ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಉತ್ತರಾಖಂಡದ ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ (ಎಲ್ ಬಿ ಎಸ್ ಎನ್ ಎ ಎ) ಯಲ್ಲಿ 99 ನೇ ಫೌಂಡೇಶನ್ ಕೋರ್ಸ್ ನ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವಲ್ಲಿ ನಾಗರಿಕ ಸೇವಕರು ಪ್ರಮುಖ ಪಾತ್ರವನ್ನು ಹೊಂದಿದ್ದಾರೆ
"ಚಿಂತೆಯ" ಬದಲಿಗೆ "ಚಿಂತನೆ" ಮತ್ತು "ಕೊರಗುವ" ಬದಲಿಗೆ "ವ್ಯವಸ್ಥೆ" ರೂಪಿಸುವ ಮೂಲಕ ಸಮಸ್ಯೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪರಿಹರಿಸಬಹುದು
ಕಾರ್ಯಗಳ ವೀಕ್ಷಣೆ, ವಿಶ್ಲೇಷಣೆ ಮತ್ತು ದಾಖಲೀಕರಣವು ಯಾವುದೇ ಸಮಸ್ಯೆಗೆ ಪರಿಹಾರಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ
ಆಡಳಿತವನ್ನು 'ಪ್ರತಿಕ್ರಿಯಾತ್ಮಕ'ವಾಗಿಸದೆ 'ಸಕ್ರಿಯ' ಮತ್ತು 'ನಿರೀಕ್ಷಿತ' ಮಾಡುವುದು ಅಧಿಕಾರಿಗಳ ಪಾತ್ರವಾಗಿದೆ
ಯಾವುದೇ ಚಟುವಟಿಕೆಯು ಪ್ರತ್ಯೇಕವಾಗಿ ಫಲಿತಾಂಶಗಳನ್ನು ನೀಡಲು ಸಾಧ್ಯವಿಲ್ಲದ ಕಾರಣ ಮೋದಿ ಸರ್ಕಾರವು "ಸಂಪೂರ್ಣ ಸರ್ಕಾರ" ವಿಧಾನದೊಂದಿಗೆ ಕಾರ್ಯನಿರ್ವಹಿಸುತ್ತಿದೆ
ನೀತಿಗಳ ಸ್ಫೂರ್ತಿಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವುಗಳನ್ನು ಸೂಕ್ಷ್ಮವಾಗಿ ಅನುಷ್ಠಾನಗೊಳಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ
ಅಭಿವೃದ್ಧಿಯು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮತ್ತು ಪ್ರತಿ ಮನೆಗೂ ಅಗತ್ಯ ಸೌಕರ್ಯಗಳು ಲಭ್ಯವಾಗುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ
ನೀವು ಯಾವ ಜಿಲ್ಲೆಯಲ್ಲಿದ್ದರೂ, ನೀವು ಕೃತಕ ಬುದ್ಧಿಮತ್ತೆ ಸಹಾಯದಿಂದ ಪ್ರತ್ಯೇಕ ಡೇಟಾವನ್ನು ಸಂಗ್ರಹಿಸಲು ಪ್ರಯತ್ನಿಸಬೇಕು, ಈ ಸಣ್ಣ ಪ್ರಯೋಗಗಳು ದೇಶವನ್ನು ಮುಂದಕ್ಕೆ ಕೊಂಡೊಯ್ಯಲು ಉಪಯುಕ್ತವಾಗುತ್ತವೆ
ಕಡತಗಳ ಸುಳಿಯಲ್ಲಿ ಸಿಲುಕುವ ಬದಲು ಜನರ ಬದುಕನ್ನು ಮುನ್ನಡೆಸುವುದೇ ಕಡತಗಳ ಉದ್ದೇಶವಾಗಬೇಕು
ದೇಶದ ಜನಸಂಖ್ಯೆಯ ಶೇ.50 ರಷ್ಟು ಜನರು ನೀತಿ ನಿರೂಪಣೆಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವವರೆಗೆ, ಪ್ರಧಾನಿ ಮೋದಿಯವರ “ಮಹಿಳಾ ನೇತೃತ್ವದ ಅಭಿವೃದ್ಧಿ” ಪರಿಕಲ್ಪನೆಯು ಅಪೂರ್ಣವಾಗಿರುತ್ತದೆ
