ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಇಂಧನ ಪರಿವರ್ತನೆಯು ಉದಯೋನ್ಮುಖ ಆರ್ಥಿಕತೆಗಳಲ್ಲಿ ಕೈಗಾರಿಕೀಕರಣ, ಉದ್ಯೋಗಗಳು ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಬಲ್ಲದು: ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ


ಮಾಡ್ಯೂಲ್‌ ಗಳಿಂದ ಸಂಗ್ರಹಣೆಯವರೆಗೆ, ಭಾರತವು ಅಭೂತಪೂರ್ವ ವೇಗದಲ್ಲಿ ಸಮಗ್ರ ಶುದ್ಧ ಇಂಧನ ಉತ್ಪಾದನೆಯನ್ನು ವಿಸ್ತರಿಸುತ್ತಿದೆ: ಪ್ರಲ್ಹಾದ್ ಜೋಶಿ

ದಾವೋಸ್‌ನಿಂದ ದೆಹಲಿಯವರೆಗೆ: ಮುಂದಿನ ದಶಕ ಭಾರತಕ್ಕೆ ಸೇರಿದ್ದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ

प्रविष्टि तिथि: 22 JAN 2026 9:52PM by PIB Bengaluru

ಭಾರತದ ಇಂಧನ ಪರಿವರ್ತನೆಯನ್ನು ಕೈಗಾರಿಕಾ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಜಾಗತಿಕ ಸ್ಪರ್ಧಾತ್ಮಕತೆಗಾಗಿ, ವಿಶೇಷವಾಗಿ ಉದಯೋನ್ಮುಖ ಆರ್ಥಿಕತೆಗಳಿಗಾಗಿ ಒಂದು ಸಾಧನವಾಗಿ ಉದ್ದೇಶಪೂರ್ವಕವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆ 2026ರ “Energy: The Great Funding Gap” ಎಂಬ ಉನ್ನತ ಮಟ್ಟದ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ತನ್ನ ಸ್ವಚ್ಛ ಇಂಧನ ಪರಿವರ್ತನೆಯನ್ನು ಜನಕೇಂದ್ರಿತ ಅಭಿವೃದ್ಧಿ ಚಳವಳಿಯನ್ನಾಗಿ ಪರಿವರ್ತಿಸಿದೆ, ಅದೇ ಸಮಯದಲ್ಲಿ ಇಂಧನ ಭದ್ರತೆಯನ್ನು ಬಲಪಡಿಸಿದೆ ಮತ್ತು ಕೈಗಾರಿಕೆಗಳಿಗೆ ವೆಚ್ಚವನ್ನು ಕಡಿಮೆ ಮಾಡಿದೆ ಎಂದು ಒತ್ತಿ ಹೇಳಿದರು.

ಭಾರತದ ಬೆಳವಣಿಗೆಯ ಕಾರ್ಯತಂತ್ರದ ಕೇಂದ್ರಬಿಂದುವಾಗಿ ನವೀಕರಿಸಬಹುದಾದ ಇಂಧನ

ಭಾರತವು ಈಗಾಗಲೇ 267 GW ನಷ್ಟು ಪಳೆಯುಳಿಕೆ ರಹಿತ ಇಂಧನ ಸಾಮರ್ಥ್ಯವನ್ನು ಅಳವಡಿಸಿಕೊಂಡಿದೆ ಮತ್ತು ದೇಶದ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ನವೀಕರಿಸಬಹುದಾದ ಇಂಧನಗಳ ಪಾಲು ಸುಮಾರು ಶೇ. 52 ರಷ್ಟಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಇದು ಈ ಹಿಂದೆ ಅಂದಾಜಿಸಲಾಗಿದ್ದ ಕಾಲಮಿತಿಗಿಂತ ಬಹಳ ಮೊದಲೇ ಸಾಧಿಸಲ್ಪಟ್ಟಿದೆ. ಭಾರತವು ಇಂಧನ ಪರಿವರ್ತನೆಯನ್ನು ಕೇವಲ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಮಾತ್ರ ನೋಡುತ್ತಿಲ್ಲ, ಬದಲಾಗಿ ಅದನ್ನು ಆರ್ಥಿಕ ಬೆಳವಣಿಗೆಯ ಪೂರಕ ಅಂಶವಾಗಿ ಪರಿಗಣಿಸುತ್ತಿದೆ. ಇದು ತ್ವರಿತ ಕೈಗಾರಿಕೀಕರಣಕ್ಕೆ ಬೆಂಬಲ ನೀಡುವ ಜೊತೆಗೆ, ಉದ್ಯಮಗಳು ಮತ್ತು ಮನೆಗಳಿಗೆ ವಿದ್ಯುತ್ ದರವನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು.

