ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಬಯೋಮಾಸ್ ಆಧಾರಿತ ಹೈಡ್ರೋಜನ್ ಪೈಲಟ್ ಯೋಜನೆಗಳಿಗೆ ₹100 ಕೋಟಿ ಪ್ರಸ್ತಾವನೆಗಳನ್ನು ಆಹ್ವಾನಿಸುವುದಾಗಿ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಘೋಷಿಸಿದ್ದಾರೆ
ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ (ಎನ್.ಜಿ.ಹೆಚ್.ಎಂ) ಭಾರತದ ಶುದ್ಧ ಇಂಧನ ಪರಿವರ್ತನೆಯನ್ನು ವೇಗಗೊಳಿಸುತ್ತಿದೆ ಮತ್ತು ಭಾರತವನ್ನು ಹಸಿರು ಹೈಡ್ರೋಜನ್ ನ ಜಾಗತಿಕ ಕೇಂದ್ರವಾಗಿ ಸ್ಥಾಪಿಸುತ್ತಿದೆ: ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ
ಎನ್.ಜಿ.ಹೆಚ್.ಎಂ ವಾರ್ಷಿಕವಾಗಿ ₹8 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಹೂಡಿಕೆಗಳನ್ನು ಸಂಗ್ರಹಿಸುತ್ತದೆ, ಆರು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಪಳೆಯುಳಿಕೆ ಇಂಧನ ಆಮದುಗಳಲ್ಲಿ ವಾರ್ಷಿಕವಾಗಿ ₹1 ಲಕ್ಷ ಕೋಟಿ ಉಳಿಸುತ್ತದೆ: ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಸಾರಂಗಿ
Posted On:
11 NOV 2025 5:39PM by PIB Bengaluru
ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ (ಎನ್.ಜಿ.ಹೆಚ್.ಎಂ) ಭಾರತದ ಶುದ್ಧ ಇಂಧನ ಪರಿವರ್ತನೆಯನ್ನು ವೇಗಗೊಳಿಸುತ್ತಿದೆ, ಉದ್ಯೋಗಗಳನ್ನು ಸೃಷ್ಟಿಸುತ್ತಿದೆ, ಹೂಡಿಕೆಗಳನ್ನು ಆಕರ್ಷಿಸುತ್ತಿದೆ ಮತ್ತು ಭಾರತವನ್ನು ಹಸಿರು ಹೈಡ್ರೋಜನ್ ನ ಜಾಗತಿಕ ಕೇಂದ್ರವಾಗಿ ಇರಿಸುತ್ತಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು. ನವದೆಹಲಿಯ ಭಾರತ ಮಂಟಪದಲ್ಲಿ ನಡೆದ 3ನೇ ಅಂತರರಾಷ್ಟ್ರೀಯ ಹಸಿರು ಹೈಡ್ರೋಜನ್ ಸಮ್ಮೇಳನದ (ಐ.ಸಿ.ಜಿ.ಹೆಚ್ 2025) ಉದ್ಘಾಟನಾ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು, ಶುದ್ಧ ಇಂಧನ ಪರಿವರ್ತನೆಯಲ್ಲಿ ಭಾರತದ ಜಾಗತಿಕ ನಾಯಕತ್ವವನ್ನು ಪುನರುಚ್ಚರಿಸಿದರು.
