ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಭಾರತದ ಲಾಜಿಸ್ಟಿಕ್ಸ್‌ ಮತ್ತು ಸಾರಿಗೆ ವಲಯದಲ್ಲಿ ಡಿಜಿಟಲ್‌ ಕೌಶಲ್ಯ ವೃತ್ತಿಪರರಿಗೆ ಅಂಕಿತ ಹಾಕಿದ ಗತಿ ಶಕ್ತಿ ವಿಶ್ವವಿದ್ಯಾಲಯ ಮತ್ತು ಎಸ್‌.ಎ.ಪಿ


ಬೆಂಗಳೂರಿನಲ್ಲಿ ಎಸ್‌.ಎ.ಪಿ ಲ್ಯಾಬ್ಸ್‌ ಇಂಡಿಯಾ ಇನ್ನೋವೇಶನ್‌ ಪಾರ್ಕ್‌ ಉದ್ಘಾಟನೆ, 15,000 ಉದ್ಯೋಗ ಸೃಷ್ಟಿ

ಎಸ್‌.ಎ.ಪಿಯ ಹೊಸ ಕ್ಯಾಂಪಸ್‌ ಭಾರತದ ಪ್ರತಿಭೆ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯಲ್ಲಿ ಜಾಗತಿಕ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ: ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್‌

ಪ್ರತಿ ವಿದ್ಯಾರ್ಥಿ, ಸಂಶೋಧಕರು ಮತ್ತು ಕಾಲೇಜು ಸ್ಟಾರ್ಟ್‌ಅಪ್‌ಗಳಿಗೆ ಲಭ್ಯವಿರುವ 34,000 ಜಿ.ಪಿ.ಯುಗಳು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಕಂಪ್ಯೂಟಿಂಗ್‌ ಪರ್ವ ಅನ್ನು ಪ್ರಜಾಪ್ರಭುತ್ವಗೊಳಿಸುತ್ತಿವೆ: ಅಶ್ವಿನಿ ವೈಷ್ಣವ್‌

Posted On: 05 AUG 2025 6:28PM by PIB Bengaluru

ಡಿಜಿಟಲ್‌ ಇಂಡಿಯಾ, ಸ್ಕಿಲ್‌ ಇಂಡಿಯಾ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸುಸ್ಥಿರ ಮೂಲಸೌಕರ್ಯದ ಪ್ರಗತಿಗಾಗಿ ಭಾರತ ಸರ್ಕಾರದ ದೃಷ್ಟಿಕೋನಕ್ಕೆ ಅನುಗುಣವಾಗಿ, ಎಸ್‌.ಎ.ಪಿ ಲ್ಯಾಬ್ಸ್‌ ಇಂಡಿಯಾ ಕರ್ನಾಟಕದ ಬೆಂಗಳೂರಿನ ದೇವನಹಳ್ಳಿಯಲ್ಲಿ ತನ್ನ ಅತ್ಯಾಧುನಿಕ ಇನ್ನೋವೇಶನ್‌ ಪಾರ್ಕ್‌ಅನ್ನು ಉದ್ಘಾಟಿಸಿದೆ. ಈ ಮಹತ್ವದ ಮೈಲಿಗಲ್ಲು ಭಾರತದ ಡಿಜಿಟಲ್‌ ಭವಿಷ್ಯದಲ್ಲಿಎಸ್‌.ಎ.ಪಿಯ ನಿರಂತರ ಹೂಡಿಕೆಯನ್ನು ಗುರುತಿಸುವುದಲ್ಲದೆ, ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯತೆ ಕೇಂದ್ರವಾಗಿ ದೇಶದ ಸ್ಥಾನವನ್ನು ಬಲಪಡಿಸುತ್ತದೆ.

