ಉಕ್ಕು ಸಚಿವಾಲಯ
azadi ka amrit mahotsav

ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಪಿ ಎಲ್‌ ಐ ಯೋಜನೆ 1.1 ಕ್ಕೆ ಚಾಲನೆ ನೀಡಿದರು


ಈ ಯೋಜನೆಯು 2025-26 ನೇ ಆರ್ಥಿಕ ವರ್ಷದಿಂದ 2029-30 ನೇ ಆರ್ಥಿಕ ವರ್ಷದವರೆಗೆ ಅನುಷ್ಠಾನಗೊಳ್ಳಲಿದೆ

Posted On: 06 JAN 2025 7:13PM by PIB Bengaluru

ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು 2025ರ ಜನವರಿ 6 ರಂದು ನವದೆಹಲಿಯ ವಿಜ್ಞಾನಭವನದಲ್ಲಿ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಉದ್ಯಮದ ನಾಯಕರ ಸಮ್ಮುಖದಲ್ಲಿ ವಿಶೇಷ ಉಕ್ಕಿಗಾಗಿ (ಸ್ಪೆಷಾಲಿಟಿ ಸ್ಟೀಲ್) ಪಿ ಎಲ್ ಐ ಯೋಜನೆ 1.1 ಎಂದು ಕರೆಯಲಾಗುವ ಎರಡನೇ ಸುತ್ತಿನ ಪಿ ಎಲ್ ಐ ಯೋಜನೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು, ಉಕ್ಕು ಸಚಿವಾಲಯವು ಐದು ಉತ್ಪನ್ನ ವರ್ಗಗಳಿಗೆ ವಿಶೇಷ ಉಕ್ಕಿಗಾಗಿ ಪಿ ಎಲ್‌ ಐ ಯೋಜನೆ 1.1 ಅನ್ನು ಹೊರತಂದಿದೆ ಇದು ಉದ್ಯಮದಲ್ಲಿ ಭಾಗವಹಿಸುವವರು ವಿನಾಯ್ತಿಗಾಗಿ ಸಚಿವಾಲಯವನ್ನು ವಿನಂತಿಸಿದ್ದರಿಂದ ಮತ್ತಷ್ಟು ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸಲು ಅಸ್ತಿತ್ವದಲ್ಲಿರುವ ಪಿ ಎಲ್‌ ಐ ಯೋಜನೆಯಂತೆಯೇ ಇದೆ ಎಂದು ಹೇಳಿದರು. 'ಪಿ ಎಲ್‌ ಐ ಸ್ಕೀಮ್ 1.1' ಜನವರಿ 6 ರಿಂದ ಜನವರಿ 31, 2025 ರವರೆಗೆ ತೆರೆದಿರುತ್ತದೆ. ಹೂಡಿಕೆ ಮಾಡಲು ಮತ್ತು ಬ್ರಾಂಡ್ ಇಂಡಿಯಾವನ್ನು ಬಲಪಡಿಸಲು, ಆಮದುಗಳನ್ನು ಕಡಿಮೆ ಮಾಡಲು ಮತ್ತು ಭಾರತವನ್ನು ಜಾಗತಿಕ ಉಕ್ಕಿನ ಶಕ್ತಿಯಾಗಿ ಇರಿಸಲು ಉದ್ಯಮವು ಸಕ್ರಿಯವಾಗಿ ಭಾಗವಹಿಸುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. ವಿಶೇಷ ಉಕ್ಕಿನ ಪಿ ಎಲ್‌ ಐ ಯೋಜನೆಯಲ್ಲಿ ಮಾಡಿದ ಬದಲಾವಣೆಗಳು ದೇಶೀಯ ಉತ್ಪಾದನೆಯನ್ನು ಬಲಪಡಿಸಲು, ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ಆಮದುಗಳನ್ನು ಕಡಿಮೆ ಮಾಡಲು ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು.

