ರಕ್ಷಣಾ ಸಚಿವಾಲಯ
azadi ka amrit mahotsav

ʻವೈಮಾನಿಕ ಔಷಧ ಸಂಸ್ಥೆʼಯ ವತಿಯಿಂದ ʻಭಾರತೀಯ ವೈಮಾನಿಕ ಔಷಧ ಸಂಘʼದ (ಐ.ಎಸ್.ಎ.ಎಂ) 64ನೇ ವಾರ್ಷಿಕ ಸಮ್ಮೇಳನ ಆಯೋಜನೆ

Posted On: 19 NOV 2025 10:36AM by PIB Bengaluru

ʻಭಾರತೀಯ ವೈಮಾನಿಕ ಔಷಧ ಸಂಘʼವು(ಐ.ಎಸ್.ಎ.ಎಂ) ತನ್ನ 64ನೇ ವಾರ್ಷಿಕ ಸಮ್ಮೇಳನವನ್ನು 2025ರ ನವೆಂಬರ್ 20-21 ರಂದು ಬೆಂಗಳೂರಿನ ʻವೈಮಾನಿಕ ಔಷಧ ಸಂಸ್ಥೆʼಯಲ್ಲಿ (ಐ.ಎ.ಎಂ) ಆಯೋಜಿಸುತ್ತಿದೆ. ಸಮ್ಮೇಳನವನ್ನು ವಾಯುಪಡೆ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು 2025ರ ನವೆಂಬರ್ 20ರಂದು ಉದ್ಘಾಟಿಸಲಿದ್ದಾರೆ. ಈ ಸಮ್ಮೇಳನದಲ್ಲಿ ದೇಶ-ವಿದೇಶಗಳಿಂದ ಸುಮಾರು 300 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಲ್ಲಿ ʻಭಾರತೀಯ ರಕ್ಷಣಾ ಸಂಶೋಧನಾ ಸಂಸ್ಥೆʼ(ಡಿ.ಆರ್.ಡಿ.ಒ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ವಿಜ್ಞಾನಿಗಳು ಸೇರಿದಂತೆ ಸಂಬಂಧಪಟ್ಟ ಸಂಸ್ಥೆಗಳ ಸಂಶೋಧಕರು ಸೇರಿದ್ದಾರೆ. 

ಕಾರ್ಯಕ್ರಮದ ಪ್ರಮುಖಾಂಶಗಳ ಭಾಗವಾಗಿ, ಏರ್ ಮಾರ್ಷಲ್ ಸುಬ್ರತೋ ಮುಖರ್ಜಿ ಅವರ ಕುರಿತಾದ ಸ್ಮಾರಕ ಭಾಷಣವನ್ನು ಪ್ರಮುಖ ಇತಿಹಾಸಕಾರ ಶ್ರೀ ಅಂಚಿತ್ ಗುಪ್ತಾ ಅವರು ನೀಡಲಿದ್ದಾರೆ. ಏರ್ ವೈಸ್ ಮಾರ್ಷಲ್ ದೀಪಕ್ ಗೌರ್ (ನಿವೃತ್ತ) ಅವರು ಏರ್ ವೈಸ್ ಮಾರ್ಷಲ್ ಎಂ.ಎಂ.ಶ್ರೀನಾಗೇಶ್ ಅವರ ಕುರಿತಾದ ಸ್ಮಾರಕ ಭಾಷಣವನ್ನು ನೀಡಲಿದ್ದಾರೆ. 

'ಜೆಮಿ ಹೋರ್ಮುಸ್ಜಿ ಫ್ರಾಮ್ಜಿ ಮಾಣೆಕ್ ಶಾ ಪ್ಯಾನೆಲ್'ನ ಭಾಷಣವು ಸಮ್ಮೇಳನದ ಮತ್ತೊಂದು ಮಹತ್ವದ ಅಂಶವಾಗಿದೆ. ಇದು ʻಪಿಕ್ಸೆಲ್ ಏರೋಸ್ಪೇಸ್ ಟೆಕ್ನಾಲಜೀಸ್ʼನ ಸಿ.ಇ.ಒ ಮತ್ತು ಸಂಸ್ಥಾಪಕ ಶ್ರೀ ಅವೈಸ್ ಅಹ್ಮದ್ ಹಾಗೂ ʻಇಂಡಿಗೋ ಏರ್ಲೈನ್ಸ್ʼನ ಮುಖ್ಯ ವಿಮಾನ ಸುರಕ್ಷತಾ ಅಧಿಕಾರಿ ಕ್ಯಾಪ್ಟನ್ ಧ್ರುವ್ ರೆಬ್ಬಪ್ರಗಡ ಸೇರಿದಂತೆ ಪ್ರಮುಖ ತಜ್ಞರ ಅತಿಥಿ ಉಪನ್ಯಾಸಗಳನ್ನು ಒಳಗೊಂಡಿದೆ.

