ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಡಾ. ಮನ್ಸುಖ್ ಮಾಂಡವಿಯಾ ಅವರು ವೆಬಿನಾರ್ ನಲ್ಲಿ ‘ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಯುವಕರಿಗೆ ಉದ್ಯೋಗಾವಕಾಶಗಳುʼ ಕುರಿತು ಯುವಕರನ್ನು ಉದ್ದೇಶಿಸಿ ಮಾತನಾಡಿದರು
ಭಾರತದ ಯುವಜನತೆ ದೇಶದ ನಿಜವಾದ ಸಂಪತ್ತು: ಡಾ.ಮಾಂಡವೀಯ
"ಎನ್.ಸಿ.ಎಸ್. ಪೋರ್ಟಲ್ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಉದ್ಯೋಗಾವಕಾಶಗಳನ್ನು ಹುಡುಕಲು ಮಹತ್ವಾಕಾಂಕ್ಷೆಯ ಯುವಕರಿಗೆ ಅಮೂಲ್ಯವಾದ ಸಂಪನ್ಮೂಲವಾಗಿದೆ"
ವೆಬಿನಾರ್ 1,100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವುದರೊಂದಿಗೆ ಯುವಕರಿಂದ ಅಗಾಧ ಪ್ರತಿಕ್ರಿಯೆಯನ್ನು ಪಡೆಯಿತು
Posted On:
06 DEC 2024 7:12PM by PIB Bengaluru
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಇಂದು ನವದೆಹಲಿಯಲ್ಲಿ "ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಯುವಕರಿಗೆ ಉದ್ಯೋಗಾವಕಾಶಗಳು" ಎನ್ನುವ ವೆಬಿನಾರಿನಲ್ಲಿ ಭಾಗವಹಿಸಿದರು. ವಿಶ್ವಸಂಸ್ಥೆ ಭಾರತ, ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐ.ಎಲ್.ಒ.) ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗದ ಸಹಯೋಗದೊಂದಿಗೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ವೆಬಿನಾರನ್ನು ಆಯೋಜಿಸಿತ್ತು.
ದೆಹಲಿ/ಎನ್.ಸಿ.ಆರ್.ನ 42 ಪ್ರಮುಖ ಶಿಕ್ಷಣ ಸಂಸ್ಥೆಗಳಿಂದ ಕಾನೂನು, ವ್ಯವಹಾರ, ನಿರ್ವಹಣೆ ಮತ್ತು ಸಂಬಂಧಿತ ಕ್ಷೇತ್ರಗಳ 1100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವೆಬಿನಾರನ್ನು ದೇಶಾದ್ಯಂತ ನೇರ ಪ್ರಸಾರ ಮಾಡಲಾಯಿತು, ಆ ಮೂಲಕ ಹೆಚ್ಚು ಹೆಚ್ಚು ಯುವ ಆಕಾಂಕ್ಷಿಗಳನ್ನು ತಲುಪಿತು.
ಡಾ.ಮಾಂಡವೀಯ ಅವರು ತಮ್ಮ ಭಾಷಣದಲ್ಲಿ, ಭಾರತದ ಯುವಜನರು ದೇಶದ ನಿಜವಾದ ಸಂಪತ್ತು ಮತ್ತು ಅವರ ಪ್ರತಿಭೆ ಮತ್ತು ಕೌಶಲ್ಯಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿ ಪ್ರಶಂಸಿಸಲಾಗುತ್ತಿದೆ ಎಂದು ಹೇಳಿದರು. ಜಾಗತಿಕ ಉದ್ಯೋಗಿಗಳ ಅಗತ್ಯತೆಗಳನ್ನು ಪೂರೈಸುವಲ್ಲಿ ಭಾರತೀಯ ವೃತ್ತಿಪರರು ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು.
ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಇಂಟರ್ನ್ಶಿಪ್ ಅಥವಾ ಸ್ವಯಂಸೇವೆ ಮಾಡುವ ಅವಕಾಶಗಳನ್ನು ಪರಿಗಣಿಸುವಂತೆ ಕೇಂದ್ರ ಸಚಿವರು ಭಾಗವಹಿಸುವವರನ್ನು ಪ್ರೋತ್ಸಾಹಿಸಿದರು. ಅಂತಹ ಅನುಭವಗಳು ಕೌಶಲ್ಯಗಳನ್ನು ಹೆಚ್ಚಿಸುತ್ತವೆ, ದೃಷ್ಟಿಕೋನಗಳನ್ನು ವಿಸ್ತರಿಸುತ್ತವೆ ಹಾಗು ವೈವಿಧ್ಯಮಯ ವೃತ್ತಿ ಸವಾಲುಗಳಿಗೆ ಯುವಕರನ್ನು ಸಿದ್ಧಪಡಿಸುತ್ತವೆ ಎಂದು ಅವರು ಹೇಳಿದರು.
