ರೈಲ್ವೇ ಸಚಿವಾಲಯ
azadi ka amrit mahotsav

ವಿಶಾಲವಾದ ಲಗೇಜ್ ಸ್ಥಳ, ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾದ ಬರ್ತ್‌ಗಳು, ಅತ್ಯಾಧುನಿಕ ಹಾಗೂ ವಿಶಾಲವಾದ ಶೌಚಾಲಯಗಳ ವ್ಯವಸ್ಥೆ; ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಶೀಘ್ರದಲ್ಲೇ ಚಾಲನೆ


ಸಮಯಪಾಲನೆ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯ ಜೊತೆಗೆ ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ 'ಬಿಸಿನೆಸ್ ಕ್ಲಾಸ್' ದರ್ಜೆಯ ಸೌಕರ್ಯಗಳ ಕೊಡುಗೆ

ವಂದೇ ಭಾರತ್ ಸ್ಲೀಪರ್ ಪ್ರಯಾಣವನ್ನು ಸ್ಮರಣೀಯವಾಗಿಸಲು ಸ್ವಚ್ಛ, ನೈರ್ಮಲ್ಯಯುತ, ಆರೋಗ್ಯಕರ ಮತ್ತು ಆಯಾಸರಹಿತ ಪಯಣದ ಜೊತೆಗೆ ಸ್ಥಳೀಯ ಪಾಕಪದ್ಧತಿಯ ಸವಿ (ಟಿಕೆಟ್ ದರದಲ್ಲೇ ಒಳಗೊಂಡಿದೆ)

ಸುರಕ್ಷಿತ, ಪರಿಣಾಮಕಾರಿ ಮತ್ತು ವಿಶ್ವದರ್ಜೆಯ ರಾತ್ರಿ ಪ್ರಯಾಣದ ಅನುಭವಕ್ಕಾಗಿ ದಿವ್ಯಾಂಗ ಸ್ನೇಹಿ ಸ್ಥಳಾವಕಾಶ, ಮಾಡ್ಯುಲರ್ ಪ್ಯಾಂಟ್ರಿ ಮತ್ತು ಸೋಂಕುನಾಶಕ ತಂತ್ರಜ್ಞಾನದ ಅಳವಡಿಕೆ

ನಮ್ಮ ಪ್ರಯಾಣವನ್ನು ಇನ್ನಷ್ಟು ಸುರಕ್ಷಿತವಾಗಿಸಲು ಸ್ವದೇಶಿ ನಿರ್ಮಿತ 'ಕವಚ' ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆ, ಸುಧಾರಿತ ಅಗ್ನಿ ಸುರಕ್ಷತಾ ಕ್ರಮಗಳು ಮತ್ತು ಸಿಸಿಟಿವಿ ಕಣ್ಗಾವಲು

ರೈಲು ಸಿಬ್ಬಂದಿ ಮತ್ತು ಲೋಕೋ ಪೈಲಟ್‌ ಗಳಿಗಾಗಿ ಸುಧಾರಿತ ಸೌಲಭ್ಯಗಳ ವ್ಯವಸ್ಥೆ

प्रविष्टि तिथि: 14 JAN 2026 7:36PM by PIB Bengaluru

ಭಾರತೀಯ ರೈಲ್ವೆಯು ತನ್ನ ಆಧುನೀಕರಣದ ಪಯಣದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ಸ್ಥಾಪಿಸಲು ಸಿದ್ಧತೆ ನಡೆಸುತ್ತಿದೆ. ವಂದೇ ಭಾರತ್ ಎಕ್ಸ್‌ ಪ್ರೆಸ್‌ ನ 'ಸ್ಲೀಪರ್' ಆವೃತ್ತಿಯ ಪರಿಚಯದೊಂದಿಗೆ, ಭಾರತದಲ್ಲಿ ದೂರದ ರೈಲು ಪ್ರಯಾಣವು ಸಾಮಾನ್ಯ ಪ್ರಯಾಣಿಕರಿಗೆ ಇನ್ನಷ್ಟು ವೇಗವಾಗಿ, ಸುರಕ್ಷಿತವಾಗಿ ಮತ್ತು ಆರಾಮದಾಯಕವಾಗಿರಲಿದೆ. ಇಂದಿನ ಪ್ರಯಾಣಿಕರ ಬದಲಾಗುತ್ತಿರುವ ನಿರೀಕ್ಷೆಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಈ ವಂದೇ ಭಾರತ್ ಸ್ಲೀಪರ್ ರೈಲು, ರಾತ್ರಿಯ ಪಯಣವನ್ನು ಕೇವಲ ಗಮ್ಯಸ್ಥಾನವನ್ನು ತಲುಪುವ ಮಾರ್ಗವನ್ನಾಗಿಸದೆ, ಒಂದು ಆಹ್ಲಾದಕರ ಅನುಭವವನ್ನಾಗಿಸುವ ಗುರಿಯನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನ, ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಒಂದೆಡೆ ಸೇರಿಸುವ ಮೂಲಕ, ಕೈಗೆಟುಕುವ ದರದಲ್ಲಿ ಪ್ರೀಮಿಯಂ ಸೌಕರ್ಯಗಳನ್ನು ನೀಡಲು ಉದ್ದೇಶಿಸಲಾಗಿದೆ. 

ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಅಸ್ಸಾಂನ ಗುವಾಹಟಿ ಮತ್ತು ಪಶ್ಚಿಮ ಬಂಗಾಳದ ಹೌರಾ ನಡುವೆ ಸಂಚರಿಸಲಿದ್ದು, ಇದು ದೇಶದ ದೂರದ ಪ್ರಯಾಣದ ರಾತ್ರಿ ರೈಲು ಸಂಚಾರದಲ್ಲಿ ಒಂದು ಪರಿವರ್ತಕ ಹೆಜ್ಜೆಯಾಗಲಿದೆ. ಈ ರೈಲಿನ ಪರೀಕ್ಷಾರ್ಥ ಸಂಚಾರ, ತಪಾಸಣೆ ಮತ್ತು ಪ್ರಮಾಣೀಕರಣದ ಸಂಪೂರ್ಣ ಪ್ರಕ್ರಿಯೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಜನವರಿ ತಿಂಗಳಲ್ಲೇ, ಈ ಮಾರ್ಗದಲ್ಲಿ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಶೀಘ್ರದಲ್ಲೇ ಹಸಿರು ನಿಶಾನೆ ತೋರಿಸಲಾಗುವುದು. ಈ ಪ್ರಮುಖ ರೈಲ್ವೆ ಕಾರಿಡಾರ್ ಪೂರ್ವ ಮತ್ತು ಈಶಾನ್ಯ ಭಾರತವನ್ನು ಸಂಪರ್ಕಿಸುತ್ತದೆ. ವಿದ್ಯಾರ್ಥಿಗಳು, ಕಾರ್ಮಿಕರು, ವ್ಯಾಪಾರಿಗಳು ಮತ್ತು ಕುಟುಂಬಗಳು ಸೇರಿದಂತೆ ಪ್ರತಿದಿನ ಸಾವಿರಾರು ಪ್ರಯಾಣಿಕರು ಈ ಮಾರ್ಗವನ್ನು ಅವಲಂಬಿಸಿದ್ದಾರೆ. ಈ ಹೊಸ ಸೇವೆಯು ಎರಡೂ ಪ್ರದೇಶಗಳ ನಡುವಿನ ಸಂಪರ್ಕವನ್ನು ಗಣನೀಯವಾಗಿ ಸುಧಾರಿಸುವ ನಿರೀಕ್ಷೆಯಿದೆ ಮತ್ತು ಜನರು ರಾತ್ರಿಯ ರೈಲು ಪ್ರಯಾಣವನ್ನು ಅನುಭವಿಸುವ ರೀತಿಯನ್ನೇ ಬದಲಿಸಲಿದೆ. ಹೆಚ್ಚಿನ ವೇಗ ಮತ್ತು ಆಧುನಿಕ ವಿನ್ಯಾಸದೊಂದಿಗೆ, ವಂದೇ ಭಾರತ್ ಸ್ಲೀಪರ್ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದಲ್ಲದೆ, ಸುಗಮ ಮತ್ತು ಆರಾಮದಾಯಕ ಅನುಭವವನ್ನು ನೀಡುತ್ತದೆ. ದೂರದ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ಇದು ಉತ್ತಮ ವಿಶ್ರಾಂತಿ, ಸುಧಾರಿತ ಸುರಕ್ಷತೆ ಮತ್ತು ಹೆಚ್ಚು ವಿಶ್ವಾಸಾರ್ಹ ಪ್ರಯಾಣದ ಆಯ್ಕೆಯಾಗಲಿದೆ.

ಈ ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲಿನ ಪರಿಚಯವು ಭಾರತೀಯ ರೈಲ್ವೆಯ ಆಧುನಿಕ ಮತ್ತು ಪ್ರಯಾಣಿಕ ಸ್ನೇಹಿ ಸೇವೆಗಳ ಮೇಲಿನ ನಿರಂತರ ಗಮನವನ್ನು ಪ್ರತಿಬಿಂಬಿಸುತ್ತದೆ. ಇದು ವೇಗ, ಸೌಕರ್ಯ ಮತ್ತು ಸುರಕ್ಷತೆಯನ್ನು ಒಳಗೊಂಡ ರೈಲು ಪ್ರಯಾಣದ ಭವಿಷ್ಯದತ್ತ ಒಂದು ಪ್ರಮುಖ ಹೆಜ್ಜೆಯಾಗಿದ್ದು, ದೇಶಾದ್ಯಂತ ದೂರದ ಪ್ರಯಾಣಗಳಿಗೆ ರೈಲ್ವೆಯನ್ನು ಮೊದಲ ಆದ್ಯತೆಯ ಆಯ್ಕೆಯನ್ನಾಗಿ ಮಾಡಲಿದೆ.

