ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವ ದೆಹಲಿಯಲ್ಲಿ ಸೇವಾ ತೀರ್ಥ ಮತ್ತು ಕರ್ತವ್ಯ ಭವನ -1 ಹಾಗು 2 ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ


ಭಾರತದ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಸೇವಾ ತೀರ್ಥ ಮತ್ತು ಕರ್ತವ್ಯ ಭವನವನ್ನು ನಿರ್ಮಿಸಲಾಗಿದೆ: ಪ್ರಧಾನಮಂತ್ರಿ

ನಾವು ವಿಕಸಿತ ಭಾರತದತ್ತ ಸಾಗುತ್ತಿರುವಾಗ, ವಸಾಹತುಶಾಹಿ ಮನಸ್ಥಿತಿಯ ಪ್ರತಿಯೊಂದು ಕುರುಹುಗಳನ್ನೂ ಭಾರತವು ತೆಗೆದುಹಾಕುವುದು ಅತ್ಯಗತ್ಯ: ಪ್ರಧಾನಮಂತ್ರಿ

ರೇಸ್ ಕೋರ್ಸ್ ರಸ್ತೆಯನ್ನು ಲೋಕ ಕಲ್ಯಾಣ್ ಮಾರ್ಗ ಎಂದು ಮರುನಾಮಕರಣ ಮಾಡಲಾಯಿತು, ಇದು ಕೇವಲ ಹೆಸರಿನ ಬದಲಾವಣೆಯಾಗಿರಲಿಲ್ಲ, ಅಧಿಕಾರದ ಮನಸ್ಥಿತಿಯನ್ನು ಸೇವಾ ಮನೋಭಾವವಾಗಿ ಪರಿವರ್ತಿಸುವ ಪ್ರಯತ್ನವಾಗಿತ್ತು: ಪ್ರಧಾನಮಂತ್ರಿ

ಹೊಸ ಪ್ರಧಾನಮಂತ್ರಿ ಕಚೇರಿಗೆ ಸೇವಾ ತೀರ್ಥ ಎಂದು ಹೆಸರಿಡಲಾಗಿದೆ; ಸೇವಾ ಅಥವಾ ಸೇವಾ ಮನೋಭಾವವು ಭಾರತದ ಆತ್ಮ, ಅದು ಭಾರತದ ಗುರುತು: ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 13 FEB 2026 7:32PM by PIB Bengaluru

ನವ ದೆಹಲಿಯಲ್ಲಿ ಇಂದು ನಡೆದ ಸೇವಾ ತೀರ್ಥ ಮತ್ತು ಕರ್ತವ್ಯ ಭವನ -1 ಮತ್ತು 2ರ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಇಂದು ಎಲ್ಲರೂ ಹೊಸ ಇತಿಹಾಸ ನಿರ್ಮಾಣಕ್ಕೆ ಸಾಕ್ಷಿಯಾಗುತ್ತಿದ್ದಾರೆ ಎಂದು ಹೇಳಿದರು. 2082 ರ ವಿಕ್ರಮ ಸಂವತ್ (ಸಂವತ್ಸರ), ಫಾಲ್ಗುಣ ಕೃಷ್ಣ ಪಕ್ಷದ, ಮಾಘ 24 ರಂದು ವಿಜಯ ಏಕಾದಶಿಯ ಪವಿತ್ರ ಸಂದರ್ಭ ಮತ್ತು 1947ರ ಶಕ ಸಂವತ್, ಪ್ರಸ್ತುತ ಕ್ಯಾಲೆಂಡರ್‌ನಲ್ಲಿ ಫೆಬ್ರವರಿ 13, 2026, ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಹೊಸ ಆರಂಭಕ್ಕೆ ಸಾಕ್ಷಿಯಾಗಿದೆ ಎಂದು ಅವರು ಎತ್ತಿ ತೋರಿಸಿದರು. ಈ ದಿನದಂದು ತೆಗೆದುಕೊಂಡ ಸಂಕಲ್ಪವು ಸದಾ ವಿಜಯಕ್ಕೆ ಕಾರಣವಾಗುವುದರಿಂದ, ಶಾಸ್ತ್ರಗಳಲ್ಲಿ, ವಿಜಯ ಏಕಾದಶಿಯು ಹೆಚ್ಚಿನ ಮಹತ್ವವನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು. ಇಂದು, ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪದೊಂದಿಗೆ, ಎಲ್ಲರೂ ಸೇವಾ ತೀರ್ಥ ಮತ್ತು ಕರ್ತವ್ಯ ಭವನವನ್ನು ಪ್ರವೇಶಿಸುತ್ತಿದ್ದಾರೆ ಎಂದು ಶ್ರೀ ಮೋದಿ ಹೇಳಿದರು. ಈ ಗುರಿಯಲ್ಲಿ ವಿಜಯಕ್ಕಾಗಿ ದೈವಿಕ ಆಶೀರ್ವಾದಗಳು ಅವರೊಂದಿಗಿವೆ ಎಂದು ಅವರು ಒತ್ತಿ ಹೇಳಿದರು. ಸೇವಾ ತೀರ್ಥ ಮತ್ತು ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ ಪ್ರಧಾನಮಂತ್ರಿ  ಕಚೇರಿ ತಂಡ, ಸಂಪುಟ ಸಚಿವಾಲಯ ಮತ್ತು ವಿವಿಧ ಇಲಾಖೆಗಳ ನೌಕರರು ಸೇರಿದಂತೆ ಎಲ್ಲರಿಗೂ ಅವರು ಅಭಿನಂದನೆಗಳನ್ನು ಸಲ್ಲಿಸಿದರು. ಅವುಗಳ ನಿರ್ಮಾಣದಲ್ಲಿ ಭಾಗಿಯಾಗಿರುವ ಎಲ್ಲಾ ಎಂಜಿನಿಯರ್‌ಗಳು ಮತ್ತು ಕಾರ್ಮಿಕ ಸಹೋದ್ಯೋಗಿಗಳಿಗೆ ಅವರು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.

ಸ್ವಾತಂತ್ರ್ಯದ ನಂತರ, ಸೌತ್ ಬ್ಲಾಕ್ ಮತ್ತು ನಾರ್ತ್ ಬ್ಲಾಕ್‌ನಂತಹ ಕಟ್ಟಡಗಳಿಂದ ರಾಷ್ಟ್ರಕ್ಕಾಗಿ ಅನೇಕ ಪ್ರಮುಖ ನಿರ್ಧಾರಗಳು ಮತ್ತು ನೀತಿಗಳನ್ನು ಕೈಗೊಳ್ಳಲಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಈ ರಚನೆಗಳನ್ನು ಬ್ರಿಟಿಷ್ ಸಾಮ್ರಾಜ್ಯದ ಸಂಕೇತಗಳಾಗಿ ನಿರ್ಮಿಸಲಾಗಿದ್ದು, ಭಾರತವನ್ನು ಶತಮಾನಗಳ ಕಾಲ ಗುಲಾಮಗಿರಿಯಲ್ಲಿ ಬಂಧಿಸುವ ಉದ್ದೇಶವನ್ನು ಹೊಂದಿದ್ದವು ಎಂದು ಹೇಳಿದರು.

