ಜಲ ಶಕ್ತಿ ಸಚಿವಾಲಯ
azadi ka amrit mahotsav

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು‌ (ಡಿಡಿಡಬ್ಲ್ಯೂಎಸ್) 8 ರಾಜ್ಯಗಳ 8 ಗ್ರಾಮ ಪಂಚಾಯತ್ ಕೇಂದ್ರಿತ ಗ್ರಾಮಗಳೊಂದಿಗೆ ಅವರ ಸ್ಥಳೀಯ ಭಾಷೆಯಲ್ಲಿಯೇ ಬಹುಭಾಷಾ 'ಸುಜಲ ಗ್ರಾಮ ಸಂವಾದ'ದ ಎರಡನೇ ಆವೃತ್ತಿಯನ್ನು ಆಯೋಜಿಸಿತು


ಕೇಂದ್ರ ಸಚಿವರಾದ ಶ್ರೀ ಸಿ. ಆರ್. ಪಾಟೀಲ್ ಅವರು ಗುಜರಾತಿನ ಮೆಹ್ಸಾನಾ ಜಿಲ್ಲೆಯ ಜಹೀರಪುರ ಗ್ರಾಮಸ್ಥರೊಂದಿಗೆ ಗುಜರಾತಿ ಭಾಷೆಯಲ್ಲಿ ಸಂವಾದ ನಡೆಸಿದರು

ಕರ್ನಾಟಕದ ಉಡುಪಿ ಜಿಲ್ಲೆಯ ಕೋಡಿ ಗ್ರಾಮಸ್ಥರೊಂದಿಗೆ ಕೇಂದ್ರ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಕನ್ನಡದಲ್ಲಿ ಸಂವಾದ ನಡೆಸಿದರು

ಗ್ರಾಮ ಸಮುದಾಯಗಳೊಂದಿಗೆ ಸ್ಥಳೀಯ ಭಾಷೆಯಲ್ಲಿ ಸಂವಾದ ನಡೆಸುವುದರಿಂದ 'ಜನ ಭಾಗೀದಾರಿ' (ಸಾರ್ವಜನಿಕ ಸಹಭಾಗಿತ್ವ) ಮತ್ತು ಸಮುದಾಯ ನೇತೃತ್ವದ ಜಲ ನಿರ್ವಹಣೆಯು ಬಲಗೊಳ್ಳುತ್ತದೆ

प्रविष्टि तिथि: 19 DEC 2025 4:56PM by PIB Bengaluru

ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು (ಡಿಡಿಡಬ್ಲ್ಯೂಎಸ್), ಇಂದು 'ಸುಜಲ ಗ್ರಾಮ ಸಂವಾದ'ದ ಎರಡನೇ ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಿತು. ಇದು ಭಾಗವಹಿಸುವಿಕೆಯ ಜಲ ಆಡಳಿತ ಮತ್ತು ಜಲ ಜೀವನ್ ಮಿಷನ್ (ಜೆಜೆಎಂ) ನ ಸಮುದಾಯ ನೇತೃತ್ವದ ಅನುಷ್ಠಾನಕ್ಕೆ ಭಾರತ ಸರ್ಕಾರದ ಬದ್ಧತೆಯನ್ನು ಬಲಪಡಿಸಿತು.

ಈ ವರ್ಚುವಲ್ ಸಂವಾದವು ಗ್ರಾಮ ಪಂಚಾಯತ್ ಪ್ರತಿನಿಧಿಗಳು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯರು, ಸಮುದಾಯದ ಭಾಗವಹಿಸುವವರು, ಮಹಿಳಾ ಸ್ವಸಹಾಯ ಸಂಘಗಳು ಮತ್ತು ಮುಂಚೂಣಿ ಕಾರ್ಯಕರ್ತರನ್ನು ಒಂದೆಡೆ ಸೇರಿಸಿತು. ಇವರೊಂದಿಗೆ ಜಿಲ್ಲಾಧಿಕಾರಿಗಳು/ಉಪ ಆಯುಕ್ತರು, ಜಿಲ್ಲಾ ಪಂಚಾಯತ್‌ ಗಳ ಸಿಇಒಗಳು, ಡಿಡಬ್ಲ್ಯೂಎಸ್ಎಂ ಅಧಿಕಾರಿಗಳು ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳು ಸಹ ಪಾಲ್ಗೊಂಡಿದ್ದರು.

ಸುಜಲ ಗ್ರಾಮ ಸಂವಾದದ ಎರಡನೇ ಆವೃತ್ತಿಯಲ್ಲಿ 8,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಇದು ಸಮುದಾಯಗಳು ಮತ್ತು ಅಧಿಕಾರಿಗಳ ನಡುವಿನ ಬಲವಾದ ತೊಡಗಿಸಿಕೊಳ್ಳುವಿಕೆಯನ್ನು ಪ್ರತಿಬಿಂಬಿಸುತ್ತದೆ. ಇದರ ಜೊತೆಗೆ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಹಿಳೆಯರು, ಮಕ್ಕಳು, ಯುವಕರು ಮತ್ತು ಹಿರಿಯ ಸಮುದಾಯದ ಸದಸ್ಯರು ಸೇರಿದಂತೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗಳಾಗಿ ಈ ಸಂವಾದದಲ್ಲಿ ಭಾಗವಹಿಸಿದ್ದರು. ಇವರ ಸಾಮೂಹಿಕ ಭಾಗವಹಿಸುವಿಕೆಯು ನೋಂದಾಯಿತ ಸಂಖ್ಯೆಗಿಂತಲೂ ಅಧಿಕವಾಗಿತ್ತು.

A group of men sitting at a tableAI-generated content may be incorrect.

ಗ್ರಾಮ ಪಂಚಾಯಿತಿ ಕೇಂದ್ರ ಕಚೇರಿ ಹೊಂದಿರುವ 8 ಗ್ರಾಮಗಳೊಂದಿಗೆ ಗ್ರಾಮ ಮಟ್ಟದ ಸಂವಾದಗಳನ್ನು ನಡೆಸಲಾಯಿತು. ಕೇಂದ್ರ ಸಚಿವರು ಗುಜರಾತಿನ ಮೆಹ್ಸಾನಾ ಜಿಲ್ಲೆಯ ಜಹಿರಪುರ ಗ್ರಾಮಸ್ಥರೊಂದಿಗೆ ಗುಜರಾತಿ ಭಾಷೆಯಲ್ಲಿ ಸಂವಾದ ನಡೆಸಿದರು, ರಾಜ್ಯ ಸಚಿವ ಶ್ರೀ ವಿ. ಸೋಮಣ್ಣ ಕರ್ನಾಟಕದ ಉಡುಪಿ ಜಿಲ್ಲೆಯ ಕೋಡಿ ಗ್ರಾಮದ ಸಮುದಾಯದೊಂದಿಗೆ ಕನ್ನಡದಲ್ಲಿ ಸಂವಾದ ನಡೆಸಿದರು.

