ರೈಲ್ವೇ ಸಚಿವಾಲಯ
azadi ka amrit mahotsav

ದಿವ್ಯಾಂಗರು ಮತ್ತು ಹಿರಿಯ ನಾಗರಿಕರಿಗೆ ನೆರವಾಗಲು ದೇಶದಾದ್ಯಂತ 5,868 ರೈಲ್ವೆ ನಿಲ್ದಾಣಗಳಲ್ಲಿ ವೀಲ್ ಚೇರ್ ಗಳು ಲಭ್ಯ


ದಿವ್ಯಾಂಗರು, ಹಿರಿಯ ನಾಗರಿಕರು, ಅಸ್ವಸ್ಥ ಪ್ರಯಾಣಿಕರು ಮತ್ತು ಗರ್ಭಿಣಿಯರಿಗೆ ಆದ್ಯತೆ ನೀಡುವ ಮೂಲಕ 79 ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ 196 ಬ್ಯಾಟರಿ ಚಾಲಿತ ವಾಹನಗಳು ಲಭ್ಯ

ದಿವ್ಯಾಂಗರು ಮತ್ತು ನಿರ್ದಿಷ್ಟ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ರಿಯಾಯಿತಿ ದರದ ಆನ್ ಲೈನ್ ಟಿಕೆಟ್ ಬುಕಿಂಗ್ ಸೌಲಭ್ಯ ವಿಸ್ತರಣೆ; ಒಬ್ಬ ಸಹಾಯಕರಿಗೂ ಇದೇ ರಿಯಾಯಿತಿ ಲಭ್ಯ

प्रविष्टि तिथि: 10 DEC 2025 4:57PM by PIB Bengaluru

ರೈಲ್ವೆ ಇಲಾಖೆಯು ದಿವ್ಯಾಂಗರು ಮತ್ತು ಹಿರಿಯ ನಾಗರಿಕರನ್ನು ರೈಲಿಗೆ ಕರೆದೊಯ್ಯಲು ಹಾಗೂ ರೈಲಿನಿಂದ ಕರೆತರಲು, ಅವರ ಜೊತೆಗಿರುವ ಸಹಾಯಕರಿಗೆ ಉಚಿತವಾಗಿ ವೀಲ್ ಚೇರ್ ಗಳನ್ನು ಒದಗಿಸುತ್ತಿದೆ. ಒಂದು ವೇಳೆ ಜೊತೆಗೆ ಯಾರೂ ಇಲ್ಲದಿದ್ದ ಪಕ್ಷದಲ್ಲಿ, ನಿಗದಿತ ದರವನ್ನು ಪಾವತಿಸಿ ಪರವಾನಗಿ ಪಡೆದ ಸಹಾಯಕರನ್ನು ನೇಮಿಸಿಕೊಳ್ಳಬಹುದಾಗಿದೆ. ಈ ಕುರಿತಾದ ಮಾಹಿತಿಯನ್ನು ರೈಲು ನಿಲ್ದಾಣದ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಲಾಗಿರುತ್ತದೆ. ಪ್ರಸ್ತುತ ಭಾರತೀಯ ರೈಲ್ವೆಯ 5868 ನಿಲ್ದಾಣಗಳಲ್ಲಿ ವೀಲ್ ಚೇರ್ ಗಳ ಸೌಲಭ್ಯ ಲಭ್ಯವಿದೆ.

