ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಅಮರಾವತಿಯಲ್ಲಿ ಐಐಎಂಸಿಯ ಪಶ್ಚಿಮ ಪ್ರಾದೇಶಿಕ ಕ್ಯಾಂಪಸ್ ನಿರ್ಮಾಣ ಪರಾಮರ್ಶಿಸಿದ ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ ಸಂಜಯ್ ಜಾಜು, ಕ್ಯಾಂಪಸ್ ಮೂಲಸೌಕರ್ಯ ನಿರ್ಮಾಣದ ಪ್ರಕ್ರಿಯೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸಿಪಿಡಬ್ಲ್ಯುಡಿಗೆ ಸೂಚನೆ

Posted On: 22 DEC 2024 8:07PM by PIB Bengaluru

ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ಇಂದು ಅಮರಾವತಿಯಲ್ಲಿರುವ ಭಾರತೀಯ ಸಮೂಹ ಸಂವಹನ ಸಂಸ್ಥೆಯ (ಐಐಎಂಸಿ) ಪಶ್ಚಿಮ ವಲಯದ ಕ್ಯಾಂಪಸ್ ಮೂಲಸೌಕರ್ಯ ನಿರ್ಮಾಣಕ್ಕಾಗಿ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ದೇಶಾದ್ಯಂತದ ಮತ್ತು ವಿಶೇಷವಾಗಿ ವಿದರ್ಭ ಪ್ರದೇಶದ ಗುತ್ತಿಗೆದಾರರಿಗೆ ಮನವಿ ಮಾಡಿದರು. ಶ್ರೀ ಜಾಜು ಅವರು ಕೇಂದ್ರ ಲೋಕೋಪಯೋಗಿ ಇಲಾಖೆ-ಸಿಪಿಡಬ್ಲ್ಯುಡಿ ಅಧಿಕಾರಿಗಳಿಂದ ಐಐಎಂಸಿ ಅಮರಾವತಿ ಕ್ಯಾಂಪಸ್ ನಿರ್ಮಾಣ ಸ್ಥಿತಿಯ ಬಗ್ಗೆ ಮಾಹಿತಿ ಪಡೆದು ಪ್ರಗತಿಪರಿಶೀಲನೆ ನಡೆಸಿದರು ಮತ್ತು ಇಂದು ನಾಗ್ಪುರದಲ್ಲಿ ಆಕಾಶವಾಣಿ, ದೂರದರ್ಶನ, ಪತ್ರಿಕಾ ಮಾಹಿತಿ ಬ್ಯೂರೋ ಹಾಗು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಬರುವ ಕೇಂದ್ರ ಸಂವಹನ ಬ್ಯೂರೋ ಕಚೇರಿಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದರು. ಈ ಪ್ರದೇಶದ ವಿದ್ಯಾರ್ಥಿಗಳಿಗೆ ಸಮೂಹ ಸಂವಹನ ಕ್ಷೇತ್ರದಲ್ಲಿ ವಿಶ್ವದರ್ಜೆಯ ಶಿಕ್ಷಣವನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಸಂಸ್ಥೆಯನ್ನು ಪೂರ್ಣಗೊಳಿಸುವ ಸಲುವಾಗಿ ಟೆಂಡರ್ ಪ್ರಕ್ರಿಯೆಯನ್ನು ವೇಗಗೊಳಿಸಲು ಅವರು ಸಿಪಿಡಬ್ಲ್ಯುಡಿ ಅಧಿಕಾರಿಗಳಿಗೆ ನಿರ್ದಿಷ್ಟ ಸೂಚನೆಗಳನ್ನು ನೀಡಿದರು.