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೆ, ಮಾಹಿತಿ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್‌, ಬೆಂಗಳೂರಿನ ಎಸ್‌.ಎ.ಪಿ ಲ್ಯಾಬ್ಸ್‌ ಇಂಡಿಯಾ ಇನ್ನೋವೇಶನ್‌ ಪಾರ್ಕ್‌ ಭಾರತದ ಬೆಳವಣಿಗೆಯ ಕಥೆಯಲ್ಲಿ ಸಮಯೋಚಿತ ಹೂಡಿಕೆಯಾಗಿದೆ. ಇದು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ ಅಟ್‌ 2047’ ದೃಷ್ಟಿಕೋನದಲ್ಲಿ ನೆಲೆಗೊಂಡಿದೆ. ಈ ಕ್ಯಾಂಪಸ್‌ ಭಾರತದ ಪ್ರತಿಭೆ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯಲ್ಲಿ ಜಾಗತಿಕ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಇದು ವಿಶ್ವಾಸಾರ್ಹ ತಂತ್ರಜ್ಞಾನ ಪಾಲುದಾರನಾಗಿ ಭಾರತದ ಸ್ಥಾನವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಭೌಗೋಳಿಕ ರಾಜಕೀಯ, ಭೂ ಅರ್ಥಶಾಸ್ತ್ರ ಮತ್ತು ಭೂ ತಂತ್ರಜ್ಞಾನ ಎಲ್ಲವೂ ತ್ವರಿತ ಬದಲಾವಣೆಗೆ ಒಳಗಾಗುತ್ತಿವೆ ಎಂದು ಕೇಂದ್ರ ಸಚಿವರು ಹೇಳಿದರು. ಈ ಪರಿವರ್ತನಾತ್ಮಕ ಅವಧಿಯಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸ್ಥಿರ ಮತ್ತು ಬುದ್ಧಿವಂತ ನಾಯಕತ್ವವನ್ನು ಹೊಂದಲು ಭಾರತ ಅದೃಷ್ಟಶಾಲಿಯಾಗಿದೆ. ಕಳೆದ 11 ವರ್ಷಗಳಲ್ಲಿ, ಅವರ ನಾಯಕತ್ವವು ಸವಾಲುಗಳ ಮೂಲಕ ಮತ್ತು ಪ್ರಗತಿಯ ಹೊಸ ಯುಗಕ್ಕೆ ರಾಷ್ಟ್ರಕ್ಕೆ ಮಾರ್ಗದರ್ಶನ ನೀಡಿದ್ದಕ್ಕಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿದೆ.

11 ವರ್ಷಗಳ ಹಿಂದೆ ವಿಶ್ವದ 11 ನೇ ಅತಿದೊಡ್ಡ ಆರ್ಥಿಕತೆಯಾಗಿದ್ದ ಭಾರತವು ಈಗ ಶೀಘ್ರದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ. ಕಳೆದ 11 ವರ್ಷಗಳಲ್ಲಿ ಎಲೆಕ್ಟ್ರಾನಿಕ್ಸ್‌ ರಫ್ತು 8 ಪಟ್ಟು ಹೆಚ್ಚಾಗಿದೆ. ಶೀಘ್ರದಲ್ಲೇ, ನಾವು ಮೊದಲ ಮೇಡ್‌ ಇನ್‌ ಇಂಡಿಯಾ ಚಿಪ್‌ ಉತ್ಪಾದನೆಯನ್ನು ಪ್ರಾರಂಭಿಸುತ್ತೇವೆ. ಬುಲೆಟ್‌ ರೈಲು 0-100 ಕಿ.ಮೀ ವೇಗವನ್ನು 54 ಸೆಕೆಂಡುಗಳಲ್ಲಿ ಕ್ರಮಿಸಿದರೆ, ವಂದೇ ಭಾರತ್‌ ಅದನ್ನು 52 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ  ಎಂದು ಸಚಿವರು ರೈಲ್ವೆಯಲ್ಲಿ ತಾಂತ್ರಿಕ ಪ್ರಗತಿಯನ್ನು ಬಂಬಿಸಿದರು.