ಹಿರಿಯ ನಾಗರಿಕರು, ದಿವ್ಯಾಂಗರು ಮತ್ತು ಅಸ್ವಸ್ಥ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಇತರ ಪ್ರಮುಖ ಕ್ರಮಗಳು ಈ ಕೆಳಗಿನಂತಿವೆ:

(i) ಗಣಕೀಕೃತ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯಲ್ಲಿ (ಪಿ.ಅರ್.‌ಎಸ್), ಹಿರಿಯ ನಾಗರಿಕರು ಮತ್ತು 45 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರು ಯಾವುದೇ ಆಯ್ಕೆಯನ್ನು ನೀಡದಿದ್ದರೂ ಸಹ, ಬುಕಿಂಗ್ ಸಮಯದಲ್ಲಿ ಸೀಟುಗಳ ಲಭ್ಯತೆಗೆ ಒಳಪಟ್ಟು ಅವರಿಗೆ ಸ್ವಯಂಚಾಲಿತವಾಗಿ ಕೆಳ ಬರ್ತ್ ಗಳನ್ನು (Lower Berths) ಹಂಚಿಕೆ ಮಾಡುವ ಅವಕಾಶವಿದೆ.

(ii) ಹಿರಿಯ ನಾಗರಿಕರು, 45 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರು ಮತ್ತು ಗರ್ಭಿಣಿಯರಿಗಾಗಿ ಸ್ಲೀಪರ್ ಕ್ಲಾಸ್ನಲ್ಲಿ ಪ್ರತಿ ಬೋಗಿಗೆ ಆರರಿಂದ ಏಳು ಕೆಳ ಬರ್ತ್ ಗಳು, ಹವಾನಿಯಂತ್ರಿತ 3 ಟೈರ್ (3AC) ನಲ್ಲಿ ಪ್ರತಿ ಬೋಗಿಗೆ ನಾಲ್ಕರಿಂದ ಐದು ಕೆಳ ಬರ್ತ್ ಗಳು ಮತ್ತು ಹವಾನಿಯಂತ್ರಿತ 2 ಟೈರ್ (2AC) ನಲ್ಲಿ ಪ್ರತಿ ಬೋಗಿಗೆ ಮೂರರಿಂದ ನಾಲ್ಕು ಕೆಳ ಬರ್ತ್ ಗಳ (ರೈಲಿನಲ್ಲಿರುವ ಆಯಾ ದರ್ಜೆಯ ಬೋಗಿಗಳ ಸಂಖ್ಯೆಯನ್ನು ಅವಲಂಬಿಸಿ) ಸಂಯೋಜಿತ ಕೋಟಾವನ್ನು ಮೀಸಲಿಡಲಾಗಿದೆ.

(iii) ಎಲ್ಲಾ ವಲಯ ರೈಲ್ವೆಗಳ ಉಪನಗರ ವಿಭಾಗಗಳಲ್ಲಿನ ಸ್ಥಳೀಯ ರೈಲು ಸೇವೆಗಳಲ್ಲಿ, ರೈಲಿನ ಮೊದಲ ಮತ್ತು ಕೊನೆಯ 2ನೇ ದರ್ಜೆಯ ಸಾಮಾನ್ಯ ಬೋಗಿಗಳಲ್ಲಿ ಹಿರಿಯ ನಾಗರಿಕರಿಗಾಗಿ ಕನಿಷ್ಠ 07 ಸೀಟುಗಳನ್ನು ಮೀಸಲಿಡಲು ಸೂಚನೆಗಳನ್ನು ನೀಡಲಾಗಿದೆ.

(iv) ರೈಲು ಹೊರಟ ನಂತರ, ರೈಲಿನಲ್ಲಿ ಖಾಲಿ ಕೆಳ ಬರ್ತ್ ಗಳು (Lower Berths) ಲಭ್ಯವಿದ್ದಲ್ಲಿ ಮತ್ತು ಮೇಲಿನ/ಮಧ್ಯದ ಬರ್ತ್ ಹಂಚಿಕೆಯಾಗಿರುವ ವಿಕಲಚೇತನ ರಿಯಾಯಿತಿ ಆಧಾರದ ಮೇಲೆ ಟಿಕೆಟ್ ಕಾಯ್ದಿರಿಸಿದ ದಿವ್ಯಾಂಗರು, ಹಿರಿಯ ನಾಗರಿಕರು ಅಥವಾ ಗರ್ಭಿಣಿಯರು ಖಾಲಿ ಇರುವ ಕೆಳ ಬರ್ತ್ ಗಾಗಿ ಸಂಪರ್ಕಿಸಿದರೆ, ರೈಲಿನಲ್ಲಿರುವ ಟಿಕೆಟ್ ತಪಾಸಣಾ ಸಿಬ್ಬಂದಿಗೆ (ಟಿ.ಟಿ.ಇ) ಚಾರ್ಟ್ ನಲ್ಲಿ ಅಗತ್ಯ ನಮೂದುಗಳನ್ನು ಮಾಡುವ ಮೂಲಕ ಅವರಿಗೆ ಖಾಲಿ ಇರುವ ಕೆಳ ಬರ್ತ್ ಅನ್ನು ಹಂಚಿಕೆ ಮಾಡಲು ಅಧಿಕಾರ ನೀಡಲಾಗಿದೆ.