ಸಾಮಾಜಿಕ-ಆರ್ಥಿಕ ಬದಲಾವಣೆಗೆ ಶಕ್ತಿ ತುಂಬುತ್ತಿರುವ ಜನಕೇಂದ್ರಿತ ಯೋಜನೆಗಳು

ಪ್ರಮುಖ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ ಕಾರ್ಯಕ್ರಮಗಳನ್ನು ಉಲ್ಲೇಖಿಸುತ್ತಾ ಸಚಿವರು, ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ (PM Surya Ghar: Muft Bijli Yojana) ಅಡಿಯಲ್ಲಿ ಕಳೆದ ಎರಡು ವರ್ಷಗಳಲ್ಲಿಯೇ 27 ಲಕ್ಷ ಮನೆಗಳಲ್ಲಿ ಮೇಲ್ಛಾವಣಿ ಸೌರ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು. ಈ ಯೋಜನೆಯು 1 ಕೋಟಿ ಮನೆಗಳನ್ನು ತಲುಪುವ ಗುರಿಯನ್ನು ಹೊಂದಿದ್ದು, ಇದರಿಂದ ಸುಮಾರು 30 GW ವಿದ್ಯುತ್ ಉತ್ಪಾದನೆಯಾಗುವ ನಿರೀಕ್ಷೆಯಿದೆ.

ಪಿಎಂ-ಕುಸುಮ್ (PM-KUSUM) ಯೋಜನೆಯಡಿ, ದೇಶಾದ್ಯಂತ 21 ಲಕ್ಷಕ್ಕೂ ಹೆಚ್ಚು ರೈತರ ನೀರಾವರಿ ಪಂಪ್‌ ಗಳನ್ನು ಸೌರಶಕ್ತಿಯುತಗೊಳಿಸಲಾಗಿದೆ. ಇದು ಸಬ್ಸಿಡಿ ಸಹಿತ ಗ್ರಿಡ್ ವಿದ್ಯುತ್ ಮೇಲಿನ ಅವಲಂಬನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುವುದಲ್ಲದೆ, ರೈತರು ತಮ್ಮಲ್ಲಿರುವ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡುವ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಲು ಅನುವು ಮಾಡಿಕೊಡುತ್ತದೆ.

"ಈ ಉಪಕ್ರಮಗಳು ಕೇವಲ ಕೈಗೆಟುಕುವ ದರದಲ್ಲಿ ಇಂಧನವನ್ನು ಒದಗಿಸುತ್ತಿಲ್ಲ, ಬದಲಾಗಿ ಗ್ರಾಹಕರನ್ನು 'ಪ್ರೊಸ್ಯೂಮರ್‌ ಗಳನ್ನಾಗಿ' (Prosumers) ಪರಿವರ್ತಿಸುತ್ತಿವೆ. ಇದು ಕುಟುಂಬಗಳ ಆದಾಯ ಮತ್ತು ಗ್ರಾಮೀಣ ಜೀವನೋಪಾಯವನ್ನು ಸುಧಾರಿಸುತ್ತಿದೆ," ಎಂದು ಸಚಿವರು ಹೇಳಿದರು.

ಕಡಿಮೆ ವಿದ್ಯುತ್ ವೆಚ್ಚ, ಬಲಿಷ್ಠ ಕೈಗಾರಿಕೆ

ನವೀಕರಿಸಬಹುದಾದ ಇಂಧನವು ವಿದ್ಯುತ್ ದರಗಳನ್ನು ಕಡಿಮೆ ಮಾಡಲು ಹೇಗೆ ಸಹಾಯ ಮಾಡಿದೆ ಎಂಬುದನ್ನು ವಿವರಿಸುತ್ತಾ, ಕೇಂದ್ರ ಸಚಿವರು ಸೌರ ಚಾಲಿತ ಪಂಪ್‌ಗಳ ಮೂಲಕ ಕೃಷಿ ವಿದ್ಯುತ್ ಪೂರೈಕೆ ಸುಧಾರಣೆಗಳ ಉದಾಹರಣೆಯನ್ನು ನೀಡಿದರು. ಇದು ವಿದ್ಯುತ್ ವಿತರಣಾ ಕಂಪನಿಗಳ ಮೇಲಿನ ಸಬ್ಸಿಡಿ ಹೊರೆಯನ್ನು ಗಮನಾರ್ಹವಾಗಿ ತಗ್ಗಿಸಿದೆ.

