ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಸೇವೆಯಲ್ಲಿನ ವಿಸ್ತರಣೆಗಳು ಸಾಲಿನಲ್ಲಿ ಇರುವವರಿಗೆ ಹಿನ್ನಡೆಯಾಗುತ್ತದೆ; ನಿರೀಕ್ಷೆಯ ತಾರ್ಕಿಕ ತತ್ವಕ್ಕೆ ವಿರೋಧಿಯಾಗುತ್ತದೆ - ಉಪರಾಷ್ಟ್ರಪತಿ


ಪ್ರಶ್ನೆಪತ್ರಿಕೆ ಸೋರಿಕೆಗಳಾದರೆ ಆಯ್ಕೆಯ ನ್ಯಾಯಕ್ಕೆ ಯಾವುದೇ ಅರ್ಥವಿಲ್ಲ – ಉಪರಾಷ್ಟ್ರಪತಿ

ನಾವು ಯಾವುದೇ ನಿರ್ದಿಷ್ಟ ಸಿದ್ಧಾಂತ ಅಥವಾ ವ್ಯಕ್ತಿಯೊಂದಿಗೆ ಬಂಧಿಯಾಗಿರುವ ಲೋಕಸೇವಾ ಆಯೋಗದ ಅಧ್ಯಕ್ಷರು ಅಥವಾ ಸದಸ್ಯರನ್ನು ಹೊಂದಲು ಸಾಧ್ಯವಿಲ್ಲ - ಉಪರಾಷ್ಟ್ರಪತಿ

ಸಂಸ್ಥೆಗಳನ್ನು ದುರ್ಬಲಗೊಳಿಸುವುದು ಇಡೀ ರಾಷ್ಟ್ರಕ್ಕೆ ಹಾನಿಕಾರಕ - ಉಪರಾಷ್ಟ್ರಪತಿ

ರಾಷ್ಟ್ರವು ಎದುರಿಸುತ್ತಿರುವ ಸಮಸ್ಯೆಗಳನ್ನು ನೇಪಥ್ಯಕ್ಕೆ ತಳ್ಳಬಾರದು - ಉಪರಾಷ್ಟ್ರಪತಿ

ಇಂದಿನ ರಾಜಕೀಯವು ಬಹಳ ವಿಭಜಕವಾಗಿದೆ, ತುಂಬಾ ಧ್ರುವೀಕರಣಗೊಂಡಿದೆ; ನಮಗೆ ರಾಜಕೀಯ ಅಗ್ನಿಶಾಮಕಗಳು ಬೇಕು - ಉಪರಾಷ್ಟ್ರಪತಿ

ರಾಜಕೀಯ ಬದಲಾವಣೆಗಳೊಂದಿಗೆ ಬುದ್ಧಿಜೀವಿಗಳು ತಮ್ಮ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಗುಂಪುಗಳನ್ನು ರಚಿಸಿಕೊಳ್ಳುವುದು ಆತಂಕಕಾರಿಯಾಗಿದೆ - ಉಪರಾಷ್ಟ್ರಪತಿ

ನಿವೃತ್ತಿಯ ನಂತರದ ನೇಮಕಾತಿ, ತಾತ್ಕಾಲಿಕ ನಾಮಕರಣಗಳು ಸಂವಿಧಾನ ರಚನೆಕಾರರ ದೃಷ್ಟಿಗೆ ವಿರುದ್ಧವಾದುದು – ಉಪರಾಷ್ಟ್ರಪತಿ