(v) ದಿವ್ಯಾಂಗರಿಗೆ ರಿಯಾಯಿತಿ ಸೌಲಭ್ಯಗಳು ಲಭ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ, ರಾಜಧಾನಿ/ಶತಾಬ್ದಿ ಮಾದರಿಯ ರೈಲುಗಳು ಸೇರಿದಂತೆ ಎಲ್ಲಾ ಮೇಲ್/ಎಕ್ಸ್ ಪ್ರೆಸ್ ರೈಲುಗಳಲ್ಲಿ ದಿವ್ಯಾಂಗರಿಗಾಗಿ ಈ ಕೆಳಗಿನ ಮೀಸಲಾತಿ ಕೋಟಾವನ್ನು ಮೀಸಲಿಡಲಾಗಿದೆ:-

a) ಸ್ಲೀಪರ್ ಕ್ಲಾಸ್ ನಲ್ಲಿ ನಾಲ್ಕು ಬರ್ತ್ ಗಳು (ಎರಡು ಕೆಳ ಮತ್ತು ಎರಡು ಮಧ್ಯದ ಬರ್ತ್ಗಳು). b) 3E ಅಥವಾ 3A ದರ್ಜೆಯಲ್ಲಿ ನಾಲ್ಕು ಬರ್ತ್ ಗಳು (ಎರಡು ಕೆಳ ಮತ್ತು ಎರಡು ಮಧ್ಯದ ಬರ್ತ್ ಗಳು). (ರೈಲಿನಲ್ಲಿ ಲಭ್ಯವಿರುವ ಆ ದರ್ಜೆಯ ಬೋಗಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಈ ಎರಡು ದರ್ಜೆಗಳಲ್ಲಿ ಅಂದರೆ 3E/3A ಪೈಕಿ ಯಾವ ದರ್ಜೆಯಲ್ಲಿ ಕೋಟಾವನ್ನು ಮೀಸಲಿಡಬೇಕು ಎಂಬುದನ್ನು ಸಂಬಂಧಪಟ್ಟ ವಲಯ ರೈಲ್ವೆಯು ನಿರ್ಧರಿಸಬಹುದು). c) ಗರೀಬ್ ರಥ್ ಎಕ್ಸ್ ಪ್ರೆಸ್ ರೈಲುಗಳ ದಿವ್ಯಾಂಗರಿಗಾಗಿ ಇರುವ ವಿಶೇಷ ಮೀಸಲು ಬೋಗಿಯಲ್ಲಿ (ಎಸ್.‌ಎಲ್.‌ಅರ್.‌ಡಿ) ನಾಲ್ಕು ಬರ್ತ್ಗಳು. d) ಈ ದರ್ಜೆಗಳ ಎರಡಕ್ಕಿಂತ ಹೆಚ್ಚು ಬೋಗಿಗಳನ್ನು ಹೊಂದಿರುವ ರೈಲುಗಳಲ್ಲಿ, ಕಾಯ್ದಿರಿಸಿದ ಸೆಕೆಂಡ್ ಸಿಟ್ಟಿಂಗ್ (2S)/ ಹವಾನಿಯಂತ್ರಿತ ಚೇರ್ ಕಾರ್ (CC) ನಲ್ಲಿ ನಾಲ್ಕು ಸೀಟುಗಳು.