Posted On:
28 NOV 2024 8:33PM by PIB Bengaluru
ಉತ್ತರಾಖಂಡದ ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ (ಎಲ್ ಬಿ ಎಸ್ ಎನ್ ಎ ಎ) ಯಲ್ಲಿ 99ನೇ ಕಾಮನ್ ಫೌಂಡೇಶನ್ ಕೋರ್ಸ್ ನ ಸಮಾರೋಪ ಸಮಾರಂಭದಲ್ಲಿ ಇಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಯುವ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವರು, ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಶಿಲ್ಪಿಗಳ ಸಮೂಹವು ಅಭ್ಯಾಸ, ಶ್ರದ್ಧೆ ಮತ್ತು ಶಕ್ತಿಯಿಂದ ತುಂಬಿದೆ ಎಂದು ಹೇಳಿದರು. 2047 ರ ವೇಳೆಗೆ ದೇಶವು ತನ್ನ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ, ಭಾರತವು ವಿಶ್ವದ ಎಲ್ಲಾ ಕ್ಷೇತ್ರಗಳಲ್ಲಿ ಅಗ್ರಸ್ಥಾನದಲ್ಲಿರವ ಗುರಿಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಮ್ಮೆಲ್ಲರಿಗೂ ನೀಡಿದ್ದಾರೆ ಎಂದು ಹೇಳಿದರು. ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಮುಂದಿನ 25 ವರ್ಷಗಳಲ್ಲಿ ಯುವ ಅಧಿಕಾರಿಗಳು ಮಾಡುವ ಕೆಲಸವು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರ ಕನಸುಗಳನ್ನು ನನಸಾಗಿಸಲು ಕೊಡುಗೆ ನೀಡುತ್ತದೆ ಎಂದು ಶ್ರೀ ಶಾ ಹೇಳಿದರು. ದೇಶದ 1.4 ಶತಕೋಟಿ ನಾಗರಿಕರು ಒಗ್ಗೂಡಿದರೆ ಮಾತ್ರ ಈ ಅಭಿಯಾನ ಯಶಸ್ವಿಯಾಗುತ್ತದೆ ಎಂದು ಅವರು ಹೇಳಿದರು.
ಪ್ರತಿಯೊಬ್ಬ ಪ್ರಜೆಯು ಸ್ವಾಭಿಮಾನದಿಂದ ಮತ್ತು ಅಗತ್ಯವಿರುವ ಎಲ್ಲಾ ಸೌಲಭ್ಯಗಳೊಂದಿಗೆ ಮುಂದಿನ ಪೀಳಿಗೆಯನ್ನು ಮುನ್ನಡೆಸುವಂತಹ ಭಾರತವನ್ನು ನಿರ್ಮಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು. ಭಾರತವನ್ನು ಪ್ರತಿಯೊಂದು ಕ್ಷೇತ್ರದಲ್ಲೂ ನಂಬರ್ ಒನ್ ಮಾಡಿದ ಮಾತ್ರಕ್ಕೆ ಅಭಿವೃದ್ಧಿ ಹೊಂದಿದ ಭಾರತದ ಕನಸು ನನಸಾಗುವುದಿಲ್ಲ ಎಂದು ಹೇಳಿದರು; 1.4 ಶತಕೋಟಿ ಜನರು ಪೂರ್ಣ ಶಕ್ತಿ ಮತ್ತು ಸಮಾನ ಅವಕಾಶಗಳೊಂದಿಗೆ ಮುನ್ನಡೆದಾಗ ಮಾತ್ರ ಈ ಕನಸು ನನಸಾಗುತ್ತದೆ.