Posted On: 11 JAN 2025 2:25PM by PIB Bengaluru

“ಸೇವೆಯಲ್ಲಿ ವಿಸ್ತರಣೆಗಳು, ನಿರ್ದಿಷ್ಟ ಹುದ್ದೆಗೆ ಯಾವುದೇ ರೂಪದ ವಿಸ್ತರಣೆಗಳು ಸಾಲಿನಲ್ಲಿರುವವರಿಗೆ ಹಿನ್ನಡೆಯಾಗುತ್ತದೆ. ಇದು ನಿರೀಕ್ಷೆಯ ತಾರ್ಕಿಕ ತತ್ವಕ್ಕೆ ವಿರೋಧಿಯಾಗಿದೆ. ನಮ್ಮಲ್ಲಿ ನಿರೀಕ್ಷೆಯ ಸಿದ್ಧಾಂತವಿದೆ. ಜನರು ಒಂದು ನಿರ್ದಿಷ್ಟ ಅಭ್ಯಾಸದಲ್ಲಿರಲು ದಶಕಗಳನ್ನು ವಿನಿಯೋಗಿಸುತ್ತಾರೆ. ವಿಸ್ತರಣೆಯು ಕೆಲವು ವ್ಯಕ್ತಿಯು ಅನಿವಾರ್ಯ ಎಂದು ಸೂಚಿಸುತ್ತದೆ. ಅನಿವಾರ್ಯತೆ ಎನ್ನುವುದು ಒಂದು ಮಿಥ್ಯೆ. ಈ ದೇಶದಲ್ಲಿ ಪ್ರತಿಭೆ ತುಂಬಿದೆ. ಯಾರೂ ಅನಿವಾರ್ಯವಲ್ಲ. ಆದ್ದರಿಂದ, ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಲೋಕಸೇವಾ ಆಯೋಗಗಳು ಅಂತಹ ಸಂದರ್ಭಗಳಲ್ಲಿ ತಮ್ಮ ಪಾತ್ರವನ್ನು ಹೊಂದಿರುವಾಗ, ಅವುಗಳು ದೃಢವಾಗಿರಬೇಕು.” ಎಂದು ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ಹೇಳಿದರು.

ಇಂದು ಕರ್ನಾಟಕದ ಬೆಂಗಳೂರಿನಲ್ಲಿ ನಡೆದ ಎಲ್ಲಾ ರಾಜ್ಯ ಲೋಕಸೇವಾ ಆಯೋಗಗಳ ಅಧ್ಯಕ್ಷರ 25ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಉದ್ಘಾಟನಾ ಭಾಷಣ ಮಾಡಿ ಅವರು ಮಾತನಾಡಿದರು. “ಅತ್ಯಂತ ಸಂಯಮದಿಂದ ನಾನು ಒಂದು ಅಂಶವನ್ನು ಹೇಳುತ್ತಿದ್ದೇನೆ. ಲೋಕಸೇವಾ ಆಯೋಗಗಳು, ನೇಮಕಾತಿಯನ್ನು ಸವಲತ್ತಿನ ಹಕ್ಕು, ಪಕ್ಷಪಾತಗಳಿಂದ ನಡೆಸಲಾಗುವುದಿಲ್ಲ. ಅಂತಹ ಗೋಚರಿಸುವ ಪ್ರವೃತ್ತಿಗಳಿವೆ. ನಾನು ಅವುಗಳು ಬಗ್ಗೆ ಮಾತನಾಡಲು ಬಯಸುವುದಿಲ್ಲ, ಆದರೆ ಅವುಗಳಲ್ಲಿ ಕೆಲವು ತುಂಬಾ ನೋವಿನಿಂದ ಕೂಡಿವೆ. ನಾವು ನಮ್ಮ ಆತ್ಮಸಾಕ್ಷಿಗೆ ಜವಾಬ್ದಾರರಾಗಿರಬೇಕು. ನಾವು ಒಂದು ನಿರ್ದಿಷ್ಟ ಸಿದ್ಧಾಂತ ಅಥವಾ ವ್ಯಕ್ತಿಯೊಂದಿಗೆ ಬಂಧಿಯಾದ ಲೋಕಸೇವಾ ಆಯೋಗದ ಅಧ್ಯಕ್ಷರು ಅಥವಾ ಸದಸ್ಯರನ್ನು ಹೊಂದಲು ಸಾಧ್ಯವಿಲ್ಲ, ಅದು ಸಂವಿಧಾನದ ಚೌಕಟ್ಟಿನ ಸಾರ ಮತ್ತು ಚೈತನ್ಯವನ್ನು ನಾಶಪಡಿಸುತ್ತದೆ” ಎಂದು ಅವರು ಹೇಳಿದರು.