ಭಾರತದಲ್ಲಿ ನಾವು ಕಂಪ್ಯೂಟಿಂಗ್‌ ಶಕ್ತಿಯ ಪ್ರವೇಶವನ್ನು ಪ್ರಜಾಪ್ರಭುತ್ವಗೊಳಿಸಲು ನಿರ್ಧರಿಸಿದ್ದೇವೆ ಮತ್ತು ಬಹಳ ಆಸಕ್ತಿದಾಯಕ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಾವು ಇಂದು 34,000ಕ್ಕೂ ಅಧಿಕ ಜಿ.ಪಿ.ಯುಗಳನ್ನು ಎಂಪಾನೆಲ್‌ ಮಾಡಿದ್ದೇವೆ, ಇದು ಪ್ರತಿ ವಿದ್ಯಾರ್ಥಿ, ಸಂಶೋಧಕರು ಮತ್ತು ಕಾಲೇಜು ಸ್ಟಾರ್ಟ್‌ಅಪ್‌ಗಳಿಗೆ ಲಭ್ಯವಿದೆ ಎಂದು ಕೇಂದ್ರ ಸಚಿವರು ಹೇಳಿದರು.

41.07 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಹೊಸ ಇನ್ನೋವೇಶನ್‌ ಪಾರ್ಕ್‌ ಜಾಗತಿಕವಾಗಿ ಎಸ್‌.ಎ.ಪಿಯ ಅತ್ಯಂತ ಸುಧಾರಿತ ಮತ್ತು ಸುಸ್ಥಿರ ಸೌಲಭ್ಯವಾಗಲು ಸಜ್ಜಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಆಯಕಟ್ಟಿನ ಸ್ಥಳದಲ್ಲಿರುವ ಈ ಕ್ಯಾಂಪಸ್‌ ಭಾರತ ಮತ್ತು ವಿಶಾಲ ಏಷ್ಯಾ-ಪೆಸಿಫಿಕ್‌ ಪ್ರದೇಶದ ಪ್ರಮುಖ ನಾವೀನ್ಯತೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗಿ ರೂಪುಗೊಂಡಿದೆ. ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದ ನಂತರ, ಇದು 15,000 ವೃತ್ತಿಪರರನ್ನು ಹೊಂದಿರುತ್ತದೆ, ಇದು ಭಾರತದಲ್ಲಿ ಎಸ್‌.ಎ.ಪಿಯ ಅತಿದೊಡ್ಡ ಕಚೇರಿಯಾಗಿದೆ ಮತ್ತು ಉತ್ಪನ್ನ ಎಂಜಿನಿಯರಿಂಗ್‌ ಮತ್ತು ಗ್ರಾಹಕ ಸೇವೆಗಳು ಮತ್ತು ವಿತರಣೆಯಲ್ಲಿ ಜಾಗತಿಕ ಎ.ಐ. ಪಾತ್ರಗಳನ್ನು ನಿರೂಪಿಸುತ್ತದೆ. ಈ ಸೌಲಭ್ಯವು ಜೂಲ್‌ನ ಏಜೆಂಟ್‌ ಎ.ಐ. ಸಾಮರ್ಥ್ಯ‌ಗಳ ಅಭಿವೃದ್ಧಿಗೆ ಕಾರಣವಾಗುತ್ತದೆ, ಎ.ಐ. ನಾವೀನ್ಯತೆಯಲ್ಲಿ ಭಾರತದ ಬೆಳೆಯುತ್ತಿರುವ ಪಾತ್ರವನ್ನು ಬಲಪಡಿಸುತ್ತದೆ. ಭವಿಷ್ಯಕ್ಕೆ ಸಿದ್ಧವಾದ ಸೌಲಭ್ಯವಾಗಿ, ಕ್ಯಾಂಪಸ್‌ ಗ್ರಾಹಕ ಅನುಭವ ಕೇಂದ್ರ, ಹೈಬ್ರಿಡ್‌ ಸಹಯೋಗ ವಲಯಗಳು, ಎ.ಐ. ಪ್ರಯೋಗಾಲಯಗಳು, ಸ್ಟಾರ್ಟ್‌-ಅಪ್‌ ಇನ್ಕ್ಯುಬೇಷನ್‌ ಹಬ್‌ಗಳು ಮತ್ತು ಹ್ಯಾಕಥಾನ್‌ ಸ್ಥಳಗಳನ್ನು ಸಹ ಒಳಗೊಂಡಿರುತ್ತದೆ.