ಉಕ್ಕು ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂದೀಪ್ ಪೌಂಡ್ರಿಕ್, ಪಿ ಎಲ್‌ ಐ ಯೋಜನೆ 1.1 ಅನ್ನು 2025-26ನೇ ಆರ್ಥಿಕ ವರ್ಷದಿಂದ 2029-30ನೇ ಆರ್ಥಿಕ ವರ್ಷದ ಉತ್ಪಾದನಾ ಅವಧಿಯಲ್ಲಿ ಜಾರಿಗೊಳಿಸಲಾಗುವುದು ಎಂದು ಹೇಳಿದರು. ಹಿಂದಿನ ಸುತ್ತಿನಲ್ಲಿ 8 ಉಪ ವಿಭಾಗಗಳಲ್ಲಿ ಭಾಗವಹಿಸುವವರು ಇರಲಿಲ್ಲ ಎಂದು ತಿಳಿಸಿದ ಅವರು, ಈ ಬಾರಿ ಹೆಚ್ಚಿನ ಭಾಗವಹಿಸುವಿಕೆ ಇರುತ್ತದೆ ಎಂದು ಆಶಿಸಿದರು. ಯೋಜನೆಯನ್ನು ಹೆಚ್ಚು ಹೂಡಿಕೆದಾರ ಸ್ನೇಹಿಯನ್ನಾಗಿ ಮಾಡಲು ಉದ್ಯಮದೊಂದಿಗೆ ಸಮಾಲೋಚನೆ ನಡೆಸಿ ಕೆಲವು ಬದಲಾವಣೆಗಳನ್ನು ಅಳವಡಿಸಲಾಗಿದೆ, ಇದರಲ್ಲಿ ಸಿ ಆರ್‌ ಜಿ ಒ ಉತ್ಪನ್ನದ ಉಪ-ವರ್ಗಗಳಿಗೆ ಹೂಡಿಕೆ ಮತ್ತು ಸಾಮರ್ಥ್ಯದ ಮಿತಿಯಲ್ಲಿ ಕಡಿತ, ಪ್ರೋತ್ಸಾಹಕ ಮತ್ತು ಕ್ಲೈಮ್ ಮಾಡುವ ಉದ್ದೇಶಕ್ಕಾಗಿ ಹೆಚ್ಚುವರಿ ಉತ್ಪಾದನೆಯನ್ನು ಮುಂದಿನ ವರ್ಷಕ್ಕೆ ಕ್ಯಾರಿ ಫಾರ್ವರ್ಡ್‌ ಮಾಡುವುದು ಒಳಗೊಂಡಿವೆ.

ಪಿ ಎಲ್‌ ಐ ಯೋಜನೆ 1.1 ಅಸ್ತಿತ್ವದಲ್ಲಿರುವ ಪಿ ಎಲ್‌ ಐ ಯೋಜನೆಗೆ ಅನುಗುಣವಾಗಿ ಐದು (5) ಉತ್ಪನ್ನ ವಿಭಾಗಗಳನ್ನು ಒಳಗೊಂಡಿದೆ, ಅವುಗಳೆಂದರೆ ಕೋಟೆಡ್ / ಪ್ಲೇಟೆಡ್ ಉಕ್ಕಿನ ಉತ್ಪನ್ನಗಳು, ಹೆಚ್ಚಿನ ಸಾಮರ್ಥ್ಯ / ಸವೆತ ನಿರೋಧಕ ಉಕ್ಕು, ಸ್ಪೆಷಾಲಿಟಿ ರೈಲ್ಸ್‌, ಅಲಾಯ್ ಉಕ್ಕಿನ ಉತ್ಪನ್ನಗಳು ಮತ್ತು ಉಕ್ಕಿನ ತಂತಿಗಳು ಮತ್ತು ವಿದ್ಯುತ್ ಸ್ಟೀಲ್. ಈ ಉತ್ಪನ್ನಗಳು ಬೃಹತ್‌ ಗೃಹ ಬಳಕೆ ವಸ್ತುಗಳಿಂದ (ವೈಟ್ ಗೂಡ್ಸ್‌) ಟ್ರಾನ್ಸ್‌ಫಾರ್ಮರ್‌, ಆಟೋಮೊಬೈಲ್‌‌ ಗಳು ಮತ್ತು ಇತರ ಸ್ಥಾಪಿತ ವಲಯಗಳವರೆಗೆ ವ್ಯಾಪಕವಾಗಿ ಬಳಸಲ್ಪಡುತ್ತವೆ. ಯೋಜನೆಯು ಮೂಲತಃ ಅದಕ್ಕೆ ನಿಗದಿಪಡಿಸಿದ ಮೊತ್ತದಲ್ಲಿ ಅಂದರೆ ರೂ 6,322 ಕೋಟಿಯೊಳಗೆ ಕಾರ್ಯನಿರ್ವಹಿಸುತ್ತದೆ.

