ನೀತಿ ಆಯೋಗ
ನೀತಿ ಆಯೋಗದಿಂದ "ಟ್ರೇಡ್ ವಾಚ್ ತ್ರೈಮಾಸಿಕ"ದ ಆರನೇ ಆವೃತ್ತಿ ಬಿಡುಗಡೆ
ಪ್ರಕಟಣಾ ದಿನಾಂಕ:
13 FEB 2026 3:07PM by PIB Bengaluru
ನೀತಿ ಆಯೋಗದ ಉಪಾಧ್ಯಕ್ಷರಾದ ಶ್ರೀ ಸುಮನ್ ಬೆರಿ ಅವರು 2026ರ ಫೆಬ್ರವರಿ 13, ರಂದು ಹೊಸದಿಲ್ಲಿಯಲ್ಲಿ ಹಣಕಾಸು ವರ್ಷ 25-26 (ಜುಲೈ-ಸೆಪ್ಟೆಂಬರ್ 2025) ಕ್ಕೆ ಸಂಬಂಧಿಸಿ ತ್ರೈಮಾಸಿಕ 2 ರ "ಟ್ರೇಡ್ ವಾಚ್ ತ್ರೈಮಾಸಿಕ" ಪ್ರಕಟಣೆಯ ಇತ್ತೀಚಿನ ಆವೃತ್ತಿಯನ್ನು ಬಿಡುಗಡೆ ಮಾಡಿದರು. ನೀತಿ ಆಯೋಗದ ಸದಸ್ಯರಾದ ಶ್ರೀ ಅರವಿಂದ್ ವೀರಮಣಿ ಮತ್ತು ಇತರ ಹಿರಿಯ ಅಧಿಕಾರಿಗಳ ಗಣ್ಯರ ಸಮ್ಮುಖದಲ್ಲಿ ಇದನ್ನು ಬಿಡುಗಡೆ ಮಾಡಲಾಯಿತು.
ಜಾಗತಿಕ ವ್ಯಾಪಾರ ಬೆಳವಣಿಗೆ ಮಧ್ಯಮವಾಗಿದ್ದರೂ ಸಕಾರಾತ್ಮಕವಾಗಿಯೇ ಇರುವ ಸಮಯದಲ್ಲಿ ಈ ಪ್ರಕಟಣೆಯು ಜಾಗತಿಕ ಮತ್ತು ದೇಶೀಯ ವ್ಯಾಪಾರ ಪ್ರವೃತ್ತಿಗಳ ಸಮಗ್ರ ಮೌಲ್ಯಮಾಪನವನ್ನು ಒದಗಿಸುತ್ತದೆ, ಜಾಗತಿಕ ವ್ಯಾಪಾರದಲ್ಲಿ ಸೇವೆಗಳು ಸರಕುಗಳಿಗಿಂತ ಹೆಚ್ಚಿನ ಕಾರ್ಯಕ್ಷಮತೆಯನ್ನು ಮುಂದುವರಿಸುತ್ತಿವೆ ಮತ್ತು ಅಭಿವೃದ್ಧಿಶೀಲ ಪ್ರದೇಶಗಳು ಪ್ರಮುಖ ಚಾಲಕ ಶಕ್ತಿಯಾಗಿ ಹೊರಹೊಮ್ಮುತ್ತಿವೆ. ಇದರ ಜೊತೆಗೆ, ಈ ತ್ರೈಮಾಸಿಕದ ಆವೃತ್ತಿಯ ವಿಷಯಾಧಾರಿತ ವಿಭಾಗವು ಭಾರತದ ಎಲೆಕ್ಟ್ರಾನಿಕ್ಸ್ ವ್ಯಾಪಾರದ ಮೇಲೆ ಗಮನ ಕೇಂದ್ರೀಕರಿಸುತ್ತದೆ, ಜಾಗತಿಕ ಬೇಡಿಕೆ ಮಾದರಿಗಳು, ಮೊಬೈಲ್ ಫೋನ್‌ಗಳಲ್ಲಿ ಭಾರತದ ರಫ್ತು ಹೆಜ್ಜೆಗುರುತು, ಗ್ರಾಹಕ ಎಲೆಕ್ಟ್ರಾನಿಕ್ಸ್, ಕೈಗಾರಿಕಾ ಎಲೆಕ್ಟ್ರಾನಿಕ್ಸ್ ಮತ್ತು