ಈ ಸಂದರ್ಭದಲ್ಲಿ, ಸಚಿವರು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ (ಎನ್.ಜಿ.ಹೆಚ್.ಎಂ) ನ ಅಧಿಕೃತ ಲಾಂಛನವನ್ನು ಬಿಡುಗಡೆ ಮಾಡಿದರು ಮತ್ತು ಬಯೋಮಾಸ್ ಮತ್ತು ತ್ಯಾಜ್ಯ ವಸ್ತುಗಳಿಂದ ಹಸಿರು ಹೈಡ್ರೋಜನ್ ಉತ್ಪಾದಿಸಲು ನವೀನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಪೈಲಟ್ ಯೋಜನೆಗಳಿಗಾಗಿ ₹100 ಕೋಟಿ ಪ್ರಸ್ತಾವನೆಗಳನ್ನು ಆಹ್ವಾನಿಸುವುದಾಗಿ ಘೋಷಿಸಿದರು. ದೇಶಾದ್ಯಂತ ಸ್ವೀಕರಿಸಿದ 2,500 ಕ್ಕೂ ಹೆಚ್ಚು ನಮೂದುಗಳಿಂದ ಆಯ್ಕೆ ಮಾಡಲಾದ ಹೊಸ ಎನ್.ಜಿ.ಹೆಚ್.ಎಂ ಲಾಂಛನ, ಭಾರತದ ಹಸಿರು ಪ್ರಯಾಣದಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಮತ್ತು ಈ ಮಿಷನ್ ಅನ್ನು ಮುಂದಕ್ಕೆ ಕೊಂಡೊಯ್ಯುವ ಸಾಮೂಹಿಕ ಮನೋಭಾವ ಮತ್ತು ಸೃಜನಶೀಲತೆಯನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್: ಜಾಗತಿಕ ಪರಿಹಾರ
2023 ರಲ್ಲಿ ₹19,744 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾದ ಎನ್.ಜಿ.ಹೆಚ್.ಎಂ ರಾಷ್ಟ್ರೀಯ ಕಾರ್ಯಕ್ರಮ ಮಾತ್ರವಲ್ಲದೆ, ಕಠಿಣವಾದ ವಲಯಗಳನ್ನು ಇಂಗಾಲ ಮುಕ್ತಗೊಳಿಸುವ ಜಾಗತಿಕ ಪರಿಹಾರವಾಗಿದೆ ಎಂದು ಸಚಿವರು ಹೇಳಿದರು. ಎನ್.ಜಿ.ಹೆಚ್.ಎಂ ನ ಆರಂಭವು ಭಾರತದ ಶುದ್ಧ ಇಂಧನ ಕ್ರಾಂತಿಯ ಹೊಸ ಹಂತವನ್ನು ಗುರುತಿಸಿದೆ. ಅಲ್ಲಿ ಹಸಿರು ಹೈಡ್ರೋಜನ್ ಅನ್ನು ಹೊಸ ನಾಗರಿಕತೆಯ ಇಂಧನವಾಗಿ ಮತ್ತು ದೀರ್ಘಾವಧಿಯ ಇಂಧನ ಸ್ವಾತಂತ್ರ್ಯದ ಕೀಲಿಯಾಗಿ ಇರಿಸಲಾಗಿದೆ ಎಂದು ಅವರು ಹೇಳಿದರು.
ಹಸಿರು ಹೈಡ್ರೋಜನ್ ಪರಿವರ್ತನೆಗಾಗಿ ಕಾರ್ಯತಂತ್ರದ ಕ್ರಮಗಳು (SIGHT) ಕಾರ್ಯಕ್ರಮದ ಅಡಿಯಲ್ಲಿ ತ್ವರಿತ ಪ್ರಗತಿಯನ್ನು ಎತ್ತಿ ತೋರಿಸಿದ ಸಚಿವರು, ವರ್ಷಕ್ಕೆ 3,000 ಮೆಗಾವ್ಯಾಟ್ ದೇಶೀಯ ಎಲೆಕ್ಟ್ರೋಲೈಜರ್ ಉತ್ಪಾದನೆ ಮತ್ತು ವರ್ಷಕ್ಕೆ 8.62 ಲಕ್ಷ ಮೆಟ್ರಿಕ್ ಟನ್ ಹಸಿರು ಹೈಡ್ರೋಜನ್ ಉತ್ಪಾದನೆಗೆ ಪ್ರೋತ್ಸಾಹ ಧನ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಭಾರತವು ಈಗ ವರ್ಷಕ್ಕೆ 7.24 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಗೆ ಪ್ರತಿ ಕೆಜಿಗೆ ₹49.75 ರಂತೆ ವಿಶ್ವದಲ್ಲೇ ಅತ್ಯಂತ ಕಡಿಮೆ ಹಸಿರು ಅಮೋನಿಯಾ ಬೆಲೆಯನ್ನು ದಾಖಲಿಸಿದೆ ಎಂದು ಅವರು ಹೇಳಿದರು.