ಉದ್ಯಮದ ಪ್ರತಿಕ್ರಿಯೆಯನ್ನು ಆಧರಿಸಿ ಪಿ ಎಲ್‌ ಐ ನಿಯಮಗಳಿಗೆ ಬದಲಾವಣೆಗಳನ್ನು ಮಾಡಲಾಗಿದೆ. ಎಲ್ಲಾ ಕಂಪನಿಗಳು ಹೊಸ ಗಿರಣಿಗಳನ್ನು ಸ್ಥಾಪಿಸುವ ಅಗತ್ಯವಿಲ್ಲ. ಗುಣಮಟ್ಟದ ಉಕ್ಕಿನ ಉತ್ಪಾದನೆ, ಇಂಧನ ದಕ್ಷತೆ ಮತ್ತು ಇತರ ಪ್ರಕ್ರಿಯೆ ಸುಧಾರಣೆಗಳ ಪ್ರಾಮುಖ್ಯತೆಯನ್ನು ಗುರುತಿಸಿ ಅಸ್ತಿತ್ವದಲ್ಲಿರುವ ಸಾಮರ್ಥ್ಯಗಳ ವಿಸ್ತರಣೆಯಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಯೋಜನೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಹೂಡಿಕೆಯು ಮಾನ್ಯ ಸಚಿವರು ಇಂದು ಬಿಡುಗಡೆ ಮಾಡಿದ ವೆಬ್ ಪೋರ್ಟಲ್‌ ನಲ್ಲಿ ಅಪ್‌ಲೋಡ್ ಮಾಡಿದ ಮಾರ್ಗಸೂಚಿಗಳ ಅನುಬಂಧ-III ರಲ್ಲಿ ಉಲ್ಲೇಖಿಸಲಾದ ಮಿತಿಯ 50% ಆಗಿರುತ್ತದೆ.

ಕೋಲ್ಡ್-ರೋಲ್ಡ್ ಗ್ರೈನ್-ಓರಿಯೆಂಟೆಡ್ ಸ್ಟೀಲ್ (ಸಿ ಆರ್‌ ಜಿ ಒ) ಎನ್ನುವುದು ಎಚ್‌ ಟಿ ವಿದ್ಯುತ್ ವಿತರಣೆಯಲ್ಲಿ ಬಳಸಲಾಗುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ಗಳ ಉತ್ಪಾದನೆಯಲ್ಲಿ ಬಳಸಲಾಗುವ ಹೆಚ್ಚಿನ-ಮೌಲ್ಯದ ಉಕ್ಕು. ಸಿ ಆರ್‌ ಜಿ ಒ ತಯಾರಿಸುವ ತಂತ್ರಜ್ಞಾನವು ಯಾವುದೇ ಭಾರತೀಯ ಉಕ್ಕು ತಯಾರಕರಲ್ಲಿ ಲಭ್ಯವಿಲ್ಲ. ಸಿ ಆರ್‌ ಜಿ ಒ ನಲ್ಲಿ ಆತ್ಮನಿರ್ಭರವಾಗುವ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಪರಿಗಣಿಸಿ, ಉಕ್ಕು ಸಚಿವಾಲಯವು ದೇಶದೊಳಗೆ ಸಿ ಆರ್‌ ಜಿ ಒ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಭಾಗೀದಾರರೊಂದಿಗೆ ನಿಯಮಿತವಾಗಿ ಸಭೆಗಳನ್ನು ನಡೆಸುತ್ತಿದೆ. ಹೂಡಿಕೆ ಮತ್ತು ಸಾಮರ್ಥ್ಯ ಸೃಷ್ಟಿಯ ಮಿತಿಗಳನ್ನು ಕ್ರಮವಾಗಿ ರೂ.3,000 ಕೋಟಿ ಮತ್ತು 50,000 ಟನ್‌ ಗಳಿಗೆ ತಗ್ಗಿಸುವ ಮೂಲಕ, ಉದ್ಯಮವು ವಿಭಾಗದಲ್ಲಿ ಭಾಗವಹಿಸಲು ಉತ್ಸುಕರಾಗಬಹುದು ಎಂದು ಉಕ್ಕು ಸಚಿವಾಲಯ ಆಶಿಸಿದೆ.

