ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಬೆಂಗಳೂರಿನಲ್ಲಿ ಮೊದಲ ಸ್ವದೇಶಿ ಪೈಲಟ್ ತರಬೇತಿ ವಿಮಾನ 'ಹಂಸ-3 ಎನ್.ಜಿ.' ಬಿಡುಗಡೆ ಮಾಡಿ, 19 ಆಸನಗಳ ವಿಮಾನದ ಯೋಜನೆಯನ್ನು ಪರಿಶೀಲಿಸಿದ ಡಾ. ಜಿತೇಂದ್ರ ಸಿಂಗ್


ಭಾರತದ ಸ್ವದೇಶಿ ವಿಮಾನ ಪರಿಸರ ವ್ಯವಸ್ಥೆಯು ಬೆಳವಣಿಗೆ ಮತ್ತು ಸ್ವಾವಲಂಬನೆಯ ಹೊಸ ಯುಗವನ್ನು ಪ್ರವೇಶಿಸುತ್ತಿದೆ: ಬೆಂಗಳೂರಿನ ಸಿ.ಎಸ್.ಐ.ಆರ್.-ಎನ್.ಎ.ಎಲ್. ನಲ್ಲಿ ಡಾ. ಜಿತೇಂದ್ರ ಸಿಂಗ್

ಭಾರತವು ಜಾಗತಿಕ ವಾಯುಯಾನ ಶ್ರೇಯಾಂಕದಲ್ಲಿ ಅಗ್ರ 3 ಸ್ಥಾನಗಳತ್ತ ದೃಷ್ಟಿ ಹಾಯಿಸಿದೆ; ಮುಂದಿನ ಹಂತದ ಬೆಳವಣಿಗೆಯ ಮೇಲೆ ದೇಶೀಯ ವಿಮಾನಗಳು ಪ್ರಭಾವ ಬೀರಲಿವೆ

ಸಚಿವರು ಸರಸ್ ಎಂ.ಕೆ. -2 ಐರನ್ ಬರ್ಡ್ ಸೌಲಭ್ಯವನ್ನು ಪ್ರಾರಂಭಿಸಿದರು, ಇದು ಭಾರತದ ಅಲ್ಪಾವಧಿಯ ಪ್ರಾದೇಶಿಕ ಸಂಪರ್ಕ ಕಾರ್ಯಕ್ರಮವನ್ನು ಉತ್ತೇಜಿಸುತ್ತದೆ

ಸಿ.ಎಸ್.ಐ.ಆರ್.-ಎನ್.ಎ.ಎಲ್. ನ 19 ಆಸನಗಳ ಸರಸ್ ಎಂ.ಕೆ. -2  ರಿಂದ  “ಉಡಾನ್” ವಿಸ್ತರಣೆಗೆ ಶಕ್ತಿ ತುಂಬಲು ಮತ್ತು ಆಮದು ಮಾಡಿಕೊಳ್ಳುವ ವಿಮಾನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಾಧ್ಯ

ಎಚ್.ಎ.ಎಲ್.  ನಲ್ಲಿ ಡಾ. ಜಿತೇಂದ್ರ ಸಿಂಗ್ ನ್ಯಾವಿ ಮೆಟ್ (NAviMet)  ವ್ಯವಸ್ಥೆಯನ್ನು ಕಾರ್ಯಾರಂಭಗೊಳಿಸಿದರು, ಭಾರತದ ದೇಶೀಯ ಹವಾಮಾನ ತಂತ್ರಜ್ಞಾನವು ಈಗ ರಾಷ್ಟ್ರವ್ಯಾಪಿ ಆಕಾಶವನ್ನು ಕಾಪಾಡುತ್ತಿದೆ ಎಂದು ಹೇಳಿದರು

