ಕೃಷಿ ಸಚಿವಾಲಯ
ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವಾಲಯ
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಪತ್ತಿಗೆ ತುತ್ತಾದ ರೈತರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ
ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಂದ 21ನೇ ಪಿ.ಎಂ.-ಕಿಸಾನ್ ಕಂತು ಮುಂಚಿತವಾಗಿ ಬಿಡುಗಡೆ
ಜಮ್ಮು ಮತ್ತು ಕಾಶ್ಮೀರದ 8.55 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ₹171 ಕೋಟಿ ವರ್ಗಾವಣೆ
ನವದೆಹಲಿಯ ಕೃಷಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಭಾಗಿ
"ಪಿ.ಎಂ.-ಕಿಸಾನ್ ಯೋಜನೆಯಡಿ ಜಮ್ಮು ಮತ್ತು ಕಾಶ್ಮೀರದ ರೈತರಿಗೆ ಇದುವರೆಗೆ ₹4,052 ಕೋಟಿ ವಿತರಣೆ ಆಗಿದೆ" – ಶ್ರೀ ಶಿವರಾಜ್ ಸಿಂಗ್
"ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಸರ್ಕಾರವು ಬಾಧಿತ ಜನರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ" – ಶ್ರೀ ಚೌಹಾಣ್
"5,100 ಹಾನಿಗೊಳಗಾದ ಮನೆಗಳ ಪುನರ್ನಿರ್ಮಾಣಕ್ಕಾಗಿ ಕೇಂದ್ರದಿಂದ ₹85 ಕೋಟಿ ಮಂಜೂರು" – ಶ್ರೀ ಶಿವರಾಜ್ ಸಿಂಗ್
"ಬಾಧಿತ ಕುಟುಂಬಗಳಿಗೆ ನರೇಗಾ ಕೆಲಸದ ದಿನಗಳನ್ನು 100 ರಿಂದ 150 ಕ್ಕೆ ಹೆಚ್ಚಿಸಲಾಗಿದೆ" – ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್
"ಈ ಬಿಕ್ಕಟ್ಟಿನ ಸಮಯದಲ್ಲಿ ಬಾಧಿತ ಜನರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುವುದು" – ಶ್ರೀ ಶಿವರಾಜ್ ಸಿಂಗ್ ಚೌಹಾಣ್
Posted On:
07 OCT 2025 4:46PM by PIB Bengaluru
ಕೇಂದ್ರ ಕೃಷಿ, ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು, ಜಮ್ಮು ಮತ್ತು ಕಾಶ್ಮೀರದ ಪ್ರವಾಹ ಹಾಗೂ ಭೂಕುಸಿತದಿಂದ ಸಂತ್ರಸ್ತರಾದ ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿ.ಎಂ.-ಕಿಸಾನ್) ಯೋಜನೆಯ 21ನೇ ಕಂತನ್ನು ಮುಂಗಡವಾಗಿ ಬಿಡುಗಡೆ ಮಾಡಿದರು. ನವದೆಹಲಿಯ ಕೃಷಿ ಭವನದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ಕಂತನ್ನು ಬಿಡುಗಡೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್, ಕೃಷಿ ಕಾರ್ಯದರ್ಶಿ ಡಾ. ದೇವೇಶ್ ಚತುರ್ವೇದಿ, ಐಸಿಎಆರ್ ಮಹಾನಿರ್ದೇಶಕ ಡಾ. ಮಾಂಗಿ ಲಾಲ್ ಜಾಟ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಜಮ್ಮು ಮತ್ತು ಕಾಶ್ಮೀರದ ಕೃಷಿ ಸಚಿವರಾದ ಶ್ರೀ ಜಾವೇದ್ ಅಹ್ಮದ್ ದಾರ್, ಇತರ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ರೈತರು ವರ್ಚುವಲ್ ಮಾಧ್ಯಮದ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಕಂತಿನ ಅಡಿಯಲ್ಲಿ, 85,418 ಮಹಿಳಾ ರೈತರು ಸೇರಿದಂತೆ ಒಟ್ಟು 8.55 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ₹171 ಕೋಟಿ ರೂಪಾಯಿಗಳನ್ನು ನೇರವಾಗಿ ವರ್ಗಾಯಿಸಲಾಗಿದೆ. ಇದರೊಂದಿಗೆ, ಜಮ್ಮು ಮತ್ತು ಕಾಶ್ಮೀರದ ರೈತರು ಪಿ.ಎಂ.-ಕಿಸಾನ್ ಯೋಜನೆಯಡಿ ಇಲ್ಲಿಯವರೆಗೆ ಒಟ್ಟು ₹4,052 ಕೋಟಿಗಳ ನೆರವನ್ನು ಪಡೆದಂತಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, "ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ಬದಲ್ಲಿ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಹ ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ಸಂತ್ರಸ್ತರಾದ ರೈತರು ಹಾಗೂ ಜನರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ಯಾವುದೇ ರೈತರು ಒಂಟಿಯಾಗದಂತೆ ನಾವು ಖಚಿತಪಡಿಸುತ್ತೇವೆ. ಅವರ ತಕ್ಷಣದ ಅಗತ್ಯಗಳನ್ನು ಪೂರೈಸಲು ಈ ಪಿ.ಎಂ.-ಕಿಸಾನ್ ಕಂತಿನ ಬಿಡುಗಡೆಯು ಒಂದು ಮಹತ್ವದ ಹೆಜ್ಜೆಯಾಗಿದೆ," ಎಂದು ಹೇಳಿದರು.

ಹಲವಾರು ಯೋಜನೆಗಳು ಮತ್ತು ಪರಿಹಾರ ಕ್ರಮಗಳ ಮೂಲಕ ಕೇಂದ್ರ ಸರ್ಕಾರವು ಸಾಧ್ಯವಿರುವ ಎಲ್ಲಾ ಬೆಂಬಲವನ್ನು ನೀಡುತ್ತಿದೆ ಮತ್ತು ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಹೆಚ್ಚಿನ ನೆರವನ್ನು ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸರ್ಕಾರದ ಪುನರ್ವಸತಿ ಕ್ರಮಗಳನ್ನು ಪ್ರಸ್ತಾಪಿಸಿದ ಶ್ರೀ ಚೌಹಾಣ್ ಅವರು, ಜಮ್ಮು ಮತ್ತು ಕಾಶ್ಮೀರ ಸರ್ಕಾರ ವರದಿ ಮಾಡಿದಂತೆ, ಹಾನಿಗೊಳಗಾದ ಸುಮಾರು 5,100 ಮನೆಗಳ ಪುನರ್ನಿರ್ಮಾಣಕ್ಕಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (PMAY-G) ಅಡಿಯಲ್ಲಿ ₹85.62 ಕೋಟಿಗಳನ್ನು ಮಂಜೂರು ಮಾಡಿದೆ ಎಂದು ಹೇಳಿದರು. ಈ ಪ್ಯಾಕೇಜ್ ಶೌಚಾಲಯ ನಿರ್ಮಾಣಕ್ಕೆ ಆರ್ಥಿಕ ನೆರವು ಮತ್ತು MGNREGA ಅಡಿಯಲ್ಲಿ ಹೆಚ್ಚುವರಿ ನಿಧಿಯನ್ನು ಒಳಗೊಂಡಿದ್ದು, ಇದು ಕುಟುಂಬಗಳಿಗೆ ತಮ್ಮ ಮನೆಗಳನ್ನು ಪುನರ್ನಿರ್ಮಿಸಲು ಅನುವು ಮಾಡಿಕೊಡುತ್ತದೆ.
ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಪ್ರಸ್ತಾವನೆ ಬಂದ ನಂತರ, ಸಂತ್ರಸ್ತ ಕುಟುಂಬಗಳಿಗೆ MGNREGA ಉದ್ಯೋಗ ದಿನಗಳನ್ನು 100 ರಿಂದ 150 ದಿನಗಳಿಗೆ ಹೆಚ್ಚಿಸಲಾಗುವುದು ಎಂದು ಶ್ರೀ ಚೌಹಾಣ್ ಅವರು ಘೋಷಿಸಿದರು. ಇದು ಅವರಿಗೆ ಹೆಚ್ಚುವರಿ ಜೀವನೋಪಾಯದ ಬೆಂಬಲವನ್ನು ನೀಡುತ್ತದೆ.
ಕೃಷಿ ಚಟುವಟಿಕೆಗಳ ಪುನಶ್ಚೇತನಕ್ಕೆ ಬೆಂಬಲ ನೀಡಲು ಕೇಂದ್ರವು ಸಂಪೂರ್ಣ ಸಿದ್ಧವಾಗಿದೆ ಎಂದು ಕೇಂದ್ರ ಕೃಷಿ ಸಚಿವರು ಭರವಸೆ ನೀಡಿದರು. ಇದರಲ್ಲಿ ಬೀಜಗಳು, ರಸಗೊಬ್ಬರಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸುವುದು ಸೇರಿದೆ. 'ಜಿಸ್ಕಾ ಖೇತ್, ಉಸ್ಕಿ ರೇತ್' (ಯಾರ ಹೊಲವೋ, ಅವರದ್ದೇ ಮರಳು) ನೀತಿಯಡಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಮರಳು ಮಾರಾಟಕ್ಕೆ ಅನುಮತಿ ನೀಡಿದೆ ಎಂದು ಅವರು ಉಲ್ಲೇಖಿಸಿದರು. ಅಲ್ಲದೆ, ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಮನವಿಯನ್ನು ಅವಲಂಬಿಸಿ, NDRF ಅಡಿಯಲ್ಲಿ ಹೆಚ್ಚುವರಿ ನಿಧಿಯನ್ನು ಬಿಡುಗಡೆ ಮಾಡಬಹುದು ಎಂದು ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಪ್ರಸ್ತಾವನೆಯನ್ನು ಸಲ್ಲಿಸಿದ ತಕ್ಷಣ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ ವಿಮೆ ಮಾಡಿಸಿದ ರೈತರಿಗೆ ಪರಿಹಾರವನ್ನು ಒದಗಿಸಲಾಗುವುದು. ಈ ಪರಿಹಾರದ ಹಣವನ್ನು ನೇರವಾಗಿ ಸಂತ್ರಸ್ತ ರೈತರ ಖಾತೆಗಳಿಗೆ ವರ್ಗಾಯಿಸಲಾಗುವುದು ಎಂದು ಶ್ರೀ ಚೌಹಾಣ್ ಅವರು ತಿಳಿಸಿದರು.
ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಮತ್ತು ಜಮ್ಮು ಮತ್ತು ಕಾಶ್ಮೀರದ ಕೃಷಿ ಸಚಿವರಾದ ಶ್ರೀ ಜಾವೇದ್ ಅಹ್ಮದ್ ದಾರ್ ಅವರೂ ಸಹ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರದ ಸಮಯೋಚಿತ ಮಧ್ಯಪ್ರವೇಶಕ್ಕೆ ಕೃತಜ್ಞತೆ ಸಲ್ಲಿಸಿದರು. ಇತ್ತೀಚೆಗೆ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಹಾರ ಮತ್ತು ಪುನರ್ವಸತಿಯನ್ನು ಖಚಿತಪಡಿಸುವಲ್ಲಿ ಪೂರ್ವಭಾವಿಯಾಗಿ ಕ್ರಮ ಕೈಗೊಂಡಿದ್ದಕ್ಕಾಗಿ ಅವರು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಧನ್ಯವಾದ ಅರ್ಪಿಸಿದರು.
****
(Release ID: 2175962)
Visitor Counter : 7