ಜನಸಾಮಾನ್ಯರ ಧ್ವನಿಗಳು

1. ಜಹೀರಪುರ, ಮೆಹ್ಸಾನಾ, ಗುಜರಾತ್

ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ. ಆರ್. ಪಾಟೀಲ್ ಅವರು ಗ್ರಾಮಸ್ಥರನ್ನು ಆತ್ಮೀಯವಾಗಿ "ಕೆಮ್ ಚೋ" (ಹೇಗಿದ್ದೀರಿ) ಎಂದು ಸ್ವಾಗತಿಸುವ ಮೂಲಕ ಮತ್ತು ಅವರೊಂದಿಗೆ ಗುಜರಾತಿ ಭಾಷೆಯಲ್ಲಿ ಮಾತನಾಡುವ ಮೂಲಕ ಸಂವಾದಕ್ಕೆ ಒಂದು ಆಪ್ತವಾದ ವಾತಾವರಣವನ್ನು ಸೃಷ್ಟಿಸಿದರು.

ಗ್ರಾಮಸ್ಥರು ಸ್ವಚ್ಛ ಮತ್ತು ಸುರಕ್ಷಿತ ಕುಡಿಯುವ ನೀರಿನ ಲಭ್ಯತೆಯಿಂದಾಗಿ ನೀರಿನಿಂದ ಹರಡುವ ಕಾಯಿಲೆಗಳು ಕಡಿಮೆಯಾಗಿವೆ ಎಂದು ಹೇಳಿದರು. ಇದರಿಂದಾಗಿ ವೈದ್ಯಕೀಯ ವೆಚ್ಚಗಳು ಉಳಿತಾಯವಾಗುತ್ತಿದ್ದು, ಆ ಹಣವನ್ನು ಕುಟುಂಬಗಳು ಈಗ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹೂಡಿಕೆ ಮಾಡಲು ಸಾಧ್ಯವಾಗುತ್ತಿದೆ. ಪ್ರತಿದಿನ ನೀರು ತರುವ ದೈಹಿಕ ಹೊರೆಯಿಂದ ಮುಕ್ತಿ ಸಿಕ್ಕಿರುವುದು, ನಿಯಮಿತವಾಗಿ ನೀರಿನ ಗುಣಮಟ್ಟ ಪರೀಕ್ಷೆ ನಡೆಯುತ್ತಿರುವುದು, ಪೈಪ್‌ಲೈನ್‌ಗಳ ತ್ವರಿತ ದುರಸ್ತಿ ಮತ್ತು ವರ್ಷವಿಡೀ ಸ್ವಚ್ಛ ಕುಡಿಯುವ ನೀರಿನ ಲಭ್ಯತೆಯ ಬಗ್ಗೆಯೂ ಅವರು ಒತ್ತಿ ಹೇಳಿದರು.

ವ್ಯವಸ್ಥೆಯ ನಿರ್ವಹಣೆಯಲ್ಲಿ ಸಕ್ರಿಯವಾಗಿರುವ ಪಾನಿ ಸಮಿತಿಯು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ತಿಳಿಸಿದರು. ಪ್ರತಿ ಮನೆಯಿಂದ ₹700 ಬಳಕೆದಾರರ ಶುಲ್ಕವನ್ನು ಸಂಗ್ರಹಿಸುವುದು ಮತ್ತು ಸಮಯೋಚಿತ ಕಾರ್ಯಾಚರಣೆ ಹಾಗೂ ನಿರ್ವಹಣೆಯನ್ನು ಈ ಸಮಿತಿಯು ಖಚಿತಪಡಿಸುತ್ತಿದೆ. ಈ ಸಂವಾದವು ಸಮುದಾಯ ನಿರ್ವಹಣೆಯ ಕುಡಿಯುವ ನೀರು ಪೂರೈಕೆಯ 'ಗುಜರಾತ್ ಮಾದರಿ' ಏಕೆ ದೇಶಾದ್ಯಂತ ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ ಎಂಬುದನ್ನು ಪ್ರತಿಬಿಂಬಿಸಿತು.

2. ಕೋಡಿ, ಉಡುಪಿ, ಕರ್ನಾಟಕ

ಕರ್ನಾಟಕದ ಉಡುಪಿ ಜಿಲ್ಲೆಯ ಕೋಡಿ ಗ್ರಾಮ ಪಂಚಾಯತ್‌ ನಲ್ಲಿ, ಗ್ರಾಮವು ಸಾಧಿಸಿರುವ 24×7 ಕುಡಿಯುವ ನೀರು ಪೂರೈಕೆಯ ಬಗ್ಗೆ ಸಂವಾದವು ಕೇಂದ್ರೀಕೃತವಾಗಿತ್ತು. ಈ ಸಾಧನೆಯು ಜಿಲ್ಲೆಯಲ್ಲೇ ಒಂದು ಮಾನದಂಡವಾಗಿ ಹೊರಹೊಮ್ಮಿದೆ.

ಕೇಂದ್ರ ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಆತ್ಮೀಯವಾಗಿ "ನಮಸ್ಕಾರ" ಎಂದು ಹೇಳುವ ಮೂಲಕ ಸಂವಾದವನ್ನು ಪ್ರಾರಂಭಿಸಿದರು ಮತ್ತು ಕನ್ನಡದಲ್ಲಿ ಮುಕ್ತವಾಗಿ ಮಾತನಾಡಲು ಪ್ರೇರೇಪಿಸಿದರು. ಸಮುದಾಯದ ಸದಸ್ಯರು ನಿಯಮಿತವಾಗಿ ನಡೆಯುವ ಎಫ್‌ ಟಿ ಕೆ (Field Test Kit) ಆಧಾರಿತ ನೀರಿನ ಗುಣಮಟ್ಟ ಪರೀಕ್ಷೆ, ದಿಶಾ (DISHA) ಸಭೆಗಳಲ್ಲಿ ನಡೆದ ಚರ್ಚೆಗಳು ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆಯುವ ಪಾರದರ್ಶಕ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು.