प्रविष्टि तिथि: 29 NOV 2025 6:11PM by PIB Bengaluru

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ (ಸ್ವತಂತ್ರ ನಿರ್ವಹಣೆ) ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಇಂದು ಭಾರತವು ತನ್ನ ಬಾಹ್ಯಾಕಾಶ ಮತ್ತು ವಾಯುಯಾನ ಪರಿಸರ ವ್ಯವಸ್ಥೆಯಲ್ಲಿ ಅಭೂತಪೂರ್ವ ಪರಿವರ್ತನೆಗೆ ಸಾಕ್ಷಿಯಾಗುತ್ತಿದೆ, ಇದು ಸ್ಥಳೀಯ ತಂತ್ರಜ್ಞಾನಗಳು, ಕೈಗಾರಿಕಾ ಪಾಲುದಾರಿಕೆಗಳು ಮತ್ತು ಸಂಪೂರ್ಣ ಸರ್ಕಾರಿ ವಿಧಾನದಿಂದ ನಡೆಸಲ್ಪಡುತ್ತಿದೆ ಎಂದು ಹೇಳಿದರು. ಬೆಂಗಳೂರಿನ ಸಿಎಸ್ಐಆರ್–ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ (ಎನ್ಎಎಲ್) ನಲ್ಲಿ ಮಾತನಾಡಿದ ಸಚಿವರು, ಇಂದು ಸಾಧಿಸಲಾದ ಮೈಲಿಗಲ್ಲುಗಳು ಪ್ರಧಾನಿ ನರೇಂದ್ರ ಮೋದಿಯವರ "ಹವಾಯಿ ಚಪ್ಪಲ್ ವಾಲಾ ಭಿ ಹವಾಯಿ ಜಹಾಜ್ ಮೇ ಚಲೇಗಾ" ಎಂಬ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ ಮತ್ತು ಜಾಗತಿಕ ವಾಯುಯಾನ ತಾಣವಾಗಿ ಹಾಗು ಸ್ವಾವಲಂಬಿ ಏರೋಸ್ಪೇಸ್ ತಯಾರಿಕಾ ರಾಷ್ಟ್ರವಾಗುವತ್ತ ಭಾರತದ ನಡಿಗೆಯನ್ನು ಗುರುತಿಸುತ್ತವೆ ಎಂದು ಹೇಳಿದರು.

ಪಿಪಿಎಲ್ ಮತ್ತು ಸಿಪಿಎಲ್ ತರಬೇತಿಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ವಿನ್ಯಾಸಗೊಳಿಸಲಾದ ಭಾರತದ ಮೊದಲ ಸಂಪೂರ್ಣ ಸಂಯೋಜಿತ ಏರ್‌ಫ್ರೇಮ್ ಎರಡು ಆಸನಗಳ ವಿಮಾನವಾದ ದೇಶೀಯ ಹಂಸ-3(ಎನ್.ಜಿ.) ತರಬೇತಿ ವಿಮಾನದ ಉತ್ಪಾದನಾ ಆವೃತ್ತಿಯನ್ನು ಸಚಿವರು ಬಿಡುಗಡೆ ಮಾಡಿದರು. ಈ ವರ್ಷದ ಆರಂಭದಲ್ಲಿ ದಿಲ್ಲಿಯಲ್ಲಿ ನಡೆದ ತಂತ್ರಜ್ಞಾನ ವರ್ಗಾವಣೆ ಸಮಾರಂಭವನ್ನು ಅವರು ನೆನಪಿಸಿಕೊಂಡರು ಮತ್ತು ಕೆಲವೇ ತಿಂಗಳುಗಳಲ್ಲಿ, ಉದ್ಯಮದ ಪಾಲುದಾರ ಮೆಸರ್ಸ್ ಪಯೋನೀರ್ ಕ್ಲೀನ್ ಆಂಪ್ಸ್ ಉತ್ಪಾದನಾ ಸಿದ್ಧತೆಗಳನ್ನು ಪ್ರಾರಂಭಿಸಿದೆ ಮಾತ್ರವಲ್ಲದೆ, ಆಂಧ್ರಪ್ರದೇಶದ ಕುಪ್ಪಂನಲ್ಲಿ ವಾರ್ಷಿಕವಾಗಿ 100 ವಿಮಾನಗಳನ್ನು ಉತ್ಪಾದಿಸಲು ₹150 ಕೋಟಿ ಸೌಲಭ್ಯವನ್ನು ಸ್ಥಾಪಿಸುತ್ತಿರುವುದರ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ಮುಂದಿನ 15-20 ವರ್ಷಗಳಲ್ಲಿ ಭಾರತಕ್ಕೆ ಸುಮಾರು 30,000 ಪೈಲಟ್‌ಗಳು ಬೇಕಾಗುತ್ತಾರೆ ಮತ್ತು ಹಂಸ-3(ಎನ್.ಜಿ.) ಸಂಪೂರ್ಣವಾಗಿ ಸ್ಥಳೀಯ ತಂತ್ರಜ್ಞಾನದ ಮೂಲಕ ದೇಶೀಯ ಅಗತ್ಯವನ್ನು ಪೂರೈಸುವತ್ತ ಒಂದು ನಿರ್ಣಾಯಕ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ, ವಿದೇಶಿ ತರಬೇತಿ ವಿಮಾನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ವಾಯುಯಾನದಲ್ಲಿ ಜೀವನೋಪಾಯ ಹಾಗು ಉದ್ಯಮಶೀಲತೆಯ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು.

ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರ ದಟ್ಟಣೆಯಲ್ಲಿ ಭಾರತವು ಅಗ್ರ ಮೂರು ರಾಷ್ಟ್ರಗಳಲ್ಲಿ ಒಂದಾಗುವ ಹಾದಿಯಲ್ಲಿದೆ ಎಂದು ಡಾ. ಜಿತೇಂದ್ರ ಸಿಂಗ್ ಅವರು ಒತ್ತಿ ಹೇಳಿದರು, ಇದಕ್ಕೆ ಬಲವಾದ ಮಧ್ಯಮ ವರ್ಗದ ಜನಸಂಖ್ಯೆ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಬೆಂಬಲ ನೀಡಿದೆ. ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ಪ್ರಾರಂಭಿಸಲಾದ ಉಡಾನ್ ಯೋಜನೆಯು ವಾಯುಯಾನವನ್ನು ಪ್ರಜಾಪ್ರಭುತ್ವೀಕರಣಗೊಳಿಸಿದೆ ಮತ್ತು ಪ್ರಾದೇಶಿಕ ಸಂಪರ್ಕ ಹಾಗು ವೆಚ್ಚ-ಪರಿಣಾಮಕಾರಿ ಕಾರ್ಯಾಚರಣೆಗಳು ದಾಖಲೆಯ ವೇಗದಲ್ಲಿ ವಿಸ್ತರಿಸುತ್ತಿರುವ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಿವೆ ಎಂದು ಅವರು ಹೇಳಿದರು. ಈ ಉಲ್ಬಣವನ್ನು ಪೂರೈಸಲು, ನಾಗರಿಕ ಮತ್ತು ಮಿಲಿಟರಿ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾದ 19 ಆಸನಗಳ ಲಘು ಸಾರಿಗೆ ವಿಮಾನ ಸರಸ್ ಎಂ.ಕೆ. -2 ನ ಸಿ.ಎಸ್.ಐ.ಆರ್-ಎನ್.ಎ.ಎಲ್.-(CSIR-NAL) ನ ಅಭಿವೃದ್ಧಿಯನ್ನು ಸಚಿವರು ಎತ್ತಿ ತೋರಿಸಿದರು. ಒತ್ತಡದ ಕ್ಯಾಬಿನ್, ಡಿಜಿಟಲ್ ಏವಿಯಾನಿಕ್ಸ್, ಗಾಜಿನ ಕಾಕ್‌ಪಿಟ್, ಆಟೋಪೈಲಟ್, ಕಮಾಂಡ್-ಬೈ-ವೈರ್ ಹಾರಾಟ ನಿಯಂತ್ರಣಗಳು ಮತ್ತು ಗಮನಾರ್ಹ ತೂಕ/ಭಾರ ಕಡಿತ ಮತ್ತು ವಾಯು ಸೆಳೆತವನ್ನು ಕಡಿಮೆ ಮಾಡಿ ನೇರ ಮುಂದುವರಿಯುವಿಕೆಗೆ ವೇಗ ಒದಗಿಸುವ ವ್ಯವಸ್ಥೆಯೊಂದಿಗೆ, ವಿಮಾನವು ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಭಾರತದ ಸ್ಥಳೀಯ ಅಲ್ಪ ಕಾಲೀನ -ಪ್ರಯಾಣದ ಪ್ರಯಾಣಿಕ ವಿಮಾನದ ಅಗತ್ಯವನ್ನು ಪೂರೈಸುತ್ತದೆ.

