದ ಹೊಣೆಗಾರಿಕೆಯನ್ನು ಅತ್ಯಗತ್ಯಗೊಳಿಸುತ್ತದೆ ಎಂದು ಚರ್ಚೆಯಲ್ಲಿ ಪಾಲ್ಗೊಂಡವರು ಹೇಳಿದರು.

ತಜ್ಞ ಸಮಿತಿಯಲ್ಲಿ ಟೆಕ್ ಗ್ಲೋಬಲ್ ಇನ್ಸ್ಟಿಟ್ಯೂಟ್ ನ ಕಾರ್ಯಕ್ರಮಗಳು ಮತ್ತು ಪಾಲುದಾರಿಕೆಗಳ ಮುಖ್ಯಸ್ಥ ಪ್ರತೀಕ್ ವಾಘ್ರೆ; ಡೆರೆಚೋಸ್ ಡಿಜಿಟಲ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕ ಜುವಾನ್ ಕಾರ್ಲೋಸ್ ಲಾರಾ; ಗೂಗಲ್ ನ ಮಾನವ ಹಕ್ಕುಗಳ ಜಾಗತಿಕ ಮುಖ್ಯಸ್ಥ ಅಲೆಕ್ಸಾಂಡ್ರಿಯಾ ವಾಲ್ಡೆನ್; ಮತ್ತು ಜರ್ಮನಿಯ ಫೆಡರಲ್ ವಿದೇಶಾಂಗ ಕಚೇರಿಯ ವಿದೇಶಾಂಗ ನೀತಿಯಲ್ಲಿ ಎಐ ಮತ್ತು ಡಿಜಿಟಲ್ ತಂತ್ರಜ್ಞಾನಗಳ ಸಮನ್ವಯ ಸಿಬ್ಬಂದಿ ವಿಭಾಗದ ಉಪ ಮುಖ್ಯಸ್ಥ ನಾರ್ಮನ್ ಶುಲ್ಜ್.
ಯುರೋಪ್ ಮತ್ತು ಜಾಗತಿಕ ದಕ್ಷಿಣದ ಅನುಭವಗಳನ್ನು ಆಧರಿಸಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿ ಇರುವ ಎಐ ಪ್ರಜಾಪ್ರಭುತ್ವದ ಹೊಣೆಗಾರಿಕೆಯನ್ನು ಬಲಪಡಿಸಲು, ಮಾನವ ಹಕ್ಕುಗಳನ್ನು ರಕ್ಷಿಸಲು ಮತ್ತು ಪ್ರಮಾಣದಲ್ಲಿ ಸ್ಪಷ್ಟವಾದ ಸಾರ್ವಜನಿಕ ಮೌಲ್ಯವನ್ನು ನೀಡಲು ಅಂತರ್ಗತ ಜಾಗತಿಕ ವೇದಿಕೆಗಳು ಮತ್ತು ಹಂಚಿಕೆಯ ಮಾನದಂಡಗಳು ಅತ್ಯಗತ್ಯ ಎಂದು ಅಧಿವೇಶನವು ತೀರ್ಮಾನಿಸಿತು. ದೇಶಗಳು ಸಾರ್ವಜನಿಕ ವ್ಯವಸ್ಥೆಗಳಲ್ಲಿ ಎಐ ಸೇರ್ಪಡೆಯನ್ನು ವಿಸ್ತರಿಸುತ್ತಿದ್ದಂತೆ, ಜವಾಬ್ದಾರಿಯುತ ಆಡಳಿತವು ತಾಂತ್ರಿಕ ಸಾಮರ್ಥ್ಯದ ಜೊತೆಗೆ ವಿಕಸನಗೊಳ್ಳಬೇಕು, ಡಿಜಿಟಲ್ ರೂಪಾಂತರದ ಕೇಂದ್ರದಲ್ಲಿ ಜನರು, ಹಕ್ಕುಗಳು ಮತ್ತು ನಂಬಿಕೆಯ ಅಂಶಗಳನ್ನು ಇರಿಸಬೇಕು ಎಂದು ಚರ್ಚೆಯು ಒತ್ತಿಹೇಳಿತು.
*****
(ಪ್ರಕಟಣೆ ಐ.ಡಿ.: 2230591)
ವಿಸಿಟರ್ ಕೌಂಟರ್ : 3