ಹಣಕಾಸು ಸಚಿವಾಲಯ
azadi ka amrit mahotsav

ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಂದ ಬೆಂಗಳೂರಿನಲ್ಲಿ ಇಂದು ರಾಷ್ಟ್ರೀಯ ಎಂಎಸ್ಎಂಇ ಕ್ಲಸ್ಟರ್ ಔಟ್ರೀಚ್ ಕಾರ್ಯಕ್ರಮಕ್ಕೆ ಚಾಲನೆ ಬಳಿಕ ಬೆಂಗಳೂರಿನಲ್ಲಿ ಹೊಸ ಎಸ್ಐಡಿಬಿಐ ಶಾಖೆಗಳ ಉದ್ಘಾಟನೆ


ತುಮಕೂರು, ರಾಯಚೂರು, ಶಿವಮೊಗ್ಗ, ಕಲಬುರಗಿ, ಮಂಗಳೂರು ಮತ್ತು ವಿಜಯಪುರದಲ್ಲಿ ಆರು ಹೊಸ ಎಸ್ಐಡಿಬಿಐ ಶಾಖೆಗಳನ್ನು ಮತ್ತು ಬೆಂಗಳೂರು, ಚೆನ್ನೈ, ಜೈಪುರ ಹಾಗು ವಿಶಾಖಪಟ್ಟಣಂನಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಾಲ್ಕು ನಾರಿ ಶಕ್ತಿ ಶಾಖೆಗಳನ್ನು ಕೇಂದ್ರ ಹಣಕಾಸು ಸಚಿವರು ವರ್ಚುವಲ್ ಮೂಲಕ ಉದ್ಘಾಟಿಸಿದರು

ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಎಂಎಸ್ಎಂಇಗಳು ಪ್ರಮುಖವಾಗಿವೆ, ವಿಶೇಷವಾಗಿ ನಾವೀನ್ಯತೆ, ಉದ್ಯೋಗ ಸೃಷ್ಟಿ ಮತ್ತು ದೇಶದ ಸ್ವಾವಲಂಬನೆಗೆ ಕೊಡುಗೆ ನೀಡುವಲ್ಲಿ ಅವುಗಳ  ಪಾತ್ರ ಹಿರಿದು : ಹಣಕಾಸು ಸಚಿವೆ ಶ್ರೀಮತಿ ಸೀತಾರಾಮನ್

2024-25ರ ಹಣಕಾಸು ವರ್ಷದಲ್ಲಿ 1.54 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಎಂಎಸ್ಎಂಇ ಮುಂಗಡ/ಸಾಲವನ್ನು ಒದಗಿಸಲು ಎಲ್ಲಾ ನಿಗದಿತ/ ಶೆಡ್ಯೂಲ್ ವಾಣಿಜ್ಯ ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳಿಗೆ ಕೇಂದ್ರ ಹಣಕಾಸು ಸಚಿವರಿಂದ  ಗುರಿ ನಿಗದಿ.

ಗ್ರಾಮೀಣ ಪ್ರದೇಶಗಳಲ್ಲಿನ ಸಣ್ಣ ಉದ್ಯಮಗಳಿಗೆ ಹೆಚ್ಚಿನ ಸಾಲವನ್ನು ವಿಸ್ತರಿಸುವತ್ತ ಎಲ್ಲಾ ಬ್ಯಾಂಕುಗಳು ಗಮನ ಹರಿಸಬೇಕು: ಕೇಂದ್ರ ಎಂಎಸ್ಎಂಇ ಸಚಿವರಾದ ಶ್ರೀ ಜಿತನ್ ರಾಮ್ ಮಾಂಝಿ

ಕೇಂದ್ರ ಹಣಕಾಸು ಸಚಿವರು ಎಸ್ಐಡಿಬಿಐನ 11 ಎಂಎಸ್ಎಂಇ ಗ್ರಾಹಕರಿಗೆ 25.75 ಕೋಟಿ ರೂ.ಗಳ ಮಂಜೂರಾತಿ ಪತ್ರಗಳನ್ನು ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಾರಿ ಶಕ್ತಿ ಶಾಖೆಯ ಎಂಎಸ್ಎಂಇ ಗ್ರಾಹಕರಿಗೆ 11 ಕೋಟಿ ರೂ.ಗಳ ಎರಡು ಮಂಜೂರಾತಿ ಪತ್ರಗಳನ್ನು ವಿತರಿಸ