ಸರಸ್ ಎಂ.ಕೆ. --2 ಕೇವಲ ಆರಂಭ, ಏಕೆಂದರೆ ಭಾರತವು ಈಗ ತನ್ನ ಬೆಳೆಯುತ್ತಿರುವ ವಾಯುಯಾನ ಅಗತ್ಯಗಳನ್ನು ಪೂರೈಸಲು ದೀರ್ಘಾವಧಿಯಲ್ಲಿ 19 ಆಸನಗಳ ವರ್ಗ ಸೇರಿದಂತೆ ದೊಡ್ಡ ವಿಮಾನಗಳನ್ನು ರೂಪಿಸುವತ್ತ ಮತ್ತು ನಿರ್ಮಿಸುವತ್ತ ಗಮನಹರಿಸಬೇಕು ಎಂದು ಸಚಿವರು ಹೇಳಿದರು.

ಭೇಟಿಯ ಸಮಯದಲ್ಲಿ, ಡಾ. ಜಿತೇಂದ್ರ ಸಿಂಗ್ ಅವರು ಸರಸ್ ಎಂ.ಕೆ. -2 ಗಾಗಿ ಐರನ್ ಬರ್ಡ್ ಫೆಸಿಲಿಟಿಯನ್ನು ಉದ್ಘಾಟಿಸಿದರು, ಇದು ಪ್ರಮುಖ ವಿಮಾನ ಉಪವ್ಯವಸ್ಥೆಗಳ ಪೂರ್ಣ-ವ್ಯವಸ್ಥೆಯ ಏಕೀಕರಣ, ಪರೀಕ್ಷಾ ನೆಲೆ(ಹೊಸ ತಂತ್ರಜ್ಞಾನ ಅಥವಾ ವಾಹನ ಪರೀಕ್ಷಾ ನೆಲೆ)  ಮತ್ತು ಮೌಲ್ಯೀಕರಣಕ್ಕೆ ನಿರ್ಣಾಯಕ ವೇದಿಕೆಯಾಗಿದೆ ಎಂದು ವಿವರಿಸಿದರು. ಅಂತಹ ಸೌಲಭ್ಯಗಳು ಹಾರಾಟ-ಪರೀಕ್ಷಾ ಅಪಾಯಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ ಮತ್ತು ಅಭಿವೃದ್ಧಿ ಕಾಲಮಿತಿಗಳನ್ನು ವೇಗಗೊಳಿಸುತ್ತವೆ, ಎಂಜಿನಿಯರ್‌ಗಳು ವಿನ್ಯಾಸ ಮತ್ತು ಸಾಫ್ಟ್‌ವೇರ್ ಸಮಸ್ಯೆಗಳನ್ನು ಮೊದಲೇ ಗುರುತಿಸಲು ಮತ್ತು ಪರಿಹರಿಸಲು ಅನುವು ಮಾಡಿಕೊಡುತ್ತವೆ ಎಂಬುದನ್ನು ಅವರು ಗಮನಿಸಿದರು. ನಾಗರಿಕ ವಿಮಾನಯಾನ, ರಕ್ಷಣಾ ಸೇವೆಗಳು, ಡಿ.ಆರ್.ಡಿ.ಒ. ಮತ್ತು ಖಾಸಗಿ ಉದ್ಯಮದೊಂದಿಗೆ ಏಕಕಾಲದಲ್ಲಿ ಕಾರ್ಯನಿರ್ವಹಿಸುವ ಸಿ.ಎಸ್.ಐ.ಆರ್-ಎನ್.ಎ.ಎಲ್ ಆಧುನಿಕ ಸಂಶೋಧನಾ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆಯು ಪ್ರಧಾನಮಂತ್ರಿಯವರು ಪದೇ ಪದೇ ಪ್ರತಿಪಾದಿಸಿದ ಸಂಪೂರ್ಣ ಸರ್ಕಾರ ಮತ್ತು ಇಡೀ ಸಮಾಜದ ವಿಧಾನವನ್ನು ಉದಾಹರಣೆಯಾಗಿ ತೋರಿಸುತ್ತದೆ ಎಂದು ಸಚಿವರು ಒತ್ತಿ ಹೇಳಿದರು.

