ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಸ್ವಚ್ಛ ಇಂಧನ ಹೂಡಿಕೆ ಮತ್ತು ಸಹಕಾರಕ್ಕೆ ಒತ್ತು ನೀಡುವ ಮೂಲಕ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರ ಅಬುಧಾಬಿ ಭೇಟಿ ಮುಕ್ತಾಯ
ಉನ್ನತ ಮಟ್ಟದ ಸಭೆಗಳು ಮತ್ತು ಹೂಡಿಕೆ ಚರ್ಚೆಗಳ ಮೂಲಕ ಸ್ವಚ್ಛ ಇಂಧನ ಕ್ಷೇತ್ರದಲ್ಲಿ ಸಹಯೋಗ ವೃದ್ಧಿ
ಯುಎಇಯ ಬಿಎಪಿಎಸ್ ಹಿಂದೂ ಮಂದಿರ ಮತ್ತು ಇತರ ಸಾಂಸ್ಕೃತಿಕ ತಾಣಗಳಿಗೆ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಭೇಟಿ; ಜನಸಂಪರ್ಕ ಬಾಂಧವ್ಯದ ಕುರಿತು ವಿಶೇಷ ಒತ್ತು
प्रविष्टि तिथि:
14 JAN 2026 6:02PM by PIB Bengaluru
ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಅಬುಧಾಬಿಯಲ್ಲಿ (ಯುಎಇ) ನಡೆದ ಅಂತಾರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆಯ (IRENA) 16ನೇ ಅಧಿವೇಶನದಲ್ಲಿ ಪಾಲ್ಗೊಂಡು, ತಮ್ಮ ಅಧಿಕೃತ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಭಾರತದ ವೇಗವಾಗಿ ಬೆಳೆಯುತ್ತಿರುವ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಸಹಕಾರ ಮತ್ತು ಹೂಡಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಅವರು ಈ ಭೇಟಿಯ ವೇಳೆ ಹಲವಾರು ಉನ್ನತ ಮಟ್ಟದ ಮಾತುಕತೆಗಳನ್ನು ನಡೆಸಿದರು.

ಕೇಂದ್ರ ಸಚಿವರಾದ ಜೋಶಿ ಅವರು ಅಬುಧಾಬಿಯಲ್ಲಿ ಯುಎಇ ಮೂಲದ ಹಾಗೂ ಜಾಗತಿಕ ಹಣಕಾಸು ಸಂಸ್ಥೆಗಳು, ಹೂಡಿಕೆದಾರರು ಮತ್ತು ನವೀಕರಿಸಬಹುದಾದ ಇಂಧನ ಅಭಿವರ್ಧಕರೊಂದಿಗೆ ನವೀಕರಿಸಬಹುದಾದ ಇಂಧನ ಹೂಡಿಕೆ ದುಂಡುಮೇಜಿನ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಚರ್ಚೆಗಳು ವಿಕೇಂದ್ರೀಕೃತ ಸೌರಶಕ್ತಿ, ಇಪಿಸಿ (EPC), ಸ್ವಚ್ಛ ಇಂಧನ ಉತ್ಪಾದನೆ, ಇಂಧನ ಸಂಗ್ರಹಣೆ, ಹಸಿರು ಹೈಡ್ರೋಜನ್, ತ್ಯಾಜ್ಯದಿಂದ ಇಂಧನ ತಯಾರಿಕೆ ಮತ್ತು ಸುಸ್ಥಿರ ಹಣಕಾಸು ಸೇರಿದಂತೆ ಸ್ವಚ್ಛ ಇಂಧನದ ವಿವಿಧ ಕ್ಷೇತ್ರಗಳನ್ನು ಒಳಗೊಂಡಿದ್ದವು. ಶ್ರೀ ಜೋಶಿಯವರು ಭಾರತದ ನವೀಕರಿಸಬಹುದಾದ ಇಂಧನ ಬೆಳವಣಿಗೆಯ ಗಾಥೆಯನ್ನು ಹಂಚಿಕೊಂಡರು ಮತ್ತು 'ಮೇಕ್ ಇನ್ ಇಂಡಿಯಾ' ಉಪಕ್ರಮದ ಅಡಿಯಲ್ಲಿ ಯೋಜನಾ ಅಭಿವೃದ್ಧಿ, ಹಣಕಾಸು ಮತ್ತು ಉತ್ಪಾದನೆಯಲ್ಲಿ ಲಭ್ಯವಿರುವ ಮಹತ್ವದ ಅವಕಾಶಗಳನ್ನು ಉಲ್ಲೇಖಿಸಿದರು, ಇದು ಭಾರತವನ್ನು ವಿಶ್ವದ ಅತ್ಯಂತ ಆಕರ್ಷಕ ದೀರ್ಘಕಾಲೀನ ಸ್ವಚ್ಛ ಇಂಧನ ಹೂಡಿಕೆ ತಾಣಗಳಲ್ಲಿ ಒಂದಾಗಿ ಬಿಂಬಿಸಿದೆ.