ಹೆಚ್ಚಿನ ವೆಚ್ಚದ ಸಬ್ಸಿಡಿ ವಿದ್ಯುತ್ ಬದಲಿಗೆ ಕಡಿಮೆ ವೆಚ್ಚದ ಸೌರಶಕ್ತಿಯನ್ನು ಬಳಸುವ ಮೂಲಕ ಆದ ಉಳಿತಾಯವು, ಕೈಗಾರಿಕೆಗಳು ಮತ್ತು ಮನೆಗಳಿಗೆ ಕಡಿಮೆ ವಿದ್ಯುತ್ ದರಗಳ ರೂಪದಲ್ಲಿ ಪ್ರಯೋಜನ ನೀಡಿದೆ. ಇದು ಭಾರತದ ವಿದ್ಯುತ್ ವಲಯದಲ್ಲಿ ಒಂದು ಐತಿಹಾಸಿಕ ಬದಲಾವಣೆಯನ್ನು ಗುರುತಿಸಿದೆ. "ನವೀಕರಿಸಬಹುದಾದ ಇಂಧನ ಕ್ರಾಂತಿಯ ಕಾರಣದಿಂದಾಗಿ ವಿದ್ಯುತ್ ದರಗಳು ಇಳಿಕೆಯಾಗುತ್ತಿವೆ" ಎಂದು ಅವರು ಉಲ್ಲೇಖಿಸಿದರು.

ಸಂಪೂರ್ಣ ಸ್ವಚ್ಛ ಇಂಧನ ಉತ್ಪಾದನಾ ವ್ಯವಸ್ಥೆಯ ನಿರ್ಮಾಣ

ನವೀಕರಿಸಬಹುದಾದ ಇಂಧನ ಮೌಲ್ಯ ಸರಪಳಿಯಲ್ಲಿ ಭಾರತವು ಬಲಿಷ್ಠ ದೇಶೀಯ ಉತ್ಪಾದನಾ ನೆಲೆಯನ್ನು ನಿರ್ಮಿಸಿದೆ ಎಂದು ಕೇಂದ್ರ ಸಚಿವರು ಉಲ್ಲೇಖಿಸಿದರು. ದೇಶವು ಈಗಾಗಲೇ 144 GW ಸೌರ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವನ್ನು ಸ್ಥಾಪಿಸಿದೆ, ಸೌರ ಕೋಶಗಳ ಉತ್ಪಾದನಾ ಸಾಮರ್ಥ್ಯವು 27 GW ತಲುಪಿದ್ದು, ಶೀಘ್ರದಲ್ಲೇ ಸುಮಾರು 50 GW ಗೆ ವಿಸ್ತರಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು. ವೇಫರ್‌ ಗಳು ಮತ್ತು ಇಂಗೋಟ್‌ ಗಳ ಉತ್ಪಾದನೆಯು ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಸಂಪೂರ್ಣ ಉತ್ಪಾದನಾ ಚಕ್ರವನ್ನು ಪೂರ್ಣಗೊಳಿಸುವತ್ತ ಭಾರತವು ಸಾಗುತ್ತಿದೆ ಎಂದು ಅವರು ಹೇಳಿದರು.

ಸೌರ ಉತ್ಪಾದನೆಯ ಜೊತೆಗೆ, ಗ್ರಿಡ್ ಸ್ಥಿರತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ನಿರ್ಣಾಯಕವಾಗಿರುವ ಪವನ ಶಕ್ತಿ, ಬ್ಯಾಟರಿ ಸಂಗ್ರಹಣೆ ಮತ್ತು ಪಂಪ್ ಮಾಡಿದ ಶೇಖರಣಾ ಪರಿಹಾರಗಳ ತ್ವರಿತ ವಿಸ್ತರಣೆಯನ್ನು ಕೇಂದ್ರ ಸಚಿವರು ಒತ್ತಿ ಹೇಳಿದರು. ಈ ಪ್ರಯತ್ನಗಳು ಭಾರತದ ಸ್ವಚ್ಛ ಇಂಧನ ಪೂರೈಕೆ ಸರಪಳಿಯನ್ನು ಬಲಪಡಿಸುವುದಲ್ಲದೆ, ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ ಮತ್ತು ದೇಶದ ಕೈಗಾರಿಕಾ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತಿವೆ ಎಂದು ಅವರು ತಿಳಿಸಿದರು.