ನಿವೃತ್ತಿಯ ನಂತರದ ನೇಮಕಾತಿಗಳತ್ತ ಗಮನ ಸೆಳೆದ ಶ್ರೀ ಧನಕರ್, “ನಿವೃತ್ತಿ ನಂತರದ ನೇಮಕಾತಿಯು ಒಂದು ಸಮಸ್ಯೆಯಾಗಿದೆ. ಕೆಲವು ರಾಜ್ಯಗಳಲ್ಲಿ ಇದೊಂದು ವ್ಯವಸ್ಥೆಯಾಗಿದೆ. ಉದ್ಯೋಗಿಗಳು ಎಂದಿಗೂ ನಿವೃತ್ತರಾಗುವುದಿಲ್ಲ, ವಿಶೇಷವಾಗಿ ಉನ್ನತ ಸೇವೆಗಳಲ್ಲಿರುವವರು. ಅವರು ಅನೇಕ ತಾತ್ಕಾಲಿಕ ನಾಮಕರಣಗಳನ್ನು ಪಡೆಯುತ್ತಾರೆ. ಇದು ಒಳ್ಳೆಯದಲ್ಲ. ದೇಶದಲ್ಲಿ ಪ್ರತಿಯೊಬ್ಬರಿಗೂ ಅವಕಾಶ ಇರಬೇಕು ಮತ್ತು ಆ ಅವಕಾಶವನ್ನು ಕಾನೂನಿನಿಂದ ವ್ಯಾಖ್ಯಾನಿಸಲಾಗಿದೆ. ಈ ರೀತಿಯ ಯಾವುದೇ ಇನಾಮು ಸಂವಿಧಾನ ರೂಪಿಸಿದವರ ದೃಷ್ಟಿಕೋನಕ್ಕೆ ವಿರುದ್ಧವಾಗಿರುತ್ತದೆ” ಎಂದು ಹೇಳಿದರು.

ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀ ಧನಕರ್, “ಇದೊಂದು ಬೆದರಿಕೆ. ನೀವು ಇದನ್ನು ನಿಗ್ರಹಿಸಬೇಕು. ಪ್ರಶ್ನೆಪತ್ರಿಕೆ ಸೋರಿಕೆಗಳಾದರೆ ನಿಮ್ಮ ಆಯ್ಕೆಯ ನ್ಯಾಯಕ್ಕೆ ಯಾವುದೇ ಅರ್ಥವಿಲ್ಲ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯು ಉದ್ಯಮವಾಗಿ, ಒಂದು ವ್ಯಾಪಾರವಾಗಿ ಮಾರ್ಪಟ್ಟಿದೆ. ಯುವಕರು ಮತ್ತು ಯುವತಿಯರು ಪ್ರಶ್ನೆ ಎಷ್ಟು ಕಷ್ಟಕರವಾಗಿರುತ್ತದೆ. ನಾವು ಅದನ್ನು ಹೇಗೆ ಪರಿಹರಿಸುತ್ತೇವೆ? ಎಂದು ಪರೀಕ್ಷೆಯ ಭಯವನ್ನು ಹೊಂದಿದ್ದರು. ಈಗ ಅವರಿಗೆ ಎರಡು ಭಯಗಳು ಕಾಡುತ್ತಿವೆ. ಒಂದು ಪರೀಕ್ಷೆಯ ಭಯ. ಎರಡನೆಯದಾಗಿ, ಪ್ರಶ್ನೆಪತ್ರಿಕೆ ಸೋರಿಕೆಯ ಭಯ. ಆದ್ದರಿಂದ ಅವರು ಪರೀಕ್ಷೆಗೆ ತಯಾರಾಗಲು ಹಲವಾರು ತಿಂಗಳುಗಳು ಕಷ್ಟಪಡುವಾಗ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಅವರಿಗೆ ಹಿನ್ನಡೆಯಾಗುತ್ತದೆ” ಎಂದು ಹೇಳಿದರು.

