ಕಲ್ಲಿದ್ದಲು ಸಚಿವಾಲಯ
azadi ka amrit mahotsav

CoalSETU ವಿಂಡೋಗೆ ಸಚಿವ ಸಂಪುಟದ ಅನುಮೋದನೆ: ವಿವಿಧ ಕೈಗಾರಿಕಾ ಬಳಕೆ ಮತ್ತು ರಫ್ತುಗಳಿಗಾಗಿ ಕಲ್ಲಿದ್ದಲು ಲಿಂಕೇಜ್ ಹರಾಜು; ನ್ಯಾಯಯುತ ಪ್ರವೇಶ ಹಾಗೂ ಸಂಪನ್ಮೂಲಗಳ ಸದ್ಬಳಕೆಯ ಖಾತರಿ

प्रविष्टि तिथि: 12 DEC 2025 4:22PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕೇಂದ್ರ ಸಚಿವ ಸಂಪುಟ ಸಮಿತಿಯು CoalSETU ನೀತಿಗೆ ಇಂದು ಹಸಿರು ನಿಶಾನೆ ತೋರಿದೆ. ಕಲ್ಲಿದ್ದಲಿನ ತಡೆರಹಿತ, ದಕ್ಷ ಹಾಗೂ ಪಾರದರ್ಶಕ ಬಳಕೆಗಾಗಿ ಈ ನೀತಿಯನ್ನು ರೂಪಿಸಲಾಗಿದೆ. ಇದರ ಅನ್ವಯ, ಲಿಂಕೇಜ್ ನೀತಿಯ ಅಡಿಯಲ್ಲಿ "CoalSETU ವಿಂಡೋ" ಎಂಬ ಹೊಸ ವ್ಯವಸ್ಥೆಯನ್ನು ತೆರೆಯಲಾಗುತ್ತಿದ್ದು, ಇದು ಯಾವುದೇ ಕೈಗಾರಿಕಾ ಬಳಕೆ ಹಾಗೂ ರಫ್ತಿಗಾಗಿ ಕಲ್ಲಿದ್ದಲನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಸರ್ಕಾರ ಕೈಗೊಳ್ಳುತ್ತಿರುವ ಕಲ್ಲಿದ್ದಲು ವಲಯದ ಸರಣಿ ಸುಧಾರಣೆಗಳಲ್ಲಿ ಇದೂ ಒಂದಾಗಿದೆ.

2016ರ ಎನ್.ಆರ್.ಎಸ್ (ನಿಯಂತ್ರಣ ರಹಿತ ವಲಯ) ಲಿಂಕೇಜ್ ಹರಾಜು ನೀತಿಯ ಅಡಿಯಲ್ಲಿ CoalSETU ಎಂಬ ಪ್ರತ್ಯೇಕ ವಿಂಡೋವನ್ನು ಸೇರಿಸುವ ಮೂಲಕ, ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತು ಉದ್ದೇಶಕ್ಕಾಗಿ ದೀರ್ಘಾವಧಿಯ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಲಿಂಕೇಜ್ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ. ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಈ ಲಿಂಕೇಜ್ ಹರಾಜಿನಲ್ಲಿ ಭಾಗವಹಿಸಬಹುದು. ಆದರೆ, 'ಕೋಕಿಂಗ್ ಕಲ್ಲಿದ್ದಲನ್ನು'  ಈ ವಿಂಡೋ ಅಡಿಯಲ್ಲಿ ನೀಡಲಾಗುವುದಿಲ್ಲ.

