ಜಲ ಶಕ್ತಿ ಸಚಿವಾಲಯ
ಜಲ ಜೀವನ್ ಮಿಷನ್ ಯೋಜನೆಯ ಮೌಲ್ಯಮಾಪನ
ಪ್ರಕಟಣಾ ದಿನಾಂಕ:
05 FEB 2026 4:37PM by PIB Bengaluru
ಆಗಸ್ಟ್ 2019 ರಿಂದ, ಭಾರತ ಸರ್ಕಾರವು ರಾಜ್ಯಗಳ ಸಹಭಾಗಿತ್ವದಲ್ಲಿ ದೇಶಾದ್ಯಂತ ಪ್ರತಿ ಗ್ರಾಮೀಣ ಮನೆಗೂ ಕುಡಿಯುವ ನೀರನ್ನು ಒದಗಿಸಲು “ಜಲ ಜೀವನ್ ಮಿಷನ್ (ಜೆ.ಜೆ.ಎಂ.) - ಹರ್ ಘರ್ ಜಲ” ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಗ್ರಾಮೀಣ ಮನೆಗಳಿಗೆ ನಲ್ಲಿ ನೀರಿನ ಪ್ರವೇಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಲ ಜೀವನ್ ಮಿಷನ್ (ಜೆ.ಜೆ.ಎಂ.) ಪ್ರಾರಂಭವಾದಾಗಿನಿಂದ ದೇಶದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. ಆಗಸ್ಟ್ 2019 ರಲ್ಲಿ ಜಲ ಜೀವನ್ ಮಿಷನ್ (ಜೆ.ಜೆ.ಎಂ.) ಪ್ರಾರಂಭವಾದಾಗ, ದೇಶದಲ್ಲಿ ಕೇವಲ 3.23 ಕೋಟಿ (16.72%) ಗ್ರಾಮೀಣ ಕುಟುಂಬಗಳು ಮಾತ್ರ ನಲ್ಲಿ ಶುದ್ದ ಕುಡಿಯುವ ನೀರಿನ ಸಂಪರ್ಕಗಳನ್ನು ಹೊಂದಿವೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ವರದಿ ಮಾಡಿದಂತೆ, ಸುಮಾರು 12.59 ಕೋಟಿ ಹೆಚ್ಚುವರಿ ಗ್ರಾಮೀಣ ಕುಟುಂಬಗಳಿಗೆ ಜೆ ಜಲ ಜೀವನ್ ಮಿಷನ್ (ಜೆ.ಜೆ.ಎಂ.) ಯೋಜನೆಯಡಿಯಲ್ಲಿ ನಲ್ಲಿ ನೀರಿನ ಸಂಪರ್ಕಗಳನ್ನು ಒದಗಿಸಲಾಗಿದೆ. ಹೀಗಾಗಿ, 28.01.2026 ರ ಹೊತ್ತಿಗೆ, ದೇಶದ 19.36 ಕೋಟಿ ಗ್ರಾಮೀಣ ಮನೆಗಳಲ್ಲಿ, 15.79 ಕೋಟಿಗೂ ಹೆಚ್ಚು (81.57%) ಮನೆಗಳು ತಮ್ಮ ಮನೆಗಳಲ್ಲಿ ನಲ್ಲಿ ನೀರಿನ ಪೂರೈಕೆಯನ್ನು ಹೊಂದಿವೆ ಎಂದು ವರದಿಯಾಗಿದೆ.