ಇದಲ್ಲದೆ, ಹಸಿರು ಉಕ್ಕಿನ ಐದು ಪೈಲಟ್ ಯೋಜನೆಗಳಲ್ಲಿ ₹132 ಕೋಟಿ ಹೂಡಿಕೆ ಮಾಡಲಾಗಿದೆ, 37 ಹೈಡ್ರೋಜನ್ ಇಂಧನ ಚಾಲಿತ ವಾಹನಗಳು ಮತ್ತು ಒಂಬತ್ತು ಇಂಧನ ತುಂಬುವ ಕೇಂದ್ರಗಳಿಗೆ ₹208 ಕೋಟಿ ಅನುಮೋದನೆ ನೀಡಲಾಗಿದೆ ಮತ್ತು ವಿ.ಒ. ಚಿದಂಬರನಾರ್ ಬಂದರಿನಲ್ಲಿ ದೇಶದ ಮೊದಲ ಹೈಡ್ರೋಜನ್ ಬಂಕರಿಂಗ್ ಮತ್ತು ಇಂಧನ ತುಂಬುವ ಸೌಲಭ್ಯಕ್ಕಾಗಿ ₹35 ಕೋಟಿ ಒದಗಿಸಲಾಗಿದೆ ಎಂದು ಅವರು ಹೇಳಿದರು.
ಬಯೋಮಾಸ್ ಆಧಾರಿತ ಹೈಡ್ರೋಜನ್ ಪೈಲಟ್ ಯೋಜನೆಗಳ ₹100 ಕೋಟಿ ಪ್ರಸ್ತಾವನೆಗಳಿಗೆ ಆಹ್ವಾನ
ಹೊಸ ಉಪಕ್ರಮವನ್ನು ಪ್ರಕಟಿಸಿದ ಶ್ರೀ ಜೋಶಿ, ಸಚಿವಾಲಯವು ಹಸಿರು ಹೈಡ್ರೋಜನ್ ಉತ್ಪಾದನೆಗೆ ಬಯೋಮಾಸ್ ಮತ್ತು ತ್ಯಾಜ್ಯ ವಸ್ತುಗಳನ್ನು ಬಳಸುವ ಪೈಲಟ್ ಯೋಜನೆಗಳಿಗೆ ಪ್ರಸ್ತಾವನೆಗಳನ್ನು ಆಹ್ವಾನಿಸಲಿದೆ ಎಂದು ಹೇಳಿದರು. ಈ ಪೈಲಟ್ ಯೋಜನೆಗಳಿಗೆ ಒಟ್ಟು ₹100 ಕೋಟಿ ಹಂಚಿಕೆ ಮಾಡಲಾಗಿದೆ, ಈ ಮಿಷನ್ ಅಡಿಯಲ್ಲಿ ನವೋದ್ಯಮಗಳಿಗೆ ಈಗಾಗಲೇ ಅನುಮೋದಿಸಲಾದ ₹100 ಕೋಟಿಗಳ ಜೊತೆಗೆ. ಕೈಗಾರಿಕೆಗಳು, ನವೋದ್ಯಮಗಳು ಮತ್ತು ಸಂಶೋಧನಾ ಸಂಸ್ಥೆಗಳಿಂದ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಈ ಯೋಜನೆಯನ್ನು BIRAC (ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ಸಹಾಯ ಮಂಡಳಿ) ಮೂಲಕ ಜಾರಿಗೆ ತರಲಾಗುತ್ತದೆ ಎಂದು ಸಚಿವರು ಹೇಳಿದರು.
ಈ ಉಪಕ್ರಮವು ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಭಾರತದ ಹೈಡ್ರೋಜನ್ ಪರಿವರ್ತನೆಯನ್ನು ವೇಗಗೊಳಿಸುವ ಸಾಮರ್ಥ್ಯವಿರುವ ಹೊಸ, ವೆಚ್ಚ-ಪರಿಣಾಮಕಾರಿ ತಂತ್ರಜ್ಞಾನಗಳನ್ನು ಪ್ರದರ್ಶಿಸುತ್ತದೆ ಎಂದು ಅವರು ಹೇಳಿದರು.