ಸಚಿವರು ಹೈ ಆಲ್ಟಿಟ್ಯೂಡ್ ಪ್ಲಾಟ್‌ಫಾರ್ಮ್‌ಗಳ (HAPs) ಅಂದರೆ ಅಧಿಕ ಎತ್ತರದಲ್ಲಿ ಕಾರ್ಯಾಚರಿಸುವ ಮತ್ತು ಭೂಮಿಗೆ ನಿಸ್ತಂತು ಮಾಹಿತಿ ಒದಗಿಸಲು ಮೀಸಲಾದ ವೇದಿಕೆ ಅಥವಾ ಮಿಥ್ಯಾ ಉಪಗ್ರಹಗಳನ್ನು ನಿರ್ಮಿಸುವ  ಉತ್ಪಾದನಾ ಸೌಲಭ್ಯವನ್ನು ಉದ್ಘಾಟಿಸಿದರು. ದೀರ್ಘಾವಧಿಯ ಕಾರ್ಯಾಚರಣೆಗಳಿಗಾಗಿ 20 ಕಿ.ಮೀ ಎತ್ತರಕ್ಕಿಂತ ಹೆಚ್ಚು ಎತ್ತರದಲ್ಲಿ ಹಾರುವ ಸಾಮರ್ಥ್ಯವಿರುವ ಸೌರಶಕ್ತಿ ಚಾಲಿತ ಮಾನವರಹಿತ ವಿಮಾನಗಳನ್ನು ಅಭಿವೃದ್ಧಿಪಡಿಸುವ ಆಯ್ದ ರಾಷ್ಟ್ರಗಳ ಲೀಗ್‌ಗೆ ಸೇರಲು ಭಾರತವು ಉಪಕ್ರಮವನ್ನು ಕೈಗೊಂಡಿದೆ. ಅಮೆರಿಕ, ಯುಕೆ, ಜರ್ಮನಿ, ದಕ್ಷಿಣ ಕೊರಿಯಾ, ನ್ಯೂಜಿಲೆಂಡ್ ಮತ್ತು ಜಪಾನ್‌ನಂತಹ ಕೆಲವೇ ಜಾಗತಿಕ ಪ್ರಮುಖರು ಇದೇ ರೀತಿಯ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುತ್ತಿರುವುದರಿಂದ, ಈ ಕ್ಷೇತ್ರಕ್ಕೆ ಭಾರತದ ಪ್ರವೇಶವು ಅದರ ಬೆಳೆಯುತ್ತಿರುವ ವೈಜ್ಞಾನಿಕ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ. ಸಿ.ಎಸ್.ಐ.ಆರ್.-ಎನ್.ಎ.ಎಲ್.(CSIR-NAL) ನ ಸಬ್‌ಸ್ಕೇಲ್ ವಾಹನವು ಈಗಾಗಲೇ 7.5 ಕಿ.ಮೀ ಎತ್ತರ ಮತ್ತು 10 ಗಂಟೆಗಳಿಗಿಂತ ಹೆಚ್ಚಿನ ಹಾರಾಟ ಸಹಿಷ್ಣುತೆಯನ್ನು ಸಾಧಿಸಿದೆ ಮತ್ತು 20 ಕಿ.ಮೀ.ಗೆ ಮೊದಲ ಪೂರ್ಣ ಪ್ರಮಾಣದ ಹಾರಾಟವನ್ನು 2027 ಕ್ಕೆ ನಿಗದಿ ಮಾಡಲಾಗಿದೆ. ಕಣ್ಗಾವಲು, ದೂರಸಂಪರ್ಕ ಮತ್ತು ಪರಿಸರ ಮೇಲ್ವಿಚಾರಣೆಗಾಗಿ ಉಪಗ್ರಹಗಳಿಗೆ ಎಚ್.ಎ.ಪಿ.ಗಳು ವೆಚ್ಚ-ಪರಿಣಾಮಕಾರಿ ಪರ್ಯಾಯವನ್ನು ನೀಡುತ್ತವೆ ಎಂದು ಸಚಿವರು ಹೇಳಿದರು, ಇದು ಭಾರತದ ಏರೋಸ್ಪೇಸ್ ವಲಯಕ್ಕೆ ಹೊಸ ಗಡಿಯನ್ನು ತೆರೆಯುತ್ತದೆ.

