ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತ ವಿಶ್ವದ ರಾಜಧಾನಿಯಾಗಲಿದೆ: ಕೇಂದ್ರ ಸಚಿವರಾದ ಪ್ರಲ್ಹಾದ್‌ ಜೋಶಿ


ನವದೆಹಲಿಯಲ್ಲಿ ಸಿಐಐನ 5ನೇ ಅಂತಾರಾಷ್ಟ್ರೀಯ ಇಂಧನ ಸಮಾವೇಶ ಮತ್ತು ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವರು

Posted On: 17 DEC 2024 1:20PM by PIB Bengaluru

ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತದ ಗಮನಾರ್ಹ ಪ್ರಗತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ, ಭಾರತ ಕೇವಲ ಇಂಧನ ಕ್ರಾಂತಿಗೆ ಸಾಕ್ಷಿಯಾಗುತ್ತಿರುವುದಲ್ಲದೆ ನವೀಕರಿಸಬಹುದಾದ ಇಂಧನ ವಲಯದಲ್ಲಿ ವಿಶ್ವದ ರಾಜಧಾನಿಯಾಗುತ್ತಿದೆ ಎಂದು ಹೇಳಿದರು. ಅವರು ನವದೆಹಲಿಯಲ್ಲಿಂದು ಸಿಐಐನ 5ನೇ ಅಂತಾರಾಷ್ಟ್ರೀಯ ಇಂಧನ ಸಮಾವೇಶ ಮತ್ತು ವಸ್ತುಪ್ರದರ್ಶನ (ಐಇಸಿಇ) ಉದ್ದೇಶಿಸಿ ಸಚಿವರು ಮಾತನಾಡಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಸದ್ಯ ಶುದ್ಧ ಇಂಧನ ವಲಯದಲ್ಲಿ ವಿಶ್ವದ ಅತ್ಯಂತ ಭರವಸೆಯ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದರು.  

“ನವೀಕರಿಸಬಹುದಾದ ಇಂಧನದಲ್ಲಿ ಭಾರತ ಏನು ಮಾಡುತ್ತದೆ ಎಂಬುದನ್ನು ವಿಶ್ವ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿರುವುದು ಮಾತ್ರವಲ್ಲ, ಹಲವು ದೇಶಗಳು  ಭಾರತದ ಕ್ರಮಗಳನ್ನು ಅಳವಡಿಸಿಕೊಂಡಿವೆ ” ಎಂದು ಸಚಿವರು ಹೇಳಿದರು. ಭಾರತದ ಉಪಕ್ರಮದ ಅಡಿಯಲ್ಲಿ 120 ದೇಶಗಳು ಸಹಿ ಹಾಕಿರುವ ಜಾಗತಿಕ ಸಹಯೋಗಕ್ಕಾಗಿ ಸಾಂಸ್ಥಿಕ ವ್ಯವಸ್ಥೆ  ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಪಾತ್ರವನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು.

ಅಲ್ಲದೆ, “ಪ್ರಸಕ್ತ ಹಣಕಾಸು ವರ್ಷ ಏಪ್ರಿಲ್ ನಿಂದ ನವೆಂಬರ್ ವರೆಗೆ ಸುಮಾರು 15 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಭಾರತ ಸೇರ್ಪಡೆ ಮಾಡಿದೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಬಹುತೇಕ ದುಪ್ಪಟ್ಟಾಗಲಿದೆ’’ ಎಂದು ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು. ಪಳೆಯುಳಿಕೆಯೇತರ ಇಂಧನ ವಲಯದಲ್ಲಿ ಭಾರತದ ಒಟ್ಟು ಸ್ಥಾಪಿತ ಸಾಮರ್ಥ್ಯವು 214 ಗಿಗಾವ್ಯಾಟ್‌ ತಲುಪಿದೆ, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 14 ಕ್ಕಿಂತ ಅಧಿಕವಾಗಿದೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಹೆಚ್ಚುವರಿಯಾಗಿ 2024ರ ನವೆಂಬರ್ ನಲ್ಲಿ 2.3 ಗಿಗಾವ್ಯಾಟ್ ಹೊಸ ಸಾಮರ್ಥ್ಯವನ್ನು ಸೇರ್ಪಡೆ ಮಾಡಲಾಯಿತು, ಇದು 2023ರ ನವೆಂಬರ್ 2023 ಅವಧಿಗೆ ಹೋಲಿಸಿದರೆ 566 ಮೆಗಾವ್ಯಾಟ್ ಸೇರ್ಪಡೆಯಾಗಿದ್ದು, ಇದು ನಾಲ್ಕು ಪಟ್ಟು ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ.