Posted On: 09 NOV 2024 9:29PM by PIB Bengaluru

ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ (ಕಾರ್ಪೋರೇಟ್) ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆ (ಡಿಎಫ್ಎಸ್) ಮತ್ತು ಭಾರತದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್ಐಡಿಬಿಐ) ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರೀಯ ಎಂಎಸ್ಎಂಇ ಕ್ಲಸ್ಟರ್ ಔಟ್ರೀಚ್ ಕಾರ್ಯಕ್ರಮಕ್ಕೆ ಕೇಂದ್ರ ಎಂಎಸ್ಎಂಇ ಸಚಿವರಾದ ಶ್ರೀ ಜಿತನ್ ರಾಮ್ ಮಾಂಝಿ ಅವರ ಉಪಸ್ಥಿತಿಯಲ್ಲಿ ಚಾಲನೆ ನೀಡಿದರು (ಬಿಹಾರದ ಗಯಾದಿಂದ ವರ್ಚುವಲ್ ಹಾಜರಾತಿ),  ಕೇಂದ್ರ ಹಣಕಾಸು ಖಾತೆ ಸಹಾಯಕ  ಸಚಿವರಾದ ಶ್ರೀ ಪಂಕಜ್ ಚೌಧರಿ, ; ಕೇಂದ್ರ ಎಂಎಸ್ಎಂಇಗಳ ಸಹಾಯಕ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಬೆಂಗಳೂರಿನಲ್ಲಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಂಡರು . ಡಿಎಫ್ ಎಸ್ ಕಾರ್ಯದರ್ಶಿ ಶ್ರೀ ನಾಗರಾಜ ಮಡ್ಡಿರಾಳ, ಎಸ್ಐಡಿಬಿಐನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಮನೋಜ್ ಮಿತ್ತಲ್, ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ಹಾಗು  ನಬಾರ್ಡ್ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸುಮಾರು 150 ಎಂಎಸ್ಎಂಇ ಕ್ಲಸ್ಟರ್ಗಳನ್ನು (ಗುಚ್ಛಗಳನ್ನು) ಪ್ರತಿಯೊಂದು ಗುಚ್ಛದಲಿಯೂ ಹಿರಿಯ ಅಧಿಕಾರಿಗಳ ಉಪಸ್ಥಿತಿ ಇರುವಂತೆ ವ್ಯವಸ್ಥೆ ಕಲ್ಪಿಸಿ ಉದ್ಘಾಟನೆಗಾಗಿ ಅವುಗಳನ್ನು ವರ್ಚುವಲ್ ಆಗಿ ಜೋಡಿಸಲಾಗಿತ್ತು. ಈ ಕಾರ್ಯಕ್ರಮವು ಹಣಕಾಸು ಸೇವೆಗಳ ಪ್ರವೇಶವನ್ನು ಖಚಿತಪಡಿಸಿಕೊಳ್ಳುವ ಮತ್ತು ದೇಶಾದ್ಯಂತ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂಇ) ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಕೇಂದ್ರ ಹಣಕಾಸು ಸಚಿವರು ಕರ್ನಾಟಕದ ತುಮಕೂರು, ರಾಯಚೂರು, ಶಿವಮೊಗ್ಗ, ಕಲಬುರಗಿ, ಮಂಗಳೂರು ಮತ್ತು ವಿಜಯಪುರದಲ್ಲಿ ಆರು ಹೊಸ ಎಸ್ಐಡಿಬಿಐ (ಸಿಡ್ಬಿ)  ಶಾಖೆಗಳನ್ನು ವರ್ಚುವಲ್ ಆಗಿ ಉದ್ಘಾಟಿಸಿದರು, ಆ ಮೂಲಕ ಕ್ಲಸ್ಟರ್ಗಳಲ್ಲಿನ ಎಂಎಸ್ಎಂಇಗಳಿಗೆ ಎಸ್ಐಡಿಬಿಐನ ವ್ಯಾಪ್ತಿಯನ್ನು ಮತ್ತು ಆರ್ಥಿಕ ಸಹಾಯವನ್ನು ವಿಸ್ತರಿಸಿದರು. ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸುವ ಗುರಿಯೊಂದಿಗೆ ಬೆಂಗಳೂರು, ಚೆನ್ನೈ, ಜೈಪುರ ಮತ್ತು ವಿಶಾಖಪಟ್ಟಣಂನಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಾಲ್ಕು ನಾರಿ ಶಕ್ತಿ ಶಾಖೆಗಳನ್ನು ಮತ್ತು ಬೆಂಗಳೂರಿನ ಬಾಗಲೂರಿನಲ್ಲಿ ಕೆನರಾ ಬ್ಯಾಂಕಿನ ಕಲಿಕಾ ಕೇಂದ್ರವನ್ನು ಶ್ರೀಮತಿ ಸೀತಾರಾಮನ್ ಉದ್ಘಾಟಿಸಿದರು.

ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಸೀತಾರಾಮನ್, ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಎಂಎಸ್ಎಂಇಗಳ ಮಹತ್ವವನ್ನು ಒತ್ತಿಹೇಳಿದರು, ವಿಶೇಷವಾಗಿ ನಾವೀನ್ಯತೆ, ಉದ್ಯೋಗ ಸೃಷ್ಟಿ ಮತ್ತು ದೇಶದ ಸ್ವಾವಲಂಬನೆಗೆ ಕೊಡುಗೆ ನೀಡುವಲ್ಲಿ ಎಂಎಸ್ಎಂಇಗಳ ಪಾತ್ರ ಬಹಳ ಹಿರಿದು ಎಂದರು.  

ಕೇಂದ್ರ ಹಣಕಾಸು ಸಚಿವರು ಉದ್ಯಮಿಗಳೊಂದಿಗೆ ಸಂವಾದ ನಡೆಸಿದರು, ಸರ್ಕಾರ ಮತ್ತು ಹಣಕಾಸು ಸಂಸ್ಥೆಗಳು ಅವರ ಬೆಳವಣಿಗೆ ಮತ್ತು ಸುಸ್ಥಿರತೆಗೆ ಹೇಗೆ ಮತ್ತಷ್ಟು ಬೆಂಬಲಿಸಬಹುದು ಎಂಬುದರ ಬಗ್ಗೆ ಒಳನೋಟಗಳನ್ನು ಒದಗಿಸಿದರು.  ಎಂಎಸ್ಎಂಇ ವಲಯಕ್ಕೆ ಸಾಲವನ್ನು ಹೆಚ್ಚಿಸಲು ಬ್ಯಾಂಕುಗಳು ಹೆಚ್ಚುವರಿ ದೂರವನ್ನು ಕ್ರಮಿಸಬೇಕಾಗಿದೆ ಎಂದು ಶ್ರೀಮತಿ ಸೀತಾರಾಮನ್ ಹೇಳಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ 1.54 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಎಂಎಸ್ಎಂಇ ಸಾಲವನ್ನು ಒದಗಿಸಲು ಕೇಂದ್ರ ಹಣಕಾಸು ಸಚಿವರು ಎಲ್ಲಾ ನಿಗದಿತ ವಾಣಿಜ್ಯ ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳಿಗೆ ಗುರಿಯನ್ನು ನಿಗದಿಪಡಿಸಿದ್ದಾರೆ. ಹೀಗಾಗಿ ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳು 2024-25, 2025-26 ಮತ್ತು 2026-27ರ ಹಣಕಾಸು ವರ್ಷದಲ್ಲಿ ಎಂಎಸ್ಎಂಇಗಳಿಗೆ ಕ್ರಮವಾಗಿ 5.75 ಲಕ್ಷ ಕೋಟಿ, 6.21 ಲಕ್ಷ ಕೋಟಿ ಮತ್ತು 7 ಲಕ್ಷ ಕೋಟಿ ರೂ.ಗಳ ಒಟ್ಟು ಸಾಲದ ಬೆಳವಣಿಗೆಯ ಗುರಿಯನ್ನು ಹೊಂದಿರಬೇಕು.