ಡಾ. ಜಿತೇಂದ್ರ ಸಿಂಗ್ ಅವರು ಎಚ್.ಎ.ಎಲ್. ವಿಮಾನ ನಿಲ್ದಾಣದಲ್ಲಿ ನಾವಿನೆಟ್ ವ್ಯವಸ್ಥೆಯನ್ನು ಉದ್ಘಾಟಿಸಿದರು, ನಾಗರಿಕ ಮತ್ತು ರಕ್ಷಣಾ ವಾಯುನೆಲೆಗಳಲ್ಲಿ ನಿಯೋಜಿಸಲಾದ ದೃಷ್ಟಿ, ಎ.ಡಬ್ಲ್ಯು.ಒ.ಎಸ್. (AWOS) ಮತ್ತು ನಾವಿ ನೆಟ್ (NAviMet) ವ್ಯವಸ್ಥೆಗಳ ಮೂಲಕ ವಾಯುಯಾನ ಸುರಕ್ಷತೆಗೆ ಸಿ.ಎಸ್.ಐ.ಆರ್-ಎನ್.ಎ.ಎಲ್. (CSIR-NAL) ನ ದೀರ್ಘಕಾಲೀನ ಕೊಡುಗೆಯನ್ನು ಎತ್ತಿ ತೋರಿಸಿದರು. 175 ಕ್ಕೂ ಹೆಚ್ಚು ವ್ಯವಸ್ಥೆಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಸುರಕ್ಷಿತ ಲ್ಯಾಂಡಿಂಗ್ ಮತ್ತು ಟೇಕ್-ಆಫ್‌ಗೆ ಅಗತ್ಯವಾದ ನೈಜ-ಸಮಯದ ಗೋಚರತೆ ಮತ್ತು ಹವಾಮಾನ ನಿಯತಾಂಕಗಳನ್ನು ನಾವಿ ನೆಟ್ ಒದಗಿಸುತ್ತದೆ, ಇದು ಸಾರ್ವಜನಿಕ-ಖಾಸಗಿ ಸಹಯೋಗದಲ್ಲಿ ಸ್ಥಳೀಯ ತಂತ್ರಜ್ಞಾನದ ಮತ್ತೊಂದು ಯಶಸ್ವಿ ಉದಾಹರಣೆಯನ್ನು ಪ್ರತಿಬಿಂಬಿಸುತ್ತದೆ.

