ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ನವದೆಹಲಿಯಲ್ಲಿ ನಡೆದ 'ಸಿಐಐ ಇಂಡಿಯಾಎಡ್ಜ್ 2025' ಕಾರ್ಯಕ್ರಮದಲ್ಲಿ, ‘ಹಸಿರು ಬೆಳವಣಿಗೆ: ಸುಸ್ಥಿರತೆಯೊಂದಿಗೆ ಸ್ಪರ್ಧಾತ್ಮಕತೆಯ ಹೊಂದಾಣಿಕೆ’ ಎಂಬ ವಿಷಯದ ಕುರಿತ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಕೇಂದ್ರ ಪರಿಸರ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು ಮಾತನಾಡಿದರು


ಸ್ವಚ್ಛ ಕೈಗಾರಿಕೀಕರಣ ಎನ್ನುವುದು ಅಭಿವೃದ್ಧಿಗೆ ಅಡ್ಡಿಯಲ್ಲ; ಬದಲಾಗಿ ಆರ್ಥಿಕ ವಿಸ್ತರಣೆ, ನಾವೀನ್ಯತೆ, ಸದೃಢತೆ ಮತ್ತು ಭವಿಷ್ಯದ ಸಮೃದ್ಧಿಗೆ ಅದೊಂದು ಪ್ರೇರಕ ಶಕ್ತಿಯಾಗಿದೆ: ಶ್ರೀ ಭೂಪೇಂದರ್ ಯಾದವ್

प्रविष्टि तिथि: 03 DEC 2025 3:13PM by PIB Bengaluru

ನವದೆಹಲಿಯಲ್ಲಿ ಇಂದು ನಡೆದ 'ಸಿಐಐ ಇಂಡಿಯಾಎಡ್ಜ್ 2025' (CII IndiaEdge 2025) ಕಾರ್ಯಕ್ರಮದಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು, ‘ಹಸಿರು ಬೆಳವಣಿಗೆ: ಸುಸ್ಥಿರತೆಯೊಂದಿಗೆ ಸ್ಪರ್ಧಾತ್ಮಕತೆಯ ಹೊಂದಾಣಿಕೆ’ (Green Growth: Aligning Sustainability with Competitiveness) ಎಂಬ ವಿಷಯದ ಕುರಿತು ವಿಶೇಷ ಭಾಷಣ ಮಾಡಿದರು. ಸುಸ್ಥಿರ, ಸ್ಪರ್ಧಾತ್ಮಕ ಮತ್ತು ಸದೃಢ ಆರ್ಥಿಕ ಬೆಳವಣಿಗೆಯತ್ತ ಭಾರತವು ಬದಲಾಗುತ್ತಿರುವ ಆಯಕಟ್ಟಿನ ನಡೆಯ ಬಗ್ಗೆ ಅವರು ಈ ಸಂದರ್ಭದಲ್ಲಿ ಒತ್ತು ನೀಡಿದರು. ಇದೇ ವೇಳೆ, ಪ್ರಗತಿಪರ ನೀತಿಗಳನ್ನು ರೂಪಿಸುವಲ್ಲಿ ಹಾಗೂ ಸರ್ಕಾರ ಮತ್ತು ಉದ್ಯಮ ವಲಯದ ನಡುವಿನ ಸಹಭಾಗಿತ್ವವನ್ನು ಬಲಪಡಿಸುವಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟ (CII) ವಹಿಸುತ್ತಿರುವ ಪಾತ್ರವನ್ನು ಅವರು ಶ್ಲಾಘಿಸಿದರು.

