ಸಂಸ್ಕೃತಿ ಸಚಿವಾಲಯ
azadi ka amrit mahotsav

125 ವರ್ಷಗಳ ಕಾಯುವಿಕೆಯ ನಂತರ, ಭಾರತದ ಪರಂಪರೆಯ ಪುನರಾಗಮನವಾಗಿದೆ ಮತ್ತು ರಾಷ್ಟ್ರದ ಅಮೂಲ್ಯ ಪರಂಪರೆಯ ನಿಧಿಯು ಮನೆಗೆ ಮರಳಿದೆ": ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಭಾರತದ ಚೈತನ್ಯವನ್ನು ಆಡಳಿತಾತ್ಮಕ ಕಾರ್ಯಗಳಾಗಿ ಪರಿವರ್ತಿಸುವ ಅಪರೂಪದ ಸಾಮರ್ಥ್ಯ ಪ್ರಧಾನಮಂತ್ರಿಯವರಿಗಿದೆ; ಇದು ಯಾವಾಗಲೂ ಸ್ಫೂರ್ತಿದಾಯಕ ಮತ್ತು ಮಹತ್ವದ ಕ್ಷಣವಾಗಿದೆ": ಕೇಂದ್ರ ಸಂಸ್ಕೃತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು "ದಿ ಲೈಟ್ ಅಂಡ್ ದಿ ಲೋಟಸ್: ರೆಲಿಕ್ಸ್ ಆಫ್ ದಿ ಅವೇಕನ್ಡ್ ಒನ್" ಎಂಬ ಭವ್ಯ ಅಂತಾರಾಷ್ಟ್ರೀಯ ಪ್ರದರ್ಶನವನ್ನು ಉದ್ಘಾಟಿಸಿದರು

प्रविष्टि तिथि: 03 JAN 2026 7:32PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ರೈ ಪಿತೋರಾ ಸಾಂಸ್ಕೃತಿಕ ಸಂಕೀರ್ಣದಲ್ಲಿ "ದಿ ಲೈಟ್ ಅಂಡ್ ದಿ ಲೋಟಸ್: ರೆಲಿಕ್ಸ್ ಆಫ್ ದಿ ಅವೇಕನ್ಡ್ ಒನ್" ಎಂಬ ಭವ್ಯ ಅಂತರರಾಷ್ಟ್ರೀಯ ಪ್ರದರ್ಶನವನ್ನು ಉದ್ಘಾಟಿಸಿದರು. ಸಂಸ್ಕೃತಿ ಸಚಿವಾಲಯವು ಆಯೋಜಿಸಿರುವ ಈ ಐತಿಹಾಸಿಕ ಪ್ರದರ್ಶನವು, ಇತ್ತೀಚೆಗೆ ಭಾರತಕ್ಕೆ ಮರಳಿ ತರಲಾದವುಗಳನ್ನು ಒಳಗೊಂಡಂತೆ, ಭಗವಾನ್ ಬುದ್ಧನ ಪವಿತ್ರ ಪಿಪ್ರಹ್ವಾ ಅವಶೇಷಗಳು, ಅವಶೇಷಗಳ ಮಣಿಗಳು ಮತ್ತು ಅವುಗಳ ಪೆಟ್ಟಿಗೆಗಳ ಅತ್ಯಂತ ಸಮಗ್ರವಾದ ಸಂಗ್ರಹವನ್ನು ಒಂದು ಶತಮಾನಕ್ಕೂ ಹೆಚ್ಚು ಕಾಲದ ನಂತರ ಮೊದಲ ಬಾರಿಗೆ ಒಂದೇ ಕಡೆ ಒಟ್ಟುಗೂಡಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು: "125 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಭಾರತದ ಪರಂಪರೆಯು ಮರಳಿದೆ ಮತ್ತು ರಾಷ್ಟ್ರದ ಅಮೂಲ್ಯ ಪರಂಪರೆಯ ನಿಧಿ ತನ್ನ ಮನೆಗೆ ಮರಳಿ ಬಂದಿದೆ. ಇಂದಿನಿಂದ, ಭಾರತದ ಜನತೆಯು ಭಗವಾನ್ ಬುದ್ಧನ ಈ ಪವಿತ್ರ ಅವಶೇಷಗಳ ದರ್ಶನವನ್ನು ಪಡೆಯಲು ಮತ್ತು ಅವರ ಆಶೀರ್ವಾದವನ್ನು ಸ್ವೀಕರಿಸಲು ಸಾಧ್ಯವಾಗಲಿದೆ" ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು, ಭಾರತದ ಚೈತನ್ಯವನ್ನು ಆಡಳಿತಾತ್ಮಕ ಕಾರ್ಯಗಳನ್ನಾಗಿ ಪರಿವರ್ತಿಸುವ ಅಪರೂಪದ ಸಾಮರ್ಥ್ಯ ಹೊಂದಿರುವ ಪ್ರಧಾನಮಂತ್ರಿಯವರ ಉಪಸ್ಥಿತಿಯು ಯಾವಾಗಲೂ ಸ್ಫೂರ್ತಿದಾಯಕ ಮತ್ತು ಮಹತ್ವದ ಕ್ಷಣವಾಗಿದೆ ಎಂದು ಹೇಳಿದರು. ಈ ಐತಿಹಾಸಿಕ ಸಂದರ್ಭದಲ್ಲಿ ಪ್ರಧಾನಮಂತ್ರಿಯವರನ್ನು ಸ್ವಾಗತಿಸುವುದು ಎಲ್ಲರಿಗೂ ಅಪಾರ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದರು.