ದೈನಂದಿನ ಕಾರ್ಯಾಚರಣೆ ಮತ್ತು ನಿರ್ವಹಣೆ, ನೀರಿನ ಗುಣಮಟ್ಟದ ಮೇಲ್ವಿಚಾರಣೆ ಮತ್ತು ಶುಲ್ಕ ಸಂಗ್ರಹಣೆಯಲ್ಲಿ 'ನಲ್ ಜಲ್ ಮಿತ್ರರು' ವಹಿಸುತ್ತಿರುವ ಪ್ರಮುಖ ಪಾತ್ರವನ್ನು ಗ್ರಾಮಸ್ಥರು ಎತ್ತಿ ತೋರಿಸಿದರು. ನಿಯಮಿತವಾಗಿ ಪಾವತಿಸುವ ಬಳಕೆದಾರರ ಶುಲ್ಕ ಮತ್ತು ಬಲವಾದ ಸಾಂಸ್ಥಿಕ ಕಾರ್ಯವಿಧಾನಗಳು ಹೇಗೆ ಆರ್ಥಿಕ ಸುಸ್ಥಿರತೆಯನ್ನು ಮತ್ತು ಅಡೆತಡೆಯಿಲ್ಲದ ಸೇವಾ ವಿತರಣೆಯನ್ನು ಖಚಿತಪಡಿಸಿವೆ ಎಂದು ಸಮುದಾಯವು ವಿವರಿಸಿತು.

3. ಪಾಚೆಖಾನಿ, ಪಾಕ್ಯೊಂಗ್, ಸಿಕ್ಕಿಂ

ಪಾಕ್ಯೊಂಗ್  ಜಿಲ್ಲೆಯ ಪಾಚೆಖಾನಿ ಗ್ರಾಮದಲ್ಲಿ, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು, ಶಾಲಾ ಮಕ್ಕಳು ಮತ್ತು ಸಮುದಾಯದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಯಿತು. ಇವರು ಗ್ರಾಮ ಮತ್ತು ಶಾಲಾ ನೈರ್ಮಲ್ಯದ ಫಲಿತಾಂಶಗಳನ್ನು ಸುಧಾರಿಸುವಲ್ಲಿ ಬಲಿಷ್ಠ ವಾಶ್ (WASH - ನೀರು, ನೈರ್ಮಲ್ಯ ಮತ್ತು ಆರೋಗ್ಯ) ಪರಿಸರ ವ್ಯವಸ್ಥೆಯ ಪಾತ್ರವನ್ನು ಉಲ್ಲೇಖಿಸಿದರು. ಪರಿಣಾಮಕಾರಿ ಕುಂದುಕೊರತೆ ನಿವಾರಣಾ ವ್ಯವಸ್ಥೆ ಮತ್ತು ನೀರು ಸರಬರಾಜು ಯೋಜನೆಗಳ ಕಾರ್ಯಾಚರಣೆ ಹಾಗೂ ನಿರ್ವಹಣೆಯಲ್ಲಿ ಸಮುದಾಯದ ಬಲವಾದ ಭಾಗವಹಿಸುವಿಕೆಯ ಬಗ್ಗೆ ಗ್ರಾಮಸ್ಥರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಸ್ವಚ್ಛ ಭಾರತ ಮಿಷನ್ ಗ್ರಾಮೀಣ್‌ ನ ಜಂಟಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕಿ  ಶ್ರೀಮತಿ ಐಶ್ವರ್ಯಾ ಸಿಂಗ್ ಅವರು ಸಮುದಾಯದೊಂದಿಗೆ ನೇಪಾಳಿ ಭಾಷೆಯಲ್ಲಿ ಸಂವಾದ ನಡೆಸಿ, ಸ್ಥಳೀಯ ನೀರಿನ ಪರಿಸ್ಥಿತಿ, ನೀರಿನ ಮೂಲಗಳ ಸುಸ್ಥಿರತೆಯ ಕ್ರಮಗಳು, ಬಳಕೆದಾರರ ಶುಲ್ಕ ಸಂಗ್ರಹಣೆ ಮತ್ತು ಕಾರ್ಯಾಚರಣೆ ಹಾಗೂ ನಿರ್ವಹಣಾ ಪದ್ಧತಿಗಳ ಬಗ್ಗೆ ಚರ್ಚಿಸಿದರು.

ಶಾಲೆಗಳಲ್ಲಿನ ವಾಶ್ (WASH) ಚಟುವಟಿಕೆಗಳ ಮೇಲೆ ವಿಶೇಷ ಗಮನ ಹರಿಸಲಾಯಿತು, ಇದರಲ್ಲಿ ಮಕ್ಕಳಿಗಾಗಿ ಜಾಗೃತಿ ಕಾರ್ಯಕ್ರಮಗಳು ಮತ್ತು ಶಾಲಾ ಶಿಕ್ಷಣದಲ್ಲಿ ವಾಶ್ ಅಂಶಗಳನ್ನು ಸೇರಿಸುವ ಪ್ರಾಮುಖ್ಯತೆಯ ಬಗ್ಗೆ ಚರ್ಚಿಸಲಾಯಿತು. ಆರಂಭಿಕ ಹಂತದಲ್ಲಿನ ಸಂವೇದನಾಶೀಲತೆ ಮತ್ತು ಸಮುದಾಯದ ಮಾಲೀಕತ್ವವು ದೀರ್ಘಕಾಲದ ಸುಸ್ಥಿರತೆಗೆ ಹೇಗೆ ಕೊಡುಗೆ ನೀಡುತ್ತದೆ ಎಂಬುದನ್ನು ಈ ಸಂವಾದವು ಒತ್ತಿಹೇಳಿತು.

4. ಅವ್ನೀರಾ, ಶೋಪಿಯಾನ್, ಜಮ್ಮು ಮತ್ತು ಕಾಶ್ಮೀರ

ಸಮುದಾಯದ ಸದಸ್ಯರು ಉರ್ದು ಮತ್ತು ಹಿಂದಿಯಲ್ಲಿ ಮಾತನಾಡುತ್ತಾ, ಜಲ ಜೀವನ್ ಮಿಷನ್ ತಂದಿರುವ ಗಮನಾರ್ಹ ಬದಲಾವಣೆಗಳನ್ನು ಹಂಚಿಕೊಂಡರು. ಜೆಜೆಎಂ ಆರಂಭವಾಗುವ ಮೊದಲು, ಗ್ರಾಮಸ್ಥರು, ವಿಶೇಷವಾಗಿ ಮಹಿಳೆಯರು, ನೀರು ತರಲು ನದಿಗಳು ಮತ್ತು 'ಚಶ್ಮಾ'ಗಳ (ನೈಸರ್ಗಿಕ ಬುಗ್ಗೆಗಳು) ಕಡೆಗೆ ಹಲವು ಕಿಲೋಮೀಟರ್‌ಗಳಷ್ಟು ದೂರ ನಡೆಯಬೇಕಿತ್ತು. ಆ ನೀರು ಆಗಾಗ್ಗೆ ಕೆಸರುಮಯವಾಗಿರುತ್ತಿತ್ತು ಮತ್ತು ಕುಡಿಯಲು ಅಸುರಕ್ಷಿತವಾಗಿತ್ತು ಎಂದು ಅವರು ನೆನಪಿಸಿಕೊಂಡರು. ಇಂದು, ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕವಿದ್ದು, ಮನೆಗಳಿಗೆ ಸ್ವಚ್ಛ ಕುಡಿಯುವ ನೀರು ದೊರೆಯುತ್ತಿದೆ ಮತ್ತು ಪ್ರಯೋಗಾಲಯಗಳ ಮೂಲಕ ನಿಯಮಿತವಾಗಿ ನೀರಿನ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತಿದೆ.

ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳು ಈಗ ನಿರಂತರ ನೀರು ಪೂರೈಕೆಯನ್ನು ಹೊಂದಿವೆ, ಇದು ಮೊದಲು ಇರಲಿಲ್ಲ ಎಂದು ಸಮುದಾಯದವರು ಒತ್ತಿ ಹೇಳಿದರು. ಇದರೊಂದಿಗೆ ನೀರಿನ ಮೂಲ ಸಂರಕ್ಷಣೆ, ಮಾಲಿನ್ಯ ತಡೆಗಟ್ಟುವಿಕೆ ಮತ್ತು ದೀರ್ಘಕಾಲದ ಸುಸ್ಥಿರತೆಗಾಗಿ ಶ್ರಮಿಸುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದರು.

ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಲಾಗಿದ್ದರೂ, ಅವುಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಡೆಗೆ ನಿರಂತರ ಗಮನ ಹರಿಸುವುದು ಅತ್ಯಗತ್ಯ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು. ಸುಮಾರು ₹6.7 ಕೋಟಿ ಮೌಲ್ಯದ ನೀರು ಪೂರೈಕೆ ಯೋಜನೆಗಳು ಆ ಪ್ರದೇಶದ 5,000 ಕ್ಕೂ ಹೆಚ್ಚು ಜನರಿಗೆ ಪ್ರಯೋಜನ ನೀಡಿವೆ ಎಂದು ಮಾಹಿತಿ ನೀಡಲಾಯಿತು.

ಮುಂದಿನ ಯೋಜನೆಗಳ ಬಗ್ಗೆ ಮಾತನಾಡುತ್ತಾ, ಶಾಲೆಗಳಲ್ಲಿ ಬೂದು ನೀರು ನಿರ್ವಹಣಾ ರಚನೆಗಳು, ಎಂನರೇಗಾ ಯೋಜನೆಯೊಂದಿಗೆ ಸಮನ್ವಯ ಸಾಧಿಸಿ ಅಂದಾಜು ₹84 ಲಕ್ಷ ಅನುದಾನದ ಬಳಕೆ ಮತ್ತು ವಾರ್ಷಿಕ ಆಸ್ತಿವಾರು ಲೆಕ್ಕಪರಿಶೋಧನೆ ಮಾಡುವ ಗುರಿಯನ್ನು ಗ್ರಾಮಸ್ಥರು ಹಂಚಿಕೊಂಡರು.

ಕೊನೆಯ ಹಂತದ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ನೈಸರ್ಗಿಕ ಬುಗ್ಗೆಗಳನ್ನು ಪ್ರಮುಖ ಮೂಲವಾಗಿಟ್ಟುಕೋಮಡು ಪೈಪ್‌ಲೈನ್ ಅನ್ನು 8 ಕಿ.ಮೀ ನಿಂದ 32 ಕಿ.ಮೀ ವರೆಗೆ ವಿಸ್ತರಿಸಲಾಗಿದೆ. ನಬಾರ್ಡ್ ಬೆಂಬಲದೊಂದಿಗೆ ಸ್ಪ್ರಿಂಗ್-ಶೆಡ್ ಅಭಿವೃದ್ಧಿ, ಸಮುದಾಯದ ನೇತೃತ್ವದ ಶ್ರಮದಾನ, ಸಾಮಾಜಿಕ ಬೇಲಿ (Social fencing), ಮರುಪೂರಣ ರಚನೆಗಳು ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಪ್ರದೇಶದ ಕೃಷಿಯು ಹೆಚ್ಚಾಗಿ ಸೇಬು ಆಧಾರಿತವಾಗಿದ್ದು, ನೀರಿನ ಲಭ್ಯತೆಗೆ ಅನುಗುಣವಾಗಿ ಕೃಷಿ ಚಟುವಟಿಕೆಗಳನ್ನು ರೂಪಿಸಲಾಗುತ್ತಿದೆ. ಗ್ರಾಮಸ್ಥರು ನೀರಿನ ಮಟ್ಟ ಮತ್ತು ಬಳಕೆಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

5. ಡಾಕಿನ್ ಪರ್ಬೊತಿಯಾ, ಜೋರ್ಹತ್, ಅಸ್ಸಾಂ

ಅಸ್ಸಾಂನಲ್ಲಿ, ಅಸ್ಸಾಮಿ ಭಾಷೆಯಲ್ಲಿ ನಡೆದ ಚರ್ಚೆಯು ನೀರು ಸರಬರಾಜು ಯೋಜನೆಗಳ ಕಾರ್ಯಕ್ಷಮತೆ ಮತ್ತು ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ಕೇಂದ್ರೀಕೃತವಾಗಿತ್ತು. ಜಿಲ್ಲೆಯಲ್ಲಿ 221 ಯೋಜನೆಗಳನ್ನು ಹಸ್ತಾಂತರಿಸಲಾಗಿದ್ದು, ಈ ಪೈಕಿ 182 ಯೋಜನೆಗಳು ನಿಯಮಿತವಾಗಿ ಮತ್ತು ಶೇಕಡಾ 100 ರಷ್ಟು ಬಳಕೆದಾರರ ಶುಲ್ಕ ಸಂಗ್ರಹಣೆಯನ್ನು ದಾಖಲಿಸಿವೆ. ಈ ಸಾಧನೆಯ ಮೂಲಕ ಜಿಲ್ಲೆಯು ಶುಲ್ಕ ಸಂಗ್ರಹಣೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.

