ಭಾರೀ ಕೈಗಾರಿಕೆಗಳ ಸಚಿವಾಲಯ
ಪಿ ಎಂ ಇ - ಡ್ರೈವ್ ಅಡಿಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ಕೇಳಿದ ಕರ್ನಾಟಕ ಸರ್ಕಾರ
ಪೂರ್ಣ ಬೆಂಬಲದ ಜೊತೆ ಹಂತ ಹಂತವಾಗಿ ಮಂಜೂರಾತಿಯನ್ನು ದೃಢಪಡಿಸಿದ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ
ಮುಂಬರುವ ಹಂತದಲ್ಲಿ ಕರ್ನಾಟಕಕ್ಕೆ ಬಸ್ ಲಭಿಸುವಂತೆ ಮಾಡುವುದಾಗಿ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಭರವಸೆ
ಕೇಂದ್ರ-ರಾಜ್ಯ ಸಮನ್ವಯ ಹಸಿರು ಚಲನಶೀಲತೆಯ ಆಂದೋಲನವನ್ನು ಬಲಪಡಿಸಿದೆ
ಪ್ರಧಾನಮಂತ್ರಿ ಅವರ ಸ್ವಚ್ಛ ಮತ್ತು ಸಮಾನ ಸಾರಿಗೆಯ ಚಿಂತನೆ ಇನ್ನಷ್ಟು ವೇಗ ಪಡೆದಿದೆ
Posted On:
16 MAY 2025 1:43PM by PIB Bengaluru
ಕೇಂದ್ರ ಪ್ರಾಯೋಜಿತ ಪ್ರಧಾನಮಂತ್ರಿ ಇ-ಡ್ರೈವ್ ಉಪಕ್ರಮದಡಿಯಲ್ಲಿ ವಿದ್ಯುತ್ ಬಸ್ ಗಳನ್ನು ಹಂಚಿಕೆ ಮಾಡುವಂತೆ ಕರ್ನಾಟಕ ಸರ್ಕಾರದಿಂದ ಬೃಹತ್ ಕೈಗಾರಿಕಾ ಸಚಿವಾಲಯವು ಔಪಚಾರಿಕ ಪ್ರಸ್ತಾವನೆಯನ್ನು ಸ್ವೀಕರಿಸಿದೆ. ಪ್ರಮುಖ ನಗರಗಳಲ್ಲಿ ನಗರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ವರ್ಧಿಸಬೇಕಾದ ಅಗತ್ಯವನ್ನು ಉಲ್ಲೇಖಿಸಿ ಕರ್ನಾಟಕ ಸಾರಿಗೆ ಸಚಿವರಾದ ಶ್ರೀ ರಾಮಲಿಂಗಾ ರೆಡ್ಡಿ ಅವರು ರಾಜ್ಯದ ಮನವಿಯನ್ನು ಸಲ್ಲಿಸಿದ್ದಾರೆ.

ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಕೇಂದ್ರ ಬೃಹತ್ ಕೈಗಾರಿಕೆಗಳು ಮತ್ತು ಉಕ್ಕು ಖಾತೆ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಕರ್ನಾಟಕ ಸರ್ಕಾರಕ್ಕೆ ಕೇಂದ್ರದಿಂದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು. ಹಂಚಿಕೆ ಪ್ರಕ್ರಿಯೆಯು ಈಗಾಗಲೇ ನಡೆಯುತ್ತಿದೆ ಮತ್ತು ಕರ್ನಾಟಕವು ಹಂತ ಹಂತವಾಗಿ ಮತ್ತು ಆದ್ಯತೆಯ ರೀತಿಯಲ್ಲಿ ವಿದ್ಯುತ್ ಬಸ್ ಗಳನ್ನು ಪಡೆಯಲಿದೆ ಎಂದು ಕೇಂದ್ರ ಸಚಿವರು ದೃಢಪಡಿಸಿದರು.
