ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಛತ್ತೀಸ್‌ ಗಢದ ರಾಯಪುರದಲ್ಲಿ ಮೂರು ದಿನಗಳ 60ನೇ ಡಿಜಿಪಿ/ಐಜಿಪಿ ಸಮ್ಮೇಳನವನ್ನು ಉದ್ಘಾಟಿಸಿದರು


ಪ್ರಧಾನಮಂತ್ರಿ ಮೋದಿ ಅವರ ನೇತೃತ್ವದಲ್ಲಿ, ಡಿಜಿಪಿ/ಐಜಿಪಿ ಸಮ್ಮೇಳನವು ದೇಶದ ಆಂತರಿಕ ಭದ್ರತೆಗೆ ಪರಿಹಾರಗಳನ್ನು ಒದಗಿಸುವ ವೇದಿಕೆಯಾಗಿ ಹೊರಹೊಮ್ಮಿದೆ—ಇದು ಸಮಸ್ಯೆಗಳ ನಿವಾರಣೆ ಮತ್ತು ಸವಾಲುಗಳಿಂದ ಹಿಡಿದು ಕಾರ್ಯತಂತ್ರಗಳು ಮತ್ತು ನೀತಿ ನಿರೂಪಣೆಯವರೆಗೆ ಎಲ್ಲವನ್ನೂ ಒಳಗೊಂಡಿದೆ

ಮುಂದಿನ ಡಿಜಿಪಿ/ಐಜಿಪಿ ಸಮ್ಮೇಳನಕ್ಕೂ ಮುನ್ನ, ದೇಶವು ನಕ್ಸಲಿಸಂ ಸಮಸ್ಯೆಯಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ

ಕಳೆದ 7 ವರ್ಷಗಳಲ್ಲಿ, ನಾವು 586 ಸುಭದ್ರ ಪೊಲೀಸ್ ಠಾಣೆಗಳನ್ನು ನಿರ್ಮಿಸುವ ಮೂಲಕ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಿದ್ದೇವೆ, ಇದರ ಪರಿಣಾಮವಾಗಿ, ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ 2014ರಲ್ಲಿ 126 ಇದ್ದದ್ದು ಇಂದು ಕೇವಲ 11ಕ್ಕೆ ಇಳಿದಿದೆ

ಕಳೆದ 40 ವರ್ಷಗಳಿಂದ ದೇಶಕ್ಕೆ ದೀರ್ಘಕಾಲದ ಗಾಯವಾಗಿದ್ದ ಮೂರು ಪ್ರಕ್ಷುಬ್ಧ ಸಮಸ್ಯೆಗಳಿಗೆ—ನಕ್ಸಲಿಸಂ, ಈಶಾನ್ಯ ಭಾರತ ಮತ್ತು ಜಮ್ಮು ಕಾಶ್ಮೀರ—ಮೋದಿ ಸರ್ಕಾರ ಶಾಶ್ವತ ಪರಿಹಾರಗಳನ್ನು ನೀಡಿದೆ, ಶೀಘ್ರದಲ್ಲೇ ಈ ಪ್ರದೇಶಗಳು ದೇಶದ ಇತರ ಭಾಗಗಳಂತೆಯೇ ಸಹಜ ಸ್ಥಿತಿಗೆ ಮರಳಲಿವೆ

ನಾವು ಎನ್‌.ಐ.ಎ ಮತ್ತು ಯು.ಎ.ಪಿ.ಎ ಕಾನೂನುಗಳನ್ನು ಬಲಪಡಿಸಿದ್ದೇವೆ, ಜೊತೆಗೆ ಮಾದಕ ದ್ರವ್ಯಗಳು ಮತ್ತು ತಲೆಮರೆಸಿಕೊಂಡ ಅಪರಾಧಿಗಳನ್ನು ಎದುರಿಸಲು ಕಠಿಣ ಕಾನೂನುಗಳೊಂದಿಗೆ ಮೂರು ಹೊಸ ಅಪರಾಧ ಕಾನೂನುಗಳನ್ನು ಜಾರಿಗೊಳಿಸಿದ್ದೇವೆ

