ರಕ್ಷಣಾ ಸಚಿವಾಲಯ
ಬೆಂಗಳೂರಿನಲ್ಲಿ 6ನೇ ವಾರ್ಷಿಕ ರಕ್ಷಣಾ ಸಂವಾದದ ಸಹ-ಅಧ್ಯಕ್ಷತೆ ವಹಿಸಿದ ರಕ್ಷಣಾ ಸಚಿವರು ಮತ್ತು ಅವರ ಫ್ರೆಂಚ್ ಸಹವರ್ತಿ
ರಕ್ಷಣಾ ಸಹಕಾರ ಒಪ್ಪಂದವನ್ನು ಇನ್ನೂ 10 ವರ್ಷಗಳ ಅವಧಿಗೆ ನವೀಕರಿಸಲಾಗಿದೆ
ಭಾರತದಲ್ಲಿ ಹ್ಯಾಮರ್ ಕ್ಷಿಪಣಿಗಳನ್ನು ತಯಾರಿಸಲು BEL ಮತ್ತು ಸಫ್ರಾನ್ (SAFRAN) ಒಪ್ಪಂದಕ್ಕೆ ಸಹಿ ಹಾಕಿವೆ
ಭಾರತೀಯ ಸೇನೆ ಮತ್ತು ಫ್ರೆಂಚ್ ಭೂಸೇನಾ ಸಂಸ್ಥೆಗಳಲ್ಲಿ ಅಧಿಕಾರಿಗಳ ಪರಸ್ಪರ ನಿಯೋಜನೆಯನ್ನು ಉಭಯ ರಾಷ್ಟ್ರಗಳು ಘೋಷಿಸಿವೆ
ಪ್ರಕಟಣಾ ದಿನಾಂಕ:
17 FEB 2026 8:31PM by PIB Bengaluru
ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಮತ್ತು ಫ್ರಾನ್ಸ್ ನ ಸಶಸ್ತ್ರ ಪಡೆಗಳು ಮತ್ತು ನಿವೃತ್ತ ಸೈನಿಕರ ವ್ಯವಹಾರಗಳ ಸಚಿವರಾದ ಶ್ರೀಮತಿ ಕ್ಯಾಥರೀನ್ ವೌಟ್ರಿನ್ ಅವರು ಫೆಬ್ರವರಿ 17, 2026 ರಂದು ಕರ್ನಾಟಕದ ಬೆಂಗಳೂರಿನಲ್ಲಿ 6ನೇ ಭಾರತ-ಫ್ರಾನ್ಸ್ ವಾರ್ಷಿಕ ರಕ್ಷಣಾ ಸಂವಾದದ ಸಹ-ಅಧ್ಯಕ್ಷತೆ ವಹಿಸಿದ್ದರು. ಉಭಯ ಸಚಿವರು ಉಪಕರಣಗಳ ಜಂಟಿ ಅಭಿವೃದ್ಧಿ ಮತ್ತು ಜಂಟಿ ಉತ್ಪಾದನೆಯ ಆದ್ಯತೆಯ ಕ್ಷೇತ್ರಗಳು ಸೇರಿದಂತೆ ಹಲವಾರು ದ್ವಿಪಕ್ಷೀಯ ಭದ್ರತೆ ಮತ್ತು ರಕ್ಷಣಾ ವಿಷಯಗಳ ಕುರಿತು ಚರ್ಚಿಸಿದರು. ಅವರು ನಿಕಟ ರಕ್ಷಣಾ ಪಾಲುದಾರಿಕೆಯ ಅಗತ್ಯವನ್ನು ಮತ್ತು ಎರಡೂ ದೇಶಗಳ ಕೈಗಾರಿಕೆಗಳನ್ನು, ವಿಶೇಷವಾಗಿ ಅತ್ಯಾಧುನಿಕ ತಂತ್ರಜ್ಞಾನ (niche technology) ಕ್ಷೇತ್ರದಲ್ಲಿ ಜೋಡಿಸುವ ಅಗತ್ಯವನ್ನು ಒತ್ತಿಹೇಳಿದರು.