ಕೌಶಲ್ಯಗಳು, ಮಾನದಂಡಗಳು ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಬಲಪಡಿಸುವುದು
ಭಾರತವು ತನ್ನ ಸಂಪೂರ್ಣ ಹಸಿರು ಹೈಡ್ರೋಜನ್ ಉತ್ಪಾದನೆಯನ್ನು ನವೀಕರಿಸಬಹುದಾದ ಇಂಧನದ ಮೂಲಕ ಶಕ್ತಗೊಳಿಸಲು ಕೆಲಸ ಮಾಡುತ್ತಿದೆ ಎಂದು ಸಚಿವರು ಒತ್ತಿ ಹೇಳಿದರು. 43 ಹೈಡ್ರೋಜನ್-ಸಂಬಂಧಿತ ಕೌಶಲ್ಯ ಅರ್ಹತೆಗಳನ್ನು ಅನುಮೋದಿಸಲಾಗಿದೆ, 6,300 ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳನ್ನು ಪ್ರಮಾಣೀಕರಿಸಲಾಗಿದೆ ಮತ್ತು ಗ್ರೀನ್ ಹೈಡ್ರೋಜನ್ ಸ್ಟ್ಯಾಂಡರ್ಡ್ (2023) ಮತ್ತು ಪ್ರಮಾಣೀಕರಣ ಯೋಜನೆ (2025) ನಂತಹ ದೃಢವಾದ ಚೌಕಟ್ಟುಗಳು 128 ತಾಂತ್ರಿಕ ಮಾನದಂಡಗಳೊಂದಿಗೆ ಜಾರಿಯಲ್ಲಿವೆ ಎಂದು ಅವರು ಹೇಳಿದರು.
ಜಾಗತಿಕ ಆರ್ಥಿಕತೆಗಳು ಇಂಗಾಲದ ಮಿತಿ ಹೊಂದಾಣಿಕೆಗಳನ್ನು ಅಳವಡಿಸಿಕೊಳ್ಳುತ್ತಿರುವುದರಿಂದ, ಹಸಿರು ಹೈಡ್ರೋಜನ್ ಈಗ ಆಯ್ಕೆಗಿಂತ ಆರ್ಥಿಕ ಅಗತ್ಯವಾಗಿದೆ ಎಂದು ಸಚಿವರು ಹೇಳಿದರು. ಭಾರತವು ತನ್ನ ಬೆಳವಣಿಗೆಯು ಸ್ಪರ್ಧಾತ್ಮಕ ಮತ್ತು ಹವಾಮಾನ-ನಿರೋಧಕವಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಶುದ್ಧ ಮೌಲ್ಯ ಸರಪಳಿಗಳಲ್ಲಿ ನಾಯಕನಾಗಲು ಉತ್ತಮ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.
ಹಸಿರು ಹೈಡ್ರೋಜನ್ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವು ಸ್ವಚ್ಛ, ಉಜ್ವಲ ಮತ್ತು ಹೆಚ್ಚು ಸುಸ್ಥಿರ ಭವಿಷ್ಯವನ್ನು ನಿರ್ಮಿಸುವ ಒಂದೇ ಗುರಿಯನ್ನು ಹೊಂದಿರುವ ವಿಜ್ಞಾನಿಗಳು, ಉದ್ಯಮ ಮುಖಂಡರು, ನಾವೀನ್ಯಕಾರರು ಮತ್ತು ನೀತಿ ನಿರೂಪಕರ ಜಾಗತಿಕ ಸಭೆಯನ್ನು ಪ್ರತಿನಿಧಿಸುತ್ತದೆ ಎಂದು ಶ್ರೀ ಜೋಶಿ ಹೇಳಿದರು. "ಐಸಿಜಿಎಚ್-2025 ಒಂದು ಸಮ್ಮೇಳನಕ್ಕಿಂತ ಹೆಚ್ಚಿನದಾಗಿದೆ; ಇದು ಜಾಗತಿಕ ಸಹಯೋಗ ಮತ್ತು ಸಾಮೂಹಿಕ ಕ್ರಮಗಳಿಗೆ ಒಂದು ವೇದಿಕೆಯಾಗಿದೆ. ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ನ ಗುರಿಗಳನ್ನು ಸಾಧಿಸುವತ್ತ ನಾವು ಸಾಗುತ್ತಿರುವಾಗ, ಎಲ್ಲರಿಗೂ ಸುಸ್ಥಿರ ಅಭಿವೃದ್ಧಿಗೆ ಶಕ್ತಿ ನೀಡುವ ಸ್ಥಿತಿಸ್ಥಾಪಕ ಮತ್ತು ಸಮಗ್ರ ಹಸಿರು ಹೈಡ್ರೋಜನ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಭಾರತವು ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಒಟ್ಟಾಗಿ ಕೆಲಸ ಮಾಡಲು ಸಿದ್ಧವಾಗಿದೆ" ಎಂದು ಅವರು ಹೇಳಿದರು.
