ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026ರಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಎಐ-ಚಾಲಿತ ಪರಿವರ್ತನೆ ಕುರಿತ ವಸ್ತುಪ್ರದರ್ಶನಕ್ಕೆ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಭೇಟಿ
ಪ್ರಕಟಣಾ ದಿನಾಂಕ:
18 FEB 2026 8:12PM by PIB Bengaluru
ನವದೆಹಲಿಯ ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ ನಡೆಯುತ್ತಿರುವ 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ ಮತ್ತು ಎಕ್ಸ್ ಪೋ 2026'ರಲ್ಲಿ, ಭಾರತದ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (PDS) ಪರಿವರ್ತಿಸುತ್ತಿರುವ ಎಐ-ಚಾಲಿತ ಮತ್ತು ಡಿಜಿಟಲ್ ನಾವೀನ್ಯತೆಗಳನ್ನು ಪ್ರದರ್ಶಿಸುವ ವಸ್ತುಪ್ರದರ್ಶನ ಮಳಿಗೆಗೆ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಭೇಟಿ ನೀಡಿದರು.
“ಸಾರ್ವಜನಿಕ ವಿತರಣೆಗಾಗಿ ಎಐ-ಸಶಕ್ತ ನಾವೀನ್ಯತೆಗಳು” ಎಂಬ ಶೀರ್ಷಿಕೆಯ ಈ ಪ್ರದರ್ಶನ ಮಳಿಗೆಯನ್ನು ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು (DFPD), ವಿಶ್ವ ಆಹಾರ ಕಾರ್ಯಕ್ರಮದ (WFP) ಸಹಯೋಗದೊಂದಿಗೆ ಜಂಟಿಯಾಗಿ ಆಯೋಜಿಸಿದೆ.

ತಂತ್ರಜ್ಞಾನ ಆಧಾರಿತ, ಸೋರಿಕೆ ಮುಕ್ತ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (PDS) ಒತ್ತಿಹೇಳಿದ ಶ್ರೀ ಪ್ರಲ್ಹಾದ್ ಜೋಶಿ
ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಪ್ರಲ್ಹಾದ್ ಜೋಶಿ ಅವರು, ಪ್ರಧಾನ ಮಂತ್ರಿಯವರ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಭಾರತವು 80 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸುತ್ತಿದೆ — ಇದು ಜಾಗತಿಕ ಮಟ್ಟದಲ್ಲೇ ಅತ್ಯಂತ ಬೃಹತ್ ಪ್ರಮಾಣದ ಮತ್ತು ಅಪ್ರತಿಮವಾದ ಉಪಕ್ರಮವಾಗಿದೆ ಎಂದು ತಿಳಿಸಿದರು. ಖರೀದಿಸಿದ ಪ್ರತಿಯೊಂದು ಧಾನ್ಯವೂ ಉದ್ದೇಶಿತ ಫಲಾನುಭವಿಗಳನ್ನು ಸಮರ್ಥವಾಗಿ ಮತ್ತು ಪಾರದರ್ಶಕವಾಗಿ ತಲುಪುವುದನ್ನು ಖಚಿತಪಡಿಸುವುದು ಸರ್ಕಾರದ ಬದ್ಧತೆಯಾಗಿದೆ ಎಂದು ಅವರು ಒತ್ತಿ ಹೇಳಿದರು.
ತಂತ್ರಜ್ಞಾನ ಆಧಾರಿತ ಸುಧಾರಣೆಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿನ (PDS) ಸೋರಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದ್ದು, ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಇದು ವ್ಯವಸ್ಥೆಯನ್ನು ಹೆಚ್ಚು ದಕ್ಷ ಮತ್ತು ಜನಸ್ನೇಹಿಯನ್ನಾಗಿ ಮಾಡಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಅನ್ನ ಚಕ್ರ ಮೂಲಕ ₹250 ಕೋಟಿ ಉಳಿತಾಯ - ಪೂರೈಕೆ ಸರಪಳಿ ಸುಧಾರಣೆ
ತಾಂತ್ರಿಕ ಮಧ್ಯಸ್ಥಿಕೆಗಳ ಪ್ರಭಾವವನ್ನು ಎತ್ತಿ ತೋರಿಸಿದ ಶ್ರೀ ಜೋಶಿ ಅವರು, ಸ್ಮಾರ್ಟ್ ವೇರ್ ಹೌಸಿಂಗ್, ಸ್ಮಾರ್ಟ್ ಪಿಡಿಎಸ್ , ಅನ್ನ ದರ್ಪಣ್, ಅನ್ನ ಚಕ್ರ ಮತ್ತು ಆಶಾ (ASHA) ಅಂತಹ ಉಪಕ್ರಮಗಳು ಆಹಾರ ಧಾನ್ಯ ಪೂರೈಕೆ ಸರಪಳಿಯಾದ್ಯಂತ ಪಾರದರ್ಶಕತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಬಲಪಡಿಸುತ್ತಿವೆ ಎಂದು ಹೇಳಿದರು.