"ಕರ್ನಾಟಕಕ್ಕೆ ಭಾರತ ಸರ್ಕಾರದಿಂದ ಎಲ್ಲಾ ರೀತಿಯ ಬೆಂಬಲ ದೊರೆಯುವುದನ್ನು ನಾನು ಖಚಿತಪಡಿಸುತ್ತೇನೆ" ಎಂದು ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು. "ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ನಾವು ಭಾರತದಾದ್ಯಂತ ಸಾರ್ವಜನಿಕ ಸಂಚಾರವನ್ನು/ಚಲನಶೀಲತೆಯನ್ನು ಪರಿವರ್ತಿಸುತ್ತಿದ್ದೇವೆ. ಕರ್ನಾಟಕವು ಪಿಎಂ ಇ-ಡ್ರೈವ್ ಅಡಿಯಲ್ಲಿ ಖಂಡಿತವಾಗಿಯೂ ಬಸ್ ಗಳನ್ನು ಪಡೆಯಲಿದೆ." ಎಂದರು.
ಪಿಎಂ ಇ-ಡ್ರೈವ್ ಉಪಕ್ರಮದಡಿಯಲ್ಲಿ 9 ಪ್ರಮುಖ ನಗರಗಳಿಗೆ 14,000 ಎಲೆಕ್ಟ್ರಿಕ್ ಬಸ್ ಗಳನ್ನು ಹಂಚಿಕೆ ಮಾಡಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಚರ್ಚೆಗಳು ಚಾರ್ಜಿಂಗ್ ಸ್ಟೇಷನ್ ಗಳು, ಬಸ್ ಡಿಪೋಗಳು ಮತ್ತು ವಾಹನ ನಿರ್ವಹಣಾ ವ್ಯವಸ್ಥೆಗಳು ಸೇರಿದಂತೆ ಸಂಬಂಧಿತ ಮೂಲಸೌಕರ್ಯಗಳನ್ನು ಸಹ ಒಳಗೊಂಡಿವೆ. ಗುರುತಿಸಲಾದ ನಗರ ಸಮೂಹಗಳಿಗೆ ತ್ವರಿತ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಎರಡೂ ಕಡೆಯ ಅಧಿಕಾರಿಗಳು ಅನುಷ್ಠಾನ ಮಾದರಿಗಳನ್ನು ಚರ್ಚಿಸಿದರು.
"ನಾವು ಕೇವಲ ಬಸ್ ಗಳನ್ನು ಮಾತ್ರ ವಿತರಿಸುತ್ತಿಲ್ಲ - ಭಾರತದ ಜನರಿಗೆ ಸ್ವಚ್ಛ, ಚುರುಕಾದ ಮತ್ತು ಹೆಚ್ಚು ಅಂತರ್ಗತ ಸಾರಿಗೆ ಭವಿಷ್ಯವನ್ನು ನಿರ್ಮಿಸುತ್ತಿದ್ದೇವೆ. ಕರ್ನಾಟಕ ಸಾರಿಗೆ ಸಚಿವರಾದ ಶ್ರೀ ರಾಮಲಿಂಗಾ ರೆಡ್ಡಿ ಅವರಿಗೆ ನನ್ನ ಮತ್ತು ಸಚಿವಾಲಯದ ಸಂಪೂರ್ಣ ಸಹಕಾರವಿದೆ" ಎಂದು ಕೇಂದ್ರ ಸಚಿವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪ್ರಾರಂಭಿಸಲಾದ ಪಿಎಂ ಇ-ಡ್ರೈವ್ ಉಪಕ್ರಮವು 14,028 ಎಲೆಕ್ಟ್ರಿಕ್ ಬಸ್ ಗಳೊಂದಿಗೆ ನಗರ ಬಸ್ ಕಾರ್ಯಾಚರಣೆಯನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು 01.04.2024 ರಿಂದ 31.03.2026 ರವರೆಗಿನ ಎರಡು ವರ್ಷಗಳ ಅವಧಿಗೆ ₹10,900 ಕೋಟಿ ಯೋಜನಾ ಗಾತ್ರವನ್ನು ಹೊಂದಿದೆ.
ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಪಾಲುದಾರರ ಸಹಯೋಗದೊಂದಿಗೆ ಈ ಪರಿವರ್ತನಾಶೀಲ ಆಂದೋಲನದ ಧ್ಯೇಯವನ್ನು ಈಡೇರಿಸಲು ಭಾರೀ ಕೈಗಾರಿಕಾ ಸಚಿವಾಲಯವು ಬದ್ಧವಾಗಿದೆ.
*****
(Release ID: 2129125)