ರಾಜಕೀಯದ ವಿಭಜಕ ಮತ್ತು ಧ್ರುವೀಕರಣದ ಸ್ವರೂಪವನ್ನು ಪ್ರಸ್ತಾಪಿಸಿದ ಉಪರಾಷ್ಟ್ರಪತಿಯವರು, “ಇಂದು ನಮ್ಮ ರಾಜಕೀಯವು ತುಂಬಾ ವಿಭಜಕವಾಗಿದೆ, ತುಂಬಾ ಧ್ರುವೀಕರಣಗೊಂಡಿದೆ. ರಾಜಕೀಯ ಸಂಘಟನೆಗಳ ಉನ್ನತಮಟ್ಟದಲ್ಲಿ ಸಂವಹನ ನಡೆಯುತ್ತಿಲ್ಲ. ರಾಷ್ಟ್ರದ ವಿಷಯಕ್ಕೆ ಬಂದರೆ, ಜಗತ್ತು ಪರಿವರ್ತನೆಯ ಹಂತದಲ್ಲಿದ್ದು, ಇದು ಭಾರತದ ಶತಮಾನವಾಗಿದೆ. ನಮ್ಮಲ್ಲಿ ಶಾಂತವಾದ ರಾಜಕೀಯ ವಾತಾವರಣ ಇದ್ದಾಗ ಮಾತ್ರ ಈ ಶತಮಾನವು ಜನರ ಲಾಭಕ್ಕಾಗಿ ಸಂಪೂರ್ಣವಾಗಿ ಫಲಪ್ರದವಾಗಬಲ್ಲದು. ನಮಗೆ ರಾಜಕೀಯ ಅಗ್ನಿಶಾಮಕಗಳು ಬೇಕಾಗುತ್ತವೆ. ನಾವು ಎದುರಿಸುತ್ತಿರುವ ಹವಾಮಾನ ಬದಲಾವಣೆಗಿಂತ ರಾಜಕೀಯ ವಿಭಜನೆ, ವಿನಾಶಕಾರಿ ರಾಜಕೀಯ ವಾತಾವರಣವು ಹೆಚ್ಚು ಅಪಾಯಕಾರಿಯಾಗಿದೆ” ಎಂದು ಹೇಳಿದರು.

"ರಾಜಕೀಯದಲ್ಲಿ ಸಾಮರಸ್ಯವು ಕೇವಲ ಆಶಯವಲ್ಲ, ಅಪೇಕ್ಷಣೀಯ ಅಂಶವಾಗಿದೆ. ಸಾಮರಸ್ಯ ಅತ್ಯಗತ್ಯ. ರಾಜಕೀಯದಲ್ಲಿ ಸಾಮರಸ್ಯವಿಲ್ಲದಿದ್ದರೆ, ರಾಜಕೀಯವು ಧ್ರುವೀಕೃತವಾದರೆ, ಆಳವಾದ ಒಡಕು ಮೂಡಿದರೆ, ಯಾವುದೇ ಸಂವಹನ ಮಾರ್ಗಗಳು ನಡೆಯದಿದ್ದರೆ, ನೀವು ಭೂಕಂಪದಲ್ಲಿ ಸಿಲುಕಿದ್ದೀರಿ ಎಂದು ಊಹಿಸಿಕೊಳ್ಳಿ, ನೀವು ಕಳೆದುಹೋಗಿದ್ದೀರಿ ಮತ್ತು ನಿಮಗೆ ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂಪರ್ಕವಿಲ್ಲದಿದ್ದರೆ, ವಿಷಯಗಳು ನಿಮಗೆ ಭಯಾನಕವಾಗುತ್ತವೆ” ಎಂದು ಅವರು ಹೇಳಿದರು.