ಶ್ರೀ ಅಮಿತ್ ಶಾ ಅವರು ನಾಗರಿಕ ಸೇವೆಯಲ್ಲಿ, ತನಗಿಂತ ಮೊದಲು ಇತರರ ಬಗ್ಗೆ ಯೋಚಿಸುವುದಕ್ಕಿಂತ ದೊಡ್ಡ ಮಂತ್ರವಿಲ್ಲ ಎಂದು ಹೇಳಿದರು. ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ನಂತರ ಅಧಿಕಾರಿಗಳು ಜನರ ಜೀವನ ಸುಧಾರಿಸುವತ್ತ ಗಮನ ಹರಿಸಬೇಕು ಎಂದು ತಿಳಿಸಿದರು. ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳಾಗಿ ಸೇವೆ ಸಲ್ಲಿಸುವಾಗ, ಅಧಿಕಾರಿಗಳು ಎಐ (ಕೃತಕ ಬುದ್ಧಿಮತ್ತೆ) ಮತ್ತು ಡೇಟಾವನ್ನು ಗರಿಷ್ಠವಾಗಿ ಬಳಸಬೇಕು, ಅದು ಅವರ ನಿರ್ಧಾರಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ನಿಖರವಾಗಿ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು. ಅಭಿವೃದ್ಧಿ ಎಂಬುದು ಅಂಕಿ-ಅಂಶಗಳಿಂದಲ್ಲ, ಫಲಿತಾಂಶದಿಂದ ಬರುತ್ತದೆ ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 'ಸಂಪೂರ್ಣ ಸರ್ಕಾರದ ವಿಧಾನವನ್ನು' ಉಲ್ಲೇಖಿಸಿದ ಶ್ರೀ ಶಾ, ಯಾವುದೇ ಚಟುವಟಿಕೆಯು ಪ್ರತ್ಯೇಕವಾಗಿ ಫಲಿತಾಂಶವನ್ನು ನೀಡುವುದಿಲ್ಲ ಮತ್ತು ಈ ವಿಧಾನದೊಂದಿಗೆ ಕೆಲಸ ಮಾಡುವ ಮೂಲಕ ಮಾತ್ರ ಯಶಸ್ಸನ್ನು ಸಾಧಿಸಬಹುದು ಎಂದು ಹೇಳಿದರು. ‘ಸಂಪೂರ್ಣ ಸರ್ಕಾರದ ವಿಧಾನ’ದೊಂದಿಗೆ ನಾವು ಸಾಮಾಜಿಕ ಸಾಮರಸ್ಯದ ಕಡೆಗೆ ಕೆಲಸ ಮಾಡಬೇಕು. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಅವಕಾಶಗಳು ಸಿಗದ ಹೊರತು ದೇಶವು ದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಇಲ್ಲಿರುವ ಆಯ್ಕೆಯಾದ ನಾಗರಿಕ ಸೇವಾ ಅಧಿಕಾರಿಗಳ ಪೈಕಿ ಶೇ.38ರಷ್ಟು ಮಹಿಳೆಯರು ಇದ್ದಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ದೇಶದ ಜನಸಂಖ್ಯೆಯ ಶೇ.50ರಷ್ಟು ಜನರು ನೀತಿಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತೊಡಗಿಸಿಕೊಳ್ಳುವವರೆಗೆ ಪ್ರಧಾನಿ ಮೋದಿ ಅವರು ನೀಡಿದ ‘ಮಹಿಳಾ ನೇತೃತ್ವದ ಅಭಿವೃದ್ಧಿ’ಪರಿಕಲ್ಪನೆ ಈಡೇರುವುದಿಲ್ಲ ಎಂದು ಅವರು ಹೇಳಿದರು. ಸರ್ಕಾರದ ಕೆಲಸ ನೀತಿಗಳನ್ನು ರೂಪಿಸುವುದು, ಆದರೆ ಅವುಗಳನ್ನು ಕಾರ್ಯಗತಗೊಳಿಸುವುದು ಅಧಿಕಾರಿಗಳ ಜವಾಬ್ದಾರಿ ಎಂದು ಶ್ರೀ ಶಾ ಒತ್ತಿ ಹೇಳಿದರು. ಕಾರ್ಯಗತಗೊಳಿಸುವ ಮನೋಭಾವವಿಲ್ಲದಿದ್ದರೆ ನೀತಿಗಳ ಅನುಷ್ಠಾನ ಸಾಧ್ಯವಿಲ್ಲ ಎಂದು ಅವರು ಹೇಳಿದರು. ನೀತಿಗಳನ್ನು ಸರಿಯಾಗಿ ಮತ್ತು ಸೂಕ್ಷ್ಮತೆಯಿಂದ ಸರಿಯಾದ ದಿಕ್ಕಿನಲ್ಲಿ ಅನುಷ್ಠಾನಗೊಳಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು, ಅದು ತಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಅಧಿಕಾರಿಗಳಿಗೆ ಕರೆ ನೀಡಿದರು.

ಸರ್ಕಾರವನ್ನು ಕ್ರಿಯಾಶೀಲವಾಗಿಸುವುದು ಅಧಿಕಾರಿಗಳ ಕೆಲಸವೇ ಹೊರತು ಪ್ರತಿಕ್ರಿಯಾತ್ಮಕವಾಗಿಸುವುದಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಅಭಿವೃದ್ಧಿಯನ್ನು ಕಟ್ಟಕಡೆಯ ವ್ಯಕ್ತಿಗೂ ಕೊಂಡೊಯ್ಯುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ಒತ್ತಿ ಹೇಳಿದ ಅವರು, ಪ್ರತಿ ಮನೆಗೂ ಶೌಚಾಲಯ, ವಿದ್ಯುತ್ ಮತ್ತಿತರ ಅಗತ್ಯ ಸೇವೆಗಳನ್ನು ಒದಗಿಸಬೇಕು. ಕೊನೆಯ ಉಸಿರು ಇರುವವರೆಗೂ ವಿದ್ಯಾರ್ಥಿಯಾಗಿ ಕಲಿಯುವ ಮನೋಭಾವವನ್ನು ಉಳಿಸಿಕೊಂಡವರು ಮಾತ್ರ ನಿಜವಾದ ಪ್ರಗತಿಯನ್ನು ಸಾಧಿಸಲು ಸಾಧ್ಯ ಎಂದು ಶ್ರೀ ಶಾ ಹೇಳಿದರು.
ಭಾರತದಲ್ಲಿ ಜಿ ಎಸ್ ಟಿ ಯಶಸ್ವಿಯಾಗುವುದಿಲ್ಲ ಎಂದು ಅನೇಕ ಪ್ರಮುಖ ಅರ್ಥಶಾಸ್ತ್ರಜ್ಞರು ನಂಬಿದ್ದರು, ಆದರೆ ಇಂದು ಜಿ ಎಸ್ ಟಿ ನಮ್ಮ ದೇಶದ ಆರ್ಥಿಕ ಬೆಳವಣಿಗೆಯ ಮೂಲಾಧಾರವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಮುಂದಿನ ದಿನಗಳಲ್ಲಿ "ಮೇಕ್ ಇನ್ ಇಂಡಿಯಾ" ದೇಶಕ್ಕೆ ಹೆಮ್ಮೆಯ ಮೂಲವಾಗಲಿದೆ ಎಂದು ಅವರು ಹೇಳಿದರು, ಏಕೆಂದರೆ ಭಾರತವು ಜಾಗತಿಕ ಉತ್ಪಾದನಾ ವಲಯಕ್ಕೆ ಸಂಪರ್ಕ ಹೊಂದಿದ ಜನರ ಕೇಂದ್ರವಾಗಿದೆ. ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರವು ಭಾರತದಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದೆ ಎಂದು ಶ್ರೀ ಶಾ ಹೇಳಿದರು.
