ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ವಿಶ್ವ ಸೌರ ವರದಿ ಸರಣಿ ಬಿಡುಗಡೆ ಮಾಡಿದ ಐಎಸ್ಎ


ಜಾಗತಿಕ ಸೌರ ಬೆಳವಣಿಗೆ, ಹೂಡಿಕೆ ಪ್ರವೃತ್ತಿಗಳು, ತಾಂತ್ರಿಕ ಪ್ರಗತಿಗಳು ಮತ್ತು ಆಫ್ರಿಕಾದ ಹಸಿರು ಹೈಡ್ರೋಜನ್ ಸಾಮರ್ಥ್ಯದ ಬಗ್ಗೆ ನಾಲ್ಕು ಪ್ರಮುಖ ವರದಿಗಳ ಬಿಡುಗಡೆ

Posted On: 05 NOV 2024 5:50PM by PIB Bengaluru

ಜಾಗತಿಕ ಸೌರ ಬೆಳವಣಿಗೆ, ಹೂಡಿಕೆ ಪ್ರವೃತ್ತಿಗಳು, ತಾಂತ್ರಿಕ ಪ್ರಗತಿಗಳು ಮತ್ತು ಆಫ್ರಿಕಾದ ಹಸಿರು ಹೈಡ್ರೋಜನ್ ಸಾಮರ್ಥ್ಯವನ್ನು ಕೇಂದ್ರೀಕರಿಸಿ ಅಂತರರಾಷ್ಟ್ರೀಯ ಸೌರ ಒಕ್ಕೂಟದ 7ನೇ ಅಸೆಂಬ್ಲಿಯಲ್ಲಿ ವಿಶ್ವ ಸೌರ ವರದಿ ಸರಣಿಯ 3 ನೇ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು. ಹೊಸದಾಗಿ ಬಿಡುಗಡೆಯಾದ 4 ವರದಿಗಳಾದ ವಿಶ್ವ ಸೌರ ಮಾರುಕಟ್ಟೆ ವರದಿ, ವಿಶ್ವ ಹೂಡಿಕೆ ವರದಿ, ವಿಶ್ವ ತಂತ್ರಜ್ಞಾನ ವರದಿ ಮತ್ತು ಆಫ್ರಿಕನ್ ದೇಶಗಳಿಗೆ ಹಸಿರು ಹೈಡ್ರೋಜನ್ ಸಿದ್ಧತಾ ಮೌಲ್ಯಮಾಪನ ಸಹಿತ ಪ್ರತಿಯೊಂದೂ ಸುಸ್ಥಿರ ಇಂಧನದತ್ತ ಜಾಗತಿಕ ಬದಲಾವಣೆಯ ನಿರ್ಣಾಯಕ ಕ್ಷೇತ್ರವನ್ನು ಎತ್ತಿ ತೋರಿಸುತ್ತದೆ.

ವಿಶ್ವ ಸೌರ ವರದಿ ಸರಣಿಯನ್ನು ಐಎಸ್ಎ ಅಸೆಂಬ್ಲಿ ಅಧ್ಯಕ್ಷ ಮತ್ತು ಭಾರತದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಬಿಡುಗಡೆ ಮಾಡಿದರು. 2022 ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ವರದಿ ಸರಣಿಯು ಸೌರ ತಂತ್ರಜ್ಞಾನದಲ್ಲಿ ಜಾಗತಿಕ ಪ್ರಗತಿ, ಪ್ರಮುಖ ಸವಾಲುಗಳು ಮತ್ತು ಕ್ಷೇತ್ರದಲ್ಲಿನ ಹೂಡಿಕೆ ಪ್ರವೃತ್ತಿಗಳ ಸಂಕ್ಷಿಪ್ತ ಮತ್ತು ಸಮಗ್ರ ಅವಲೋಕನವನ್ನು ಒದಗಿಸುತ್ತದೆ. ಇತ್ತೀಚಿನ ಆವೃತ್ತಿಯು ವಿಶ್ವಾದ್ಯಂತ ಸುಸ್ಥಿರ ಇಂಧನ ಪರಿಹಾರಗಳನ್ನು ಮುನ್ನಡೆಸುವಲ್ಲಿ ಸೌರ ಶಕ್ತಿಯ ಪ್ರಮುಖ ಪಾತ್ರವನ್ನು ಒತ್ತಿಹೇಳುತ್ತದೆ, ಉದ್ಯಮದ ತ್ವರಿತ ವಿಕಾಸದ ಬಗ್ಗೆ ಮಧ್ಯಸ್ಥಗಾರರಿಗೆ/ಭಾಗೀದಾರರಿಗೆ ಅಮೂಲ್ಯವಾದ ಒಳನೋಟಗಳನ್ನು ನೀಡುತ್ತದೆ.