ಸದೃಢವಾದ ಸಂಸ್ಥೆಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಶ್ರೀ ಧನಕರ್, “ಸಂಸ್ಥೆಗಳ ದುರ್ಬಲಗೊಳಿಸುವಿಕೆ. ಯಾವುದೇ ಸಂಸ್ಥೆ ದುರ್ಬಲಗೊಂಡರೆ ಇಡೀ ರಾಷ್ಟ್ರಕ್ಕೆ ಹಾನಿಯಾಗುತ್ತದೆ. ಸಂಸ್ಥೆಯನ್ನು ದುರ್ಬಲಗೊಳಿಸುವುದು ದೇಹಕ್ಕೆ ಚುಚ್ಚಿದಂತೆ. ಇಡೀ ದೇಹಕ್ಕೆ ನೋವುಂಟು ಮಾಡುತ್ತದೆ. ಆದ್ದರಿಂದ ನಾವು ಸಂಸ್ಥೆಗಳನ್ನು ಬಲಪಡಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ. ರಾಜ್ಯಗಳು ಮತ್ತು ಕೇಂದ್ರ ಒಟ್ಟಾಗಿ ಕೆಲಸ ಮಾಡಬೇಕು. ಅವರು ಸಮನ್ವಯದಿಂದ ಕೆಲಸ ಮಾಡಬೇಕು. ರಾಷ್ಟ್ರೀಯ ಹಿತಾಸಕ್ತಿಯ ವಿಷಯಕ್ಕೆ ಬಂದಾಗ ಅವರಲ್ಲಿ ಪರಸ್ಪರ ಸಹಮತವಿರಬೇಕು." ಎಂದು ಹೇಳಿದರು.

ರಾಷ್ಟ್ರವು ಎದುರಿಸುತ್ತಿರುವ ಸಮಸ್ಯೆಗಳನ್ನು ನಿರ್ಲಕ್ಷಿಸುವ ಬದಲು ಮಾತುಕತೆ ಮತ್ತು ಚರ್ಚೆಯ ಮೂಲಕ ಪರಿಹರಿಸುವ ಅಗತ್ಯವನ್ನು ಶ್ರೀ ಧನಕರ್‌ ಒತ್ತಿ ಹೇಳಿದರು, “ನಾವು ವಿಭಿನ್ನ ಸಿದ್ಧಾಂತಗಳ ಆಡಳಿತವನ್ನು ಹೊಂದಿರುವ ದೇಶ. ಅದು ನಮ್ಮ ಸಮಾಜದಲ್ಲಿ ಒಳಗೊಳ್ಳುವಿಕೆಯ ಅಭಿವ್ಯಕ್ತಿಯಾಗಿದೆ. ಆದ್ದರಿಂದ ಆಡಳಿತದ ಗದ್ದುಗೆಯಲ್ಲಿರುವ ಎಲ್ಲರೂ, ಎಲ್ಲಾ ಹಂತಗಳಲ್ಲಿ, ಸಂವಾದವನ್ನು ಹೆಚ್ಚಿಸಬೇಕು, ಒಮ್ಮತದಲ್ಲಿ ನಂಬಿಕೆ ಇಡಬೇಕು ಯಾವಾಗಲೂ ಚರ್ಚೆಗೆ ಸಿದ್ಧರಾಗಿರಬೇಕು ಎಂದು ನಾನು ಈ ವೇದಿಕೆಯಿಂದ ಒತ್ತಾಯಿಸುತ್ತೇನೆ. ರಾಷ್ಟ್ರವು ಎದುರಿಸುತ್ತಿರುವ ಸಮಸ್ಯೆಗಳನ್ನು ನೇಪಥ್ಯಕ್ಕೆ ತಳ್ಳಬಾರದು. ಸಮಸ್ಯೆಗಳನ್ನು ಬೆನ್ನಿಗೆ ಕಟ್ಟಿಕೊಂಡು ನಾವು ಮುಂದೆ ಸಾಗಲು ಸಾಧ್ಯವಿಲ್ಲ. ಇವುಗಳನ್ನು ಆದಷ್ಟು ಬೇಗ ಪರಿಹರಿಸಬೇಕಾಗಿದೆ. ಅದಕ್ಕಾಗಿ ಸಂವಾದ, ಚರ್ಚೆ, ಔಪಚಾರಿಕ, ಅನೌಪಚಾರಿಕವಾಗಿ ರಚಿಸಬಹುದಾದ ಪರಿಸರ ವ್ಯವಸ್ಥೆ ಮತ್ತು ವಾತಾವರಣವನ್ನು ಸೃಷ್ಟಿಸಲು ನಾನು ಎಲ್ಲಾ ರಾಜಕೀಯ ಪಕ್ಷಗಳ ಹಿರಿಯ ನಾಯಕತ್ವವನ್ನು ಒತ್ತಾಯಿಸುತ್ತೇನೆ. ಒಮ್ಮತದ ವಿಧಾನ, ಚರ್ಚೆ ನಮ್ಮ ನಾಗರಿಕತೆಯ ನೀತಿಯಲ್ಲಿ ಆಳವಾಗಿ ಬೇರೂರಿದೆ. ಇದು ನಾವು ಜಗತ್ತಿಗೆ ನೀಡಿದ ಸಂದೇಶ. ನಾವೇ ಈ ಸಂದೇಶವನ್ನು ಪಾಲಿಸುವ ಸಮಯ ಬಂದಿದೆ.” ಎಂದು ಅವರು ಹೇಳಿದರು.