(vi) ಎಲ್ಲಾ ಮೇಲ್/ಎಕ್ಸ್ ಪ್ರೆಸ್ ರೈಲುಗಳಲ್ಲಿ (ಸಂಪೂರ್ಣವಾಗಿ ಕಾಯ್ದಿರಿಸಿದ ರೈಲುಗಳನ್ನು ಹೊರತುಪಡಿಸಿ), SLRD ಬೋಗಿಗಳನ್ನು (ದಿವ್ಯಾಂಗರಿಗಾಗಿ ಮೀಸಲಾದ ಬೋಗಿಗಳು) ದಿವ್ಯಾಂಗರ ವಿಶೇಷ ಬಳಕೆಗಾಗಿ ಮೀಸಲಿಡಲಾದ 'ಕಾಯ್ದಿರಿಸದ ಬೋಗಿಗಳು' (Unreserved coaches) ಎಂದು ಪರಿಗಣಿಸಬೇಕು ಎಂದು ಸೂಚನೆಗಳನ್ನು ನೀಡಲಾಗಿದೆ.

(vii) ಗರೀಬ್ ರಥ್ ಎಕ್ಸ್ ಪ್ರೆಸ್ ರೈಲುಗಳು ಮತ್ತು ಇತರೆ ಸಂಪೂರ್ಣವಾಗಿ ಕಾಯ್ದಿರಿಸಿದ ರೈಲುಗಳ ಸಂದರ್ಭದಲ್ಲಿ, ಈ ಬೋಗಿಗಳನ್ನು ವಿಕಲಚೇತನ ರಿಯಾಯಿತಿಯ ಮೇಲೆ ಪ್ರಯಾಣಿಸುವ ದಿವ್ಯಾಂಗರು ಆ ದರ್ಜೆಯ ನಿಗದಿತ ದರವನ್ನು ಪಾವತಿಸಿ, 'ಮೊದಲು ಬಂದವರಿಗೆ ಮೊದಲ ಆದ್ಯತೆ'ಯ (first come first served) ಆಧಾರದ ಮೇಲೆ ಬುಕ್ ಮಾಡಲು ಮೀಸಲಿಡಲಾಗಿದೆ ಎಂದು ಪರಿಗಣಿಸಲಾಗುತ್ತದೆ.

(viii) ಗಣಕೀಕೃತ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯ ಮೂಲಕ ನೀಡಲಾಗುವ ಟಿಕೆಟ್ ಗಳಲ್ಲಿ, ಸಾಧ್ಯವಾದಷ್ಟು ಮಟ್ಟಿಗೆ, ದಿವ್ಯಾಂಗರಿಗೆ ಒಂದು ಕೆಳ ಬರ್ತ್ ಅನ್ನು ಹಂಚಿಕೆ ಮಾಡಬೇಕು ಮತ್ತು ಅವರೊಂದಿಗೆ ಬರುವ ಸಹಾಯಕರಿಗೆ ಸೀಟುಗಳ ಲಭ್ಯತೆಗೆ ಒಳಪಟ್ಟು ದಿವ್ಯಾಂಗರ ಹತ್ತಿರವೇ ಮಧ್ಯದ/ಮೇಲಿನ ಬರ್ತ್ ಗಳನ್ನು ಹಂಚಿಕೆ ಮಾಡಬೇಕು ಎಂದು ಸೂಚನೆಗಳನ್ನು ನೀಡಲಾಗಿದೆ.