ದೈನಂದಿನ ಫ್ಲೋ ಮೀಟರ್ ರೀಡಿಂಗ್‌ ಗಳು ಸೇರಿದಂತೆ ನಿಯಮಿತ ಮೇಲ್ವಿಚಾರಣೆಯನ್ನು 'ಜೆಜೆಎಂ ಬ್ರೈನ್ ಆಪ್') ಮೂಲಕ ನಡೆಸಲಾಗುತ್ತಿದೆ. ಸಣ್ಣಪುಟ್ಟ ಅಡಚಣೆಗಳನ್ನು 'ಜಲ ಮಿತ್ರರು' ಕೂಡಲೇ ಸರಿಪಡಿಸುತ್ತಿದ್ದಾರೆ. ಅಭಿವೃದ್ಧಿ ಕಾಮಗಾರಿಗಳ ಸಂದರ್ಭದಲ್ಲಿ ಹಾನಿ ತಡೆಗಟ್ಟಲು ಮತ್ತು ಕುಂದುಕೊರತೆಗಳನ್ನು ಸಮಯೋಚಿತವಾಗಿ ಪರಿಹರಿಸಲು ಪಾಕ್ಷಿಕ ಡಿಡಬ್ಲ್ಯೂಎಸ್ಎಂ ಸಭೆಗಳು, ಮಾಸಿಕ ಜಲ ಬೈಠಕ್‌ ಗಳು ಮತ್ತು ಯುಟಿಲಿಟಿ-ಶಿಫ್ಟಿಂಗ್ ಸಮಿತಿಗಳಂತಹ ಸಾಂಸ್ಥಿಕ ಕಾರ್ಯವಿಧಾನಗಳನ್ನು ಎತ್ತಿ ತೋರಿಸಲಾಯಿತು.

ವರದಿಗಳನ್ನು ಐಎಂಐಎಸ್ ಪೋರ್ಟಲ್‌ ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ. ವ್ಯವಸ್ಥೆಯ ಸ್ಪಂದನಶೀಲತೆ ಮತ್ತು ಯೋಜನೆಯ ನಿರ್ವಹಣೆಯಲ್ಲಿ ಸಮುದಾಯದ ಬಲವಾದ ತೊಡಗಿಸಿಕೊಳ್ಳುವಿಕೆಯ ಬಗ್ಗೆ ಗ್ರಾಮಸ್ಥರು ತೃಪ್ತಿ ವ್ಯಕ್ತಪಡಿಸಿದರು.

6. ಕಲುವಾಲಾ, ಡೆಹ್ರಾಡೂನ್, ಉತ್ತರಾಖಂಡ

ಡೆಹ್ರಾಡೂನ್ ಜಿಲ್ಲೆಯ ಕಲುವಾಲಾ ಗ್ರಾಮಸ್ಥರು, ಪಹಾಡಿ/ಡೋಗ್ರಿ ಭಾಷೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ತರಬೇತಿ ಪಡೆದ ಮಹಿಳೆಯರು ವರ್ಷಕ್ಕೆ ಎರಡು ಬಾರಿ (ಮುಂಗಾರಿಗೆ ಮೊದಲು ಮತ್ತು ನಂತರ) ಮತ್ತು ಅಗತ್ಯವಿದ್ದಾಗ ಹೆಚ್ಚುವರಿಯಾಗಿ ನೀರಿನ ಗುಣಮಟ್ಟ ಪರೀಕ್ಷೆಯನ್ನು ನಡೆಸುತ್ತಾರೆ ಎಂದು ಅವರು ತಿಳಿಸಿದರು. ಪರೀಕ್ಷೆಯ ಸಮಯದಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ, ಅವುಗಳನ್ನು ತಕ್ಷಣವೇ ಸರಿಪಡಿಸಲು ಜಿಲ್ಲಾ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ಸಣ್ಣಪುಟ್ಟ ದುರಸ್ತಿ ಮತ್ತು ಸೋರಿಕೆಗಳನ್ನು ಗ್ರಾಮ ಮಟ್ಟದಲ್ಲೇ ಪಾನಿ ಸಮಿತಿಯು ಸ್ಥಳೀಯ ಪ್ಲಂಬರ್‌ ಗಳ ಸಹಾಯದೊಂದಿಗೆ ಸರಿಪಡಿಸಿ, ಅಡೆತಡೆಯಿಲ್ಲದ ನೀರು ಪೂರೈಕೆಯನ್ನು ಖಚಿತಪಡಿಸುತ್ತಿದೆ.

ಜಲಮೂಲಗಳ ಅಭಿವೃದ್ಧಿ ಮತ್ತು ದೀರ್ಘಕಾಲದ ಸುಸ್ಥಿರತೆಯ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತಿದ್ದು, ಇದನ್ನು ಎಂನರೇಗಾ ಮತ್ತು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳೊಂದಿಗೆ ಸಂಯೋಜಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಜಲ ಸಖಿಯರು ಮತ್ತು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಯೋಜನೆಗಳ ಮೇಲ್ವಿಚಾರಣೆ, ಸಮಸ್ಯೆಗಳ ವರದಿ ಮತ್ತು ಬಳಕೆದಾರರ ಶುಲ್ಕ ಸಂಗ್ರಹಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ಮಾದರಿಯನ್ನು ಪ್ರಸ್ತುತ ಮೂರು ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಜಿಲ್ಲೆಯಾದ್ಯಂತ ವಿಸ್ತರಿಸಲು ಉದ್ದೇಶಿಸಲಾಗಿದೆ.

ಹಿರಿಯ ನಾಗರಿಕರು ಮತ್ತು ಶಾಲಾ ಮಕ್ಕಳು ಸೇರಿದಂತೆ ಸಮುದಾಯದ ಸದಸ್ಯರು ಸುರಕ್ಷಿತ ನೀರಿನ ಲಭ್ಯತೆಗಾಗಿ ಕೃತಜ್ಞತೆ ಸಲ್ಲಿಸಿದರು. ಶಾಲೆಗಳಲ್ಲಿ ಸುರಕ್ಷಿತ ಕುಡಿಯುವ ನೀರಿನ ಲಭ್ಯತೆ, ನಿಯಮಿತ ಪರೀಕ್ಷೆ ಮತ್ತು ಸ್ವಚ್ಛ ನೈರ್ಮಲ್ಯ ಸೌಲಭ್ಯಗಳಿಂದಾಗಿ 200 ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿನಿಯರಿಗೆ ಅನುಕೂಲವಾಗಿದೆ. ಜಿಲ್ಲೆಯ ಶೇ. 91 ಕ್ಕೂ ಹೆಚ್ಚು ಗ್ರಾಮಗಳು 'ಹರ್ ಘರ್ ಜಲ್' (ಪ್ರತಿ ಮನೆಗೆ ನೀರು) ಸ್ಥಾನಮಾನವನ್ನು ಸಾಧಿಸಿವೆ. ಜನವರಿಯಿಂದ ಪ್ರಾರಂಭವಾಗಲಿರುವ ಸಾಮಾಜಿಕ ಲೆಕ್ಕಪರಿಶೋಧನೆ, ನಿಯಮಿತ ಮಾಸಿಕ ಡಿಡಬ್ಲ್ಯೂಎಸ್ಎಂ ಸಭೆಗಳು ಮತ್ತು ಡ್ಯಾಶ್‌ ಬೋರ್ಡ್ ಆಧಾರಿತ ಮೇಲ್ವಿಚಾರಣೆಯು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತಿದೆ.

A screenshot of a video conferenceAI-generated content may be incorrect.

7. ಆರಣಿ, ಸಿಂಡೆಗಾ, ಜಾರ್ಖಂಡ್

ತಮ್ಮ ಸ್ಥಳೀಯ ಭಾಷೆಯಾದ ಸಾದ್ರಿಯಲ್ಲಿ ಮಾತನಾಡಿದ ಸಮುದಾಯದ ಸದಸ್ಯರು, ಪ್ರತಿ ತಿಂಗಳು ನೀರಿನ ಗುಣಮಟ್ಟ ಪರೀಕ್ಷೆ ನಡೆಸಲಾಗುತ್ತಿದೆ ಮತ್ತು ಅದರ ಫಲಿತಾಂಶಗಳನ್ನು ಮೊಬೈಲ್ ಫೋನ್ ಮೂಲಕ 'ನೀರಿನ ಗುಣಮಟ್ಟ ನಿರ್ವಹಣಾ ಮಾಹಿತಿ ವ್ಯವಸ್ಥೆ' (WQMIS) ಪೋರ್ಟಲ್‌ ನಲ್ಲಿ ವರದಿ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸ್ವಸಹಾಯ ಸಂಘಗಳ ಮಹಿಳೆಯರು ಮತ್ತು 'ಜಲ ಸಖಿಯರು' ಪರೀಕ್ಷೆ, ವರದಿ ಮತ್ತು ಜಾಗೃತಿ ಮೂಡಿಸುವಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ.

ನೀರು ತರಲು ವ್ಯಯವಾಗುತ್ತಿದ್ದ ಸಮಯ ಈಗ ಉಳಿತಾಯವಾಗುತ್ತಿದ್ದು, ಆ ಸಮಯವನ್ನು ದಿನಸಿ ನಿರ್ವಹಣೆ, ಕೃಷಿ ಮತ್ತು ಮೇಕೆ ಸಾಕಾಣಿಕೆಯಂತಹ ಉತ್ಪಾದಕ ಕೆಲಸಗಳಿಗೆ ಬಳಸಲಾಗುತ್ತಿದೆ ಎಂದು ಗ್ರಾಮಸ್ಥರು ವಿವರಿಸಿದರು. ಎಂಟನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು, ಕಳೆದ ಎರಡು ವರ್ಷಗಳಿಂದ ಶಾಲೆಯಲ್ಲಿ ಸ್ವಚ್ಛ ಕುಡಿಯುವ ನೀರು ಲಭ್ಯವಿರುವುದರಿಂದ ವಿದ್ಯಾರ್ಥಿಗಳ ಹಾಜರಾತಿ ಸುಧಾರಿಸಿದೆ ಎಂದು ಹಂಚಿಕೊಂಡಳು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಜಲ ಸಖಿಯರು ಬಳಕೆದಾರರ ಶುಲ್ಕ ಸಂಗ್ರಹಣೆ, ನಿಯಮಿತ ಜಾಗೃತಿ ಸಭೆಗಳು ಮತ್ತು ನಿರ್ವಹಣಾ ಕಾರ್ಯಗಳ ಬಗ್ಗೆ ಮಾತನಾಡಿದರು.

ಬೆಟ್ಟಗುಡ್ಡಗಳಿಂದ ಕೂಡಿದ ಮತ್ತು ಸುಮಾರು ಶೇ. 70 ರಷ್ಟು ಪರಿಶಿಷ್ಟ ಪಂಗಡದ ಜನಸಂಖ್ಯೆಯನ್ನು ಹೊಂದಿರುವ ಈ ಜಿಲ್ಲೆಯು ಬೇಸಿಗೆಯಲ್ಲಿ ನೀರಿನ ಮೂಲಗಳು ಬತ್ತಿಹೋಗುವ ಸವಾಲನ್ನು ಎದುರಿಸುತ್ತಿದೆ. ಇದನ್ನು ಎದುರಿಸಲು, ಜಲ ಸಖಿಯರ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಮೂಲ ಸುಸ್ಥಿರತೆ ಮತ್ತು ಜಲ ಸಂರಕ್ಷಣಾ ಕ್ರಮಗಳಾದ ಇಂಗು ಗುಂಡಿಗಳು ಹಾಗೂ ಮರುಪೂರಣ ರಚನೆಗಳನ್ನು ಉತ್ತೇಜಿಸಲಾಗುತ್ತಿದೆ. ಜಲ ಸಖಿಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಮುದಾಯದ ಬಲವಾದ ತೊಡಗಿಸಿಕೊಳ್ಳುವಿಕೆಯ ಮೂಲಕ 'ಜನ ಭಾಗೀದಾರಿ' ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಗ್ರಾಮದ ಎಲ್ಲಾ 399 ಮನೆಗಳು ಬಳಕೆದಾರರ ಶುಲ್ಕವನ್ನು ಪಾವತಿಸುತ್ತಿವೆ ಮತ್ತು ಜಿಲ್ಲೆಯಾದ್ಯಂತ 4,000 ಕ್ಕೂ ಹೆಚ್ಚು ಏಕ ಗ್ರಾಮ ಯೋಜನೆಗಳನ್ನು ಪಂಚಾಯತ್‌ ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು. ಒಟ್ಟು 93 ಪಂಚಾಯತ್‌ ಗಳಿಗೆ ತರಬೇತಿ ನೀಡಲಾಗಿದ್ದು, ಸುಸ್ಥಿರತೆಯನ್ನು ಬಲಪಡಿಸಲು ಎಂನರೇಗಾ ಯೋಜನೆಯೊಂದಿಗೆ ಸಮನ್ವಯ ಸಾಧಿಸಿ ನಿಯಮಿತ ಮೇಲ್ವಿಚಾರಣೆ ನಡೆಸಲಾಗುತ್ತಿದೆ.

