ಲೋಕಸಭಾ ಸಚಿವಾಲಯ
ವಿದೇಶಿ ಅತಿಥಿಗಳಿಂದ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಅನುಭವ; ಲೋಕಸಭಾಧ್ಯಕ್ಷರೊಂದಿಗೆ ಲೋಹ್ರಿ ಆಚರಣೆ
ದಕ್ಷಿಣ ಆಫ್ರಿಕಾ ಮತ್ತು ಗ್ರೆನಡಾ ನಿಯೋಗಗಳಿಂದ ಸಭಾಧ್ಯಕ್ಷ ಶ್ರೀ ಬಿರ್ಲಾ ಅವರೊಂದಿಗೆ ಲೋಹ್ರಿ ಹಬ್ಬದ ಆಚರಣೆ
ಭಾರತದ ರೋಮಾಂಚಕ ಹಾಗೂ ಹಬ್ಬಗಳಿಂದ ಸಮೃದ್ಧವಾಗಿರುವ ಸಂಸ್ಕೃತಿಯನ್ನು 'ಅದ್ಭುತ' ಎಂದು ಬಣ್ಣಿಸಿದ ನಿಯೋಗಗಳು
ದಕ್ಷಿಣ ಆಫ್ರಿಕಾ ಮತ್ತು ಗ್ರೆನಡಾ ಜೊತೆಗಿನ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಪ್ರಮುಖ ಚರ್ಚೆಗಳು
ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ಪರಂಪರೆಯು ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದ ಮೂಲಕ ನಮ್ಮನ್ನು ಒಗ್ಗೂಡಿಸುತ್ತದೆ – ಲೋಕಸಭಾಧ್ಯಕ್ಷರು
प्रविष्टि तिथि:
13 JAN 2026 10:16AM by PIB Bengaluru
ಲೋಕಸಭಾಧ್ಯಕ್ಷ ಶ್ರೀ ಓಂ ಬಿರ್ಲಾ ಅವರು 28ನೇ ಕಾಮನ್‌ವೆಲ್ತ್ ರಾಷ್ಟ್ರಗಳ ಸಭಾಧ್ಯಕ್ಷರು ಮತ್ತು ಅಧ್ಯಕ್ಷೀಯ ಅಧಿಕಾರಿಗಳ ಸಮ್ಮೇಳನದ (ಸಿ ಎಸ್ ಪಿ ಒ ಸಿ) ಅಂಗವಾಗಿ ಭಾರತಕ್ಕೆ ಆಗಮಿಸಿರುವ ದಕ್ಷಿಣ ಆಫ್ರಿಕಾ ಮತ್ತು ಕೆರಿಬಿಯನ್ ರಾಷ್ಟ್ರವಾದ ಗ್ರೆನಡಾದ ಸಂಸದೀಯ ನಿಯೋಗಗಳನ್ನು ಭೇಟಿ ಮಾಡಿದರು. ದಕ್ಷಿಣ ಆಫ್ರಿಕಾ ಸಂಸತ್ತಿನ ರಾಷ್ಟ್ರೀಯ ಪ್ರಾಂತ್ಯಗಳ ಮಂಡಳಿಯ ಉಪಾಧ್ಯಕ್ಷ ಶ್ರೀ ಎಲ್. ಗೋವೆಂದರ್, ಉಪಾಧ್ಯಕ್ಷ ಡಾ. ಅನ್ನೆಲಿ ಲೋಟ್ರಿಯೆಟ್ ಮತ್ತು ಗ್ರೆನಡಾದ ಸೆನೆಟ್ ಅಧ್ಯಕ್ಷ ಡಾ. ಡೆಸಿಮಾ ವಿಲಿಯಮ್ಸ್ ನೇತೃತ್ವದ ನಿಯೋಗಕ್ಕೆ ಸಭಾಧ್ಯಕ್ಷರು ಆತ್ಮೀಯ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ, ನಿಯೋಗವು ಲೋಕಸಭಾಧ್ಯಕ್ಷರೊಂದಿಗೆ ಸಾಂಪ್ರದಾಯಿಕ ಲೋಹ್ರಿ ಹಬ್ಬವನ್ನು ಆಚರಿಸಿತು ಮತ್ತು ಅಗ್ನಿ ಪೂಜೆಯ ಸಂಪ್ರದಾಯವನ್ನು ವೀಕ್ಷಿಸಿತು. ಭಾರತೀಯ ಸಂಸ್ಕೃತಿ ಮತ್ತು ಹಬ್ಬಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ ಸಭಾಧ್ಯಕ್ಷರು, ಭಾರತೀಯ ಹಬ್ಬಗಳು ಮತ್ತು ಸಾಂಸ್ಕೃತಿಕ ಸಂವಾದಗಳು ಜಾಗತಿಕ ಭ್ರಾತೃತ್ವ, ಪರಸ್ಪರ ಗೌರವ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸುತ್ತವೆ ಎಂದು ಹೇಳಿದರು. ಭೇಟಿಯ ಸಮಯದಲ್ಲಿ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಸೌಹಾರ್ದಯುತ ದ್ವಿಪಕ್ಷೀಯ ಮಾತುಕತೆಗಳು ನಡೆದವು; ಪ್ರಜಾಪ್ರಭುತ್ವದ ಮೌಲ್ಯಗಳು, ಸಂಸದೀಯ ಸಹಕಾರ ಮತ್ತು ಪರಸ್ಪರ ತಿಳುವಳಿಕೆಯನ್ನು ಬಲಪಡಿಸುವ ಬಗ್ಗೆ ಚರ್ಚಿಸಲಾಯಿತು. ಐತಿಹಾಸಿಕ ಸ್ನೇಹ ಸಂಬಂಧ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಮುನ್ನಡೆಸುವ ತಮ್ಮ ಬದ್ಧತೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು.
ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ಪರಂಪರೆಯು ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಒಳಗೊಳ್ಳುವಿಕೆಯ ಮೌಲ್ಯಗಳ ಮೂಲಕ ಎರಡೂ ದೇಶಗಳನ್ನು ಸಂಪರ್ಕಿಸುತ್ತದೆ ಎಂದು ಲೋಕಸಭಾಧ್ಯಕ್ಷರು ಹೇಳಿದರು. ಬ್ರಿಕ್ಸ್ ಮತ್ತು ಜಿ20 ಯಂತಹ ಬಹುಪಕ್ಷೀಯ ವೇದಿಕೆಗಳಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸಹಕಾರವನ್ನು ಎರಡು ಪ್ರಜಾಪ್ರಭುತ್ವಗಳ ನಡುವಿನ ವಿಶ್ವಾಸ ಮತ್ತು ಪಾಲುದಾರಿಕೆಯ ಬಲವಾದ ಅಡಿಪಾಯ ಎಂದು ಬಣ್ಣಿಸಲಾಯಿತು. ಸಂಸದೀಯ ನಿಯೋಗಗಳ ನಿಯಮಿತ ವಿನಿಮಯ ಮತ್ತು ಶಾಸಕಾಂಗದ ಅತ್ಯುತ್ತಮ ಪದ್ಧತಿಗಳನ್ನು ಹಂಚಿಕೊಳ್ಳಲು ಎರಡೂ ಕಡೆಯವರು ಒಪ್ಪಿಕೊಂಡರು.
ಭಾರತೀಯ ಸಂಸತ್ತಿನ ‘ಪ್ರೈಡ್’ (PRIDE) ಸಂಸ್ಥೆಯ ಮೂಲಕ ಸಂಸದರು ಮತ್ತು ಸಂಸದೀಯ ಅಧಿಕಾರಿಗಳಿಗೆ ತರಬೇತಿ ಹಾಗೂ ಸಾಮರ್ಥ್ಯ ವೃದ್ಧಿಯಲ್ಲಿ ಸಹಕಾರವನ್ನು ಹೆಚ್ಚಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಇದರ ಜೊತೆಗೆ, ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನಗಳು, ಬಹುಭಾಷಾ ಅನುವಾದ ಮತ್ತು ನಾಗರಿಕ ಕೇಂದ್ರಿತ ಸಂಸದೀಯ ಸೇವೆಗಳನ್ನು ಒಳಗೊಂಡಿರುವ ಭಾರತದ ‘ಡಿಜಿಟಲ್ ಸಂಸತ್’ ಉಪಕ್ರಮದ ಅನುಭವಗಳನ್ನು ಹಂಚಿಕೊಳ್ಳುವ ಬಗ್ಗೆಯೂ ಆಸಕ್ತಿ ವ್ಯಕ್ತಪಡಿಸಲಾಯಿತು. ಈ ಸಂವಾದವು ಭಾರತ-ದಕ್ಷಿಣ ಆಫ್ರಿಕಾ ಸಂಸದೀಯ ಸಂಬಂಧಗಳಿಗೆ ಹೊಸ ಚೈತನ್ಯ ನೀಡಲಿದೆ ಎಂಬ ವಿಶ್ವಾಸ ವ್ಯಕ್ತವಾಯಿತು.