ಹಸಿರು ಹೈಡ್ರೋಜನ್ ಉತ್ಪಾದನೆ ಮತ್ತು ರಫ್ತಿನಲ್ಲಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮಲು ಸಜ್ಜಾಗಿದೆ
ಈ ಸಂದರ್ಭದಲ್ಲಿ ಮಾತನಾಡಿದ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ. ಅಜಯ್ ಕೆ. ಸೂದ್, ನಮ್ಮ ಕಾಲದ ಅತ್ಯಂತ ಪರಿಣಾಮಕಾರಿ ಇಂಧನ ಪರಿವರ್ತನೆಗಳಲ್ಲಿ ಒಂದಾದ ದೇಶದ ವೈಜ್ಞಾನಿಕ ನಿರ್ದೇಶನ ಮತ್ತು ನೀತಿ ದೃಷ್ಟಿಕೋನವನ್ನು ಜೋಡಿಸಲು ಅಂತರರಾಷ್ಟ್ರೀಯ ಹಸಿರು ಹೈಡ್ರೋಜನ್ ಸಮ್ಮೇಳನವು ಒಂದು ಪ್ರಮುಖ ವೇದಿಕೆಯಾಗಿದೆ ಎಂದು ಹೇಳಿದರು. ಆರ್ಥಿಕ ಸ್ಪರ್ಧಾತ್ಮಕತೆ ಮತ್ತು ತಾಂತ್ರಿಕ ನಾಯಕತ್ವದಿಂದ ಜಾಗತಿಕವಾಗಿ ಹಸಿರು ಇಂಧನದ ಬೇಡಿಕೆ ಹೆಚ್ಚಾಗಿದ್ದು, ಹಸಿರು ಹೈಡ್ರೋಜನ್ ಈ ಎರಡು ಶಕ್ತಿಗಳ ಸಂಗಮ ಸ್ಥಳದಲ್ಲಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ನಾಲ್ಕು ಪ್ರಮುಖ ಸ್ತಂಭಗಳಾದ ನೀತಿ, ಬೇಡಿಕೆ ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಮೂಲಸೌಕರ್ಯವನ್ನು ಸಕ್ರಿಯಗೊಳಿಸುವಲ್ಲಿ ಸ್ಥಿರವಾದ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಪ್ರೊ. ಸೂದ್ ಹೇಳಿದರು. ಇತರ ಹಲವಾರು ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ಹಸಿರು ಹೈಡ್ರೋಜನ್ ಉತ್ಪಾದಿಸುವಲ್ಲಿ ವಿಶಿಷ್ಟವಾದ ಕಡಿಮೆ-ವೆಚ್ಚದ ಪ್ರಯೋಜನವನ್ನು ಹೊಂದಿದೆ, ಇದು ಯುರೋಪಿಯನ್ ಒಕ್ಕೂಟ, ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ಮಾರುಕಟ್ಟೆಗಳಿಗೆ ಪ್ರಮುಖ ರಫ್ತುದಾರನಾಗಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.