ಎಸ್‌.ಎ.ಪಿ ಲ್ಯಾಬ್ಸ್‌ ಇಂಡಿಯಾ ಇನ್ನೋವೇಶನ್‌ ಪಾರ್ಕ್‌ ಸಂದರ್ಭದಲ್ಲಿ ಗತಿ ಶಕ್ತಿ ವಿಶ್ವವಿದ್ಯಾಲಯ(ಜಿ.ಎಸ್‌.ವಿ)ದೊಂದಿಗೆ ತಿಳುವಳಿಕಾ ಒಡಂಬಡಿಕೆ

ಶೈಕ್ಷಣಿಕ-ಉದ್ಯಮ ಏಕೀಕರಣದ ಮಹತ್ವದ ಹೆಜ್ಜೆಯಾಗಿ, ಎಸ್‌.ಎ.ಪಿ ಮತ್ತು ಗತಿ ಶಕ್ತಿ ವಿಶ್ವವಿದ್ಯಾಲಯ (ಜಿ.ಎಸ್‌.ವಿ) ಉದ್ಘಾಟನೆಯ ಸಮಯದಲ್ಲಿ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದವು. ಈ ಕಾರ್ಯತಂತ್ರದ ಮೈತ್ರಿಯು ಸರ್ಕಾರದ ಸ್ಕಿಲ್‌ ಇಂಡಿಯಾ ಮಿಷನ್‌ಗೆ ಅರ್ಥಪೂರ್ಣವಾಗಿ ಕೊಡುಗೆ ನೀಡುತ್ತದೆ. ಭಾರತದ ಲಾಜಿಸ್ಟಿಕ್ಸ್‌ ಮತ್ತು ಸಾರಿಗೆ ವಲಯವನ್ನು ಡಿಜಿಟಲ್‌ ನುರಿತ ವೃತ್ತಿಪರರೊಂದಿಗೆ ಸಬಲೀಕರಣಗೊಳಿಸುತ್ತದೆ.

ಈ ತಿಳಿವಳಿಕೆ ಒಪ್ಪಂದವು ಮೂರು ಪ್ರಮುಖ ಸ್ತಂಭಗಳ ಸುತ್ತ ರಚಿತವಾಗಿದೆ. ಮೊದಲನೆಯದಾಗಿ, ಉದ್ಯಮ-ಸಂಬಂಧಿತ ಕೌಶಲ್ಯಗಳ ಮೂಲಕ ಜಿ.ಎಸ್‌.ವಿ ತರಬೇತಿ ಪಡೆದ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ಉದ್ಯೋಗ ಶಕ್ತಗೊಳಿಸುವುದು. ಎರಡನೆಯದಾಗಿ, ನೈಜ-ಪ್ರಪಂಚದ ಅಗತ್ಯಗಳೊಂದಿಗೆ ಹೊಂದಾಣಿಕೆಯನ್ನು ಖಚಿತಪಡಿಸಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಸರ್ಕಾರಿ ವೃತ್ತಿಪರರಿಗೆ ಪಠ್ಯಕ್ರಮ ವರ್ಧನೆ ಮತ್ತು ಸಾಮರ್ಥ್ಯ‌ ವರ್ಧನೆ. ಕೊನೆಯದಾಗಿ, ರಾಷ್ಟ್ರೀಯ ಲಾಜಿಸ್ಟಿಕ್ಸ್‌ ಸಾಮರ್ಥ್ಯ‌ಗಳನ್ನು ಹೆಚ್ಚಿಸಲು ಸಂಶೋಧನೆ, ಅಭಿವೃದ್ಧಿ ಮತ್ತು ಉದ್ಯೋಗಕ್ಕಾಗಿ ಉದ್ಯಮ ಸಂಪರ್ಕಗಳು. ಈ ಪ್ರವರ್ತಕ ಸಹಯೋಗವು ಮಾದರಿ ಸರ್ಕಾರ-ಉದ್ಯಮ ಪಾಲುದಾರಿಕೆಯನ್ನು ಪ್ರತಿನಿಧಿಸುತ್ತದೆ, ಇದು ಜ್ಞಾನ ವರ್ಗಾವಣೆ, ಜಂಟಿ ನಾವೀನ್ಯತೆ ಮತ್ತು ನೇರ ಕಲಿಕೆಯನ್ನು ಶಕ್ತಗೊಳಿಸುತ್ತದೆ. ಜಿ.ಎಸ್‌.ವಿಯ ಪಠ್ಯಕ್ರಮದಲ್ಲಿ ಡಿಜಿಟಲ್‌ ಲಾಜಿಸ್ಟಿಕ್ಸ್‌ ಉಪಕರಣಗಳು ಮತ್ತು ಎಸ್‌.ಎ.ಪಿ ಪರಿಹಾರಗಳನ್ನು ಎಂಬೆಡ್‌ ಮಾಡುವ ಮೂಲಕ, ಸಹಭಾಗಿತ್ವವು ಭಾರತದ ವೇಗವಾಗಿ ವಿಕಸನಗೊಳ್ಳುತ್ತಿರುವ ಲಾಜಿಸ್ಟಿಕ್ಸ್‌ ಪರಿಸರ ವ್ಯವಸ್ಥೆಯ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸುವ ಭವಿಷ್ಯಕ್ಕೆ ಸಿದ್ಧವಾದ ಕಾರ್ಯಪಡೆಯನ್ನು ರಚಿಸುವ ಗುರಿಯನ್ನು ಹೊಂದಿದೆ.

