ಉಪರಾಷ್ಟ್ರಪತಿಗಳ ಕಾರ್ಯಾಲಯ
ಚೌಧರಿ ಚರಣ್ ಸಿಂಗ್ ಅವರು ಪಾರದರ್ಶಕತೆ, ಉತ್ತರದಾಯಿತ್ವ, ಸಮಗ್ರತೆ ಮತ್ತು ನಿರ್ಭೀತ ಆಡಳಿತಕ್ಕೆ ಜ್ವಲಂತ ಉದಾಹರಣೆ ಎಂದು ಹೇಳಿದ ಮಾನ್ಯ ಉಪರಾಷ್ಟ್ರಪತಿ
ಕೃಷಿಯು ಗ್ರಾಮೀಣಾಭಿವೃದ್ಧಿಯ ಬೆನ್ನೆಲುಬು; ಕೃಷಿ ಅಭಿವೃದ್ಧಿಯಾಗದ ಹೊರತು, ಅಭಿವೃದ್ಧಿ ಹೊಂದಿದ ರಾಷ್ಟ್ರದ ಕನಸು ನನಸಾಗದು ಎಂದು ಒತ್ತಿ ಹೇಳಿದ ಉಪರಾಷ್ಟ್ರಪತಿ
ಪ್ರಜಾಪ್ರಭುತ್ವವು ಅಭಿವೃದ್ಧಿ ಹೊಂದಲು, ಅಭಿವ್ಯಕ್ತಿ ಮತ್ತು ಸಂವಹನ ಜೊತೆ ಜೊತೆಯಾಗಿ ಸಾಗಬೇಕು ಎಂದು ಪ್ರತಿಪಾದಿಸಿದ ಮಾನ್ಯ ಉಪರಾಷ್ಟ್ರಪತಿ
2024ರ ಸಾಲಿನ ಚೌಧರಿ ಚರಣ್ ಸಿಂಗ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ಮಾನ್ಯ ಉಪರಾಷ್ಟ್ರಪತಿ
Posted On:
22 DEC 2024 1:42PM by PIB Bengaluru
ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪತ್ರಿಕೋದ್ಯಮದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಭಾರತದ ಮಾನ್ಯ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು 2024ರ ಸಾಲಿನ ಚೌಧರಿ ಚರಣ್ ಸಿಂಗ್ ಪ್ರಶಸ್ತಿಗಳು ಪ್ರದಾನ ಮಾಡಿದರು. ಸಮಾರಂಭದಲ್ಲಿ ಮಾತನಾಡಿದ ಶ್ರೀ ಧನಕರ್ ಅವರು ಚೌಧರಿ ಚರಣ್ ಸಿಂಗ್ ಅವರ ಅಸಾಧಾರಣ ಪರಂಪರೆಯನ್ನು ಶ್ಲಾಘಿಸಿದರು. ಗ್ರಾಮೀಣಾಭಿವೃದ್ಧಿ, ರೈತರ ಕಲ್ಯಾಣ ಮತ್ತು ಸಮಗ್ರ ಅಭಿವೃದ್ಧಿಗೆ ಅವರ ಅವಿರತ ದುಡಿಮೆ ಮತ್ತು ಸಮರ್ಪಣೆಯನ್ನು ನೆನೆದರು.
“ಚೌಧರಿ ಚರಣ್ ಸಿಂಗ್ ಅವರು ದೇಶದ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರು. ಪಾರದರ್ಶಕತೆ, ಉತ್ತರದಾಯಿತ್ವ, ಸಮಗ್ರತೆ, ಬದ್ಧತೆ, ಗ್ರಾಮೀಣಾಭಿವೃದ್ಧಿ, ರೈತರ ಬಗ್ಗೆ ಬದ್ಧತೆಗೆ ಜ್ವಲಂತ ಉದಾಹರಣೆಯಂತಿದ್ದು ತಮ್ಮ ಅಭಿಪ್ರಾಯಗಳನ್ನು ನಿರ್ಭೀತವಾಗಿ ವ್ಯಕ್ತಪಡಿಸುವ ವ್ಯಕ್ತಿಯಾಗಿದ್ದರು” ಎಂದು ಉಪರಾಷ್ಟ್ರಪತಿ ಹೇಳಿದರು.