ಪ್ರೋತ್ಸಾಹಕವನ್ನು ಪಡೆಯುವ ಉದ್ದೇಶಕ್ಕಾಗಿ ಕಂಪನಿಗಳು ಮುಂದಿನ ವರ್ಷಕ್ಕೆ ಹೆಚ್ಚುವರಿ ಉತ್ಪಾದನೆಯನ್ನು ಕ್ಯಾರಿ ಫಾರ್ವರ್ಡ್‌ ಮಾಡಬಹುದು: ನಿರ್ದಿಷ್ಟ ಉಪ-ವರ್ಗದಲ್ಲಿ ನಿರ್ದಿಷ್ಟ ಕಂಪನಿಯ ಉತ್ಪಾದನೆಯು ಆ ವರ್ಷಕ್ಕೆ ಅದರ ಬದ್ಧ ಉತ್ಪಾದನೆಯನ್ನು ಮೀರಿದರೆ, ಹೆಚ್ಚುವರಿ ಉತ್ಪಾದನೆಯ ಪ್ರಮಾಣವನ್ನು ಮುಂದಿನ ವರ್ಷದ ಉತ್ಪಾದನೆಯಲ್ಲಿ ಯಾವುದಾದರೂ ಕೊರತೆ ಇದ್ದರೆ ಅದನ್ನು ಸರಿದೂಗಿಸಲು ಬಳಸಬಹುದು. ಇದು ಪ್ರೋತ್ಸಾಹಕಗಳ ಅತ್ಯುತ್ತಮ ವಿತರಣೆಯನ್ನು ಖಚಿತಪಡಿಸುತ್ತದೆ ಮತ್ತು ಉತ್ತಮ ವರ್ಷದ ನಂತರ ಮುಂದಿನ ವರ್ಷದಲ್ಲಿ ಹೆಚ್ಚಿನ ಉತ್ಪಾದನೆಯನ್ನು ಸಾಧಿಸಲು ಸಾಧ್ಯವಾಗದಿದ್ದರೆ ಯಾವುದೇ ಕಂಪನಿಯು ಪ್ರೋತ್ಸಾಹಕಗಳಿಂದ ವಂಚಿತವಾಗುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.

ವಿಶೇಷ ಉಕ್ಕಿಗಾಗಿ ಮೊದಲ ಸುತ್ತಿನ ಉತ್ಪಾದನೆ ಆಧಾರಿತ ಪ್ರೋತ್ಸಾಹಕ (ಪಿ ಎಲ್‌ ಐ) ಯೋಜನೆಯನ್ನು ಜುಲೈ 29, 2021 ರಂದು ಉಕ್ಕಿನ ಸಚಿವಾಲಯವು ₹6,322 ಕೋಟಿಗಳ ಬಜೆಟ್ ವೆಚ್ಚದೊಂದಿಗೆ ಅಧಿಸೂಚಿಸಿದೆ. ವಿಶೇಷ ಉಕ್ಕಿನ ಪಿ ಎಲ್‌ ಐ ಯೋಜನೆಯ ಉದ್ದೇಶವು ದೇಶದೊಳಗೆ ಮೌಲ್ಯವರ್ಧಿತ ಉಕ್ಕಿನ ಶ್ರೇಣಿಗಳ ತಯಾರಿಕೆಯನ್ನು ಉತ್ತೇಜಿಸುವುದು ಮತ್ತು ಭಾರತೀಯ ಉಕ್ಕಿನ ಉದ್ಯಮವು ತಂತ್ರಜ್ಞಾನದ ಪರಿಭಾಷೆಯಲ್ಲಿ ಪ್ರಬುದ್ಧವಾಗಲು ಮತ್ತು ಮೌಲ್ಯ ಸರಪಳಿಯನ್ನು ಹೆಚ್ಚಿಸಲು ಸಹಾಯ ಮಾಡುವುದು. ಇದು ಈ ಶ್ರೇಣಿಗಳ ಆಮದನ್ನು ಕಡಿಮೆ ಮಾಡುತ್ತದೆ ಮತ್ತು ಆತ್ಮ ನಿರ್ಭರ ಭಾರತದ ಕಡೆಗೆ ಒಂದು ಹೆಜ್ಜೆಯಾಗಲಿದೆ.