ಮಹಾರಾಷ್ಟ್ರದ ಪಶ್ಚಿಮ ವಿದರ್ಭ ಪ್ರದೇಶದಲ್ಲಿ ನೆಲೆಗೊಂಡಿರುವ ಮತ್ತು 2012ರಲ್ಲಿ ಸ್ಥಾಪನೆಯಾದ ಐಐಎಂಸಿ ಅಮರಾವತಿ ಮಾಧ್ಯಮ ಮತ್ತು ಸಂವಹನ ಕ್ಷೇತ್ರದಲ್ಲಿ ಉನ್ನತ ಸಂಸ್ಥೆಯಾಗಿದೆ ಮತ್ತು ಇದು ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಡೀಮ್ಡ್ ವಿಶ್ವವಿದ್ಯಾಲಯ ಹಾಗು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಕಾರ್ಯಾಚರಿಸುವ ಸ್ವಾಯತ್ತ ಸಂಸ್ಥೆಯಾಗಿದೆ. ಇದನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅಮರಾವತಿ ಜಿಲ್ಲೆಯ ಬದ್ನೇರಾ ಪಟ್ಟಣದಲ್ಲಿ ಸುಮಾರು 15 ಎಕರೆ ಭೂಮಿಯಲ್ಲಿ 90 ಕೋಟಿ ರೂಪಾಯಿಗಳ ಬಜೆಟ್ ಹಂಚಿಕೆಯೊಂದಿಗೆ ನಿರ್ಮಿಸುತ್ತಿದೆ.

ಕ್ಯಾಂಪಸ್ ನಿರ್ಮಾಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಕಾರ್ಯದರ್ಶಿ ಶ್ರೀ ಜಾಜು, ಸಿಪಿಡಬ್ಲ್ಯುಡಿ ಜಾಲತಾಣ etender.cpwd.gov.in ನಲ್ಲಿ ಟೆಂಡರ್ಗಳನ್ನು ಆಹ್ವಾನಿಸಲಾಗುತ್ತಿದೆ ಮತ್ತು ಟೆಂಡರ್ಗಳನ್ನು ಸಲ್ಲಿಸಲು ಕೊನೆಯ ದಿನಾಂಕ ತಿಂಗಳ 27 ಆಗಿದೆ ಎಂದರು.  ಐಐಎಂಸಿ ಅಮರಾವತಿಯಲ್ಲಿ ಕೆಲವು ಶೈಕ್ಷಣಿಕ ಸೌಲಭ್ಯಗಳ ನಿರ್ಮಾಣವು 2026-27ರ ಶೈಕ್ಷಣಿಕ ವರ್ಷದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹೊಸ ಶೈಕ್ಷಣಿಕ ಸಂಕೀರ್ಣವು ಆಡಳಿತಾತ್ಮಕ ಮತ್ತು ಶೈಕ್ಷಣಿಕ ಕಟ್ಟಡಗಳು, ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಗಳು, ಸಿಬ್ಬಂದಿ ವಸತಿಗೃಹಗಳು ಮತ್ತು 200 ಆಸನ ಸಾಮರ್ಥ್ಯದ ಸಭಾಂಗಣವನ್ನು ಒಳಗೊಂಡಿರುತ್ತದೆ.   

ಐಐಎಂಸಿ ದೇಶಾದ್ಯಂತ ಐದು ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದ್ದು, ಇಂಗ್ಲಿಷ್, ಹಿಂದಿ ಮತ್ತು ಸ್ಥಳೀಯ ಭಾಷೆಗಳಲ್ಲಿ ಪತ್ರಿಕೋದ್ಯಮ ಕೋರ್ಸ್ ಗಳನ್ನು ನೀಡುತ್ತದೆ. ಮಹಾರಾಷ್ಟ್ರದ ಅಮರಾವತಿ, ಒಡಿಶಾದ ಧೆಂಕನಲ್, ಮಿಜೋರಾಂನ ಐಜ್ವಾಲ್, ಜಮ್ಮು ಮತ್ತು ಕಾಶ್ಮೀರದ ಜಾಮ್ ಹಾಗು ಕೇರಳದ ಕೊಟ್ಟಾಯಂಗಳಲ್ಲಿ  ಪ್ರಸ್ತುತ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಕೋರ್ಸ್ಗಳನ್ನು ನಡೆಸಲಾಗುತ್ತಿದೆ.

ಸಭೆಯಲ್ಲಿ ಆಕಾಶವಾಣಿ ನಾಗ್ಪುರದ ಉಪ ಮಹಾನಿರ್ದೇಶಕ ರಮೇಶ್ ಘರ್ಡೆ, ಕೇಂದ್ರ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಪ್ರದೀಪ್ ದೀಕ್ಷಿತ್, ಐಐಎಂಸಿ ಅಮರಾವತಿಯ ಪ್ರಾದೇಶಿಕ ನಿರ್ದೇಶಕ ಡಾ.ರಾಜೇಶ್ ಕುಶ್ವಾಹ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

 

*****


(Release ID: 2087173) Visitor Counter : 6


Read this release in: English , Urdu , Marathi