ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು 2024ರ ಡಿಸೆಂಬರ್ 28 ರಿಂದ 29 ರವರೆಗೆ ಅಗರ್ತಲಾಕ್ಕೆ ಭೇಟಿ ನೀಡಿದರು ಮತ್ತು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು


ಅಗರ್ತಲಾದಲ್ಲಿ ಎಫ್ ಸಿಐನ ಪ್ರಾದೇಶಿಕ ಕಚೇರಿಯನ್ನು ಸ್ಥಾಪಿಸುವ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ಶ್ರೀ ಪ್ರಲ್ಹಾದ್ ಜೋಶಿ ತಾತ್ವಿಕವಾಗಿ ಅನುಮೋದನೆ ನೀಡಿದ್ದಾರೆ

ಶ್ರೀ ಪ್ರಲ್ಹಾದ್ ಜೋಶಿ ಅವರು ಆಹಾರ ಧಾನ್ಯಗಳ ಸಂಗ್ರಹಣೆ, ವಿತರಣೆ, ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಮತ್ತು ಪಿಎಂ ಕುಸುಮ್ ಸೇರಿದಂತೆ ತ್ರಿಪುರಾದ ಪ್ರಮುಖ ಕೇಂದ್ರ ಯೋಜನೆಗಳ ಕಾರ್ಯಕ್ಷಮತೆ ಮತ್ತು ಅನುಷ್ಠಾನವನ್ನು ಪರಿಶೀಲಿಸಿದರು

ಪಿಎಂ ಕುಸುಮ್ ಮತ್ತು ಎಂಎನ್ಆರ್ ಇ ಉಪಕ್ರಮಗಳು ದ್ವಿ ಬೆಳೆಗಳ ಯಶಸ್ವಿ ಅನುಷ್ಠಾನಕ್ಕೆ ಕಾರಣವಾಯಿತು ಮತ್ತು ರೈತರಿಗೆ ಆದಾಯವನ್ನು ದ್ವಿಗುಣಗೊಳಿಸಿತು

ನರೇಂದ್ರ ಮೋದಿ ಸರ್ಕಾರವು ಈ ಉಚಿತ ಪಡಿತರ ಯೋಜನೆಯನ್ನು 2028 ರ ಡಿಸೆಂಬರ್ 31 ರವರೆಗೆ ವಿಸ್ತರಿಸಿದೆ

ಪಿಎಂ ಸೂರ್ಯ ಘರ್ ಯೋಜನೆ: ಕೇಂದ್ರ ಸಬ್ಸಿಡಿ ಮತ್ತು ಶೇ. 7 ರಷ್ಟು ರಿಯಾಯಿತಿ ಸಾಲದೊಂದಿಗೆ, ಗ್ರಾಹಕರು ತಕ್ಷಣವೇ ಹಣವನ್ನು ಉಳಿಸಲು ಪ್ರಾರಂಭಿಸಬಹುದು

Posted On: 29 DEC 2024 6:46PM by PIB Bengaluru

ನವದೆಹಲಿ/ ಅಗರ್ತಲಾ: ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು 2024 ರ ಡಿಸೆಂಬರ್ 28 ರಿಂದ 29 ರವರೆಗೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಗರ್ತಲಾಕ್ಕೆ ಭೇಟಿ ನೀಡಿದರು. ಅಗರ್ತಲಾಕ್ಕೆ ಅವರ ಭೇಟಿ ಫಲಪ್ರದವಾಗಿದೆ.

ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಸಚಿವರು ಡಿಸೆಂಬರ್ 28 ರಂದು ಭಾರತೀಯ ಆಹಾರ ನಿಗಮ (ಎಫ್ ಸಿಐ) ಕಚೇರಿ ಮತ್ತು ರಾಜ್ಯ ಗೋದಾಮಿಗೆ ಭೇಟಿ ನೀಡಿದರು, ಅಲ್ಲಿ ಅವರು ಪ್ರಸ್ತುತ ಪರಿಸ್ಥಿತಿಯನ್ನು, ವಿಶೇಷವಾಗಿ ಆಹಾರ ಧಾನ್ಯ ಸಂಗ್ರಹಣೆ ಮತ್ತು ವಿತರಣೆಯ ವಿಷಯದಲ್ಲಿ ಮಾಹಿತಿ ಪಡೆದರು.