ಪ್ರಯಾಣಿಕರ ಸೌಕರ್ಯ ಮತ್ತು ವಿಶ್ವದರ್ಜೆಯ ಸೌಲಭ್ಯಗಳು

ವಿಶೇಷವಾಗಿ ದೂರದ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾದ ವಂದೇ ಭಾರತ್ ಸ್ಲೀಪರ್, ಪ್ರಯಾಣಿಕರ ಸೌಕರ್ಯವನ್ನೇ ತನ್ನ ವಿನ್ಯಾಸದ ಕೇಂದ್ರಬಿಂದುವಾಗಿಸಿಕೊಂಡಿದೆ. ಈ ರೈಲು ಒಟ್ಟು 16 ಆಧುನಿಕ ಬೋಗಿಗಳನ್ನು ಹೊಂದಿದ್ದು, ಒಟ್ಟು 823 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ. ಇದು ವೇಗ, ಸ್ಥಳಾವಕಾಶ ಮತ್ತು ಆರಾಮದಾಯಕತೆಯ ಅದ್ಭುತ ಸಮ್ಮಿಲನವನ್ನು ನೀಡುತ್ತದೆ.

ಇದರ ಸುಧಾರಿತ 'ಏರೋಡೈನಾಮಿಕ್' (Aerodynamic) ವಿನ್ಯಾಸವು ಗಾಳಿಯ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ರೈಲು ಹೆಚ್ಚಿನ ವೇಗದಲ್ಲಿದ್ದರೂ ಸ್ಥಿರ ಮತ್ತು ಸುಗಮ ಪಯಣವನ್ನು ಖಚಿತಪಡಿಸುತ್ತದೆ. ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ ಈ ರೈಲು, ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿತಗೊಳಿಸುವುದಲ್ಲದೆ, ನಿಶ್ಯಬ್ದ ಮತ್ತು ಉನ್ನತ ಮಟ್ಟದ ಪ್ರಯಾಣದ ಅನುಭವವನ್ನು ನೀಡುತ್ತದೆ.

ದೇಹದ ರಚನೆಗೆ ಪೂರಕವಾಗಿ ಹಾಗೂ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾದ ಮಲಗುವ ಸೀಟುಗಳು ದೇಹಕ್ಕೆ ಉತ್ತಮ ಆಸರೆಯನ್ನು ನೀಡುತ್ತವೆ, ಇದರಿಂದ ರಾತ್ರಿಯ ಪ್ರಯಾಣವು ಹೆಚ್ಚು ಸುಖಕರವಾಗಿರುತ್ತದೆ. ಬೋಗಿಗಳ ನಡುವೆ ಇರುವ ಸ್ವಯಂಚಾಲಿತ ಬಾಗಿಲುಗಳು ಮತ್ತು ಸಂಪರ್ಕ ಹಾದಿಗಳು ರೈಲಿನ ಒಳಗಡೆ ಸುರಕ್ಷಿತ ಮತ್ತು ಸುಲಭ ಸಂಚಾರವನ್ನು ಖಚಿತಪಡಿಸುತ್ತವೆ. ಇದರಲ್ಲಿರುವ ಸುಧಾರಿತ ಸಸ್ಪೆನ್ಷನ್ ವ್ಯವಸ್ಥೆಯು ಧಕ್ಕೆ ಮತ್ತು ಕಂಪನಗಳನ್ನು ಕನಿಷ್ಠಗೊಳಿಸುವ ಮೂಲಕ ಪ್ರಯಾಣದ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸುತ್ತದೆ, ಇದರಿಂದ ಪ್ರಯಾಣಿಕರು ಯಾವುದೇ ಆಯಾಸವಿಲ್ಲದೆ ಶಾಂತಿಯುತವಾಗಿ ಪಯಣಿಸಬಹುದಾಗಿದೆ.