(ix) ರೈಲು ಹೊರಟ ನಂತರ, ರೈಲಿನಲ್ಲಿ ಖಾಲಿ ಕೆಳ ಬರ್ತ್ ಗಳು ಲಭ್ಯವಿದ್ದಲ್ಲಿ ಮತ್ತು ವಿಕಲಚೇತನ ರಿಯಾಯಿತಿ ಟಿಕೆಟ್ ಆಧಾರದ ಮೇಲೆ ಬುಕ್ ಮಾಡಿರುವ ಹಾಗೂ ಮೇಲಿನ/ಮಧ್ಯದ ಬರ್ತ್ ಹಂಚಿಕೆಯಾಗಿರುವ ಯಾವುದೇ ದಿವ್ಯಾಂಗರು ಖಾಲಿ ಇರುವ ಕೆಳ ಬರ್ತ್ ಹಂಚಿಕೆಗಾಗಿ ಸಂಪರ್ಕಿಸಿದರೆ, ರೈಲಿನಲ್ಲಿರುವ ಟಿಕೆಟ್ ತಪಾಸಣಾ ಸಿಬ್ಬಂದಿಗೆ ಚಾರ್ಟ್ನಲ್ಲಿ ಅಗತ್ಯ ನಮೂದುಗಳನ್ನು ಮಾಡುವ ಮೂಲಕ ಅವರಿಗೆ ಖಾಲಿ ಇರುವ ಕೆಳ ಬರ್ತ್ ಅನ್ನು ಹಂಚಿಕೆ ಮಾಡಲು ಅಧಿಕಾರ ನೀಡಲಾಗಿದೆ.

(x) ವಿವಿಧ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆ (ಪಿ.ಅರ್.‌ಎಸ್) ಕೇಂದ್ರಗಳಲ್ಲಿ, ಪ್ರತಿ ಪಾಳಿಗೆ (shift) ಸರಾಸರಿ 120 ಟಿಕೆಟ್ ಗಳಿಗಿಂತ ಕಡಿಮೆ ಇಲ್ಲದಷ್ಟು ಬೇಡಿಕೆ ಇದ್ದಲ್ಲಿ, ದಿವ್ಯಾಂಗರು, ಹಿರಿಯ ನಾಗರಿಕರು, ಮಾಜಿ ಸಂಸದರು, ಶಾಸಕರು, ಮಾನ್ಯತೆ ಪಡೆದ ಪತ್ರಕರ್ತರು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಂದ ಬರುವ ಮೀಸಲಾತಿ ಮನವಿಗಳನ್ನು ನಿರ್ವಹಿಸಲು ಪ್ರತ್ಯೇಕ ಕೌಂಟರ್ ಗಳನ್ನು ಮೀಸಲಿಡಲಾಗುತ್ತದೆ. ದಿವ್ಯಾಂಗರು ಸೇರಿದಂತೆ ಈ ವರ್ಗದ ಯಾವುದೇ ವ್ಯಕ್ತಿಗಳಿಗೆ ಪ್ರತ್ಯೇಕ ಕೌಂಟರ್ ಮೀಸಲಿಡಲು ಸಮರ್ಥನೆ ಇಲ್ಲದಿದ್ದ ಪಕ್ಷದಲ್ಲಿ (ಸಾಕಷ್ಟು ಬೇಡಿಕೆ ಇಲ್ಲದಿದ್ದರೆ), ಒಟ್ಟು ಬೇಡಿಕೆಯನ್ನು ಅವಲಂಬಿಸಿ, ಈ ಎಲ್ಲಾ ವರ್ಗದ ವ್ಯಕ್ತಿಗಳ ಮೀಸಲಾತಿ ಮನವಿಗಳನ್ನು ನಿರ್ವಹಿಸಲು ಒಂದು ಅಥವಾ ಎರಡು ಕೌಂಟರ್ ಗಳನ್ನು ಮೀಸಲಿಡಲಾಗುತ್ತದೆ.