ಎನ್.ಆರ್.ಎಸ್ ಗಾಗಿ ಇರುವ ಪ್ರಸ್ತುತ ಕಲ್ಲಿದ್ದಲು ಲಿಂಕೇಜ್ ಹರಾಜು ನೀತಿಯು, ಸಿಮೆಂಟ್, ಸ್ಟೀಲ್ (ಕೋಕಿಂಗ್), ಸ್ಪಾಂಜ್ ಐರನ್, ಅಲ್ಯೂಮಿನಿಯಂ ಮತ್ತು ಇತರ ವಲಯಗಳಿಗೆ [ರಸಗೊಬ್ಬರ (ಯೂರಿಯಾ) ಹೊರತುಪಡಿಸಿ] ಹಾಗೂ ಅವುಗಳ ಕ್ಯಾಪ್ಟಿವ್ ವಿದ್ಯುತ್ ಸ್ಥಾವರಗಳಿಗೆ (CPPs) ಹರಾಜು ಆಧಾರದ ಮೇಲೆಯೇ ಎಲ್ಲಾ ಹೊಸ ಕಲ್ಲಿದ್ದಲು ಲಿಂಕೇಜ್ ಗಳನ್ನು ಹಂಚಿಕೆ ಮಾಡಲು ಅವಕಾಶ ನೀಡುತ್ತದೆ. ಪ್ರಸ್ತುತ ಎನ್.ಆರ್.ಎಸ್ ಲಿಂಕೇಜ್ ನೀತಿಯ ಪ್ರಕಾರ, ಈ ಉಪ-ವಲಯಗಳು ಕೇವಲ ನಿರ್ದಿಷ್ಟ ಅಂತಿಮ ಬಳಕೆದಾರರಿಗೆ ಮಾತ್ರ ಸೀಮಿತವಾಗಿವೆ.

ಮಾರುಕಟ್ಟೆಯ ಪ್ರಸ್ತುತ ಮತ್ತು ಭವಿಷ್ಯದ ಚಲನವಲನಗಳನ್ನು ಗಮನದಲ್ಲಿಟ್ಟುಕೊಂಡು, ಸುಲಲಿತ ವಾಣಿಜ್ಯಕ್ಕೆ  ಒತ್ತು ನೀಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇಶೀಯ ಕಲ್ಲಿದ್ದಲು ನಿಕ್ಷೇಪಗಳನ್ನು ತ್ವರಿತವಾಗಿ ಬಳಸಿಕೊಳ್ಳುವುದು ಮತ್ತು ಆಮದು ಕಲ್ಲಿದ್ದಲಿನ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ, ಎನ್.ಆರ್.ಎಸ್ ವಲಯಕ್ಕೆ ಕಲ್ಲಿದ್ದಲು ಪೂರೈಸುವ ಪ್ರಸ್ತುತ ವ್ಯವಸ್ಥೆಯನ್ನು ಮರುಪರಿಶೀಲಿಸಿ, ಗ್ರಾಹಕರಿಗೆ ಯಾವುದೇ 'ಅಂತಿಮ ಬಳಕೆಯ ನಿರ್ಬಂಧಗಳಿಲ್ಲದೆ' ಕಲ್ಲಿದ್ದಲು ಸಂಪರ್ಕವನ್ನು ವಿಸ್ತರಿಸುವ ಅಗತ್ಯವಿತ್ತು. ವಾಣಿಜ್ಯ ಗಣಿಗಾರಿಕೆಗಾಗಿ ಕಲ್ಲಿದ್ದಲು ಬ್ಲಾಕ್ ಗಳನ್ನು ಹಂಚಿಕೆ ಮಾಡುವಾಗ ಹೇಗೆ ನಿರ್ಬಂಧಗಳನ್ನು ಸಡಿಲಿಸಲಾಗಿದೆಯೋ, ಅದೇ ಮಾದರಿಯನ್ನು ಇಲ್ಲೂ ಅನುಸರಿಸಲಾಗಿದೆ. ಈ ನೀತಿಯಲ್ಲಿ ಮಾರ್ಪಾಡು ಮಾಡುವ ಮೂಲಕ ಮತ್ತು ಹೊಸ ವಿಂಡೋವನ್ನು ಸೇರಿಸುವ ಮೂಲಕ, ಯಾವುದೇ ಕೈಗಾರಿಕಾ ಬಳಕೆ ಹಾಗೂ ರಫ್ತು ಉದ್ದೇಶಕ್ಕಾಗಿ ದೀರ್ಘಾವಧಿಯ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ವರ್ತಕರಿಗೆ ಈ ಪ್ರಸ್ತಾವಿತ ವಿಂಡೋದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.