ನರೇಂದ್ರ ಮೋದಿಯವರ ಸರ್ಕಾರವು ಪರಿಚಯಿಸಿದ ಹೊಸ ಶಿಕ್ಷಣ ನೀತಿಯು ಭಾರತದ ಯುವಜನತೆಗೆ ಪ್ರಪಂಚದಾದ್ಯಂತದ ಯುವಕರೊಂದಿಗೆ ಸ್ಪರ್ಧಿಸಲು ವೇದಿಕೆಯನ್ನು ಒದಗಿಸುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಖಚಿತಪಡಿಸಿಕೊಳ್ಳುವುದರಿಂದ ಮಕ್ಕಳಲ್ಲಿ ಅರ್ಥಮಾಡಿಕೊಳ್ಳುವ ಮತ್ತು ತಾರ್ಕಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.
ನೀವು ಯಾವ ಜಿಲ್ಲೆಗೆ ಹೋದರೂ, ಕೃತಕ ಬುದ್ಧಿಮತ್ತೆಯ ಸಹಾಯದಿಂದ ಪ್ರತ್ಯೇಕ ಡೇಟಾವನ್ನು ಸಂಗ್ರಹಿಸಲು ಪ್ರಯತ್ನಿಸಬೇಕು. ನಿಮ್ಮ ಸಣ್ಣ ಪ್ರಯೋಗಗಳು ದೇಶವನ್ನು ಮುಂದಕ್ಕೆ ಕೊಂಡೊಯ್ಯಲು ಉಪಯುಕ್ತವಾಗುತ್ತವೆ ಎಂದು ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ, ಎಡಪಂಥೀಯ ಉಗ್ರವಾದ (ಎಲ್ ಡಬ್ಲ್ಯೂ ಇ), ಈಶಾನ್ಯದಲ್ಲಿ ದಂಗೆ ಮತ್ತು ಮಾದಕ ದ್ರವ್ಯಗಳು ನಮ್ಮ ದೇಶಕ್ಕೆ ನಾಲ್ಕು ಪ್ರಮುಖ ಸವಾಲುಗಳಾಗಿವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಮೋದಿ ಸರ್ಕಾರದ ದೃಢವಾದ ನೀತಿಗಳಿಂದಾಗಿ ಕಳೆದ 10 ವರ್ಷಗಳಲ್ಲಿ ಈ ನಾಲ್ಕು ಕ್ಷೇತ್ರಗಳಲ್ಲಿ ಗಮನಾರ್ಹ ಯಶಸ್ಸು ಸಾಧಿಸಲಾಗಿದೆ ಎಂದು ಹೇಳಿದರು. ಮಾರ್ಚ್ 31, 2026 ರೊಳಗೆ ಎಡಪಂಥೀಯ ಉಗ್ರವಾದವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಅವರು ಪುನರುಚ್ಚರಿಸಿದರು.

ಸ್ವತಂತ್ರ ಭಾರತದ ಸ್ವತಂತ್ರ ಪ್ರಜೆಗಳೆಂಬ ವಿಶ್ವಾಸವನ್ನು ಹೊಂದುವವರೆಗೆ ಮತ್ತು ನಮ್ಮ ಇತಿಹಾಸ ಮತ್ತು ಸಂಪ್ರದಾಯಗಳ ಬಗ್ಗೆ ಹೆಮ್ಮೆಪಡದ ಹೊರತು ನಾವು ಭಾರತವನ್ನು ಶ್ರೇಷ್ಠಗೊಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ‘ಅಭಿವೃದ್ಧಿಯೂ, ಪರಂಪರೆಯೂ’ಎಂಬ ಹೊಸ ಘೋಷವಾಕ್ಯವನ್ನು ಪ್ರಧಾನಿ ಮೋದಿ ನೀಡಿದ್ದು, ಪ್ರತಿಯೊಬ್ಬರೂ ತಮ್ಮ ಆಹಾರ, ಬಟ್ಟೆ, ಸಂಸ್ಕೃತಿಯನ್ನು ಅಭಿಮಾನದಿಂದ ಅಳವಡಿಸಿಕೊಳ್ಳಬೇಕು ಎಂದರು.
