ರೈಲ್ವೇ ಸಚಿವಾಲಯ
azadi ka amrit mahotsav

ಏಪ್ರಿಲ್–ಅಕ್ಟೋಬರ್ 2025ರ ಅವಧಿಯಲ್ಲಿ ಐಆರ್‌ಸಿಟಿಸಿ ವೆಬ್‌ಸೈಟ್‌ಗೆ 99.98% ಅಪ್‌ಟೈಮ್(ಬಳಕೆದಾರರಿಗೆ ಲಭ್ಯವಾದ ಕಾಲಾವಧಿ) : ಅಶ್ವಿನಿ ವೈಷ್ಣವ್


ಅನುಮಾನಾಸ್ಪದ ಬಳಕೆದಾರ ಐಡಿಗಳ ನಿಷ್ಕ್ರಿಯಗೊಳಿಸುವಿಕೆ ಸೇರಿದಂತೆ ಆಡಳಿತಾತ್ಮಕ ಮತ್ತು ತಾಂತ್ರಿಕ ಕ್ರಮಗಳೊಂದಿಗೆ ಭಾರತೀಯ ರೈಲ್ವೆ ವ್ಯವಸ್ಥೆಯ ಭದ್ರತೆಯನ್ನು ಬಲಪಡಿಸುತ್ತಿದೆ

ಐಆರ್ ವಾರ್ಷಿಕವಾಗಿ ಸುಮಾರು 58 ಕೋಟಿ ಊಟಗಳನ್ನು ಪೂರೈಸುತ್ತದೆ

ಪ್ರಯಾಣಿಕರ ಅನುಭವವನ್ನು ಹೆಚ್ಚಿಸಲು, ಸಂವಹನ, ಸೌಜನ್ಯಯುತ ನಡವಳಿಕೆ, ಸೇವಾ ಮಾನದಂಡಗಳು, ವೈಯಕ್ತಿಕ ಮಾರ್ಗದರ್ಶನ ಮತ್ತು ನೈರ್ಮಲ್ಯದ ಮೇಲೆ ಗಮನ ಕೇಂದ್ರೀಕರಿಸಲು ಐಆರ್‌ಸಿಟಿಸಿ ಅಡುಗೆ ಸಿಬ್ಬಂದಿಗೆ ನಿಯಮಿತ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತದೆ.

प्रविष्टि तिथि: 03 DEC 2025 7:39PM by PIB Bengaluru

ಏಪ್ರಿಲ್ 2025 ರಿಂದ ಅಕ್ಟೋಬರ್ 2025 ರವರೆಗೆ ಐ.ಆರ್.ಸಿ.ಟಿ.ಸಿ ವೆಬ್‌ಸೈಟ್‌ನ ಕಾರ್ಯನಿರತ ಸಮಯ 99.98% ರಷ್ಟಿದ್ದರೆ, 2024-25ರಲ್ಲಿ ಇದು 99.86% ರಷ್ಟಿತ್ತು. ಭಾರತೀಯ ರೈಲ್ವೆಯು ವ್ಯವಸ್ಥೆಯ ಆಧುನೀಕರಣಕ್ಕಾಗಿ ಆಡಳಿತಾತ್ಮಕ ಮತ್ತು ತಾಂತ್ರಿಕ ಕ್ರಮಗಳನ್ನು ಕೈಗೊಂಡಿದೆ. ಆಡಳಿತಾತ್ಮಕ ಕ್ರಮಗಳಲ್ಲಿ ಅನುಮಾನಾಸ್ಪದ ಬಳಕೆದಾರ ಐ.ಡಿ. ಗಳ ನಿಷ್ಕ್ರಿಯಗೊಳಿಸುವಿಕೆ, ಅನುಮಾನಾಸ್ಪದವಾಗಿ ಬುಕ್ ಮಾಡಲಾದ ಪಿ.ಎನ್.ಆರ್. ಗಳಿಗಾಗಿ ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್‌ನಲ್ಲಿ ದೂರುಗಳನ್ನು ಸಲ್ಲಿಸುವುದು, ಬಳಕೆದಾರ ಐ.ಡಿ. ಗಳ ಮರುಮೌಲ್ಯಮಾಪನ ಇತ್ಯಾದಿ ಸೇರಿವೆ.

