ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ನವೀಕರಿಸಬಹುದಾದ ಇಂಧನವು ಹವಾಮಾನ-ಸ್ಥಿತಿಸ್ಥಾಪಕ ಕೃಷಿ ಮತ್ತು ಗ್ರಾಮೀಣ ಸಮೃದ್ಧಿಗೆ ಪ್ರಮುಖವಾಗಿದೆ: ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ


ಯುಎಇಯ ಅಬುಧಾಬಿಯಲ್ಲಿ ಕೃಷಿ-ಆಹಾರ ವ್ಯವಸ್ಥೆಗಳಲ್ಲಿ ನವೀಕರಿಸಬಹುದಾದ ಇಂಧನವನ್ನು ವಿಸ್ತರಿಸುವ ಕುರಿತಾದ ಅಂತರ-ಸಚಿವಾಲಯ ಸಂವಾದವನ್ನು ಉದ್ದೇಶಿಸಿ ಸಚಿವರಾದ ಶ್ರೀ ಜೋಶಿ ಮಾತನಾಡಿದರು

ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನವು ರೈತರನ್ನು ಅನ್ನದಾತರಿಂದ ಊರ್ಜಾದಾತರನ್ನಾಗಿ ಪರಿವರ್ತಿಸುತ್ತಿದೆ: ಶ್ರೀ ಪ್ರಲ್ಹಾದ್ ಜೋಶಿ

ಕೃಷಿ-ಆಹಾರ ಮೌಲ್ಯ ಸರಪಳಿಗಳಲ್ಲಿ ಸ್ವಚ್ಛ ಇಂಧನ ಏಕೀಕರಣಕ್ಕಾಗಿ ಪಿಎಂ-ಕುಸುಮ್' ಮತ್ತು ಪಿಎಂ ಸೂರ್ಯ ಘರ್ ಯೋಜನೆಗಳನ್ನು ಉಲ್ಲೇಖಿಸಿದ ಭಾರತ

ಪಿಎಂ-ಕುಸುಮ್ ಯೋಜನೆಯಡಿ 1.1 ಮಿಲಿಯನ್‌ ಗೂ ಹೆಚ್ಚು ಕೃಷಿ ಪಂಪ್‌ ಗಳ ಸೌರೀಕರಣ

प्रविष्टि तिथि: 12 JAN 2026 7:01PM by PIB Bengaluru

ಹೊಸ ಮತ್ತು ನವೀಕರಿಸಬಹುದಾದ ಇಂಧನ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಇಂಧನ ಭದ್ರತೆ, ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಗ್ರಾಮೀಣ ಜೀವನೋಪಾಯವನ್ನು ಹೆಚ್ಚಿಸಲು ನವೀಕರಿಸಬಹುದಾದ ಇಂಧನವನ್ನು ಕೃಷಿ ಮತ್ತು ಆಹಾರ ವ್ಯವಸ್ಥೆಗಳೊಂದಿಗೆ ಸಂಯೋಜಿಸುವ ಭಾರತದ ಬದ್ಧತೆಯನ್ನು ಉಲ್ಲೇಖಿಸಿದರು. ಅವರು ಅಂತಾರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ (ಐ ಆರ್‌ ಇ ಎನ್‌ ಎ) ಮತ್ತು ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ ಎ ಒ) ಜಂಟಿಯಾಗಿ ಆಯೋಜಿಸಿದ್ದ 'ಕೃಷಿ-ಆಹಾರ ವ್ಯವಸ್ಥೆಗಳಲ್ಲಿ ನವೀಕರಿಸಬಹುದಾದ ಇಂಧನವನ್ನು ವಿಸ್ತರಿಸುವ ಕುರಿತಾದ ಅಂತರ-ಸಚಿವಾಲಯ ಸಂವಾದ'ವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, "ಭಾರತವು ಜಾಗತಿಕ ವೇದಿಕೆಗಳಲ್ಲಿ ಮಾತನಾಡುವಾಗ, ಅದು ಮಾನವಕುಲದ ಸರಿಸುಮಾರು ಆರನೇ ಒಂದು ಭಾಗವನ್ನು, ವಿಶ್ವದ ಅತಿದೊಡ್ಡ ಆಹಾರ ಭದ್ರತಾ ಕಾರ್ಯಕ್ರಮಗಳನ್ನು ಮತ್ತು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನವೀಕರಿಸಬಹುದಾದ ಇಂಧನ ಮಾರುಕಟ್ಟೆಗಳಲ್ಲಿ ಒಂದನ್ನು ಪ್ರತಿನಿಧಿಸುತ್ತದೆ" ಎಂದು ತಿಳಿಸಿದರು. ಭಾರತದ ಕೃಷಿ ಪ್ರಧಾನ ನೀತಿಯನ್ನು ಉಲ್ಲೇಖಿಸಿದ ಅವರು, 'ಅನ್ನದಾತ' ಎಂದು ಗೌರವಿಸಲ್ಪಡುವ ರೈತರು, ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನದ ವಿಸ್ತರಣೆಯ ಮೂಲಕ ಆಹಾರ ಮತ್ತು ಸ್ವಚ್ಛ ಇಂಧನ ಎರಡನ್ನೂ ಒದಗಿಸುವ 'ಊರ್ಜಾದಾತ'ರಾಗಿ ಬದಲಾಗುತ್ತಿದ್ದಾರೆ ಎಂದು ಹೇಳಿದರು.