ಕೋಲ್ಕತ್ತಾ ಒಂದು ಕಾಲದಲ್ಲಿ ದೇಶದ ರಾಜಧಾನಿಯಾಗಿತ್ತು, ಆದರೆ 1905 ರ ಬಂಗಾಳ ವಿಭಜನೆಯ ಸಮಯದಲ್ಲಿ, ಅದು ಬ್ರಿಟಿಷ್ ವಿರೋಧಿ ಚಳುವಳಿಗಳ ಬಲವಾದ ಕೇಂದ್ರವಾಗಿತ್ತು ಎಂದು ಶ್ರೀ ಮೋದಿ ಸ್ಮರಿಸಿದರು. ಆದ್ದರಿಂದ, 1911ರಲ್ಲಿ, ಬ್ರಿಟಿಷರು ರಾಜಧಾನಿಯನ್ನು ಕೋಲ್ಕತ್ತಾದಿಂದ ದಿಲ್ಲಿಗೆ ಸ್ಥಳಾಂತರಿಸಿದರು. ನಂತರ, ವಸಾಹತುಶಾಹಿ ಆಳ್ವಿಕೆಯ ಅಗತ್ಯತೆಗಳು ಮತ್ತು ಮನಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನಾರ್ತ್ ಬ್ಲಾಕ್ ಮತ್ತು ಸೌತ್ ಬ್ಲಾಕ್ ನಿರ್ಮಾಣ ಪ್ರಾರಂಭವಾಯಿತು ಎಂಬುದರತ್ತ ಅವರು ಗಮನ ಸೆಳೆದರು. ರೈಸಿನಾ ಬೆಟ್ಟಗಳ ಮೇಲಿನ ಕಟ್ಟಡಗಳನ್ನು ಉದ್ಘಾಟಿಸಿದಾಗ, ಆಗಿನ ವೈಸರಾಯ್ ಹೊಸ ರಚನೆಗಳನ್ನು ಬ್ರಿಟಿಷ್ ರಾಜವಂಶದ ಇಚ್ಛೆಗೆ ಅನುಗುಣವಾಗಿ ನಿರ್ಮಿಸಲಾಗಿದೆ ಎಂದು ಹೇಳಿದ್ದರು, ಅಂದರೆ ಅವು ಗುಲಾಮಗಿರಿಗೆ ಒಳಗಾದ ಭಾರತದ ಮಣ್ಣಿನಲ್ಲಿ ಬ್ರಿಟನ್ ರಾಜವಂಶದ ಚಿಂತನೆಯನ್ನು ಹೇರಲು ಒಂದು ಮಾಧ್ಯಮವಾಗಿದ್ದವು ಎಂದು ಪ್ರಧಾನಮಂತ್ರಿ  ಹೇಳಿದರು. ಈ ಕಟ್ಟಡಗಳು ಎಲ್ಲಕ್ಕಿಂತ ಎತ್ತರವಾಗಿ ನಿಲ್ಲುವಂತೆ, ಯಾವುದೂ ಇದಕ್ಕೆ ಸಮಾನವಾಗಿರಲು ಅವಕಾಶ ನೀಡದಂತೆ ರೈಸಿನಾ ಬೆಟ್ಟಗಳನ್ನು ಆಯ್ಕೆ ಮಾಡಲಾಗಿತ್ತು ಎಂದು ಅವರು ಒತ್ತಿ ಹೇಳಿದರು. ಸೇವಾ ತೀರ್ಥವನ್ನು ಆ ಕಟ್ಟಡಗಳಿಗೆ ಹೋಲಿಸಿದ ಅವರು ಈ ಕಟ್ಟಡ ಬೆಟ್ಟದ ಮೇಲೆ ಇಲ್ಲ ಬದಲಾಗಿ ನೆಲದ ಜೊತೆ ಹೆಚ್ಚು ಸಂಪರ್ಕ ಹೊಂದಿದೆ ಎಂದು ಹೊಸ ಸೇವಾ ತೀರ್ಥ ಸಂಕೀರ್ಣವನ್ನು ಶ್ರೀ ಮೋದಿ ಬಣ್ಣಿಸಿದರು. ವಸಾಹತುಶಾಹಿ ಮನಸ್ಥಿತಿಯನ್ನು ಕಾರ್ಯಗತಗೊಳಿಸಲು ಸೌತ್ ಬ್ಲಾಕ್ ಮತ್ತು ನಾರ್ತ್ ಬ್ಲಾಕ್ ಅನ್ನು ನಿರ್ಮಿಸಲಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ , ಇಂದು ಸೇವಾ ತೀರ್ಥ ಮತ್ತು ಕರ್ತವ್ಯ ಭವನವನ್ನು ಭಾರತದ ಜನರ ಆಕಾಂಕ್ಷೆಗಳನ್ನು ಈಡೇರಿಸಲು ನಿರ್ಮಿಸಲಾಗಿದೆ ಎಂದು ಹೇಳಿದರು. ಇಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಯಾವುದೇ ರಾಜನ ಚಿಂತನೆಯನ್ನು ಪ್ರತಿಬಿಂಬಿಸುವುದಿಲ್ಲ, ಬದಲಿಗೆ 140 ಕೋಟಿ ನಾಗರಿಕರ ನಿರೀಕ್ಷೆಗಳನ್ನು ಮುನ್ನಡೆಸಲು ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಈ ಮನೋಭಾವದಿಂದ, ಪ್ರಧಾನ ಮಂತ್ರಿ ಅವರು ಸೇವಾ ತೀರ್ಥ ಮತ್ತು ಕರ್ತವ್ಯ ಭವನವನ್ನು ಭಾರತದ ಜನರಿಗೆ ಅರ್ಪಿಸಿದರು.

21ನೇ ಶತಮಾನದ ಮೊದಲ ಕಾಲು ಭಾಗವು ಈಗ ಪೂರ್ಣಗೊಂಡಿದೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವು ನೀತಿಗಳು ಹಾಗು ಯೋಜನೆಗಳಲ್ಲಿ ಮಾತ್ರವಲ್ಲದೆ ಕೆಲಸದ ಸ್ಥಳಗಳು ಮತ್ತು ಕಟ್ಟಡಗಳಲ್ಲಿಯೂ ಪ್ರತಿಫಲಿಸುವುದು ಅತ್ಯಗತ್ಯ ಎಂದು ಪ್ರಧಾನಮಂತ್ರಿ ಹೇಳಿದರು. ರಾಷ್ಟ್ರವನ್ನು ಆಳುವ ಸ್ಥಳಗಳು ಪರಿಣಾಮಕಾರಿ ಮತ್ತು ಸ್ಪೂರ್ತಿದಾಯಕ, ಪ್ರಭಾವಶಾಲಿ ಮತ್ತು ಪ್ರೇರಕವಾಗಿರಬೇಕು ಎಂದು ಅವರು ಒತ್ತಿ ಹೇಳಿದರು. ಹೊಸ ತಂತ್ರಜ್ಞಾನಗಳು ವೇಗವಾಗಿ ಹೊರಹೊಮ್ಮುತ್ತಿರುವುದರಿಂದ, ಹಳೆಯ ಕಟ್ಟಡಗಳು ಸೌಲಭ್ಯಗಳನ್ನು ವಿಸ್ತರಿಸಲು ಮತ್ತು ಹೊಸ ಸಾಧನಗಳನ್ನು ಅಳವಡಿಸಿಕೊಳ್ಳಲು ಅಸಮರ್ಪಕವಾಗಿವೆ ಎಂದು ಅವರು ಉಲ್ಲೇಖಿಸಿದರು. ಸೌತ್ ಬ್ಲಾಕ್ ಮತ್ತು ನಾರ್ತ್ ಬ್ಲಾಕ್ ಸ್ಥಳಾವಕಾಶದ ಕೊರತೆ ಎದುರಿಸುತ್ತಿವೆ ಮತ್ತು ಸೀಮಿತ ಸೌಲಭ್ಯಗಳನ್ನು ಹೊಂದಿವೆ ಹಾಗು ಸುಮಾರು ನೂರು ವರ್ಷಗಳಷ್ಟು ಹಳೆಯದಾಗಿರುವುದರಿಂದ, ಅವು ಹಲವಾರು ಇತರ ಸಮಸ್ಯೆ/ಸವಾಲುಗಳೊಂದಿಗೆ ಒಳಗಿನಿಂದ ಹದಗೆಡುತ್ತಿವೆ ಎಂದು ಶ್ರೀ ಮೋದಿ ಗಮನಸೆಳೆದರು. ಈ ಸವಾಲುಗಳ ಬಗ್ಗೆ ರಾಷ್ಟ್ರಕ್ಕೆ ನಿರಂತರವಾಗಿ ತಿಳಿಸುವುದು ಮುಖ್ಯ ಎಂದು ಪ್ರಧಾನಮಂತ್ರಿ  ಹೇಳಿದರು, ಸ್ವಾತಂತ್ರ್ಯದ ದಶಕಗಳ ನಂತರವೂ, ಭಾರತ ಸರ್ಕಾರದ ಹಲವಾರು ಸಚಿವಾಲಯಗಳು ದೆಹಲಿಯ 50ಕ್ಕೂ ಹೆಚ್ಚು ವಿಭಿನ್ನ ಸ್ಥಳಗಳಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು. ಈ ಸಚಿವಾಲಯದ ಕಟ್ಟಡಗಳ ಬಾಡಿಗೆಗೆ ಪ್ರತಿ ವರ್ಷ ₹1,500 ಕೋಟಿ ಖರ್ಚು ಮಾಡಲಾಗುತ್ತಿದೆ ಮತ್ತು ಕಚೇರಿಗಳ ನಡುವೆ ಚಲಿಸುವ 8,000 ರಿಂದ 10,000 ಉದ್ಯೋಗಿಗಳಿಗೆ ದೈನಂದಿನ ಲಾಜಿಸ್ಟಿಕ್ಸ್ ವೆಚ್ಚವನ್ನು ಭರಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಸೇವಾ ತೀರ್ಥ ಮತ್ತು ಕರ್ತವ್ಯ ಭವನದ ನಿರ್ಮಾಣದಿಂದ ವೆಚ್ಚಗಳು ಕಡಿಮೆಯಾಗುತ್ತವೆ ಮತ್ತು ನೌಕರರ ಸಮಯ ಉಳಿತಾಯವಾಗುತ್ತದೆ ಎಂದು ಅವರು ಒತ್ತಿ ಹೇಳಿದರು.