ಸಿಸ್ಟಮ್ (ವ್ಯವಸ್ಥೆ) ಸುಧಾರಣಾ ಕ್ರಮಗಳಲ್ಲಿ ಪರಿಶೀಲನೆಗಳು ಮತ್ತು ಮೌಲ್ಯೀಕರಣಗಳು, ಪ್ರಮುಖ ವಿಷಯವನ್ನು ತಲುಪಿಸುವ ನೆಟ್‌ವರ್ಕ್ (ಜಾಲ)  ಮತ್ತು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬಿ.ಒ.ಟಿ. ನಿರೋಧಿ ಅಪ್ಲಿಕೇಶನ್ ಅನ್ನು ಅಳವಡಿಸಿಕೊಳ್ಳುವುದು ಸೇರಿವೆ, ಇದು ನಿಜವಾದ ಬಳಕೆದಾರರಿಗೆ ಸುಗಮ ಬುಕಿಂಗ್ ಅನ್ನು ಖಚಿತಪಡಿಸುತ್ತದೆ. ಇದರ ಜೊತೆಗೆ, ವ್ಯವಸ್ಥೆಯಲ್ಲಿ ಸುಧಾರಣೆಗಾಗಿ ಐ.ಆರ್.ಸಿ.ಟಿ.ಸಿ. ಯ ತಂತ್ರಜ್ಞಾನ ಮೂಲಸೌಕರ್ಯದ ನಿಯಮಿತವಾಗಿ ತೃತೀಯ ವ್ಯಕ್ತಿಯಿಂದ (ಥರ್ಡ್ ಪಾರ್ಟಿ)  ಲೆಕ್ಕಪರಿಶೋಧನೆಗಳನ್ನು ನಡೆಸಲಾಗುತ್ತಿದೆ.

ಭಾರತೀಯ ರೈಲ್ವೆಯಲ್ಲಿ ಬುಕ್ ಮಾಡಲಾದ ಒಟ್ಟು ಕಾಯ್ದಿರಿಸಿದ ಟಿಕೆಟ್‌ಗಳಲ್ಲಿ ಇ-ಟಿಕೆಟಿಂಗ್ ಪಾಲು 87% ಕ್ಕಿಂತ ಹೆಚ್ಚಾಗಿದೆ. ಆದಾಗ್ಯೂ, ವಿಫಲ ವಹಿವಾಟು/ವಿಳಂಬಿತ ಮರುಪಾವತಿ/ಬುಕಿಂಗ್ ದೋಷಗಳ ಕುರಿತು ಕೆಲವು ದೂರುಗಳು ಬಂದಿವೆ, ಇವುಗಳನ್ನು ತ್ವರಿತ ಪರಿಹಾರಕ್ಕಾಗಿ ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಐ.ಆರ್.ಸಿ.ಟಿ.ಸಿ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳು ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (ಎ.ಪಿ.ಐ) ಆಧಾರಿತ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತವೆ, ಇದು ಬಳಕೆದಾರರ ಸಾಧನ ಮತ್ತು ಐ.ಆರ್.ಸಿ.ಟಿ.ಸಿ. ಸರ್ವರ್‌ಗಳ ನಡುವೆ ಕನಿಷ್ಠ ಪಠ್ಯ-ಆಧಾರಿತ ಡೇಟಾ ವಿನಿಮಯವನ್ನು ಮಾತ್ರ ಬಯಸುತ್ತದೆ. ಇದು ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಟಿಕೆಟ್ ಬುಕಿಂಗ್‌ಗೆ ಪರಿಣಾಮಕಾರಿ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ. ಇದರ ಜೊತೆಗೆ, ಐ.ಆರ್.ಸಿ.ಟಿ.ಸಿ ಸುಧಾರಿತ ವಿಷಯ ವಿತರಣಾ ನೆಟ್‌ವರ್ಕ್ (ಸಿ.ಡಿ.ಎನ್) ಪರಿಹಾರಗಳನ್ನು ಜಾರಿಗೆ ತಂದಿದೆ, ಇದು ಬಳಕೆದಾರರಿಗೆ ಸ್ಥಿರ ವಿಷಯವನ್ನು ಹೆಚ್ಚು ವೇಗವಾಗಿ ಮತ್ತು ವಿಶ್ವಾಸಾರ್ಹವಾಗಿ ತಲುಪಿಸುವ ಸರ್ವರ್‌ಗಳ ಜಾಗತಿಕ ಜಾಲವಾಗಿದೆ.