ಭಾರತದ ರಕ್ಷಣಾ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವತ್ತ ಮಹತ್ವದ ಹೆಜ್ಜೆಯಾಗಿ, ಸ್ಥಳೀಯ 150-ಕೆಜಿ ವರ್ಗದ ಲೊಯಿಟರಿಂಗ್ ಮ್ಯೂನಿಷನ್ ಯು.ಎ.ವಿ (ನಿಖರ ಗುರಿ ಗುರುತಿಸಿ ಅದನ್ನು ನಾಶ ಮಾಡುವ ಯುದ್ಧ ವಿಮಾನ ಸಾಮರ್ಥ್ಯ) ಅಭಿವೃದ್ಧಿಗಾಗಿ ಮೆಸರ್ಸ್ ಸೋಲಾರ್ ಡಿಫೆನ್ಸ್ & ಏರೋಸ್ಪೇಸ್ ಲಿಮಿಟೆಡ್‌ನೊಂದಿಗೆ ಸಿ.ಎಸ್.ಐ.ಆರ್-ಎನ್.ಎ.ಎಲ್.ನ ಸಹಯೋಗದ ವ್ಯವಸ್ಥೆಯನ್ನು ಸಚಿವರು ವೀಕ್ಷಿಸಿದರು. ಎನ್.ಎ.ಎಲ್. ಪ್ರಮಾಣೀಕೃತ ವ್ಯಾಂಕೆಲ್ ಎಂಜಿನ್‌ನಿಂದ ನಡೆಸಲ್ಪಡುವ ಯು.ಎ.ವಿ. 900 ಕಿಮೀ ವ್ಯಾಪ್ತಿ, 6–9 ಗಂಟೆಗಳ ಸಹಿಷ್ಣುತೆ, 5 ಕಿಮೀ ಸೇವಾ ಸೀಲಿಂಗ್ ಮತ್ತು ಜಿ.ಪಿ.ಎಸ್.-ರಹಿತ ನ್ಯಾವಿಗೇಷನ್, ಕಡಿಮೆ ರಾಡಾರ್ ಕ್ರಾಸ್ ಸೆಕ್ಷನ್  ಮತ್ತು ಎ.ಐ.-ಸಕ್ರಿಯಗೊಳಿಸಿದ ಗುರಿ ಗುರುತಿಸುವಿಕೆಯಂತಹ ಸುಧಾರಿತ ಸಾಮರ್ಥ್ಯಗಳನ್ನು ನೀಡುತ್ತದೆ. ಈ ಪಿಪಿಪಿ ಮಾದರಿಯು ಆತ್ಮನಿರ್ಭರ ಭಾರತದ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವರು ಹೇಳಿದರು, ಭಾರತವು ದೇಶದೊಳಗೆ ನಿರ್ಣಾಯಕ ರಕ್ಷಣಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದನ್ನು ಖಚಿತಪಡಿಸುತ್ತದೆ ಮತ್ತು ವಾಣಿಜ್ಯ ಪ್ರಮಾಣದ ಉತ್ಪಾದನೆಗೆ ಕೈಗಾರಿಕಾ ಸಾಮರ್ಥ್ಯವನ್ನು ನಿರ್ಮಿಸುತ್ತದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಸರ್ಕಾರಿ ಪ್ರಯೋಗಾಲಯಗಳು ಮತ್ತು ಖಾಸಗಿ ಉದ್ಯಮಗಳು ಸ್ಥಳೀಯ ಉತ್ಪನ್ನಗಳನ್ನು ಕಾರ್ಯಸಾಧ್ಯ, ಸ್ಪರ್ಧಾತ್ಮಕ ಮತ್ತು ಜಾಗತಿಕವಾಗಿ ಪ್ರಸ್ತುತವಾಗಿಸುವ ಮೂಲಕ ರಾಷ್ಟ್ರೀಯ ಬೆಳವಣಿಗೆಯನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಸಿ.ಎಸ್.ಐ.ಆರ್-ಎನ್.ಎ.ಎಲ್. ತೋರಿಸಿದೆ ಎಂದು ಹೇಳಿದರು. ಆಧುನಿಕ ಸಂವಹನ ಸಾಧನಗಳ ಮೂಲಕ ಹೂಡಿಕೆದಾರರು, ಯುವ ಉದ್ಯಮಿಗಳು ಮತ್ತು ಸಾರ್ವಜನಿಕರಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಅವರು ಸಂಸ್ಥೆಯನ್ನು ಪ್ರೋತ್ಸಾಹಿಸಿದರು, ಭಾರತದ ವೈಜ್ಞಾನಿಕ ಸಾಧನೆಗಳು ಮುಂದಿನ ಪೀಳಿಗೆಗೆ ಗೋಚರಿಸುತ್ತಿವೆ ಮತ್ತು ಸ್ಪೂರ್ತಿದಾಯಕವಾಗಿವೆ ಎಂದು ಖಚಿತಪಡಿಸಿಕೊಂಡರು.