ನಾವೀನ್ಯತೆ, ಸುಸ್ಥಿರತೆ ಮತ್ತು ಕೌಶಲ್ಯದ ಮೇಲೆ ಆಳವಾದ ಗಮನವನ್ನು ಕೇಂದ್ರೀಕರಿಸುವುದರೊಂದಿಗೆ, ಎಸ್‌.ಎ.ಪಿ ಲ್ಯಾಬ್ಸ್‌ ಇಂಡಿಯಾ ಇನ್ನೋವೇಶನ್‌ ಪಾರ್ಕ್‌ ಡಿಜಿಟಲ್‌ ಇಂಡಿಯಾದ ಅನೇಕ ಮೈಲಿಗಲ್ಲುಗಳಲ್ಲಿ ಒಂದಾಗಿದೆ. ಇದು ತಂತ್ರಜ್ಞಾನ, ಎ.ಐ
 ಮತ್ತು ಡಿಜಿಟಲ್‌ ಲಾಜಿಸ್ಟಿಕ್ಸ್‌ನಲ್ಲಿ ಜಾಗತಿಕ ನಾಯಕನಾಗುವ ಭಾರತದ ಪ್ರಯಾಣದಲ್ಲಿ ಭರವಸೆಯ ಮುನ್ನಡೆಯನ್ನು ಸೂಚಿಸುತ್ತದೆ - ಅದೇ ಸಮಯದಲ್ಲಿಯುವಕರು, ಉದ್ಯಮ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ.

ಕರ್ನಾಟಕದ ಮುಖ್ಯಮಂತ್ರಿ ಶ್ರಿ ಸಿದ್ದರಾಮಯ್ಯ, ಕರ್ನಾಟಕದ ಐ.ಟಿ. ಸಚಿವ ಶ್ರೀ ಪ್ರಿಯಾಂಕ್‌ ಖರ್ಗೆ, ಭಾರತದಲ್ಲಿನ ಜರ್ಮನಿಯ ರಾಯಭಾರಿ ಡಾ. ಫಿಲಿಪ್‌ ಆಕರ್ಮ್ಯಾನ್‌ ಮತ್ತು ಎಸ್‌.ಎ.ಪಿ ಲ್ಯಾಬ್ಸ್‌ ನೆಟ್‌ ವರ್ಕ್‌ ಮುಖ್ಯಸ್ಥ ಕ್ಲಾಸ್‌ ನ್ಯೂಮನ್‌ ಸೇರಿದಂತೆ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

*****
 


(Release ID: 2152808)