ಬ್ರಿಟಿಷರು ಜಾರಿಗೆ ತಂದ 150 ವರ್ಷಗಳ ಹಿಂದಿನ ಕಾನೂನುಗಳ ಬದಲಿಗೆ ಮೋದಿ ಸರ್ಕಾರ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಮೂರು ಹೊಸ ಕಾನೂನುಗಳು ದೇಶಾದ್ಯಂತ ಸಂಪೂರ್ಣವಾಗಿ ಜಾರಿಗೆ ಬಂದ ನಂತರ, ದೇಶದಲ್ಲಿ ಎಲ್ಲಿಯಾದರೂ ಎಫ್ ಐ ಆರ್ ಗಳು ದಾಖಲಾದ ಪ್ರಕರಣಗಳಲ್ಲಿ ಮೂರು ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ನಿಂದ ನ್ಯಾಯ ಸಿಗುತ್ತದೆ ಎಂದು ಅವರು ಹೇಳಿದರು. ಈ ಕಾನೂನುಗಳಲ್ಲಿ ತಂತ್ರಜ್ಞಾನದ ಬಳಕೆಯೊಂದಿಗೆ, ಮುಂದಿನ 10 ವರ್ಷಗಳಲ್ಲಿ ಶಿಕ್ಷೆಯ ಪ್ರಮಾಣವು ಶೇ.90 ರಷ್ಟಕ್ಕೆ ತಲುಪುವ ನಿರೀಕ್ಷೆಯಿದೆ, ಇದು ನಮ್ಮ ನ್ಯಾಯ ವ್ಯವಸ್ಥೆಯನ್ನು ವಿಶ್ವದಲ್ಲೇ ಅತ್ಯಂತ ಆಧುನಿಕವಾಗಿಸುತ್ತದೆ ಎಂದು ಅವರು ಹೇಳಿದರು.
ಯಾವುದೇ ಸಮಸ್ಯೆಯನ್ನು ಚಿಂತೆಯ ಬದಲು ಚಿಂತನೆ ಮತ್ತು ಚರ್ಚೆಯಿಂದ ಪರಿಹರಿಸಬಹುದು ಮತ್ತು ಕೊರಗುವ ಬದಲು ವ್ಯವಸ್ಥೆಗಳನ್ನು ರಚಿಸಬಹುದು ಎಂದು ಶ್ರೀ ಅಮಿತ್ ಶಾ ಹೇಳಿದರು. ಚಿಂತೆಯು ನಮ್ಮ ಆಲೋಚನಾ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ, ಅದಕ್ಕಾಗಿಯೇ ಯೋಗ ಮತ್ತು ಧ್ಯಾನವನ್ನು ದೈನಂದಿನ ದಿನಚರಿಯಾಗಿಸಬೇಕು ಎಂದು ಅವರು ಹೇಳಿದರು. ಸಮಸ್ಯೆಯನ್ನು ಪರಿಹರಿಸಲು, ಸಮಸ್ಯೆಗೆ ಮಾರ್ಗಸೂಚಿಯನ್ನು ರಚಿಸುವುದು, ಸೂಕ್ಷ್ಮ ಯೋಜನೆ ಮಾಡುವುದು, ಅದನ್ನು ಕಾರ್ಯಗತಗೊಳಿಸುವುದು, ಮಧ್ಯಂತರ ಪರಿಶೀಲನೆ ಮತ್ತು ನಿರಂತರ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು.
*****
(Release ID: 2078978)
Visitor Counter : 59