ಹೊಸ ಮತ್ತು ನವೀಕರಿಸಬಹುದಾದ ಇಂಧನ ಕಾರ್ಯದರ್ಶಿಯವರು ವ್ಯಾಪಕವಾದ ಶುದ್ಧ ಇಂಧನ ಪ್ರಗತಿಯನ್ನು ಎತ್ತಿ ತೋರಿಸಿದರು
ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಸಾರಂಗಿ, ಐಸಿಜಿಎಚ್ ನೀತಿ ಸಂವಾದ ಮತ್ತು ನಾವೀನ್ಯತೆಗಾಗಿ ಪ್ರಮುಖ ಜಾಗತಿಕ ವೇದಿಕೆಯಾಗಿ ವಿಕಸನಗೊಂಡಿದೆ ಎಂದು ಹೇಳಿದರು. ಭಾರತದ ಪಳೆಯುಳಿಕೆಯೇತರ ಸ್ಥಾಪಿತ ಸಾಮರ್ಥ್ಯವು ಈಗ 250 ಗಿಗಾವ್ಯಾಟ್ ಮೀರಿದೆ ಎಂದು ಅವರು ಹೇಳಿದರು. ಇದರಲ್ಲಿ ಸರಿಸುಮಾರು 130 ಗಿಗಾವ್ಯಾಟ್ ಸೌರಶಕ್ತಿ, 50 ಗಿಗಾವ್ಯಾಟ್ ಗಿಂತ ಹೆಚ್ಚು ಪವನ ಶಕ್ತಿ ಮತ್ತು 17 ಗಿಗಾವ್ಯಾಟ್ ಜೈವಿಕ ಶಕ್ತಿ ಮತ್ತು ಕಿರು ಜಲವಿದ್ಯುತ್ ಸೇರಿವೆ. ಪ್ರಧಾನಮಂತ್ರಿಯವರ "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಎಂಬ ದೃಷ್ಟಿಕೋನದಿಂದ ಪ್ರೇರಿತರಾಗಿ, ಭಾರತವು 2030 ರ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸಾಧಿಸುವ ಹಾದಿಯಲ್ಲಿದೆ ಎಂದು ಅವರು ಹೇಳಿದರು.

ಈ ಮಿಷನ್ ₹8 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆಗಳನ್ನು ಆಕರ್ಷಿಸುವ, ಆರು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಪಳೆಯುಳಿಕೆ ಇಂಧನ ಆಮದುಗಳಲ್ಲಿ ವಾರ್ಷಿಕವಾಗಿ ₹1 ಲಕ್ಷ ಕೋಟಿ ಉಳಿಸುವ ನಿರೀಕ್ಷೆಯಿದೆ ಎಂದು ಕಾರ್ಯದರ್ಶಿಯವರು ಹೇಳಿದರು. ಸಾರಿಗೆ, ಉಕ್ಕು ಮತ್ತು ಹಡಗು ವಲಯಗಳಲ್ಲಿ ನಡೆಯುತ್ತಿರುವ ಪೈಲಟ್ ಯೋಜನೆಗಳು, ಹಸಿರು ಹೈಡ್ರೋಜನ್ ಪ್ರಮಾಣೀಕರಣ ಯೋಜನೆಯ ಪ್ರಾರಂಭ ಮತ್ತು ಪ್ರಾದೇಶಿಕ ಸಂಶೋಧನೆ ಮತ್ತು ಉತ್ಪಾದನಾ ಪರಿಸರ ವ್ಯವಸ್ಥೆಗಳನ್ನು ಉತ್ತೇಜಿಸಲು ಜೋಧಪುರ, ಪುಣೆ, ಭುವನೇಶ್ವರ ಮತ್ತು ಕೇರಳದಲ್ಲಿ ನಾಲ್ಕು ಹೈಡ್ರೋಜನ್ ವ್ಯಾಲಿ ನಾವೀನ್ಯತೆ ಕ್ಲಸ್ಟರ್ ಗಳ ಸ್ಥಾಪನೆಯನ್ನು ಅವರು ಎತ್ತಿ ತೋರಿಸಿದರು. ಭಾರತವು ಹಸಿರು ಹೈಡ್ರೋಜನ್ ಮಿಷನ್ ನ ಈ ಹೊಸ ಹಂತವನ್ನು ಪ್ರವೇಶಿಸುತ್ತಿದ್ದಂತೆ, ನಮ್ಮ ಗಮನವು ಆಳವಾದ ಕೈಗಾರಿಕಾ ಇಂಗಾಲ ಮುಕ್ತಗೊಳಿಸುವಿಕೆ, ತಂತ್ರಜ್ಞಾನ ಪಾಲುದಾರಿಕೆಗಳು ಮತ್ತು ಜಾಗತಿಕ ಪೂರೈಕೆ ಸರಪಳಿ ಏಕೀಕರಣದ ಮೇಲೆ ಇರುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹೈಡ್ರೋಜನ್ ಯುರೋಪ್ ನ ಸಿಇಒ ಜೋರ್ಗೊ ಚಾಟ್ಜಿಮಾರ್ಕಕಿಸ್ ಮತ್ತು ಎಸ್ ಇ ಸಿ ಐ ವ್ಯವಸ್ಥಾಪಕ ನಿರ್ದೇಶಕ ಶ್ರೀ ಆಕಾಶ್ ತ್ರಿಪಾಠಿ ಉಪಸ್ಥಿತರಿದ್ದರು.
