PIB Headquarters
ಡಿಜಿಟಲ್ ಭಾರತದಲ್ಲಿ ಸೈಬರ್ ವಂಚನೆಗಳನ್ನು ನಿಯಂತ್ರಿಸುವುದು
Posted On:
08 OCT 2025 12:10PM by PIB Bengaluru
|
“ಸೈಬರ್ ಸುರಕ್ಷತೆ ನಮ್ಮ ರಾಷ್ಟ್ರೀಯ ಸುರಕ್ಷತೆಯ ಅವಿಭಾಜ್ಯ ಅಂಗವಾಗುವ ಡಿಜಿಟಲ್ ಭಾರತದ ಕನಸು ನನ್ನದು”
-ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
|
|
ಪ್ರಮುಖ ಮಾರ್ಗಸೂಚಿಗಳು
- ಈಗ ಶೇ. 86ಕ್ಕಿಂತ ಹೆಚ್ಚು ಮನೆಗಳು ಇಂಟರ್ನೆಟ್‌ಗೆ ಸಂಪರ್ಕಗೊಂಡಿವೆ.
- ಭಾರತದಲ್ಲಿ ಸೈಬರ್ ಭದ್ರತಾ ಘಟನೆಗಳು 2022ರಲ್ಲಿ 10.29 ಲಕ್ಷದಿಂದ 2024ರಲ್ಲಿ 22.68 ಲಕ್ಷಕ್ಕೆ ಏರಿವೆ.
- ಕೇಂದ್ರ ಬಜೆಟ್ 2025-2026 ರಲ್ಲಿ ಸೈಬರ್ ಭದ್ರತಾ ಯೋಜನೆಗಳಿಗಾಗಿ ₹782 ಕೋಟಿ ಮೀಸಲಿಡಲಾಗಿದೆ.
- ಸೈಬರ್ ವಂಚನೆಗಳಿಗೆ ಸಂಬಂಧಿಸಿದ 9.42 ಲಕ್ಷಕ್ಕೂ ಹೆಚ್ಚು ಸಿಮ್ ಕಾರ್ಡ್ಗಳನ್ನು ಮತ್ತು 2,63,348 ಐಎಂಇಐಗಳನ್ನು ನಿರ್ಬಂಧಿಸಲಾಗಿದೆ.
- ಸಹಾಯವಾಣಿ ಸಂಖ್ಯೆ 1930 ತ್ವರಿತ ಸೈಬರ್ ಭದ್ರತಾ ನೆರವು ನೀಡುತ್ತದೆ.
|
ಪರಿಚಯ
ಭಾರತದ ಸೈಬರ್‌ಸ್ಪೇಸ್ ಹಿಂದೆಂದಿಗಿಂತಲೂ ಹೆಚ್ಚು ಚಟುವಟಿಕೆಯಿಂದ ಕೂಡಿದ್ದು, ಪ್ರತಿದಿನ ಕೋಟ್ಯಂತರ ವ್ಯವಹಾರ ಮತ್ತು ಸಂವಹನಗಳನ್ನು ನಿರ್ವಹಿಸುತ್ತಿದೆ. ಡಿಜಿಟಲ್ ಇಂಡಿಯಾ ಉಪಕ್ರಮದಡಿ ಗಮನಾರ್ಹ ಪ್ರಗತಿಯನ್ನು ಪ್ರತಿಬಿಂಬಿಸುವಂತೆ, ಈಗ ಶೇ. 86ಕ್ಕಿಂತ ಹೆಚ್ಚು ಮನೆಗಳು ಇಂಟರ್ನೆಟ್‌ಗೆ ಸಂಪರ್ಕಗೊಂಡಿವೆ. ವಿಸ್ತರಿಸುತ್ತಿರುವ ಈ ಡಿಜಿಟಲ್ ಭೂದೃಶ್ಯವು ನಾಗರಿಕರಿಗೆ ಡಿಜಿಟಲ್ ಸೇವೆಗಳನ್ನು ತಮ್ಮ ಬೆರಳ ತುದಿಯಲ್ಲೇ ಪ್ರವೇಶಿಸಲು ಅನುವು ಮಾಡಿಕೊಟ್ಟಿದೆ. ಆದರೆ, ಇದೇ ಸಮಯದಲ್ಲಿ ಇದು ಸೈಬರ್ ವಂಚನೆಗಳಿಗೆ ದಾಳಿಯ ಮೇಲ್ಮೈಯನ್ನು ಸಹ ವಿಸ್ತರಿಸಿದ್ದು, ಸೈಬರ್ ಭದ್ರತೆಯನ್ನು ರಾಷ್ಟ್ರೀಯ ಆದ್ಯತೆಯನ್ನಾಗಿ ಮಾಡಿದೆ.
ಸೈಬರ್ ವಂಚನೆಗಳು ಎಂದರೆ ಅನಧಿಕೃತ ಪ್ರವೇಶ, ದತ್ತಾಂಶ ಕಳ್ಳತನ ಅಥವಾ ಆನ್‌ಲೈನ್ ವಂಚನೆಗಳಂತಹ ಡಿಜಿಟಲ್ ವೇದಿಕೆಗಳ ಮೂಲಕ ನಡೆಸಲಾಗುವ ವಂಚನೆ ಚಟುವಟಿಕೆಗಳು. ಇವು ಸಾಮಾನ್ಯವಾಗಿ ಸಂತ್ರಸ್ತರಿಗೆ ಆರ್ಥಿಕ ನಷ್ಟ ಉಂಟು ಮಾಡುವ ಉದ್ದೇಶ ಹೊಂದಿರುತ್ತದೆ.
ಸೈಬರ್ ಭದ್ರತಾ ಘಟನೆಗಳು 2022ರಲ್ಲಿ 10.29 ಲಕ್ಷದಿಂದ 2024ರಲ್ಲಿ 22.68 ಲಕ್ಷಕ್ಕೆ ಏರಿರುವುದು, ಭಾರತದಲ್ಲಿ ಡಿಜಿಟಲ್ ಬೆದರಿಕೆಗಳ ಹೆಚ್ಚುತ್ತಿರುವ ಪ್ರಮಾಣ ಮತ್ತು ಸಂಕೀರ್ಣತೆಯನ್ನು ಪ್ರತಿಬಿಂಬಿಸುತ್ತದೆ. ಅದೇ ಸಮಯದಲ್ಲಿ, ಆರ್ಥಿಕ ನಷ್ಟವೂ ಹೆಚ್ಚು ಸ್ಪಷ್ಟವಾಗುತ್ತಿದೆ. ಫೆಬ್ರವರಿ 28, 2025ರ ಹೊತ್ತಿಗೆ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್‍ನಲ್ಲಿ ವರದಿಯಾದ ಸೈಬರ್ ವಂಚನೆಗಳ ಪ್ರಮಾಣವು ₹36.45 ಲಕ್ಷಕ್ಕೆ ತಲುಪಿದೆ.ಈ ಅಂಕಿ-ಅಂಶಗಳು ಹೆಚ್ಚುತ್ತಿರುವ ಸವಾಲುಗಳನ್ನು ಸೂಚಿಸುತ್ತವೆಯಾದರೂ, ದೇಶದ ಪತ್ತೆಹಚ್ಚುವಿಕೆ ಮತ್ತು ವರದಿ ಮಾಡುವ ಕಾರ್ಯವಿಧಾನಗಳಲ್ಲಿ ಆಗಿರುವ ಗಮನಾರ್ಹ ಪ್ರಗತಿಯನ್ನು ಅವು ಉಲ್ಲೇಖಿಸುತ್ತವೆ.

