ರೈಲ್ವೇ ಸಚಿವಾಲಯ
ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಸಹಾಯಕ ಸಚಿವರಾದ ರವ್ನೀತ್ ಸಿಂಗ್ ಬಿಟ್ಟು ಅವರು ʻನಾಸಿಕ್-ತ್ರಯಂಬಕೇಶ್ವರ ಸಿಂಹಸ್ಥ-2027ʼ ರೈಲು ಯೋಜನೆಗಳನ್ನು ಪರಿಶೀಲಿಸಿದರು
ʻಸಿಂಹಸ್ಥ-2027ʼರ ಸಂದರ್ಭದಲ್ಲಿ ಪ್ರಯಾಣಿಕರ ಸೌಕರ್ಯಗಳಲ್ಲಿ ಮಹತ್ವದ ನವೀಕರಣಕ್ಕಾಗಿ ನಾಸಿಕ್, ದೇವ್ಲಾಲಿ, ಓಧಾ, ಖೇರ್ವಾಡಿ ಮತ್ತು ಕಸ್ಬೆ ಸುಕೆನೆ ಎಂಬ 5 ಪ್ರಮುಖ ನಿಲ್ದಾಣಗಳಲ್ಲಿ 1,011 ಕೋಟಿ ರೂ. ಹೂಡಿಕೆ
ಯಾತ್ರಾರ್ಥಿಗಳ ಸುಗಮ ಚಲನವಲನಕ್ಕಾಗಿ ರೈಲ್ವೆ ಸಚಿವಾಲಯವು ಕೃತಕ ಬುದ್ಧಿಮತ್ತೆ (ಎಐ) ಆಧರಿತ ಮೇಲ್ವಿಚಾರಣೆ ಮತ್ತು ನಿಯಂತ್ರಣವನ್ನು ಜಾರಿಗೆ ತರಲಿದೆ
ʻಮಹಾ ಕುಂಭ-2025ʼ ರಿಂದ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಒತ್ತು ನೀಡಲಾಗಿದೆ
Posted On:
25 JUL 2025 5:09PM by PIB Bengaluru
ಪ್ರಯಾಗ್ರಾಜ್ ಮಹಾ ಕುಂಭದಂತೆಯೇ, ರೈಲ್ವೆ ಸಚಿವಾಲಯವು 2027ರಲ್ಲಿ ನಡೆಯಲಿರುವ ನಾಸಿಕ್-ತ್ರಯಂಬಕೇಶ್ವರ ಸಿಂಹಸ್ಥಕ್ಕೆ ಮುಂಗಡ ಸಿದ್ಧತೆಗಳನ್ನು ಪ್ರಾರಂಭಿಸಿದೆ.
ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಸಹಾಯಕ ಸಚಿವರಾದ ಶ್ರೀ ರವ್ನೀತ್ ಸಿಂಗ್ ಬಿಟ್ಟು ಅವರು ಯೋಜನೆಗಳ ವ್ಯಾಪಕ ಪರಿಶೀಲನೆ ನಡೆಸಿದರು. ಸೆಂಟ್ರಲ್ ರೈಲ್ವೆಯ ಪ್ರಧಾನ ವ್ಯವಸ್ಥಾಪಕರು (ಜಿಎಂ), ಭೂಸಾವಲ್ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಡಿಆರ್‌ಎಂ) ಮತ್ತು ಇತರ ಅಧಿಕಾರಿಗಳು ಸಚಿವರು ಹಾಗೂ ರೈಲ್ವೆ ಮಂಡಳಿಗೆ ಯೋಜನೆ ಮತ್ತು ಅವುಗಳ ಅನುಷ್ಠಾನ ಸ್ಥಿತಿಗತಿಯ ಬಗ್ಗೆ ವಿವರಿಸಿದರು.

ಮೇಳ ಪ್ರದೇಶಕ್ಕೆ ಸಂಪರ್ಕವನ್ನು ಬಲಪಡಿಸುವುದು: ಸಿಂಹಸ್ಥಕ್ಕಾಗಿ ರೈಲ್ವೆಯು ಸಮಗ್ರ ಮೂಲಸೌಕರ್ಯ ಮತ್ತು ಕಾರ್ಯಾಚರಣೆಯ ನವೀಕರಣವನ್ನು ಕೈಗೊಳ್ಳಲಿದೆ. ಈ ಪ್ರದೇಶದಾದ್ಯಂತ ನಿಲ್ದಾಣಗಳ ಸಾಮರ್ಥ್ಯವನ್ನು ವಿಸ್ತರಿಸಲು ರೈಲ್ವೆಯು ಸಮಗ್ರ ಯೋಜನೆಯನ್ನು ಸಿದ್ಧಪಡಿಸಿದೆ. ʻನಾಸಿಕ್ ಸಿಂಹಸ್ಥ 2027ʼರ ಸಮಯದಲ್ಲಿ ಸುವ್ಯವಸ್ಥಿತ ಪ್ರಯಾಣಿಕರ ಸಂಚಾರವನ್ನು ಖಚಿತಪಡಿಸಿಕೊಳ್ಳುವುದು ಇದರ ಗುರಿಯಾಗಿದೆ.