ಈ ಜಲ ಜೀವನ್ ಮಿಷನ್ (ಜೆ.ಜೆ.ಎಂ.) ನ ಒಟ್ಟು ಅಂದಾಜು ವೆಚ್ಚ 3.60 ಲಕ್ಷ ಕೋಟಿ ರೂ.ಗಳಾಗಿದ್ದು, ಅದರಲ್ಲಿ ಕೇಂದ್ರ ಸರ್ಕಾರದ ಪಾಲು 2.08 ಲಕ್ಷ ಕೋಟಿ ರೂ.ಗಳಷ್ಟಿತ್ತು. 2024-25ರವರೆಗೆ ಅನುಮೋದಿತ ಕೇಂದ್ರದ ವೆಚ್ಚವನ್ನು ಬಹುತೇಕ ಬಳಸಲಾಗಿದೆ. ಇದಲ್ಲದೆ, ಇಲ್ಲಿಯವರೆಗೆ ಸಾಧಿಸಿದ ಪ್ರಗತಿ ಮತ್ತು ನಡೆಯುತ್ತಿರುವ ಕೆಲಸಗಳನ್ನು ಪರಿಗಣಿಸಿ, ಗೌರವಾನ್ವಿತ ಕೇಂದ್ರ ಹಣಕಾಸು ಸಚಿವರು 2025-26ರ ಬಜೆಟ್ ಘೋಷಣೆಗಳಲ್ಲಿ, ಒಟ್ಟು ವೆಚ್ಚವನ್ನು ಹೆಚ್ಚಿಸುವುದರೊಂದಿಗೆ ಡಿಸೆಂಬರ್ 2028 ರವರೆಗೆ ಜಲ ಜೀವನ್ ಮಿಷನ್ ಅನ್ನು ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಇದಲ್ಲದೆ, 2025-26ರ ಹಣಕಾಸು ವರ್ಷದಲ್ಲಿ ಜಲ ಜೀವನ್ ಮಿಷನ್ (ಜೆ.ಜೆ.ಎಂ.)ಗೆ 67,000 ಕೋಟಿ ರೂ.ಗಳ ಹಂಚಿಕೆಯನ್ನು ಕೇಂದ್ರ ಬಜೆಟ್ ನಲ್ಲಿ ಮಾಡಲಾಗಿದೆ.
ಕುಡಿಯುವ ಶುದ್ದ ನೀರು ರಾಜ್ಯ ವಿಷಯವಾಗಿದ್ದು, ಜಲ ಜೀವನ್ ಮಿಷನ್ (ಜೆ.ಜೆ.ಎಂ.) ಅಡಿಯಲ್ಲಿ, ಕುಡಿಯುವ ನೀರು ಸರಬರಾಜು ಯೋಜನೆಗಳ ಯೋಜನೆ, ಅನುಮೋದನೆ, ಅನುಷ್ಠಾನ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಗಳು ರಾಜ್ಯ /ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಮೇಲಿವೆ. ತಾಂತ್ರಿಕ ಮತ್ತು ಆರ್ಥಿಕ ಸಹಾಯವನ್ನು ನೀಡುವ ಮೂಲಕ ಭಾರತ ಸರ್ಕಾರವು ರಾಜ್ಯ/ ಕೇಂದ್ರಾಡಳಿತ ಪ್ರದೇಶ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿದೆ. ಒತ್ತಡದ ಪ್ರದೇಶಗಳಲ್ಲಿ ವಿಶ್ವಾಸಾರ್ಹ ನೀರಿನ ಮೂಲಗಳು ವಿರಳವಾಗಿರುವುದು, ಭೂವೈಜ್ಞಾನಿಕ ಮಾಲಿನ್ಯ, ಕಷ್ಟಕರವಾದ ಭೂಪ್ರದೇಶ, ಚದುರಿದ ವಾಸಸ್ಥಳಗಳು, ಸೀಮಿತ ತಾಂತ್ರಿಕ ಸಾಮರ್ಥ್ಯ, ಹೆಚ್ಚುತ್ತಿರುವ ಸಾಮಗ್ರಿ ವೆಚ್ಚಗಳು ಮತ್ತು ಶಾಸನಬದ್ಧ ಅನುಮತಿಗಳಲ್ಲಿನ ವಿಳಂಬ ಇತ್ಯಾದಿ ಸವಾಲುಗಳನ್ನು ರಾಜ್ಯಗಳು ವರದಿ ಮಾಡಿವೆ. ಈ ಸವಾಲುಗಳನ್ನು ಪರಿಹರಿಸಲು, ಸರ್ಕಾರವು ಬಂಡವಾಳ ವೆಚ್ಚಕ್ಕಾಗಿ ವಿಶೇಷ ನೆರವು, ತ್ವರಿತ ಅನುಮತಿಗಳಿಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸುವುದು, ಎಸ್.ಪಿ.ಎಂ.ಯು.ಗಳು, ಡಿ.ಪಿ.ಎಂ.ಯು.ಗಳನ್ನು ಸ್ಥಾಪಿಸುವುದು ಮತ್ತು ಸ್ಥಳೀಯ ತಾಂತ್ರಿಕ ಕೌಶಲ್ಯಗಳನ್ನು ಬಲಪಡಿಸಲು ನಲ್ ಜಲ ಮಿತ್ರ ಕಾರ್ಯಕ್ರಮದಂತಹ ಕ್ರಮಗಳನ್ನು ಪರಿಚಯಿಸಿತು. ಇದಲ್ಲದೆ, ಜಲ ಶಕ್ತಿ ಅಭಿಯಾನದ ಉಪಕ್ರಮ: ಮಳೆ ಹಿಡಿಯಿರಿ ದೀರ್ಘಾವಧಿಯ ಕುಡಿಯುವ ನೀರಿನ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಮೂಲ ಸುಸ್ಥಿರತೆ, ಸಮುದಾಯ ನೇತೃತ್ವದ ಸಂರಕ್ಷಣೆ ಮತ್ತು ಮಹಿಳಾ ನಾಯಕತ್ವವನ್ನು ಮತ್ತಷ್ಟು ಉತ್ತೇಜಿಸುತ್ತದೆ.