ಇಂಧನ ಲಭ್ಯತೆ, ಹವಾಮಾನ ಕ್ರಮ, ಕೃಷಿ ಉತ್ಪಾದಕತೆ ಮತ್ತು ಗ್ರಾಮೀಣ ಜೀವನೋಪಾಯವನ್ನು ಏಕಕಾಲದಲ್ಲಿ ಒದಗಿಸುವ ಜಾಗತಿಕ ಸವಾಲಿಗೆ ನವೀಕರಿಸಬಹುದಾದ ಇಂಧನವು ಒಂದು ಏಕೀಕೃತ ಪರಿಹಾರವನ್ನು ನೀಡುತ್ತದೆ ಎಂದು ಸಚಿವರು ಹೇಳಿದರು. ಭಾರತದ ದೃಷ್ಟಿಕೋನವು ಬಲವಾದ ನೀತಿಗಳು, ವಿಕೇಂದ್ರೀಕೃತ ಕ್ರಮಗಳು, ಒಳಗೊಳ್ಳುವ ವಿನ್ಯಾಸ ಮತ್ತು ಬಲಿಷ್ಠ ಅಂತರ-ಸಚಿವಾಲಯ ಸಮನ್ವಯದ ಬೆಂಬಲದೊಂದಿಗೆ, ಮಹತ್ವಾಕಾಂಕ್ಷೆಗೆ ತಕ್ಕ ಅನುಷ್ಠಾನದಲ್ಲಿ ಬೇರೂರಿದೆ ಎಂದು ಅವರು ಹೇಳಿದರು.

ಪ್ರಮುಖ ಉಪಕ್ರಮಗಳ ಬಗ್ಗೆ ವಿವರಿಸುತ್ತಾ, ಶ್ರೀ ಜೋಶಿಯವರು 2019ರಲ್ಲಿ ಪ್ರಾರಂಭಿಸಲಾದ ಪಿಎಂ-ಕುಸುಮ್‌ ಯೋಜನೆಯನ್ನು ಉಲ್ಲೇಖಿಸಿದರು. ಈ ಯೋಜನೆಯು ಸ್ವತಂತ್ರ ಸೌರ ಪಂಪ್‌ ಗಳು, ಗ್ರಿಡ್-ಸಂಪರ್ಕಿತ ಪಂಪ್‌ ಗಳ ಸೌರೀಕರಣ ಮತ್ತು ವಿಕೇಂದ್ರೀಕೃತ ಸೌರ ವಿದ್ಯುತ್ ಸ್ಥಾವರಗಳ ಮೂಲಕ ಕೃಷಿಯಲ್ಲಿ ಸೌರಶಕ್ತಿಯನ್ನು ಸಂಯೋಜಿಸುತ್ತದೆ. 2025ರ ಅಂತ್ಯದ ವೇಳೆಗೆ, ಸುಮಾರು 10 ಲಕ್ಷ ಸ್ವತಂತ್ರ ಸೌರ ಪಂಪ್‌ ಗಳನ್ನು ಅಳವಡಿಸಲಾಗಿದೆ ಮತ್ತು 11 ಲಕ್ಷಕ್ಕೂ ಹೆಚ್ಚು ಗ್ರಿಡ್-ಸಂಪರ್ಕಿತ ಪಂಪ್‌ ಗಳನ್ನು ಸೌರೀಕರಣಗೊಳಿಸಲಾಗಿದೆ, ಇದು ಒಟ್ಟು 10,200 ಮೆಗಾ ವ್ಯಾಟ್‌ ಗಿಂತಲೂ ಹೆಚ್ಚಿನ ಸ್ಥಾಪಿತ ಸಾಮರ್ಥ್ಯಕ್ಕೆ ಕೊಡುಗೆ ನೀಡಿದೆ. ಈ ಯೋಜನೆಯು ಡೀಸೆಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ, ನೀರಾವರಿ ವೆಚ್ಚವನ್ನು ಸ್ಥಿರಗೊಳಿಸಿದೆ, ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಿದೆ ಮತ್ತು ಸರ್ಕಾರದ ಆರ್ಥಿಕ ಬೆಂಬಲವನ್ನು ಮರುಕಳಿಸುವ ಸಬ್ಸಿಡಿಗಳಿಂದ ದೀರ್ಘಕಾಲದ ಆಸ್ತಿ-ಆಧಾರಿತ ಹೂಡಿಕೆಗಳತ್ತ ಬದಲಾಯಿಸಿದೆ ಎಂದು ಅವರು ತಿಳಿಸಿದರು.

