ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಗ್ರಾಹಕರಿಗೆ ಜಿ.ಎಸ್‌.ಟಿ ದರ ಕಡಿತದ ಲಾಭ ತಲುಪುವುದನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ಉದ್ಯಮದ ಮೇಲಿನ ನಿಯಮ ಅನುಸರಣೆ ಹೊರೆ ಸರ್ಕಾರದಿಂದ ಸಡಿಲ


ಕಾನೂನು ಮಾಪನಶಾಸ್ತ್ರ ನಿಯಮಗಳಲ್ಲಿ ಸಡಿಲಿಕೆ : ಪರಿಷ್ಕೃತ ಗರಿಷ್ಠ ಚಿಲ್ಲರೆ ದರ (MRP) ಗೆ ಪತ್ರಿಕಾ ಪ್ರಕಟಣೆ ಅಗತ್ಯವಿಲ್ಲ

ಮಾರ್ಪಡಿಸಿದ ಸೂಕ್ತ ಬೆಲೆಯೊಂದಿಗೆ ಮಾರ್ಚ್ 2026 ರವರೆಗೆ ಹಳೆಯ ಪ್ಯಾಕೇಜಿಂಗ್ ಬಳಕೆಗೆ ಅವಕಾಶ

Posted On: 18 SEP 2025 6:35PM by PIB Bengaluru

ಜಿ.ಎಸ್‌.ಟಿ ದರಗಳು 2025ರ ಸೆಪ್ಟೆಂಬರ್ 22 ರಿಂದ ಪರಿಷ್ಕರಣೆಗೊಳ್ಳಲಿರುವ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಗ್ರಾಹಕ ವ್ಯವಹಾರಗಳ ಇಲಾಖೆಯು ಪರಿಷ್ಕೃತ ಸಲಹಾ ಸೂಚನೆಯನ್ನು ನೀಡಿದೆ. ಕಾನೂನು ಮಾಪನಶಾಸ್ತ್ರ (ಪ್ಯಾಕ್ ಮಾಡಿದ ಸರಕುಗಳು) ನಿಯಮಗಳು, 2011ರ ನಿಯಮ 33ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರದನ್ವಯ ಕೇಂದ್ರ ಸರ್ಕಾರವು ಕಡಿತಗೊಂಡ ಜಿ.ಎಸ್‌.ಟಿ ದರದ ಲಾಭವು ಗ್ರಾಹಕರಿಗೆ ದೊರೆಯುವುದನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ಉದ್ಯಮಗಳ ಅನುಸರಣೆ ಹೊರೆಯನ್ನು ತಗ್ಗಿಸಲು ಸಡಿಲಿಕೆಗಳನ್ನು ನೀಡಿದೆ.

2025ರ ಸೆಪ್ಟೆಂಬರ್ 22ಕ್ಕೂ ಮೊದಲೇ ಉತ್ಪಾದನೆಯಾಗಿರುವ ಮಾರಾಟವಾಗದ ಪ್ಯಾಕ್‌ ಗಳ ಮೇಲೆ ಪರಿಷ್ಕೃತ ದರದ ಸ್ಟಿಕರ್‌ ಗಳನ್ನು ತಯಾರಕರು, ಪ್ಯಾಕರ್‌ ಗಳು ಮತ್ತು ಆಮದುದಾರರು ಸ್ವಯಂಪ್ರೇರಣೆಯಿಂದ ಅಂಟಿಸಬಹುದು, ಆದರೆ ಪ್ಯಾಕ್‌ ಗಳಲ್ಲಿ ಮುದ್ರಿಸಲಾದ ಮೂಲ ಗರಿಷ್ಠ ಚಿಲ್ಲರೆ ದರ (MRP) ಅಸ್ಪಷ್ಟವಾಗಿರಬಾರದು ಎಂದು ಪರಿಷ್ಕೃತ ಸಲಹಾಸೂಚಿ ತಿಳಿಸಿದೆ. ಪರಿಷ್ಕೃತ ದರಗಳ ಚೀಟಿಯನ್ನು ಅಂಟಿಸುವುದನ್ನು ಕಡ್ಡಾಯಗೊಳಿಸಲಾಗಿಲ್ಲ; ಪರಿಷ್ಕೃತ ಬೆಲೆಗಳನ್ನು ನಮೂದು ಮಾಡುವುದು ಕಂಪನಿಗಳಿಗೆ ಐಚ್ಛಿಕವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಅಲ್ಲದೇ, ನಿಯಮ 18(3) ರನ್ವಯ ಪರಿಷ್ಕೃತ MRP ಯನ್ನು ಎರಡು ಪತ್ರಿಕೆಗಳಲ್ಲಿ ಪ್ರಕಟಿಸುವುದರಿಂದ ವಿನಾಯಿತಿ ನೀಡಲಾಗಿದೆ. ಬದಲಿಗೆ, ತಯಾರಕರು ಮತ್ತು ಆಮದುದಾರರು ಪರಿಷ್ಕೃತ ದರ ಪಟ್ಟಿಯನ್ನು ಈಗ ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ನೀಡುವ ಜೊತೆಗೆ ಅದರ ಪ್ರತಿಯನ್ನು ಕೇಂದ್ರ ಸರ್ಕಾರದ ಕಾನೂನು ಮಾಪನಶಾಸ್ತ್ರ ನಿರ್ದೇಶಕರು ಹಾಗೂ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಕಾನೂನು ಮಾಪನಶಾಸ್ತ್ರ ನಿಯಂತ್ರಕರಿಗೆ ಒದಗಿಸಬೇಕಾಗುತ್ತದೆ. ಇದು ಅನುಸರಣೆಯನ್ನು ಸರಳಗೊಳಿಸಲಿದೆ ಮತ್ತು ಉದ್ಯಮಗಳ ಕಾರ್ಯವಿಧಾನದ ಹೊರೆಯನ್ನು ತಗ್ಗಿಸಲಿದೆ.