'ವಿಕಸಿತ ಭಾರತ@2047'ರ ಅಡಿಯಲ್ಲಿ ಭಾರತದ ಅಭಿವೃದ್ಧಿಯ ಪಥವನ್ನು ಎತ್ತಿ ತೋರಿಸಿದ ಸಚಿವರು, ದೇಶದ ಬಲವಾದ ಆರ್ಥಿಕ ಬುನಾದಿ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಆಗುತ್ತಿರುವ ತ್ವರಿತ ಪ್ರಗತಿಯ ಬಗ್ಗೆ ಒತ್ತಿ ಹೇಳಿದರು. "ಸ್ವಚ್ಛ ಕೈಗಾರಿಕೀಕರಣ ಎನ್ನುವುದು ಅಭಿವೃದ್ಧಿಗೆ ಅಡ್ಡಿಯಲ್ಲ; ಬದಲಾಗಿ ಅದು ಆರ್ಥಿಕ ವಿಸ್ತರಣೆ, ನಾವೀನ್ಯತೆ, ಸದೃಢತೆ ಮತ್ತು ಭವಿಷ್ಯದ ಸಮೃದ್ಧಿಗೆ ಒಂದು ಪ್ರೇರಕ ಶಕ್ತಿ" ಎಂದು ಅವರು ಅಭಿಪ್ರಾಯಪಟ್ಟರು. ಭಾರತದ ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಇಂಗಾಲ ಸಂಬಂಧಿತ ವಾಣಿಜ್ಯ ಸಮಸ್ಯೆಗಳನ್ನು  ನಿವಾರಿಸಲು, ನಮ್ಮ ಉತ್ಪಾದನಾ ವಲಯದಲ್ಲಿ ಇಂಗಾಲದ ಪ್ರಮಾಣವನ್ನು ತಗ್ಗಿಸುವುದು ಆಯಕಟ್ಟಿನ ದೃಷ್ಟಿಯಿಂದ ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು.

ಜಾಗತಿಕ ರಾಜಕೀಯ ಮತ್ತು ಮಾನವ ಚಟುವಟಿಕೆಗಳಿಂದ ಉಂಟಾಗಿರುವ ಪ್ರಕ್ಷುಬ್ಧತೆಯ ನಡುವೆಯೂ, ಪರಿಸರ ಸಂರಕ್ಷಣೆಯಲ್ಲಿ ಭಾರತದ ಜಾಗತಿಕ ನಾಯಕತ್ವವನ್ನು ಶ್ರೀ ಯಾದವ್ ಪುನರುಚ್ಚರಿಸಿದರು. 'ಅಸಮತೋಲನಗಳನ್ನು ಸರಿಪಡಿಸಲು ಅಭಿವೃದ್ಧಿಯನ್ನು ಮರುವ್ಯಾಖ್ಯಾನಿಸುವ ಮೂಲಕ ಭಾರತವು ನಂಬಿಗಸ್ತ ಜಾಗತಿಕ ಪಾಲುದಾರನಾಗಿ ಹೊರಹೊಮ್ಮಿದೆ. ನಾವು ಹಸಿರು ತಂತ್ರಜ್ಞಾನಗಳು, ಆವರ್ತಕ ಆರ್ಥಿಕತೆ, ಸುಸ್ಥಿರ ಉತ್ಪಾದನೆ ಮತ್ತು ನಿಸರ್ಗ ಆಧಾರಿತ ಪರಿಹಾರಗಳಿಗೆ ಆದ್ಯತೆ ನೀಡುತ್ತಿದ್ದೇವೆ,' ಎಂದು ಅವರು ತಿಳಿಸಿದರು. ಭಾರತದ ಹಸಿರು ಕೈಗಾರಿಕಾ ಪರಿವರ್ತನೆಗೆ ಕಾರಣವಾಗುತ್ತಿರುವ ಇತ್ತೀಚಿನ ಸುಧಾರಣೆಗಳನ್ನು ಸಚಿವರು ವಿವರಿಸಿದರು. ಜಿ ಎಸ್ ಟಿ 2.0 ಸುಧಾರಣೆಗಳನ್ನು ಪ್ರಸ್ತಾಪಿಸಿದ ಅವರು, 'ನವೀಕರಿಸಬಹುದಾದ ಇಂಧನ ಉಪಕರಣಗಳು, ಜೈವಿಕವಾಗಿ ಕರಗುವ  ಪ್ಲಾಸ್ಟಿಕ್ಗಳು, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆ ದರವನ್ನು ಶೇ. 12 ರಿಂದ ಶೇ. 5 ಕ್ಕೆ ಇಳಿಸುವ ಮೂಲಕ ಜಿ ಎಸ್ ಟಿ 2.0 ಸುಧಾರಣೆಗಳು ಹಸಿರು ಬೆಳವಣಿಗೆಗೆ ಪುಷ್ಟಿ ನೀಡಿವೆ,' ಎಂದು ಹೇಳಿದರು. ಮುಂದುವರಿದು ಮಾತನಾಡಿದ ಅವರು, 'ಕೈಗಾರಿಕೆಗಳು ಈ ಅವಕಾಶವನ್ನು ಬಳಸಿಕೊಂಡು ಹಸಿರು ಉತ್ಪಾದನೆಯಲ್ಲಿ ಹೂಡಿಕೆ ಮಾಡಬೇಕು, ಪೂರೈಕೆ ಸರಪಳಿಯಲ್ಲಿ  ಪರಿಸರ ಸ್ನೇಹಿ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಸಾಧಿಸಲು ತಂತ್ರಜ್ಞಾನಗಳನ್ನು ವಿಸ್ತರಿಸಲು ಸಹಕರಿಸಬೇಕು,' ಎಂದು ಕರೆ ನೀಡಿದರು.