ಸೈಬರ್ ವಂಚನೆ ಮಾದರಿ ಪತ್ತೆಹಚ್ಚುವುದು
ಸೈಬರ್ ವಂಚನೆಗಳು ಈ ವಿಕಸನಗೊಳ್ಳುತ್ತಿರುವ ಭೂದೃಶ್ಯವು, ವಂಚನೆಗಳು ಒಂದೇ ವಿಧಾನಕ್ಕೆ ಸೀಮಿತವಾಗಿಲ್ಲ, ಬದಲಿಗೆ ಹೊಸ ತಂತ್ರಜ್ಞಾನಗಳು ಮತ್ತು ಬಳಕೆದಾರರ ವರ್ತನೆಗೆ ಹೊಂದಿಕೊಂಡು ವಿವಿಧ ಸ್ವರೂಪ ಪಡೆಯುತ್ತಿವೆ ಎಂಬುದನ್ನು ಉಲ್ಲೇಖಿಸುತ್ತದೆ. ಇಂತಹ ಮಾದರಿಗಳನ್ನು ಗುರುತಿಸುವುದು ತಡೆಗಟ್ಟುವ ಕ್ರಮ ಜಾರಿಗೊಳಿಸಲು ಅತ್ಯಂತ ನಿರ್ಣಾಯಕವಾಗಿದೆ. ವಿಶ್ವದಾದ್ಯಂತ ಆಗುತ್ತಿರುವ ಆಘಾತಕಾರಿ ಆರ್ಥಿಕ ಪರಿಣಾಮವು, ವಂಚಕರು ಜಾಗತಿಕವಾಗಿ ತಲುಪುವ ಸಾಮರ್ಥ್ಯ ಮತ್ತು ಸಂಘಟಿತ ಅಪರಾಧಗಳ ಒಳಗೊಳ್ಳುವಿಕೆಯನ್ನು ಉಲ್ಲೇಖಿಸುತ್ತದೆ. ಇವು ಸಾಮಾನ್ಯವಾಗಿ ಆಗ್ನೇಯ ಏಷ್ಯಾದಲ್ಲಿನ ವಂಚನಾ ಘಟಕಗಳಿಗೆ ಸಂಬಂಧಿಸಿರುತ್ತವೆ.

ಹೆಚ್ಚುತ್ತಿರುವ ಸೈಬರ್ ಬೆದರಿಕೆಗಳು
- ವಂಚಕರು ವಿಶ್ವಾಸಾರ್ಹ ಮೂಲಗಳಂತೆ ನಟಿಸುವ ಸ್ಪೂಫಿಂಗ್ ನಂತಹ ತಂತ್ರಗಳು ಅನೇಕ ವಂಚನಾ ವರದಿಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಅದೇ ರೀತಿ, ಕೃತಕ ಬುದ್ಧಿಮತ್ತೆ ಬಳಸಿ ಡೀಪ್ಫೇಕ್ಗಳ ಪ್ರಕರಣಗಳು ಮತ್ತು ಫಿಶಿಂಗ್, ಇಲ್ಲಿ ವ್ಯಕ್ತಿಗಳನ್ನು ಮೋಸಗೊಳಿಸುವ ಇಮೇಲ್‌ಗಳು ಅಥವಾ ಸಂದೇಶಗಳ ಮೂಲಕ ಸೂಕ್ಷ್ಮ ಮಾಹಿತಿ ಬಹಿರಂಗಪಡಿಸಲು ಪ್ರಚೋದಿಸಲಾಗುತ್ತದೆ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಒಟ್ಟಾರೆ ವಂಚನೆಗಳ ಪರಿಣಾಮ ಹೆಚ್ಚಿಸುತ್ತಿದೆ.
- ಭಾರತದ ಅತ್ಯಂತ ಆದ್ಯತೆಯ ಡಿಜಿಟಲ್ ಪಾವತಿ ವಿಧಾನವಾದ ಏಕೀಕೃತ ಪಾವತಿಗಳ ಇಂಟರ್ಫೇಸ್ (ಯುಪಿಐ) ಅನ್ನು ಸಹ ವಂಚಕರು ದುರ್ಬಳಕೆಯಾದ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ಗುರಿಯಾಗಿಸಿದ್ದಾರೆ. ಈ ಸಮಸ್ಯೆ ನಿಭಾಯಿಸಲು, ದೂರಸಂಪರ್ಕ ಇಲಾಖೆಯು ಫೈನಾನ್ಷಿಯಲ್ ಫ್ರಾಡ್ ರಿಸ್ಕ್ ಇಂಡಿಕೇಟರ್ ಅನ್ನು ಪ್ರಾರಂಭಿಸಿದೆ. ಇದು ಅನುಮಾನಾಸ್ಪದ ಸಂಖ್ಯೆಗಳನ್ನು ಮಧ್ಯಮ, ಹೆಚ್ಚು ಅಥವಾ ಅತಿ ಹೆಚ್ಚು ಅಪಾಯಕಾರಿ ಎಂದು ವರ್ಗೀಕರಿಸುತ್ತದೆ
- ಕಾನೂನುಬಾಹಿರ ಡಿಜಿಟಲ್ ವ್ಯವಹಾರಗಳು ಆನ್ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ಗಳ ರೂಪದಲ್ಲಿ ಸಹ ಹೊರಹೊಮ್ಮಿವೆ. ಇವು ದೊಡ್ಡ ಮೊತ್ತದ ಆದಾಯದ ಸುಳ್ಳು ಭರವಸೆಗಳೊಂದಿಗೆ ಆಟಗಳನ್ನು ಆಡಲು, ಬಳಕೆದಾರರನ್ನು ತಮ್ಮ ಆನ್‌ಲೈನ್ ವಾಲೆಟ್‌ಗಳಲ್ಲಿ ಹಣವನ್ನು ಠೇವಣಿ ಮಾಡಲು ಪ್ರಚೋದಿಸಿ, ₹ 400 ಕೋಟಿಗೂ ಹೆಚ್ಚು ಕ್ರಿಮಿನಲ್ ಆದಾಯ ಗಳಿಸಿವೆ.
