ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಂದ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ರಾಷ್ಟ್ರೀಯ ಅಭಿಯಾನವಾದ ನಯೀ ಚೇತನಾ 4.0ಗೆ ಚಾಲನೆ


ಮಹಿಳಾ ಸಬಲೀಕರಣ ಬಲಪಡಿಸುತ್ತಾ ಮತ್ತು ದೇಶಾದ್ಯಂತ ಗ್ರಾಮೀಣ ಮಹಿಳೆಯರಿಗೆ ಅವಕಾಶಗಳನ್ನು ವಿಸ್ತರಿಸುತ್ತಾ ಸರ್ಕಾರವು ಈ ಮುನ್ನೋಟದ ಸಾಕಾರಕ್ಕೆ ನಿರಂತರವಾಗಿ ಶ್ರಮಿಸುತ್ತಿದೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್

12 ಸಚಿವಾಲಯಗಳು/ಇಲಾಖೆಗಳ ನಡುವಿನ ಸಮನ್ವಯ ಪ್ರಯತ್ನಗಳ ಕುರಿತಾದ ಅಂತರ-ಸಚಿವಾಲಯಗಳ ಜಂಟಿ ಸಲಹಾ ವರದಿ ಅನಾವರಣ

ಹಿಂಸಾಚಾರ ಮುಕ್ತ ಗ್ರಾಮ ಉಪಕ್ರಮಕ್ಕಾಗಿ ಮೂರು ಸಚಿವಾಲಯಗಳ ನಡುವಿನ ಅಂತರ-ಸಚಿವಾಲಯ ತ್ರಿಪಕ್ಷೀಯ ಒಪ್ಪಂದ - ಉದ್ದೇಶ/ಆಶಯ ಪತ್ರ ಬಿಡುಗಡೆ

ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2025ರ ಡಿಸೆಂಬರ್ 23 ರವರೆಗೆ ತಿಂಗಳ ಅವಧಿಯ ಅಭಿಯಾನ

प्रविष्टि तिथि: 25 NOV 2025 5:17PM by PIB Bengaluru

ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿಂದು ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ರಾಷ್ಟ್ರೀಯ ಅಭಿಯಾನವಾದ ನಯೀ ಚೇತನ (ನವ ಚೈತನ್ಯ) 4.0 ಅನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ, ಗ್ರಾಮೀಣಾಭಿವೃದ್ಧಿ ಮತ್ತು ಸಂವಹನ ಖಾತೆ ರಾಜ್ಯ ಸಚಿವರಾದ ಡಾ. ಚಂದ್ರ ಶೇಖರ್ ಪೆಮ್ಮಸಾನಿ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವರಾದ ಶ್ರೀ ಕಮಲೇಶ್ ಪಾಸ್ವಾನ್ ಭಾಗಿಯಾಗಿದ್ದರು.