ಮೂರು ಹೊಸ ಅಪರಾಧ ಕಾನೂನುಗಳ ಸಂಪೂರ್ಣ ಅನುಷ್ಠಾನದ ನಂತರ, ಭಾರತದಲ್ಲಿನ ಪೊಲೀಸ್ ವ್ಯವಸ್ಥೆಯು ವಿಶ್ವದಲ್ಲೇ ಅತ್ಯಂತ ಆಧುನಿಕವಾಗಲಿದೆ

ನಾವು ಪಿ.ಎಫ್‌.ಐ ಮೇಲೆ ನಿಷೇಧ ಹೇರಿದ್ದೇವೆ, ಅವರ ಅಡಗುತಾಣಗಳ ಮೇಲೆ ನಡೆದ ದೇಶವ್ಯಾಪಿ ದಾಳಿಗಳು ಮತ್ತು ನಂತರದ ಬಂಧನಗಳು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಮನ್ವಯಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ

ಮೂಲಭೂತವಾದ, ಉಗ್ರವಾದ ಮತ್ತು ಮಾದಕ ದ್ರವ್ಯಗಳಿಗೆ ಬಲವಾದ ಪೆಟ್ಟು ನೀಡಲು—ಗುಪ್ತಚರ ಮಾಹಿತಿಯ ನಿಖರತೆ, ಉದ್ದೇಶಗಳ ಸ್ಪಷ್ಟತೆ ಮತ್ತು ಕಾರ್ಯಾಚರಣೆಯಲ್ಲಿನ ಸಮನ್ವಯ—ಎಂಬ ಮೂರು ಪ್ರಮುಖ ಅಂಶಗಳ ಮೇಲೆ ಕೆಲಸ ಮಾಡಲಾಗುತ್ತಿದೆ

ಮಾದಕ ದ್ರವ್ಯಗಳು ಮತ್ತು ಸಂಘಟಿತ ಅಪರಾಧಗಳ ವಿರುದ್ಧ ನಾವು 360ಡಿಗ್ರಿ ದಾಳಿ ನಡೆಸಬೇಕು ಮತ್ತು ಮಾದಕ ದ್ರವ್ಯ ಕಳ್ಳಸಾಗಣೆದಾರರು ಹಾಗೂ ಅಪರಾಧಿಗಳಿಗೆ ಈ ದೇಶದಲ್ಲಿ ಒಂದಿಂಚೂ ಜಾಗ ಸಿಗದಂತಹ ವ್ಯವಸ್ಥೆಯನ್ನು ರೂಪಿಸಬೇಕು

ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾದಕ ದ್ರವ್ಯ ಜಾಲಗಳ  ಮೇಲೆ ಕಠಿಣ ಕ್ರಮ ಕೈಗೊಳ್ಳಲು ಮತ್ತು ಅದರ ಪ್ರಮುಖ ಸೂತ್ರಧಾರರನ್ನು ಜೈಲಿಗೆ ಕಳುಹಿಸಲು ರಾಜ್ಯ ಪೊಲೀಸ್ ಪಡೆಗಳು, ಎನ್‌.ಸಿ.ಬಿ ಜೊತೆಗೂಡಿ ಕಾರ್ಯನಿರ್ವಹಿಸುವ ಸಮಯ ಈಗ ಬಂದಿದೆ

प्रविष्टि तिथि: 28 NOV 2025 9:27PM by PIB Bengaluru

ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಛತ್ತೀಸ್‌ ಗಢದ ರಾಯಪುರದಲ್ಲಿ ಮೂರು ದಿನಗಳ 60ನೇ ಡಿಜಿಪಿ/ಐಜಿಪಿ ಸಮ್ಮೇಳನವನ್ನು ಉದ್ಘಾಟಿಸಿದರು.