ಬದಲಾವಣೆಯ ನಡುವೆಯೂ, ಹಳೆಯ ಕಟ್ಟಡಗಳಲ್ಲಿ ಕಳೆದ ವರ್ಷಗಳ ನೆನಪುಗಳು ಉಳಿಯುತ್ತವೆ ಎಂಬುದನ್ನು ಶ್ರೀ ಮೋದಿ ಒಪ್ಪಿಕೊಂಡರು, ಏಕೆಂದರೆ ಅಲ್ಲಿ ರಾಷ್ಟ್ರಕ್ಕೆ ಹೊಸ ನಿರ್ದೇಶನ ನೀಡಿ ಸುಧಾರಣೆಗಳನ್ನು ಆರಂಭಿಸುವ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಆ ಆವರಣಗಳು ಭಾರತದ ಇತಿಹಾಸದ ಅಮರ ಭಾಗವಾಗಿವೆ ಎಂದೂ ಅವರು ದೃಢವಾಗಿ ನುಡಿದರು. ಆದ್ದರಿಂದ, ಹಳೆಯ ಕಟ್ಟಡವನ್ನು ರಾಷ್ಟ್ರಕ್ಕೆ ವಸ್ತುಸಂಗ್ರಹಾಲಯವಾಗಿ ಅರ್ಪಿಸುವ ನಿರ್ಧಾರವನ್ನು ಪ್ರಧಾನಮಂತ್ರಿ  ಘೋಷಿಸಿದರು, ಇದನ್ನು ಯುಗೇ ಯುಗೀನ್ ಭಾರತ್ ವಸ್ತುಸಂಗ್ರಹಾಲಯದ ಭಾಗವನ್ನಾಗಿ ಮಾಡಲಾಗುವುದೆಂದರು. ಈ ಕಟ್ಟಡವು ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಯುವಜನರು ಭೇಟಿ ನೀಡಿದಾಗ, ಐತಿಹಾಸಿಕ ಪರಂಪರೆ ಅವರಿಗೆ ಮಾರ್ಗದರ್ಶನ ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು.

ಅಭಿವೃದ್ಧಿ ಹೊಂದಿದ ಭಾರತದ ಪ್ರಯಾಣದಲ್ಲಿ, ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತರಾಗಿ ಮುಂದುವರಿಯುವುದು ಅತ್ಯಗತ್ಯ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ದುರದೃಷ್ಟವಶಾತ್, ಸ್ವಾತಂತ್ರ್ಯದ ನಂತರವೂ ವಸಾಹತುಶಾಹಿ ಆಳ್ವಿಕೆಯ ಸಂಕೇತಗಳನ್ನು ಮುಂದುವರಿಸಲಾಗಿದೆ ಎಂದು ಅವರು ಹೇಳಿದರು. ಒಂದು ಕಾಲದಲ್ಲಿ ಪ್ರಧಾನಮಂತ್ರಿಯವರ ನಿವಾಸವನ್ನು ರೇಸ್ ಕೋರ್ಸ್ ರಸ್ತೆ ಎಂದು ಕರೆಯಲಾಗುತ್ತಿತ್ತು, ಉಪ ರಾಷ್ಟ್ರಪತಿಗಳಿಗೆ ಯಾವುದೇ ನಿಯೋಜಿತ ನಿವಾಸವಿರಲಿಲ್ಲ ಮತ್ತು ರಾಷ್ಟ್ರಪತಿ ಭವನಕ್ಕೆ ಹೋಗುವ ರಸ್ತೆಯನ್ನು ಪ್ರಜಾಪ್ರಭುತ್ವದಲ್ಲಿ ರಾಜಪಥ ಎಂದು ಕರೆಯಲಾಗುತ್ತಿತ್ತು ಎಂಬ ಅಂಶಗಳತ್ತ ಅವರು ಗಮನಸೆಳೆದರು. ಸ್ವತಂತ್ರ ಭಾರತದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಸೈನಿಕರಿಗೆ ಅಥವಾ ತಮ್ಮ ಪ್ರಾಣವನ್ನೇ ಅರ್ಪಿಸಿದ ಪೊಲೀಸ್ ಸಿಬ್ಬಂದಿಗೆ ಯಾವುದೇ ಸ್ಮಾರಕವಿರಲಿಲ್ಲ ಎಂಬುದನ್ನೂ ಅವರು ಉಲ್ಲೇಖಿಸಿದರು. ಸ್ವತಂತ್ರ ರಾಷ್ಟ್ರದ ರಾಜಧಾನಿ ವಸಾಹತುಶಾಹಿ ಮನಸ್ಥಿತಿಯಲ್ಲಿ ಆಳವಾಗಿ ಸಿಲುಕಿಕೊಂಡಿದೆ, ದಿಲ್ಲಿಯ ಕಟ್ಟಡಗಳು, ಸಾರ್ವಜನಿಕ ಸ್ಥಳಗಳು ಮತ್ತು ಐತಿಹಾಸಿಕ ತಾಣಗಳು ಅಂತಹ ಚಿಹ್ನೆಗಳಿಂದ ತುಂಬಿವೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಕಾಲ ಎಂದಿಗೂ ಹಾಗೆಯೇ ಉಳಿಯುವುದಿಲ್ಲ ಎಂದು ಪ್ರಧಾನಮಂತ್ರಿ  ಹೇಳಿದರು ಮತ್ತು 2014 ರಲ್ಲಿ ದೇಶವು ವಸಾಹತುಶಾಹಿ ಮನಸ್ಥಿತಿ ಇನ್ನು ಮುಂದೆ ಮುಂದುವರಿಯುವುದಿಲ್ಲ ಎಂದು ನಿರ್ಧರಿಸಿತು. ಈ ಮನಸ್ಥಿತಿಯನ್ನು ಬದಲಾಯಿಸಲು ಅಭಿಯಾನವನ್ನು ಪ್ರಾರಂಭಿಸಲಾಯಿತು, ಇದು ಹುತಾತ್ಮರ ಗೌರವಾರ್ಥವಾಗಿ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ರಚಿಸಲು ಮತ್ತು ಪೊಲೀಸ್ ಶೌರ್ಯವನ್ನು ಗುರುತಿಸಲು ಪೊಲೀಸ್ ಸ್ಮಾರಕವನ್ನು ನಿರ್ಮಿಸಲು ಕಾರಣವಾಯಿತು ಎಂದು ಅವರು ಹೇಳಿದರು. ರೇಸ್ ಕೋರ್ಸ್ ರಸ್ತೆಯನ್ನು ಲೋಕ ಕಲ್ಯಾಣ್ ಮಾರ್ಗ ಎಂದು ಮರುನಾಮಕರಣ ಮಾಡಲಾಯಿತು ಎಂದು ಅವರು ನೆನಪಿಸಿಕೊಂಡರು, ಇದು ಕೇವಲ ಹೆಸರಿನ ಬದಲಾವಣೆಯಾಗಿರಲಿಲ್ಲ, ಬದಲಾಗಿ ಅಧಿಕಾರದ ಮನೋಭಾವವನ್ನು ಸೇವಾ ಮನೋಭಾವವಾಗಿ ಪರಿವರ್ತಿಸುವ ಪ್ರಯತ್ನವಾಗಿತ್ತು ಎಂದವರು ಹೇಳಿದರು.