ಆಹಾರ ಧಾನ್ಯಗಳ ಸಾಗಣೆಗಾಗಿ ಪೂರೈಕೆ ಸರಪಳಿಯನ್ನು ಅತ್ಯುತ್ತಮವಾಗಿಸುವ 'ಅನ್ನ ಚಕ್ರ' (Anna Chakra) ವ್ಯವಸ್ಥೆಯು, ಬೇಡಿಕೆ, ದಾಸ್ತಾನು ಲಭ್ಯತೆ ಮತ್ತು ಲಾಜಿಸ್ಟಿಕ್ಸ್ ಮಾರ್ಗಗಳನ್ನು ವಿಶ್ಲೇಷಿಸುವ ಮೂಲಕ ಸಾರ್ವಜನಿಕ ನಿಧಿಯ ಸುಮಾರು ₹250 ಕೋಟಿ ಉಳಿಸಲು ನೆರವಾಗಿದೆ ಎಂದು ಅವರು ಮಾಹಿತಿ ನೀಡಿದರು. ಇದು ವೆಚ್ಚವನ್ನು ಕಡಿಮೆ ಮಾಡುವುದಲ್ಲದೆ, ಸಾಗಣೆ ಸಮಯವನ್ನು ಕಡಿತಗೊಳಿಸಿದೆ ಮತ್ತು ಪೂರೈಕೆ ಸರಪಳಿಯ ಚೇತರಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿದೆ.
ಮುಂದುವರಿದು ಮಾತನಾಡಿದ ಸಚಿವರು, AI-ಸಶಕ್ತ ಕುಂದುಕೊರತೆ ನಿವಾರಣಾ ವೇದಿಕೆಯಾದ 'ಆಶಾ' (ASHA - Anna Sahayata Holistic Solution) ಪ್ರತಿ ತಿಂಗಳು ಸುಮಾರು 20 ಲಕ್ಷ ಫಲಾನುಭವಿಗಳನ್ನು ಸಂಪರ್ಕಿಸಿ ಅವರಿಂದ ಪ್ರತಿಕ್ರಿಯೆಗಳನ್ನು ಸಂಗ್ರಹಿಸುತ್ತದೆ. ಈ ಮಾಹಿತಿಯನ್ನು ದೂರುಗಳ ತ್ವರಿತ ಪರಿಹಾರಕ್ಕಾಗಿ ಆಯಾ ಜಿಲ್ಲಾಡಳಿತಗಳಿಗೆ ರವಾನಿಸಲಾಗುತ್ತದೆ ಎಂದು ತಿಳಿಸಿದರು.


ವಸ್ತುಪ್ರದರ್ಶನದ ಪ್ರಮುಖ ಮುಖ್ಯಾಂಶಗಳು
ಸ್ಮಾರ್ಟ್ ಪಿಡಿಎಸ್
ಪಡಿತರ ಚೀಟಿ ನಿರ್ವಹಣೆ, ಖರೀದಿ, ಹಂಚಿಕೆ, ಸಂಗ್ರಹಣೆ, ಸಾಗಣೆ, ನ್ಯಾಯಬೆಲೆ ಅಂಗಡಿ ಕಾರ್ಯಾಚರಣೆಗಳು, ಬಯೋಮೆಟ್ರಿಕ್ ದೃಢೀಕರಣ ಮತ್ತು ಕುಂದುಕೊರತೆ ನಿವಾರಣೆಯನ್ನು ಒಳಗೊಂಡಿರುವ ಒಂದು ಏಕೀಕೃತ ರಾಷ್ಟ್ರೀಯ ಡಿಜಿಟಲ್ ವ್ಯವಸ್ಥೆ. ಇದರ ರಿಯಲ್-ಟೈಮ್ ಅನಾಲಿಟಿಕ್ಸ್ ಡ್ಯಾಶ್‌ಬೋರ್ಡ್‌ಗಳು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ದತ್ತಾಂಶ ಆಧಾರಿತ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತವೆ.
ಅನ್ನ ಚಕ್ರ
ಇದು AI ಆಧಾರಿತ ಸಾಗಣೆ ಯೋಜನಾ ವ್ಯವಸ್ಥೆಯಾಗಿದ್ದು, ಬೇಡಿಕೆ, ದಾಸ್ತಾನು ಲಭ್ಯತೆ ಮತ್ತು ಲಾಜಿಸ್ಟಿಕ್ಸ್ ಮಾರ್ಗಗಳನ್ನು ವಿಶ್ಲೇಷಿಸುವ ಮೂಲಕ ಆಹಾರ ಧಾನ್ಯಗಳ ಸಾಗಣೆಯನ್ನು ಸುಲಭಗೊಳಿಸುತ್ತದೆ. ಇದು ವೆಚ್ಚ ಮತ್ತು ಸಾಗಣೆ ಸಮಯವನ್ನು ಕಡಿಮೆ ಮಾಡುವುದಲ್ಲದೆ, ಪೂರೈಕೆ ಸರಪಳಿಯ ದಕ್ಷತೆಯನ್ನು ಹೆಚ್ಚಿಸುತ್ತದೆ.
