ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಇ ಪಿ ಎಫ್ ಒ  ಅಕ್ಟೋಬರ್ 2024 ರಲ್ಲಿ 13.41 ಲಕ್ಷ ನಿವ್ವಳ ಸದಸ್ಯರನ್ನು ಸೇರಿಸಿದೆ  


7.50 ಲಕ್ಷ ಹೊಸ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ

ಅಕ್ಟೋಬರ್ 2024ರಲ್ಲಿ 58.49 ರಷ್ಟು ಹೊಸ ಸದಸ್ಯರು 18-25 ವಯಸ್ಸಿನವರು

Posted On: 25 DEC 2024 2:54PM by PIB Bengaluru

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ ಒ ) ಅಕ್ಟೋಬರ್ 2024 ರ ತಾತ್ಕಾಲಿಕ ವೇತನದಾರರ ದತ್ತಾಂಶವನ್ನು  ಬಿಡುಗಡೆ ಮಾಡಿದ್ದು, ಇದು 13.41 ಲಕ್ಷ ಸದಸ್ಯರ ನಿವ್ವಳ ಸೇರ್ಪಡೆಯನ್ನು ತೋರಿಸಿದೆ. ಇದು ಹೆಚ್ಚಿದ ಉದ್ಯೋಗಾವಕಾಶಗಳನ್ನು ಮತ್ತು ಉದ್ಯೋಗಿಗಳ ಪ್ರಯೋಜನಗಳ ಬಗ್ಗೆ ಇರುವ ಹೆಚ್ಚಿನ ಜಾಗೃತಿಯನ್ನು ಸೂಚಿಸುತ್ತದೆ, ಇದು ಇ ಪಿ ಎಫ್ ಒ ನ ಪರಿಣಾಮಕಾರಿ ಸಂಪರ್ಕ ಕಾರ್ಯಕ್ರಮ ಉಪಕ್ರಮಗಳಿಂದ ಉತ್ತೇಜಿಸಲ್ಪಟ್ಟಿದೆ.

ಇ ಪಿ ಎಫ್ ಒ ವೇತನದಾರರ ದತ್ತಾಂಶದ ಪ್ರಮುಖ ಮುಖ್ಯಾಂಶಗಳು (ಅಕ್ಟೋಬರ್ 2024) ಈ ಕೆಳಗಿನಂತಿವೆ:

ಹೊಸ ಸದಸ್ಯತ್ವ:

ಇ ಪಿ ಎಫ್ ಒ ಅಕ್ಟೋಬರ್ 2024 ರಲ್ಲಿ ಸುಮಾರು 7.50 ಲಕ್ಷ ಹೊಸ ಸದಸ್ಯರನ್ನು ದಾಖಲು ಮಾಡಿಕೊಂಡಿದೆ. ಹೊಸ ಸದಸ್ಯತ್ವಗಳಲ್ಲಿ ಈ ಸೇರ್ಪಡೆಗೆ ಹೆಚ್ಚುತ್ತಿರುವ ಉದ್ಯೋಗಾವಕಾಶಗಳು, ಉದ್ಯೋಗಿ ಪ್ರಯೋಜನಗಳ ಹೆಚ್ಚಿದ ಅರಿವು ಮತ್ತು ಇಪಿಎಫ್ ಒ ನ ಯಶಸ್ವಿ ಸಂಪರ್ಕ ಕಾರ್ಯಕ್ರಮಗಳು ಕಾರಣವಾಗಿದೆ.