2030ರ ವೇಳೆಗೆ 500ಗಿಗಾವ್ಯಾಟ್ ಪಳೆಯುಳಿಕೆ ರಹಿತ (ನಾನ್‌ ಫಾಸಿಲ್ ಪ್ಯೂಯಲ್ಸ್) ಇಂಧನ ಆಧಾರಿತ ಸಾಮರ್ಥ್ಯವನ್ನು ಸಾಧಿಸುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಪುನರುಚ್ಚರಿಸಿದರು. ಜಾಗತಿಕವಾಗಿ ಅತಿದೊಡ್ಡ ಕಲ್ಲಿದ್ದಲು ಸಂಪನ್ಮೂಲಗಳನ್ನು ಹೊಂದಿದ್ದರೂ ಸಹ, ಭಾರತವು ಜಾಗತಿಕ ಸರಾಸರಿಯ ಮೂರನೇ ಒಂದು ಭಾಗದಷ್ಟು ಕಡಿಮೆ ತಲಾ ಇಂಗಾಲ ಹೊರಸೂಸುವಿಕೆಯನ್ನು ಹೊಂದಿದೆ. 2015ರಲ್ಲಿ ಪ್ಯಾರಿಸ್ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಮಾಡಲಾದ ಸಂಕಲ್ಪದಂತೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ನಿಗದಿತ ಗಡುವಿನ ಮುಂಚೆಯೇ ಸಾಧಿಸುವುದನ್ನು ಖಚಿತಪಡಿಸಿಕೊಂಡ ಏಕೈಕ ಜಿ-20 ರಾಷ್ಟ್ರ ಭಾರತವಾಗಿದೆ ಎಂದು ಸಚಿವರು ಪ್ರಮುಖವಾಗಿ ಪ್ರಸ್ತಾಪಿಸಿದರು. 2047ರ ವೇಳೆಗೆ ವಿಕಸಿತ ಭಾರತದ ಗುರಿಯನ್ನು ಸಾಧಿಸುವುದು ಸುಸ್ಥಿರ ಮತ್ತು ಹಸಿರು ಬೆಳವಣಿಗೆಗೆ ಅಂತರ್ಗತವಾಗಿ ಸಂಬಂಧಿಸಿದೆ ಎಂಬ ಬಲವಾದ ನಂಬಿಕೆಯಿಂದ ಭಾರತದ ಇಂಧನ ಕ್ಷೇತ್ರದ ನಡೆಯುತ್ತಿರುವ ಪರಿವರ್ತನೆಗೆ ಸಾಕ್ಷಿಯಾಗಿದೆ ಎಂದು ಸಚಿವರು ಹೇಳಿದರು.

ಅಲ್ಲದೆ, ಸಚಿವರು ದೇಶೀಯ ಸೌರ ಫಲಕಗಳು ಮತ್ತು ಮಾದರಿಗಳ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿ ಹೊಂದಿರುವ 24,000 ಕೋಟಿ ರೂ. ಮೊತ್ತದ ಉತ್ಪಾದನೆ ಆಧರಿತ ಪ್ರೋತ್ಸಾಹ (ಪಿ ಎಲ್ ಐ) ಯೋಜನೆ ಸೇರಿದಂತೆ ನವೀಕರಿಬಹುದಾದ ಇಂಧನ ವಲಯದ ಪ್ರಗತಿ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಕೈಗೊಂಡ ಹಲವು ಕ್ರಮಗಳನ್ನು ಅವರು ವಿವರಿಸಿದರು. 2025-26ರ ವೇಳೆಗೆ 38 ಗಿಗಾವ್ಯಾಟ್ ಸಂಚಿತ ಸಾಮರ್ಥ್ಯದೊಂದಿಗೆ 50 ಸೌರ ಪಾರ್ಕ್‌ಗಳನ್ನು ಸ್ಥಾಪಿಸಲು ಸದ್ಯ ಪ್ರಗತಿಯಲ್ಲಿರುವ ಉಪಕ್ರಮವನ್ನು ಸಚಿವರು ಪ್ರಸ್ತಾಪಿಸಿದರು.  