ವಂದೇ ಭಾರತ್ ಸ್ಲೀಪರ್ ರೈಲುಗಳು ಧಾರಾಳವಾದ ಮತ್ತು ವ್ಯವಸ್ಥಿತವಾದ ಲಗೇಜ್ ಸ್ಥಳವನ್ನು ಒದಗಿಸುತ್ತವೆ. ಸಣ್ಣ ಬ್ಯಾಗ್‌ಗಳಿಗಾಗಿ ಮೇಲ್ಭಾಗದ ರ‍್ಯಾಕ್‌ ಗಳು ಮತ್ತು ಬರ್ತ್‌ ಗಳ ಕೆಳಗೆ ಸಂಗ್ರಹಣಾ ಸ್ಥಳವಿದ್ದರೆ, ದೊಡ್ಡ ಸೂಟ್‌ ಕೇಸ್‌ ಗಳಿಗಾಗಿ ಬೋಗಿಯ ಪ್ರವೇಶದ್ವಾರಗಳ ಬಳಿಯೇ ಪ್ರತ್ಯೇಕ ಜಾಗವನ್ನು ನಿಗದಿಪಡಿಸಲಾಗಿದೆ. ಇದು ರೈಲಿನ ಒಳಾಂಗಣವು ಕಿಕ್ಕಿರಿಯದೆ, ಅಚ್ಚುಕಟ್ಟಾಗಿ ಮತ್ತು ಆರಾಮದಾಯಕವಾಗಿರುವಂತೆ ನೋಡಿಕೊಳ್ಳುತ್ತದೆ. ದೂರದ ಪ್ರಯಾಣಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ರೈಲು, ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾದ ಸ್ಲೀಪರ್ ಬರ್ತ್‌ ಗಳು, ಯು ಎಸ್‌ ಬಿ ಚಾರ್ಜಿಂಗ್ ಪೋರ್ಟ್‌ ಗಳು ಮತ್ತು ಸುಧಾರಿತ ಭದ್ರತಾ ವ್ಯವಸ್ಥೆಗಳನ್ನು ಒಳಗೊಂಡಿದೆ. ಇದರೊಂದಿಗೆ ದಿವ್ಯಾಂಗ ಸ್ನೇಹಿ ವ್ಯವಸ್ಥೆಗಳು, ಮಾಡ್ಯುಲರ್ ಪ್ಯಾಂಟ್ರಿಗಳು ಮತ್ತು ಸುಧಾರಿತ ಅಗ್ನಿ ಸುರಕ್ಷತಾ ವ್ಯವಸ್ಥೆಗಳು ಪ್ರಯಾಣಿಕರ ಸೌಕರ್ಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಒಟ್ಟಾರೆಯಾಗಿ, ಇದು ಸುರಕ್ಷಿತ, ಪರಿಣಾಮಕಾರಿ ಮತ್ತು ಸುಧಾರಿತ ಸೌಲಭ್ಯಗಳೊಂದಿಗೆ ಸುಖಕರವಾದ ರಾತ್ರಿ ಪ್ರಯಾಣದ ಅನುಭವವನ್ನು ನೀಡುತ್ತದೆ.

ಸ್ವಚ್ಛ, ನೈರ್ಮಲ್ಯ ಮತ್ತು ಆರೋಗ್ಯ ಸ್ನೇಹಿ ಪ್ರಯಾಣ

ವಂದೇ ಭಾರತ್ ಸ್ಲೀಪರ್ ಪ್ರಯಾಣದಲ್ಲಿ ಉನ್ನತ ಮಟ್ಟದ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ  ವಿಶೇಷ ಒತ್ತು ನೀಡಲಾಗಿದೆ. ಪ್ರಯಾಣದ ಉದ್ದಕ್ಕೂ ಉತ್ತಮ ನೈರ್ಮಲ್ಯವನ್ನು ಕಾಯ್ದುಕೊಳ್ಳಲು ಈ ರೈಲಿನಲ್ಲಿ ಆಧುನಿಕ ಶೌಚಾಲಯಗಳು ಮತ್ತು ಸುಧಾರಿತ ಸೋಂಕುನಾಶಕ ತಂತ್ರಜ್ಞಾನವನ್ನು ಬಳಸಲಾಗಿದೆ. ಇದು ಪ್ರಯಾಣಿಕರಿಗೆ ಸ್ವಚ್ಛ ಮತ್ತು ಸುರಕ್ಷಿತ ಪರಿಸರವನ್ನು ಖಚಿತಪಡಿಸುತ್ತದೆ. ವಿಶೇಷವಾಗಿ ಸುದೀರ್ಘ ಸಮಯದ ರಾತ್ರಿಯ ಪಯಣದಲ್ಲಿ ಆರೋಗ್ಯಕರ ವಾತಾವರಣವು ಅತ್ಯಂತ ಅವಶ್ಯಕವಾಗಿದೆ.