ಸಮ್ಮೇಳನದ ಪ್ರಸ್ತುತ ಆವೃತ್ತಿಯು 'ವೈಮಾನಿಕ ಔಷಧದಲ್ಲಿ ನಾವೀನ್ಯತೆಗಳು: ಅನಂತ ಸಾಧ್ಯತೆಗಳು' ಎಂಬ ವಿಷಯಾಧಾರಿತವಾಗಿ ಜರುಗಲಿದೆ. ಇದು ವೈಮಾನಿಕ ಔಷಧ ಕ್ಷೇತ್ರದ ವೈದ್ಯರ ಸುರಕ್ಷತೆ ಮತ್ತು ಸೂಕ್ತ ಕಾರ್ಯಕ್ಷಮತೆಯ ಅವಶ್ಯಕತೆಗಳನ್ನು ಸಮತೋಲನಗೊಳಿಸುವಲ್ಲಿ ನವೀನ ವಿಧಾನಗಳನ್ನು ಉಲ್ಲೇಖಿಸುತ್ತದೆ.

ಸಮ್ಮೇಳನದಲ್ಲಿ 100ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಮಂಡಿಸಲಾಗುವುದು.  ದೇಶದಲ್ಲಿ ವೈಮಾನಿಕ ಔಷಧ ಸಂಶೋಧನೆ ಮತ್ತು ನೀತಿಯ ಭವಿಷ್ಯವನ್ನು ರೂಪಿಸುವ ಗುರಿಯನ್ನು ಹೊಂದಿರುವ ವೈಜ್ಞಾನಿಕ ಕಾರ್ಯತಂತ್ರದ ಚರ್ಚೆಗಳು, ಪ್ರಸ್ತುತಿಗಳು ಮತ್ತು ಸಂಪರ್ಕಜಾಲದ ಅವಕಾಶಗಳನ್ನು ಪ್ರತಿನಿಧಿಗಳು ನಿರೀಕ್ಷಿಸಬಹುದು. 

1952ರಲ್ಲಿ ಸ್ಥಾಪನೆಯಾದ ʻಐ.ಎಸ್.ಎ.ಎಂʼ ಭಾರತದಲ್ಲಿ ವೈಮಾನಿಕ ಔಷಧದ ಜ್ಞಾನ ಮತ್ತು ಅಭ್ಯಾಸವನ್ನು ಉತ್ತೇಜಿಸಲು ಮೀಸಲಾಗಿರುವ ಏಕೈಕ ನೋಂದಾಯಿತ ಸಂಘವಾಗದೆ. ಈ ವಿಶಿಷ್ಟ ಮತ್ತು ಪ್ರಧಾನ ಸಂಸ್ಥೆಯು ದೇಶದ ಬಾಹ್ಯಾಕಾಶ ಯಾನ ಕಾರ್ಯಕ್ರಮದ ಮಾನವ ಅಂಶಗಳನ್ನು ಒಳಗೊಂಡಂತೆ ಮಿಲಿಟರಿ ಮತ್ತು ನಾಗರಿಕ ವೈಮಾನಿಕ ಔಷಧಗಳ ಬಗ್ಗೆ ಗಮನ ಹರಿಸುತ್ತದೆ. ಸಂಶೋಧನೆಯನ್ನು ಮುನ್ನಡೆಸುವ, ಜ್ಞಾನ ವಿನಿಮಯವನ್ನು ಉತ್ತೇಜಿಸುವ ಮತ್ತು ಏರೋಮೆಡಿಕಲ್ ಸವಾಲುಗಳಿಗೆ ಪರಿಹಾರಗಳನ್ನು ಹುಡುಕುವ ಉದ್ದೇಶದಿಂದ, ʻಐ.ಎಸ್.ಎ.ಎಂʼ 1954 ರಿಂದ ತನ್ನ ವಾರ್ಷಿಕ ವೈಜ್ಞಾನಿಕ ಸಮ್ಮೇಳನವನ್ನು ನಡೆಸುತ್ತಿದೆ.

 

*****


(Release ID: 2191653) Visitor Counter : 7