ಇದೇ ಸಂದರ್ಭದಲ್ಲಿ, ಲೋಕಸಭಾಧಯಕ್ಷ ಶ್ರೀ ಓಂ ಬಿರ್ಲಾ ಅವರು ಗ್ರೆನಡಾದ ಸೆನೆಟ್ ಅಧ್ಯಕ್ಷ ಡಾ. ಡೆಸಿಮಾ ವಿಲಿಯಮ್ಸ್ ಅವರನ್ನೂ ಭೇಟಿ ಮಾಡಿದರು. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಸದೀಯ ಸಂವಾದದ ಸಂದರ್ಭದಲ್ಲಿ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಡಾ. ವಿಲಿಯಮ್ಸ್ ಅವರು ಹೊಸ ವರ್ಷ ಮತ್ತು ಲೋಹ್ರಿ ಹಬ್ಬದ ಶುಭಾಶಯಗಳನ್ನು ಕೋರಿದರು, ಜೊತೆಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮೂರನೇ ಅವಧಿಯ ಅಧಿಕಾರ ಸ್ವೀಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
ಸಾರ್ವತ್ರಿಕ ಚುನಾವಣೆಯಲ್ಲಿ ಸುಮಾರು 90 ಕೋಟಿ ಮತದಾರರು ಭಾಗವಹಿಸಿರುವುದು ಭಾರತೀಯ ಪ್ರಜಾಪ್ರಭುತ್ವದ ಬಲಕ್ಕೆ ಎದ್ದುಕಾಣುವ ಉದಾಹರಣೆಯಾಗಿದೆ ಎಂದು ಲೋಕಸಭಾಧ್ಯಕ್ಷರು ತಿಳಿಸಿದರು. ಡಾ. ಡೆಸಿಮಾ ವಿಲಿಯಮ್ಸ್ ಅವರು ಭಾರತಕ್ಕೆ, ವಿಶೇಷವಾಗಿ ರಾಜಸ್ಥಾನಕ್ಕೆ ಭೇಟಿ ನೀಡುವ ಆಸಕ್ತಿಯನ್ನು ವ್ಯಕ್ತಪಡಿಸಿದರು ಮತ್ತು ಭಾರತ ಹಾಗೂ ಕೆರಿಬಿಯನ್ ದೇಶಗಳ ನಡುವೆ ಕ್ರಿಕೆಟ್ ಹೊಂದಿರುವ ಅಪಾರ ಜನಪ್ರಿಯತೆಯನ್ನು ಒತ್ತಿಹೇಳಿದರು. ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರು ಕೆರಿಬಿಯನ್ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಅವರು ಹೇಳಿದರು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುವುದು, ಸಂಸದೀಯ ಸಹಕಾರ, ‘ಗ್ಲೋಬಲ್ ಸೌತ್’ ದೇಶಗಳು ಎದುರಿಸುತ್ತಿರುವ ಸಾಮಾನ್ಯ ಸವಾಲುಗಳನ್ನು ಪರಿಹರಿಸುವುದು ಮತ್ತು ಸಂವಾದ ಹಾಗೂ ಸಹಕಾರದ ಅಗತ್ಯತೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಗ್ರೆನಡಾ ನಿಯೋಗವು ಭಾರತೀಯ ಸಂಸತ್ತಿನ ‘ಪ್ರೈಡ್’ ಸಂಸ್ಥೆ, ಡಿಜಿಟಲ್ ಸಂಸತ್, ಕೃತಕ ಬುದ್ಧಿಮತ್ತೆ ಮತ್ತು ಬಹುಭಾಷಾ ಸಂಸದೀಯ ಸೌಲಭ್ಯಗಳ ಬಗ್ಗೆ ವಿಶೇಷ ಆಸಕ್ತಿ ತೋರಿತು. ಈ ಮಾತುಕತೆಯು ಭಾರತ-ಗ್ರೆನಡಾ ಸಂಸದೀಯ ಮತ್ತು ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ದಿಕ್ಕು ಮತ್ತು ವೇಗವನ್ನು ನೀಡುತ್ತದೆ ಎಂದು ಎರಡೂ ಕಡೆಯವರು ವಿಶ್ವಾಸ ವ್ಯಕ್ತಪಡಿಸಿದರು.
*****
(रिलीज़ आईडी: 2214499)
आगंतुक पटल : 3