ಸಹೋದರಿ ಯಾರೇ ಆಗಿರಲಿ, ಬಡತನದಲ್ಲಿ ಉಳಿಯಬಾರದು, ಯಾವುದೇ ಮಹಿಳೆ ಕಣ್ಣೀರು ಸುರಿಸುತ್ತಾ ಬದುಕಬಾರದು ಮತ್ತು ಪ್ರತಿಯೊಬ್ಬ ಸಹೋದರಿಯೂ ಲಖ್ಪತಿ ದೀದಿಯಾಗಿ ಘನತೆ, ಆತ್ಮವಿಶ್ವಾಸ ಮತ್ತು ಸಮೃದ್ಧಿಯೊಂದಿಗೆ ಜೀವಿಸಬೇಕು ಎಂದು ಪ್ರಧಾನಮಂತ್ರಿ ದೃಢಸಂಕಲ್ಪ ಮಾಡಿದ್ದಾರೆ. ಎರಡು ಕೋಟಿಗೂ ಹೆಚ್ಚು ಸ್ವಸಹಾಯ ಗುಂಪುಗಳ ಮಹಿಳೆಯರು ಈಗಾಗಲೇ ಲಖ್ಪತಿ ದೀದಿಗಳಾಗಿದ್ದಾರೆ ಎಂದು ಶಿವರಾಜ್ ಸಿಂಗ್ ತಮ್ಮ ಪ್ರಧಾನ‌ ಭಾಷಣದಲ್ಲಿ ಒತ್ತಿ ಹೇಳಿದರು. ಮಹಿಳಾ ಸಬಲೀಕರಣವನ್ನು ಬಲಪಡಿಸುವ ಮತ್ತು ದೇಶಾದ್ಯಂತ ಗ್ರಾಮೀಣ ಮಹಿಳೆಯರಿಗೆ ಅವಕಾಶಗಳನ್ನು ವಿಸ್ತರಿಸುವ ಮೂಲಕ ಸರ್ಕಾರ ಈ ಮುನ್ನೋಟವನ್ನು ಸಾಕಾರಗೊಳಿಸುವತ್ತ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಅವರು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಗೃಹ ವ್ಯವಹಾರಗಳ ಸಚಿವಾಲಯ, ಪಂಚಾಯತ್ ರಾಜ್ ಸಚಿವಾಲಯ, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವಾಲಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ನ್ಯಾಯ ಇಲಾಖೆ - ಈ ಹನ್ನೊಂದು ಸಹಯೋಗಿ ಸಚಿವಾಲಯಗಳು/ಇಲಾಖೆಗಳು ಸಹಿ ಮಾಡಿದ ಅಂತರ-ಸಚಿವಾಲಯ ಜಂಟಿ ಸಲಹಾ ಪತ್ರವನ್ನು ಸಹ ಈ ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು. ಲಿಂಗ ಆಧಾರಿತ ತಾರತಮ್ಯ ಮತ್ತು ಹಿಂಸೆಯನ್ನು ತೊಡೆದುಹಾಕಲು ಪ್ರತಿಯೊಂದು ಸಹಯೋಗಿ ಸಚಿವಾಲಯ/ಇಲಾಖೆಯ ಒಗ್ಗೂಡಿದ ಶಕ್ತಿಯೊಂದಿಗೆ "ಸಂಪೂರ್ಣ ಸರ್ಕಾರ" ಎಂಬ ವಿಧಾನದ ಚೈತನ್ಯವನ್ನು ಈ ಸಲಹೆ ಸಾಕಾರಗೊಳ್ಳಲಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಕಾನೂನು ಮತ್ತು ನ್ಯಾಯ ಸಚಿವಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವಾಲಯದ ನಡುವಿನ ಅಂತರ-ಸಚಿವಾಲಯ ತ್ರಿಪಕ್ಷೀಯ ಒಪ್ಪಂದಕ್ಕಾಗಿನ ಉದ್ದೇಶ/ಆಕಾಂಕ್ಷೆ ಪತ್ರವು ಗ್ರಾಮೀಣ ಭಾರತದಲ್ಲಿ ಬಾಲಕಿಯರು ಮತ್ತು ಮಹಿಳೆಯರಿಗೆ ಸುರಕ್ಷತೆ, ಹಕ್ಕುಗಳು ಮತ್ತು ಸಬಲೀಕರಣ ಅವಕಾಶಗಳನ್ನು ಖಾತರಿಪಡಿಸುತ್ತಾ ಹಿಂಸಾಚಾರ-ಮುಕ್ತ ಗ್ರಾಮ ಉಪಕ್ರಮದ ಅಡಿಯಲ್ಲಿ ಮಾದರಿ ಗ್ರಾಮಗಳ ಅಭಿವೃದ್ಧಿಯನ್ನು ಮುನ್ನಡೆಸಲಿದೆ ಎಂದು ಶ್ರೀಮತಿ ಅನ್ನಪೂರ್ಣ ದೇವಿ ಅವರು ಒತ್ತಿ ಹೇಳಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (DAY-NRLM) ಆಯೋಜಿಸಿರುವ ಈ ಒಂದು ತಿಂಗಳ ಅಭಿಯಾನವು 2025ರ ಡಿಸೆಂಬರ್ 23 ರವರೆಗೆ ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ. DAY-NRLMನ ವಿಸ್ತಾರವಾದ ಸ್ವಸಹಾಯ ಗುಂಪು ಜಾಲದ ನೇತೃತ್ವದ ಈ ಉಪಕ್ರಮವು ಜನಾಂದೋಲನದ ಚೈತನ್ಯವನ್ನು ಹೊಂದಿದೆ.