ನಿರ್ಧಾರಗಳ ಹಿಂದೆ ಭಾರತದ ವರ್ತಮಾನ, ಭೂತ ಮತ್ತು ಭವಿಷ್ಯವನ್ನು ರಾಷ್ಟ್ರೀಯ ಹೆಮ್ಮೆಯೊಂದಿಗೆ ಸಂಪರ್ಕಿಸುವ ಆಳವಾದ ಭಾವನೆ ಮತ್ತು ದೃಷ್ಟಿಕೋನವಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಒಂದು ಕಾಲದಲ್ಲಿ ರಾಜಪಥ ಎಂದು ಕರೆಯಲಾಗುತ್ತಿದ್ದ ಸ್ಥಳದಲ್ಲಿ ಸಾಮಾನ್ಯ ನಾಗರಿಕರಿಗೆ ಸಾಕಷ್ಟು ಸೌಲಭ್ಯಗಳು ಮತ್ತು ವ್ಯವಸ್ಥೆಗಳ ಕೊರತೆ ಇತ್ತು ಮತ್ತು ಅದನ್ನು ಕರ್ತವ್ಯ ಪಥ ಎಂದು ಮರುಅಭಿವೃದ್ಧಿಪಡಿಸಲಾಯಿತು, ಇದು ಇಂದು ಕುಟುಂಬಗಳು, ಮಕ್ಕಳು ಮತ್ತು ನಾಗರಿಕರಿಗೆ ಒಂದು ರೋಮಾಂಚಕ ಸಾರ್ವಜನಿಕ ಸ್ಥಳವಾಗಿದೆ ಎಂದು ಅವರು ವಿವರಿಸಿದರು. ಈ ಸಂಕೀರ್ಣದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭವ್ಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ, ಇದು ರಾಜಧಾನಿ ಈಗ ಮಹಾನ್ ವೀರರನ್ನು ಗೌರವಿಸುತ್ತದೆ ಮತ್ತು ಹೊಸ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂಬುದನ್ನು ಸಾರುತ್ತದೆ ಎಂದರು. ರಾಷ್ಟ್ರಪತಿ ಭವನದ ಸಂಕೀರ್ಣದಲ್ಲಿಯೂ ಬದಲಾವಣೆಗಳನ್ನು ಮಾಡಲಾಗಿದೆ, ಮೊಘಲ್ ಉದ್ಯಾನವನ್ನು ಅಮೃತ್ ಉದ್ಯಾನ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಶ್ರೀ ಮೋದಿ ಹೇಳಿದರು. ಹೊಸ ಸಂಸತ್ತು ಕಟ್ಟಡವನ್ನು ನಿರ್ಮಿಸಿದಾಗ, ಹಳೆಯ ಕಟ್ಟಡವನ್ನು ಮರೆತುಬಿಟ್ಟಿಲ್ಲ, ಬದಲಿಗೆ 'ಸಂವಿಧಾನ್ ಸದನ' ಎಂದು ಹೊಸ ಗುರುತನ್ನು ನೀಡಲಾಯಿತು ಎಂದು ಅವರು ಹೇಳಿದರು. ಸಚಿವಾಲಯಗಳನ್ನು ಒಂದು ಸಂಕೀರ್ಣದಲ್ಲಿ ಒಟ್ಟುಗೂಡಿಸಿದಾಗ, ಕಟ್ಟಡಗಳನ್ನು 'ಕರ್ತವ್ಯ ಭವನ' ಎಂದು ಹೆಸರಿಸಲಾಯಿತು ಎಂಬುದರತ್ತ ಅವರು ಗಮನ ಸೆಳೆದರು. ಮರುನಾಮಕರಣದ ಉಪಕ್ರಮಗಳು ಕೇವಲ ಪದಗಳ ಬದಲಾವಣೆಗಳಲ್ಲ, ಬದಲು ಅವು ಸ್ಥಿರವಾದ ಸೈದ್ಧಾಂತಿಕ ಎಳೆಯನ್ನು ಪ್ರತಿಬಿಂಬಿಸುತ್ತವೆ - ವಸಾಹತುಶಾಹಿ ಮುದ್ರೆಗಳಿಂದ ಮುಕ್ತವಾದ ತನ್ನದೇ ಆದ ಗುರುತನ್ನು ಹೊಂದಿರುವ ಸ್ವತಂತ್ರ ಭಾರತವನ್ನು ಪ್ರತಿನಿಧಿಸುತ್ತವೆ ಎಂದವರು ಹೇಳಿದರು. .