ಈ ಉದ್ಘಾಟನೆಯು ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪಯಣದಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ, ಇದು 127 ವರ್ಷಗಳ ನಂತರ ಪಿಪ್ರಾಹ್ವಾ ಅವಶೇಷಗಳ ಪುನರ್ಮಿಲನವನ್ನು ಸ್ಮರಿಸುತ್ತದೆ. ಈ ಸಂಗ್ರಹವು 1898ರ ಕಪಿಲವಸ್ತು ಉತ್ಖನನದ ಅವಶೇಷಗಳು, 1972-75ರ ಉತ್ಖನನಗಳ ಸಂಶೋಧನೆಗಳು, ಕೋಲ್ಕತ್ತಾದ ಭಾರತೀಯ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದ್ದ ನಿಧಿಗಳು ಮತ್ತು ವಿದೇಶದಲ್ಲಿ ನಡೆಯುತ್ತಿದ್ದ ಇವುಗಳ ಹರಾಜನ್ನು ತಡೆಯಲು ಭಾರತ ಸರ್ಕಾರವು ನಡೆಸಿದ ನಿರ್ಣಾಯಕ ಹಸ್ತಕ್ಷೇಪದ ನಂತರ ಜುಲೈ 2025ರಲ್ಲಿ ಭಾರತಕ್ಕೆ ಮರಳಿ ತರಲಾದ ಪೆಪ್ಪೆ (Peppé) ಕುಟುಂಬದ ಸಂಗ್ರಹಗಳನ್ನು ಒಳಗೊಂಡಿದೆ.

ಪ್ರಧಾನಮಂತ್ರಿಯವರನ್ನು ದೆಹಲಿಯ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ; ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್; ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಶ್ರೀ ಕಿರಣ್ ರಿಜಿಜು; ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ವಿನಯ್ ಕುಮಾರ್ ಸಕ್ಸೇನಾ; ಕೇಂದ್ರ ಸಂಸ್ಕೃತಿ ರಾಜ್ಯ ಸಚಿವರಾದ ಶ್ರೀ ರಾವ್ ಇಂದರಜಿತ್ ಸಿಂಗ್; ಮತ್ತು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಶ್ರೀ ರಾಮದಾಸ್ ಅಠಾವಳೆ ಅವರು ಬರಮಾಡಿಕೊಂಡರು.