(xi) ವಲಯ ರೈಲ್ವೆಗಳು ನೀಡುವ ಫೋಟೋ ಗುರುತಿನ ಚೀಟಿಗಳ ಆಧಾರದ ಮೇಲೆ ದಿವ್ಯಾಂಗರಿಗೆ  ಮತ್ತು ನಿರ್ದಿಷ್ಟ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ರಿಯಾಯಿತಿ ದರದ ಆನ್ಲೈನ್ ಟಿಕೆಟ್ ಬುಕಿಂಗ್ ಸೌಲಭ್ಯವನ್ನು ವಿಸ್ತರಿಸಲಾಗಿದೆ. ದಿವ್ಯಾಂಗರು ಮತ್ತು ನಿರ್ದಿಷ್ಟ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಜೊತೆಯಲ್ಲಿ ಬರುವ ಒಬ್ಬ ಸಹಾಯಕರು ಕೂಡ ಇದೇ ರೀತಿಯ ರಿಯಾಯಿತಿಗೆ ಅರ್ಹರಾಗಿರುತ್ತಾರೆ.

(xii) ದಿವ್ಯಾಂಗರು, ಹಿರಿಯ ನಾಗರಿಕರು, ಅಸ್ವಸ್ಥ ಪ್ರಯಾಣಿಕರು ಮತ್ತು ಗರ್ಭಿಣಿಯರಿಗೆ ಸೂಕ್ತ ಆದ್ಯತೆ ನೀಡುವುದರೊಂದಿಗೆ, ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ 'ಮೊದಲು ಬಂದವರಿಗೆ ಮೊದಲ ಆದ್ಯತೆ' ಆಧಾರದ ಮೇಲೆ ಬ್ಯಾಟರಿ ಚಾಲಿತ ವಾಹನಗಳನ್ನು (ಬಿ.ಒ.ವಿ ಗಳು) ಒದಗಿಸಲಾಗುತ್ತದೆ. ಈ ಸೌಲಭ್ಯವನ್ನು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.‌ಅರ್)/ಪ್ರಾಯೋಜಕತ್ವದ ಮೂಲಕ 'ಉಚಿತವಾಗಿ' ಮತ್ತು ಸೇವಾ ಪೂರೈಕೆದಾರರ ಮೂಲಕ 'ಶುಲ್ಕದ ಆಧಾರದ ಮೇಲೆ' ಒದಗಿಸಲಾಗುತ್ತದೆ. ಪ್ರಸ್ತುತ, 79 ನಿಲ್ದಾಣಗಳಲ್ಲಿ 196 ಬಿ.ಒ.ವಿ ಗಳು ಲಭ್ಯವಿದ್ದು, ಅವುಗಳಲ್ಲಿ 165 ಶುಲ್ಕದ ಆಧಾರದ ಮೇಲೆ, 10 ಪ್ರಚಾರದ ಮಾರ್ಗದ ಮೂಲಕ ಉಚಿತವಾಗಿ ಮತ್ತು 21 ಸಿ.ಎಸ್.‌ಅರ್ ಮಾರ್ಗದ ಮೂಲಕ ಉಚಿತವಾಗಿ ಲಭ್ಯವಿವೆ.

ಆದಾಗ್ಯೂ, ದಿವ್ಯಾಂಗರು, ಅಸ್ವಸ್ಥರು ಮತ್ತು ಹಿರಿಯ ವ್ಯಕ್ತಿಗಳಿಗೆ ವರ್ಧಿತ ಸೌಲಭ್ಯಗಳು ಸೇರಿದಂತೆ ಪ್ರಯಾಣಿಕರ ಸೌಲಭ್ಯಗಳ ಉನ್ನತೀಕರಣವು ನಿರಂತರ ಮತ್ತು ಚಾಲ್ತಿಯಲ್ಲಿರುವ ಪ್ರಕ್ರಿಯೆಯಾಗಿದೆ.

ಈ ಮಾಹಿತಿಯನ್ನು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದ ಮೂಲಕ ನೀಡಿದ್ದಾರೆ.

 

****


(रिलीज़ आईडी: 2201972) आगंतुक पटल : 14
इस विज्ञप्ति को इन भाषाओं में पढ़ें: English , Urdu , हिन्दी , Tamil