ಭಾರತೀಯ ಉದ್ಯಮ ವಲಯದ ಸುಸ್ಥಿರತೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ವಿವಿಧ ಉಪಕ್ರಮಗಳು ಹಾಗೂ ಸುಧಾರಣಾ ಕ್ರಮಗಳ ಬಗ್ಗೆ ಸಚಿವರು ಇದೇ ವೇಳೆ ಬೆಳಕು ಚೆಲ್ಲಿದರು. ವಿಶೇಷವಾಗಿ, 'ಸಿಂಟರ್ಡ್ ರೇರ್ ಅರ್ಥ್ ಪರ್ಮನೆಂಟ್ ಮ್ಯಾಗ್ನೆಟ್ಸ್' (REPM) ಉತ್ಪಾದನೆಗೆ ಉತ್ತೇಜನ ನೀಡುವ ಯೋಜನೆ, 'ರಾಷ್ಟ್ರೀಯ ಕ್ರಿಟಿಕಲ್ ಮಿನರಲ್ ಮಿಷನ್ 2025', ಪರಿಷ್ಕೃತ 'ಗ್ರೀನ್ ಕ್ರೆಡಿಟ್ ಪ್ರೋಗ್ರಾಂ' ಮತ್ತು 'ಪರಿಸರ ಆಡಿಟ್ ನಿಯಮಗಳು 2025' ಅಂತಹ ಪ್ರಮುಖ ಉಪಕ್ರಮಗಳನ್ನು ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು. "ಭಾರತದ ಸುಸ್ಥಿರ ಅಭಿವೃದ್ಧಿಯ ಆಶಯಗಳಿಗೆ ವೇಗ ನೀಡಲು ಹಾಗೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕತೆಯನ್ನು ಸಾಧಿಸಲು, ಉದ್ಯಮ ವಲಯವು ಈ ಪ್ರಯತ್ನಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು," ಎಂದು ಅವರು ಉದ್ಯಮಿಗಳಿಗೆ ಕರೆ ನೀಡಿದರು.