ತಮ್ಮ ಭೇಟಿಯ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಪ್ರದರ್ಶನವನ್ನು ವೀಕ್ಷಿಸಿದರು ಮತ್ತು ಆಸೀನ ಬುದ್ಧನ ಪ್ರತಿಮೆಗೆ 'ಖಟಾಕ್' (ಬೌದ್ಧರ ಸಾಂಪ್ರದಾಯಿಕ ವಸ್ತ್ರ) ಹಾಗೂ ಗುಲಾಬಿ ದಳಗಳನ್ನು ಸಮರ್ಪಿಸಿದರು. ಅವರು ಪಿಪ್ರಹ್ವಾ ತಾಣದಿಂದ ಉತ್ಖನನ ಮಾಡಲಾದ ಪ್ರಾಚೀನ ಮುದ್ರೆಯನ್ನು ಪ್ರತಿಷ್ಠಾಪಿಸಿದರು, ಬೋಧಿ ವೃಕ್ಷದ ಸಸಿಯನ್ನು ನೆಟ್ಟರು, ಸಂದರ್ಶಕರ ಪುಸ್ತಕದಲ್ಲಿ ಸಹಿ ಮಾಡಿದರು, ಪ್ರದರ್ಶನದ ಮಾಹಿತಿ ಪುಸ್ತಕವನ್ನು ಬಿಡುಗಡೆ ಮಾಡಿದರು ಮತ್ತು ಉಪಸ್ಥಿತರಿದ್ದ ಪೂಜ್ಯ ಬೌದ್ಧ ಬಿಕ್ಕುಗಳಿಗೆ 'ಚೀವರ ದಾನ' ಮಾಡಿದರು.

‘ದಿ ಲೈಟ್ ಅಂಡ್ ದಿ ಲೋಟಸ್: ರೆಲಿಕ್ಸ್ ಆಫ್ ದಿ ಅವೇಕನ್ಡ್ ಒನ್’ ಎಂಬ ವಿಷಯದ ಅಡಿಯಲ್ಲಿ ರೂಪಿಸಲಾದ ಈ ಪ್ರದರ್ಶನವು, ಕ್ರಿ.ಪೂ. 6ನೇ ಶತಮಾನದಿಂದ ಇಂದಿನವರೆಗಿನ 80ಕ್ಕೂ ಹೆಚ್ಚು ವಿಶಿಷ್ಟ ಕಲಾಕೃತಿಗಳನ್ನು ಪ್ರದರ್ಶಿಸುತ್ತದೆ. ಇವುಗಳಲ್ಲಿ ಶಿಲ್ಪಗಳು, ಹಸ್ತಪ್ರತಿಗಳು, ತಂಗ್ಕಾ ಚಿತ್ರಪಟಗಳು, ಧಾರ್ಮಿಕ ವಿಧಿವಿಧಾನದ ವಸ್ತುಗಳು, ಅವಶೇಷಗಳು ಮತ್ತು ರತ್ನಖಚಿತ ನಿಧಿಗಳು ಸೇರಿವೆ. ಈ ಪ್ರದರ್ಶನದ ಪ್ರಮುಖ ಆಕರ್ಷಣೆಯೆಂದರೆ, ಪವಿತ್ರ ಅವಶೇಷಗಳು ಮೂಲತಃ ಪತ್ತೆಯಾದ ಏಕಶಿಲೆಯ ಕಲ್ಲಿನ ಪೆಟ್ಟಿಗೆ.