ನಂತರ, ಅವರು ತ್ರಿಪುರಾದಲ್ಲಿ ಪ್ರಮುಖ ಕೇಂದ್ರ ಯೋಜನೆಗಳ ಕಾರ್ಯಕ್ಷಮತೆ ಮತ್ತು ಅನುಷ್ಠಾನವನ್ನು ಪರಿಶೀಲಿಸಲು ಮುಖ್ಯಮಂತ್ರಿ ಶ್ರೀ ಡಾ. ಮಾಣಿಕ್ ಸಹಾ ಮತ್ತು ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಕೇಂದ್ರ ಸಚಿವರಾದ ಶ್ರೀ ಜೋಶಿ ಅವರು ಎಫ್ ಸಿಐ, ಕೇಂದ್ರ ಉಗ್ರಾಣ ನಿಗಮ (ಸಿಡಬ್ಲ್ಯೂಸಿ) ಮತ್ತು ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ಟ್ ಬಿಜ್ಲಿ ಯೋಜನೆ ಮತ್ತು ಪಿಎಂ ಕುಸುಮ್ ನಂತಹ ಎಂಎನ್ ಆರ್ ಇ ಯೋಜನೆಗಳ ಅನುಷ್ಠಾನದ ವಿವರವಾದ ಪರಿಶೀಲನೆ ನಡೆಸಿದರು.

ಈ ಸಭೆಗಳಲ್ಲಿ, ಚರ್ಚೆಗಳು ಸವಾಲುಗಳನ್ನು ಎದುರಿಸಲು ಮತ್ತು ರಾಜ್ಯದಲ್ಲಿ ಈ ನಿರ್ಣಾಯಕ ಕಾರ್ಯಕ್ರಮಗಳ ಅನುಷ್ಠಾನವನ್ನು ಹೆಚ್ಚಿಸಲು ಪರಿಹಾರಗಳನ್ನು ಗುರುತಿಸುವತ್ತ ಗಮನ ಹರಿಸಿದವು.

ಸಭೆಯಲ್ಲಿ, ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಅಗರ್ತಲಾದಲ್ಲಿ ಎಫ್ ಸಿಐನ ಪ್ರಾದೇಶಿಕ ಕಚೇರಿಯನ್ನು ಸ್ಥಾಪಿಸುವ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ತಾತ್ವಿಕವಾಗಿ ಅನುಮೋದನೆ ನೀಡಿದ್ದಾರೆ. ಈ ಮುಂಬರುವ ಎಫ್ ಸಿಐ ಪ್ರಾದೇಶಿಕ ಕಚೇರಿಗಾಗಿ, ರಾಜ್ಯ ಸರ್ಕಾರವು ಈ ಉದ್ದೇಶಕ್ಕಾಗಿ ಭೂಮಿಯನ್ನು ಗುರುತಿಸುತ್ತದೆ ಎಂದು ನಿರ್ಧರಿಸಲಾಯಿತು.

ಇಂದು, 29 ರಂದು ಬೆಳಗ್ಗೆ ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಮಾ ತ್ರಿಪುರ ಸುಂದರಿಯ ದೈವಿಕ ದರ್ಶನ ಪಡೆದರು ಮತ್ತು ನಂತರ ಅವರು ಗೋಮತಿ ಜಿಲ್ಲೆಯ ಮಾತಬರಿ ಅಡಿಯಲ್ಲಿ ಚಂದ್ರಾಪುರದ ಚಂದ್ರಾಪುರ ಕಾಲೋನಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪಿಎಂ ಮೋದಿ ಜೀ ಅವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಆಲಿಸಿದರು.

ನಂತರ, ಸಚಿವರು ರೈತರಿಗಾಗಿ ತ್ರಿಪುರಾ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಟ್ರೆಡಾ) ಕೈಗೊಂಡ ಕೇಂದ್ರ ಪ್ರಾಯೋಜಿತ ನವೀಕರಿಸಬಹುದಾದ ಇಂಧನ ಯೋಜನೆಯ ಮೇಲ್ವಿಚಾರಣೆಗಾಗಿ ಚರಿಲಾಮ್ ಗ್ರಾಮಕ್ಕೆ ಭೇಟಿ ನೀಡಿದರು ಮತ್ತು ಎಂಎನ್ಆರ್ ಇ ಯೋಜನೆಗಳ ಅನುಷ್ಠಾನವನ್ನು ಪರಿಶೀಲಿಸಿದರು.

ಈ ಪ್ರದೇಶದಲ್ಲಿ ಎಂಎನ್ಆರ್ ಇ ಚಟುವಟಿಕೆಗಳ ಪರಿಶೀಲನೆಯ ಸಂದರ್ಭದಲ್ಲಿ, ಪಿಎಂ-ಕುಸುಮ್ ಯೋಜನೆ (ಘಟಕ ಬಿ) ಅಡಿಯಲ್ಲಿ 54 ಎಕರೆ ಭೂಮಿಯನ್ನು ಒಳಗೊಂಡ 27 ಎಸ್ ಪಿವಿ ಪಂಪ್ ಗಳನ್ನು ಮತ್ತು ಎಂಎನ್ಆರ್ ಇ ಯೋಜನೆಯಡಿ 35 ಎಲ್ಇಡಿ ಆಧಾರಿತ ಎಸ್ ಪಿವಿ ಬೀದಿ ದೀಪ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ ಎಂದು ಸಚಿವರು ಹೇಳಿದರು. ಈ ಉಪಕ್ರಮಗಳು ದ್ವಿ ಬೆಳೆಗಳ ಯಶಸ್ವಿ ಅನುಷ್ಠಾನಕ್ಕೆ ಕಾರಣವಾಗಿವೆ, ಇದರ ಪರಿಣಾಮವಾಗಿ ರೈತರಿಗೆ ದ್ವಿಗುಣ ಆದಾಯ ಬಂದಿದೆ ಎಂದು ಅವರು ಹೇಳಿದರು.

ಈಶಾನ್ಯ ರಾಜ್ಯಗಳಲ್ಲಿ ಶೇಖರಣಾ ಸ್ಥಳವನ್ನು ಹೆಚ್ಚಿಸಲು ಭಾರತ ಸರ್ಕಾರ ಇತ್ತೀಚೆಗೆ ಖಾಸಗಿ ಉದ್ಯಮ ಖಾತರಿ (ಪಿಇಜಿ) ಯೋಜನೆಗೆ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು. ಈ ಉಪಕ್ರಮದೊಂದಿಗೆ, ಎರಡು ವರ್ಷಗಳ ಅವಧಿಯಲ್ಲಿ 70,000 ಮೆಟ್ರಿಕ್ ಟನ್ ಹೆಚ್ಚುವರಿ ಸಾಮರ್ಥ್ಯವನ್ನು ನಿರ್ಮಿಸುವ ಮೂಲಕ ತ್ರಿಪುರಾದಲ್ಲಿ ತನ್ನ ಸಂಗ್ರಹಣಾ ಸಾಮರ್ಥ್ಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಎಫ್ ಸಿಐ ಹೊಂದಿದೆ.

ಇಂದು ಭಾರತವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ 81 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸುತ್ತಿದೆ, ಇದು ಯುರೋಪಿಯನ್ ಒಕ್ಕೂಟದ ಜನಸಂಖ್ಯೆಯ ಎರಡು ಪಟ್ಟು ಹೆಚ್ಚಾಗಿದೆ ಎಂದರು. ಈ ಯೋಜನೆಯಡಿ, ಸ್ಥಳೀಯ ಅಗತ್ಯಕ್ಕೆ ಅನುಗುಣವಾಗಿ ರಾಜ್ಯ ಗುರುತಿಸಲಾದ ಫಲಾನುಭವಿಗಳಿಗೆ ಅಕ್ಕಿ, ಗೋಧಿ ಮತ್ತು ಒರಟು ಧಾನ್ಯಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ನರೇಂದ್ರ ಮೋದಿ ಸರ್ಕಾರವು ಈ ಉಚಿತ ಪಡಿತರ ಯೋಜನೆಯನ್ನು 2028 ರ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ.