ಡಾ. ಮಾಂಡವಿಯಾ ಅವರು ಭಾಗವಹಿಸಿದವರನ್ನು ರಾಷ್ಟ್ರೀಯ ವೃತ್ತಿ ಸೇವೆ (ಎನ್.ಸಿ.ಎಸ್.) ಪೋರ್ಟಲ್ ಅನ್ನು ಬಳಸಿಕೊಳ್ಳುವಂತೆ ಒತ್ತಾಯಿಸಿದರು, ಇದು ಪ್ರತಿಭಾವಂತ ವ್ಯಕ್ತಿಗಳನ್ನು ಹುಡುಕುತ್ತಿರುವ 37 ಲಕ್ಷಕ್ಕೂ ಹೆಚ್ಚು ನೋಂದಾಯಿತ ಸಂಸ್ಥೆಗಳನ್ನು ಹೊಂದಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ಹುಡುಕಲು ಮಹತ್ವಾಕಾಂಕ್ಷಿ ಯುವಕರಿಗೆ ಈ ಪೋರ್ಟಲ್ ಅಮೂಲ್ಯವಾದ ಸಂಪನ್ಮೂಲವಾಗಿದೆ ಎಂದು ಅವರು ವಿವರಿಸಿದರು.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವರಾದ, ಸುಶ್ರೀ ಶೋಭಾ ಕರಂದ್ಲಾಜೆ ಅವರು ಯುವಜನರು ಅಭಿವೃದ್ಧಿಗೆ ಪ್ರಮುಖ ಸಂಪನ್ಮೂಲವಾಗಿದೆ, ಸಾಮಾಜಿಕ ಬದಲಾವಣೆಯ ಪ್ರತಿನಿಧಿಗಳಾಗಿದ್ದಾರೆ ಮತ್ತು ಆರ್ಥಿಕ ಬೆಳವಣಿಗೆ ಹಾಗು ತಾಂತ್ರಿಕ ಆವಿಷ್ಕಾರದ ಪ್ರೇರಕ ಶಕ್ತಿಯಾಗಿದ್ದಾರೆ ಎಂದರು.
ಕಾರ್ಮಿಕ ಮತ್ತು ಉದ್ಯೋಗ ಕಾರ್ಯದರ್ಶಿ ಶ್ರೀಮತಿ ಸುಮಿತಾ ದಾವ್ರಾ ಅವರು ದೇಶದ ಅಭೂತಪೂರ್ವ ಜನಸಂಖ್ಯಾ ಲಾಭಾಂಶದ ವಿಶೇಷ ಸಾಮರ್ಥ್ಯದ ಬಗ್ಗೆ ಹೇಳಿದರು. ದೇಶಾದ್ಯಂತ ಯುವಕರು ಮತ್ತು ವಿದೇಶದಲ್ಲಿ ಅಧ್ಯಯನ ಮಾಡುತ್ತಿರುವವರಿಗೆ ಹೆಚ್ಚಿನ ವ್ಯಾಪ್ತಿಯನ್ನು ಮತ್ತು ಪ್ರಭಾವವನ್ನು ಖಚಿತಪಡಿಸಿಕೊಳ್ಳಲು ಇಂತಹ ಹೆಚ್ಚಿನ ವೆಬಿನಾರುಗಳನ್ನು ಆಯೋಜಿಸುವ ಮೂಲಕ ಈ ಉಪಕ್ರಮವನ್ನು ವಿಸ್ತರಿಸುವ ಸಚಿವಾಲಯದ ಯೋಜನೆಗಳ ವಿವರಗಳನ್ನು ಅವರು ಹಂಚಿಕೊಂಡರು.
ವೆಬಿನಾರಿನಲ್ಲಿ ಭಾರತದ ವಿಶ್ವಸಂಸ್ಥೆಯ ನಿವಾಸಿ ಸಂಯೋಜಕರಾದ ಶ್ರೀ ಶೋಂಬಿ ಶಾರ್ಪ್, ಭಾರತದ ಐಎಲ್ಒ ಕಂಟ್ರಿ ಆಫೀಸ್ ನ ನಿರ್ದೇಶಕರಾದ ಮಿಚಿಕೊ ಮಿಯಾಮೊಟೊ ಸೇರಿದಂತೆ ವಿಶೇಷ ಭಾಷಣಕಾರರು ಭಾಗವಹಿಸಿದ್ದರು. 26 ವಿಶ್ವಸಂಸ್ಥೆಯ ಸಂಸ್ಥೆಗಳು ಭಾರತದಲ್ಲಿ 4000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ತೊಡಗಿಸಿಕೊಂಡಿವೆ ಎಂದು ತಿಳಿಸಲಾಯಿತು.