ಭಾರತೀಯ ರೈಲ್ವೆಯಲ್ಲಿ ಸಾಮರ್ಥ್ಯ ವರ್ಧನೆ ಮತ್ತು ತಾಂತ್ರಿಕ ಉನ್ನತೀಕರಣವು ಚಾಲ್ತಿಯಲ್ಲಿರುವ ಪ್ರಕ್ರಿಯೆಯಾಗಿದ್ದು, ಸಂಪನ್ಮೂಲಗಳ ಲಭ್ಯತೆ ಮತ್ತು ತಾಂತ್ರಿಕ-ಆರ್ಥಿಕ ಕಾರ್ಯಸಾಧ್ಯತೆಗೆ ಒಳಪಟ್ಟಿರುತ್ತದೆ.

ಭಾರತೀಯ ರೈಲ್ವೆಗಳು ಪ್ರತಿ ವರ್ಷ ಸರಾಸರಿ 58 ಕೋಟಿ ಊಟಗಳನ್ನು ಪೂರೈಸುತ್ತವೆ. ಸರಾಸರಿ 0.0008% ದೂರುಗಳನ್ನು ಮಾತ್ರ ಸ್ವೀಕೃತವಾಗುತ್ತಿವೆ. ಈ ದೂರುಗಳ ವಿಚಾರಣೆಯ ಆಧಾರದ ಮೇಲೆ, ಕಳೆದ ನಾಲ್ಕು ವರ್ಷಗಳಲ್ಲಿ 2.8 ಕೋಟಿ ರೂ.ಗಳ ದಂಡವನ್ನು ವಿಧಿಸಲಾಗಿದೆ.

ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಮತ್ತು ಆರೋಗ್ಯಕರ ಆಹಾರವನ್ನು ಒದಗಿಸುವುದು ಭಾರತೀಯ ರೈಲ್ವೆಯ ನಿರಂತರ ಪ್ರಯತ್ನವಾಗಿದೆ. ಪ್ರಯಾಣಿಕರಿಗೆ ಆಹಾರ ಮತ್ತು ಸೇವೆಗಳ ಗುಣಮಟ್ಟವನ್ನು ಸುಧಾರಿಸಲು ಭಾರತೀಯ ರೈಲ್ವೆಗಳು ಕಾಲಕಾಲಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತವೆ. ಗುಣಮಟ್ಟ, ನೈರ್ಮಲ್ಯ ಮತ್ತು ಆಹಾರ ಸುರಕ್ಷತೆಯನ್ನು ಸುಧಾರಿಸಲು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ:

•    ಗೊತ್ತುಪಡಿಸಿದ/ನಿರ್ದಿಷ್ಟಪಡಿಸಿದ ಮೂಲ ಅಡುಗೆ ಮನೆಗಳಿಂದ (ಬೇಸ್ ಕಿಚನ್‌ಗಳಿಂದ) ಊಟದ ಪೂರೈಕೆ.

•     ಗುರುತಿಸಲಾದ ಸ್ಥಳಗಳಲ್ಲಿ ಆಧುನಿಕ ಬೇಸ್ ಕಿಚನ್‌ಗಳ ಕಾರ್ಯಾರಂಭ.

•     ಆಹಾರ ತಯಾರಿಕೆಯ ಉತ್ತಮ ಮೇಲ್ವಿಚಾರಣೆಗಾಗಿ ಬೇಸ್ ಕಿಚನ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ.