ಎನ್.ಜಿ.ಹೆಚ್.ಎಂ ಲಾಂಛನದ ಬಗ್ಗೆ
ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ (ಎನ್.ಜಿ.ಹೆಚ್.ಎಂ) ಲಾಂಛನವು ಭಾರತದ ಸುಸ್ಥಿರ ಮತ್ತು ಶುದ್ಧ ಇಂಧನಕ್ಕೆ ಬದ್ಧತೆಯನ್ನು ಸಂಕೇತಿಸುತ್ತದೆ. ಇದರ ವಿನ್ಯಾಸವು ಎಲೆ ಮತ್ತು ನೀರಿನ ಹನಿಯ ಸಂಯೋಜನೆಯನ್ನು ಚಿತ್ರಿಸುತ್ತದೆ, ಇದು ಪ್ರಕೃತಿ, ಶುದ್ಧತೆ ಮತ್ತು ಹೈಡ್ರೋಜನ್ ಶಕ್ತಿಯ ಪರಿಸರ ಸ್ನೇಹಿ ಸಾರವನ್ನು ಪ್ರತಿನಿಧಿಸುತ್ತದೆ.

ಉದಯಿಸುತ್ತಿರುವ ಸೂರ್ಯ ಹೈಡ್ರೋಜನ್ ಉತ್ಪಾದನೆಯಲ್ಲಿ ಪ್ರಮುಖ ಪ್ರೇರಕ ಶಕ್ತಿಯಾಗಿರುವ ಸೌರಶಕ್ತಿಯಂತಹ ನವೀಕರಿಸಬಹುದಾದ ಇಂಧನ ಮೂಲಗಳನ್ನು ಸಂಕೇತಿಸುತ್ತದೆ, ಹಾಗೆಯೇ ಅರ್ಧವೃತ್ತಾಕಾರದ ಉಂಗುರವು ಹೈಡ್ರೋಜನ್ ಮತ್ತು ಎಲೆಕ್ಟ್ರಾನ್ ಗಳ ಕಕ್ಷೆಯನ್ನು ಪ್ರತಿನಿಧಿಸುತ್ತದೆ. ಹಸಿರು ಕ್ಷೇತ್ರವು ಬೆಳವಣಿಗೆ, ಸಾಮರಸ್ಯ ಮತ್ತು ಭಾರತದ ಕೃಷಿ-ಪರಿಸರ ಸಮತೋಲನವನ್ನು ಸಂಕೇತಿಸುತ್ತದೆ ಮತ್ತು ಮಧ್ಯದಲ್ಲಿರುವ ಹೈಡ್ರೋಜನ್ ಎಲೆಕ್ಟ್ರಾನ್ ವೈಜ್ಞಾನಿಕ ನಾವೀನ್ಯತೆ ಮತ್ತು ಶುದ್ಧ ಇಂಧನ ಕ್ರಾಂತಿಯನ್ನು ಸಂಕೇತಿಸುತ್ತದೆ. ಒಟ್ಟಾರೆ ಈ ರಚನೆಯು ತಂತ್ರಜ್ಞಾನ-ಚಾಲಿತ ಸುಸ್ಥಿರತೆ ಮತ್ತು ನವೀಕರಿಸಬಹುದಾದ ಹೈಡ್ರೋಜನ್ ಶಕ್ತಿಯ ಮೂಲಕ ಭಾರತದ ಹಸಿರು ಭವಿಷ್ಯದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.