ಇಂಧನ ಭದ್ರತೆ ಮತ್ತು ವಿಶ್ವಾಸಾರ್ಹತೆಗೆ ಸಮಗ್ರ ವಿಧಾನ

ಗ್ರಿಡ್ ವಿಶ್ವಾಸಾರ್ಹತೆಯ ಬಗೆಗಿನ ಕಳವಳಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ಭಾರತವು ನವೀಕರಿಸಬಹುದಾದ ಇಂಧನದೊಂದಿಗೆ ಇಂಧನ ಸಂಗ್ರಹಣೆ, ಪಂಪ್ಡ್ ಸ್ಟೋರೇಜ್ ಹೈಡ್ರೋ ಮತ್ತು ಪರಮಾಣು ಶಕ್ತಿಯನ್ನು ಸಂಯೋಜಿಸುವ ಸಮಗ್ರ ಕಾರ್ಯತಂತ್ರವನ್ನು ಅನುಸರಿಸುತ್ತಿದೆ ಎಂದು ಹೇಳಿದರು. ಬೇಸ್‌-ಲೋಡ್ ಸಾಮರ್ಥ್ಯವನ್ನು ಬಲಪಡಿಸಲು ಮತ್ತು ಪರಮಾಣು ಶಕ್ತಿಯನ್ನು ವಿಸ್ತರಿಸಲು ಭಾರತವು ಕಾನೂನು ಮತ್ತು ನೀತಿ ಸುಧಾರಣೆಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದರು.

ಇಂಧನ ಭದ್ರತೆ, ಕೈಗೆಟುಕುವ ದರ ಮತ್ತು ಸುಸ್ಥಿರತೆ ಇವುಗಳು ಪರಸ್ಪರ ಸ್ಪರ್ಧಾತ್ಮಕ ಆದ್ಯತೆಗಳಲ್ಲ; ಬದಲಾಗಿ ಸುಸಂಬದ್ಧ ನೀತಿ ವಿನ್ಯಾಸ, ವ್ಯಾಪ್ತಿ ಮತ್ತು ದೇಶೀಯ ಉತ್ಪಾದನೆಯ ಮೂಲಕ ಇವೆಲ್ಲವನ್ನೂ ಒಟ್ಟಾಗಿ ಸಾಧಿಸಬಹುದು ಎಂಬುದನ್ನು ಭಾರತದ ಅನುಭವವು ತೋರಿಸಿಕೊಟ್ಟಿದೆ ಎಂದು ಕೇಂದ್ರ ಸಚಿವರು ಪ್ರತಿಪಾದಿಸಿದರು. ಇಂಧನ ಪರಿವರ್ತನೆಯ ಮೂಲಕ ಬೆಳವಣಿಗೆ, ಉದ್ಯೋಗ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಬಯಸುವ ಇತರ ಉದಯೋನ್ಮುಖ ಆರ್ಥಿಕತೆಗಳಿಗೆ ಭಾರತದ ಸ್ವಚ್ಛ ಇಂಧನ ಪ್ರಯಾಣವು ಪ್ರಾಯೋಗಿಕ ಪಾಠಗಳನ್ನು ನೀಡುತ್ತದೆ ಎಂದು ಅವರು ಹೇಳಿದರು.

