ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಡಾ. ಮನ್ಸುಖ್‌ ಮಾಂಡವಿಯಾ ಅವರು ಇ-ಶ್ರಮ್‌ ಉಪಕ್ರಮ ಮತ್ತು ಔದ್ಯೋಗಿಕ ಕೊರತೆ ಸೂಚ್ಯಂಕದಡಿ ರಾಜ್ಯ-ನಿರ್ದಿಷ್ಟ ಮೈಕ್ರೋಸೈಟ್‌ಗಳಿಗೆ ಚಾಲನೆ ನೀಡಿದರು


ಕಾರ್ಮಿಕ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಪೂರೈಕೆಯನ್ನು ಸರಿಹೊಂದಿಸಲು ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ಔದ್ಯೋಗಿಕ ಕೊರತೆ ಸೂಚ್ಯಂಕ

ಅಸಂಘಟಿತ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ ತಡೆರಹಿತ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಮೈಕ್ರೋಸೈಟ್‌ ಸೌಲಭ್ಯ

Posted On: 29 JAN 2025 7:31PM by PIB Bengaluru

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ.ಮನ್ಸುಖ್‌ ಮಾಂಡವಿಯಾ ಅವರು ಇಂದು ನವದೆಹಲಿಯಲ್ಲಿ ನಡೆದ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಕಾರ್ಮಿಕ ಸಚಿವರು ಮತ್ತು ಕಾರ್ಯದರ್ಶಿಗಳೊಂದಿಗಿನ ಸಭೆಯಲ್ಲಿಇ-ಶ್ರಮ್‌ ಉಪಕ್ರಮದ ಅಡಿಯಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಮೈಕ್ರೋಸೈಟ್‌ಗಳು ಮತ್ತು ಔದ್ಯೋಗಿಕ ಕೊರತೆ ಸೂಚ್ಯಂಕ (ಒಎಸ್‌ಐ) ಎಂಬ ಎರಡು ಮಹತ್ವದ ಉಪಕ್ರಮಗಳಿಗೆ ಚಾಲನೆ ನೀಡಿದರು. ಸಭೆಯಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವರಾದ  ಸುಶ್ರಿ ಶೋಭಾ ಕರಂದ್ಲಾಜೆ, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಮಿಕ ಸಚಿವರು, ಕಾರ್ಯದರ್ಶಿ ಶ್ರೀಮತಿ ಸುಮಿತಾ ದವ್ರಾ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಮನ್ಸುಖ್‌ ಮಾಂಡವಿಯಾ, ‘‘ಬಹುಭಾಷಾ ಇಶ್ರಮ್‌ ಮೈಕ್ರೋಸೈಟ್‌ ಸೌಲಭ್ಯವು ಅಸಂಘಟಿತ ಕಾರ್ಮಿಕರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಿಗೆ ತಡೆರಹಿತ ಪ್ರವೇಶವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ಪರಿವರ್ತಕ ಉಪಕ್ರಮವಾಗಿದೆ. ಇದು ಕಾರ್ಮಿಕರನ್ನು ಸಬಲೀಕರಣಗೊಳಿಸುವುದಲ್ಲದೆ, ಕಲ್ಯಾಣ ಸೇವೆಗಳ ವಿತರಣೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ,’’ ಎಂದರು.

ಒಎಸ್‌ಐಗೆ ಸಂಬಂಧಿಸಿದಂತೆ, ‘‘ನೈಜ-ಸಮಯದ ಕಾರ್ಮಿಕ ಮಾರುಕಟ್ಟೆ ದತ್ತಾಂಶವನ್ನು ಬಳಸಿಕೊಳ್ಳುವ ಮೂಲಕ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಹೊಂದಾಣಿಕೆ ಪ್ರಕ್ರಿಯೆಗಳು ದತ್ತಾಂಶ-ಚಾಲಿತವಾಗಿವೆ ಮತ್ತು ಕೈಗಾರಿಕೆಗಳ ನೈಜ ಅಗತ್ಯಗಳಿಗೆ ಅನುಗುಣವಾಗಿವೆ ಎಂದು ನಾವು ಖಚಿತಪಡಿಸುತ್ತಿದ್ದೇವೆ, ನಮ್ಮ ಕಾರ್ಯಪಡೆಯನ್ನು ಭವಿಷ್ಯಕ್ಕೆ ಸಿದ್ಧಗೊಳಿಸುತ್ತೇವೆ,’’ ಎಂದು ಅವರು ಹೇಳಿದರು.