ಘಟಕಗಳು ಹಾಗು ಜಾಗತಿಕ ಎಲೆಕ್ಟ್ರಾನಿಕ್ಸ್ ಮೌಲ್ಯ ಸರಪಳಿಗಳಲ್ಲಿ ಭಾಗವಹಿಸುವಿಕೆಯನ್ನು ಪರಿಶೀಲಿಸುತ್ತದೆ. ಇದು ಸ್ಪರ್ಧಾತ್ಮಕತೆಯನ್ನು ಬಲಪಡಿಸಲು, ಮೌಲ್ಯವರ್ಧನೆಯನ್ನು ಹೆಚ್ಚಿಸಲು ಮತ್ತು ರಫ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಅಗತ್ಯವಿರುವ ಪ್ರಮುಖ ರಚನಾತ್ಮಕ ನಿರ್ಬಂಧಗಳು, ನೀತಿ ಅಂತರಗಳು ಮತ್ತು ಆದ್ಯತೆಯ ಮಧ್ಯಪ್ರವೇಶಗಳನ್ನು ಗುರುತಿಸುತ್ತದೆ.

ಈ ವಿಶ್ಲೇಷಣೆಯು, 2026 ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತದ ವ್ಯಾಪಾರ ಕಾರ್ಯಕ್ಷಮತೆಯು ರಫ್ತು-ನೇತೃತ್ವದ ವೇಗದಿಂದ ನಡೆಸಲ್ಪಟ್ಟಿದೆ ಎಂದು ತೋರಿಸುತ್ತದೆ, ಇದು ಜಾಗತಿಕ ಅನಿಶ್ಚಿತತೆಯ ನಡುವೆಯೂ ಒಟ್ಟಾರೆ ವ್ಯಾಪಾರ ವಿಸ್ತರಣೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಸೇವೆಗಳು ಮತ್ತು ಸರಕು ರಫ್ತುಗಳು ~8.5% ರಷ್ಟು ಬಲವಾದ ಬೆಳವಣಿಗೆಯನ್ನು ದಾಖಲಿಸಿದ್ದು, ಸರಕು ಮತ್ತು ಸೇವೆಗಳೆರಡರಲ್ಲೂ ಆಮದು ಬೆಳವಣಿಗೆಯನ್ನು ಮೀರಿಸಿವೆ. ರಚನಾತ್ಮಕ ಮಟ್ಟದಲ್ಲಿ, ಅಭಿವೃದ್ಧಿಶೀಲ ಆರ್ಥಿಕತೆಗಳ ನಡುವೆ ವ್ಯಾಪಾರ ಹೆಚ್ಚುತ್ತಿರುವುದನ್ನು/ಬಲಗೊಳ್ಳುತ್ತಿರುವುದನ್ನು ಆವೃತ್ತಿಯು ಒತ್ತಿಹೇಳುತ್ತದೆ, ಇದು 2005 ರಿಂದ ಸುಮಾರು ನಾಲ್ಕು ಪಟ್ಟು ವಿಸ್ತರಣೆಯಾಗಿದೆ ಮತ್ತು ಈಗ ಜಾಗತಿಕ ರಫ್ತುಗಳಲ್ಲಿ ಪಾಲು ಹೆಚ್ಚುತ್ತಿರುವುದನ್ನು ಹೇಳುತ್ತದೆ. ಆ ಮೂಲಕ ಭಾರತದ ವ್ಯಾಪಾರ ಪಥವು ಪ್ರಾದೇಶಿಕ ಮೌಲ್ಯ ಸರಪಳಿಗಳು ಮತ್ತು ಹೊಸ ವ್ಯಾಪಾರ ಕಾರಿಡಾರ್‌ಗಳೊಂದಿಗೆ ಜಾಗತಿಕ ದಕ್ಷಿಣ ಮರುಸಮತೋಲನದಲ್ಲಿ ಪ್ರಮುಖ ಪಾತ್ರವಹಿಸಿದೆ. ಇದಲ್ಲದೆ, ಈ ಆವೃತ್ತಿಯು ಭವಿಷ್ಯದ ರಫ್ತು ಬೆಳವಣಿಗೆಯಲ್ಲಿ ಇ-ಕಾಮರ್ಸ್‌ನ ಬೆಳೆಯುತ್ತಿರುವ ಪಾತ್ರವನ್ನು ಎತ್ತಿ ತೋರಿಸುತ್ತದೆ. ಭಾರತವು ಈಗ ವಿಶ್ವದ ಅಗ್ರ ಆರು ಇ-ಕಾಮರ್ಸ್ ಮಾರುಕಟ್ಟೆಗಳಲ್ಲಿ ಒಂದಾಗಿದೆ, ಎಲೆಕ್ಟ್ರಾನಿಕ್ಸ್ ಆನ್‌ಲೈನ್ ಚಿಲ್ಲರೆ ವ್ಯಾಪಾರದ ಅರ್ಧದಷ್ಟು ಪಾಲನ್ನು ಹೊಂದಿದೆ ಮತ್ತು ಇ-ಕಾಮರ್ಸ್ ರಫ್ತುಗಳು ಸಾಧಾರಣವಾಗಿದ್ದರೂ, ಅವು ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ ಮತ್ತು 2030 ರ ವೇಳೆಗೆ ಭಾರತದ ಸರಕು ರಫ್ತಿಗೆ 20-30 ಪ್ರತಿಶತದಷ್ಟು ಕೊಡುಗೆ ನೀಡಬಹುದು, ಇದು ಲಾಜಿಸ್ಟಿಕ್ಸ್ ದಕ್ಷತೆ, ನಿಯಂತ್ರಕ ಸೌಲಭ್ಯ ಮತ್ತು ವಿಸ್ತರಿಸುವ ಎಂ.ಎಸ್.ಎಂ.ಇ. ಪಾಲುದಾರಿಕೆಯಲ್ಲಿ ನಡೆಯುತ್ತಿರುವ ಸುಧಾರಣೆಗಳಿಂದ ಬೆಂಬಲಿತವಾಗಿದೆ.
ಈ ತ್ರೈಮಾಸಿಕ ಆವೃತ್ತಿಯ ಶೀರ್ಷಿಕೆ/ವಿಷಯಾಧಾರಿತ ಗಮನವು ಎಲೆಕ್ಟ್ರಾನಿಕ್ಸ್ ಆಗಿದ್ದು, ಭಾರತದ ಉತ್ಪಾದನೆ ಮತ್ತು ರಫ್ತು ರೂಪಾಂತರದ ಮೂಲಾಧಾರವಾಗಿ ಹೊರಹೊಮ್ಮಿದೆ. ಈಗ ಭಾರತದ ರಫ್ತು ಬುಟ್ಟಿಯಲ್ಲಿ ಎರಡನೇ ಅತಿದೊಡ್ಡ ವಸ್ತುವಾಗಿರುವ ಈ ವಲಯವು ತಂತ್ರಜ್ಞಾನ-ನೇತೃತ್ವದಲ್ಲಿದೆ ಮತ್ತು ಆಟೋಮೋಟಿವ್, ನವೀಕರಿಸಬಹುದಾದ ಇಂಧನ, ಟೆಲಿಕಾಂ, ರಕ್ಷಣಾ ಹಾಗು ಡಿಜಿಟಲ್ ಸೇವೆಗಳಂತಹ ಕೈಗಾರಿಕೆಗಳೊಂದಿಗೆ ಆಳವಾಗಿ ಪರಸ್ಪರ ಸಂಬಂಧ ಹೊಂದಿದೆ, ಇದು ಕೈಗಾರಿಕಾ ಬೆಳವಣಿಗೆಗೆ ಪ್ರಬಲ ಗುಣಕಾಂಶವಾಗಿದೆ.