ವಿಶ್ವ ಆರ್ಥಿಕ ವೇದಿಕೆಯ (WEF) ಅಡ್ಡಹಾದಿಯಲ್ಲಿ, ಸಚಿವರಾದ ಪ್ರಲ್ಹಾದ್ ಜೋಶಿ ಅವರು ಜಾಗತಿಕ ಕೈಗಾರಿಕಾ ಮುಖಂಡರು ಮತ್ತು ವಿದೇಶಾಂಗ ಸಚಿವರೊಂದಿಗೆ ಸರಣಿ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದರು. ಈ ಮಾತುಕತೆಗಳು ಸ್ವಚ್ಛ ಇಂಧನ ಹೂಡಿಕೆಗಳು, ತಾಂತ್ರಿಕ ಸಹಯೋಗ ಮತ್ತು ಭಾರತದ ಇಂಧನ ಪರಿವರ್ತನೆಯ ಗುರಿಗಳಿಗೆ ಪೂರಕವಾದ ಅಂತಾರಾಷ್ಟ್ರೀಯ ಪಾಲುದಾರಿಕೆಯನ್ನು ವೃದ್ಧಿಸುವ ಉದ್ದೇಶವನ್ನು ಹೊಂದಿದ್ದವು.

ದ್ವಿಪಕ್ಷೀಯ ರಾಜತಾಂತ್ರಿಕ ತೊಡಗುವಿಕೆಗಳಲ್ಲಿ, ಶ್ರೀ ಪ್ರಲ್ಹಾದ್ ಜೋಶಿ ಅವರು ಜೋರ್ಡಾನ್‌ ನ ಹೂಡಿಕೆ ಸಚಿವರಾದ ಡಾ. ತಾರೆಕ್ ಅಬು ಘಜಾಲೆ ಮತ್ತು ಯೋಜನಾ ಮತ್ತು ಅಂತಾರಾಷ್ಟ್ರೀಯ ಸಹಕಾರ ಸಚಿವರಾದ ಶ್ರೀಮತಿ ಝೀನಾ ತೌಕಾನ್ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ಉಭಯ ದೇಶಗಳ ನಡುವಿನ ಸಹಕಾರ ಮತ್ತು ಹೂಡಿಕೆ ಪಾಲುದಾರಿಕೆಯನ್ನು ವೃದ್ಧಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು.

ಕೇಂದ್ರ ಸಚಿವರು ಜಿಂಬಾಬ್ವೆಯ ವಿದೇಶಾಂಗ ವ್ಯವಹಾರಗಳು ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಸಚಿವ ಗೌರವಾನ್ವಿತ ಅಮೋನ್ ಮುರ್ವಿರಾ ಅವರನ್ನು ಭೇಟಿ ಮಾಡಿದರು ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ-ಜಿಂಬಾಬ್ವೆ ಸಹಕಾರವನ್ನು ಗಾಢವಾಗಿಸುವ ಬಗ್ಗೆ ಚರ್ಚಿಸಿದರು. ಜಿಂಬಾಬ್ವೆಯಲ್ಲಿ 'ಸ್ಟಾರ್-ಸಿ' (STAR-C) ಕೇಂದ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸೌರ ಒಕ್ಕೂಟದ (International Solar Alliance) ಮೂಲಕ ಭಾರತ ನೀಡುತ್ತಿರುವ ಬೆಂಬಲಕ್ಕೆ ಜಿಂಬಾಬ್ವೆ ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ಅವರು ಉಲ್ಲೇಖಿಸಿದರು. ಈ ಸಂದರ್ಭದಲ್ಲಿ ಗ್ರಾಮೀಣ ಮತ್ತು ದೂರದ ಪ್ರದೇಶಗಳಿಗೆ ವಿಕೇಂದ್ರೀಕೃತ ಸೌರ ಪರಿಹಾರಗಳು, ಹಾಗೆಯೇ ಹಸಿರು ಹೈಡ್ರೋಜನ್, ಜೈವಿಕ ಇಂಧನ ಮತ್ತು ವಿಕೇಂದ್ರೀಕೃತ ಇಂಧನ ವ್ಯವಸ್ಥೆಗಳಂತಹ ಉದಯೋನ್ಮುಖ ಕ್ಷೇತ್ರಗಳ ಕುರಿತು ಚರ್ಚೆಗಳು ನಡೆದವು.