ಖಾಸಗಿ ಹೂಡಿಕೆಯನ್ನು ಮುಕ್ತಗೊಳಿಸುವ ಕುರಿತು ಮಾತನಾಡುತ್ತಾ, ರಾಷ್ಟ್ರೀಯ ಯೋಜನೆಗಳ ಮೂಲಕ ನೀತಿಗಳ ಸ್ಥಿರತೆ ಮತ್ತು ಕೃಷಿ ಬೇಡಿಕೆಯ ಕ್ರೋಢೀಕರಣವು ಈ ವಲಯದ ಪ್ರಮಾಣ, ಬ್ಯಾಂಕಿಂಗ್ ಮತ್ತು ವಾಣಿಜ್ಯ ಕಾರ್ಯಸಾಧ್ಯತೆಯನ್ನು ಸುಧಾರಿಸಿದೆ ಎಂದು ಶ್ರೀ ಜೋಶಿ ಹೇಳಿದರು. ರೈತರಿಂದ ಹೆಚ್ಚುವರಿ ಸೌರ ವಿದ್ಯುತ್ ಮಾರಾಟ, ಕೃಷಿ ತ್ಯಾಜ್ಯಗಳನ್ನು ಇಂಧನವನ್ನಾಗಿ ಪರಿವರ್ತಿಸುವ ರಾಷ್ಟ್ರೀಯ ಜೈವಿಕ ಇಂಧನ ಕಾರ್ಯಕ್ರಮ ಮತ್ತು ಮೇಲ್ಛಾವಣಿ ಸೌರಶಕ್ತಿಗಾಗಿ ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್‌ ಯೋಜನೆಯಂತಹ ಉಪಕ್ರಮಗಳು ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಿವೆ, ಆಮದನ್ನು ಕಡಿಮೆ ಮಾಡಿವೆ ಮತ್ತು ಗ್ರಾಮೀಣ ಇಂಧನ ಭದ್ರತೆಯನ್ನು ಬಲಪಡಿಸಿವ ಎಂದು ಅವರು ಹೇಳಿದರು.