ಶ್ರೀ ಜೋಶಿಯವರು ಅಬುಧಾಬಿ ಸಸ್ಟೈನಬಿಲಿಟಿ ವೀಕ್ ನಲ್ಲಿಯೂ ಭಾಗವಹಿಸಿದರು, ಇದು ಸುಸ್ಥಿರ ಅಭಿವೃದ್ಧಿಯನ್ನು ಮುನ್ನಡೆಸಲು ಮತ್ತು ಪರಸ್ಪರ ಸಂಬಂಧಿತ ಕ್ಷೇತ್ರಗಳಲ್ಲಿ ಭವಿಷ್ಯಕ್ಕೆ ಪೂರಕವಾದ ಪರಿಹಾರಗಳನ್ನು ಉತ್ತೇಜಿಸಲು ಸರ್ಕಾರ, ಉದ್ಯಮ, ಹಣಕಾಸು ಮತ್ತು ನಾಗರಿಕ ಸಮಾಜದ ನಾಯಕರನ್ನು ಒಟ್ಟುಗೂಡಿಸುವ ಯುಎಇಯ ಜಾಗತಿಕ ವೇದಿಕೆಯಾಗಿದೆ. ಈ ಕಾರ್ಯಕ್ರಮದ ನಡುವೆ, ಅವರು ಜಾಗತಿಕ ಸ್ವಚ್ಛ ಇಂಧನ ಪರಿಸರ ವ್ಯವಸ್ಥೆಯ ವಿವಿಧ ಪಾಲುದಾರರೊಂದಿಗೆ ಸಂವಾದ ನಡೆಸಿದರು ಮತ್ತು ನ್ಯಾಯೋಚಿತ, ಸಮಗ್ರ ಹಾಗೂ ವಿಸ್ತರಿಸಬಹುದಾದ ಇಂಧನ ಪರಿವರ್ತನೆಗೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.
ತಮ್ಮ ಯುಎಇ ಭೇಟಿಯ ಭಾಗವಾಗಿ, ಕೇಂದ್ರ ಸಚಿವರು ಅಲ್ಲಿನ ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಉತ್ಸಾಹಿ ಕನ್ನಡ ಸಮುದಾಯದವರನ್ನು ಭೇಟಿ ಮಾಡಿದ ಅವರು, 'ಕನ್ನಡ ಪಾಠಶಾಲೆ'ಯಂತಹ ಉಪಕ್ರಮಗಳ ಮೂಲಕ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಲು ಅವರು ಮಾಡುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು. ಈ ಕನ್ನಡ ಪಾಠಶಾಲೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿಯೂ ಪ್ರಸ್ತಾಪಿಸಿದ್ದನ್ನು ಅವರು ಸ್ಮರಿಸಿದರು.
ಭೇಟಿಯ ಅವಧಿಯಲ್ಲಿ ಶ್ರೀ ಜೋಶಿಯವರು ಅಬುಧಾಬಿಯ ಬಿಎಪಿಎಸ್ (BAPS) ಹಿಂದೂ ಮಂದಿರ, ದುಬೈನ ಜೆಬೆಲ್ ಅಲಿ ಗ್ರಾಮದಲ್ಲಿರುವ ಹಿಂದೂ ದೇವಾಲಯ ಮತ್ತು ದುಬೈನ ಗುರುನಾನಕ್ ದರ್ಬಾರ್ ಗುರುದ್ವಾರ ಸೇರಿದಂತೆ ಪ್ರಮುಖ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಈ ಭೇಟಿಗಳು ಭಾರತ ಮತ್ತು ಯುಎಇ ನಡುವಿನ ಬಲವಾದ ಜನಸಂಪರ್ಕ ಹಾಗೂ ಸೌಹಾರ್ದತೆ, ಸಮನ್ವಯತೆ ಮತ್ತು ಪರಸ್ಪರ ಗೌರವದ ಹಂಚಿಕೆಯ ಮೌಲ್ಯಗಳನ್ನು ಪ್ರತಿಬಿಂಬಿಸಿದವು.