ಈ ಸಲಹಾಸೂಚಿಯನ್ವಯ ಜಿ.ಎಸ್‌.ಟಿ ದರ ಪರಿಷ್ಕರಣೆಗೂ ಮುನ್ನ ಮುದ್ರಿತವಾದ ಹಳೆಯ ಪ್ಯಾಕೇಜಿಂಗ್ ಸಾಮಗ್ರಿಗಳು ಅಥವಾ ವ್ರಾಪರ್ ಗಳನ್ನು 2026ರ ಮಾರ್ಚ್ 31 ರವರೆಗೆ ಅಥವಾ ದಾಸ್ತಾನು ಖಾಲಿಯಾಗುವವರೆಗೆ, ಯಾವುದು ಮೊದಲೋ ಅಲ್ಲಿಯವರೆಗೆ ಬಳಸಲು ಅವಕಾಶವಿದೆ. ಅಂತಹ ಸರಕುಗಳಲ್ಲಿ ಕಂಪನಿಗಳು ಪ್ಯಾಕ್‌ ಗಳ ಮೇಲೆ ಯಾವುದೇ ಸೂಕ್ತ ಸ್ಥಳದಲ್ಲಿ ಸ್ಟ್ಯಾಂಪಿಂಗ್, ಸ್ಟಿಕ್ಕರ್ ಅಥವಾ ಆನ್ಲೈನ್ ಮುದ್ರಣದ ಮೂಲಕ ಪರಿಷ್ಕೃತ MRP ದರ ನೀಡಬಹುದಾಗಿದೆ. 

ಇದಲ್ಲದೆ, ಪರಿಷ್ಕೃತ ಜಿ.ಎಸ್‌.ಟಿ ದರಗಳ ಬಗ್ಗೆ ವಿತರಕರು, ಚಿಲ್ಲರೆ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಅರಿವು ಮೂಡಿಸಲು ತಯಾರಕರು, ಪ್ಯಾಕರ್‌ ಗಳು ಮತ್ತು ಆಮದುದಾರರು ಸಕ್ರಿಯ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರ ಸೂಚಿಸಿದೆ. ಗ್ರಾಹಕರ ಜಾಗೃತಿಯನ್ನು ಖಚಿತಪಡಿಸಿಕೊಳ್ಳಲು ಎಲೆಕ್ಟ್ರಾನಿಕ್, ಮುದ್ರಣ, ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲಾ ಸಂಭಾವ್ಯ ಸಂವಹನ ವಿಧಾನಗಳನ್ನು ಬಳಸಲು ಪ್ರೋತ್ಸಾಹ ನೀಡಲಾಗಿದೆ.

ಈ ಕ್ರಮದಿಂದಾಗಿ ಸುಲಲಿತ ವ್ಯವಹಾರ ಮತ್ತು ಗ್ರಾಹಕರ ರಕ್ಷಣೆಯ ನಡುವೆ  ಸಮತೋಲನ ಸಾಧಿಸಬಹುದಾಗಿದೆ. ಇದು, ಜಿ.ಎಸ್‌.ಟಿ ದರ ಕಡಿತದ ಉದ್ದೇಶಿತ ಅನುಕೂಲವನ್ನು ಗ್ರಾಹಕರು ಪಡೆಯುವುದನ್ನು ಖಚಿತಪಡಿಸುವ ಜೊತೆಗೆ ಕೈಗಾರಿಕೆಗಳ ಮೇಲೆ ಅನುಸರಣೆಯ ಹೊರೆ ಹೇರದಿರುವುದನ್ನೂ ಖಾತರಿಪಡಿಸಲಿದೆ

****


(Release ID: 2168278)
Read this release in: English , Urdu , Marathi , Hindi