ಸಂದರ್ಭದಲ್ಲಿ ತಮ್ಮ ವರ್ಚುವಲ್ ಭಾಷಣದಲ್ಲಿ, ಶ್ರೀ ಜಿತನ್ ರಾಮ್ ಮಾಂಝಿ ಅವರು ಎಂಎಸ್ಎಂಇ ವಲಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಸರ್ಕಾರದ ಉಪಕ್ರಮಗಳನ್ನು ಎತ್ತಿ ತೋರಿಸಿದರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಸಣ್ಣ ಉದ್ಯಮಗಳಿಗೆ ಹೆಚ್ಚಿನ ಸಾಲವನ್ನು ವಿಸ್ತರಿಸುವತ್ತ ಗಮನ ಹರಿಸುವಂತೆ ಎಲ್ಲಾ ಬ್ಯಾಂಕುಗಳನ್ನು ಆಗ್ರಹಿಸಿದರು.

ಸಾಮರ್ಥ್ಯ ವರ್ಧನೆ, ಸಾಲ ಸೌಲಭ್ಯಗಳು ಮತ್ತು ಜ್ಞಾನ ಹಂಚಿಕೆಯ ಮೂಲಕ ಎಂಎಸ್ಎಂಇಗಳನ್ನು ಬೆಂಬಲಿಸುವ ಸಹಯೋಗವನ್ನು ಬಲಪಡಿಸಲು  ಪೀಣ್ಯ ಇಂಡಸ್ಟ್ರೀಸ್ ಅಸೋಸಿಯೇಷನ್ನೊಂದಿಗೆ ತಿಳುವಳಿಕಾ ಒಡಂಬಡಿಕೆಗೆ ಎಸ್ಐಡಿಬಿಐ ಸಹಿ ಹಾಕಿತು.

ಶ್ರೀಮತಿ ಸೀತಾರಾಮನ್ ಅವರು ಎಸ್ಐಡಿಬಿಐನ 11 ಎಂಎಸ್ಎಂಇ ಗ್ರಾಹಕರಿಗೆ ಒಟ್ಟು 25.75 ಕೋಟಿ ರೂ.ಗಳ ಮಂಜೂರಾತಿ ಪತ್ರಗಳನ್ನು ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಾರಿ ಶಕ್ತಿ ಶಾಖೆಯ ಎಂಎಸ್ಎಂಇ ಗ್ರಾಹಕರಿಗೆ 11 ಕೋಟಿ ರೂ.ಗಳ 2 ಮಂಜೂರಾತಿ ಪತ್ರಗಳನ್ನು ವಿತರಿಸಿದರು. ಏರೋಸ್ಪೇಸ್ ಮತ್ತು ಕ್ವಾಂಟಮ್ ತಂತ್ರಜ್ಞಾನದಂತಹ ಆಧುನಿಕ ವಲಯಗಳು ಸೇರಿದಂತೆ ಸಾಂಪ್ರದಾಯಿಕ ಕೈಗಾರಿಕೆಗಳಿಗೆ ಬೆಂಬಲ ವಿಸ್ತರಿಸುವ ಕ್ರಮ ಇದಾಗಿದೆ.

ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಯ ಹೊಸದಾಗಿ ಪ್ರಾರಂಭಿಸಲಾದ ತರುಣ್ ಪ್ಲಸ್ ವಿಭಾಗದ ಅಡಿಯಲ್ಲಿ ಕೆನರಾ ಬ್ಯಾಂಕಿನ ಐದು ಸಾಲಗಾರರಿಗೆ ಕೇಂದ್ರ ಹಣಕಾಸು ಸಚಿವರು ಮಂಜೂರಾತಿ ಪತ್ರಗಳನ್ನು ಹಸ್ತಾಂತರಿಸಿದರು. ಪಿಎಂಎಂವೈ ಅಡಿಯಲ್ಲಿ ಸಾಲದ ಮಿತಿಯನ್ನು 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಹೆಚ್ಚಿಸಲು ಇತ್ತೀಚೆಗೆ ಕೇಂದ್ರ ಬಜೆಟ್ 2024-25ರಲ್ಲಿ ಮಾಡಲಾದ ಘೋಷಣೆಯನ್ನು  ಡಿ.ಎಫ್.ಎಸ್. ಜಾರಿಗೆ ತಂದಿದೆ.

 

 

*****


(Release ID: 2072130) Visitor Counter : 36


Read this release in: Urdu , English , Hindi