ಎನ್.ಆರ್.ಎಸ್ (ನಿಯಂತ್ರಣ ರಹಿತ ವಲಯ) ನಲ್ಲಿರುವ ನಿರ್ದಿಷ್ಟ ಅಂತಿಮ ಬಳಕೆದಾರರ ಉಪ-ವಲಯಗಳಿಗೆ ಪ್ರಸ್ತುತ ಜಾರಿಯಲ್ಲಿರುವ ಕಲ್ಲಿದ್ದಲು ಲಿಂಕೇಜ್ ಹರಾಜು ಪ್ರಕ್ರಿಯೆಯು ಮುಂದುವರಿಯಲಿದೆ. ಈ ನಿರ್ದಿಷ್ಟ ಬಳಕೆದಾರರು ಸಹ ಹೊಸ ವಿಂಡೋದಲ್ಲಿ ಭಾಗವಹಿಸಬಹುದಾಗಿದೆ.

ಈ ವಿಂಡೋ ಅಡಿಯಲ್ಲಿ ಪಡೆಯಲಾದ ಕಲ್ಲಿದ್ದಲು ಲಿಂಕೇಜ್ ಅನ್ನು ಸ್ವಂತ ಬಳಕೆಗಾಗಿ, ಕಲ್ಲಿದ್ದಲು ರಫ್ತಿಗಾಗಿ ಅಥವಾ ಇನ್ಯಾವುದೇ ಉದ್ದೇಶಕ್ಕಾಗಿ (ಕಲ್ಲಿದ್ದಲು ಶುದ್ಧೀಕರಣ ಸೇರಿದಂತೆ) ಬಳಸಬಹುದು. ಆದರೆ, ದೇಶದೊಳಗೆ ಮರುಮಾರಾಟ ಮಾಡಲು ಅವಕಾಶವಿರುವುದಿಲ್ಲ. ಲಿಂಕೇಜ್ ಹೊಂದಿರುವವರು ತಮ್ಮ ಒಟ್ಟು ಕಲ್ಲಿದ್ದಲು ಪ್ರಮಾಣದ ಶೇ. 50ರಷ್ಟನ್ನು ರಫ್ತು ಮಾಡಲು ಅರ್ಹರಾಗಿರುತ್ತಾರೆ. ಅಲ್ಲದೆ, ಪಡೆದ ಕಲ್ಲಿದ್ದಲನ್ನು ತಮ್ಮ ಸಮೂಹ ಸಂಸ್ಥೆಗಳ ಅಗತ್ಯಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ಬಳಸುವ ನಮ್ಯತೆಯನ್ನು ಅವರು ಹೊಂದಿರುತ್ತಾರೆ. ಭವಿಷ್ಯದಲ್ಲಿ ಶುದ್ಧೀಕರಿಸಿದ ಕಲ್ಲಿದ್ದಲಿಗೆ ಬೇಡಿಕೆ ಹೆಚ್ಚಾಗುವುದರಿಂದ, ವಾಷರಿ ಆಪರೇಟರ್ ಗಳಿಗೆ (Washery operators) ನೀಡುವ ಲಿಂಕೇಜ್ ಗಳು ದೇಶದಲ್ಲಿ ಶುದ್ಧೀಕರಿಸಿದ ಕಲ್ಲಿದ್ದಲಿನ ಲಭ್ಯತೆಯನ್ನು ಹೆಚ್ಚಿಸುತ್ತವೆ ಮತ್ತು ಆಮದನ್ನು ಕಡಿಮೆ ಮಾಡುತ್ತವೆ. ಅಲ್ಲದೆ, ಈ ಶುದ್ಧೀಕರಿಸಿದ ಕಲ್ಲಿದ್ದಲಿಗೆ ವಿದೇಶಗಳಲ್ಲೂ ಬೇಡಿಕೆ ಇರುವುದರಿಂದ, ಅದನ್ನು ರಫ್ತು ಉದ್ದೇಶಕ್ಕಾಗಿಯೂ ಬಳಸಬಹುದಾಗಿದೆ.

 

*****


(रिलीज़ आईडी: 2203097) आगंतुक पटल : 5
इस विज्ञप्ति को इन भाषाओं में पढ़ें: English , Malayalam , Urdu , हिन्दी , Gujarati