|
ಸೈಬರ್ ವಂಚನೆಗಳ ವಿರುದ್ಧ ಭಾರತದ ಹೋರಾಟ ಬಲಪಡಿಸುವ ನಿಟ್ಟಿನಲ್ಲಿ, ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಆಗಸ್ಟ್ 21, 2025 ರಂದು ಅಂಗೀಕರಿಸಲಾಯಿತು. ಈ ಶಾಸನವನ್ನು ಇ-ಸ್ಪೋರ್ಟ್ಸ್ ಮತ್ತು ಸಾಮಾಜಿಕ ಆನ್‌ಲೈನ್ ಗೇಮ್‌ಗಳನ್ನು ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾಗಿದೆ, ಆದರೆ ಅದೇ ಸಮಯದಲ್ಲಿ ಆನ್‌ಲೈನ್ ಹಣದ ಗೇಮಿಂಗ್‌ಗಳ ಮೇಲೆ, ಅವುಗಳ ಪ್ರಚಾರ, ಜಾಹೀರಾತುಗಳು ಮತ್ತು ಹಣಕಾಸಿನ ವ್ಯವಹಾರಗಳೂ ಸೇರಿದಂತೆ, ಸಂಪೂರ್ಣ ನಿಷೇಧ ಹೇರಲಾಗಿದೆ
|
ಭಾರತದ ಸೈಬರ್ ಭದ್ರತಾ ಚೌಕಟ್ಟು
ತನ್ನ ವಿಶಾಲವಾದ ಆನ್‌ಲೈನ್ ಸಮುದಾಯವನ್ನು ಸುರಕ್ಷಿತವಾಗಿರಿಸುವ ಗುರಿಯೊಂದಿಗೆ ಭಾರತ ಸರ್ಕಾರವು ಬಲಿಷ್ಠ ರಕ್ಷಣಾ ಕಾರ್ಯವಿಧಾನಗಳನ್ನು ಜಾರಿಗೆ ತಂದಿದೆ. ಭಾರತೀಯರು ವ್ಯಾಪಾರ ವಹಿವಾಟುಗಳು, ಶಿಕ್ಷಣ, ಹಣಕಾಸು ಚಟುವಟಿಕೆಗಳು ಮತ್ತು ಸರ್ಕಾರಿ ಸೇವೆಗಳನ್ನು ಡಿಜಿಟಲ್ ಆಗಿ ಪ್ರವೇಶಿಸುವಂತಹ ಅಗತ್ಯಗಳಿಗಾಗಿ ಇಂಟರ್ನೆಟ್ ಅನ್ನು ತಮ್ಮ ದೈನಂದಿನ ಜೀವನದಲ್ಲಿ ಹೆಚ್ಚೆಚ್ಚು ಅಳವಡಿಸಿಕೊಳ್ಳುತ್ತಿದ್ದಾರೆ. ಸೈಬರ್ ಅಪರಾಧ ತನಿಖೆಯ ಅಗತ್ಯ ಕೌಶಲ್ಯಗಳೊಂದಿಗೆ ಮುಂಚೂಣಿ ಸಿಬ್ಬಂದಿ ಸಜ್ಜುಗೊಳಿಸಲು, ಈಗ 1,05,796 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಸೈಟ್ರೇನ್ ಪೋರ್ಟಲ್'ನಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ ಮತ್ತು 82,704ಕ್ಕೂ ಹೆಚ್ಚು ಪ್ರಮಾಣಪತ್ರಗಳನ್ನು ನೀಡಲಾಗಿದೆ.
ಸೈಬರ್ ಜಾಗವನ್ನು ಭದ್ರಪಡಿಸುವ ಸೈಬರ್ ಕಾನೂನುಗಳು
ಸುರಕ್ಷಿತ ಡಿಜಿಟಲ್ ಪರಿಸರದ ನಿರ್ಣಾಯಕ ಮಹತ್ವವನ್ನು ಅರಿತುಕೊಂಡು, ಭಾರತದ ಸೈಬರ್ ಸುರಕ್ಷತಾ ಚೌಕಟ್ಟನ್ನು ಪ್ರಮುಖ ಶಾಸನಗಳಿಂದ ಬಲಪಡಿಸಲಾಗಿದೆ, ಅವುಗಳೆಂದರೆ
- ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ಭಾರತದ ಸೈಬರ್ ಕಾನೂನು ಚೌಕಟ್ಟಿಗೆ ಆಧಾರ ಸ್ತಂಭವಾಗಿ ಕಾರ್ಯನಿರ್ವಹಿಸುತ್ತದೆ. ಇದು ವ್ಯಕ್ತಿತ್ವ ಕಳ್ಳತನ, ವಂಚನೆ, ಕಂಪ್ಯೂಟರ್ ಸಂಪನ್ಮೂಲಗಳ ಮೂಲಕ ವ್ಯಕ್ತಿ ಸೋಗಿನ ವಂಚನೆ ಮತ್ತು ಅಶ್ಲೀಲ ಅಥವಾ ಹಾನಿಕಾರಕ ವಸ್ತುಗಳ ಪ್ರಸಾರದಂತಹ ಅಪರಾಧಗಳನ್ನು ನಿಭಾಯಿಸುತ್ತದೆ. ಹಣಕಾಸಿನ ಲಾಭಕ್ಕಾಗಿ ಡಿಜಿಟಲ್ ವೇದಿಕೆಗಳನ್ನು ದುರುಪಯೋಗಪಡಿಸಿಕೊಳ್ಳುವ ವಂಚಕರನ್ನು ಕಾನೂನು ಕ್ರಮಕ್ಕೆ ಒಳಪಡಿಸಲು ಈ ನಿಬಂಧನೆಗಳು ನಿರ್ಣಾಯಕವಾಗಿವೆ. ಜೊತೆಗೆ, ದುರುದ್ದೇಶಪೂರಿತ ವೆಬ್‌ಸೈಟ್‌ಗಳು ಮತ್ತು ವಂಚಕ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲು ಇದು ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ.
- ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು, ಡಿಜಿಟಲ್ ವೇದಿಕೆಗಳು ಮತ್ತು ಆನ್‌ಲೈನ್ ಮಾರುಕಟ್ಟೆಗಳ ಹೊಣೆಗಾರಿಕೆಯನ್ನು ಖಚಿತಪಡಿಸುತ್ತವೆ. ಇದು ಕೃತಕ ಬುದ್ಧಿಮತ್ತೆ (AI) ಸೇರಿದಂತೆ ತಂತ್ರಜ್ಞಾನಗಳ ಹೊಸ ದುರುಪಯೋಗ ನಿಭಾಯಿಸುತ್ತದೆ ಮತ್ತು ವೇದಿಕೆಗಳಿಂದ ಕಾನೂನುಬಾಹಿರ ವಿಷಯ ತೆಗೆದುಹಾಕಲು ಕಡ್ಡಾಯಗೊಳಿಸುತ್ತದೆ
- ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯಿದೆ, 2023: ಈ ಕಾಯ್ದೆ ಎಲ್ಲಾ ವೈಯಕ್ತಿಕ ದತ್ತಾಂಶಗಳನ್ನು ಕಾನೂನುಬದ್ಧವಾಗಿ ಮತ್ತು ಬಳಕೆದಾರರ ಸಮ್ಮತಿಯೊಂದಿಗೆ ನಿರ್ವಹಿಸಬೇಕು ಎಂದು ಕಡ್ಡಾಯಗೊಳಿಸುತ್ತದೆ, ಇದರಿಂದಾಗಿ ಭಾರತದ ಡಿಜಿಟಲ್ ಭೂದೃಶ್ಯವು ಪ್ರತಿಯೊಬ್ಬರಿಗೂ ಸುರಕ್ಷಿತ ಮತ್ತು ಹೆಚ್ಚು ಉತ್ತರದಾಯಿಯಾಗಿದೆ. ಅನಧಿಕೃತ ಪ್ರವೇಶ ಅಥವಾ ದುರುಪಯೋಗದ ಅಪಾಯಗಳನ್ನು ಕಡಿಮೆ ಮಾಡಲು, ದತ್ತಾಂಶ ವಿಶ್ವಾಸಿಗಳ ಮೇಲೆ ಭದ್ರತಾ ಸುರಕ್ಷತೆಗಳನ್ನು ಖಚಿತಪಡಿಸಿಕೊಳ್ಳಲು ಈ ಕಾಯಿದೆಯು ಕಟ್ಟುನಿಟ್ಟಿನ ಬಾಧ್ಯತೆಗಳನ್ನು ಹೇರುತ್ತದೆ. ಇಲ್ಲಿಯವರೆಗೆ, ವಂಚನೆಯ ಚಟುವಟಿಕೆಗಳಿಗೆ ಸಂಬಂಧಿಸಿದ 9.42 ಲಕ್ಷಕ್ಕೂ ಹೆಚ್ಚು ಸಿಮ್ ಕಾರ್ಡ್ಗಳನ್ನು ಮತ್ತು 2,63,348 ಐಎಂಇಐಗಳನ್ನು ನಿರ್ಬಂಧಿಸಲಾಗಿದೆ.