ಕಳೆದ 5 ವರ್ಷಗಳಲ್ಲಿ, ವಿಕೇಂದ್ರೀಕೃತ ಖರೀದಿ ಮೋಡ್ ಅಡಿಯಲ್ಲಿ, ತ್ರಿಪುರಾ ರಾಜ್ಯದಲ್ಲಿ 360 ಕೋಟಿ ರೂ.ಗಳ ಕನಿಷ್ಠ ಬೆಂಬಲ ಬೆಲೆಯ ಸುಮಾರು 1.2 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಸಂಗ್ರಹಿಸಲಾಗಿದೆ, ಇದರಿಂದ ಸುಮಾರು 94,000 ರೈತರಿಗೆ ಪ್ರಯೋಜನವಾಗಿದೆ.

ಇತ್ತೀಚೆಗೆ, ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಸಮಗ್ರ ಶಿಶು ಅಭಿವೃದ್ಧಿ ಸೇವೆಗಳು ಮತ್ತು ಪಿಎಂ ಪೋಷಣ್ ಸೇರಿದಂತೆ ಎಲ್ಲಾ ಸರ್ಕಾರಿ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಕಬ್ಬಿಣ, ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ 12 ನಂತಹ ಅಗತ್ಯ ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾದ ಬಲವರ್ಧಿತ ಅಕ್ಕಿಯ ಸಾರ್ವತ್ರಿಕ ಪೂರೈಕೆಯನ್ನು 2024ರ  ಜುಲೈನಿಂದ 2028 ರ ಡಿಸೆಂಬರ್ ವರೆಗೆ ವಿಸ್ತರಿಸಿದೆ. 2023-24ರಲ್ಲಿ, ತ್ರಿಪುರಾದಲ್ಲಿ ವಿವಿಧ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಸುಮಾರು 1.75 ಲಕ್ಷ ಮೆಟ್ರಿಕ್ ಟನ್ ಫೋರ್ಟಿಫೈಡ್ ಅಕ್ಕಿಯನ್ನು ಎತ್ತುವಳಿ / ವಿತರಿಸಲಾಗಿದೆ.

ವಲಸೆ ಕಾರ್ಮಿಕರಿಗೆ ಅನುಕೂಲವಾಗುವಂತೆ ದೇಶಾದ್ಯಂತ ಎಲ್ಲಾ 36 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಯೋಜನೆಯನ್ನು ಜಾರಿಗೆ ತಂದಿವೆ ಎಂದು ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು, ಫಲಾನುಭವಿಗಳು ತಮ್ಮ ಅರ್ಹ ಆಹಾರ ಧಾನ್ಯವನ್ನು ತಮ್ಮ ಆಯ್ಕೆಯ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ದೇಶದ ಯಾವುದೇ ಭಾಗದಿಂದ ಎತ್ತುವಳಿ ಮಾಡಲು ಅಧಿಕಾರ ಹೊಂದಿದ್ದಾರೆ ಎಂದು ಹೇಳಿದರು.

ತ್ರಿಪುರಾದಲ್ಲಿ, ಒಎನ್ಒಆರ್ ಸಿ ಅಡಿಯಲ್ಲಿ ಒಟ್ಟು ಪೋರ್ಟಬಿಲಿಟಿ ವಹಿವಾಟುಗಳು 18.74 ಲಕ್ಷ ಮತ್ತು ಶೇ.100 ರಷ್ಟು ಪಡಿತರ ಚೀಟಿಗಳನ್ನು ಆಧಾರ್ ನೊಂದಿಗೆ ಜೋಡಿಸಲಾಗಿದೆ ಮತ್ತು ಎಲ್ಲಾ ಎಫ್ ಪಿ ಎಸ್ ಗಳನ್ನು ಇಪಿಒಗಳೊಂದಿಗೆ ಸಕ್ರಿಯಗೊಳಿಸಲಾಗಿದ್ದು, ಸೋರಿಕೆಯನ್ನು ತಪ್ಪಿಸಲಾಗಿದೆ ಎಂದು ಅವರು ಹೇಳಿದರು.