ಡಿಪೋ ದರ್ಪಣ್
ಇದು ಸ್ಮಾರ್ಟ್ ಗೋದಾಮು ಉಸ್ತುವಾರಿ ವೇದಿಕೆಯಾಗಿದ್ದು, ತಂತ್ರಜ್ಞಾನ ಆಧಾರಿತ ತಪಾಸಣೆ ಮತ್ತು ಮೇಲ್ವಿಚಾರಣೆಯ ಮೂಲಕ ಸುಧಾರಿತ ಮೂಲಸೌಕರ್ಯ ನಿರ್ವಹಣೆ, ನೈರ್ಮಲ್ಯ ಮಾನದಂಡಗಳು ಮತ್ತು ಸಂಗ್ರಹಣಾ ಸುರಕ್ಷತೆಯನ್ನು ಖಚಿತಪಡಿಸುತ್ತದೆ.
ಸ್ವಯಂಚಾಲಿತ ಧಾನ್ಯ ವಿಶ್ಲೇಷಕರು
ಡಿಜಿಟಲ್ ಗುಣಮಟ್ಟ ಪರೀಕ್ಷಾ ವ್ಯವಸ್ಥೆಗಳು ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ವೇಗ ಮತ್ತು ವಸ್ತುನಿಷ್ಠತೆಯನ್ನು ಹೆಚ್ಚಿಸುತ್ತವೆ, ಇದರಿಂದಾಗಿ ರೈತರಲ್ಲಿ ವ್ಯವಸ್ಥೆಯ ಬಗ್ಗೆ ನಂಬಿಕೆ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ನಾಗರಿಕ ಸ್ನೇಹಿ ಡಿಜಿಟಲ್ ವೇದಿಕೆಗಳು:
ಆಶಾ (ASHA - Anna Sahayata Holistic Solution): ಬಹುಭಾಷಾ ಕುಂದುಕೊರತೆ ನಿವಾರಣೆ ಮತ್ತು ನಾಗರಿಕ ಪ್ರತಿಕ್ರಿಯೆ ವ್ಯವಸ್ಥೆ.
ಸ್ಕ್ಯಾನ್ (SCAN): ಸಬ್ಸಿಡಿ ಕ್ಲೈಮ್ ಗಳನ್ನು ವೇಗವಾಗಿ ಮತ್ತು ಪಾರದರ್ಶಕವಾಗಿ ಇತ್ಯರ್ಥಪಡಿಸಲು ಸಹಾಯ ಮಾಡುವ ಬುದ್ಧಿವಂತ ದಾಖಲೆ ಸಂಸ್ಕರಣಾ ವೇದಿಕೆ.
ಅನ್ನಪೂರ್ಣಿ ಧಾನ್ಯ ಎಟಿಎಂಗಳು (Annapurti Grain ATMs): ಬಯೋಮೆಟ್ರಿಕ್ ದೃಢೀಕರಣದ ಮೂಲಕ ನಿಖರವಾದ ಮತ್ತು ಗೌರವಾನ್ವಿತವಾಗಿ ಆಹಾರ ಧಾನ್ಯ ವಿತರಣೆಯನ್ನು ಖಚಿತಪಡಿಸುವ ಸ್ವಯಂಚಾಲಿತ ಯಂತ್ರಗಳು.
ಈ ಸಂದರ್ಭದಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಶ್ರೀ ಸಂಜೀವ್ ಚೋಪ್ರಾ, ವಿಶ್ವ ಆಹಾರ ಕಾರ್ಯಕ್ರಮದ (WFP) ಉಪ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀ ಕಾರ್ಲ್ ಸ್ಕೌ ಮತ್ತು ಮತ್ತು ಡಬ್ಲ್ಯೂ ಎಫ್ ಪಿ ಭಾರತದ ದೇಶದ ನಿರ್ದೇಶಕಿ ಮತ್ತು ಪ್ರತಿನಿಧಿ ಶ್ರೀಮತಿ ಎಲಿಜಬೆತ್ ಫೌರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಎಲ್ಲಾ ಉಪಕ್ರಮಗಳು ರಾಷ್ಟ್ರೀಯ ಆಹಾರ ಭದ್ರತೆಯನ್ನು ಬಲಪಡಿಸಲು ಮತ್ತು ಬೃಹತ್ ಪ್ರಮಾಣದಲ್ಲಿ ನಾಗರಿಕ ಸ್ನೇಹಿ ಸಾರ್ವಜನಿಕ ಸೇವೆಯನ್ನು ಒದಗಿಸಲು ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.
*****
(ಪ್ರಕಟಣೆ ಐ.ಡಿ.: 2229982)
ವಿಸಿಟರ್ ಕೌಂಟರ್ : 7