ಮೊದಲ ಸುತ್ತಿನಲ್ಲಿ, 26 ಕಂಪನಿಗಳ 44 ಯೋಜನೆಗಳು ಸುಮಾರು ರೂ.27,106 ಕೋಟಿ ಮತ್ತು 24 ಮಿಲಿಯನ್ ಟನ್‌ ಗಳ ಡೌನ್‌ಸ್ಟ್ರೀಮ್ ಸಾಮರ್ಥ್ಯದ ಬದ್ಧ ಹೂಡಿಕೆಯೊಂದಿಗೆ ಸಕ್ರಿಯವಾಗಿವೆ. ನವೆಂಬರ್ 2024 ರ ಹೊತ್ತಿಗೆ, ಸಾಧಿಸಿದ ವಾಸ್ತವಿಕ ಹೂಡಿಕೆಯು ಸುಮಾರು 18,300 ಕೋಟಿ ರೂ.ಗಳಾಗಿದ್ದು, ಸುಮಾರು 8,300 ನೇರ ಉದ್ಯೋಗ ಸೃಷ್ಟಿಯಾಗಿದೆ. ಮೊದಲ ಸುತ್ತಿನಲ್ಲಿ ಭಾಗವಹಿಸುವವರಿಗೆ ಸುಮಾರು 2,000 ಕೋಟಿ ರೂ.ಗಳನ್ನು ಪಾವತಿಸಲಾಗುವುದು ಎಂದು ಉಕ್ಕು ಸಚಿವಾಲಯ ಅಂದಾಜಿಸಿದೆ.

ಅಪ್ಲಿಕೇಶನ್ ವಿಂಡೋ ಇಂದಿನಿಂದ (ಜನವರಿ 6, 2025) ಮತ್ತು 31 ಜನವರಿ 2025 ರವರೆಗೆ ಲೈವ್ ಆಗಿರುತ್ತದೆ. ಪೋರ್ಟಲ್ (ಅಂದರೆ, ಜನವರಿ 6, 2025) ತೆರೆದ ನಂತರ ಮಾಡಿದ ಹೂಡಿಕೆಯನ್ನು ಯೋಜನೆಯಲ್ಲಿ ಭಾಗವಹಿಸಲು ಪರಿಗಣಿಸಲಾಗುತ್ತದೆ.

ವಿಶೇಷ ಉಕ್ಕಿನ ಪಿ ಎಲ್‌ ಐ ಯೋಜನೆಯು ವಿಶೇಷ ಉಕ್ಕಿನ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಅಭಿವೃದ್ಧಿಪಡಿಸುವ ವಿಷಯವನ್ನು ಮುಂಚೂಣಿಗೆ ತಂದಿದೆ. ವಿಶೇಷ ಉಕ್ಕಿನ ಆಮದು ಕಡಿತ, ಸಾಮರ್ಥ್ಯ ಸೃಷ್ಟಿಯ ಮೂಲಕ 'ಆತ್ಮನಿರ್ಭರ್ತ' ಸಾಧಿಸುವುದು, ಉದ್ಯೋಗ ಸೃಷ್ಟಿಗೆ ಕಾರಣವಾಗುವ ಹೂಡಿಕೆಗಳನ್ನು ಖಾತ್ರಿಪಡಿಸುವುದು ಮತ್ತು ಉಕ್ಕಿನ ವ್ಯವಹಾರದಲ್ಲಿ ಮೌಲ್ಯ ಸರಪಳಿಯನ್ನು ಹೆಚ್ಚಿಸುವುದರಿಂದ ದೇಶವು ಪ್ರಯೋಜನ ಪಡೆಯುತ್ತದೆ.

 

*****


(Release ID: 2090761) Visitor Counter : 18


Read this release in: English , Urdu , Hindi