ಹೊಸ ಪ್ರಧಾನ ಮಂತ್ರಿ ಕಚೇರಿಗೆ ಸೇವಾ ತೀರ್ಥ ಎಂದು ಹೆಸರಿಡಲಾಗಿದೆ ಎಂದು ಪ್ರಧಾನಮಂತ್ರಿ  ಹೇಳಿದರು, ಇದು ಸೇವಾ ಮನೋಭಾವವು ಭಾರತದ ಆತ್ಮ ಮತ್ತು ಅದರ ನಿಜವಾದ ಗುರುತಾಗಿದೆ ಎಂಬುದನ್ನು ಒತ್ತಿಹೇಳುತ್ತದೆ. ಶಿವನ ಜ್ಞಾನದೊಂದಿಗೆ  ಮಾನವೀಯತೆಗೆ ಸೇವೆ ಸಲ್ಲಿಸುವುದು ಕೇವಲ ಆಧ್ಯಾತ್ಮಿಕ ಚಿಂತನೆಯಲ್ಲ, ರಾಷ್ಟ್ರ ನಿರ್ಮಾಣದ ತತ್ವಶಾಸ್ತ್ರ ಎಂದು ಹೇಳಿದ ಶ್ರೀ ರಾಮಕೃಷ್ಣ ಪರಮಹಂಸ ಜೀ ಅವರ ಮಾತುಗಳನ್ನು ಅವರು ನೆನಪಿಸಿಕೊಂಡರು. ಆಡಳಿತ ಎಂದರೆ ಸೇವೆ ಮತ್ತು ಜವಾಬ್ದಾರಿ ಎಂದರೆ ಸಮರ್ಪಣೆ ಎಂದು ಕಟ್ಟಡವು ಎಲ್ಲರಿಗೂ ನಿರಂತರವಾಗಿ ನೆನಪಿಸುತ್ತದೆ ಎಂದು ಅವರು ಒತ್ತಿ ಹೇಳಿದರು. "ಸೇವಾ ಪರಮೋ ಧರ್ಮಃ" ಅಂದರೆ ಸೇವೆಯೇ ಅತ್ಯುನ್ನತ ಕರ್ತವ್ಯ ಎಂಬ ಧರ್ಮಗ್ರಂಥದ ಬೋಧನೆಯನ್ನು ಎತ್ತಿ ತೋರಿಸಿದ ಶ್ರೀ ಮೋದಿ, ಇದು ಪ್ರಧಾನ ಮಂತ್ರಿ ಕಚೇರಿ ಮತ್ತು ಸರ್ಕಾರದ ದೃಷ್ಟಿಕೋನ ಎಂದು ದೃಢಪಡಿಸಿದರು. ಸೇವಾ ತೀರ್ಥವು ಕೇವಲ ಹೆಸರಲ್ಲ, ಬದಲು ಸಂಕಲ್ಪ - ನಾಗರಿಕರಿಗೆ ಸೇವೆಯ ಮೂಲಕ ಪವಿತ್ರ ಸ್ಥಳ, ಸೇವೆಯ ಪ್ರತಿಜ್ಞೆಯನ್ನು ಈಡೇರಿಸುವ ತಾಣ ಎಂದು ಅವರು ಹೇಳಿದರು. ತೀರ್ಥದ ಅರ್ಥವನ್ನು ವಿಮೋಚನೆಗೊಳಿಸುವ ಮತ್ತು ಗುರಿಗಳನ್ನು ಸಾಧಿಸಲು ಸಹಾಯ ಮಾಡುವ ಸಾಮರ್ಥ್ಯ ಹೊಂದಿರುವಂತಹದ್ದು ಎಂದು ಅವರು ವಿವರಿಸಿದರು, ಮತ್ತು ಇಂದು ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದು, ಸ್ವಾವಲಂಬನೆಯನ್ನು ಸಾಧಿಸುವುದು, ಲಕ್ಷಾಂತರ ಜನರನ್ನು ಬಡತನದಿಂದ ಮುಕ್ತಗೊಳಿಸುವುದು ಹಾಗು ದೇಶವನ್ನು ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತಗೊಳಿಸುವ ಗುರಿಗಳನ್ನು ಹೊಂದಿದೆ, ಇವೆಲ್ಲವನ್ನೂ ಸೇವೆಯ ಶಕ್ತಿಯ ಮೂಲಕ ಸಾಧಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಭಾರತವು ಸುಧಾರಣಾ ಎಕ್ಸ್‌ಪ್ರೆಸ್‌ನಲ್ಲಿ ಸಾಗುತ್ತಿರುವಾಗ, ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿರುವಾಗ, ವ್ಯಾಪಾರ ಒಪ್ಪಂದಗಳ ಮೂಲಕ ಹೊಸ ಬಾಗಿಲುಗಳನ್ನು ತೆರೆಯುತ್ತಿರುವಾಗ ಮತ್ತು ಪೂರ್ಣತ್ವದ ಗುರಿಗಳತ್ತ ವೇಗವಾಗಿ ಸಾಗುತ್ತಿರುವಾಗ, ಸೇವಾ ತೀರ್ಥ ಮತ್ತು ಕರ್ತವ್ಯ ಭವನಗಳಲ್ಲಿನ ಕೆಲಸದ ಹೊಸ ವೇಗ ಮತ್ತು ನವೀಕೃತ ವಿಶ್ವಾಸವು ರಾಷ್ಟ್ರೀಯ ಗುರಿಗಳನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಮಂತ್ರಿ  ಒತ್ತಿ ಹೇಳಿದರು.

ಪ್ರತಿಯೊಂದು ಶುಭ ಕಾರ್ಯಕ್ಕೂ ಮೊದಲು ಎಲ್ಲಾ ದಿಕ್ಕುಗಳಿಂದ ಹರಿಯುವ ಉದಾತ್ತ ಆಲೋಚನೆಗಳಿಂದ ಮಾರ್ಗದರ್ಶಿಸಲ್ಪಟ್ಟ ಕಲ್ಯಾಣದ ಸಂಕಲ್ಪ ಇರಬೇಕು ಎಂಬುದನ್ನು ಭಾರತೀಯ ಸಂಸ್ಕೃತಿ ಕಲಿಸುತ್ತದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಭಾರತದ ಮಹಾನ್ ಪ್ರಜಾಪ್ರಭುತ್ವದಲ್ಲಿ, ಜನರ ಆಲೋಚನೆಗಳು ನಿಜವಾದ ಶಕ್ತಿ, ಅವರ ಕನಸುಗಳು ನಿಜವಾದ ಬಂಡವಾಳ, ಅವರ ನಿರೀಕ್ಷೆಗಳು ಆದ್ಯತೆ ಮತ್ತು ಅವರ ಆಕಾಂಕ್ಷೆಗಳು ಮಾರ್ಗದರ್ಶಕ ಬೆಳಕು ಎಂದೂ ಬಣ್ಣಿಸಿದರು. ಈ ಭಾವನೆಗಳು ಮತ್ತು ಕಟ್ಟಡದ ನಡುವೆ ಯಾವುದೇ ಗೋಡೆ ಮತ್ತು ಅಂತರ ಇರಬಾರದು ಎಂದು ಅವರು ಹೇಳಿದರು, ಏಕೆಂದರೆ ಜನರ ಕನಸುಗಳನ್ನು ಅರ್ಥಮಾಡಿಕೊಂಡಾಗ ಮಾತ್ರ ನೀತಿಗಳು ಜೀವಂತಿಕೆ ಪಡೆಯುತ್ತವೆ ಮತ್ತು ಅವರ ಆಕಾಂಕ್ಷೆಗಳನ್ನು ಅನುಭವಿಸಿದಾಗ ಮಾತ್ರ ನಿರ್ಧಾರಗಳು ಪರಿಣಾಮಕಾರಿಯಾಗಿರುತ್ತವೆ ಎಂದರು.

ಕಳೆದ ಹನ್ನೊಂದು ವರ್ಷಗಳಲ್ಲಿ, ನಿರ್ಧಾರ ತೆಗೆದುಕೊಳ್ಳುವ ಕೇಂದ್ರಬಿಂದುವಿನಲ್ಲಿ ನಾಗರಿಕರು ಇದ್ದಾರೆ, ಆ ಮೂಲಕ ಹೊಸ ಆಡಳಿತ ಮಾದರಿಯೊಂದು ಹೊರಹೊಮ್ಮಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ನಾಗರಿಕ ದೇವೋ ಭವ" ಎಂಬುದು ಕೇವಲ ಒಂದು ಪದಗುಚ್ಛವಲ್ಲ, ಬದಲಾಗಿ ಕೆಲಸದ ಸಂಸ್ಕೃತಿಯಾಗಿದ್ದು, ಅಧಿಕಾರಿಗಳು ಹೊಸ ಕಟ್ಟಡಗಳನ್ನು ಪ್ರವೇಶಿಸುವಾಗ ಇದನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ಸೇವಾ ತೀರ್ಥದಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರ, ಸ್ಥಳಾಂತರಗೊಂಡ ಪ್ರತಿಯೊಂದು ಕಡತ ಮತ್ತು ಕಳೆದ ಪ್ರತಿ ಕ್ಷಣವನ್ನು 140 ಕೋಟಿ ನಾಗರಿಕರ ಜೀವನವನ್ನು ಸುಧಾರಿಸಲು ಮೀಸಲಿಡಬೇಕು ಎಂದು ಶ್ರೀ ಮೋದಿ ಘೋಷಿಸಿದರು. ಪ್ರತಿಯೊಬ್ಬ ಅಧಿಕಾರಿ, ಉದ್ಯೋಗಿ ಮತ್ತು ಕರ್ಮಯೋಗಿ ಕಟ್ಟಡಕ್ಕೆ ಕಾಲಿಡುವಾಗಲೆಲ್ಲಾ ದಿನ ತಮ್ಮ ಕೆಲಸವು ಲಕ್ಷಾಂತರ ನಾಗರಿಕರ ಜೀವನವನ್ನು ಸುಲಭಗೊಳಿಸುತ್ತದೆಯೇ ಎಂದು ತಮ್ಮನ್ನು ತಾವು ಕೇಳಿಕೊಳ್ಳಬೇಕೆಂದು ಅವರು ಒತ್ತಾಯಿಸಿದರು, ಈ ಆತ್ಮಾವಲೋಕನವು ಸ್ಥಳದ ದೊಡ್ಡ ಶಕ್ತಿಯಾಗುತ್ತದೆ ಎಂದು ಒತ್ತಿ ಹೇಳಿದರು.

