ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳಿಗೆ ಹಾಲುಣಿಸುವ, ಮಹಿಳೆಯರು ಬಟ್ಟೆ ಬದಲಾಯಿಸುವ ಕೊಠಡಿಗಳನ್ನು ಸ್ಥಾಪಿಸಲು ರಾಜ್ಯಗಳು, ಸಾರಿಗೆ ಸಚಿವಾಲಯಗಳಿಗೆ ನಿರ್ದೇಶನ ನೀಡಿದ ಕೇಂದ್ರ
ʻಪಾಲನಾ ಯೋಜನೆʼ: 34 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಉಚಿತ ಶಿಶುಪಾಲನಾ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ 11,395 ಅಂಗನವಾಡಿ ಕೇಂದ್ರಗಳಿಗೆ ಸಚಿವಾಲಯ ಅನುಮೋದನೆ
Posted On:
26 MAR 2025 3:44PM by PIB Bengaluru
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳಿಗೆ ಹಾಲುಣಿಸುವ ಹಾಗೂ ಮಹಿಳೆಯರು ಮತ್ತು ಮಕ್ಕಳಿಗೆ ಬಟ್ಟೆ ಬದಲಾಯಿಸುವ ಕೊಠಡಿಗಳಣ್ನು ಸ್ಥಾಪಿಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ನಾಗರಿಕ ವಿಮಾನಯಾನ ಸಚಿವಾಲಯ, ರೈಲ್ವೆ ಮಂಡಳಿ ಹಾಗೂ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಾಲಕಾಲಕ್ಕೆ ಪತ್ರ ಬರೆದಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ವ್ಯಾಪ್ತಿಗೆ ಒಳಪಡುವ ಮತ್ತು ʻಎಎಐʼ ವ್ಯಾಪ್ತಿಗೆ ಸೇರದ ವಿಮಾನ ನಿಲ್ದಾಣಗಳಲ್ಲಿ ಕ್ರಮವಾಗಿ 164 ಮತ್ತು 148 ಹಾಲುಣಿಸುವ ಕೊಠಡಿಗಳು/ಬಟ್ಟೆ ಬದಲಾಯಿಸುವ ಕೊಠಡಿಗಳನ್ನು ಸ್ಥಾಪಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯವು ಮಾಹಿತಿ ನೀಡಿದೆ. ಇದಲ್ಲದೆ, ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಎಸ್ಆರ್‌ಟಿಸಿ) 26 ಬಸ್ ನಿಲ್ದಾಣಗಳು, ಕೊಯಮತ್ತೂರಿನ ತಮಿಳುನಾಡು ರಾಜ್ಯ ಸಾರಿಗೆ ನಿಗಮದ (ಟಿಎನ್ಎಸ್‌ಟಿಸಿ) 2 ಬಸ್ ನಿಲ್ದಾಣಗಳು ಮತ್ತು ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ (ಯುಪಿಎಸ್ಆರ್‌ಟಿಸಿ) 50 ಬಸ್ ನಿಲ್ದಾಣಗಳಲ್ಲಿ ಹಾಲುಣಿಸುವ ಕೊಠಡಿಗಳ ಸೌಲಭ್ಯ ಕಲ್ಪಿಸಲಾಗಿದೆ ಎಂದು ʻರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಂಘʼ ನೀಡಿದ ಮಾಹಿತಿಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರವಾನಿಸಿದೆ. ದೆಹಲಿ, ಗೋವಾ, ಚಂಡೀಗಢ ಮತ್ತು ಮೇಘಾಲಯ ಸೇರಿದಂತೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಈ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವರದಿ ಮಾಡಿವೆ.