ಸೈಬರ್ ಘಟನೆಗಳಿಗೆ ಸ್ಪಂದನೆ
ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಸೈಬರ್ ಭದ್ರತಾ ಘಟನೆಗಳಿಗೆ ಪ್ರತಿಕ್ರಿಯಿಸುವ ರಾಷ್ಟ್ರೀಯ ಏಜೆನ್ಸಿಯಾಗಿದೆ. ಇದು ಸೈಬರ್ ಬೆದರಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ, ದುರ್ಬಲತೆಗಳನ್ನು ಪತ್ತೆಹಚ್ಚುತ್ತದೆ ಮತ್ತು ಅಗತ್ಯ ಸಲಹೆಗಳನ್ನು ನೀಡುತ್ತದೆ. ದತ್ತಾಂಶ ಉಲ್ಲಂಘನೆ ಫಿಶಿಂಗ್ ಕಾರ್ಯಾಚರಣೆಗಳು ಅಥವಾ ಮಾಲ್‌ವೇರ್ ಒಳನುಗ್ಗುವಿಕೆಗಳಂತಹ ಘಟನೆಗಳನ್ನು ಗುರುತಿಸಿದ ನಂತರ, ಸಿಇಆರ್‌ಟಿ- ಇನ್ ಎಚ್ಚರಿಕೆಗಳನ್ನು ಪ್ರಸಾರ ಮಾಡುತ್ತದೆ ಮತ್ತು ಬಾಧಿತ ಸಂಸ್ಥೆಗಳಿಗೆ ಪರಿಹಾರ ಕ್ರಮಗಳನ್ನು ಸೂಚಿಸುತ್ತದೆ. ಈ ಪೂರ್ವಭಾವಿ ಕಾರ್ಯವಿಧಾನವು ಅಪಾಯಗಳನ್ನು ಸಮಯಕ್ಕೆ ಸರಿಯಾಗಿ ತಡೆಯುವುದನ್ನು ಖಚಿತಪಡಿಸುತ್ತದೆ ಮತ್ತು ಸರ್ಕಾರ, ಉದ್ಯಮ ಹಾಗೂ ನಿರ್ಣಾಯಕ ಸೇವಾ ಪೂರೈಕೆದಾರರಾದ್ಯಂತ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ. ಮಾರ್ಚ್ 2025ರ ಹೊತ್ತಿಗೆ, ಸಿಇಆರ್‌ಟಿ-ಇನ್ ವಿವಿಧ ರಾಜ್ಯಗಳು ಮತ್ತು ವಲಯಗಳ 1,438 ಸಂಸ್ಥೆಗಳನ್ನು ತೊಡಗಿಸಿಕೊಂಡು, ಸೈಬರ್ ಸಿದ್ಧತೆಯನ್ನು ಮೌಲ್ಯಮಾಪನ ಮಾಡಲು ಮತ್ತು ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು 109 ಸೈಬರ್ ಭದ್ರತಾ ಅಣಕು ಕಾರ್ಯಾಚರಣೆಗಳನ್ನು ಸುಗಮಗೊಳಿಸಿದೆ.
ನಿರ್ಣಾಯಕ ಮೂಲಸೌಕರ್ಯಗಳ ರಕ್ಷಣೆ
ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ರ ಸೆಕ್ಷನ್ 70ಎ ಅಡಿಯಲ್ಲಿ ಗೊತ್ತುಪಡಿಸಲಾದ ನ್ಯಾಷನಲ್ ಕ್ರಿಟಿಕಲ್ ಇನ್ಫರ್ಮೇಷನ್ ಇನ್ಫ್ರಾಸ್ಟ್ರಕ್ಚರ್ ಪ್ರೊಟೆಕ್ಷನ್ ಸೆಂಟರ್ ಭಾರತದಲ್ಲಿನ ನಿರ್ಣಾಯಕ ಮಾಹಿತಿ ಮೂಲಸೌಕರ್ಯದ ರಕ್ಷಣೆಗಾಗಿರುವ ರಾಷ್ಟ್ರೀಯ ನೋಡಲ್ ಏಜೆನ್ಸಿಯಾಗಿದೆ. ಇದು ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಅತ್ಯಗತ್ಯವಾಗಿರುವ ಬ್ಯಾಂಕಿಂಗ್, ಟೆಲಿಕಾಂ, ವಿದ್ಯುತ್ ಮತ್ತು ಸಾರಿಗೆಯಂತಹ ವಲಯಗಳಲ್ಲಿನ ಪಾಲುದಾರರೊಂದಿಗೆ ನಿಕಟ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತದೆ. ನಿರಂತರ ಮೇಲ್ವಿಚಾರಣೆ ಅಪಾಯದ ಮೌಲ್ಯಮಾಪನ ಮತ್ತು ವಲಯ-ನಿರ್ದಿಷ್ಟ ಮಾರ್ಗಸೂಚಿಗಳನ್ನು ಹೊರಡಿಸುವ ಮೂಲಕ, ಎನ್‌ಸಿಐಐಪಿಸಿ ಯು ರಕ್ಷಣಾತ್ಮಕ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ ಮತ್ತು ಅಗತ್ಯ ಸೇವೆಗಳಿಗೆ ಧಕ್ಕೆಯುಂಟುಮಾಡುವ ಬೆದರಿಕೆಗಳನ್ನು ಕಡಿಮೆ ಮಾಡುತ್ತದೆ.
ಕಾನೂನು ಜಾರಿ ಸಾಮರ್ಥ್ಯವನ್ನು ಬಲಪಡಿಸುವುದು
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಸ್ಥಾಪಿಸಲಾದ ಇಂಡಿಯನ್ ಸೈಬರ್‌ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (I4C) ಕಾನೂನು ಜಾರಿ ಸಂಸ್ಥೆಗಳು ಸೈಬರ್ ಅಪರಾಧಗಳನ್ನು ಸಂಘಟಿತ ಮತ್ತು ಸಮನ್ವಯದ ರೀತಿಯಲ್ಲಿ ನಿಭಾಯಿಸಲು ಅನುವು ಮಾಡಿಕೊಡುವ ಒಂದು ಸಮಗ್ರ ಚೌಕಟ್ಟನ್ನು ಒದಗಿಸುತ್ತದೆ. ಇದು ವಿಶೇಷ ತರಬೇತಿ ಕಾರ್ಯಕ್ರಮಗಳು, ಸಂಶೋಧನೆ ಮತ್ತು ತಾಂತ್ರಿಕ ಉಪಕರಣಗಳ ಅಭಿವೃದ್ಧಿಯ ಮೂಲಕ ಸಾಮರ್ಥ್ಯ ವೃದ್ಧಿಗೆ ಬೆಂಬಲ ನೀಡುತ್ತದೆ. ಇದು ನೈಜ-ಸಮಯದ ಮಾಹಿತಿ ಹಂಚಿಕೆ ಮತ್ತು ಸಮನ್ವಯ ತನಿಖೆಗಳಿಗೆ ಸಹ ಅನುಕೂಲ ಕಲ್ಪಿಸುತ್ತದೆ. ಇದು ಆರ್ಥಿಕ ವಂಚನೆಗಳು ಮತ್ತು ಇತರ ಸಂಘಟಿತ ಸೈಬರ್ ಅಪರಾಧಗಳಲ್ಲಿ ತೊಡಗಿರುವ ಸೈಬರ್ ಅಪರಾಧ ಜಾಲಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲು ನೆರವಾಗುತ್ತದೆ. ಈವರೆಗೆ, I4C ಸೈಬರ್ ವಂಚನೆಗಳಿಗೆ ಸಂಬಂಧಿಸಿದ 3,962 ಸ್ಕೈಪ್ ಐಡಿಗಳನ್ನು ಮತ್ತು 83,668 ವಾಟ್ಸಾಪ್ ಖಾತೆಗಳನ್ನು ಪೂರ್ವಭಾವಿಯಾಗಿ ನಿರ್ಬಂಧಿಸಿದೆ.
ಸೈಬರ್ ಸುರಕ್ಷತಾ ಉಪಕ್ರಮಗಳುಃ ಕಾರ್ಯರೂಪದಲ್ಲಿರುವ ಆಡಳಿತ ಭಾರತದ ಸೈಬರ್ ರಕ್ಷಣೆಯನ್ನು ಬಲಪಡಿಸುವ ಪ್ರಯತ್ನದಲ್ಲಿ, ಕೇಂದ್ರ ಬಜೆಟ್ 2025ರಲ್ಲಿ ಸೈಬರ್ ಸುರಕ್ಷತಾ ಯೋಜನೆಗಳಿಗಾಗಿ ₹ 782 ಕೋಟಿ ಮೀಸಲಿಡಲಾಗಿದೆ. ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡುವ ಸೈಬರ್ ಬೆದರಿಕೆಗಳ ಮೇಲೆ ಸರ್ಕಾರದ ಹೆಚ್ಚಿದ ಗಮನವನ್ನು ಈ ಮಹತ್ವದ ಕ್ರಮವು ಉಲ್ಲೇಖಿಸುತ್ತದೆ. ನಾಗರಿಕ ಆರ್ಥಿಕ ಸೈಬರ್ ವಂಚನೆ ವರದಿ ಮತ್ತು ನಿರ್ವಹಣಾ ವ್ಯವಸ್ಥೆಯ (ಸಿಎಫ್‌ಸಿಎಫ್‌ಆರ್‌ಎಮ್‌ಎಸ್) ಮೂಲಕ, ಹಣಕಾಸು ಸಂಸ್ಥೆಗಳು 17.82 ಲಕ್ಷಕ್ಕೂ ಹೆಚ್ಚು ದೂರುಗಳಲ್ಲಿ ₹ 5,489 ಕೋಟಿಗೂ ಹೆಚ್ಚು ಮೊತ್ತವನ್ನು ಉಳಿಸಲು ಸಾಧ್ಯವಾಗಿದೆ.
ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್
ಸೈಬರ್ ಅಪರಾಧದ ವಿರುದ್ಧದ ಹೋರಾಟದಲ್ಲಿ ನಾಗರಿಕರ ಭಾಗವಹಿಸುವಿಕೆಯನ್ನು ಬಲಪಡಿಸಲು, ಸರ್ಕಾರವು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಕಾರ್ಯಗತಗೊಳಿಸಿದೆ. ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸುವ ಅಪರಾಧಗಳ ಮೇಲೆ ವಿಶೇಷ ಗಮನಹರಿಸುವುದರೊಂದಿಗೆ, ವಿವಿಧ ವರ್ಗಗಳ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ದೂರುಗಳನ್ನು ವರದಿ ಮಾಡಲು ಈ ಪೋರ್ಟಲ್ ನಾಗರಿಕರಿಗೆ ಅನುವು ಮಾಡಿಕೊಡುತ್ತದೆ. ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ 1930, ಆನ್‌ಲೈನ್ ಆರ್ಥಿಕ ವಂಚನೆಗಳ ಸಂತ್ರಸ್ತರಿಗೆ ತಕ್ಷಣದ ನೆರವು ನೀಡುತ್ತದೆ. ಇದು ತ್ವರಿತ ವರದಿ ಮಾಡುವಿಕೆ ಮತ್ತು ಸಾಧ್ಯವಿರುವಲ್ಲಿ ವಂಚನೆಯ ವಹಿವಾಟುಗಳನ್ನು ಸ್ಥಗಿತಗೊಳಿಸಲು ಅನುಕೂಲ ಮಾಡಿಕೊಡುತ್ತದೆ. ಒಟ್ಟಾರೆಯಾಗಿ, ಈ ಉಪಕ್ರಮಗಳು ನಾಗರಿಕರಿಗೆ ಸುಲಭವಾಗಿ ತಲುಪಬಹುದಾದ ಮತ್ತು ಸ್ಪಂದಿಸುವ ಕುಂದುಕೊರತೆ ನಿವಾರಣಾ ಕಾರ್ಯವಿಧಾನವಾಗಿ ಕಾರ್ಯನಿರ್ವಹಿಸುತ್ತವೆ.
ನ್ಯಾಷನಲ್ ಮಿಷನ್ ಆನ್ ಇಂಟರ್ಡಿಸಿಪ್ಲಿನರಿ ಸೈಬರ್ – ಫಿಸಿಕಲ್ ಸಿಸ್ಟಮ್ಸ್ (ಎನ್ಎಂ-ಐಸಿಪಿಎಸ್)
ಎನ್‌ಎಮ್ –ಐಸಿಪಿಎಸ್ ನ್ಯಾಷನಲ್ ಮಿಷನ್ ಆನ್ ಇಂಟರ್ ಡಿಸಿಪ್ಲಿನರಿ ಸೈಬರ್-ಫಿಸಿಕಲ್ ಸಿಸ್ಟಮ್ಸ್ ಸೈಬರ್ ಭದ್ರತೆ, ಕೃತಕ ಬುದ್ಧಿಮತ್ತೆ (AI) ಇತ್ಯಾದಿಗಳಲ್ಲಿ ಸುಧಾರಿತ ಸಂಶೋಧನೆ ಮತ್ತು ಆವಿಷ್ಕಾರವನ್ನು ಉತ್ತೇಜಿಸುವ ಮೂಲಕ ಸೈಬರ್ ವಂಚನೆಗಳನ್ನು ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೆದರಿಕೆ ಪತ್ತೆಗಾಗಿ ಉಪಕರಣಗಳು, ವೇದಿಕೆಗಳು ಮತ್ತು ವಿಧಾನಗಳ ಅಭಿವೃದ್ಧಿಗೆ ಬೆಂಬಲ ನೀಡುವ ಮೂಲಕ, ಈ ಮಿಷನ್ ವ್ಯಕ್ತಿಗಳು, ವ್ಯವಹಾರಗಳು ಮತ್ತು ನಿರ್ಣಾಯಕ ಮೂಲಸೌಕರ್ಯಗಳನ್ನು ಗುರಿಯಾಗಿಸುವ ಸೈಬರ್ ವಂಚನೆಗಳನ್ನು ಗುರುತಿಸುವ ಮತ್ತು ತಡೆಯುವ ಭಾರತದ ಸಾಮರ್ಥ್ಯವನ್ನು ಬಲಪಡಿಸುತ್ತದೆ."
ಎನ್‌ಎಮ್ –ಐಸಿಪಿಎಸ್ ಅಡಿಯಲ್ಲಿ ಶೈಕ್ಷಣಿಕ ಸಂಸ್ಥೆಗಳು, ಉದ್ಯಮ ಮತ್ತು ಸರ್ಕಾರದ ನಡುವಿನ ಸಹಯೋಗವು ಆರ್ಥಿಕ ವಂಚನೆಗಳು, ಫಿಶಿಂಗ್ ಮತ್ತು ಗುರುತಿನ ಆಧಾರಿತ ಅಪರಾಧಗಳು ಸೇರಿದಂತೆ ಹೊಸ ಮತ್ತು ಅತ್ಯಾಧುನಿಕ ಸೈಬರ್ ಬೆದರಿಕೆಗಳಿಗೆ ಪರಿಹಾರಗಳನ್ನು ವೇಗಗೊಳಿಸುತ್ತದೆ.
ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಸೈಬರ್ ಅಪರಾಧ ತಡೆ (ಸಿಸಿಪಿಡಬ್ಲ್ಯೂಸಿ) ಯೋಜನೆ
ಸಿ.ಸಿ.ಪಿ.ಡಬ್ಲ್ಯೂ.ಸಿ ಯೋಜನೆಯು ದುರ್ಬಲ ವರ್ಗಗಳನ್ನು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸುವ ಸೈಬರ್ ವಂಚನೆಗಳನ್ನು ನಿಭಾಯಿಸುತ್ತದೆ. ₹ 132.93 ಕೋಟಿ ಆರ್ಥಿಕ ನೆರವಿನೊಂದಿಗೆ, ಈ ಯೋಜನೆಯು 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೈಬರ್ ಫೊರೆನ್ಸಿಕ್ ಕಮ್ ತರಬೇತಿ ಪ್ರಯೋಗಾಲಯಗಳನ್ನು ಸ್ಥಾಪಿಸಿದೆ.ಈ ಪ್ರಯೋಗಾಲಯಗಳು ಸೈಬರ್ ಅಪರಾಧ ತನಿಖೆ, ಡಿಜಿಟಲ್ ಫೊರೆನ್ಸಿಕ್ಸ್ ಮತ್ತು ತಡೆಗಟ್ಟುವ ಕ್ರಮಗಳಲ್ಲಿ 24,600ಕ್ಕೂ ಹೆಚ್ಚು ಸಿಬ್ಬಂದಿಗೆ ತರಬೇತಿ ನೀಡಿವೆ. ವರ್ಧಿತ ಜಾಗೃತಿ, ಆರಂಭಿಕ ಪತ್ತೆ ಮತ್ತು ತ್ವರಿತ ಪ್ರತಿಕ್ರಿಯೆ ಸಾಮರ್ಥ್ಯಗಳ ಮೂಲಕ, ಸಿ.ಸಿ.ಪಿ.ಡಬ್ಲ್ಯೂ.ಸಿ ಯೋಜನೆಯು ಮಹಿಳೆಯರು ಮತ್ತು ಮಕ್ಕಳ ಆನ್‌ಲೈನ್ ವಂಚನೆಗಳು, ಸ್ಕ್ಯಾಮ್‌ಗಳು ಮತ್ತು ಶೋಷಣೆ ತಡೆಯಲು ಕಾನೂನು ಜಾರಿ ಸಂಸ್ಥೆಗಳ ಸಾಮರ್ಥ್ಯ ಬಲಪಡಿಸುತ್ತದೆ. ಇದು ಸುರಕ್ಷಿತ ಡಿಜಿಟಲ್ ಪರಿಸರವನ್ನು ಖಚಿತಪಡಿಸುತ್ತದೆ.
ಸೈಬರ್ ಬಿಕ್ಕಟ್ಟು ನಿರ್ವಹಣಾ ಯೋಜನೆ (ಸಿಸಿಎಂಪಿ)
ಸೈಬರ್-ದಾಳಿಗಳು ಮತ್ತು ಸೈಬರ್-ಭಯೋತ್ಪಾದನೆಯ ವಿರುದ್ಧ ಸನ್ನದ್ಧತೆಯನ್ನು ಬಲಪಡಿಸಲು, ಸರ್ಕಾರವು ಎಲ್ಲಾ ಸರ್ಕಾರಿ ಸಂಸ್ಥೆಗಳಿಗಾಗಿ ಸಿ.ಸಿ.ಎಂ.ಪಿ ಪ್ರಾರಂಭಿಸಿದೆ. ಯಾವುದೇ ಸೈಬರ್ ಬಿಕ್ಕಟ್ಟಿನಿಂದ ಸಂಘಟಿತ ಚೇತರಿಕೆ ಖಚಿತಪಡಿಸಿಕೊಳ್ಳಲು ಈ ಯೋಜನೆಯು ಒಂದು ಆಯಕಟ್ಟಿನ ಚೌಕಟ್ಟಾಗಿ ಕಾರ್ಯನಿರ್ವಹಿಸುತ್ತದೆ."
ಈ ಚೌಕಟ್ಟಿನಡಿಯಲ್ಲಿ ಸಾಮರ್ಥ್ಯ ಮತ್ತು ಜಾಗೃತಿ ನಿರ್ಮಿಸಲು ಇಲ್ಲಿಯವರೆಗೆ ದೇಶಾದ್ಯಂತ 205 ಕಾರ್ಯಾಗಾರಗಳನ್ನು ನಡೆಸಲಾಗಿದೆ.
ಸಮನ್ವಯ ವೇದಿಕೆ
ಸಮನ್ವಯ ವೇದಿಕೆಯು ಅಪರಾಧಿಗಳು ಮತ್ತು ಅಪರಾಧಗಳ ವಿಶ್ಲೇಷಣಾತ್ಮಕ-ಆಧಾರಿತ ಅಂತಾರಾಜ್ಯ ಸಂಪರ್ಕಗಳನ್ನು ಒದಗಿಸುವ ಮೂಲಕ ಸೈಬರ್ ವಂಚನೆಗಳ ತನಿಖೆಗಳನ್ನು ಬಲಪಡಿಸುತ್ತದೆ. ಇದರ 'ಪ್ರತಿಬಿಂಬ' ಮಾಡ್ಯೂಲ್ ಅಪರಾಧಿಗಳ ಸ್ಥಳಗಳು ಮತ್ತು ಅಪರಾಧ ಮೂಲಸೌಕರ್ಯಗಳನ್ನು ನಕ್ಷೆ ಮಾಡುತ್ತದೆ, ಇದು ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಅಗತ್ಯವಿರುವ ದೃಶ್ಯಗೋಚರತೆಯನ್ನು ನೀಡುತ್ತದೆ. ಇಲ್ಲಿಯವರೆಗೆ, ಇದು 12,987 ಆರೋಪಿಗಳ ಬಂಧನ, 1,51,984 ಅಪರಾಧ ಸಂಪರ್ಕಗಳ ಗುರುತಿಸುವಿಕೆ ಮತ್ತು 70,584 ಸೈಬರ್ ತನಿಖಾ ನೆರವು ವಿನಂತಿಗಳಿಗೆ ಕಾರಣವಾಗಿದೆ. ಇದು ಸಂಘಟಿತ ಸೈಬರ್ ವಂಚನೆ ಜಾಲಗಳನ್ನು ಸಮರ್ಥವಾಗಿ ಭೇದಿಸಲು ಸಹಾಯ ಮಾಡಿದೆ.