ನಾವು ಅಧಿಕಾರವನ್ನು ಪ್ರದರ್ಶಿಸಲು ಬಂದಿಲ್ಲ, ಜವಾಬ್ದಾರಿಯನ್ನು ಪೂರೈಸಲು ಬಂದಿದ್ದೇವೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಆಡಳಿತವು ಸೇವಾ ಮನೋಭಾವದಿಂದ ನಡೆಸಲ್ಪಟ್ಟಾಗ, ಫಲಿತಾಂಶಗಳು ಅಸಾಧಾರಣವಾಗಿವೆ ಎಂದು ಹೇಳಿದರು. 25 ಕೋಟಿ ಜನರು ಬಡತನದಿಂದ ಹೊರಬಂದಿದ್ದು ಇದರಿಂದಾಗಿ ಎಂದ ಪ್ರಧಾನಮಂತ್ರಿ  ಆರ್ಥಿಕತೆಯು ಹೊಸ ವೇಗವನ್ನು ಪಡೆದುಕೊಂಡಿದೆ ಎಂಬುದನ್ನೂ ಉಲ್ಲೇಖಿಸಿದರು.

ಅಭಿವೃದ್ಧಿ ಹೊಂದಿದ ಭಾರತ 2047 ಕೇವಲ ಒಂದು ಗುರಿಯಲ್ಲ, ಬದಲಾಗಿ ಅದು ಜಗತ್ತಿನ ಮುಂದೆ ಭಾರತದ ಪ್ರತಿಜ್ಞೆಯಾಗಿದೆ ಎಂದು ಪ್ರಧಾನಮಂತ್ರಿ  ಒತ್ತಿ ಹೇಳಿದರು. ಆದ್ದರಿಂದ ಇಲ್ಲಿ ರೂಪುಗೊಳ್ಳುವ ಪ್ರತಿಯೊಂದು ನೀತಿ ಮತ್ತು ಕೈಗೊಳ್ಳುವ ನಿರ್ಧಾರವು ನಿರಂತರ ಸೇವಾ ಮನೋಭಾವದಿಂದ ಪ್ರೇರಿತವಾಗಿರಬೇಕು. ಒಂದು ದಿನ, ಅಧಿಕಾರಿಗಳು ನಿವೃತ್ತರಾದಾಗ ಅಥವಾ ಕಟ್ಟಡದಿಂದ ಸ್ಥಳಾಂತರಗೊಂಡಾಗ, ಅವರು ಹಿಂತಿರುಗಿ ನೋಡುತ್ತಾರೆ ಮತ್ತು ಇಲ್ಲಿನ ತಮ್ಮ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ, ಸೇವಾ ತೀರ್ಥ ಮತ್ತು ಕರ್ತವ್ಯ ಭವನದಲ್ಲಿನ ಪ್ರತಿ ಕ್ಷಣವನ್ನು ನಾಗರಿಕರಿಗೆ ಸೇವೆ ಸಲ್ಲಿಸಲು ಮೀಸಲಿಡಲಾಗಿದೆ ಮತ್ತು ಪ್ರತಿಯೊಂದು ನಿರ್ಧಾರವನ್ನು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಕೊಳ್ಳುವ ಮೂಲಕ ಸಾಂತ್ವನ ಕಂಡುಕೊಳ್ಳುತ್ತಾರೆ ಎಂದು ಅವರು ಹೇಳಿದರು. ಇದು ಅವರ ಶ್ರೇಷ್ಠ ಸಾಧನೆ ಮತ್ತು ವೈಯಕ್ತಿಕ ಬಂಡವಾಳವಾಗಿದ್ದು, ಅವರ ಜೀವನದಲ್ಲಿ ಹೆಮ್ಮೆಯನ್ನು ತುಂಬುತ್ತದೆ ಎಂದರು.

ಕರ್ತವ್ಯದ ಅಡಿಪಾಯವು ಹಕ್ಕುಗಳ ಭವ್ಯ ಭವನವನ್ನು ನಿರ್ಮಿಸುತ್ತದೆ ಎಂಬ ಮಹಾತ್ಮ ಗಾಂಧಿಯವರ ನಂಬಿಕೆಯನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ , ಕರ್ತವ್ಯವನ್ನು ನಿರ್ವಹಿಸಿದಾಗ, ಅತ್ಯಂತ ದೊಡ್ಡ ಸವಾಲುಗಳನ್ನು ಸಹ ಎದುರಿಸಬಹುದು ಮತ್ತು ಪರಿಹರಿಸಬಹುದು ಎಂದು ಹೇಳಿದರು. ಅದಕ್ಕಾಗಿಯೇ ಸಂವಿಧಾನದ ನಿರ್ಮಾತೃಗಳು ಕರ್ತವ್ಯಕ್ಕೆ ಬಲವಾದ ಒತ್ತು ನೀಡಿದ್ದಾರೆ ಎಂದು ಅವರು ಒತ್ತಿ ಹೇಳಿದರು, ಕೋಟ್ಯಂತರ ನಾಗರಿಕರ ಕನಸುಗಳು ಅಡಿಪಾಯದ ಮೇಲೆ ನಿಂತಿವೆ ಎಂದು ನೆನಪಿಸಿದರು. ಕರ್ತವ್ಯ ಎಂದರೆ  ಆರಂಭ, ಜೀವಂತ ರಾಷ್ಟ್ರದ ಜೀವಂತ ರಕ್ತ, ಹಾಗು ಅದು ಕರುಣೆ ಮತ್ತು ಶ್ರದ್ಧೆಯಿಂದ ಜೋಡಿತವಾಗಿದೆ, ನಿರ್ಣಯಗಳ ಭರವಸೆ, ಪ್ರಯತ್ನದ ಪರಾಕಾಷ್ಠೆ, ಪ್ರತಿಯೊಂದು ಸಮಸ್ಯೆಗೆ ಪರಿಹಾರ, ಮತ್ತು ಅಭಿವೃದ್ಧಿ ಹೊಂದಿದ ಭಾರತದ ನಂಬಿಕೆ ಎಂದು ಶ್ರೀ ಮೋದಿ ವಿವರಿಸಿದರು. ಕರ್ತವ್ಯ ಎಂದರೆ ಸಮಾನತೆ, ಕರ್ತವ್ಯ ಎಂದರೆ ವಾತ್ಸಲ್ಯ, ಕರ್ತವ್ಯವು ಸಾರ್ವತ್ರಿಕ ಮತ್ತು ಎಲ್ಲವನ್ನೂ ಒಳಗೊಳ್ಳುವದು, "ಸಬ್ ಕಾ ಸಾಥ್, ಸಬ್ ಕಾ ವಿಕಾಸ್" ಎಂಬ ಮನೋಭಾವದಲ್ಲಿ ಹೆಣೆಯಲ್ಪಟ್ಟಿದೆ ಎಂದು ಅವರು ಘೋಷಿಸಿದರು. ಕರ್ತವ್ಯವು ರಾಷ್ಟ್ರಕ್ಕೆ ಸಮರ್ಪಣೆಯ ಭಾವನೆ, ಪ್ರತಿ ಜೀವನವನ್ನು ಬೆಳಗಿಸುವ ಇಚ್ಛಾಶಕ್ತಿ, ಸ್ವಾವಲಂಬಿ ಭಾರತದ ಸಂತೋಷ, ಮುಂಬರುವ ಪೀಳಿಗೆಗೆ ಉಜ್ವಲ ಭವಿಷ್ಯದ ಖಾತರಿ, ಭಾರತ ಮಾತೆಯ ಶಕ್ತಿಯ ಧ್ವಜಧಾರಿ ಮತ್ತು "ನಾಗರಿಕ ದೇವೋ ಭವ" ದ ಜಾಗೃತ ಮಾರ್ಗ ಎಂದು ಅವರು ವಿವರಿಸಿದರು. ಈ ಸರ್ವೋಚ್ಚ ಕರ್ತವ್ಯ ಪ್ರಜ್ಞೆಯೊಂದಿಗೆ, ಎಲ್ಲರೂ ಸೇವಾ ತೀರ್ಥ ಮತ್ತು ಹೊಸದಾಗಿ ನಿರ್ಮಿಸಲಾದ ಸಂಕೀರ್ಣಗಳನ್ನು ಪ್ರವೇಶಿಸಬೇಕು ಎಂದು ಅವರು ಆಗ್ರಹಿಸಿದರು.

