ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಹಸಿರು ಹಣಕಾಸು ಹೆಚ್ಚಿಸಲು ಕ್ಯೂ.ಐ.ಪಿ. ಮೂಲಕ ₹2,005.90 ಕೋಟಿಗಳನ್ನು ಯಶಸ್ವಿಯಾಗಿ ಸಂಗ್ರಹಿಸಿದ ಐ.ಆರ್.ಇ.ಡಿ.ಎ.

Posted On: 11 JUN 2025 12:23PM by PIB Bengaluru

ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಏಜೆನ್ಸಿ ಲಿಮಿಟೆಡ್ (ಐ.ಆರ್.ಇ.ಡಿ.ಎ.-IREDA) ಅರ್ಹ ಸಂಸ್ಥೆಗಳ ನಿಯೋಜನೆ (ಕ್ಯೂ.ಐ.ಪಿ.-QIP) ಮೂಲಕ ₹2,005.90 ಕೋಟಿಗಳನ್ನು ಯಶಸ್ವಿಯಾಗಿ ಸಂಗ್ರಹಿಸಿದೆ. ಪ್ರತಿ ಷೇರಿಗೆ ₹165.14 ಬೆಲೆಯಲ್ಲಿ 12.15 ಕೋಟಿ ಈಕ್ವಿಟಿ ಷೇರುಗಳನ್ನು ವಿತರಿಸುವ ಮೂಲಕ ಬಂಡವಾಳವನ್ನು ಸಂಗ್ರಹಿಸಲಾಗಿದೆ, ಇದರಲ್ಲಿ ಪ್ರತಿ ಷೇರಿನ ₹10 ಮುಖಬೆಲೆಯ ಮೇಲೆ    ₹155.14 ಪ್ರೀಮಿಯಂ ಒಳಗೊಂಡಿದೆ.

₹165.14ರ ವಿತರಣೆ ಬೆಲೆಯು ಪ್ರತಿ ಷೇರಿನ ಅತ್ಯಂತ ಕಡಿಮೆ ಬೆಲೆಯಾದ  ₹173.83 ಕ್ಕೆ  5.00% ರಿಯಾಯಿತಿಯನ್ನು ಪ್ರತಿಬಿಂಬಿಸುತ್ತದೆ. 2025ರ ಜೂನ್ 5 ರಂದು ಪ್ರಾರಂಭವಾದ ಕ್ಯೂ.ಐ.ಪಿ.  ವಿತರಣೆಯು 2025ರ ಜೂನ್ 10 ರಂದು ಮುಕ್ತಾಯವಾಯಿತು, ವಿಮಾ ಕಂಪನಿಗಳು, ಶೆಡ್ಯೂಲ್ಡ್  ವಾಣಿಜ್ಯ ಬ್ಯಾಂಕುಗಳು ಮತ್ತು ವಿದೇಶಿ ಪೋರ್ಟ್ಫೋಲಿಯೋ ಹೂಡಿಕೆದಾರರು ಸೇರಿದಂತೆ ದೇಶೀಯ ಮತ್ತು ವಿದೇಶಿ ಅರ್ಹ ಸಾಂಸ್ಥಿಕ ಖರೀದಿದಾರರ (ಕ್ಯೂ.ಐ.ಬಿ.ಗಳ) ವೈವಿಧ್ಯಮಯ ಗುಂಪಿನಿಂದ ಉತ್ತೇಜಕ ಪ್ರತಿಕ್ರಿಯೆಯನ್ನು ಅದು ಪಡೆಯಿತು. ಮಂಡಳಿಯು ಇಂದು ಅಂದರೆ 2025ರ ಜೂನ್ 11 ರಂದು ನಡೆದ ತನ್ನ ಸಭೆಯಲ್ಲಿ ಅರ್ಹ ಸಾಂಸ್ಥಿಕ ಖರೀದಿದಾರರಿಗೆ ಈಕ್ವಿಟಿ ಷೇರುಗಳ ಹಂಚಿಕೆಯನ್ನು ಅನುಮೋದಿಸಿದೆ.