2025ರ ಹಸಿರು ಹೈಡ್ರೋಜನ್ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ ಕುರಿತು
ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂ.ಎನ್.ಆರ್.ಇ), ನವೆಂಬರ್ 11-12, 2025 ರಂದು ನವದೆಹಲಿಯ ಭಾರತ ಮಂಟಪದಲ್ಲಿ ಹಸಿರು ಹೈಡ್ರೋಜನ್ ಕುರಿತ 3 ನೇ ಅಂತರರಾಷ್ಟ್ರೀಯ ಸಮ್ಮೇಳನವನ್ನು (ಐ.ಸಿ.ಜಿ.ಹೆಚ್-2025) ಆಯೋಜಿದೆ. ಈ ಎರಡು ದಿನಗಳ ಕಾರ್ಯಕ್ರಮವು ಜಾಗತಿಕ ನೀತಿ ನಿರೂಪಕರು, ವಿಜ್ಞಾನಿಗಳು, ಉದ್ಯಮ ಮುಖಂಡರು ಮತ್ತು ನಾವೀನ್ಯಕಾರರನ್ನು ಒಟ್ಟುಗೂಡಿಸಿ ಹಸಿರು ಹೈಡ್ರೋಜನ್ ಮೌಲ್ಯ ಸರಪಳಿಯಾದ್ಯಂತ ಅತ್ಯಾಧುನಿಕ ಸಂಶೋಧನೆ, ನೀತಿ ಚೌಕಟ್ಟುಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಬಗ್ಗೆ ಚರ್ಚೆ ನಡೆಸುತ್ತದೆ.
ಉದ್ಘಾಟನಾ ಅಧಿವೇಶನದ ನಂತರ, ಎರಡು ಸಮಗ್ರ ಅಧಿವೇಶನಗಳು ಹಸಿರು ಹೈಡ್ರೋಜನ್ ವಲಯವನ್ನು ಮುನ್ನಡೆಸುವ ಕುರಿತು ಉನ್ನತ ಮಟ್ಟದ ಚರ್ಚೆಗಳಿಗೆ ವೇದಿಕೆಯನ್ನು ಸಿದ್ಧಪಡಿಸಿದವು. ಸಮ್ಮೇಳನವು ಹಸಿರು ಹೈಡ್ರೋಜನ್ ಮೌಲ್ಯ ಸರಪಳಿಯಾದ್ಯಂತ ಸಂವಾದ, ನಾವೀನ್ಯತೆ ಮತ್ತು ಸಹಯೋಗವನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾದ ಸಮಗ್ರ ಮತ್ತು ಮಹತ್ವದ ಅಧಿವೇಶನಗಳ ಸರಣಿಯನ್ನು ಒಳಗೊಂಡಿರುತ್ತದೆ. ಈ ಸಮಗ್ರ ಅಧಿವೇಶನಗಳು ಹಿರಿಯ ಸರ್ಕಾರಿ ಅಧಿಕಾರಿಗಳು, ಜಾಗತಿಕ ಉದ್ಯಮ ನಾಯಕರು ಮತ್ತು ತಜ್ಞರನ್ನು ಒಟ್ಟುಗೂಡಿಸಿ ನೀತಿ ಚೌಕಟ್ಟುಗಳು, ತಾಂತ್ರಿಕ ಪ್ರಗತಿಗಳು ಮತ್ತು ಹಸಿರು ಹೈಡ್ರೋಜನ್ ನ ಭವಿಷ್ಯವನ್ನು ರೂಪಿಸುವ ಅಂತರರಾಷ್ಟ್ರೀಯ ಪಾಲುದಾರಿಕೆಗಳನ್ನು ಚರ್ಚಿಸುತ್ತವೆ. ಇದರೊಂದಿಗೆ, ಮಹತ್ವದ ಗೋಷ್ಠಿಗಳು ಪ್ರಮುಖ ವಿಷಯಗಳ ಕುರಿತು ಕೇಂದ್ರೀಕೃತ ಚರ್ಚೆಗಳನ್ನು ಒದಗಿಸುತ್ತವೆ ಮತ್ತು ಭಾರತದ ಹಸಿರು ಹೈಡ್ರೋಜನ್ ಪರಿವರ್ತನೆಯನ್ನು ವೇಗಗೊಳಿಸಲು ಪರಿಹಾರಗಳು ಮತ್ತು ತಂತ್ರಗಳನ್ನು ಅನ್ವೇಷಿಸಲು ಭಾಗವಹಿಸುವವರಿಗೆ ಅವಕಾಶವನ್ನು ನೀಡುತ್ತವೆ.
****
(Release ID: 2188945)
Visitor Counter : 16