•     ಆಹಾರ ತಯಾರಿಕೆಗಾಗಿ ಅಡುಗೆ ಎಣ್ಣೆ,ಹಿಟ್ಟು, ಅಕ್ಕಿ, ಬೇಳೆಕಾಳುಗಳು, ಮಸಾಲಾ ವಸ್ತುಗಳು, ಪನೀರ್, ಡೈರಿ ಉತ್ಪನ್ನಗಳು ಮುಂತಾದವುಗಳನ್ನು ಜನಪ್ರಿಯ ಮತ್ತು ಬ್ರಾಂಡ್ ಗಳಿಂದ ಕಚ್ಚಾ ವಸ್ತುಗಳ ಪಟ್ಟಿ ತಯಾರಿಸಿ ಬಳಕೆ ಮಾಡಲಾಗುತ್ತಿದೆ.

•     ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಅಭ್ಯಾಸಗಳನ್ನು ಮೇಲ್ವಿಚಾರಣೆ ಮಾಡಲು ಬೇಸ್ ಕಿಚನ್‌ಗಳಲ್ಲಿ ಆಹಾರ ಸುರಕ್ಷತಾ ಮೇಲ್ವಿಚಾರಕರ ನಿಯೋಜನೆ.

•     ರೈಲುಗಳಲ್ಲಿ ಆನ್-ಬೋರ್ಡ್ ಐಆರ್‌ಸಿಟಿಸಿ ಮೇಲ್ವಿಚಾರಕರ ನಿಯೋಜನೆ.

•     ಆಹಾರ ಪ್ಯಾಕೆಟ್‌ಗಳಲ್ಲಿ ಕ್ಯೂಆರ್ ಕೋಡ್‌ಗಳ ಅಳವಡಿಕೆ/ಪರಿಚಯ, ಅಡುಗೆಮನೆಯ ಹೆಸರು, ಪ್ಯಾಕೇಜಿಂಗ್ ದಿನಾಂಕ ಇತ್ಯಾದಿ ವಿವರಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ.

•    ಬೇಸ್ ಕಿಚನ್‌ಗಳು ಮತ್ತು ಪ್ಯಾಂಟ್ರಿ ಕಾರ್‌ಗಳಲ್ಲಿ ನಿಯಮಿತ ಶುಚಿಗೊಳಿಸುವಿಕೆ ಮತ್ತು ನಿಯತಕಾಲಿಕ ಕೀಟ ನಿಯಂತ್ರಣ.

•     ಆಹಾರ ಸುರಕ್ಷತಾ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು, ಪ್ರತಿ ಅಡುಗೆ ಘಟಕದ ಗೊತ್ತುಪಡಿಸಿದ ಆಹಾರ ಸುರಕ್ಷತಾ ಅಧಿಕಾರಿಗಳಿಂದ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್.ಎಸ್.ಎಸ್.ಎ.ಐ.)) ಪ್ರಮಾಣೀಕರಣವನ್ನು ಕಡ್ಡಾಯಗೊಳಿಸಲಾಗಿದೆ.

•     ರೈಲುಗಳಲ್ಲಿ ಆಹಾರದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ತಪಾಸಣೆ ಮತ್ತು ಮೇಲ್ವಿಚಾರಣಾ ಕಾರ್ಯವಿಧಾನದ ಭಾಗವಾಗಿ ನಿಯಮಿತ ಆಹಾರ ಮಾದರಿ ಸಂಗ್ರಹಣೆ.

•    ಪ್ಯಾಂಟ್ರಿ ಕಾರ್‌ಗಳು ಮತ್ತು ಬೇಸ್ ಕಿಚನ್‌ಗಳಲ್ಲಿ ನೈರ್ಮಲ್ಯ ಮತ್ತು ಆಹಾರದ ಗುಣಮಟ್ಟವನ್ನು ಪರೀಕ್ಷಿಸಲು ಮೂರನೇ ವ್ಯಕ್ತಿಯಿಂದ (ಥರ್ಡ್ ಪಾರ್ಟಿ)  ಲೆಕ್ಕಪರಿಶೋಧನೆಯನ್ನು ಮಾಡಲಾಗುತ್ತದೆ. ಗ್ರಾಹಕ ತೃಪ್ತಿ ಸಮೀಕ್ಷೆಯನ್ನು ಸಹ ನಡೆಸಲಾಗುತ್ತದೆ.