ಅವರ ನಾಯಕತ್ವವನ್ನು ಪ್ರತಿಬಿಂಬಿಸುತ್ತಾ, "ಚೌಧರಿ ಚರಣ್ ಸಿಂಗ್ ಅವರು ಶ್ರೇಷ್ಠತೆ, ರಾಜನೀತಿ, ದೂರದೃಷ್ಟಿ, ಮತ್ತು ಸಮಗ್ರ ಅಭಿವೃದ್ಧಿಯ ಮೂಲಕ ವ್ಯಾಖ್ಯಾನಿಸಲ್ಪಟ್ಟಿದ್ದಾರೆ ಎಂದು ಶ್ರೀ ಧನಕರ್ ಹೇಳಿದರು. ಅವರು ಭಾರತದ ಗಣರಾಜ್ಯದ ಅತಿದೊಡ್ಡ ರಾಜ್ಯದ ಮೊದಲ ಮುಖ್ಯಮಂತ್ರಿ ಮತ್ತು ನಂತರ ಪ್ರಧಾನ ಮಂತ್ರಿಯಾದರು ಎಂಬುದರಲ್ಲಿ ಆಶ್ಚರ್ಯವೇನಿಲ್ಲ." ಎಂದರು.
ಅವರ ಕೊಡುಗೆಗಳು ಬೆಳಕಿಗೆಬಾರದ ಕುರಿತು ಕಾಳಜಿ ವ್ಯಕ್ತಪಡಿಸಿದ ಮಾನ್ಯ ಉಪರಾಷ್ಟ್ರಪತಿಯವರು, “ಇಂಥ ವ್ಯಕ್ತಿಯ ಅದ್ಭುತ ಕೊಡುಗೆಗಳನ್ನು ಜನರು ಪರಿಗಣಿಸದಿರುವುದು ಮನ ನೋಯಿಸುತ್ತದೆ. ಅವರ ಅನನ್ಯ ಗುಣಗಳು, ಅವರ ಸಮರ್ಪಣೆ ಮತ್ತು ಗ್ರಾಮೀಣ ಭಾರತದ ಜ್ಞಾನವು ಪ್ರಪಂಚದಾದ್ಯಂತದ ಪ್ರಬುದ್ಧ ವ್ಯಕ್ತಿಗಳಿಗೆ ದಾರಿದೀಪವಾಗಿವೆ. ಮಣ್ಣಿನ ಮಗನಾದ, ಅವರು ನಮ್ಮ ನಾಗರಿಕತೆಯ ದೃಷ್ಟಿಕೋನದೊಂದಿಗೆ ಹೊಂದಿಕೆಯಾಗುವಂತೆ ಗ್ರಾಮೀಣ ಭಾರತದ ಬಗ್ಗೆ ಮಾತ್ರವಲ್ಲ, ಭಾರತದ ನಗರಗಳ ಬಗ್ಗೆಯೂ ಗಮನಹರಿಸಿದ್ದರು.
ಚೌಧರಿ ಚರಣ್ ಸಿಂಗ್ ಪ್ರಶಸ್ತಿ 2024ರ ಪ್ರಶಸ್ತಿ ಪುರಸ್ಕೃತರನ್ನು ಇಂದು ನವದೆಹಲಿಯಲ್ಲಿ ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, “ಕೃಷಿ ಗ್ರಾಮೀಣಾಭಿವೃದ್ಧಿಯ ಬೆನ್ನೆಲುಬಾಗಿದೆ. ಕೃಷಿ ಅಭಿವೃದ್ಧಿಯಾಗದ ಹೊರತು, ಗ್ರಾಮೀಣ ಭೂದೃಶ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ ಮತ್ತು ಗ್ರಾಮೀಣ ಭೂದೃಶ್ಯವು ಬದಲಾಗದ ಹೊರತು, ನಾವು ಅಭಿವೃದ್ಧಿ ಹೊಂದಿದ ರಾಷ್ಟ್ರನಿರ್ಮಾಣವನ್ನು ನಿರೀಕ್ಷಿಸಲಾಗುವುದಿಲ್ಲ” ಎಂದು ಹೇಳಿದರು .