CoP30 ಶೃಂಗಸಭೆಯಿಂದ ಹಿಂದಿರುಗಿದ ನಂತರ ಮಾತನಾಡಿದ ಸಚಿವರು, ಈ ಸಭೆಯು ಭಾರತದ ನಿರೀಕ್ಷೆಗಳನ್ನು ಪೂರೈಸಿದೆ ಎಂದು ತಿಳಿಸಿದರು. "ಹವಾಮಾನ ಹಣಕಾಸು, ಏಕಪಕ್ಷೀಯ ವಾಣಿಜ್ಯ ಕ್ರಮಗಳು, ತಂತ್ರಜ್ಞಾನ ಮತ್ತು ನ್ಯಾಯಯುತ ಸ್ಥಿತ್ಯಂತರದಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ, ಸರ್ವಾನುಮತದಿಂದ ಅಂಗೀಕರಿಸಲಾದ 29 ನಿರ್ಧಾರಗಳು ಭಾರತದ ಆದ್ಯತೆಗಳನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ," ಎಂದು ಅವರು ಹೇಳಿದರು. ಇದಲ್ಲದೆ, 'ತಂತ್ರಜ್ಞಾನ ಅನುಷ್ಠಾನ ಕಾರ್ಯಕ್ರಮ'ದ ಸ್ಥಾಪನೆ ಹಾಗೂ ನ್ಯಾಯಯುತ ಸ್ಥಿತ್ಯಂತರಕ್ಕಾಗಿ ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸಿರುವುದರ ಬಗ್ಗೆಯೂ ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಕೈಗಾರಿಕಾ ವಲಯದ ಬದಲಾವಣೆಯಲ್ಲಿ 'ವೃತ್ತಾಕಾರದ ಆರ್ಥಿಕತೆ' ಮತ್ತು 'ವಿಸ್ತೃತ ಉತ್ಪಾದಕರ ಜವಾಬ್ದಾರಿ' (EPR) ವಹಿಸಬಲ್ಲ ಮಹತ್ವದ ಪಾತ್ರದ ಬಗ್ಗೆ ಸಚಿವರು ಒತ್ತಿ ಹೇಳಿದರು. "EPR ವ್ಯವಸ್ಥೆಯು ಸುಸ್ಥಿರ ತ್ಯಾಜ್ಯ ನಿರ್ವಹಣೆಯನ್ನು ರೂಪಿಸುತ್ತದೆ, ಮರುಬಳಕೆಯ ಆದಾಯವನ್ನು ಹೆಚ್ಚಿಸುತ್ತದೆ ಹಾಗೂ ಅಸಂಘಟಿತ ಕಾರ್ಮಿಕರನ್ನು ಮುಖ್ಯವಾಹಿನಿಗೆ ತರುತ್ತದೆ. ಅಷ್ಟೇ ಅಲ್ಲ, ಸುಮಾರು 33 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ, 'ಹಸಿರು ಕೌಶಲ್ಯ' ಹೊಂದಿರುವ ಮಾನವ ಸಂಪನ್ಮೂಲವನ್ನು (Green-skilled workforce) ರೂಪಿಸಲು ಇದು ನೆರವಾಗುತ್ತದೆ," ಎಂದು ಅವರು ತಿಳಿಸಿದರು. ಸ್ವಾವಲಂಬಿ ವೃತ್ತಾಕಾರದ ಆರ್ಥಿಕತೆಯತ್ತ ಸಾಗುತ್ತಿರುವ ಭಾರತದ ನೀತಿಗಳನ್ನು ಬಲಪಡಿಸಲು, ಕಾರ್ಪೊರೇಟ್ ವಲಯವು ಸ್ವಯಂಪ್ರೇರಿತವಾಗಿ ಮುಂದೆ ಬಂದು ಬದ್ಧತೆ ಪ್ರದರ್ಶಿಸಬೇಕು ಎಂದು ಅವರು ಕರೆ ನೀಡಿದರು. ಇದೇ ವೇಳೆ ಸಿಐಐ (CII) ಕೊಡುಗೆಗಳನ್ನು ಶ್ಲಾಘಿಸಿದ ಅವರು, "ಔಟ್ ಪುಟ್ ಆಧಾರಿತ 'ಸರ್ಕ್ಯುಲರ್ ಎಕಾನಮಿ ಪಿ ಎಲ್ ಐ' (PLI), ಬಲಿಷ್ಠ ಇ ಪಿ ಆರ್ ವ್ಯವಸ್ಥೆಗಳು ಮತ್ತು 'ಗ್ರೀನ್ ಪಬ್ಲಿಕ್ ಪ್ರೊಕ್ಯೂರ್ ಮೆಂಟ್' ನಂತಹ ಉಪಕ್ರಮಗಳು ಮರುಬಳಕೆ ಪ್ರಕ್ರಿಯೆಗೆ ವೇಗ ನೀಡಬಲ್ಲವು ಹಾಗೂ 'ಆತ್ಮನಿರ್ಭರ ಭಾರತ'ವನ್ನು ಇನ್ನಷ್ಟು ಬಲಪಡಿಸಬಲ್ಲವು," ಎಂದು ಅಭಿಪ್ರಾಯಪಟ್ಟರು.