ಹೌರಾ–ಗುವಾಹಟಿ: ಒಂದು ಪ್ರಮುಖ ರೈಲ್ವೆ ಕಾರಿಡಾರ್

ಹೌರಾ–ಗುವಾಹಟಿ ಮಾರ್ಗವು ದೇಶದ ಅತ್ಯಂತ ಪ್ರಮುಖ ರೈಲ್ವೆ ಕಾರಿಡಾರ್‌ ಗಳಲ್ಲಿ ಒಂದಾಗಿದ್ದು, ಪ್ರತಿದಿನ ಲಕ್ಷಾಂತರ ಪ್ರಯಾಣಿಕರ ಸಂಚಾರಕ್ಕೆ ಆಧಾರವಾಗಿದೆ. ವಂದೇ ಭಾರತ್ ಸ್ಲೀಪರ್ ರೈಲುಗಳು ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಪ್ರಯಾಣಿಕರಿಗೆ ವೇಗವಾದ, ಆಧುನಿಕ ಮತ್ತು ವಿಶ್ವಾಸಾರ್ಹ ಪ್ರಯಾಣದ ಆಯ್ಕೆಯನ್ನು ನೀಡಲಿವೆ.

ಈ ರೈಲು ಸೇವೆಯಿಂದ ಪಶ್ಚಿಮ ಬಂಗಾಳದ ಕೂಚ್ ಬೆಹಾರ್, ಜಲ್ಪೈಗುರಿ, ಮಾಲ್ಡಾ, ಮುರ್ಷಿದಾಬಾದ್, ಪೂರ್ವ ಬರ್ಧಮಾನ್, ಹೂಗ್ಲಿ ಮತ್ತು ಹೌರಾ ಜಿಲ್ಲೆಗಳಿಗೆ ಹಾಗೂ ಅಸ್ಸಾಂನ ಕಾಮರೂಪ್ ಮೆಟ್ರೋಪಾಲಿಟನ್ ಮತ್ತು ಬೊಂಗೈಗಾಂವ್ ಜಿಲ್ಲೆಗಳಿಗೆ ನೇರ ಪ್ರಯೋಜನವಾಗಲಿದೆ. ಈ ಸೇವೆಯು ಸಾಮಾನ್ಯ ಪ್ರಯಾಣಿಕರು, ವಿದ್ಯಾರ್ಥಿಗಳು, ವೃತ್ತಿಪರರು, ವಲಸೆ ಕಾರ್ಮಿಕರು, ವ್ಯಾಪಾರಿಗಳು ಮತ್ತು ಧಾರ್ಮಿಕ ಯಾತ್ರಿಕರಿಗೆ ವಿಶೇಷವಾಗಿ ಸಹಕಾರಿಯಾಗಲಿದೆ. ಪ್ರಸಿದ್ಧ ಪುಣ್ಯಕ್ಷೇತ್ರಗಳಾದ ಕಾಳೀಘಾಟ್ ದೇವಸ್ಥಾನ ಮತ್ತು ಕಾಮಾಖ್ಯ ದೇವಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಪ್ರಯಾಣವು ಈಗ ಇನ್ನಷ್ಟು ಸುಲಭ, ಸುರಕ್ಷಿತ ಮತ್ತು ಅನುಕೂಲಕರವಾಗಲಿದೆ.

ಹೌರಾ-ಗುವಾಹಟಿ ಮಾರ್ಗದಲ್ಲಿ ಸಂಚರಿಸಲಿರುವ ಹೊಸ ವಂದೇ ಭಾರತ್ ಸ್ಲೀಪರ್ ರೈಲು, ಪ್ರಸ್ತುತ ಇರುವ ಅತ್ಯಂತ ವೇಗದ ಸೇವೆಯಾದ ಸರೈಘಾಟ್ ಎಕ್ಸ್‌ಪ್ರೆಸ್‌ ಗೆ (12345/12346) ಹೋಲಿಸಿದರೆ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದೆ. ಹೌರಾ ಮತ್ತು ಗುವಾಹಟಿ/ಕಾಮಾಖ್ಯ ನಡುವಿನ ಅಂದಾಜು 966 ಕಿ.ಮೀ ದೂರವನ್ನು ಕ್ರಮಿಸಲು ಸರೈಘಾಟ್ ಎಕ್ಸ್‌ಪ್ರೆಸ್ ಸುಮಾರು 17 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ವಂದೇ ಭಾರತ್ ಸ್ಲೀಪರ್ ರೈಲು ಕಾರ್ಯಾರಂಭ ಮಾಡಿದ ನಂತರ ಇದೇ ಪ್ರಯಾಣವನ್ನು ಸುಮಾರು 14 ಗಂಟೆಗಳಲ್ಲಿ ಪೂರ್ಣಗೊಳಿಸುವ ನಿರೀಕ್ಷೆಯಿದೆ, ಇದು ಈ ಮಾರ್ಗದಲ್ಲಿ ಸುಮಾರು 3 ಗಂಟೆಗಳ ಸಮಯವನ್ನು ಉಳಿಸುತ್ತದೆ. ಕಡಿಮೆಯಾದ ಪ್ರಯಾಣದ ಸಮಯವು ಪ್ರಾದೇಶಿಕ ವ್ಯಾಪಾರ, ಪ್ರವಾಸೋದ್ಯಮ, ಉದ್ಯೋಗ ಮತ್ತು ಸಾಮಾಜಿಕ ಸಂಪರ್ಕಕ್ಕೆ ಉತ್ತೇಜನ ನೀಡಲಿದ್ದು, ವಿವಿಧ ಪ್ರದೇಶಗಳ ನಡುವಿನ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸಲಿದೆ.