ಭಾರತದ ಆರ್ಥಿಕ ಭವಿಷ್ಯದ ಬಗ್ಗೆ ಮಾತನಾಡುತ್ತಾ ಅವರು, "ನಿಸ್ಸಂದೇಹವಾಗಿ, ಈ ಕ್ಷಣದಲ್ಲಿ, ಭಾರತವು ಹಿಂದೆಂದೂ ಕಾಣದಂತಹ ಏಳಿಗೆಯ ಹಾದಿಯಲ್ಲಿದೆ ಮುನ್ನಡೆಯುತ್ತಿದೆ. ನಿರ್ವಿವಾದವಾಗಿ, ನಮ್ಮ ಆರ್ಥಿಕತೆಯು ಅಭಿವೃದ್ಧಿ ಹೊಂದುತ್ತಿದೆ. ನಾವು ಜಾಗತಿಕವಾಗಿ ಐದನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಜಪಾನ್ ಮತ್ತು ಜರ್ಮನಿಯನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಏರುವ ಹಾದಿಯಲ್ಲಿದ್ದೇವೆ. ಆದರೆ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ, ನಮ್ಮ ಆದಾಯ ಎಂಟು ಪಟ್ಟು ಹೆಚ್ಚಾಗಬೇಕು - ಇದು ನಿದ್ದೆಗೆಡಿಸುವ ಬಹುದೊಡ್ಡ ಸವಾಲಾಗಿದೆ." ಎಂದು ಹೇಳಿದರು.
ಈ ಸವಾಲನ್ನು ಎದುರಿಸುವ ಬಗ್ಗೆ ಮಾತನಾಡಿದ ಶ್ರೀ ಧನಖರ್, ಗ್ರಾಮೀಣ ಆರ್ಥಿಕತೆಗೆ ಪುಷ್ಟಿ ನೀಡುವ ಅಗತ್ಯದ ಬಗ್ಗೆ ಒತ್ತಿ ಹೇಳಿದರು: "ರೈತರು ಮತ್ತು ಅವರ ಕುಟುಂಬಗಳು ವ್ಯಾಪಾರವಹಿವಾಟು, ಮೌಲ್ಯವರ್ಧನೆ ಮತ್ತು ತಮ್ಮ ಸುತ್ತಮುತ್ತ ರೈತ ಸಂಘಗಳ ಸಮೂಹಗಳನ್ನು ಸೃಷ್ಟಿಸುವಲ್ಲಿ ತೊಡಗಿಸಿಕೊಂಡಾಗ ಮಾತ್ರ ಗ್ರಾಮೀಣ ಆರ್ಥಿಕತೆ ಸುಧಾರಿಸಬಹುದು, ಇದು ಸ್ವಾವಲಂಬನೆಗೆ ಕಾರಣವಾಗುತ್ತದೆ. ನಮ್ಮಲ್ಲಿರುವ ಅತಿದೊಡ್ಡ ಮಾರುಕಟ್ಟೆ ಕೃಷಿ ಉತ್ಪನ್ನಗಳದ್ದು, ಆದರೂ ರೈತಾಪಿ ವರ್ಗಗಳು ಇದರಲ್ಲಿ ತೀರಾ ಕಡಿಮೆ ತೊಡಗಿಸಿಕೊಂಡಿವೆ. ಕೃಷಿ ವಲಯವು ಆರ್ಥಿಕ ಅಭಿವೃದ್ಧಿಯ ಚಾಲಕಶಕ್ತಿ ಆಗಬೇಕಾದರೆ ಸರ್ಕಾರಗಳು ಅದಕ್ಕೆ ಆದ್ಯತೆ ನೀಡಬೇಕು." ಎಂದು ಹೇಳಿದರು.