ಇ-ಶ್ರಮ್‌ ಮೈಕ್ರೋಸೈಟ್‌ಗಳು ರಾಜ್ಯ-ನಿರ್ದಿಷ್ಟ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಾಗಿವೆ, ಇದು ರಾಷ್ಟ್ರೀಯ ಇ-ಶ್ರಮ್‌ ಡೇಟಾಬೇಸ್‌ನೊಂದಿಗೆ ತಡೆರಹಿತವಾಗಿ ಸಂಯೋಜಿಸಲ್ಪಟ್ಟಿದೆ. ರಾಜ್ಯ ಪೋರ್ಟಲ್‌ಗಳು ಮತ್ತು ಇಶ್ರಮ್‌ ಪೋರ್ಟಲ್‌ಗಳ ನಡುವೆ ದ್ವಿಮುಖ ಏಕೀಕರಣಕ್ಕೆ ಅವಕಾಶ ಕಲ್ಪಿಸುವುದರಿಂದ ಅಸಂಘಟಿತ ಕಾರ್ಮಿಕರ ಸರಳೀಕೃತ ನೋಂದಣಿಗೆ ಅನುಕೂಲವಾಗಲಿದೆ.

ಇದು ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಮತ್ತು ರಾಜ್ಯ ಕಲ್ಯಾಣ ಕಾರ್ಯಕ್ರಮಗಳು, ಉದ್ಯೋಗಾವಕಾಶಗಳು, ಕೌಶಲ್ಯ ಕಾರ್ಯಕ್ರಮಗಳು ಇತ್ಯಾದಿಗಳಿಗೆ ತಡೆರಹಿತ ಪ್ರವೇಶಕ್ಕೆ ಏಕ-ನಿಲುಗಡೆ ಪರಿಹಾರವನ್ನು ಒದಗಿಸುತ್ತದೆ.

ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ, ಮೈಕ್ರೋಸೈಟ್‌ಗಳು ಬಳಸಲು ಸಿದ್ಧವಾದ ಡಿಜಿಟಲ್‌ ಮೂಲಸೌಕರ್ಯವನ್ನು ಒದಗಿಸುತ್ತವೆ, ಇದು ದುಬಾರಿ ಮತ್ತು ಸಮಯ ತೆಗೆದುಕೊಳ್ಳುವ ಅಭಿವೃದ್ಧಿ ಪ್ರಕ್ರಿಯೆಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ. ನೈಜ-ಸಮಯದ ವಿಶ್ಲೇಷಣಾತ್ಮಕ ಡ್ಯಾಶ್‌ಬೋಡ್‌ಗಳೊಂದಿಗೆ, ಅವು ಉತ್ತಮ ನೀತಿ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸುಗಮಗೊಳಿಸುತ್ತವೆ ಮತ್ತು ರಾಜ್ಯಗಳು ತಮ್ಮ ಕಾರ್ಮಿಕ ಮಾರುಕಟ್ಟೆ ಅವಶ್ಯಕತೆಗಳಿಗೆ ನಿರ್ದಿಷ್ಟವಾದ ಸಾಧನಗಳನ್ನು ಸೇರಿಸಲು ಅನುವು ಮಾಡಿಕೊಡುತ್ತವೆ.

ಕಾರ್ಮಿಕರಿಗೆ, ಮೈಕ್ರೋಸೈಟ್‌ಗಳು ತಡೆರಹಿತ ನೋಂದಣಿ ಪ್ರಕ್ರಿಯೆ ಮತ್ತು ವ್ಯಾಪಕ ಶ್ರೇಣಿಯ ಸಾಮಾಜಿಕ ಭದ್ರತಾ ಪ್ರಯೋಜನಗಳಿಗೆ ಪ್ರವೇಶವನ್ನು ನೀಡುತ್ತವೆ. ಈ ವೇದಿಕೆಯು ಬಹುಭಾಷಾ ಪ್ರವೇಶವನ್ನು ಖಚಿತಪಡಿಸುತ್ತದೆ. ವಿವಿಧ ಪ್ರದೇಶಗಳ ಕಾರ್ಮಿಕರು ತಮ್ಮ ಆದ್ಯತೆಯ ಭಾಷೆಯಲ್ಲಿ ಮಾಹಿತಿ ಮತ್ತು ಸೇವೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಇ-ಶ್ರಮ್‌ ಡೇಟಾಬೇಸ್‌ನೊಂದಿಗೆ ದ್ವಿಮುಖ ಏಕೀಕರಣದ ಮೂಲಕ, ಕಾರ್ಮಿಕರು ಕಲ್ಯಾಣ ಯೋಜನೆಗಳು ಮತ್ತು ಉದ್ಯೋಗಾವಕಾಶಗಳ ಬಗ್ಗೆ ನೈಜ ಸಮಯದ ನವೀಕರಣಗಳನ್ನು ಪಡೆಯುತ್ತಾರೆ.