ಕಪಿಲವಸ್ತು ಎಂದು ಗುರುತಿಸಲಾದ ಪ್ರಾಚೀನ ಸ್ತೂಪದ ನಿವೇಶನದಲ್ಲಿ 1898ರಲ್ಲಿ ವಿಲಿಯಂ ಕ್ಲಾಕ್ಸ್ಟನ್ ಪೆಪ್ಪೆ ಅವರಿಂದ ಉತ್ಖನನ ಮಾಡಲ್ಪಟ್ಟ ಪಿಪ್ರಹ್ವಾ ಅವಶೇಷಗಳು, ಬುದ್ಧನ ಜೀವನಕ್ಕೆ ಸಂಬಂಧಿಸಿದ ಅತ್ಯಂತ ಮಹತ್ವದ ಪುರಾತತ್ವ ಆವಿಷ್ಕಾರಗಳಾಗಿವೆ. ಅವುಗಳ ಇಂದಿನ ಪುನರ್ಮಿಲನವು, ತನ್ನ ಸಾಂಸ್ಕೃತಿಕ ಪರಂಪರೆಯನ್ನು ಮರಳಿ ಪಡೆಯುವ, ಸಂರಕ್ಷಿಸುವ ಮತ್ತು ಗೌರವಿಸುವಲ್ಲಿ ಭಾರತ ಹೊಂದಿರುವ ಅಚಲ ಬದ್ಧತೆಗೆ ಪ್ರಬಲ ಸಾಕ್ಷಿಯಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತದ ಜಾಗತಿಕ ಒಡನಾಟವು ತನ್ನ ನಾಗರಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಹೆಚ್ಚು ಆಕರ್ಷಿಸಿದೆ. ಇಲ್ಲಿಯವರೆಗೆ 642 ಪುರಾತನ ವಸ್ತುಗಳನ್ನು ಭಾರತಕ್ಕೆ ಮರಳಿ ತರಲಾಗಿದ್ದು, ಈ ಪಿಪ್ರಹ್ವಾ ಅವಶೇಷಗಳ ಮರಳುವಿಕೆಯು ಸಾಂಸ್ಕೃತಿಕ ರಾಜತಾಂತ್ರಿಕತೆ ಮತ್ತು ಪರಂಪರೆಯ ಸಂರಕ್ಷಣೆಯಲ್ಲಿ ಒಂದು ಐತಿಹಾಸಿಕ ಸಾಧನೆಯಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವರು, ರಾಜತಾಂತ್ರಿಕ ಸಮೂಹದ ಪ್ರತಿನಿಧಿಗಳು, ರಾಯಭಾರಿಗಳು, ಪೂಜ್ಯ ಬೌದ್ಧ ಭಿಕ್ಷುಗಳು, ಸರ್ಕಾರದ ಹಿರಿಯ ಅಧಿಕಾರಿಗಳು, ವಿದ್ವಾಂಸರು, ಪರಂಪರೆ ತಜ್ಞರು, ಕಲಾ ಸಮುದಾಯದ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಭಾರತ ಮತ್ತು ವಿದೇಶಗಳ ಬೌದ್ಧ ಧರ್ಮದ ಅನುಯಾಯಿಗಳು ಉಪಸ್ಥಿತರಿದ್ದರು.

ಈ ಪ್ರದರ್ಶನವು ಪರಂಪರೆಯ ಸಂರಕ್ಷಣೆ ಮತ್ತು ಸಾಂಸ್ಕೃತಿಕ ನಾಯಕತ್ವದ ಕುರಿತಾದ ಸಂಸ್ಕೃತಿ ಸಚಿವಾಲಯದ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಅಷ್ಟೇ ಅಲ್ಲದೆ, ಬುದ್ಧ ಧಮ್ಮದ ಜನ್ಮಸ್ಥಳವಾಗಿ ಭಾರತಕ್ಕಿರುವ ವಿಶಿಷ್ಟ ಸ್ಥಾನಮಾನವನ್ನು ಸಂಭ್ರಮಿಸುವುದರ ಜೊತೆಗೆ, ತನ್ನ ನಾಗರಿಕ ಪರಂಪರೆಯನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವಲ್ಲಿ ಭಾರತಕ್ಕಿರುವ ನಿರಂತರ ಸಮರ್ಪಣಾ ಮನೋಭಾವವನ್ನು ಇದು ಪ್ರತಿಬಿಂಬಿಸುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, "125 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಭಾರತದ ಪರಂಪರೆಯ ಪುನರಾಗಮನವಾಗಿದೆ ಮತ್ತು ರಾಷ್ಟ್ರದ ಅಮೂಲ್ಯ ಪರಂಪರೆಯ ನಿಧಿ ತನ್ನ ಮನೆಗೆ ಮರಳಿದೆ. ಇಂದಿನಿಂದ, ಭಾರತದ ಜನತೆಯು ಭಗವಾನ್ ಬುದ್ಧನ ಈ ಪವಿತ್ರ ಅವಶೇಷಗಳ ದರ್ಶನವನ್ನು ಪಡೆಯಲು ಮತ್ತು ಅವರ ಆಶೀರ್ವಾದವನ್ನು ಪಡೆಯಲು ಸಾಧ್ಯವಾಗಲಿದೆ" ಎಂದು ಹೇಳಿದರು.

 

*****

 


(रिलीज़ आईडी: 2211179) आगंतुक पटल : 24
इस विज्ञप्ति को इन भाषाओं में पढ़ें: Marathi , हिन्दी , Bengali , Bengali-TR , English , Urdu