ಸಮಾಜದಲ್ಲಿ ಬುದ್ಧಿಜೀವಿಗಳ ಪಾತ್ರದ ಕುರಿತು ಮಾತನಾಡಿದ ಅವರು, “ಬುದ್ಧಿಜೀವಿಗಳು ನಮಗೆ ಮಾರ್ಗದರ್ಶನ ನೀಡಬೇಕು. ಸಾಮಾಜಿಕ ಅಸ್ಪಷ್ಟತೆ ಇದ್ದಾಗ, ಸಮಸ್ಯೆ ಎದುರಾದಾಗ ಬುದ್ಧಿಜೀವಿಗಳು ಬೆಂಕಿ ನಂದಿಸುವವರಾಗಬೇಕು. ಬುದ್ಧಿಜೀವಿಗಳು ಗುಂಪುಗಳಾಗಿ ರೂಪುಗೊಂಡಿರುವುದನ್ನು ನಾನು ನೋಡಿದ್ದೇನೆ. ಅವರು ಓದದೇ ಇರುವ ಮನವಿ ಪತ್ರಗಳಿಗೆ ಸಹಿ ಮಾಡುತ್ತಾರೆ. ಇಂತಹ ಮನವಿಗಳಿಗೆ ಸಹಿ ಮಾಡುವುದು ಒಂದು ನಿರ್ದಿಷ್ಟ ಪಕ್ಷವು ಅಧಿಕಾರಕ್ಕೆ ಬಂದರೆ ಸ್ಥಾನಮಾನವನ್ನು ಪಡೆಯಲು ಪಾಸ್ವರ್ಡ್ ಎಂದು ಅವರು ಭಾವಿಸುತ್ತಾರೆ. ಈಗ ಬುದ್ಧಿಜೀವಿಗಳು, ಮಾಜಿ ಅಧಿಕಾರಶಾಹಿಗಳು, ಮಾಜಿ ರಾಜತಾಂತ್ರಿಕರನ್ನು ನೋಡಿ. ನೀವು ಸಾರ್ವಜನಿಕ ಸೇವೆಯಲ್ಲಿ ಒಂದು ಮಟ್ಟವನ್ನು ಗಳಿಸಿದ್ದೀರಿ, ಅದನ್ನು ಇತರರು ಅನುಕರಿಸಬೇಕು. ಅಭಿಪ್ರಾಯಗಳನ್ನು ಹೇಳುವಲ್ಲಿ ನೀವು ವಸ್ತುನಿಷ್ಠವಾಗಿರಬೇಕು. ರಾಜಕೀಯ ಹೊಂದಾಣಿಕೆಗಳ ಬದಲಾವಣೆಯೊಂದಿಗೆ ನಿಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ನೀವು ಗುಂಪನ್ನು ರಚಿಸಬಾರದು” ಎಂದು ಅವರು ಹೇಳಿದರು.

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ತಾವರಚಂದ್ ಗೆಹ್ಲೋಟ್, ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ,  ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷೆ ಶ್ರೀಮತಿ ಪ್ರೀತಿ ಸುದನ್, ಹರಿಯಾಣ ಲೋಕಸೇವಾ ಆಯೋಗದ ಅಧ್ಯಕ್ಷ ಶ್ರೀ ಅಲೋಕ್ ವರ್ಮಾ, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶ್ರೀ ಶಿವಶಂಕರಪ್ಪ ಎಸ್.ಸಾಹುಕಾರ್ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

*****

 


(Release ID: 2092080) Visitor Counter : 36