•     ಆಹಾರ ಸುರಕ್ಷತಾ ಅಧಿಕಾರಿಗಳು ಸೇರಿದಂತೆ ರೈಲ್ವೆ/ಐ.ಆರ್.ಸಿ.ಟಿ.ಸಿ.ಅಧಿಕಾರಿಗಳಿಂದ ನಿಯಮಿತ ಮತ್ತು ಅನಿರೀಕ್ಷಿತ ತಪಾಸಣೆ.

•    ಗ್ರಾಹಕ ಸೇವಾ ಕ್ಷೇತ್ರಗಳಾದ ಸಂವಹನ, ಸೌಜನ್ಯಯುತ ನಡವಳಿಕೆ, ಸೇವಾ ಮಾನದಂಡಗಳು, ವೈಯಕ್ತಿಕ ಸೌಂದರ್ಯೀಕರಣ/ಮಾರ್ಗದರ್ಶನ  ಮತ್ತು ನೈರ್ಮಲ್ಯದ ಮೇಲೆ ಗಮನ ಕೇಂದ್ರೀಕರಿಸಿ ಅಡುಗೆ ಸಿಬ್ಬಂದಿಯ ಕೌಶಲ್ಯಗಳನ್ನು ಹೆಚ್ಚಿಸಲು ಐ.ಆರ್.ಸಿ.ಟಿ.ಸಿ. ನಿಯಮಿತ ತರಬೇತಿಯನ್ನು ನಡೆಸುತ್ತದೆ.


ಪ್ರಯಾಣಿಕರ ಹಿಮ್ಮಾಹಿತಿಯನ್ನು  ಪಡೆದುಕೊಳ್ಳುವ ಸಲುವಾಗಿ, ಕಳೆದ ಕೆಲವು ವರ್ಷಗಳಿಂದ ರೈಲ್‌ಮಾಡಾಡ್ ಪೋರ್ಟಲ್ ಅನ್ನು ಪರಿಚಯಿಸುವ ಮೂಲಕ ಭಾರತೀಯ ರೈಲ್ವೆಯ ಮೇಲಿನ ದೂರು ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸಲಾಗಿದೆ, ಸರಳೀಕರಿಸಲಾಗಿದೆ ಮತ್ತು ಅದನ್ನು ಹೆಚ್ಚು ಪ್ರವೇಶಿಸುವಂತೆ ಮಾಡಲಾಗಿದೆ. ರೈಲ್‌ಮಾಡಾಡ್ ಪೋರ್ಟಲ್ ಪ್ರಾರಂಭಿಸುವುದರೊಂದಿಗೆ, ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ದೂರುಗಳು ಮತ್ತು ಸಲಹೆಗಳನ್ನು ನೋಂದಾಯಿಸಲು ಏಕ ಗವಾಕ್ಷಿ ವ್ಯವಸ್ಥೆಯನ್ನು ಒದಗಿಸಿದೆ.

ರೈಲುಗಳಲ್ಲಿನ ಆಹಾರದ ಗುಣಮಟ್ಟಕ್ಕೆ ಸಂಬಂಧಿಸಿದ ಯಾವುದೇ ಪ್ರಯಾಣಿಕರ ದೂರು ವರದಿಯಾದರೆ, ಸೇವೆಯಲ್ಲಿನ ಕೊರತೆಗಾಗಿ ಸೇವಾ ಪೂರೈಕೆದಾರರ ವಿರುದ್ಧ ತ್ವರಿತ ಮತ್ತು ಸೂಕ್ತ ದಂಡನಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ.

ಈ ಮಾಹಿತಿಯನ್ನು ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಗಳಿಗೆ ನೀಡಿದ ಲಿಖಿತ ಉತ್ತರಗಳಲ್ಲಿ ತಿಳಿಸಿದ್ದಾರೆ.

 

****
 


(रिलीज़ आईडी: 2198560) आगंतुक पटल : 2
इस विज्ञप्ति को इन भाषाओं में पढ़ें: English , Urdu , हिन्दी