ಶ್ರೀ ಪ್ರಲ್ಹಾದ್ ಜೋಶಿ ಅವರು ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯ (IEA) ಕಾರ್ಯನಿರ್ವಾಹಕ ನಿರ್ದೇಶಕ ಡಾ. ಫಾತಿಹ್ ಬಿರೋಲ್ ಅವರನ್ನು ಭೇಟಿ ಮಾಡಿದರು. ಭಾರತ-ನಿರ್ದಿಷ್ಟ ದತ್ತಾಂಶ, ವಿಶ್ಲೇಷಣೆ ಮತ್ತು ನೀತಿ ಶಿಫಾರಸುಗಳ ಮೇಲೆ IEA ಗಮನವನ್ನು ಬಲಪಡಿಸುವ ಬಗ್ಗೆ ಹಾಗೂ ಬಂಡವಾಳದ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುವ ನವೀನ ಹಣಕಾಸು ವಿಧಾನಗಳನ್ನು ಅನ್ವೇಷಿಸುವ ಕುರಿತು ಈ ಚರ್ಚೆಗಳು ನಡೆದವು.

ಜಾಗತಿಕ ಕೈಗಾರಿಕಾ ಮುಖಂಡರೊಂದಿಗೆ ಸಂವಾದಗಳು

ಭಾರತದಲ್ಲಿ ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಮೂಲಸೌಕರ್ಯ ಅವಕಾಶಗಳನ್ನು ವಿಸ್ತರಿಸುವ ಕುರಿತು ಕೇಂದ್ರ ಸಚಿವರು ಅಕ್ಯೋನಿಯಾ ಎಸ್‌ ಎ (Acconia SA) ಸಂಸ್ಥೆಯ ಮುಖ್ಯ ಹಣಕಾಸು ಮತ್ತು ಸುಸ್ಥಿರತೆ ಅಧಿಕಾರಿ ಜೋಸ್ ಎಂಟ್ರೆಕಾನಲೆಸ್ ಕ್ಯಾರಿಯನ್ ಅವರೊಂದಿಗೆ ಭವಿಷ್ಯದ ದೃಷ್ಟಿಕೋನದ ಚರ್ಚೆಯನ್ನು ನಡೆಸಿದರು. 2030ರ ವೇಳೆಗೆ 500 GW ಪಳೆಯುಳಿಕೆ ರಹಿತ ಇಂಧನ ಸಾಮರ್ಥ್ಯವನ್ನು ಹೊಂದುವ ಭಾರತದ ಗುರಿಗೆ ಅನುಗುಣವಾಗಿ, ಯುಟಿಲಿಟಿ-ಸ್ಕೇಲ್ ಸೋಲಾರ್ (ಬೃಹತ್ ಪ್ರಮಾಣದ ಸೌರ ವಿದ್ಯುತ್), ಭೂಮಿಯ ಮೇಲಿನ ಪವನ ಶಕ್ತಿ, ಹೈಬ್ರಿಡ್ ವಿಂಡ್-ಸೋಲಾರ್ ಸ್ಟೋರೇಜ್ ಪರಿಹಾರಗಳು ಮತ್ತು ನಿರಂತರ ನವೀಕರಿಸಬಹುದಾದ ವಿದ್ಯುತ್ ಪೂರೈಕೆಯ  ಬಗ್ಗೆ ಈ ಚರ್ಚೆಗಳು ಗಮನಹರಿಸಿದ್ದವು.

ಮತ್ತೊಂದು ಸಭೆಯಲ್ಲಿ, ಶ್ರೀ ಜೋಶಿಯವರು ENGIE ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ಯಾಥರೀನ್ ಮ್ಯಾಕ್‌ ಗ್ರೆಗರ್ ಅವರೊಂದಿಗೆ ಸಂವಹನ ನಡೆಸಿದರು ಮತ್ತು ಭಾರತದ ವೇಗವಾಗಿ ವಿಸ್ತರಿಸುತ್ತಿರುವ ಸ್ವಚ್ಛ ಇಂಧನ ಪರಿಸರ ವ್ಯವಸ್ಥೆಯಲ್ಲಿ ಆಳವಾದ ಮತ್ತು ಸುಸ್ಥಿರ ಹೂಡಿಕೆಗಳನ್ನು ಮಾಡುವಂತೆ ಪ್ರೋತ್ಸಾಹಿಸಿದರು. ದೀರ್ಘಾವಧಿಯ ಸ್ವಚ್ಛ ಇಂಧನ ಹೂಡಿಕೆಗಳಿಗಾಗಿ ಭಾರತವು ವಿಶ್ವದ ಅತ್ಯಂತ ಆಕರ್ಷಕ ತಾಣಗಳಲ್ಲಿ ಒಂದೆಂದು ಒತ್ತಿಹೇಳಿದ ಕೇಂದ್ರ ಸಚಿವರು, ಭಾರತದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳು ಈಗ ಹೆಚ್ಚು ಸ್ವಚ್ಛ ಹಾಗೂ ಅಗ್ಗವಾಗಿದ್ದು, ಪಾರದರ್ಶಕ ಮತ್ತು ಮಾರುಕಟ್ಟೆ ಆಧಾರಿತ ವ್ಯವಸ್ಥೆಗಳಿಂದ ನಡೆಸಲ್ಪಡುತ್ತಿವೆ ಎಂದು ಉಲ್ಲೇಖಿಸಿದರು.