ʻಮಹಾಕುಂಭ-2025ʼರ ಅನುಭವದಿಂದ ಹೊರಹೊಮ್ಮಿದ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಂತೆ ರೈಲ್ವೆ ಸಚಿವರು ಅಧಿಕಾರಿಗಳನ್ನು ಒತ್ತಾಯಿಸಿದರು. ನಾಸಿಕ್‌ನ ಹತ್ತಿರದ ಎಲ್ಲಾ ನಿಲ್ದಾಣಗಳಲ್ಲಿ ಸಾಕಷ್ಟು ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವಂತೆ ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು. ತಡೆರಹಿತ ಸಾರಿಗೆಗಾಗಿ ಸಾಕಷ್ಟು ನಿಲುಗಡೆ ಸಾಮರ್ಥ್ಯವನ್ನು ಹೊಂದುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಮೇಳ ಪ್ರದೇಶದ ಸುತ್ತಮುತ್ತಲಿನ 5 ಪ್ರಮುಖ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಅವುಗಳೆಂದರೆ ನಾಸಿಕ್ ರಸ್ತೆ, ದೇವ್ಲಾಲಿ, ಓಧಾ, ಖೇರ್ವಾಡಿ ಮತ್ತು ಕಸ್ಬೆ ಸುಕೆನೆ ನಿಲ್ದಾಣಗಳು.

ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದು, ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸುವುದು: ಗುರುತಿಸಲಾದ 5 ನಿಲ್ದಾಣಗಳಲ್ಲಿ ಪ್ರಸ್ತಾಪಿಸಲಾದ ಮೂಲಸೌಕರ್ಯ ಕಾರ್ಯಗಳು ಮತ್ತು ಪ್ರಯಾಣಿಕರ ಸೌಲಭ್ಯಗಳ ವಿವರಗಳನ್ನು ರೈಲ್ವೆ ಅಧಿಕಾರಿಗಳು ಹಂಚಿಕೊಂಡರು. ಈ ನಿಲ್ದಾಣಗಳಲ್ಲಿ ಯೋಜಿಸಲಾದ ಕಾಮಗಾರಿಗಳಿಗೆ 1,011 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ನಾಸಿಕ್ ರಸ್ತೆ: ಪ್ಲಾಟ್ ಫಾರ್ಮ್-4ರಲ್ಲಿ ದ್ವಿಮುಖ ಸಂಚಾರಕ್ಕೆ ಅನುವು ಮಾಡಲಾಗುವುದು. ಪ್ಲಾಟ್ ಫಾರ್ಮ್ -1 ಅನ್ನು 24 ಬೋಗಿಗಳ ರೈಲುಗಳಿಗೆ ಸ್ಥಳಾವಕಾಶ ಕಲ್ಪಿಸಲು ವಿಸ್ತರಿಸಲಾಗುವುದು. 12 ಮೀ ಅಗಲದ ಪಾದಾಚಾರಿ ಮೇಲ್ಸೇತುವೆ (ಎಫ್‌ಒಬಿ) ನಿರ್ಮಿಸಲಾಗುವುದು. ಗೂಡ್ಸ್‌ಶೆಡ್ ಅನ್ನು ಹೋಲ್ಡಿಂಗ್ ಏರಿಯಾ ಆಗಿ ಬಳಸಲು ಪ್ರಸ್ತಾಪಿಸಲಾಗಿದೆ.


ನಾಸಿಕ್ ರಸ್ತೆಯಲ್ಲಿ ಸ್ಟೆಬ್ಲಿಂಗ್ ಲೈನ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಪ್ಲಾಟ್‌ಫಾರ್ಮ್ ಮೇಲ್ಮೈ, ತಡೆ ಗೋಡೆ ಮತ್ತು ಮೇಳ ಗೋಪುರವನ್ನು ಸಹ ನವೀಕರಿಸಲಾಗುವುದು.