ಇದಕ್ಕೂ ಮುನ್ನ ಅಬುಧಾಬಿಯಲ್ಲಿ ನಡೆದ ಅಂತಾರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆಯ (IRENA) 16ನೇ ಅಸೆಂಬ್ಲಿಯ ಪೂರ್ಣ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಜೋಶಿ ಅವರು, ಭಾರತದ ಇಂಧನ ಪರಿವರ್ತನೆಯು 'ವಸುಧೈವ ಕುಟುಂಬಕಂ' - ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ತತ್ವದಿಂದ ಮಾರ್ಗದರ್ಶಿಸಲ್ಪಟ್ಟಿದೆ ಹಾಗೂ ಇದು ಸಮಾನತೆ, ಒಳಗೊಳ್ಳುವಿಕೆ ಮತ್ತು ದೀರ್ಘಕಾಲೀನ ನೀತಿ ಸ್ಥಿರತೆಯನ್ನು ಆಧರಿಸಿದೆ ಎಂದು ಪುನರುಚ್ಚರಿಸಿದರು. ಅಂತಾರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ ಮತ್ತು ಆಹಾರ ಮತ್ತು ಕೃಷಿ ಸಂಸ್ಥೆ (FAO) ಜಂಟಿಯಾಗಿ ಆಯೋಜಿಸಿದ್ದ 'ಕೃಷಿ-ಆಹಾರ ವ್ಯವಸ್ಥೆಗಳಲ್ಲಿ ನವೀಕರಿಸಬಹುದಾದ ಇಂಧನದ ವಿಸ್ತರಣೆ' ಕುರಿತ ಅಂತರ-ಸಚಿವಅಲಯ ಸಂವಾದದಲ್ಲಿ, ಹವಾಮಾನ-ಸ್ಥಿತಿಸ್ಥಾಪಕ ಕೃಷಿ ಮತ್ತು ಗ್ರಾಮೀಣ ಜೀವನೋಪಾಯವನ್ನು ಬಲಪಡಿಸುವಲ್ಲಿ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನದ ಪಾತ್ರವನ್ನು ಶ್ರೀ ಜೋಶಿ ಅವರು ಒತ್ತಿಹೇಳಿದರು.
ಭಾರತದ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮತ್ತು ಸಹಯೋಗವನ್ನು ಉತ್ತೇಜಿಸಲು ಕೇಂದ್ರ ಸಚಿವ ಜೋಶಿ ಅವರು ಜಾಗತಿಕ ನವೀಕರಿಸಬಹುದಾದ ಇಂಧನ ಕ್ಷೇತ್ರದ ಹಿರಿಯ ನಾಯಕರು ಮತ್ತು ಪ್ರಮುಖ ಗಣ್ಯರೊಂದಿಗೆ ಮಾತುಕತೆ ನಡೆಸಿದರು. ಈ ಭೇಟಿಯು ನವೀಕರಿಸಬಹುದಾದ ಇಂಧನ, ಸುಸ್ಥಿರ ಅಭಿವೃದ್ಧಿ ಮತ್ತು ಸ್ವಚ್ಛ ಮೂಲಸೌಕರ್ಯಗಳಲ್ಲಿ ಭಾರತ-ಯುಎಇ ಸಹಕಾರವನ್ನು ಮತ್ತಷ್ಟು ಬಲಪಡಿಸಿತು. ಅಲ್ಲದೆ, ನಾವೀನ್ಯತೆ, ಹೂಡಿಕೆ ಮತ್ತು ದೀರ್ಘಕಾಲೀನ ಸಹಯೋಗದ ಮೂಲಕ ಜಾಗತಿಕ ಇಂಧನ ಪರಿವರ್ತನೆಯನ್ನು ವೇಗಗೊಳಿಸಲು ಜಾಗತಿಕ ಪಾಲುದಾರರೊಂದಿಗೆ ಕೆಲಸ ಮಾಡಲು ಭಾರತ ಸಿದ್ಧವಾಗಿದೆ ಎಂಬುದನ್ನು ಇದು ಒತ್ತಿಹೇಳಿತು.
*****
(रिलीज़ आईडी: 2214666)
आगंतुक पटल : 13