8. ಲೋಹರಾ, ಚಂದ್ರಾಪುರ, ಮಹಾರಾಷ್ಟ್ರ

ಮರಾಠಿ ಸಮುದಾಯದ ಸದಸ್ಯರು ಹಂಚಿಕೊಂಡಂತೆ, ಈ ಯೋಜನೆಯ ಯಶಸ್ಸು ಅದರ ವಿನ್ಯಾಸದ ಹಂತದಿಂದ ಅನುಷ್ಠಾನದವರೆಗೆ ನಡೆದ ದೃಢವಾದ ಯೋಜನೆ ಮತ್ತು ಅದರಲ್ಲಿ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಹಾಗೂ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಸಾಧ್ಯವಾಗಿದೆ.

ನೀರಿನ ತೆರಿಗೆಯನ್ನು ಸಕಾಲದಲ್ಲಿ ಸಂಗ್ರಹಿಸುವುದು, ಗ್ರಾಮಸ್ಥರಲ್ಲಿನ ಮಾಲೀಕತ್ವದ ಪ್ರಬಲ ಭಾವನೆ ಮತ್ತು ಜಿಲ್ಲಾಡಳಿತದ ನಿರಂತರ ಮೇಲ್ವಿಚಾರಣೆಯನ್ನು ಗ್ರಾಮಸ್ಥರು ಪ್ರಮುಖವಾಗಿ ಎತ್ತಿ ತೋರಿಸಿದರು. ಸಹವರ್ತಿ ಕಲಿಕೆ ಮತ್ತು ಅನುಭವ ಹಂಚಿಕೆಯು ಅನುಷ್ಠಾನವನ್ನು ಸುಧಾರಿಸಲು ಸಹಾಯ ಮಾಡಿದ್ದರೆ, ನಿಯಮಿತ ನೀರಿನ ಗುಣಮಟ್ಟ ಪರೀಕ್ಷೆಯು ಮನೆಗಳು, ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಸುರಕ್ಷಿತ ಮತ್ತು ಕುಡಿಯಲು ಯೋಗ್ಯವಾದ ನೀರನ್ನು ಖಚಿತಪಡಿಸಿದೆ.

ಪ್ರತಿ ಮನೆಗೆ ತಿಂಗಳಿಗೆ ₹90 ನೀರಿನ ತೆರಿಗೆಯನ್ನು ನಿಗದಿಪಡಿಸಲಾಗಿದ್ದು, ಕ್ಯುಆರ್‌ ಕೋಡ್‌ ಆಧಾರಿತ ಪಾವತಿ ವ್ಯವಸ್ಥೆಯು ನಿವಾಸಿಗಳು ಮನೆಯಿಂದಲೇ ಅನುಕೂಲಕರವಾಗಿ ಹಣ ಪಾವತಿಸಲು ಅವಕಾಶ ಮಾಡಿಕೊಟ್ಟಿದೆ. ಜಲ ಸುರಕ್ಷಕರು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವುದು ಮತ್ತು ಸಕಾಲದಲ್ಲಿ ತೆರಿಗೆ ಸಂಗ್ರಹಿಸುವುದನ್ನು ಖಚಿತಪಡಿಸುತ್ತಾರೆ. ದುರಸ್ತಿ, ವಿದ್ಯುತ್, ಬ್ಲೀಚಿಂಗ್ ಪೌಡರ್ ಮತ್ತು ನಿರ್ವಹಣೆಗೆ ಸಂಬಂಧಿಸಿದ ವೆಚ್ಚದ ವಿವರಗಳನ್ನು ನಿಯಮಿತ ಗ್ರಾಮ ಸಭೆಗಳಲ್ಲಿ ವಿವರಿಸುವ ಮೂಲಕ ಪಾರದರ್ಶಕತೆಯನ್ನು ಕಾಪಾಡಲಾಗುತ್ತಿದೆ.