ಸಹಯೋಗ್ ಪೋರ್ಟಲ್
ಸಹಯೋಗ ಪೋರ್ಟಲ್ ಕಾನೂನು ಬಾಹಿರ ಆನ್‌ಲೈನ್ ವಿಷಯಗಳನ್ನು ನಿಭಾಯಿಸಲು ಕೇಂದ್ರೀಕೃತ ವೇದಿಕೆಯನ್ನು ಒದಗಿಸುತ್ತದೆ. ಇದು ಮಧ್ಯವರ್ತಿಗಳಿಗೆ ಸ್ವಯಂಚಾಲಿತವಾಗಿ ವಿಷಯ ತೆಗೆದುಹಾಕುವ ನೋಟಿಸ್‌ಗಳನ್ನು ನೀಡಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ಸೈಬರ್‌ಸ್ಪೇಸ್‌ನಲ್ಲಿ ಹರಡುವ ಹಾನಿಕಾರಕ ವಸ್ತುಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವುದನ್ನು ಖಚಿತಪಡಿಸುತ್ತದೆ.ಇದು ಭಾರತದಾದ್ಯಂತ ಇರುವ ಎಲ್ಲಾ ಅಧಿಕೃತ ಏಜೆನ್ಸಿಗಳನ್ನು ಒಂದೇ ಇಂಟರ್‌ಫೇಸ್‌ಗೆ ತರುತ್ತದೆ. ಇದರಿಂದಾಗಿ ಕಾನೂನು ಬಾಹಿರ ವಿಷಯಗಳಿಗೆ ಸರ್ಕಾರವು ಸಮಯಕ್ಕೆ ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಬಲಪಡಿಸುತ್ತದೆ.

ಸೈಬರ್ ಸುರಕ್ಷತಾ ಕಸರತ್ತುಗಳು
ಸೈಬರ್ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸುವ ನಿಟ್ಟಿನಲ್ಲಿ, ಭಾರತ ರಾಷ್ಟ್ರೀಯ ಸೈಬರ್ ಸುರಕ್ಷತಾ ವ್ಯಾಯಾಮ 2025 ಅನ್ನು ಜುಲೈ 21 ರಿಂದ ಆಗಸ್ಟ್ 1ರ ವರೆಗೆ ನಡೆಸಲಾಯಿತು. ಈ ವ್ಯಾಯಾಮದಲ್ಲಿ ಸೈಬರ್ ಭದ್ರತಾ ವೃತ್ತಿಪರರು, ನಿಯಂತ್ರಕರು ಮತ್ತು ನೀತಿ ನಿರೂಪಕರೂ ಸೇರಿದಂತೆ 600ಕ್ಕೂ ಹೆಚ್ಚು ಭಾಗವಹಿಸುವವರು ಒಗ್ಗೂಡಿದ್ದರು."
"ಈ ವ್ಯಾಯಾಮದ ಪ್ರಮುಖ ಅಂಶವೆಂದರೆ 'ಸ್ಟ್ರಾಟೆಕ್ಸ್' (STRATEX). ಇದು ನೈಜ-ಸಮಯದ ಅಂತರ್-ಏಜೆನ್ಸಿ ಸಮನ್ವಯ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆ ಪರೀಕ್ಷಿಸಲು ವಿನ್ಯಾಸಗೊಳಿಸಲಾದ ಒಂದು ಸಿಮ್ಯುಲೇಟೆಡ್ ರಾಷ್ಟ್ರೀಯ ಸೈಬರ್ ಉಲ್ಲಂಘನೆ ಆಗಿತ್ತು.
|
ಇಂಡಿಯಾ ಮೊಬೈಲ್ ಕಾಂಗ್ರೆಸ್ 2025ರಲ್ಲಿ ಸೈಬರ್ ಸುರಕ್ಷತೆಗೆ ಒತ್ತು
9ನೇ ಭಾರತೀಯ ಮೊಬೈಲ್ ಕಾಂಗ್ರೆಸ್‌ನಲ್ಲಿ (India Mobile Congress), ಸೈಬರ್ ಬೆದರಿಕೆಗಳಿಂದ ಡಿಜಿಟಲ್ ನೆಟ್‌ವರ್ಕ್‌ಗಳು ಮತ್ತು ಹೊಸ ತಂತ್ರಜ್ಞಾನಗಳನ್ನು ರಕ್ಷಿಸುವ ಭಾರತದ ಪ್ರಯತ್ನಗಳನ್ನು ಎತ್ತಿ ತೋರಿಸುವ ಸೈಬರ್ ಸುರಕ್ಷತೆಯು (Cybersecurity) ಪ್ರಮುಖ ಗಮನದ ಕ್ಷೇತ್ರಗಳಲ್ಲಿ ಒಂದಾಗಿರುತ್ತದೆ. 'ಪರಿವರ್ತನೆಗಾಗಿ ಆವಿಷ್ಕರಿಸಿ' ('Innovate to Transform') ಎಂಬ ವಿಷಯವನ್ನು ಆಧರಿಸಿದ ಐಎಂಸಿ 2025 (IMC 2025) ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 8 ರಿಂದ 11ರ ವರೆಗೆ ನವದೆಹಲಿಯ ಯಶೋಭೂಮಿಯಲ್ಲಿ ಉದ್ಘಾಟಿಸಲಿದ್ದಾರೆ.
ಐಎಂಸಿ 2025 (IMC 2025) ಆರು ಜಾಗತಿಕ ಶೃಂಗಸಭೆಗಳನ್ನು (global summits) ಒಳಗೊಂಡಿರುತ್ತದೆ. ಅವುಗಳಲ್ಲಿ ಸೈಬರ್ ಸುರಕ್ಷತಾ ಶೃಂಗಸಭೆ (Cybersecurity Summit) ಮತ್ತು ಭಾರತ್ 6G ಸಿಂಪೋಸಿಯಂ ಸೇರಿವೆ. ಇದು ಮುಂದಿನ ಪೀಳಿಗೆಯ ಡಿಜಿಟಲ್ ತಂತ್ರಜ್ಞಾನಗಳಲ್ಲಿ ಭಾರತದ ಹೆಚ್ಚುತ್ತಿರುವ ನಾಯಕತ್ವವನ್ನು ಉಲ್ಲೇಖಿಸುತ್ತದೆ. 6G, ಸೈಬರ್ ಸುರಕ್ಷತೆ, ಉಪಗ್ರಹ ಸಂವಹನಗಳು, AI, IoT, ಮತ್ತು ಟೆಲಿಕಾಂ ಉತ್ಪಾದನೆ (telecom manufacturing) ಪ್ರಮುಖ ಗಮನದ ಕ್ಷೇತ್ರಗಳಾಗಿವೆ.
ಈ ಕಾರ್ಯಕ್ರಮಕ್ಕೆ 1.5 ಲಕ್ಷಕ್ಕೂ ಹೆಚ್ಚು ಸಂದರ್ಶಕರು, 7,000ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರತಿನಿಧಿಗಳು, 400ಕ್ಕೂ ಹೆಚ್ಚು ಪ್ರದರ್ಶಕರು ಮತ್ತು 1,600 ಕ್ಕೂ ಹೆಚ್ಚು ಅತ್ಯಾಧುನಿಕ ಬಳಕೆಯ ಪ್ರಕರಣಗಳು (cutting-edge use cases) ಆಗಮಿಸುವ ನಿರೀಕ್ಷೆಯಿದೆ. 100 ಕ್ಕೂ ಹೆಚ್ಚು ಸೆಷನ್‌ಗಳು ಮತ್ತು 800 ಕ್ಕೂ ಹೆಚ್ಚು ಭಾಷಣಕಾರರೊಂದಿಗೆ, ಐಎಂಸಿ 2025 (IMC 2025) ಜಾಗತಿಕ ಸಹಯೋಗ ಮತ್ತು ಆವಿಷ್ಕಾರಕ್ಕಾಗಿ ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.