ಮಹಿಳೆಯರು ಮತ್ತು ಮಕ್ಕಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಹಾಗೂ ಆರ್ಥಿಕತೆಯಲ್ಲಿ ಅವರ ಸಂಪೂರ್ಣ ಮತ್ತು ಅರ್ಥಪೂರ್ಣ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಕಚೇರಿ ಆವರಣದ ಒಳಗೆ ಮತ್ತು ಹೊರಗೆ ಕೆಲಸ ಮಾಡುವ ಮಹಿಳೆಯರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಲಿಂಗ ಸ್ನೇಹಿ ಕೊಠಡಿಗಳನ್ನು ಸ್ಥಾಪಿಸುವ ಅಗತ್ಯದ ಬಗ್ಗೆ ಮಹಿಳಾ ಮತ್ತು ಮಕ್ಕಳ ಸಚಿವಾಲಯದ ಕಾರ್ಯದರ್ಶಿಗಳು ಎಲ್ಲಾ ಸಚಿವಾಲಯಗಳು / ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಎಲ್ಲಾ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ನಿರ್ದೇಶನವು ಸಚಿವಾಲಯಗಳು ಮತ್ತು ಇಲಾಖೆಗಳ ಕೆಲಸದ ಸ್ಥಳಗಳಲ್ಲಿ ಹಾಗೂ ಅವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳಲ್ಲಿ ಲಿಂಗ ಸ್ನೇಹಿ ಸ್ಥಳಗಳನ್ನು ಸ್ಥಾಪಿಸುವ ಚಟುವಟಿಕೆಗಳ ಸೂಚಕ ಪಟ್ಟಿಯನ್ನು ಒಳಗೊಂಡಿದ್ದು, ಆ ಚಟುವಟಿಕೆಗಳು ಹೀಗಿವೆ:
- ಮಹಿಳಾ ಉದ್ಯೋಗಿಗಳ ಮೂಲಭೂತ ಮುಟ್ಟಿನ ನೈರ್ಮಲ್ಯ ಅಗತ್ಯಗಳನ್ನು ಪೂರೈಸಲು ಶೌಚಾಲಯಗಳಲ್ಲಿ ಸ್ಯಾನಿಟರಿ ಪ್ಯಾಡ್ ವಿತರಣಾ ಯಂತ್ರಗಳು ಮತ್ತು ಭಸ್ಮಕಾರಕಗಳ (ಇನ್‌ಸಿನರೇಟರ್) ಅಳವಡಿಕೆ.
- ಆಹಾರ ಕೊಠಡಿಗಳು, ವಿಶ್ರಾಂತಿ ಕೊಠಡಿಗಳು ಮತ್ತು ಯೋಗ ಕೊಠಡಿಗಳಿಗೆ ಸ್ಥಳವನ್ನು ನಿಗದಿಪಡಿಸುವುದು.
- ದುಡಿಯುವ ತಾಯಂದಿರನ್ನು ಬೆಂಬಲಿಸಲು 50 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಪ್ರತಿ ಸಾರ್ವಜನಿಕ ಕಟ್ಟಡದಲ್ಲಿ ಕನಿಷ್ಠ ಒಂದು ಶಿಶುಪಾಲನಾ ಕೇಂದ್ರವನ್ನು ಸ್ಥಾಪಿಸುವುದು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ʻಮಿಷನ್ ಶಕ್ತಿʼ ಅಡಿಯಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 'ಪಾಲನಾ' ಕೇಂದ್ರವನ್ನು ಜಾರಿಗೆ ತಂದಿರುತ್ತದೆ. ಇದರ ಅಡಿಯಲ್ಲಿ ಮಕ್ಕಳಿಗೆ ದಿನದ ಆರೈಕೆ (ಡೇ ಕೇರ್) ಸೌಲಭ್ಯಗಳು ಮತ್ತು ರಕ್ಷಣೆಯನ್ನು ಒದಗಿಸಲು ಹೆಚ್ಚಿನ ಗಮನ ಹರಿಸಲಾಗುತ್ತದೆ. ʻಪಾಲನಾʼ ಅಡಿಯಲ್ಲಿ, ಸಚಿವಾಲಯವು ಅಂಗನವಾಡಿ ಮತ್ತು ಶಿಶುಪಾಲನಾ ಕೇಂದ್ರಗಳ ಮೂಲಕ ಉಚಿತ ಶಿಶುಪಾಲನಾ ಸೇವೆಗಳನ್ನು ವಿಸ್ತರಿಸಿದೆ. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸ್ವೀಕರಿಸಿದ ಪ್ರಸ್ತಾವನೆಗಳ ಪ್ರಕಾರ, 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 11,395 ಅಂಗನವಾಡಿ ಕೇಂದ್ರಗಳನ್ನು ಅನುಮೋದಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಹಾಯಕ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ಅವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಈ ಮಾಹಿತಿಯನ್ನು ನೀಡಿದರು.
*****
(Release ID: 2115310)
Visitor Counter : 22