ಸಂಶೋಧನೆ ಮತ್ತು ಅಭಿವೃದ್ಧಿ (R&D), ಹಸಿರು ಉತ್ಪಾದನೆ ಹಾಗೂ MSME ಸಹಯೋಗದಲ್ಲಿ ಹೂಡಿಕೆ ಮಾಡುವ ಮೂಲಕ, ಸುಸ್ಥಿರತೆಯನ್ನು ಸ್ಪರ್ಧಾತ್ಮಕತೆಯೊಂದಿಗೆ ಸಂಯೋಜಿಸುವಂತೆ ಶ್ರೀ ಯಾದವ್ ಉದ್ಯಮಗಳಿಗೆ ಕರೆ ನೀಡಿದರು. "ಹಸಿರು ಆರ್ಥಿಕತೆಯತ್ತ ಭಾರತದ ಬದಲಾವಣೆಯು, ಸುಸ್ಥಿರತೆಯನ್ನು ಸ್ಪರ್ಧಾತ್ಮಕತೆಯೊಂದಿಗೆ ಬೆಸೆಯಲು ಅಪಾರ ಅವಕಾಶಗಳನ್ನು ಒದಗಿಸುತ್ತದೆ. ಸ್ವಾವಲಂಬಿ, ಜಾಗತಿಕವಾಗಿ ಸ್ಪರ್ಧಾತ್ಮಕ ಮತ್ತು ಸುಸ್ಥಿರ ಕೈಗಾರಿಕಾ ನೆಲೆಯನ್ನು ನಿರ್ಮಿಸುವ ಭಾರತದ ಆಶಯವನ್ನು ಈಡೇರಿಸುವಲ್ಲಿ ಉದ್ಯಮ ವಲಯವು ಪ್ರಮುಖ ಪಾತ್ರ ವಹಿಸಬಲ್ಲದು," ಎಂದು ಅವರು ಹೇಳಿದರು.

ಸಾಮೂಹಿಕ ಜವಾಬ್ದಾರಿಯ ಸಂದೇಶದೊಂದಿಗೆ ಮಾತು ಮುಕ್ತಾಯಗೊಳಿಸಿದ ಸಚಿವರು, "ವಿಕಸಿತ ಭಾರತ@2047 ರತ್ತ ಸಾಗುತ್ತಿರುವ ಭಾರತದ ಪಯಣ ಕೇವಲ ಆರ್ಥಿಕ ಬೆಳವಣಿಗೆಗೆ ಸೀಮಿತವಾಗಿಲ್ಲ; ಇದು ಎಲ್ಲರನ್ನೂ ಒಳಗೊಂಡ, ಸದೃಢ ಮತ್ತು ಸುಸ್ಥಿರ ಸಮೃದ್ಧಿಯ ಸಂಕೇತವಾಗಿದೆ. ನಾವೆಲ್ಲರೂ ಒಗ್ಗೂಡಿ ಆರ್ಥಿಕ ಪ್ರಗತಿಯ ಹಾದಿಯನ್ನು ರೂಪಿಸೋಣ. ಇಲ್ಲಿ ಸುಸ್ಥಿರತೆಯು ಒಂದು ಅವಕಾಶವಾಗಬೇಕೇ ಹೊರತು, ಅಡ್ಡಿಯಾಗಬಾರದು," ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಿಐಐ (CII) ಮಹಾನಿರ್ದೇಶಕ ಶ್ರೀ ಚಂದ್ರಜಿತ್ ಬ್ಯಾನರ್ಜಿ, ಸಿಐಐ ಪರಿಸರ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಶ್ರೀ ಶಿವ್ ಸಿದ್ಧಾಂತ್ ನಾರಾಯಣ್ ಕೌಲ್ ಮತ್ತು ಸಿಐಐ 'ವೇಸ್ಟ್-ಟು-ವರ್ತ್'  ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಶ್ರೀ ಮಸೂದ್ ಆಲಂ ಮಲ್ಲಿಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

 

*****


(रिलीज़ आईडी: 2198277) आगंतुक पटल : 3
इस विज्ञप्ति को इन भाषाओं में पढ़ें: English , Urdu , हिन्दी