ಕೈಗೆಟುಕುವ ದರದಲ್ಲಿ ಪ್ರೀಮಿಯಂ ಪ್ರಯಾಣ

ವಿಮಾನ ಪ್ರಯಾಣಕ್ಕೆ ಹೋಲಿಸಿದರೆ ಕಡಿಮೆ ವೆಚ್ಚದಾಯಕವಾಗಿರುವುದು ವಂದೇ ಭಾರತ್ ಸ್ಲೀಪರ್‌ನ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ವಿಮಾನಯಾನ ಸಂಸ್ಥೆಗಳಿಗಿಂತ ಗಣನೀಯವಾಗಿ ಕಡಿಮೆ ದರದಲ್ಲಿ ಪ್ರೀಮಿಯಂ ಸೌಕರ್ಯಗಳನ್ನು ನೀಡುವಂತೆ ಈ ಪ್ರಸ್ತಾವಿತ ದರಗಳನ್ನು ವಿನ್ಯಾಸಗೊಳಿಸಲಾಗಿದೆ.

ಅಂದಾಜು ದರಗಳು 3 AC ಗೆ ಸುಮಾರು ₹2300, 2 AC ಗೆ ₹3000 ಮತ್ತು ಪ್ರಥಮ ದರ್ಜೆ AC ಗೆ ₹3600 ಆಗಿರಲಿವೆ. ಈ ದರಗಳು ವಂದೇ ಭಾರತ್ ಸ್ಲೀಪರ್ ಅನ್ನು ಕೈಗೆಟುಕುವ ಬೆಲೆ ಹಾಗೂ ಉತ್ತಮ ಗುಣಮಟ್ಟದ ಸೌಲಭ್ಯ ಮತ್ತು ಸೇವೆಗಳನ್ನು ಒಳಗೊಂಡಿರುವ ಆಕರ್ಷಕ ಆಯ್ಕೆಯನ್ನಾಗಿ ಮಾಡುತ್ತವೆ.

ಪ್ರಯಾಣದಲ್ಲಿ ಪ್ರಾದೇಶಿಕ ರುಚಿಯ ಅನುಭವ

ಪ್ರಯಾಣಿಕರು ರೈಲಿನಲ್ಲಿಯೇ ಉತ್ತಮ ಗುಣಮಟ್ಟದ ಕೇಟರಿಂಗ್ ಸೇವೆಗಳನ್ನು ಆನಂದಿಸಬಹುದು, ಇದು ದೀರ್ಘಾವಧಿಯ ರಾತ್ರಿ ಪ್ರಯಾಣವನ್ನು ಹೆಚ್ಚು ನಿರಾಳ ಮತ್ತು ಒತ್ತಡರಹಿತವಾಗಿಸುತ್ತದೆ. ವಂದೇ ಭಾರತ್ ಸ್ಲೀಪರ್ ರೈಲಿನ ಪ್ರಯಾಣಿಕರು ತಮ್ಮ ಪಯಣದ ಅವಧಿಯಲ್ಲಿ ಆಯಾ ಪ್ರದೇಶದ ವಿಶಿಷ್ಟ ಖಾದ್ಯಗಳನ್ನು ಸವಿಯಬಹುದಾಗಿದೆ. ಗುವಾಹಟಿಯಿಂದ ಹೊರಡುವ ರೈಲಿನಲ್ಲಿ ಅಧಿಕೃತ ಅಸ್ಸಾಮಿ ಪಾಕಪದ್ಧತಿಯನ್ನು ಸವಿಯಬಹುದು, ಹಾಗೆಯೇ ಕೋಲ್ಕತ್ತಾದಿಂದ ಹೊರಡುವ ರೈಲಿನಲ್ಲಿ ಸಾಂಪ್ರದಾಯಿಕ ಬೆಂಗಾಲಿ ಭಕ್ಷ್ಯಗಳನ್ನು ನೀಡಲಾಗುತ್ತದೆ. ಇದು ಪ್ರಯಾಣದ ಸಮಯದಲ್ಲಿ ಅದ್ಭುತ ಮತ್ತು ಸಾಂಸ್ಕೃತಿಕವಾಗಿ ಸಮೃದ್ಧವಾದ ಊಟದ ಅನುಭವವನ್ನು ಖಚಿತಪಡಿಸುತ್ತದೆ.