ಉಭಯ ಸಚಿವರು ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ಸ್ತಂಭವಾಗಿ ಮಿಲಿಟರಿ-ಟು-ಮಿಲಿಟರಿ ಸಹಕಾರವನ್ನು ಹೆಚ್ಚಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಇತ್ತೀಚಿನ ಯುರೋಪ್ ಒಕ್ಕೂಟ ಭದ್ರತೆ ಮತ್ತು ರಕ್ಷಣಾ ಪಾಲುದಾರಿಕೆಯು ಸಾಮೂಹಿಕ ತೊಡಗಿಸಿಕೊಳ್ಳುವಿಕೆಯನ್ನು ಗಾಢವಾಗಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ರಕ್ಷಣಾ ಸಚಿವರು ತಿಳಿಸಿದರು. ಪ್ರಾದೇಶಿಕ ಸ್ಥಿರತೆಯನ್ನು ಬಲಪಡಿಸುವ, ಜಂಟಿ ಸಾಮರ್ಥ್ಯಗಳನ್ನು ಹೆಚ್ಚಿಸುವ ಮತ್ತು ದೀರ್ಘಕಾಲೀನ ಭಾರತ-ಫ್ರಾನ್ಸ್ ಕಾರ್ಯತಂತ್ರದ ಹೊಂದಾಣಿಕೆಯನ್ನು ಬಲಪಡಿಸುವ ಸ್ಪಷ್ಟ ಫಲಿತಾಂಶಗಳಿಗಾಗಿ ದ್ವಿಪಕ್ಷೀಯವಾಗಿ ಮತ್ತು ವಿಶಾಲವಾದ ಯುರೋಪಿಯನ್ ಸಂದರ್ಭದಲ್ಲಿ ಈ ಚೌಕಟ್ಟನ್ನು ಬಳಸಿಕೊಳ್ಳಲು ಉಭಯ ಸಚಿವರು ಒಪ್ಪಿಕೊಂಡರು.

ಭಾರತೀಯ ಸೇನೆ ಮತ್ತು ಫ್ರಾನ್ಸ್ ನ ಭೂಸೇನೆಗಳ ಸಂಸ್ಥೆಗಳಲ್ಲಿ ಪರಸ್ಪರ ಅಧಿಕಾರಿಗಳ ನಿಯೋಜನೆಯನ್ನು ಎರಡೂ ದೇಶಗಳು ಘೋಷಿಸಿದವು. 10 ವರ್ಷಗಳ ರಕ್ಷಣಾ ಸಹಕಾರ ಒಪ್ಪಂದದ ನವೀಕರಣಕ್ಕೆ ಭಾರತದ ಪರವಾಗಿ ರಕ್ಷಣಾ ಕಾರ್ಯದರ್ಶಿಗಳು ಮತ್ತು ಫ್ರಾನ್ಸ್ ಪರವಾಗಿ ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ಕಾರ್ಯತಂತ್ರದ ಉಪ ಮಹಾನಿರ್ದೇಶಕರು ಸಹಿ ಹಾಕಿದರು.
ಭಾರತದಲ್ಲಿ 'ಹ್ಯಾಮರ್' (Hammer) ಕ್ಷಿಪಣಿಗಳ ತಯಾರಿಕೆಗಾಗಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನ (BEL) ಸಿಎಂಡಿ ಮತ್ತು ಸಫ್ರಾನ್ ಎಲೆಕ್ಟ್ರಾನಿಕ್ಸ್ ಮತ್ತು ಡಿಫೆನ್ಸ್ ನ ಕಾರ್ಯನಿರ್ವಾಹಕ ಉಪಾಧ್ಯಕ್ಷರ ನಡುವೆ ಜಂಟಿ ಉದ್ಯಮದ ತಿಳುವಳಿಕಾ ಪತ್ರಕ್ಕೆ (MoU) ಸಹಿ ಹಾಕಲಾಯಿತು.