ಭಾರತವು ಹೊಸ ಎತ್ತರ ಮತ್ತು ಹೊಸ ಯುಗದತ್ತ ವೇಗವಾಗಿ ಮುನ್ನಡೆಯುತ್ತಿದೆ ಎಂಬುದನ್ನು ಒತ್ತಿ ಹೇಳಿದ ಶ್ರೀ ಮೋದಿ, ಮುಂಬರುವ ವರ್ಷಗಳಲ್ಲಿ ದೇಶದ ಗುರುತನ್ನು ಅದರ ಆರ್ಥಿಕತೆಯಿಂದ ಮಾತ್ರವಲ್ಲ, ಆಡಳಿತದ ಗುಣಮಟ್ಟ, ನೀತಿಗಳ ಸ್ಪಷ್ಟತೆ ಮತ್ತು ಕರ್ಮಯೋಗಿಗಳ ಸಮರ್ಪಣೆಯಿಂದ ವ್ಯಾಖ್ಯಾನಿಸಲಾಗುತ್ತದೆ ಎಂದು ಹೇಳಿದರು. ಸೇವಾ ತೀರ್ಥ ಮತ್ತು ಕರ್ತವ್ಯ ಭವನದಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವು ಕೇವಲ ಕಡತದ ಅನುಮೋದನೆಯಾಗಿರುವುದಿಲ್ಲ, ಬದಲಾಗಿ ಅಭಿವೃದ್ಧಿ ಹೊಂದಿದ ಭಾರತ 2047ರ ದಿಕ್ಕನ್ನು ರೂಪಿಸುತ್ತದೆ ಎಂದು ಅವರು ಒತ್ತಿ ಹೇಳಿದರು. 2047 ಕೇವಲ ದಿನಾಂಕವಲ್ಲ, 140 ಕೋಟಿ ಕನಸುಗಳ ಕಾಲಮಿತಿಯಾಗಿದೆ, ಅಲ್ಲಿ ಪ್ರತಿಯೊಂದು ಸಂಸ್ಥೆ, ಪ್ರತಿಯೊಬ್ಬ ಅಧಿಕಾರಿ, ಪ್ರತಿಯೊಬ್ಬ ಉದ್ಯೋಗಿ ಮತ್ತು ಪ್ರತಿಯೊಬ್ಬ ಕರ್ಮಯೋಗಿ ಪ್ರಮುಖ ಮಹತ್ವವನ್ನು ಹೊಂದಿರುತ್ತಾರೆ ಎಂದು ಅವರು ನೆನಪಿಸಿದರು. ಸೇವಾ ತೀರ್ಥವು ಸೂಕ್ಷ್ಮ ಆಡಳಿತದ ಸಂಕೇತ ಮತ್ತು ನಾಗರಿಕ ಕೇಂದ್ರಿತ ಆಡಳಿತದ ಮಾದರಿಯಾಗಬೇಕು, ಅಧಿಕಾರದ ಬದಲು ಸೇವೆ ಗೋಚರಿಸುವ ಸ್ಥಳ, ಸ್ಥಾನದ ಬದಲು ಬದ್ಧತೆ, ಅಧಿಕಾರದ ಬದಲು ಜವಾಬ್ದಾರಿ ಎಂಬ ದೃಷ್ಟಿಕೋನವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು. ಈ ಸಂಕಲ್ಪವು ಇತಿಹಾಸವನ್ನು ಬರೆಯುತ್ತದೆ ಮತ್ತು ಸಾಮೂಹಿಕ ಪ್ರಯತ್ನವು ಪೀಳಿಗೆಗೆ ಮಾರ್ಗದರ್ಶನ ನೀಡುತ್ತದೆ ಎಂಬ ವಿಶ್ವಾಸವನ್ನು ಅವರು ದೃಢಪಡಿಸಿದರು. "ಇದು ಸರಿಯಾದ ಸಮಯ, ಇದೇ ಸರಿಯಾದ ಸಮಯ" ಎಂದು ಕೆಂಪು ಕೋಟೆಯಿಂದ ಹೇಳಿದ್ದ ಮಾತುಗಳನ್ನು ನೆನಪಿಸಿಕೊಂಡ ಅವರು, "ಪ್ರತಿಯೊಂದು ಕ್ಷಣವನ್ನೂ ರಾಷ್ಟ್ರ ಮೊದಲು" ಎಂಬ ಭಾವನೆಯಲ್ಲಿ ಬಳಸಿಕೊಳ್ಳುವಂತೆ ಒತ್ತಾಯಿಸಿದರು. ಇದರಿಂದ ಭವಿಷ್ಯದ ಶತಮಾನಗಳು ಭಾರತವು ತನ್ನ ಅದೃಷ್ಟವನ್ನು ಪುನರ್ ವ್ಯಾಖ್ಯಾನಿಸಿದ ಮತ್ತು ಸಾವಿರ ವರ್ಷಗಳ ಉಜ್ವಲ ಭವಿಷ್ಯದತ್ತ ಮೊದಲ ಹೆಜ್ಜೆ ಇಟ್ಟ ಸಮಯ ಇದು ಎಂದು ಹೇಳುತ್ತವೆ ಎಂದವರು ನುಡಿದರು. ಈ ದೃಢನಿಶ್ಚಯದೊಂದಿಗೆ, ಅವರು ಮತ್ತೊಮ್ಮೆ ಎಲ್ಲರಿಗೂ ತಮ್ಮ ಶುಭಾಶಯಗಳನ್ನು ತಿಳಿಸುವ ಮೂಲಕ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ಸಂಸದರು ಮತ್ತು ಭಾರತ ಸರ್ಕಾರದ ಅಧಿಕಾರಿಗಳು ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ ಅವರು ಸೇವಾ ತೀರ್ಥ ಕಟ್ಟಡ ಸಂಕೀರ್ಣದ ಹೆಸರನ್ನು ಇಂದು ಬೆಳಿಗ್ಗೆ ಅನಾವರಣಗೊಳಿಸಿದರು. ನಂತರ ಅವರು ಸೇವಾ ತೀರ್ಥ ಮತ್ತು ಕರ್ತವ್ಯ ಭವನ -1 ಮತ್ತು 2 ನ್ನು ಔಪಚಾರಿಕವಾಗಿ ಉದ್ಘಾಟಿಸಿದರು.