ಗುಂಪು 18-25 ಹೊಸ ಸದಸ್ಯತ್ವದಲ್ಲಿ ಮುನ್ನಡೆಯಲ್ಲಿದೆ:

ದತ್ತಾಂಶದ ಗಮನಾರ್ಹ ಅಂಶವೆಂದರೆ 18-25 ವಯಸ್ಸಿನವರ ಸಂಖ್ಯೆಯ ಪ್ರಾಬಲ್ಯ , ಇದು ಅಕ್ಟೋಬರ್ 2024ರಲ್ಲಿ ಸೇರಿಸಲಾದ ಒಟ್ಟು ಹೊಸ ಸದಸ್ಯರಲ್ಲಿ ಗಮನಾರ್ಹವಾದ 58.49% ರಷ್ಟಿದೆ. ಅಕ್ಟೋಬರ್ 2024ಕ್ಕಾಗಿ18-25 ವಯಸ್ಸಿನವರಿಗೆ ನಿವ್ವಳ ವೇತನದಾರರ  ದತ್ತಾಂಶವು 5.43 ಲಕ್ಷಗಳು ಆಗಿದೆ. ಸಂಘಟಿತ ಕಾರ್ಯಪಡೆಗೆ ಸೇರುವ ಹೆಚ್ಚಿನವರು ಯುವಕರು, ಪ್ರಾಥಮಿಕವಾಗಿ ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳು ಎಂದು ತೋರಿಸುವ ಹಿಂದಿನ ಪ್ರವೃತ್ತಿಗಳಿಗೆ ಇದು ಅನುಗುಣವಾಗಿದೆ.

ಮತ್ತೆ ಸೇರ್ಪಡೆಯಾದ ಸದಸ್ಯರು:

ಸರಿಸುಮಾರು 12.90 ಲಕ್ಷ ಸದಸ್ಯರು ನಿರ್ಗಮಿಸಿದ್ದಾರೆ ಮತ್ತು ತರುವಾಯ ಇಪಿಎಫ್ಒಗೆ ಮರುಸೇರ್ಪಡೆಯಾಗಿದ್ದಾರೆ ಎಂದು ವೇತನದಾರರ ದತ್ತಾಂಶವು ಎತ್ತಿ ತೋರಿಸುತ್ತದೆ. ಅಕ್ಟೋಬರ್ 2023ಕ್ಕೆ ಹೋಲಿಸಿದರೆ ಈ ಅಂಕಿ-ಅಂಶವು ವರ್ಷದಿಂದ ವರ್ಷಕ್ಕೆ 16.23% ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ. ಈ ಸದಸ್ಯರು ತಮ್ಮ ಉದ್ಯೋಗಗಳನ್ನು ಬದಲಾಯಿಸಿದರು ಮತ್ತು ಇ ಪಿ ಎಫ್ ಒ  ಅಡಿಯಲ್ಲಿ ಬರುವ ಸಂಸ್ಥೆಗಳಿಗೆ ಮರುಸೇರ್ಪಡೆಗೊಂಡರು , ಅಂತಿಮ ಮೊತ್ತಕ್ಕಾಗಿ ಅರ್ಜಿ ಸಲ್ಲಿಸುವ ಬದಲು ತಮ್ಮ ಖಾತೆಯಲ್ಲಿ ಶೇಖರವಾಗಿರುವ ಮೊತ್ತವನ್ನು ವರ್ಗಾಯಿಸಲು ನಿರ್ಧರಿಸಿದರು, ಇದರಿಂದಾಗಿ ಅವರ ದೀರ್ಘಾವಧಿಯ ಆರ್ಥಿಕ ಯೋಗಕ್ಷೇಮ ಮತ್ತು ಅವರ ಸಾಮಾಜಿಕ ಭದ್ರತೆಯನ್ನು ವಿಸ್ತರಿಸಲಾಯಿತು. 