ವೆಬಿನಾರಿನಲ್ಲಿ, ವಿಶ್ವಸಂಸ್ಥೆ ಭಾರತ, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐ.ಎಲ್.ಒ.) ಯ ತಜ್ಞರು ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಲು ಅಗತ್ಯವಿರುವ ಕೌಶಲ್ಯಗಳು ಮತ್ತು ಅರ್ಹತೆಗಳ ಕುರಿತು ಪ್ರಮುಖ ಒಳನೋಟಗಳನ್ನು ಹಂಚಿಕೊಂಡರು. ವಿಶ್ವಸಂಸ್ಥೆಯಲ್ಲಿ ಇಂಟರ್ನ್ಶಿಪ್ ಗಳು, ಸ್ವಯಂಸೇವಾ ಕಾರ್ಯಕ್ರಮಗಳು, ಸಲಹಾ ಸಂಸ್ಥೆಗಳು ಮತ್ತು ಯುವ ವೃತ್ತಿಪರರ ಕಾರ್ಯಕ್ರಮಗಳಂತಹ ವಿವಿಧ ಅವಕಾಶಗಳ ಬಗ್ಗೆ ತಜ್ಞರು ಮಾಹಿತಿ ನೀಡಿದರು, . ಅರ್ಜಿ ಸಲ್ಲಿಸುವ ವಿಧಾನಗಳು ಮತ್ತು ಅಗತ್ಯವಿರುವ ಸಾಮರ್ಥ್ಯಗಳನ್ನು ಸಹ ವಿವರಿಸಲಾಯಿತು. ಇದಲ್ಲದೆ, ಪೋರ್ಟಲ್ ಅನ್ನು ಉಪಯೋಗಿಸಲು ಮತ್ತು ಲಭ್ಯವಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿವರವಾದ ಹಂತ ಹಂತದ ಮಾರ್ಗದರ್ಶನದೊಂದಿಗೆ ʼಯುಎನ್ ಜಾಬ್ಸ್ ಪೋರ್ಟಲ್ʼ ಬಗ್ಗೆ ವಿವರಿಸಲಾಯಿತು .
ವೆಬಿನಾರಿನ ಪ್ರಮುಖ ವೈಶಿಷ್ಟ್ಯವೆಂದರೆ ಜಿನೀವಾ ಪ್ರಧಾನ ಕಛೇರಿಯಲ್ಲಿ ಐ.ಎಲ್.ಒ. ನೊಂದಿಗೆ ಕೆಲಸ ಮಾಡುವ ಹಿರಿಯ ಭಾರತೀಯ ತಜ್ಞರ ಪ್ಯಾನೆಲ್ ಚರ್ಚೆ ಆಗಿತ್ತು. ನಿರ್ದೇಶಕಿ ಸುಕ್ತಿ ದಾಸ್ ಗುಪ್ತಾ ಮತ್ತು ಕೌಶಲ್ಯ ಮತ್ತು ಉದ್ಯೋಗದ ಮುಖ್ಯಸ್ಥರಾದ ಶ್ರೀ ಶ್ರೀನಿವಾಸ್ ಬಿ. ರೆಡ್ಡಿ ಅವರು ತಮ್ಮ ಅನುಭವಗಳು ಮತ್ತು ವೃತ್ತಿಜೀವನದ ಪ್ರಯಾಣವನ್ನು ಹಂಚಿಕೊಂಡರು ಮತ್ತು ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳಿಗೆ ಅಮೂಲ್ಯ ಸಲಹೆಯನ್ನು ನೀಡಿದರು. ಈ ಸಂವಾದಾತ್ಮಕ ವೆಬಿನಾರಿನಲ್ಲಿ ತಜ್ಞರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿದರು.
ವೆಬಿನಾರ್ ವಿದ್ಯಾರ್ಥಿಗಳಿಗೆ ಜಾಗತಿಕ ಉದ್ಯೋಗಾವಕಾಶಗಳ ಕುರಿತು ಅಗತ್ಯ ಮಾಹಿತಿಯನ್ನು ಒದಗಿಸಿತು, ಇದು ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಅವರ ಆಕಾಂಕ್ಷೆಗಳನ್ನು ಸಾಕಾರಗೊಳಿಸುವ ಪ್ರಮುಖ ಹೆಜ್ಜೆಯಾಗಿದೆ.
*****
(Release ID: 2082197)
Visitor Counter : 9