ದೇಶದ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸಲು, ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಗ್ರಾಹಕ ಆಯೋಗಗಳನ್ನು ಬಲಪಡಿಸುವ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ರಾಜ್ಯ ಸರ್ಕಾರಗಳ ಪ್ರಯತ್ನಗಳಿಗೆ ಪೂರಕವಾಗಿ ಕೇಂದ್ರ ಸರ್ಕಾರವು ಈ ಯೋಜನೆಯಡಿ ರಾಜ್ಯ ಸರ್ಕಾರಗಳಿಗೆ ಆರ್ಥಿಕ ನೆರವು ನೀಡುತ್ತಿದೆ, ಇದರಲ್ಲಿ ತ್ರಿಪುರಾ ರಾಜ್ಯಕ್ಕೆ ಪ್ರಾರಂಭದಿಂದಲೂ ಬಿಡುಗಡೆಯಾದ ಒಟ್ಟು ನಿಧಿ 3.65 ಕೋಟಿ ರೂ. ಆಗಿದೆ.

ಬೆಲೆ ಏರಿಳಿತವನ್ನು ನಿಯಂತ್ರಿಸಲು, ಬೆಲೆ ಸ್ಥಿರೀಕರಣ ನಿಧಿಯ ಅಡಿಯಲ್ಲಿ ಸರ್ಕಾರವು ಈರುಳ್ಳಿ ಬಫರ್ ಅನ್ನು ನಿರ್ವಹಿಸುತ್ತದೆ ಎಂದು ಸಚಿವರು ಒತ್ತಿಹೇಳಿದ್ದಾರೆ. ವಿಲೇವಾರಿಯನ್ನು ವೆಚ್ಚದಾಯಕ ಮತ್ತು ಪರಿಣಾಮಕಾರಿಯಾಗಿ ಮಾಡಲು, ಮೊದಲ ಬಾರಿಗೆ ನಾಸಿಕ್ ನಿಂದ ಈಶಾನ್ಯ ಪ್ರದೇಶದ ಗುವಾಹಟಿ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಈರುಳ್ಳಿಯನ್ನು ರೈಲಿನ ಮೂಲಕ ಸಾಗಿಸಲಾಗಿದೆ.

ಹಕ್ಕುಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸಚಿವಾಲಯವು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಅನುದಾನವನ್ನು ಒದಗಿಸುತ್ತದೆ, ಇದರ ಅಡಿಯಲ್ಲಿ 2023-24ರಲ್ಲಿ ತ್ರಿಪುರಾಕ್ಕೆ 40 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

ನವೀಕರಿಸಬಹುದಾದ ಇಂಧನ ಕ್ಷೇತ್ರದ ಸಾಧನೆಗಳನ್ನು ಉಲ್ಲೇಖಿಸಿದ ಸಚಿವರು, ದೇಶದ ಒಟ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯ 214 ಗಿಗಾವ್ಯಾಟ್ ತಲುಪುವುದರೊಂದಿಗೆ ಭಾರತವು ಮಹತ್ವದ ಮೈಲಿಗಲ್ಲನ್ನು ತಲುಪಿದೆ ಎಂದು ಹೇಳಿದರು. ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್, ಪಿಎಂ-ಕುಸುಮ್ ಪಿಎಂ ಸೂರ್ಯ ಘರ್ ಮುಫ್ಟ್ ಬಿಜ್ಲಿ ಯೋಜನೆ ಮತ್ತು ಸೌರ ಪಿವಿ ಮಾಡ್ಯೂಲ್ ಗಳಿಗಾಗಿ ಪಿಎಲ್ಐ ಯೋಜನೆಗಳಂತಹ ಉಪಕ್ರಮಗಳೊಂದಿಗೆ ಭಾರತವು 2030 ರ ವೇಳೆಗೆ 500 ಗಿಗಾವ್ಯಾಟ್ ಸಾಮರ್ಥ್ಯವನ್ನು ಸಾಧಿಸುವ ಹಾದಿಯಲ್ಲಿದೆ.