ಶ್ರೀಮತಿ ಕ್ಯಾಥರೀನ್ ವೌಟ್ರಿನ್ ಅವರು ಫ್ರಾನ್ಸ್ ನ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಕ್ಕಾಗಿ ಅಭಿನಂದಿಸಿದ ಮತ್ತು ಅವರ ಮೊದಲ ಭಾರತ ಭೇಟಿಯನ್ನು ಸ್ವಾಗತಿಸಿದ ಶ್ರೀ ರಾಜನಾಥ್ ಸಿಂಗ್ ಅವರು, ಯುರೋಪಿಯನ್ ಮತ್ತು ಜಾಗತಿಕ ಭದ್ರತೆಯ ನಿರ್ಣಾಯಕ ಕ್ಷಣದಲ್ಲಿ ಶ್ರೀಮತಿ ವೌಟ್ರಿನ್ ಅವರ ಅಧಿಕಾರಾವಧಿ ಬಂದಿದೆ ಎಂದು ತಿಳಿಸಿದರು. ಅಲ್ಲದೆ, ಕಾರ್ಯತಂತ್ರದ ಸ್ವಾಯತ್ತತೆ ಮತ್ತು ದೃಢವಾದ ಯುರೋಪಿಯನ್ ರಕ್ಷಣಾ ನಿಲುವಿಗೆ ಫ್ರಾನ್ಸ್ ನ ಅಚಲ ಬದ್ಧತೆಯನ್ನು ಭಾರತವು ಆಳವಾಗಿ ಪ್ರಶಂಸಿಸುತ್ತದೆ ಎಂದು ಅವರು ಹೇಳಿದರು. ಭಾರತೀಯ ಸೇನೆಯೊಂದಿಗೆ ನಡೆಯುವ 'ಶಕ್ತಿ' (Exercise Shakti) ಸಮರಾಭ್ಯಾಸವನ್ನು ದ್ವೈವಾರ್ಷಿಕದಿಂದ ವಾರ್ಷಿಕ ಕಾರ್ಯಕ್ರಮವಾಗಿ ಬದಲಾಯಿಸಿರುವುದನ್ನು ಫ್ರಾನ್ಸ್ ರಕ್ಷಣಾ ಸಚಿವರು ಶ್ಲಾಘಿಸಿದರು.

ಭಾರತವು ಹಿಂದೂ ಮಹಾಸಾಗರ ಪ್ರದೇಶದ ದೇಶಗಳಿಗೆ 'ಮೊದಲ ಪ್ರತಿಸ್ಪಂದಕ' (First Responder) ಮತ್ತು 'ನಿವ್ವಳ ಭದ್ರತಾ ಪೂರೈಕೆದಾರ' (Net Security Provider) ರಾಷ್ಟ್ರವಾಗಿದೆ ಎಂದು ರಕ್ಷಣಾ ಸಚಿವರು ಒತ್ತಿಹೇಳಿದರು. ಈ ದೇಶಗಳ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಯಾವುದೇ ಶತ್ರುಗಳನ್ನು ಹಿಮ್ಮೆಟ್ಟಿಸಲು ರಕ್ಷಣೆ, ಭದ್ರತೆ ಮತ್ತು ಕಡಲ ವಲಯಗಳಲ್ಲಿ ಭಾರತವು ಯಾವಾಗಲೂ ಅವರಿಗೆ ನೆರವು ನೀಡುತ್ತದೆ ಎಂದು ಅವರು ತಿಳಿಸಿದರು.
ಭಯೋತ್ಪಾದನೆಯ ವಿಷಯದ ಕುರಿತು ಮಾತನಾಡಿದ ಶ್ರೀ ರಾಜನಾಥ್ ಸಿಂಗ್, ಭಾರತದಲ್ಲಿ ಅಶಾಂತಿ ಮತ್ತು ಹಿಂಸಾಚಾರವನ್ನು ಸೃಷ್ಟಿಸಲು ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಪೋಷಿಸುವ ಮತ್ತು ಪ್ರೋತ್ಸಾಹಿಸುವ ದೀರ್ಘ ಇತಿಹಾಸವನ್ನು ಹೊಂದಿದೆ ಎಂದು ಹೇಳಿದರು. ಇದು ಈ ಪ್ರದೇಶದ ಶಾಂತಿಗೆ ಗಂಭೀರ ಸಂಕಟವನ್ನು ತಂದೊಡ್ಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ವಾರ್ಷಿಕ ರಕ್ಷಣಾ ಸಂವಾದವು ರಕ್ಷಣೆ ಮತ್ತು ಭದ್ರತಾ ಸಹಕಾರವನ್ನು ಪರಾಮರ್ಶಿಸಲು ಮತ್ತು ಮಾರ್ಗದರ್ಶನ ನೀಡಲು ನಡೆಸುವ ರಚನಾತ್ಮಕ ಸಚಿವ ಮಟ್ಟದ ದ್ವಿಪಕ್ಷೀಯ ಸಭೆಯಾಗಿದೆ. ಸಭೆಗೂ ಮುನ್ನ, ಫ್ರಾನ್ಸ್ ರಕ್ಷಣಾ ಸಚಿವರು HAL ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು.
*****
(ಪ್ರಕಟಣೆ ಐ.ಡಿ.: 2229377)
ವಿಸಿಟರ್ ಕೌಂಟರ್ : 20