ತರಬೇತುದಾರ ವಿಮಾನದಿಂದ ಪ್ರಾದೇಶಿಕ ಪ್ರಯಾಣಿಕ ವಿಮಾನಗಳು, ಎತ್ತರದ ವೇದಿಕೆಗಳು, ಮಾನವರಹಿತ ರಕ್ಷಣಾ ವ್ಯವಸ್ಥೆಗಳು ಮತ್ತು ವಾಯುಯಾನ ಹವಾಮಾನಶಾಸ್ತ್ರದವರೆಗೆ ಇಂದು ಪ್ರದರ್ಶಿಸಲಾದ ಸಾಧನೆಗಳು ಪ್ರತ್ಯೇಕ ಬೆಳವಣಿಗೆಗಳಲ್ಲ, ಆದರೆ 2035 ರ ವೇಳೆಗೆ ಭಾರತವನ್ನು ಜಾಗತಿಕ ವಾಯುಯಾನ ಕೇಂದ್ರವಾಗಿ ಮತ್ತು 2047 ರ ವೇಳೆಗೆ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಪರಿವರ್ತಕ ರಾಷ್ಟ್ರೀಯ ಪ್ರಯತ್ನದ ಭಾಗವಾಗಿವೆ ಎಂದು ಹೇಳುವ ಮೂಲಕ ಡಾ. ಜಿತೇಂದ್ರ ಸಿಂಗ್ ಮಾತುಗಳನ್ನು ಮುಕ್ತಾಯಗೊಳಿಸಿದರು. ಸಿ.ಎಸ್.ಐ.ಆರ್-ಎನ್.ಎ.ಎಲ್. ನಂತಹ ಸಂಸ್ಥೆಗಳು ಭಾರತದ ಏರೋಸ್ಪೇಸ್ ಭವಿಷ್ಯವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ಅವರು ಹೇಳಿದರು ಮತ್ತು ಮುಂದಿನ ಹಂತದ ಬೆಳವಣಿಗೆಯಲ್ಲಿ ಇನ್ನೂ ದೊಡ್ಡ ಮೈಲಿಗಲ್ಲುಗಳು ಮತ್ತು ಆಳವಾದ ಉದ್ಯಮದ ಒಳಗೊಳ್ಳುವಿಕೆ ಕಾಣಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

****


(रिलीज़ आईडी: 2196485) आगंतुक पटल : 8
इस विज्ञप्ति को इन भाषाओं में पढ़ें: English , Urdu , हिन्दी , Marathi , Odia