ದೇವ್ಲಾಲಿ: ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗುವುದು. 6 ಮೀ ಅಗಲದ ಎರಡು ಪಾದಾಚಾರಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗುವುದು. ಸುಧಾರಿತ ಕೋಚ್ ಮತ್ತು ವ್ಯಾಗನ್ ಪರೀಕ್ಷಾ ಸೌಲಭ್ಯಗಳನ್ನು (3 ಸ್ಟೆಬ್ಲಿಂಗ್ ಲೈನ್‌ಗಳು ಮತ್ತು 2 ಪಿಟ್ ಲೈನ್‌ಗಳೊಂದಿಗೆ) ನಿರ್ಮಿಸಲು ಯೋಜಿಸಲಾಗಿದೆ. ಒಳಚರಂಡಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.
ಓಧಾ: ಲೂಪ್ ಲೈನ್‌ಗಳನ್ನು ಹೊಂದಿರುವ ಐಲ್ಯಾಂಡ್ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗುವುದು. 6 ಮೀ ಅಗಲದ ನಾಲ್ಕು ಪಾದಾಚಾರಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗುವುದು. ದೀರ್ಘ-ದೂರದ ಲೂಪ್ ಲೈನ್ ಮತ್ತು ಯಾರ್ಡ್ ಮರುನಿರ್ಮಾಣವನ್ನು ಸಹ ಯೋಜಿಸಲಾಗಿದೆ. 5 ಸ್ಟೆಬ್ಲಿಂಗ್ ಲೈನ್‌ಗಳನ್ನು ನಿರ್ಮಿಸಲು ಪ್ರಸ್ತಾಪಿಸಲಾಗಿದೆ.
ಖೇರ್ವಾಡಿ: ಹೊಸ ಡೌನ್ ಪ್ಲಾಟ್ ಫಾರ್ಮ್ ನಿರ್ಮಿಸಲಾಗುವುದು. 6 ಮೀ ಅಗಲದ ಎರಡು ಎಫ್ ಒಬಿಗಳನ್ನು ನಿರ್ಮಿಸಲಾಗುವುದು. ಯಾರ್ಡ್ ಮರುನಿರ್ಮಾಣವನ್ನು ಸಹ ಕೈಗೊಳ್ಳಲು ಪ್ರಸ್ತಾಪಿಸಲಾಗಿದೆ.
ಕಸ್ಬೆ-ಸುಕೀನ್: ಪ್ಲಾಟ್ ಫಾರ್ಮ್‌ಗಳನ್ನು ವಿಸ್ತರಿಸಲಾಗುವುದು. 6 ಮೀ ಅಗಲದ ಎರಡು ಪಾದಾಚಾರಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗುವುದು. ಸಾಮಾನ್ಯ ರವಾನೆ ಸೌಲಭ್ಯವನ್ನು ಸ್ಥಾಪಿಸಲಾಗುವುದು.
ಮೇಲಿನವುಗಳ ಜೊತೆಗೆ, ಎಲ್ಲಾ 5 ನಿಲ್ದಾಣಗಳಲ್ಲಿ ವಿವಿಧ ಪ್ರಯಾಣಿಕರ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಇವುಗಳಲ್ಲಿ ಮೇಲು ಹೊದಿಕೆ ಹೊಂದಿರುವ ಪ್ಲಾಟ್ ಫಾರ್ಮ್‌ಗಳು, ನೀರಿನ ಟ್ಯಾಂಕ್‌ಗಳು, ಹೊಸ ಶೌಚಾಲಯಗಳು ಮತ್ತು ವಾಟರ್ ಪ್ರೂಫ್ ಹೋಲ್ಡಿಂಗ್ ಪ್ರದೇಶಗಳು ಸೇರಿವೆ. ಪರಿಚಲನಾ ಪ್ರದೇಶಗಳು, ಓಡಾಟ ಮಾರ್ಗಗಳು, ಪ್ರವೇಶ / ನಿರ್ಗಮನ ರಸ್ತೆಗಳು ಮತ್ತು ಪ್ರಯಾಣಿಕರ ಮಾಹಿತಿ ವ್ಯವಸ್ಥೆಗಳನ್ನು ಸಹ ಮೇಲ್ದರ್ಜೆಗೇರಿಸಲು ಯೋಜಿಸಲಾಗಿದೆ.
ರೈಲ್ವೆ ಸಚಿವಾಲಯವು ಮೇಲಿನ ಕೆಲಸಗಳನ್ನು 2 ವರ್ಷಗಳ ಕಾಲಮಿತಿಯೊಳಗೆ ಉತ್ತಮವಾಗಿ ಕಾರ್ಯಗತಗೊಳಿಸುವ ಹಾದಿಯಲ್ಲಿದೆ. ಒಟ್ಟು 65 ಉದ್ದೇಶಿತ ಕಾಮಗಾರಿಗಳ ಪೈಕಿ 33 ಕಾಮಗಾರಿಗಳಿಗೆ ಈಗಾಗಲೇ ಮಂಜೂರಾತಿ ನೀಡಲಾಗಿದೆ.