ಜಾಗತಿಕ ಎಲೆಕ್ಟ್ರಾನಿಕ್ಸ್ ಬೇಡಿಕೆಯಲ್ಲಿ ಭಾರತದ ಪಾಲು ಶೇ. 17.2 ರ ತ್ವರಿತ ಸಿಎಜಿಆರ್ ನಲ್ಲಿ ವಿಸ್ತರಿಸಿದೆ, ಇದು 2015 ಮತ್ತು 2024 ರ ನಡುವೆ ಶೇ. 4.4 ರ ಜಾಗತಿಕ ಬೆಳವಣಿಗೆಯನ್ನು ಗಮನಾರ್ಹವಾಗಿ ಮೀರಿಸಿದೆ, ಇದು ಮುಖ್ಯವಾಗಿ ಮೊಬೈಲ್ ಫೋನ್ ರಫ್ತಿನಲ್ಲಿನ ತೀವ್ರ ಏರಿಕೆಯಿಂದ ಉಂಟಾಗಿದೆ. 2016 ಮತ್ತು 2024 ರ ನಡುವೆ, ಎಲೆಕ್ಟ್ರಾನಿಕ್ಸ್ ರಫ್ತುಗಳು ಸುಮಾರು ಐದು ಪಟ್ಟು ಹೆಚ್ಚಾಗಿ, 42.1 ಬಿಲಿಯನ್ ಯು.ಎಸ್.ಡಿ. ತಲುಪಿವೆ. ಜಾಗತಿಕ ಎಲೆಕ್ಟ್ರಾನಿಕ್ಸ್ ವ್ಯಾಪಾರವು 4.6 ಟ್ರಿಲಿಯನ್ ಯು.ಎಸ್.ಡಿ. ಮೌಲ್ಯದ್ದಾಗಿದ್ದು, ಈ ವಲಯವು ವಿಶ್ವ ಆರ್ಥಿಕತೆಯ ಅತಿದೊಡ್ಡ ಮತ್ತು ವೇಗವಾಗಿ ವಿಕಸಿಸುತ್ತಿರುವ ವಿಭಾಗಗಳಲ್ಲಿ ಒಂದನ್ನು ಪ್ರತಿನಿಧಿಸುತ್ತದೆ. ಭಾರತವು ಮೊಬೈಲ್ ಫೋನ್‌ಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಸಾಧನಗಳಂತಹ ಉತ್ಪನ್ನಗಳಲ್ಲಿ ನಿರ್ದಿಷ್ಟ ಶಕ್ತಿಯನ್ನು ಪ್ರದರ್ಶಿಸಿದೆ, ರಫ್ತುಗಳು ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುಎಇ ಸೇರಿದಂತೆ ಪ್ರಮುಖ ಅಂತಿಮ-ಬಳಕೆ ಮಾರುಕಟ್ಟೆಗಳ ಕಡೆಗೆ ಹೆಚ್ಚಾಗಿ ನಿರ್ದೇಶಿಸಲ್ಪಟ್ಟಿವೆ.