ಹೆಚ್ಚುವರಿಯಾಗಿ, 2029-30ನೇ ವರ್ಷದವರೆಗೆ ನವೀಕರಿಸಬಹುದಾದ ಖರೀದಿ ಬಾಧ್ಯತೆ (ಆರ್ ಪಿಒ) ಗಾಗಿ ಯಶೋಗಾಥೆಯ ಘೋಷಣೆಗೆ ನಿಬಂಧನೆಗಳನ್ನು ಮಾಡಲಾಗಿದೆ. ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯು 2026-27ರ ವೇಳೆಗೆ 75,021 ಕೋಟಿ ರೂ. ವೆಚ್ಚದಲ್ಲಿ 1 ಕೋಟಿ ಸೌರಫಲಕಗಳ ಅಳವಡಿಕೆಯನ್ನು ಹೊಂದಿದೆ ಎಂದು ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು.

ನವೀಕರಿಸಬಹುದಾದ ಇಂಧನ ವಲಯವನ್ನು ಉತ್ತೇಜಿಸಲು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂ ಎನ್‌ ಆರ್ ಇ) 2024ರ ಸೆಪ್ಟಂಬರ್ ನಲ್ಲಿ ರಿ ಇನ್ವೆಸ್ಟ್ ಮತ್ತು 2024ರ ನವೆಂಬರ್ ನಲ್ಲಿ ಚಿಂತನ ಶಿಬಿರ ಆಯೋಜಿಸಲಾಗಿತ್ತು ಎಂದು ಕೇಂದ್ರ ಸಚಿವರಾದ ಪ್ರಲ್ಹಾದ್‌ ಜೋಷಿ ಹೇಳಿದರು. ನವೀಕರಿಸಬಹುದಾದ ಇಂಧನ ವಲಯದಲ್ಲಿ ಆರ್‌ಇ ವಲಯದಲ್ಲಿ ಅಸ್ತಿತ್ವದಲ್ಲಿರುವ ಅಡೆತಡೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಬ್ಯಾಂಕ್‌ಗಳು, ಕೈಗಾರಿಕೆಗಳು ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಜನವರಿಯಲ್ಲಿ ಮುಂಬೈನಲ್ಲಿ ಸಭೆ ನಡೆಸಲು ಉದ್ದೇಶಿಸಲಾಗಿದೆ ಎಂದು ಸಚಿವರು ಹೇಳಿದರು. ಹಸಿರು ಮತ್ತು ಸುಸ್ಥಿರ ಭವಿಷ್ಯದತ್ತ ಭಾರತದ ಪಯಣದಲ್ಲಿ ಪಾಲುದಾರರಾಗಲು ಅವರು ಜಾಗತಿಕ ನಾಯಕರು ಮತ್ತು ಉದ್ಯಮದ ಮಧ್ಯಸ್ಥಗಾರರಿಗೆ ಆಹ್ವಾನ ನೀಡಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಸಿಐಐ-ಇವೈ ಇಂಧನ ಪರಿವರ್ತನೆ ಹೂಡಿಕೆ ಮೇಲ್ವಿಚಾರಣಾ (ಎನರ್ಜಿ ಟ್ರಾನ್ಸಿಶನ್ ಇನ್ವೆಸ್ಟ್‌ಮೆಂಟ್ ಮಾನಿಟರ್) ವರದಿಯನ್ನು ಬಿಡುಗಡೆ ಮಾಡಿದರು. "ಇಂಧನ ಪರಿವರ್ತನೆಯ ಜಾಗತಿಕ ಸಂವಾದ" ಎಂಬ ವಿಷಯದ ಸಮ್ಮೇಳನದಲ್ಲಿ ಉದ್ಯಮದ ನಾಯಕರು, ನೀತಿ ನಿರೂಪಕರು ಮತ್ತು ಪರಿಣತರು ಭಾಗವಹಿಸಿದ್ದರು.

 

 

 

*****


(Release ID: 2085169) Visitor Counter : 92