ಸಿಂಹಸ್ಥಕ್ಕೆ ವಿಶೇಷ ರೈಲುಗಳು: ಈ ಬಾರಿಯ ಸಿಂಹಸ್ಥಕ್ಕೆ 3 ಕೋಟಿ ಯಾತ್ರಾರ್ಥಿಗಳು ಆಗಮಿಸುವ ನಿರೀಕ್ಷೆಯಿದೆ. ಇದು 2015ಕ್ಕಿಂತ ಸುಮಾರು 50 ಪಟ್ಟು ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಗಮನಾರ್ಹವಾಗಿ ಹೆಚ್ಚಿನ ಸಂಖ್ಯೆಯ ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆಯು ಯೋಜಿಸುತ್ತಿದೆ.
ಭಾರತದ ವಿವಿಧ ಭಾಗಗಳಿಂದ ಪ್ರಯಾಣಿಸುವ ಯಾತ್ರಾರ್ಥಿಗಳಿಗೆ ದೂರದ ವಿಶೇಷ ರೈಲುಗಳು ಮತ್ತು ಅಲ್ಪ-ದೂರದ ಮೆಮು ಸೇವೆಗಳನ್ನು ಒದಗಿಸಲಾಗುವುದು. ಇವು ನಾಸಿಕ್ ಅನ್ನು ಕಾಮಾಕ್ಯ, ಹೌರಾ, ಪಾಟ್ನಾ, ದೆಹಲಿ, ಜೈಪುರ, ಬಿಕಾನೇರ್, ಮುಂಬೈ, ಪುಣೆ, ನಾಗ್ಪುರ ಮತ್ತು ನಾಂದೇಡ್ ಸೇರಿದಂತೆ ಪ್ರಮುಖ ನಿಲ್ದಾಣಗಳಿಗೆ ಸಂಪರ್ಕಿಸುತ್ತವೆ.
ರೌಂಡ್-ಟ್ರಿಪ್ ವಿಶೇಷ ಸರ್ಕ್ಯೂಟ್ ರೈಲು ಸಹ ಕಾರ್ಯಾಚರಣೆಯಲ್ಲಿರಲಿದೆ. ಇದು ಮೂರು ಜ್ಯೋತಿರ್‌ಲಿಂಗ ಕ್ಷೇತ್ರಗಳಾದ- ತ್ರಯಂಬಕೇಶ್ವರ, ಗ್ರಿಶ್ನೇಶ್ವರ ಮತ್ತು ಓಂಕಾರೇಶ್ವರವನ್ನು ಸಂಪರ್ಕಿಸುತ್ತದೆ.
ಪರಿಣಾಮಕಾರಿ ಜನಸಂದಣಿ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವುದು: ಯಾತ್ರಾರ್ಥಿಗಳ ಸುಗಮ ಚಲನೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿ ಪ್ರಮುಖ ನಿಲ್ದಾಣದಲ್ಲಿ ದೊಡ್ಡ ಹೋಲ್ಡಿಂಗ್ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೇಂದ್ರೀಕೃತ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ಇಲ್ಲಿ ಪರಿಣಾಮಕಾರಿ ಮೇಲ್ವಿಚಾರಣೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಮತ್ತು ಮುನ್ಸೂಚನೆ ವೇಳಾಪಟ್ಟಿಗಾಗಿ ʻಎಐʼ ಸಾಧನಗಳನ್ನು ಅಳವಡಿಸಲಾಗುವುದು.
ಮಹಾರಾಷ್ಟ್ರದೊಂದಿಗೆ ಮುಖ್ಯಮಂತ್ರಿಗಳ ಜೊತೆ ಜಂಟಿ ಸಭೆ: ರೈಲ್ವೆ ಅಧಿಕಾರಿಗಳು ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ರೈಲ್ವೆ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರದ ನಡುವೆ ನಿಕಟ ಸಮನ್ವಯವಿದೆ. ಮುಂಬರುವ ತಿಂಗಳುಗಳಲ್ಲಿ, ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಈ ಯೋಜನೆಗಳ ಪ್ರಗತಿಯ ಬಗ್ಗೆ ಜಂಟಿ ಪರಿಶೀಲನಾ ಸಭೆ ನಡೆಸಲಾಗುವುದು.
*****
(Release ID: 2148673)