ಸ್ವಸಹಾಯ ಗುಂಪುಗಳ ಮೂಲಕ ಸಜ್ಜುಗೊಂಡ 10 ಕೋಟಿ ಗ್ರಾಮೀಣ ಮಹಿಳೆಯರ ಸಾಮೂಹಿಕ ಶಕ್ತಿಯು ನಯೀ ಚೇತನಾ ಅಭಿಯಾನವನ್ನು ಸದೃಢ ತಳಮಟ್ಟದ ಚಳುವಳಿಯಾಗಿ ಪರಿವರ್ತಿಸಿದೆ ಎಂದು ಡಾ. ಚಂದ್ರ ಶೇಖರ್ ಪೆಮ್ಮಸಾನಿ ವಿವರಿಸಿದರು. ಈ ಅಭಿಯಾನವು ಸಕಾಲಿಕ ಬೆಂಬಲವನ್ನು ಪಡೆಯಲು ಮಹಿಳೆಯರಿಗೆ ಬಲ ನೀಡುವುದಲ್ಲದೆ, ದೀರ್ಘಕಾಲದಿಂದ ನಿಗ್ರಹಿಸಲ್ಪಟ್ಟ ಸಮಸ್ಯೆಗಳನ್ನು ಮುನ್ನೆಲೆಗೆ ತರಲು ಪ್ರೇರೇಪಿಸುತ್ತದೆ, ಈ ಮೂಲಕ ಹಿಂಸಾಚಾರ-ಮುಕ್ತ ಮತ್ತು ಲಿಂಗ-ಸಮಾನ ಗ್ರಾಮೀಣ ಪರಿಸರ ವ್ಯವಸ್ಥೆಯತ್ತ ಸಮುದಾಯ ನೇತೃತ್ವದ ಪ್ರಯತ್ನಗಳನ್ನು ಬಲಪಡಿಸಲಿದೆ ಎಂದು ಅವರು ಹೇಳಿದರು.

ಲಿಂಗ ಅಸಮಾನತೆಯನ್ನು ಹೋಗಲಾಡಿಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸಲಿದೆ ಎಂದು ಶ್ರೀ ಕಮಲೇಶ್ ಪಾಸ್ವಾನ್ ಅವರು ಒತ್ತಿ ಹೇಳಿದ್ದಾರೆ. ವ್ಯಕ್ತಿಗಳು ಮತ್ತು ಸಮುದಾಯಗಳ ನಡುವಿನ ದೀರ್ಘಕಾಲದ ಅಡೆತಡೆಗಳನ್ನು ತೊಡೆದುಹಾಕಲು ಶಿಕ್ಷಣ ಪ್ರಬಲ ಸಾಧನವಾಗಿದೆ ಎಂದು ಅವರು ಹೇಳಿದರು.

ಬಿಹಾರ ಮತ್ತು ರಾಜಸ್ಥಾನದ ಇಬ್ಬರು ಲಿಂಗತ್ವ ಚಾಂಪಿಯನ್‌ಗಳು ತಮ್ಮ ಸಮುದಾಯಗಳಲ್ಲಿ ತಾರತಮ್ಯವನ್ನು ನಿವಾರಿಸುವಲ್ಲಿ ಮತ್ತು ಬದಲಾವಣೆಯನ್ನು ಮುನ್ನಡೆಸುವಲ್ಲಿ ತಮ್ಮ ಪಯಣವನ್ನು ಹಂಚಿಕೊಂಡರು.