ಅಸೆಂಬ್ಲಿ (ಬಿಡಿ ಭಾಗಗಳ ಜೋಡಣೆ) ಮತ್ತು ಸಿಸ್ಟಮ್ ಏಕೀಕರಣದಲ್ಲಿ ಬಲವಾದ ನೆಲೆಯನ್ನು ಸ್ಥಾಪಿಸಿದ ನಂತರ, ಭಾರತವು ಈಗ ತನ್ನ ಎಲೆಕ್ಟ್ರಾನಿಕ್ಸ್ ಪ್ರಯಾಣದ ಮುಂದಿನ ಹಂತವನ್ನು ಪ್ರವೇಶಿಸುತ್ತಿದೆ, ಘಟಕ ಉತ್ಪಾದನೆ ಮತ್ತು ಹೆಚ್ಚಿನ ಮೌಲ್ಯವರ್ಧನೆಯತ್ತ ನಿರ್ಣಾಯಕವಾಗಿ ಸಾಗುತ್ತಿದೆ. ದೇಶೀಯ ಸಾಮರ್ಥ್ಯಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಕೇಂದ್ರ ಬಜೆಟ್‌ನ ಎಲೆಕ್ಟ್ರಾನಿಕ್ಸ್ ಘಟಕಗಳ ಉತ್ಪಾದನಾ ಯೋಜನೆಯಡಿ ₹40,000 ಕೋಟಿ ಹಂಚಿಕೆ ಸೇರಿದಂತೆ ಉದ್ದೇಶಿತ ನೀತಿ ಕ್ರಮಗಳಿಂದ ಈ ಪರಿವರ್ತನೆ ಬೆಂಬಲಿತವಾಗಿದೆ.
ಮುದ್ರಿತ ಸರ್ಕ್ಯೂಟ್ ಬೋರ್ಡ್ ವಿನ್ಯಾಸ, ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಪರೀಕ್ಷೆ, ಪವರ್ ಎಲೆಕ್ಟ್ರಾನಿಕ್ಸ್ ಮತ್ತು ಎಂಬೆಡೆಡ್ ಸಿಸ್ಟಮ್‌ಗಳನ್ನು ಒಳಗೊಂಡ ಜಾಗತಿಕ ಎಲೆಕ್ಟ್ರಾನಿಕ್ಸ್ ಮೌಲ್ಯ ಸರಪಳಿಗಳಲ್ಲಿ ಆಳವಾದ ಏಕೀಕರಣದಿಂದ ನಿರಂತರ ಸ್ಪರ್ಧಾತ್ಮಕತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ ಎಂಬುದನ್ನು ವಿಶ್ಲೇಷಣೆ ಒತ್ತಿಹೇಳುತ್ತದೆ. ಲಾಜಿಸ್ಟಿಕ್ಸ್ ದಕ್ಷತೆ, ಸುಂಕ ತರ್ಕಬದ್ಧಗೊಳಿಸುವಿಕೆ ಮತ್ತು ಉದ್ಯಮ-ಸಂಯೋಜಿತ ಕೌಶಲ್ಯ ಅಭಿವೃದ್ಧಿಯಲ್ಲಿ ನಿರಂತರ ಸುಧಾರಣೆಗಳಿಗೆ ಪೂರಕವಾಗಿ, ಈ ಬದಲಾವಣೆಗಳು ಮುಂಬರುವ ದಶಕದಲ್ಲಿ ಭಾರತದ ರಫ್ತು ಬೆಳವಣಿಗೆ ಮತ್ತು ತಾಂತ್ರಿಕ ಪ್ರಗತಿಯ ಪ್ರಮುಖ ಎಂಜಿನ್ ಆಗಿ ಎಲೆಕ್ಟ್ರಾನಿಕ್ಸ್ ಅನ್ನು ಸ್ಥಾಪಿಸಲಿವೆ.