ಸಿಬ್ಬಂದಿ ಬೆಂಬಲ ಮತ್ತು ಸುಗಮ ಕಾರ್ಯಾಚರಣೆ

ವಂದೇ ಭಾರತ್ ಸ್ಲೀಪರ್ ರೈಲ್ವೆ ಸಿಬ್ಬಂದಿಯ ಕೆಲಸದ ಗುಣಮಟ್ಟದಲ್ಲೂ ಗಮನಾರ್ಹ ಸುಧಾರಣೆಗಳನ್ನು ತಂದಿದೆ. ಲೋಕೋ ಪೈಲಟ್‌ ಗಳಿಗಾಗಿ (ರೈಲು ಚಾಲಕರು), ಇದರಲ್ಲಿ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾದ ಚಾಲಕರ ಕ್ಯಾಬಿನ್‌ ಗಳನ್ನು ಅಳವಡಿಸಲಾಗಿದೆ. ಇವು ಸುದೀರ್ಘ ಕೆಲಸದ ಅವಧಿಯಲ್ಲಿ ಉಂಟಾಗುವ ದೈಹಿಕ ಒತ್ತಡ ಮತ್ತು ಆಯಾಸವನ್ನು ಕಡಿಮೆ ಮಾಡುತ್ತವೆ. ಇದರೊಂದಿಗೆ ಚಾಲಕರಿಗಾಗಿ ಸುಸಜ್ಜಿತವಾದ ಪ್ರತ್ಯೇಕ ಶೌಚಾಲಯಗಳನ್ನು ಒದಗಿಸಲಾಗಿದ್ದು, ಇದು ಅವರ ನೈರ್ಮಲ್ಯ ಮತ್ತು ಅನುಕೂಲತೆಯನ್ನು ಖಚಿತಪಡಿಸುತ್ತದೆ.

ಟಿ.ಟಿ.ಇ (TTE) ಮತ್ತು ಪ್ಯಾಂಟ್ರಿ ಸಿಬ್ಬಂದಿಯಂತಹ ರೈಲಿನೊಳಗಿನ ಸಿಬ್ಬಂದಿಗಾಗಿ ಪ್ರತ್ಯೇಕ ಕ್ಯಾಬಿನ್‌ ಗಳು ಮತ್ತು ಕಂಪಾರ್ಟ್‌ ಮೆಂಟ್‌ ಗಳನ್ನು ಒದಗಿಸಲಾಗಿದೆ. ಇದರೊಂದಿಗೆ, ಕೆಲಸದ ಅವಧಿಯಲ್ಲಿ ಸಿಬ್ಬಂದಿ ಸರಿಯಾದ ವಿಶ್ರಾಂತಿ ಪಡೆಯಲು ಪೂರಕವಾಗುವಂತೆ ಸುಧಾರಿತ ಬರ್ತ್‌ ಗಳು ಮತ್ತು ಸೌಲಭ್ಯಗಳನ್ನು ನೀಡಲಾಗಿದೆ. ಇದು ಸಿಬ್ಬಂದಿಯ ಕಾರ್ಯದಕ್ಷತೆ, ಜಾಗರೂಕತೆ ಮತ್ತು ಒಟ್ಟಾರೆ ಸೇವೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಸ್ವದೇಶಿ ತಂತ್ರಜ್ಞಾನದೊಂದಿಗೆ ಸುರಕ್ಷತೆ

ಸುರಕ್ಷತೆಗೆ ಇಲ್ಲಿ ಮೊದಲ ಆದ್ಯತೆ ನೀಡಲಾಗಿದೆ. ವಂದೇ ಭಾರತ್ ಸ್ಲೀಪರ್ ರೈಲು ಸ್ವದೇಶಿ ನಿರ್ಮಿತ 'ಕವಚ' (Kavach) ಎಂಬ ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ. ಇದು ರೈಲುಗಳ ನಡುವಿನ ಡಿಕ್ಕಿಯನ್ನು ತಡೆಯುವಲ್ಲಿ ಮತ್ತು ರೈಲಿನ ಸುರಕ್ಷಿತ ಕಾರ್ಯಾಚರಣೆಯನ್ನು ಖಚಿತಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

ರೈಲಿನಲ್ಲಿ ಸ್ವಯಂಚಾಲಿತ ಬಾಗಿಲುಗಳು, ಸುಧಾರಿತ ಅಗ್ನಿ ಸುರಕ್ಷತಾ ಕ್ರಮಗಳು, ಸೋಂಕುನಾಶಕ ತಂತ್ರಜ್ಞಾನ ಮತ್ತು ಎಲ್ಲಾ ಬೋಗಿಗಳಲ್ಲಿ ಸಿಸಿಟಿವಿ (CCTV) ಕಣ್ಗಾವಲಿನಂತಹ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಸುಧಾರಿತ ತುರ್ತು 'ಟಾಕ್-ಬ್ಯಾಕ್' (Talk-back) ವ್ಯವಸ್ಥೆಯು ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರು ರೈಲು ಸಿಬ್ಬಂದಿಯೊಂದಿಗೆ ನೇರವಾಗಿ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ, ಇದರಿಂದ ತ್ವರಿತ ಸಹಾಯ ದೊರೆಯುವುದು ಖಚಿತವಾಗುತ್ತದೆ. ಈ ಎಲ್ಲಾ ವ್ಯವಸ್ಥೆಗಳು ಒಟ್ಟಾಗಿ ರೈಲ್ವೆ ಸುರಕ್ಷತೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದ್ದು, ಪ್ರಯಾಣಿಕರಿಗೆ ಸಂಪೂರ್ಣ ನೆಮ್ಮದಿಯ ಪ್ರಯಾಣದ ಭರವಸೆ ನೀಡುತ್ತವೆ.