ಪಿಎಂ ಸೂರ್ಯ ಘರ್ ಯೋಜನೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಉಪಕ್ರಮಗಳನ್ನು ಕೈಗೊಳ್ಳುವಂತೆ ಸಚಿವ ಪ್ರಲ್ಹಾದ್ ಜೋಶಿ ಒತ್ತಾಯಿಸಿದರು. ತ್ರಿಪುರಾದಲ್ಲಿ 200 ಯೂನಿಟ್ ಗಿಂತ ಹೆಚ್ಚಿನ ಬಳಕೆಯ ಗೃಹಬಳಕೆಯ ವಿದ್ಯುತ್ ದರವು ಪ್ರತಿ ಯೂನಿಟ್ ಗೆ ಸುಮಾರು 5 ರೂ. ಎಂಎನ್ಆರ್ ಇ ಸಬ್ಸಿಡಿ ಮತ್ತು ಶೇ. 7 ರಷ್ಟು ರಿಯಾಯಿತಿ ಸಾಲದೊಂದಿಗೆ, ಗ್ರಾಹಕರು ತಕ್ಷಣ ಹಣವನ್ನು ಉಳಿಸಲು ಪ್ರಾರಂಭಿಸಬಹುದು.

ತ್ರಿಪುರಾ ಡಿಸ್ಕಾಂಗೆ ವಿದ್ಯುತ್ ಖರೀದಿಯ ವೆಚ್ಚವು ಪ್ರತಿ ಯೂನಿಟ್ ಗೆ  5 ರೂ.ಗಳನ್ನು ಮೀರುತ್ತದೆ, ಏಕೆಂದರೆ ಹೆಚ್ಚಿನ ವಿದ್ಯುತ್ ಅನಿಲ ಆಧಾರಿತ ಸ್ಥಾವರಗಳಿಂದ ಬರುತ್ತದೆ. ಸೌರಶಕ್ತಿಯನ್ನು ಸ್ಥಾಪಿಸುವುದರಿಂದ ಈ ಹೆಚ್ಚಿನ ವೆಚ್ಚದ ಶಕ್ತಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಆರ್ ಪಿಒ ಅನ್ನು ಪೂರೈಸಲು ಸಹಾಯ ಮಾಡುತ್ತದೆ.

ಈ ವಲಯದಲ್ಲಿ ರಾಜ್ಯ ಸರ್ಕಾರದ ಉಪಕ್ರಮಗಳನ್ನು ಶ್ಲಾಘಿಸಿದ ಶ್ರೀ ಪ್ರಲ್ಹಾದ್ ಜೋಶಿ, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ತ್ರಿಪುರಾ ಉತ್ತಮ ಪ್ರಗತಿ ಸಾಧಿಸಿದೆ ಎಂದು ಹೇಳಿದರು. 2018ಕ್ಕೂ ಮೊದಲು ಸೌರಶಕ್ತಿಯ ಮೂಲಕ ಒಟ್ಟು 2.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿತ್ತು. ಕಳೆದ 6.5 ವರ್ಷಗಳಲ್ಲಿ ತ್ರಿಪುರಾದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಉತ್ಪಾದನೆಯನ್ನು 10 ಪಟ್ಟು ಹೆಚ್ಚಿಸಿ ಈಗ 20.5 ಮೆಗಾವ್ಯಾಟ್ ಗಿಂತ ಹೆಚ್ಚಾಗಿದೆ.

ರಾಜ್ಯ ಸರ್ಕಾರದೊಂದಿಗೆ ನಿರಂತರವಾಗಿ ಸಹಯೋಗವನ್ನು ಹೆಚ್ಚಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಸಚಿವ  ಪ್ರಲ್ಹಾದ್ ಜೋಶಿ, "ನಮ್ಮ ಜಂಟಿ ಪ್ರಯತ್ನಗಳ ಮೂಲಕ, ನಾವು ತ್ರಿಪುರಾದ ಜನರಿಗೆ ಉತ್ತಮ ಅವಕಾಶಗಳನ್ನು ಖಚಿತಪಡಿಸುತ್ತೇವೆ," ಎಂದು ಹೇಳಿದರು.

 

 

*****


(Release ID: 2089011) Visitor Counter : 10


Read this release in: English , Urdu , Hindi , Bengali-TR