ಇದಕ್ಕೂ ಮೊದಲು ವಿಷಯದ ಹಿನ್ನೆಲೆಯನ್ನು ವಿವರಿಸಿದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ಶ್ರೀ ಅಶೋಕ್ ಕೆ.ಕೆ. ಮೀನಾ ಅವರು, ಗ್ರಾಮಸ್ಥರ ಮಾತುಗಳನ್ನು ಅವರದ್ದೇ ಭಾಷೆಯಲ್ಲಿ ಕೇಳಲು 'ಸುಜಲ ಗ್ರಾಮ ಸಂವಾದ' ವೇದಿಕೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು. ಇದು ಸಮುದಾಯಗಳು ನೀರು ಸರಬರಾಜು ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಹೇಗೆ ಮಾಡುತ್ತಿವೆ ಎಂಬುದನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ. ನಲ್ಲಿಯ ನೀರಿನ ಸಂಪರ್ಕಗಳು ಗ್ರಾಮೀಣ ಬದುಕನ್ನು, ವಿಶೇಷವಾಗಿ ಮಹಿಳೆಯರ ದೈನಂದಿನ ಜೀವನವನ್ನು ಹೇಗೆ ಬದಲಿಸಿವೆ ಎಂಬುದನ್ನು ಈ ಸಂವಾದಗಳು ಸೆರೆಹಿಡಿಯುತ್ತವೆ. ಜೊತೆಗೆ ಸುಸ್ಥಿರತೆ ಮತ್ತು ಸುಧಾರಿತ ಸೇವಾ ವಿತರಣೆಗಾಗಿ ಸಮುದಾಯದ ನೇತೃತ್ವದಲ್ಲಿ ನಡೆದ ಆವಿಷ್ಕಾರಗಳು ಹಾಗೂ ಸ್ಥಳೀಯ ಉಪಕ್ರಮಗಳ ಯಶಸ್ಸಿನ ಕಥೆಗಳನ್ನು ಇವು ಹೊರತರುತ್ತವೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಸಮಾರೋಪ ಭಾಷಣದಲ್ಲಿ, ರಾಷ್ಟ್ರೀಯ ಜಲ ಜೀವನ್ ಮಿಷನ್‌ನ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕ ಶ್ರೀ ಕಮಲ್ ಕಿಶೋರ್ ಸೋನ್ ಅವರು, ಯೋಜನೆಗಳ ಕಾರ್ಯಕ್ಷಮತೆ, ನೀರಿನ ಗುಣಮಟ್ಟ ಮತ್ತು ಸುಸ್ಥಿರತೆಯನ್ನು ನಿಕಟವಾಗಿ ಪರಿಶೀಲಿಸಲು ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಗಳನ್ನು ನಿಯಮಿತವಾಗಿ ಸಾಂಸ್ಥೀಕರಿಸುವ ಅಗತ್ಯವನ್ನು ಒತ್ತಿ ಹೇಳಿದರು. ಎಲ್ಲಾ ಗ್ರಾಮ ಪಂಚಾಯತ್‌ ಗಳನ್ನು ಪಂಚಾಯತ್ ಡ್ಯಾಶ್‌ಬೋರ್ಡ್‌ ಗಳಲ್ಲಿ ಸಕ್ರಿಯವಾಗಿ ಸೇರಿಸಬೇಕು ಮತ್ತು ಪಂಚಾಯತ್ ಕಾರ್ಯದರ್ಶಿಗಳಿಗೆ ಇ-ಗ್ರಾಮ್ ಸ್ವರಾಜ್ ಪೋರ್ಟಲ್ ಮತ್ತು ಜೆಜೆಎಂ ಡ್ಯಾಶ್‌ಬೋರ್ಡ್‌ ಗಳನ್ನು ಬಳಸುವ ಬಗ್ಗೆ ತರಬೇತಿ ನೀಡಬೇಕು. ಇದು ನೈಜ-ಸಮಯದ ವರದಿ ನೀಡಲು ಮತ್ತು ತಳಮಟ್ಟದ ಸಮಸ್ಯೆಗಳ ಬಗ್ಗೆ ದ್ವಿಮುಖ ಸಂವಹನ ನಡೆಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ವ್ಯವಸ್ಥೆಯ ಸನ್ನದ್ಧತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು, ಇತ್ತೀಚೆಗೆ ಹೊರಡಿಸಲಾದ ಕಾರ್ಯಾರಂಭ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರು ಒತ್ತಿ ಹೇಳಿದರು. ವಿಶೇಷವಾಗಿ, ಯೋಜನೆಯನ್ನು ಹಸ್ತಾಂತರಿಸುವ ಮೊದಲು ಕಡ್ಡಾಯವಾಗಿ 15 ದಿನಗಳ ಪ್ರಾಯೋಗಿಕ ಚಾಲನೆ ನಡೆಸಬೇಕು ಎಂದು ಸೂಚಿಸಿದರು. ನೀರಿನ ಗುಣಮಟ್ಟದ ಬಗ್ಗೆ ಜಾಗೃತಿ ಮೂಡಿಸುವ ಮಹತ್ವವನ್ನು ಒತ್ತಿಹೇಳಿದ ಅವರು, ಕುಡಿಯುವ ನೀರಿನ ಗುಣಮಟ್ಟ, ಪರೀಕ್ಷಾ ವಿಧಾನಗಳು ಮತ್ತು ಸುರಕ್ಷಿತ ನೀರಿನ ಬಳಕೆಯ ಬಗ್ಗೆ ಶಾಲೆಗಳಲ್ಲಿ ಅರಿವು ಮೂಡಿಸಲು ಕರೆ ನೀಡಿದರು. ಇದರಿಂದ ಮಕ್ಕಳು ಸುರಕ್ಷಿತ ನೀರು ಸರಬರಾಜು ವ್ಯವಸ್ಥೆಯನ್ನು ಸುಸ್ಥಿರವಾಗಿಡುವಲ್ಲಿ ಮಾಹಿತಿಯುಳ್ಳ ಪಾಲುದಾರರಾಗುತ್ತಾರೆ.

ರಾಷ್ಟ್ರೀಯ ಜಲ ಜೀವನ್ ಮಿಷನ್‌ನ ನಿರ್ದೇಶಕ ಶ್ರೀ ವೈ.ಕೆ. ಸಿಂಗ್ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು, ಈ ಮೂಲಕ 'ಸುಜಲ ಗ್ರಾಮ ಸಂವಾದ'ದ ಎರಡನೇ ಆವೃತ್ತಿಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಮುಂದಿನ ಹಾದಿ

ಸುಜಲ ಗ್ರಾಮ ಸಂವಾದ ವೇದಿಕೆಯು ಜಲ ಜೀವನ್ ಮಿಷನ್‌ ನ ಉದ್ದೇಶಗಳನ್ನು ಮುನ್ನಡೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ, ಏಕೆಂದರೆ ಇದು ಗ್ರಾಮೀಣ ನೀರು ಸರಬರಾಜಿನ ಕೊನೆಯ ಹಂತದ ವಿತರಣೆಯ ಜವಾಬ್ದಾರಿಯನ್ನು ಹೊಂದಿರುವ ನೀತಿ ನಿರೂಪಕರು ಮತ್ತು ತಳಮಟ್ಟದ ಸಂಸ್ಥೆಗಳ ನಡುವೆ ನೇರ ಹಾಗೂ ದ್ವಿಮುಖ ಸಂವಹನಕ್ಕೆ ಅವಕಾಶ ಮಾಡಿಕೊಡುತ್ತದೆ.

ಸುಜಲ ಗ್ರಾಮ ಸಂವಾದದ ಎರಡನೇ ಆವೃತ್ತಿಯು ಕೇಂದ್ರ ಮತ್ತು ತಳಮಟ್ಟದ ಸಂಸ್ಥೆಗಳ ನಡುವಿನ ಪ್ರತಿಕ್ರಿಯೆಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿದೆ, ಇದು ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಗಳನ್ನು ಸುಸ್ಥಿರ, ಜನಕೇಂದ್ರಿತ ಮತ್ತು ಭವಿಷ್ಯಕ್ಕೆ ಸನ್ನದ್ಧವಾಗಿಸುವ ಸರ್ಕಾರದ ಸಂಕಲ್ಪವನ್ನು ಪುನರುಚ್ಚರಿಸಿದೆ.

ಸುಜಲ ಗ್ರಾಮ ಸಂವಾದದ ಉದ್ಘಾಟನಾ ಆವೃತ್ತಿಯು 2025 ರ ನವೆಂಬರ್ 18 ರಂದು ನಡೆದಿದ್ದನ್ನು  ಇಲ್ಲಿ ಸ್ಮರಿಸಬಹುದು, ಇದರ ವಿವರಗಳು ಇಲ್ಲಿ ಲಭ್ಯವಿವೆ: https://www.pib.gov.in/PressReleasePage.aspx?PRID=2191357&reg=3&lang=2

ಎರಡನೇ ಆವೃತ್ತಿಯ ಸಂಪೂರ್ಣ ಸಂವಾದವನ್ನು ಇಲ್ಲಿ ವೀಕ್ಷಿಸಬಹುದು: https://webcast.gov.in/events/Mjg2MQ--/session/NjQ0NQ--

 

*****

 


(रिलीज़ आईडी: 2206791) आगंतुक पटल : 17
इस विज्ञप्ति को इन भाषाओं में पढ़ें: English , Gujarati , Urdu , हिन्दी , Marathi