ಮುಂದಿನ ಹಾದಿಯ ಬಗ್ಗೆ ವಿವರಿಸುತ್ತಾ, ವಿಕೇಂದ್ರೀಕೃತ ಸೌರ ಪರಿಹಾರಗಳು ಮತ್ತು ಕೃಷಿ ಹಾಗೂ ಸೌರ ವಿದ್ಯುತ್ ಉತ್ಪಾದನೆಯು ಸಮನ್ವಯಕ್ಕೆ ಅನುವು ಮಾಡಿಕೊಡುವ ಅಗ್ರಿ-ಫೋಟೋವೋಲ್ಟಾಯಿಕ್ಸ್ (Agri-PV) ಮೇಲೆ ಹೆಚ್ಚಿನ ಗಮನಹರಿಸುವ ಮೂಲಕ ಭಾರತವು ಪಿಎಂ-ಕುಸುಮ್‌ 2.0 ಅನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ ಎಂದು ಕೇಂದ್ರ ಸಚಿವರು ಘೋಷಿಸಿದರು. ಸಮರ್ಪಕವಾಗಿ ವಿನ್ಯಾಸಗೊಳಿಸಲಾದ ಅಗ್ರಿ-ಪಿವಿ ವ್ಯವಸ್ಥೆಗಳು ಬೆಳೆ ಇಳುವರಿಯನ್ನು ಕಾಯ್ದುಕೊಳ್ಳಲು ಅಥವಾ ಹೆಚ್ಚಿಸಲು, ಸೂಕ್ಷ್ಮ ಹವಾಮಾನವನ್ನು ನಿಯಂತ್ರಿಸಲು, ಸ್ವಚ್ಛ ವಿದ್ಯುತ್ ಉತ್ಪಾದಿಸಲು ಮತ್ತು ರೈತರ ಆದಾಯವನ್ನು ವೈವಿಧ್ಯಮಯಗೊಳಿಸಲು ಸಹಾಯ ಮಾಡುತ್ತವೆ ಎಂದು ಅವರು ತಿಳಿಸಿದರು.

ಸಹಭಾಗಿತ್ವವನ್ನು ವೃದ್ಧಿಸಲು ಮತ್ತು ಪರಿಹಾರಗಳನ್ನು ವಿಸ್ತರಿಸಲು ಭಾರತವು ಸನ್ನದ್ಧವಾಗಿದೆ ಎಂದು ಶ್ರೀ ಜೋಶಿ ಪುನರುಚ್ಚರಿಸಿದರು. ಹೇರಳವಾದ ಸೂರ್ಯನ ಬೆಳಕು ಮತ್ತು 14.6 ಕೋಟಿಗೂ ಹೆಚ್ಚು ಸಣ್ಣ ಭೂಹಿಡುವಳಿಗಳನ್ನು ಹೊಂದಿರುವ ಭಾರತವು, ನವೀಕರಿಸಬಹುದಾದ ಇಂಧನ ಆಧಾರಿತ ಕೃಷಿ-ಆಹಾರ ವ್ಯವಸ್ಥೆಗಳಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಲು ಉತ್ತಮ ಸ್ಥಾನದಲ್ಲಿದೆ ಎಂದು ಹೇಳಿದ ಅವರು ತಮ್ಮ ಮಾತು ಮುಗಿಸಿದರು.

ಐ ಆರ್‌ ಇ ಎನ್‌ ಎ ನ 16ನೇ ಅಧಿವೇಶನದ ನಡುವೆ, ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿಯವರು ಐಸ್ಲ್ಯಾಂಡ್‌ ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಹಕಾರದ ಮಹಾನಿರ್ದೇಶಕರಾದ ಶ್ರೀಮತಿ ಎಲಿನ್ ರೋಸ್ ಅವರೊಂದಿಗೆ ದೂರದೃಷ್ಟಿಯ ಸಭೆಯನ್ನು ನಡೆಸಿದರು. ಭಾರತದ ಸ್ವಚ್ಛ ಇಂಧನ ಪರಿವರ್ತನೆಯ ಭಾಗವಾಗಿ ಭೂಗರ್ಭದ ಉಷ್ಣ ಶಕ್ತಿ ಬಳಕೆಯನ್ನು ವಿಸ್ತರಿಸಲು ತಾಂತ್ರಿಕ ಸಹಕಾರವನ್ನು ಬಲಪಡಿಸುವ ಕುರಿತು ಈ ಚರ್ಚೆಗಳು ಕೇಂದ್ರೀಕೃತವಾಗಿದ್ದವು.

ಅಂತಾರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆಯ (ಐ ಆರ್‌ ಇ ಎನ್‌ ಎ) ಅಧಿವೇಶನದ ನಡುವೆ ನಡೆದ ಮತ್ತೊಂದು ಪ್ರಮುಖ ದ್ವಿಪಕ್ಷೀಯ ಸಭೆಯಲ್ಲಿ, ನೂತನ ಮತ್ತು ನವೀಕರಿಸಬಹುದಾದ ಇಂಧನ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿಯವರು ಯುರೋಪಿಯನ್ ಕಮಿಷನ್‌ ನ ಇಂಧನ ವಿಭಾಗದ ಮಹಾನಿರ್ದೇಶಕರಾದ ಶ್ರೀಮತಿ ಜೋರ್ಗೆನ್ಸೆನ್ ಜೂಲ್ ಅವರೊಂದಿಗೆ ರಚನಾತ್ಮಕ ಸಭೆ ನಡೆಸಿದರು. ಈ ಚರ್ಚೆಗಳ ವೇಳೆ ಭಾರತ-ಯುರೋಪಿಯನ್ ಒಕ್ಕೂಟದ ಸ್ವಚ್ಛ ಇಂಧನ ಮತ್ತು ಹವಾಮಾನ ಸಹಭಾಗಿತ್ವದ ಸ್ಥಿರ ಬೆಳವಣಿಗೆಯನ್ನು ಪರಿಶೀಲಿಸಲಾಯಿತು ಹಾಗೂ ತಳಮಟ್ಟದಲ್ಲಿ ಸ್ಪಷ್ಟ ಫಲಿತಾಂಶಗಳನ್ನು ನೀಡುವ ಬಗ್ಗೆ ಹಂಚಿಕೆಯ ಒತ್ತು ನೀಡಲಾಯಿತು.

ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಹೂಡಿಕೆ ಸಚಿವರಾದ ಮೊಹಮ್ಮದ್ ಹಸನ್ ಅಲ್ ಸುವೈದಿ ಅವರೊಂದಿಗೆ ನವೀಕರಿಸಬಹುದಾದ ಇಂಧನ ಮತ್ತು ಶುದ್ಧ ಮೂಲಸೌಕರ್ಯಗಳಲ್ಲಿ ಭಾರತ-ಯುಎಇ ಸಹಕಾರವನ್ನು ಬಲಪಡಿಸುವ ಕುರಿತು ಚರ್ಚೆ ನಡೆಸಿದರು. ಭಾರತದ ಪಳೆಯುಳಿಕೆ ರಹಿತ ಇಂಧನ ಸಾಮರ್ಥ್ಯದ ಕ್ಷಿಪ್ರ ಹೆಚ್ಚಳ, ವಿಸ್ತರಿಸುತ್ತಿರುವ ದೇಶೀಯ ಉತ್ಪಾದನಾ ವ್ಯವಸ್ಥೆ ಮತ್ತು ದೀರ್ಘಕಾಲೀನ ಹೂಡಿಕೆಗೆ ಪೂರಕವಾದ ಸ್ಥಿರ ಮತ್ತು ನಿಶ್ಚಿತ ನೀತಿಗಳ ಹಿನ್ನೆಲೆಯಲ್ಲಿ, ದ್ವಿಪಕ್ಷೀಯ ಹೂಡಿಕೆ ಪಾಲುದಾರಿಕೆಯ ಬಲವಾದ ಗತಿಯನ್ನು ಈ ಸಂವಾದವು ಪುನರುಚ್ಚರಿಸಿತು.

ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿಯವರು ಅಬುಧಾಬಿಯ ಲೌವ್ರೆ ವಸ್ತುಸಂಗ್ರಹಾಲಯಕ್ಕೂ ಭೇಟಿ ನೀಡಿದರು. ಇದನ್ನು ಸಾಂಸ್ಕೃತಿಕ ಸಂವಾದ ಮತ್ತು ಹಂಚಿಕೆಯ ಮಾನವ ಪರಂಪರೆಯ ಪ್ರಬಲ ಸಂಕೇತ ಎಂದು ಅವರು ಬಣ್ಣಿಸಿದರು. ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾದ ಕಲಾಕೃತಿಗಳು ಮತ್ತು ಪ್ರದರ್ಶನಗಳ ಮೂಲಕ ಭಾರತದ ಶ್ರೀಮಂತ ಕಲಾ ಸಂಪ್ರದಾಯಗಳು ಅಲ್ಲಿ ಸ್ಥಾನ ಪಡೆದಿರುವುದನ್ನು ಸಚಿವರು ಶ್ಲಾಘಿಸಿದರು, ಇದು ದೇಶದ ಆಳವಾದ ನಾಗರಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

 

******


(रिलीज़ आईडी: 2213899) आगंतुक पटल : 32
इस विज्ञप्ति को इन भाषाओं में पढ़ें: English , Urdu , हिन्दी , Malayalam