ಕಾರ್ಮಿಕ ಮಾರುಕಟ್ಟೆಯ ಬೇಡಿಕೆ ಮತ್ತು ಪೂರೈಕೆಗೆ ಸರಿಹೊಂದುವಂತೆ ಔದ್ಯೋಗಿಕ ಕೊರತೆ ಸೂಚ್ಯಂಕ (ಒಎಸ್‌ಐ) ಪ್ರಾರಂಭಿಸಲಾದ ಎರಡನೇ ಪ್ರಮುಖ ಉಪಕ್ರಮವಾಗಿದೆ. ಇದು ಭಾರತದಾದ್ಯಂತ ಉದ್ಯೋಗ ಫಲಿತಾಂಶಗಳನ್ನು ಹೆಚ್ಚಿಸುತ್ತದೆ. ಐಎಲ್‌ಒ ವಿಧಾನ ಮತ್ತು ತ್ರೈಮಾಸಿಕ ಪಿಎಲ್‌ಎಫ್‌ಎಸ್‌ ದತ್ತಾಂಶದ ಆಧಾರದ ಮೇಲೆ, ಒಎಸ್‌ಐ ಕೊರತೆಗಳನ್ನು ಎದುರಿಸುತ್ತಿರುವ ಉದ್ಯೋಗಗಳ ಬಗ್ಗೆ ದತ್ತಾಂಶ-ಚಾಲಿತ ಒಳನೋಟಗಳನ್ನು ಒದಗಿಸುತ್ತದೆ, ಉದ್ಯೋಗಾಕಾಂಕ್ಷಿಗಳ ಕೌಶಲ್ಯಗಳನ್ನು ಉದ್ಯಮದ ಬೇಡಿಕೆಗಳೊಂದಿಗೆ ಹೊಂದಿಸಲು ಸಹಾಯ ಮಾಡುತ್ತದೆ.

ಹೆಚ್ಚಿನ ಬೇಡಿಕೆಯ ಕ್ಷೇತ್ರಗಳಲ್ಲಿನ ಕೌಶಲ್ಯದ ಅಂತರವನ್ನು ನಿವಾರಿಸುವಲ್ಲಿ ನೀತಿ ನಿರೂಪಕರು, ತರಬೇತಿ ಸಂಸ್ಥೆಗಳು ಮತ್ತು ವ್ಯವಹಾರಗಳಿಗೆ ಒಎಸ್‌ಐ ಬೆಂಬಲ ನೀಡುತ್ತದೆ. ಕಾರ್ಯಪಡೆಯ ಯೋಜನೆ ಮತ್ತು ಕೌಶಲ್ಯ ಅಭಿವೃದ್ಧಿ ಉಪಕ್ರಮಗಳಲ್ಲಿಹೆಚ್ಚು ಪರಿಣಾಮಕಾರಿ ನಿರ್ಧಾರ ತೆಗೆದುಕೊಳ್ಳಲು, ಉದ್ಯೋಗ ಹೊಂದಾಣಿಕೆಯನ್ನು ಉತ್ತಮಗೊಳಿಸಲು ಮತ್ತು ಉದ್ದೇಶಿತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ರಚಿಸುವಲ್ಲಿ ರಾಜ್ಯ ಸರ್ಕಾರಗಳು ಮತ್ತು ಉದ್ಯೋಗದಾತರಿಗೆ ಮಾರ್ಗದರ್ಶನ ನೀಡಲು ಸೂಚ್ಯಂಕವನ್ನು ವಿನ್ಯಾಸಗೊಳಿಸಲಾಗಿದೆ.

 

*****


(Release ID: 2097478) Visitor Counter : 15