"ಅರೆವಾಹಕಗಳು ಮತ್ತು ಘಟಕಗಳೊಂದಿಗೆ ಆಧುನಿಕ ಉತ್ಪಾದನಾ ಮೌಲ್ಯ ಸರಪಳಿಗಳ ಸಂಘಟನಾ ಕೇಂದ್ರವಾಗಿ, ಎಲೆಕ್ಟ್ರಾನಿಕ್ಸ್, ವ್ಯಾಪಾರ ಸಮತೋಲನ ಮತ್ತು ತಾಂತ್ರಿಕ ಸಾರ್ವಭೌಮತ್ವವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಘಟಕಗಳ ಅಂತಿಮ ಜೋಡಣೆಯಲ್ಲಿ ಭಾರತವು ಪ್ರಮಾಣವನ್ನು ಸಾಧಿಸಿದ್ದರೂ, ನಿರಂತರ ಸ್ಪರ್ಧಾತ್ಮಕತೆಯು ರಚನಾತ್ಮಕ ವೆಚ್ಚದ ನ್ಯೂನತೆಗಳನ್ನು ಸರಿಪಡಿಸುವುದು, ದೇಶೀಯ ಘಟಕ ಪರಿಸರ ವ್ಯವಸ್ಥೆಗಳನ್ನು ಬಲಗೊಳಿಸುವುದು ಮತ್ತು ಜಾಗತಿಕ ಉತ್ಪಾದನಾ ಜಾಲಗಳಲ್ಲಿ ಭಾರತೀಯ ಸಂಸ್ಥೆಗಳನ್ನು ಹೆಚ್ಚು ದೃಢವಾಗಿ ಅಳವಡಿಸಲು ಘಟಕಗಳಲ್ಲಿ ಹೂಡಿಕೆಗಳನ್ನು ಬಳಸಿಕೊಳ್ಳುವುದರ ಮೇಲೆ ಅವಲಂಬಿತವಾಗಿರುತ್ತದೆ" ಎಂದು ಶ್ರೀ ಸುಮನ್ ಬೆರಿ ಹೇಳಿದರು.
ಸದಸ್ಯ ಡಾ. ಅರವಿಂದ್ ವೀರಮಣಿ ಅವರು ಪ್ರಕಟಣೆಯು ಸಕಾಲಿಕ ಮತ್ತು ವಿಶ್ಲೇಷಣಾತ್ಮಕವಾಗಿ ದೃಢವಾದ ಆವೃತ್ತಿಯನ್ನು ನೀಡಿದ್ದಕ್ಕಾಗಿ ತಂಡವನ್ನು ಶ್ಲಾಘಿಸಿದರು. ಜಾಗತಿಕ ಮೌಲ್ಯ ಸರಪಳಿಗಳಲ್ಲಿ, ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ನಲ್ಲಿ ಆಳವಾದ ಏಕೀಕರಣವು ಭಾರತದ ರಫ್ತು ವೇಗವನ್ನು ಉಳಿಸಿಕೊಳ್ಳಲು, ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಮಧ್ಯಮ ಅವಧಿಯಲ್ಲಿ ಗುಣಮಟ್ಟದ ಉದ್ಯೋಗವನ್ನು ಸೃಷ್ಟಿಸಲು ಅವಶ್ಯವಾಗಿದೆ ಎಂಬುದರತ್ತ ಅವರು ಗಮನ ಸೆಳೆದರು.
ಈ ಆವೃತ್ತಿಯು ನೀತಿ ನಿರೂಪಕರು, ಉದ್ಯಮ, ಸಂಶೋಧಕರು ಮತ್ತು ಶೈಕ್ಷಣಿಕ ವಲಯಕ್ಕೆ ಅದರ ದತ್ತಾಂಶ-ಚಾಲಿತ ವಿಶ್ಲೇಷಣೆ ಮತ್ತು ಮುನ್ನೋಟದ ನೀತಿ ಒಳನೋಟಗಳೊಂದಿಗೆ ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಬೆಂಬಲಿಸಲು ಮತ್ತು ಕ್ರಿಯಾತ್ಮಕ ಜಾಗತಿಕ ಭೂದೃಶ್ಯದಲ್ಲಿ ಭಾರತದ ವ್ಯಾಪಾರ ಸ್ಪರ್ಧಾತ್ಮಕತೆಯನ್ನು ಬಲಪಡಿಸಲು ಪ್ರಮುಖ ಸಂಪನ್ಮೂಲವನ್ನು ಒದಗಿಸುತ್ತದೆ.
ಪೂರ್ಣ ಪ್ರಕಟಣೆಯನ್ನು ಇಲ್ಲಿ ನೋಡಬಹುದು: https://niti.gov.in/sites/default/files/2026-02/Trade-Watch-Quarterly-July-September-Q2-FY-2025-26.pdf
*****
(ಪ್ರಕಟಣೆ ಐ.ಡಿ.: 2227554)
ವಿಸಿಟರ್ ಕೌಂಟರ್ : 13