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಪ್ರಮಾಣಿತ ಅಂಕಿಅಂಶಗಳ ಮಾದರಿಯನ್ನು ಆಧರಿಸಿ ಸ್ವತಂತ್ರ ಮೂರನೇ ವ್ಯಕ್ತಿಯ ಸಂಸ್ಥೆಯ ಮೂಲಕ ಜಲ ಜೀವನ್ ಮಿಷನ್ (ಜೆ.ಜೆ.ಎಂ.) ಅಡಿಯಲ್ಲಿ ಒದಗಿಸಲಾದ ಮನೆಯ ನಲ್ಲಿ ನೀರಿನ ಸಂಪರ್ಕಗಳ ಕಾರ್ಯನಿರ್ವಹಣೆಯ ಮೌಲ್ಯಮಾಪನವನ್ನು ಕೈಗೊಳ್ಳುತ್ತದೆ. 2024ರ ಕಾರ್ಯನಿರ್ವಹಣಾ ಮೌಲ್ಯಮಾಪನವನ್ನು 34 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ 761 ಜಿಲ್ಲೆಗಳಲ್ಲಿ 2,37,608 ಮನೆಗಳನ್ನು ಒಳಗೊಂಡ 19,812 ಹರ್ ಘರ್ ಜಲ ಗ್ರಾಮಗಳಲ್ಲಿ ನಡೆಸಲಾಯಿತು. ಸಮೀಕ್ಷೆ ನಡೆಸಿದ ಗ್ರಾಮಗಳಲ್ಲಿ 98.1% ಮನೆಗಳಲ್ಲಿ ನಲ್ಲಿ ಸಂಪರ್ಕಗಳು ಲಭ್ಯವಿರುವುದು ಕಂಡುಬಂದಿದೆ. ಇವುಗಳಲ್ಲಿ, 86.5% ಮನೆಗಳು ಕಾರ್ಯನಿರ್ವಹಿಸುವ ನಲ್ಲಿ ನೀರಿನ ಸಂಪರ್ಕಗಳನ್ನು ಹೊಂದಿದ್ದವು, 80.2% ಮನೆಗಳು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಪಡೆಯುತ್ತಿದ್ದವು, 83.6% ಮನೆಗಳು ತಮ್ಮ ಕೊಳವೆ ಶುದ್ದ ನೀರು ಸರಬರಾಜು ಯೋಜನೆಗೆ ನೀರು ಸರಬರಾಜು ವೇಳಾಪಟ್ಟಿಯ ಪ್ರಕಾರ ನಿಯಮಿತವಾಗಿ ನೀರನ್ನು ಪಡೆಯುತ್ತಿದ್ದವು ಮತ್ತು 76% ಮನೆಗಳು ನಿಗದಿತ ನೀರಿನ ಗುಣಮಟ್ಟದ ಮಾನದಂಡಗಳ ಪ್ರಕಾರ ನೀರನ್ನು ಪಡೆಯುತ್ತಿದ್ದವು. ಕಾರ್ಯನಿರ್ವಹಣಾ ಮೌಲ್ಯಮಾಪನ 2024 ರ ವಿವರವಾದ ರಾಷ್ಟ್ರೀಯ ಮತ್ತು ರಾಜ್ಯವಾರು ವರದಿಯು ಸಾರ್ವಜನಿಕ ವಲಯದಲ್ಲಿದೆ ಮತ್ತು ಜಾಲತಾಣ https://jaljeevanmission.gov.in/functionality-report-2024 ಪ್ರವೇಶಿಸಿ ಪಡೆಯಬಹುದು.
ಕೇಂದ್ರ ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.
*****
(ಪ್ರಕಟಣೆ ಐ.ಡಿ.: 2223961)
ವಿಸಿಟರ್ ಕೌಂಟರ್ : 13