ತಮ್ಮ ಭಾಷಣದಲ್ಲಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಡಿಜಿಪಿ/ಐಜಿಪಿ ಸಮ್ಮೇಳನವು ದೇಶದ ಆಂತರಿಕ ಭದ್ರತಾ ಸವಾಲುಗಳನ್ನು ಪರಿಹರಿಸುವಲ್ಲಿ — ಸಮಸ್ಯೆಗಳನ್ನು ಗುರುತಿಸುವುದರಿಂದ ಹಿಡಿದು ಕಾರ್ಯತಂತ್ರಗಳು ಮತ್ತು ನೀತಿಗಳನ್ನು ರೂಪಿಸುವವರೆಗೆ — ಒಂದು ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು. ನಕ್ಸಲಿಸಂನ ಸಂಪೂರ್ಣ ನಿರ್ಮೂಲನೆಗಾಗಿ ಮೋದಿ ಸರ್ಕಾರ ಕೈಗೊಂಡಿರುವ ನಿರ್ಣಾಯಕ ಕ್ರಮಗಳನ್ನು ಪ್ರಸ್ತಾಪಿಸಿದ ಗೃಹ ಸಚಿವರು, ಕಳೆದ ಏಳು ವರ್ಷಗಳಲ್ಲಿ ಕೇಂದ್ರ ಸರ್ಕಾರವು 586 ಸುಭದ್ರ ಪೊಲೀಸ್ ಠಾಣೆಗಳನ್ನು ನಿರ್ಮಿಸುವ ಮೂಲಕ ಭದ್ರತಾ ಜಾಲವನ್ನು ಬಲಪಡಿಸಿದೆ ಎಂದು ತಿಳಿಸಿದರು. ಇದರ ಪರಿಣಾಮವಾಗಿ, ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ 2014ರಲ್ಲಿ 126 ಇದ್ದದ್ದು ಇಂದು ಕೇವಲ 11ಕ್ಕೆ ಇಳಿದಿದೆ. ಮುಂದಿನ ಡಿಜಿಪಿ/ಐಜಿಪಿ ಸಮ್ಮೇಳನಕ್ಕೂ ಮುನ್ನ ದೇಶವು ನಕ್ಸಲಿಸಂ ಹಾವಳಿಯಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ 40 ವರ್ಷಗಳಿಂದ ದೇಶವು ನಕ್ಸಲಿಸಂ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ದೇಶಕ್ಕೆ ಒಂದು ದೊಡ್ಡ ಗಾಯದಂತಿದ್ದ ನಕ್ಸಲಿಸಂ, ಈಶಾನ್ಯ ಭಾರತ ಮತ್ತು ಜಮ್ಮು ಕಾಶ್ಮೀರ — ಈ ಮೂರು ಪ್ರಮುಖ ಸಮಸ್ಯೆಗಳಿಗೆ ಮೋದಿ ಸರ್ಕಾರವು ಶಾಶ್ವತ ಪರಿಹಾರವನ್ನು ಒದಗಿಸಿದೆ. ಅತ್ಯಂತ ಶೀಘ್ರದಲ್ಲೇ ಈ ಪ್ರದೇಶಗಳು ದೇಶದ ಇತರ ಭಾಗಗಳಂತೆಯೇ ಸಹಜ ಸ್ಥಿತಿಗೆ ಮರಳಲಿವೆ ಎಂದು ಅವರು ತಿಳಿಸಿದರು. ಮೋದಿ ಸರ್ಕಾರದ ಸಾಧನೆಗಳನ್ನು ಎತ್ತಿಹಿಡಿದ ಗೃಹ ಸಚಿವರು, ರಾಷ್ಟ್ರೀಯ ತನಿಖಾ ದಳವನ್ನು (NIA) ಬಲಪಡಿಸಲಾಗಿದೆ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯನ್ನು ಹೆಚ್ಚು ಸದೃಢಗೊಳಿಸಲಾಗಿದೆ, ಮೂರು ಹೊಸ ಅಪರಾಧ ಕಾನೂನುಗಳನ್ನು ಪರಿಚಯಿಸಲಾಗಿದೆ ಮತ್ತು ಮಾದಕ ವಸ್ತು ಹಾಗೂ ಪರಾರಿಯಾದ ಅಪರಾಧಿಗಳ ವಿರುದ್ಧ ಕಠಿಣ ಕಾನೂನುಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು. ಮೂರು ಹೊಸ ಅಪರಾಧ ಕಾನೂನುಗಳು