ಮೂಲ ವಿತರಣೆಯ ಗಾತ್ರ ₹1,500 ಕೋಟಿಗಳಷ್ಟಾಗಿದ್ದು, ₹2,005.90 ಕೋಟಿ ಮೊತ್ತದ ಬಿಡ್‌ಗಳು ಕ್ಯೂ.ಐ.ಪಿ.ಗೆ ಸಲ್ಲಿಕೆಯಾಗಿವೆ, ಆ ಮೂಲಕ, 1.34 ಪಟ್ಟು ಹೆಚ್ಚು ಚಂದಾದಾರಿಕೆಯನ್ನು ಗಳಿಸಿದೆ. ಈ ಯಶಸ್ವಿ ವಿತರಣೆಯ ಮೂಲಕ ಸಂಗ್ರಹಿಸಲಾದ ಬಂಡವಾಳವು ಐ.ಆರ್.ಇ.ಡಿ.ಎ. ಶ್ರೇಣಿ-I ಬಂಡವಾಳ ಮತ್ತು ಒಟ್ಟಾರೆ ಬಂಡವಾಳ ಸಮರ್ಪಕ ಅನುಪಾತವನ್ನು ಅಂದರೆ ಬ್ಯಾಂಕ್ ಅಥವಾ ಸ್ವಂತ ಬಂಡವಾಳ ಮತ್ತು ಅದರ ಅಪಾಯ ಸಂಭಾವ್ಯತೆ  ಇರುವ ಆಸ್ತಿ ಮತ್ತು ಸಾಲಬಾಧ್ಯತೆ  ಅನುಪಾತವನ್ನು (CAR) ಮತ್ತಷ್ಟು ಬಲಪಡಿಸುತ್ತದೆ, ಭಾರತದಲ್ಲಿ ವಿಸ್ತರಿಸುತ್ತಿರುವ ನವೀಕರಿಸಬಹುದಾದ ಇಂಧನ ವಲಯವನ್ನು ಬೆಂಬಲಿಸುವ ಕಂಪನಿಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಸಾಧನೆಯ ಬಗ್ಗೆ ವಿವರಿಸಿರುವ , ಐ.ಆರ್.ಇ.ಡಿ.ಎ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರದೀಪ್ ಕುಮಾರ್ ದಾಸ್: “2023ರ ನವೆಂಬರ್ ನಲ್ಲಿ ನಮ್ಮ ಐ.ಪಿ.ಒ. ನಂತರದ ಅಲ್ಪಾವಧಿಯಲ್ಲಿ ಕ್ಯೂ.ಐ.ಪಿ.ಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಹೂಡಿಕೆದಾರರ ಸಮುದಾಯ ಮತ್ತು ಹೊಸ ಹಾಗು ನವೀಕರಿಸಬಹುದಾದ ಇಂಧನ ಸಚಿವಾಲಯವು ಐ.ಆರ್.ಇ.ಡಿ.ಎ. ಯ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಈ ಬಂಡವಾಳದ ಒಳಹರಿವು ನಮ್ಮ ಹಣಕಾಸು ಚಟುವಟಿಕೆಗಳನ್ನು ಹೆಚ್ಚಿಸಲು ನಮಗೆ ಅಧಿಕಾರ ನೀಡುತ್ತದೆ, ನವೀಕರಿಸಬಹುದಾದ ಇಂಧನ ಯೋಜನೆಗಳಲ್ಲಿ ಹೆಚ್ಚಿನ ಹೂಡಿಕೆಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಹಸಿರು ಹಾಗು ಸುಸ್ಥಿರ ಇಂಧನ ಭವಿಷ್ಯದತ್ತ ಭಾರತದ ಪರಿವರ್ತನೆಯನ್ನು ವೇಗಗೊಳಿಸುತ್ತದೆ.” ಎಂದಿದ್ದಾರೆ.

ಐಆರ್‌ಇಡಿಎ ಸಿಎಂಡಿ ಅವರು, ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ, ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ; ವಿದ್ಯುತ್ ಮತ್ತು ನೂತನ ಹಾಗು ನವೀಕರಿಸಬಹುದಾದ ಇಂಧನ ಖಾತೆ ಸಹಾಯಕ  ಸಚಿವರಾದ ಶ್ರೀ ಶ್ರೀಪಾದ್ ನಾಯಕ್; ಎಂಎನ್‌ಆರ್‌ಇ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಸಾರಂಗಿ; ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಮತ್ತು ನಿರ್ದೇಶಕರ ಮಂಡಳಿಗೆ ತಮ್ಮ ಬೆಂಬಲ ಮತ್ತು ಅಮೂಲ್ಯ ಮಾರ್ಗದರ್ಶನಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.

ಐಆರ್‌ಇಡಿಎ ಎಲ್ಲಾ ಸಾಂಸ್ಥಿಕ ಹೂಡಿಕೆದಾರರು ಮತ್ತು ಪಾಲುದಾರರಿಗೆ ಅವರ ನಿರಂತರ ಬೆಂಬಲಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದೆ, ದೇಶದ ಶುದ್ಧ ಇಂಧನ ಹಣಕಾಸು ಉಪಕ್ರಮಗಳನ್ನು ಮುನ್ನಡೆಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ.

 

*****


(Release ID: 2135673)