ಉಪರಾಷ್ಟ್ರಪತಿಯವರು ಪ್ರಜಾಪ್ರಭುತ್ವದ ಮೂಲತತ್ವದ ಬಗ್ಗೆಯೂ ಒತ್ತಿ ಹೇಳಿದರು: "ಅಭಿವ್ಯಕ್ತಿ ಮತ್ತು ಸಂವಾದ, ಪ್ರಜಾಪ್ರಭುತ್ವವನ್ನು ವ್ಯಾಖ್ಯಾನಿಸುತ್ತವೆ. ಒಂದು ರಾಷ್ಟ್ರ ಎಷ್ಟು ಪ್ರಜಾಸತ್ತಾತ್ಮಕವಾಗಿದೆ ಎಂಬುದು ಅದರ ನಾಗರಿಕರು ಮತ್ತು ಸಂಸ್ಥೆಗಳ ಅಭಿವ್ಯಕ್ತಿಯ ಸ್ಥಿತಿಯಿಂದ ನಿರ್ಧರಿತವಾಗುತ್ತದೆ. ಯಾವುದೇ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ, ಅಭಿವ್ಯಕ್ತಿ ಮತ್ತು ಸಂವಾದ ಎರಡೂ ಕಡೆಗಳಿಂದಾ ದೊಡ್ಡ ಜವಾಬ್ದಾರಿಯೊಂದಿಗೆ ಜೊತೆಗೂಡಿ ಸಾಗಬೇಕು."
ಸಂಸತ್ ಸದಸ್ಯರ ಜವಾಬ್ದಾರಿಯ ಕುರಿತು ಮಾತನಾಡಿದ ಅವರು, "ಪ್ರತಿಯೊಬ್ಬ ಚಿಂತನಶೀಲ ಭಾರತೀಯನೂ ತನ್ನ ಬುದ್ಧಿಮತ್ತೆಯನ್ನು ಒರೆಗೆಹಚ್ಚಿ, ಕಟ್ಟುಪಾಡುಗಳಿಗೆ ಒಳಗಾಗಿರುವ ಎಲ್ಲರಲ್ಲೂ ಆಳವಾದ ಜವಾಬ್ದಾರಿಯುತ ಪ್ರಜ್ಞೆಯನ್ನು ಮೂಡಿಸುವ ಸಮಯ ಇದಾಗಿದೆ. ತಪ್ಪು ತಿಳಿವಳಿಕೆ ಬೇಡ, ನಾನು ಸಂಸತ್ ಸದಸ್ಯರ ಕುರಿತು ಮಾತನಾಡುತ್ತಿದ್ದೇನೆ. ಜನರು ಅವ್ಯವಸ್ಥೆಯನ್ನೇ ಒಗ್ಗಿಸಿಕೊಳ್ಳುವುದನ್ನು ಕಲಿತಿದ್ದಾರೆ. ಪ್ರತಿಭಟಿಸುವ ಭಾವವೇ ಇಲ್ಲ. ಜನರ ಲೇಖನಿ ಮತ್ತೆ ಮೂಡಲಿ, ಜನರ ವಿಚಾರಗಳು ಮತ್ತೆ ಹೊರಹೊಮ್ಮಲಿ, - ನೀವು ಅಲ್ಲಿಗೆ ಏಕೆ ಹೋಗಿದ್ದಿರಿ ಎಂದು ಯೋಚಿಸುವಂತೆ ಜನರು ನಿಮ್ಮನ್ನು ಒತ್ತಾಯಿಸುವಂತಾಗಲಿ ಎಂದು ನಿರೀಕ್ಷಿಸುತ್ತೇನೆ. ಈ ಆಲೋಚನೆಯೊಂದಿಗೆ ನನ್ನ ಮಾತನ್ನು ಮುಕ್ತಾಯಗೊಳಿಸುತ್ತೇನೆ." ++
ಚೌಧರಿ ಚರಣ್ ಸಿಂಗ್ ಪ್ರಶಸ್ತಿಗಳ ಬಗ್ಗೆ ಮಾತನಾಡುತ್ತಾ, ಉಪರಾಷ್ಟ್ರಪತಿಯವರು ಅವರ ಸುಸ್ಥಿರತೆಯ ಬಗ್ಗೆ ಒತ್ತಿ ಹೇಳಿದರು: "ಈ ಪ್ರಶಸ್ತಿಗಳು, ಕಾಲಾಂತರದಲ್ಲಿ, ಸ್ವಾವಲಂಬಿಯಾಗಲು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಕಾರ್ಯನಿರ್ವಹಣೆಯ ನಮ್ಯತೆಗೆ ಆರ್ಥಿಕ ಸಾಮರ್ಥ್ಯವು ಮೂಲಭೂತವಾಗಿದೆ. ಗ್ರಾಮೀಣ ಭಾರತದ ಕಲ್ಯಾಣ, ರೈತರ ಕಲ್ಯಾಣವನ್ನು ಬಯಸುವವರು ಯಾರೇ ಆಗಲಿ – ಅವರು ಕಾರ್ಪೊರೇಟ್ ವಲಯದಿಂದ ಆಗಿರಬಹುದು , ಬುದ್ಧಿಜೀವಿಗಳಾಗಿರಬಹುದು ಅಥವಾ ಇತರ ಕ್ಷೇತ್ರಗಳಿಂದ ಆಗಿರಬಹುದು - ಇಂತಹ ಸಂಸ್ಥೆಯನ್ನು ಪೋಷಿಸಲು ಮುಂದೆ ಬರಬೇಕು, ಏಕೆಂದರೆ ಮುಂದಿನ ದೀರ್ಘ ಕಾಲದವರೆಗೆ ನಮಗೆ ಮತ್ತೊಬ್ಬ ಚೌಧರಿ ಚರಣ್ ಸಿಂಗ್ ಸಿಗುವುದಿಲ್ಲ."
ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳಲ್ಲಿನ ಗಮನಾರ್ಹ ಕೊಡುಗೆಗಳನ್ನು 2024 ರ ಚೌಧರಿ ಚರಣ್ ಸಿಂಗ್ ಪ್ರಶಸ್ತಿಗಳನ್ನು ನೀಡುವ ಮೂಲಕ ಆಚರಿಸಲಾಯಿತು. ಅರ್ಥಪೂರ್ಣ ಪತ್ರಿಕೋದ್ಯಮ ಕೊಡುಗೆಗಾಗಿ ಕುಮಾರಿ ನೀರಜಾ ಚೌಧರಿ ಅವರಿಗೆ ಕಲಾಂ ರತ್ನ ಪ್ರಶಸ್ತಿಯನ್ನು ನೀಡಲಾಯಿತು. "ಭಾರತದ ಜಲಮಾನವ" ಎಂದೇ ಪ್ರಸಿದ್ಧರಾದ ಡಾ. ರಾಜೇಂದ್ರ ಸಿಂಗ್ ಅವರಿಗೆ ಜಲ ಸಂರಕ್ಷಣೆಗಾಗಿ ಅವರು ಮಾಡಿದ ಪ್ರವರ್ತಕ ಪ್ರಯತ್ನಗಳಿಗಾಗಿ ಸೇವಾ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ಕೃಷಿ ಸಂಶೋಧನೆ ಮತ್ತು ಆವಿಷ್ಕಾರದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ, ಡಾ. ಫಿರೋಜ್ ಹುಸೇನ್ ಅವರಿಗೆ ಕೃಷಿಕ ಉತ್ಥಾನ ಪ್ರಶಸ್ತಿ ಲಭಿಸಿತು. ಕೊನೆಯದಾಗಿ, ಕೃಷಿ ಶ್ರೇಷ್ಠತೆಗೆ ನೀಡಿದ ಕೊಡುಗೆಗಾಗಿ ಶ್ರೀ ಪ್ರೀತಮ್ ಸಿಂಗ್ ಅವರಿಗೆ ಕಿಸಾನ್ ಪ್ರಶಸ್ತಿಯನ್ನು ನೀಡಲಾಯಿತು.
ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವರು (ಸ್ವತಂತ್ರ ಕಾರ್ಯಭಾರ) ಶ್ರೀ ಜಯಂತ್ ಚೌಧರಿ ಹಾಗೂ ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****
(Release ID: 2087192)