ಸಮಯಪಾಲನೆ ಮತ್ತು ವಿಶ್ವಾಸಾರ್ಹತೆ

ಹೆಚ್ಚಿನ ವೇಗದ ಸಾಮರ್ಥ್ಯ, ಸುಧಾರಿತ ರೈಲು ನಿಯಂತ್ರಣ ವ್ಯವಸ್ಥೆಗಳು ಮತ್ತು ಕಾರ್ಯಾಚರಣೆಯ ದಕ್ಷತೆಯು ಹೆಚ್ಚಿನ ಸಮಯಪಾಲನೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸುತ್ತದೆ. ತ್ವರಿತವಾಗಿ ವೇಗವನ್ನು ಹೆಚ್ಚಿಸುವ ಮತ್ತು ಕಡಿಮೆ ಮಾಡುವ ಸಾಮರ್ಥ್ಯವು ನಿಲ್ದಾಣಗಳಲ್ಲಿ ವ್ಯಯವಾಗುವ ಸಮಯವನ್ನು ಉಳಿಸುತ್ತದೆ ಮತ್ತು ನಿಗದಿತ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಹಾಯ ಮಾಡುತ್ತದೆ. ಇದು ದೂರದ ಪ್ರಯಾಣದ ರಾತ್ರಿ ಪಯಣವನ್ನು ಹೆಚ್ಚು ಅಂದಾಜಿಸಬಹುದಾದ ಮತ್ತು ಅವಲಂಬಿತವಾಗಿಸುತ್ತದೆ.

ರೈಲು ಪ್ರಯಾಣದ ಭವಿಷ್ಯ

ವಂದೇ ಭಾರತ್ ಸ್ಲೀಪರ್ ಆಧುನಿಕ ಮತ್ತು ಪ್ರಯಾಣಿಕ ಸ್ನೇಹಿ ವಿನ್ಯಾಸದೊಂದಿಗೆ ರಾತ್ರಿಯ ರೈಲು ಪ್ರಯಾಣವನ್ನು ಮರು ವ್ಯಾಖ್ಯಾನಿಸುತ್ತಿದೆ. ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾದ ಸೀಟುಗಳು ಮತ್ತು ಬರ್ತ್‌ ಗಳು ಸುದೀರ್ಘ ಪ್ರಯಾಣದ ಸಮಯದಲ್ಲಿ ಹೆಚ್ಚಿನ ಆರಾಮವನ್ನು ನೀಡುತ್ತವೆ. ಅಚ್ಚುಕಟ್ಟಾದ ಲಗೇಜ್ ವ್ಯವಸ್ಥೆ, ಆಯಾ ಪ್ರದೇಶದ ವಿಶಿಷ್ಟ ಖಾದ್ಯಗಳು ಹಾಗೂ ರೈಲು ಸಿಬ್ಬಂದಿ ಮತ್ತು ಲೋಕೋ ಪೈಲಟ್‌ ಗಳಿಗೆ ಒದಗಿಸಲಾದ ಸುಧಾರಿತ ಸೌಲಭ್ಯಗಳು ಆಯಾಸವನ್ನು ಕಡಿಮೆ ಮಾಡಲು ಮತ್ತು ಸುಗಮ ಸೇವೆಯನ್ನು ಖಚಿತಪಡಿಸಲು ಸಹಾಯ ಮಾಡುತ್ತವೆ. ಒಟ್ಟಾರೆಯಾಗಿ, ಈ ಎಲ್ಲಾ ವೈಶಿಷ್ಟ್ಯಗಳು ರೈಲು ಪ್ರಯಾಣದ ಭವಿಷ್ಯದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕಾರ್ಯಾಚರಣೆಯ ದಕ್ಷತೆಯು ಜೊತೆಗೂಡಿ ಪ್ರಯಾಣಿಕರ ಒಟ್ಟಾರೆ ಅನುಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತವೆ.

 

*****


(रिलीज़ आईडी: 2214759) आगंतुक पटल : 8
इस विज्ञप्ति को इन भाषाओं में पढ़ें: English , हिन्दी , Marathi