ಉದ್ಘಾಟನೆಯು ಭಾರತದ ಆಡಳಿತ ವಾಸ್ತುಶಿಲ್ಪದಲ್ಲಿ ಒಂದು ಪರಿವರ್ತನಾತ್ಮಕ ಮೈಲಿಗಲ್ಲನ್ನು ಗುರುತಿಸುತ್ತದೆ ಮತ್ತು ಆಧುನಿಕ, ದಕ್ಷ, ಸುಲಭವಾಗಿ ಲಭ್ಯವಾಗಬಹುದಾದ/ ಪ್ರವೇಶಿಸಬಹುದಾದ ಮತ್ತು ನಾಗರಿಕ ಕೇಂದ್ರಿತ ಆಡಳಿತ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಪ್ರಧಾನ ಮಂತ್ರಿಯವರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ದಶಕಗಳಿಂದ, ಹಲವಾರು ಪ್ರಮುಖ ಸರ್ಕಾರಿ ಕಚೇರಿಗಳು ಮತ್ತು ಸಚಿವಾಲಯಗಳು ಸೆಂಟ್ರಲ್ ವಿಸ್ಟಾ ಪ್ರದೇಶದ ಬಹು ಸ್ಥಳಗಳಲ್ಲಿ ಚದುರಿದಂತೆ ಹರಡಿಕೊಂಡಿದ್ದವು ಮತ್ತು ಹಳೆಯ ಮೂಲಸೌಕರ್ಯಗಳೊಂದಿಗೆ  ಕಾರ್ಯನಿರ್ವಹಿಸುತ್ತಿದ್ದವು. ಈ ಚದುರಿದಂತಹ ಸ್ಥಿತಿಯು ಕಾರ್ಯಾಚರಣೆಯ ಅಸಮರ್ಥತೆ, ಸಮನ್ವಯ ಸವಾಲುಗಳು, ನಿರ್ವಹಣಾ ವೆಚ್ಚಗಳ ಹೆಚ್ಚಳ ಮತ್ತು ಸೂಕ್ತವಲ್ಲದ ಕೆಲಸದ ವಾತಾವರಣಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಹೊಸ ಕಟ್ಟಡ ಸಂಕೀರ್ಣಗಳು ಆಧುನಿಕ, ಭವಿಷ್ಯಕ್ಕೆ ಸಿದ್ಧವಾಗಿರುವ ಸೌಲಭ್ಯಗಳಲ್ಲಿ ಆಡಳಿತಾತ್ಮಕ ಕಾರ್ಯಗಳನ್ನು ಕ್ರೋಢೀಕರಿಸುವ ಮೂಲಕ ಸಮಸ್ಯೆಗಳನ್ನು ಪರಿಹರಿಸುತ್ತವೆ.

ಸೇವಾ ತೀರ್ಥವು ಪ್ರಧಾನ ಮಂತ್ರಿ ಕಚೇರಿ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ, ಕ್ಯಾಬಿನೆಟ್ ಸಚಿವಾಲಯವನ್ನು ಹೊಂದಿದೆ, ಇವೆಲ್ಲವೂ ಹಿಂದೆ ವಿವಿಧ ಸ್ಥಳಗಳಲ್ಲಿ ಹರಡಿದಂತೆ ನೆಲೆಗೊಂಡಿದ್ದವು.

ಕರ್ತವ್ಯ ಭವನ-1 ಮತ್ತು 2 ಹಣಕಾಸು ಸಚಿವಾಲಯ, ರಕ್ಷಣಾ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಶಿಕ್ಷಣ ಸಚಿವಾಲಯ, ಸಂಸ್ಕೃತಿ ಸಚಿವಾಲಯ, ಕಾನೂನು ಮತ್ತು ನ್ಯಾಯ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ರಾಸಾಯನಿಕಗಳು ಮತ್ತು ರಸಗೊಬ್ಬರ ಸಚಿವಾಲಯ ಹಾಗು ಬುಡಕಟ್ಟು ವ್ಯವಹಾರಗಳ ಸಚಿವಾಲಯ ಸೇರಿದಂತೆ ಹಲವಾರು ಪ್ರಮುಖ ಸಚಿವಾಲಯಗಳನ್ನು ಒಳಗೊಂಡಿದೆ.

ಎರಡೂ ಕಟ್ಟಡ ಸಂಕೀರ್ಣಗಳು ಡಿಜಿಟಲ್ ಆಗಿ ಸಂಯೋಜಿತ ಕಚೇರಿಗಳು, ರಚನಾತ್ಮಕ ಸಾರ್ವಜನಿಕ ಇಂಟರ್ಫೇಸ್ ವಲಯಗಳು ಮತ್ತು ಕೇಂದ್ರೀಕೃತ ಸ್ವಾಗತ ಸೌಲಭ್ಯಗಳನ್ನು ಹೊಂದಿವೆ. ಈ ವೈಶಿಷ್ಟ್ಯಗಳು ಸಹಯೋಗ, ದಕ್ಷತೆ, ಅಡೆ-ತಡೆರಹಿತ ಆಡಳಿತ, ಸುಧಾರಿತ ನಾಗರಿಕರ ತೊಡಗಿಸಿಕೊಳ್ಳುವಿಕೆ ಮತ್ತು ವರ್ಧಿತ ಉದ್ಯೋಗಿ ಯೋಗಕ್ಷೇಮವನ್ನು ಬೆಳೆಸುತ್ತವೆ. ಚತುರ್ತಾರಾ ಗೃಹ (4-ಸ್ಟಾರ್ GRIHA)  ಮಾನದಂಡಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಈ ಸಂಕೀರ್ಣಗಳು ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳು, ಜಲ ಸಂರಕ್ಷಣಾ ಕ್ರಮಗಳು, ತ್ಯಾಜ್ಯ ನಿರ್ವಹಣಾ ಪರಿಹಾರಗಳು ಮತ್ತು ಉನ್ನತ-ಕಾರ್ಯಕ್ಷಮತೆಯ ಕಟ್ಟಡ ಆವರಣಗಳನ್ನು ಒಳಗೊಂಡಿವೆ. ಈ ಕ್ರಮಗಳು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುತ್ತವೆ ಮತ್ತು  ಪರಿಸರದ ಪರಿಣಾಮವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ. ಕಟ್ಟಡ ಸಂಕೀರ್ಣಗಳು ಸ್ಮಾರ್ಟ್ ಪ್ರವೇಶ ನಿಯಂತ್ರಣ ವ್ಯವಸ್ಥೆಗಳು, ಕಣ್ಗಾವಲು ಜಾಲಗಳು ಮತ್ತು ಸುಧಾರಿತ ತುರ್ತು ಪ್ರತಿಕ್ರಿಯೆ ಮೂಲಸೌಕರ್ಯದಂತಹ ಸಮಗ್ರ ಸುರಕ್ಷತೆ ಮತ್ತು ಭದ್ರತಾ ಚೌಕಟ್ಟುಗಳನ್ನು ಸಹ ಒಳಗೊಂಡಿವೆ, ಇದು ಅಧಿಕಾರಿಗಳು ಮತ್ತು ಸಂದರ್ಶಕರಿಗೆ ಸುರಕ್ಷಿತ ಮತ್ತು ಪ್ರವೇಶಿಸಬಹುದಾದ ವಾತಾವರಣವನ್ನು ಖಾತ್ರಿಪಡಿಸುತ್ತದೆ.

 

*****

 

 

 


(ಪ್ರಕಟಣೆ ಐ.ಡಿ.: 2228397) ವಿಸಿಟರ್ ಕೌಂಟರ್ : 2
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Manipuri , Bengali , Assamese , Gujarati , Telugu , Malayalam