ಭಾರತವು ತನ್ನ ಕ್ಷಿಪ್ರವಾದ 5G ಜಾಲ ವಿಸ್ತರಣೆಯನ್ನು (5G rollout) ಆಚರಿಸುತ್ತಿರುವಾಗ, 1.2 ಶತಕೋಟಿ ಮೊಬೈಲ್ ಚಂದಾದಾರರು ಮತ್ತು 970 ಮಿಲಿಯನ್ ಇಂಟರ್ನೆಟ್ ಬಳಕೆದಾರರೊಂದಿಗೆ, ಸುರಕ್ಷಿತ, ಅಂತರ್ಗತ (inclusive) ಮತ್ತು ವಿಸ್ತರಿಸಬಹುದಾದ (scalable) ಡಿಜಿಟಲ್ ಪರಿಸರ ವ್ಯವಸ್ಥೆಗಳ ಮೇಲಿನ ಗಮನವು, ವಿಶ್ವಾಸಾರ್ಹ ಮತ್ತು ಪರಿವರ್ತಕ ಡಿಜಿಟಲ್ ಮೂಲಸೌಕರ್ಯಕ್ಕಾಗಿ (digital infrastructure) ಭಾರತವನ್ನು ಜಾಗತಿಕ ಕೇಂದ್ರವಾಗಿ (global hub) ಬಲಪಡಿಸುತ್ತದೆ.
|
ಮುಂದಿನ ಹಾದಿಃ ಸೈಬರ್ ಜಾಗೃತಿ
ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಬಲಪಡಿಸಲು, ಸರ್ಕಾರವು ಬಹು-ವೇದಿಕೆ ಪ್ರಚಾರ ತಂತ್ರವನ್ನು (multi-platform outreach strategy) ಕೈಗೊಂಡಿದೆ.

- ಸೈಬರ್ ವಂಚನೆಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡಲು, ಸರ್ಕಾರವು ರೇಡಿಯೋ, ಪತ್ರಿಕೆಗಳು ಮತ್ತು ಮೆಟ್ರೋ ಪ್ರಕಟಣೆಗಳ ಮೂಲಕ ನಾಗರಿಕ-ಕೇಂದ್ರಿತ ಜಾಗೃತಿ ಅಭಿಯಾನಗಳನ್ನು ಪ್ರಾರಂಭಿಸಿದೆ.
- ಅಸ್ತಿತ್ವದಲ್ಲಿರುವ ಮತ್ತು ಸಂಭಾವ್ಯ ಸೈಬರ್ ಭದ್ರತಾ ಬೆದರಿಕೆಗಳ (cyber security threats) ಬಗ್ಗೆ ಅಗತ್ಯವಾದ ಪರಿಸ್ಥಿತಿಯ ಅರಿವನ್ನು (situational awareness) ಮೂಡಿಸಲು CERT-In ನಿಂದ ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರವನ್ನು (National Cyber Coordination Centre - NCCC) ಸ್ಥಾಪಿಸಲಾಗಿದೆ.
- ಮೈಗವರ್ನ್ ವೇದಿಕೆಯ (MyGov platform) ಮೂಲಕ ಸೈಬರ್ ಸುರಕ್ಷತೆ ಮತ್ತು ಭದ್ರತಾ ಜಾಗೃತಿ ಸಪ್ತಾಹಗಳನ್ನು (Cyber Safety and Security Awareness Weeks) ನಡೆಸಿ ಸಾರ್ವಜನಿಕರನ್ನು ತೊಡಗಿಸಿಕೊಳ್ಳುವುದು.
- ಸೈಬರ್ ಸುರಕ್ಷತೆ ಮತ್ತು ಭದ್ರತೆಯ ಕುರಿತು ಯುವಜನರಿಗೆ ಮಾರ್ಗದರ್ಶನ ನೀಡಲು 'ಹದಿಹರೆಯದವರು ಮತ್ತು ವಿದ್ಯಾರ್ಥಿಗಳಿಗಾಗಿ ಕೈಪಿಡಿ'ಯನ್ನು (Handbook for Adolescents and Students) ಪ್ರಕಟಿಸಲಾಗಿದೆ
- ಸೈಬರ್ ಅಪರಾಧವನ್ನು ತಡೆಗಟ್ಟಲು ಸೈಬರ್ ಜಾಗೃತಿ ಮತ್ತು ಸುರಕ್ಷಿತ ಅಭ್ಯಾಸಗಳನ್ನು ಹರಡಲು ಸಾಮಾಜಿಕ ಮಾಧ್ಯಮವನ್ನು ಬಳಸುವುದು.
ಉಪಸಂಹಾರ
ಭಾರತವು ಡಿಜಿಟಲ್ ಪರಿವರ್ತನೆ ಮತ್ತು ಸೈಬರ್ ಬೆದರಿಕೆಗಳ ಕವಲುದಾರಿಯಲ್ಲಿದೆ. ಇಲ್ಲಿ ದೇಶವು ಪ್ರಗತಿಯ ಕಬ್ಬಿಣದ ಸ್ತಂಭವಾಗಿರುವುದರ ಜೊತೆಗೆ ಸೈಬರ್ ವಂಚಕರಿಗೆ ಆಕರ್ಷಕ ಕೇಂದ್ರವೂ ಆಗಿದೆ. ಡಿಜಿಟಲ್ ಇಂಡಿಯಾ ದೃಷ್ಟಿಕೋನವನ್ನು ಸಾಕಾರಗೊಳಿಸಲು, ಸರ್ಕಾರದ ಬಹು-ಪದರದ ಸೈಬರ್ ಪ್ರತಿಕ್ರಿಯೆ ತಂಡವು ವಂಚನೆ ತಡೆಗಟ್ಟುವಿಕೆ ಮತ್ತು ಸಾವಿರಾರು ವಂಚನಾ ಕಾರ್ಯಾಚರಣೆಗಳನ್ನು ಭೇದಿಸಲು ಅನುವು ಮಾಡಿಕೊಡುತ್ತಿದೆ."
"ಸುಧಾರಿತ ಫೊರೆನ್ಸಿಕ್ಸ್, ಬಿಗ್ ಡೇಟಾ ವಿಶ್ಲೇಷಣೆಗಳು ಮತ್ತು ಸ್ಥಳೀಯ ಉಪಕರಣಗಳು ರಾಷ್ಟ್ರೀಯ ಸೈಬರ್ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಿವೆ. ಆದರೂ, ಭಾರತದ ಸೈಬರ್‌ಸ್ಪೇಸ್ ಅನ್ನು ಸುರಕ್ಷಿತಗೊಳಿಸುವುದು ಒಂದು ಹಂಚಿಕೆಯ ಜವಾಬ್ದಾರಿಯಾಗಿದ್ದು, ಸೈಬರ್ ವಂಚನೆಗಳ ವಿರುದ್ಧದ ಈ ಹೋರಾಟದಲ್ಲಿ ಸರ್ಕಾರ ಮತ್ತು ನಾಗರಿಕರು ಒಟ್ಟಾಗಿ ಕಾರ್ಯನಿರ್ವಹಿಸಬೇಕು.
References
Ministry of Statistics & Programme Implementation
Ministry of Electronics & IT
Ministry of Home Affairs
Ministry of Communications
Ministry of Women and Child Development
PIB Backgrounders
World Economic Forum
National Security Council Secretariat
Enforcement Directorate (ED) Annual Reports 2024-2025
India Budget
National Mission on Interdisciplinary Cyber-Physical Systems (NM-ICPS)
Indian Cybercrime Coordination Centre (I4C)
Open Government Data Platform (OGD) India
Click here to see pdf
*****
(Release ID: 2176586)
Visitor Counter : 70