ಗ್ರಾಮೀಣ ಭಾರತದಾದ್ಯಂತ ಲಿಂಗ ಆಧಾರಿತ ಹಿಂಸಾಚಾರದ ವಿರುದ್ಧ ಸಮುದಾಯದ ಕ್ರಮವನ್ನು ಬಲಪಡಿಸುವ ಹಾಗೂ ಮಹಿಳೆಯರ ಸುರಕ್ಷತೆ, ಘನತೆ ಮತ್ತು ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವ ಗುರಿಯನ್ನು ನಯೀ ಚೇತನಾ 4.0 ಹೊಂದಿದೆ. ಈ ಅಭಿಯಾನವು ಮಹಿಳೆಯರ ಸುರಕ್ಷಿತ  ಸಂಚಾರಕ್ಕೆ ಗಮನಹರಿಸುವ ಜೊತೆಗೆ ಮಹಿಳೆಯರನ್ನು  ಆರ್ಥಿಕತೆಗೆ ಪ್ರಮುಖ ಕೊಡುಗೆದಾರರಾಗಿ ಗುರುತಿಸುತ್ತಾ ಹಂಚಿತ ಸಮುದಾಯ ಜವಾಬ್ದಾರಿಯ ಮೂಲಕ ಕೆಲಸಕ್ಕನುಗುಣವಾಗಿ ಪಾವತಿಯಾಗದೇ ಇರುವ ಸಮಸ್ಯೆ ಪರಿಹರಿಸುವುದರ ಮೇಲೆ ಕೇಂದ್ರೀಕರಿಸಿದೆ. ಇದು ಮಹಿಳೆಯರಿಗೆ ಆಸ್ತಿ, ಸಾಲ, ಕೌಶಲ್ಯ ಮತ್ತು ಮಾರುಕಟ್ಟೆಗಳಿಗೆ ಪ್ರವೇಶವನ್ನು ಹೆಚ್ಚಿಸಲು ಅನುವು ಮಾಡಿಕೊಡಲಿದ್ದು, ಈ ಮೂಲಕ ಉದ್ಯಮಶೀಲತೆ ಮತ್ತು ಜೀವನೋಪಾಯ ಅವಕಾಶಗಳನ್ನು ವಿಸ್ತರಿಸಲಿದೆ. ಲಿಂಗ-ಪ್ರತಿಕ್ರಿಯಾತ್ಮಕ ನೀತಿಗಳು ಮತ್ತು ಆಯವ್ಯಯದೊಂದಿಗೆ ಈ ಅಭಿಯಾನವು ಎಲ್ಲಾ ಹಂತಗಳಲ್ಲಿಯೂ ಮಹಿಳೆಯರಿಂದ ನಿರ್ಧಾರ   ಕೈಗೊಳ್ಳುವಿಕೆಯನ್ನು ಖಚಿತಪಡಿಸಲಿದ್ದು ಸಮಾನತೆ ಮತ್ತು ಸಮಗ್ರ ಗ್ರಾಮೀಣಾಭಿವೃದ್ಧಿಗೆ DAY-NRLMನ ಬದ್ಧತೆಯನ್ನು ಬಲಪಡಿಸಲಿದೆ.

ಭಾರತ ಸರ್ಕಾರದ ಪ್ರಮುಖ ಸಚಿವಾಲಯಗಳು ಮತ್ತು ಇಲಾಖೆಗಳು, ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌ಗಳ ಪ್ರತಿನಿಧಿಗಳು, ದೇಶಾದ್ಯಂತದ ಸ್ವ-ಸಹಾಯ ಗುಂಪುಗಳ ಮಹಿಳಾ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪಾಲುದಾರ ನಾಗರಿಕ ಸಮಾಜ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು. ಇದು ಲಿಂಗ ಸಮಾನತೆಯನ್ನು ಮತ್ತು ಗ್ರಾಮೀಣಾಭಿವೃದ್ಧಿ ಮುನ್ನಡೆಸಲು ಬಲವಾದ ಸಾಮೂಹಿಕ ಬದ್ಧತೆಯ ಪ್ರತಿಬಿಂಬವಾಗಿದೆ.

****


(रिलीज़ आईडी: 2194312) आगंतुक पटल : 4
इस विज्ञप्ति को इन भाषाओं में पढ़ें: Odia , English , Urdu , Marathi , हिन्दी