ಮಹಿಳಾ ಸದಸ್ಯತ್ವದಲ್ಲಿ ಏರಿಕೆ:

ವೇತನದಾರರ ದತ್ತಾಂಶದ ಲಿಂಗ-ವಾರು ವಿಶ್ಲೇಷಣೆಯು ತಿಂಗಳಲ್ಲಿ ಸೇರಿಸಲಾದ ಹೊಸ ಸದಸ್ಯರಲ್ಲಿ ಸುಮಾರು 2.09 ಲಕ್ಷ ಹೊಸ ಮಹಿಳಾ ಸದಸ್ಯರು ಎಂದು ತಿಳಿಸುತ್ತದೆ. ಅಕ್ಟೋಬರ್ 2023ಕ್ಕೆ ಹೋಲಿಸಿದರೆ ಈ ಅಂಕಿ-ಅಂಶವು ವರ್ಷದಿಂದ ವರ್ಷಕ್ಕೆ 2.12% ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ. ಅಲ್ಲದೆ, ತಿಂಗಳಲ್ಲಿ ಸುಮಾರು 2.79 ಲಕ್ಷ ನಿವ್ವಳ ಮಹಿಳಾ ಸದಸ್ಯರ ಸೇರ್ಪಡೆಯಾಗಿದೆ. ಮಹಿಳಾ ಸದಸ್ಯರ ಸೇರ್ಪಡೆಗಳ ಹೆಚ್ಚಳವು ಹೆಚ್ಚು ಒಳಗೊಂಡ ಮತ್ತು ವೈವಿಧ್ಯಮಯ ರೀತಿಯ ಸಿಬ್ಬಂದಿಗಳ  ಕಡೆಗೆ ವಿಶಾಲವಾದ ಬದಲಾವಣೆಯನ್ನು ಸೂಚಿಸುತ್ತದೆ.

ರಾಜ್ಯವಾರು ಕೊಡುಗೆ:

ವೇತನದಾರರ ದತ್ತಾಂಶದ ರಾಜ್ಯವಾರು ವಿಶ್ಲೇಷಣೆಯು ಅಗ್ರ ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿವ್ವಳ ಸದಸ್ಯರ ಬೆಳವಣಿಗೆಯು ಒಟ್ಟು ಸದಸ್ಯ ಬೆಳವಣಿಗೆಯ ಸುಮಾರು 61.32 ಪ್ರತಿಶತದಷ್ಟಿದೆ ಎಂದು ತೋರಿಸುತ್ತದೆ, ಇದು ಒಟ್ಟಾಗಿ ತಿಂಗಳಿನಲ್ಲಿ ಸುಮಾರು 8.22 ಲಕ್ಷ ನಿವ್ವಳ ಸದಸ್ಯರನ್ನು ಸೇರಿಸಿದೆ. ಎಲ್ಲಾ ರಾಜ್ಯಗಳಲ್ಲಿ, ಮಹಾರಾಷ್ಟ್ರವು ತಿಂಗಳ ಅವಧಿಯಲ್ಲಿ 22.18 ರಷ್ಟು ನಿವ್ವಳ ಸದಸ್ಯರನ್ನು ಸೇರಿಸುವ ಮೂಲಕ ಮುನ್ನಡೆ ಸಾಧಿಸಿದೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ದೆಹಲಿ, ಹರಿಯಾಣ, ತೆಲಂಗಾಣ ಹಾಗು ಗುಜರಾತ್ನಂತಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಿಳಿಸಿದ ತಿಂಗಳ ಅವಧಿಯಲ್ಲಿ ಒಟ್ಟು ನಿವ್ವಳ ಸದಸ್ಯರಲ್ಲಿ ಶೇಕಡಾ 5 ಕ್ಕಿಂತ ಹೆಚ್ಚು ಸದಸ್ಯರನ್ನು ಸೇರಿಸಿದವು.

ಉದ್ಯಮವಾರು ಪ್ರವೃತ್ತಿಗಳು:

ಉದ್ಯಮ-ವಾರು ದತ್ತಾಂಶದ ತಿಂಗಳ-ತಿಂಗಳ ಹೋಲಿಕೆಯು ರಸ್ತೆ ಮೋಟಾರು ಸಾರಿಗೆಯಲ್ಲಿ ತೊಡಗಿರುವ ಸಂಸ್ಥೆಗಳು, ಖಾಸಗಿ ವಲಯದ ಎಲೆಕ್ಟ್ರಾನಿಕ್ ಮಾಧ್ಯಮ ಕಂಪನಿಗಳು, ರಾಷ್ಟ್ರೀಕೃತ ಬ್ಯಾಂಕ್ ಗಳನ್ನು ಹೊರತುಪಡಿಸಿ ಇತರ ಬ್ಯಾಂಕುಗಳು ಇತ್ಯಾದಿಗಳಲ್ಲಿ ಕೆಲಸ ಮಾಡುವ ಸದಸ್ಯರಲ್ಲಿ ಗಮನಾರ್ಹ ಹೆಚ್ಚಳವನ್ನು ತೋರಿಸುತ್ತದೆ. ಒಟ್ಟು ನಿವ್ವಳ ಸದಸ್ಯತ್ವದಲ್ಲಿ, ಸುಮಾರು 42.29 ಶೇಕಡಾ ಬೆಳವಣಿಗೆಯು ವಿಶೇಷ ಸೇವೆಗಳಿಂದ ಬಂದಿದೆ (ಇದು ಕೆಲಸಗಾರರ ಪೂರೈಕೆದಾರರು, ಸಾಮಾನ್ಯ ಗುತ್ತಿಗೆದಾರರು, ಭದ್ರತಾ ಸೇವೆಗಳು, ವಿವಿಧ ಚಟುವಟಿಕೆಗಳು ಇತ್ಯಾದಿಗಳನ್ನು ಒಳಗೊಂಡಿದೆ).

ಮೇಲಿನ ವೇತನದಾರರ ದತ್ತಾಂಶವು ತಾತ್ಕಾಲಿಕವಾಗಿದೆ, ಏಕೆಂದರೆ ದತ್ತಾಂಶದ ರಚನೆಯು ನಿರಂತರ ಪ್ರಕ್ರಿಯೆಯಾಗಿದೆ ಮತ್ತು ಉದ್ಯೋಗಿ ದಾಖಲೆಗಳನ್ನು ನವೀಕರಿಸುವುದು ಸಹ ನಿರಂತರ ಪ್ರಕ್ರಿಯೆಯಾಗಿದೆ. ಹಿಂದಿನ  ದತ್ತಾಂಶವನ್ನು ಪ್ರತಿ ತಿಂಗಳು ನವೀಕರಿಸಲಾಗುತ್ತದೆ. ಏಪ್ರಿಲ್ 2018 ರಿಂದ, ಇಪಿಎಫ್ಒ ಸೆಪ್ಟೆಂಬರ್ 2017 ರಿಂದ ಅವಧಿಯನ್ನು ಒಳಗೊಂಡ ವೇತನದಾರರ ದತ್ತಾಂಶವನ್ನು ಬಿಡುಗಡೆ ಮಾಡುತ್ತಿದೆ. ಮಾಸಿಕ ವೇತನದಾರರ ದತ್ತಾಂಶದಲ್ಲಿ, ಆಧಾರ್ ಮೌಲ್ಯೀಕರಿಸಿದ ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಮೂಲಕ ಮೊದಲ ಬಾರಿಗೆ ಇಪಿಎಫ್ಒಗೆ ಸೇರುವ ಸದಸ್ಯರ ಸಂಖ್ಯೆ, ಇಪಿಎಫ್ಒ ವ್ಯಾಪ್ತಿಯಿಂದ ನಿರ್ಗಮಿಸಿದ ಅಸ್ತಿತ್ವದಲ್ಲಿರುವ ಸದಸ್ಯರು ಮತ್ತು ನಿರ್ಗಮಿಸಿ ಮತ್ತೆ ಸದಸ್ಯರಾದವರು ಇವೆಲ್ಲ ವಿವರಗಳು ನಿವ್ವಳ ಮಾಸಿಕ ವೇತನ ಪಟ್ಟಿಯನ್ನು ರಚಿಸಲು ಸೇರಿಸಲಾಗುತ್ತದೆ.


*****


(Release ID: 2088098) Visitor Counter : 10