ಸಂಪೂರ್ಣವಾಗಿ ಅನುಷ್ಠಾನಗೊಂಡರೆ, ಭಾರತದ ಪೊಲೀಸ್ ವ್ಯವಸ್ಥೆಯು ವಿಶ್ವದಲ್ಲೇ ಅತ್ಯಂತ ಆಧುನಿಕವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧ ಮೋದಿ ಸರ್ಕಾರದ ಕ್ರಮಗಳನ್ನು ಪ್ರಸ್ತಾಪಿಸಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು, ಕೇಂದ್ರ ಸರ್ಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯನ್ನು ನಿಷೇಧಿಸಿದ ನಂತರ, ದೇಶಾದ್ಯಂತ ಅವರ ಅಡಗುತಾಣಗಳ ಮೇಲೆ ದಾಳಿ ನಡೆಸಿ ಬಂಧನಗಳನ್ನು ಮಾಡಲಾಯಿತು, ಇದು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಮನ್ವಯಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು. ಗುಪ್ತಚರ ಮಾಹಿತಿಯ ನಿಖರತೆ, ಉದ್ದೇಶಗಳ ಸ್ಪಷ್ಟತೆ ಮತ್ತು ಕಾರ್ಯಾಚರಣೆಯಲ್ಲಿನ ಸಮನ್ವಯ — ಈ ಮೂರು ಪ್ರಮುಖ ಅಂಶಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಭದ್ರತಾ ಪಡೆಗಳು ಮತ್ತು ಪೊಲೀಸರು ಉಗ್ರವಾದ, ಮೂಲಭೂತವಾದ ಮತ್ತು ಮಾದಕ ದ್ರವ್ಯಗಳ ವಿರುದ್ಧ ಬಲವಾದ ಹೊಡೆತ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು. ಮಾದಕ ವಸ್ತುಗಳು ಮತ್ತು ಸಂಘಟಿತ ಅಪರಾಧಗಳ ವಿರುದ್ಧ ನಾವು 360 ಡಿಗ್ರಿ ದಾಳಿ ನಡೆಸಬೇಕು ಮತ್ತು ಮಾದಕ ದ್ರವ್ಯ ಕಳ್ಳಸಾಗಣೆದಾರರು ಹಾಗೂ ಅಪರಾಧಿಗಳಿಗೆ ಈ ದೇಶದಲ್ಲಿ ಒಂದಿಂಚೂ ಜಾಗ ಸಿಗದಂತಹ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಶ್ರೀ ಶಾ ಪುನರುಚ್ಚರಿಸಿದರು. ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾದಕ ದ್ರವ್ಯ ಗ್ಯಾಂಗ್‌ ಗಳ ವಿರುದ್ಧ ರಾಜ್ಯ ಪೊಲೀಸ್ ಪಡೆಗಳು, ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (NCB)ದೊಂದಿಗೆ ಸೇರಿ ಕಠಿಣ ಕ್ರಮ ಕೈಗೊಳ್ಳಲು ಮತ್ತು ಅದರ ಹಿಂದಿರುವ ಪ್ರಮುಖ ಸೂತ್ರಧಾರರನ್ನು ಜೈಲಿಗೆ ಕಳುಹಿಸಲು ಈಗ ಸಕಾಲವಾಗಿದೆ ಎಂದು ಅವರು ಹೇಳಿದರು.

 

*****


(रिलीज़ आईडी: 2196171) आगंतुक पटल : 4
इस विज्ञप्ति को इन भाषाओं में पढ़ें: English , Marathi , हिन्दी , Gujarati