ಸ್ವಚ್ಛ ಇಂಧನಕ್ಕಾಗಿ ಹಣಕಾಸು ಮತ್ತು ಮಾರುಕಟ್ಟೆ ಚೌಕಟ್ಟುಗಳು

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಬಲಿಷ್ಠ ಜಾಗತಿಕ ಕ್ರೆಡಿಟ್ ಅಸೆಸ್‌ ಮೆಂಟ್ (, ಇ ಎಸ್‌ ಜಿ ಮಾನದಂಡಗಳು (ESG standards) ಮತ್ತು ಬೆಲೆ ನಿರ್ಧಾರದ (Price discovery) ಚೌಕಟ್ಟುಗಳನ್ನು ರೂಪಿಸುವ ಕುರಿತು ಕೇಂದ್ರ ಸಚಿವರು ಎಸ್‌ & ಪಿ ಗ್ಲೋಬಲ್ (S&P Global) ಅಧ್ಯಕ್ಷರಾದ ಡೇವ್ ಅರ್ನ್ಸ್‌ ಬರ್ಗರ್ ಅವರೊಂದಿಗೆ ಚರ್ಚೆ ನಡೆಸಿದರು. ಭಾರತದ ನವೀಕರಿಸಬಹುದಾದ ಇಂಧನ ಮಾರುಕಟ್ಟೆಯ ಪ್ರಮಾಣ, ನೀತಿ ಸ್ಥಿರತೆ ಮತ್ತು ವಾಸ್ತವಿಕ ಕಾರ್ಯಾಚರಣೆಗಳನ್ನು ಪ್ರತಿಬಿಂಬಿಸುವ ಸಮಗ್ರ ಚೌಕಟ್ಟುಗಳ ಅಗತ್ಯತೆಯ ಮೇಲೆ ಈ ಚರ್ಚೆಯು ಕೇಂದ್ರೀಕೃತವಾಗಿತ್ತು. ನವೀಕರಿಸಬಹುದಾದ ಯೋಜನೆಗಳಿಗಾಗಿ ಪ್ರತ್ಯೇಕ ಕ್ರೆಡಿಟ್ ರೇಟಿಂಗ್ ವಿಧಾನಗಳನ್ನು ಹೊಂದುವ ಬಗ್ಗೆಯೂ ಅವರು ಸಮಾಲೋಚಿಸಿದರು.

ಶ್ರೀ ಜೋಶಿಯವರು ಬ್ಲೂಮ್ ಎನರ್ಜಿ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿ ಅಮನ್ ಜೋಶಿ ಅವರನ್ನು ಭೇಟಿಯಾಗಿ, ಶುದ್ಧ, ವಿಶ್ವಾಸಾರ್ಹ ಮತ್ತು ವಿತರಿಸಿದ ವಿದ್ಯುತ್ ಪರಿಹಾರಗಳ ಬಗ್ಗೆ ಚರ್ಚಿಸಿದರು. ವಿಶೇಷವಾಗಿ ಕೈಗಾರಿಕಾ ಕ್ಲಸ್ಟರ್‌ ಗಳು ಮತ್ತು ಡೇಟಾ ಸೆಂಟರ್‌ ಗಳಿಗಾಗಿ ಫ್ಯುಯೆಲ್ ಸೆಲ್ ತಂತ್ರಜ್ಞಾನಗಳ ಬಳಕೆಯ ಕುರಿತು ಸಂವಾದ ನಡೆಸಿದರು.

 

*****


(रिलीज़ आईडी: 2217521) आगंतुक पटल : 16
इस विज्ञप्ति को इन भाषाओं में पढ़ें: English , Urdu , हिन्दी