ವಿಶ್ವ ಸೌರ ಮಾರುಕಟ್ಟೆ ವರದಿಯು ಅಸಾಧಾರಣ ಸೌರ ಬೆಳವಣಿಗೆಯನ್ನು ಬಹಿರಂಗಪಡಿಸುತ್ತದೆ, ಜಾಗತಿಕ ಸಾಮರ್ಥ್ಯವು 2000 ರಲ್ಲಿ 1.22 ಗಿಗಾವ್ಯಾಟ್ ನಿಂದ 2023 ರಲ್ಲಿ 1,418.97 ಗಿಗಾವ್ಯಾಟ್ ಗೆ ಏರಿದೆ. ಉತ್ಪಾದನೆಯು ಬೇಡಿಕೆಯನ್ನು ಮೀರಲು ಸಜ್ಜಾಗಿದೆ, ಇದು ಸೌರಶಕ್ತಿಯನ್ನು ಹೆಚ್ಚು ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ  ಮಾಡುತ್ತದೆ. ಸೌರ ಉದ್ಯೋಗಗಳು 7.1 ಮಿಲಿಯನ್ ಗೆ ಏರಿವೆ ಮತ್ತು 2030 ರ ವೇಳೆಗೆ ಜಾಗತಿಕ ಸಾಮರ್ಥ್ಯ 7,203 ಗಿಗಾವ್ಯಾಟ್ ತಲುಪಬಹುದು.

ಇತ್ತೀಚಿನ ವಿಶ್ವ ಹೂಡಿಕೆ ವರದಿಯು ಸುಸ್ಥಿರ ಇಂಧನದತ್ತ ಜಾಗತಿಕ ಬದಲಾವಣೆಯನ್ನು ಎತ್ತಿ ತೋರಿಸುತ್ತದೆ, ಇಂಧನ ಹೂಡಿಕೆಗಳು 2018 ರಲ್ಲಿ 2.4 ಟ್ರಿಲಿಯನ್ ಡಾಲರ್ ನಿಂದ 2024 ರ ವೇಳೆಗೆ 3.1 ಟ್ರಿಲಿಯನ್ ಡಾಲರ್ ಗೆ ಏರುತ್ತಿವೆ. ನವೀಕರಿಸಬಹುದಾದ ಇಂಧನ ಹೂಡಿಕೆಗಳಲ್ಲಿ ಸೌರಶಕ್ತಿ ಕ್ಷೇತ್ರವು ಮುಂಚೂಣಿಯಲ್ಲಿದೆ, ಇದು ಒಟ್ಟು 59% ನಷ್ಟು ಇದೆ ಮತ್ತು ಇದಕ್ಕೆ ವೆಚ್ಚ ಕೂಡಾ  ಕಡಿಮೆ, ಎಪಿಎಸಿ ಅಗ್ರ ಹೂಡಿಕೆ ವಲಯವಾಗಿ ರೂಪುಗೊಂಡಿದೆ.

ವಿಶ್ವ ತಂತ್ರಜ್ಞಾನ ವರದಿಯು ಸೌರ ತಂತ್ರಜ್ಞಾನದ ಪ್ರಗತಿಯನ್ನು ಪ್ರದರ್ಶಿಸುತ್ತದೆ, ದಕ್ಷತೆ, ಸುಸ್ಥಿರತೆ ಮತ್ತು ಕೈಗೆಟುಕುವಿಕೆಯ ದರದಲ್ಲಿ ಲಭ್ಯತೆಯ ಪ್ರಗತಿಯನ್ನು ಒತ್ತಿಹೇಳುತ್ತದೆ. ಸೋಲಾರ್ ಪಿವಿ ಮಾಡ್ಯೂಲ್ಗಳಲ್ಲಿ ದಾಖಲೆಯ 24.9% ದಕ್ಷತೆ, 2004 ರಿಂದ ಸಿಲಿಕಾನ್ ಬಳಕೆಯಲ್ಲಿ 88% ಕಡಿತ ಮತ್ತು ಯುಟಿಲಿಟಿ-ಸ್ಕೇಲ್ ಸೌರ ಪಿವಿ ವೆಚ್ಚಗಳಲ್ಲಿ 90% ಕುಸಿತ, ಸ್ಥಿತಿಸ್ಥಾಪಕತ್ವದ, ವೆಚ್ಚ-ಪರಿಣಾಮಕಾರಿ ಇಂಧನ ಪರಿಹಾರಗಳನ್ನು ಉತ್ತೇಜಿಸುವುದು ಇದರ ಮುಖ್ಯಾಂಶಗಳಲ್ಲಿ ಸೇರಿದೆ.

ಆಫ್ರಿಕನ್ ದೇಶಗಳಲ್ಲಿ ಹಸಿರು ಹೈಡ್ರೋಜನ್ ಸಿದ್ಧತಾ ಮೌಲ್ಯಮಾಪನ ಉಕ್ಕು ಮತ್ತು ರಸಗೊಬ್ಬರ ಉತ್ಪಾದನೆಯಂತಹ ಪಳೆಯುಳಿಕೆ ಇಂಧನಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ಕೈಗಾರಿಕೆಗಳನ್ನು ಡಿಕಾರ್ಬನೈಸ್ ಮಾಡುವ ಹಸಿರು ಹೈಡ್ರೋಜನ್ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ನವೀಕರಿಸಬಹುದಾದ- ವಿದ್ಯುದ್ವಿಭಜನೆ ಮೂಲಕ ಉತ್ಪಾದಿಸಲಾದ ಹಸಿರು ಹೈಡ್ರೋಜನ್ ಕಲ್ಲಿದ್ದಲು, ತೈಲ ಮತ್ತು ಅನಿಲಕ್ಕೆ ಕಾರ್ಯಸಾಧ್ಯವಾದ ಪರ್ಯಾಯವನ್ನು ನೀಡುತ್ತದೆ, ಇದು ಆಫ್ರಿಕಾದ ಶುದ್ಧ ಶಕ್ತಿಯತ್ತ ಪರಿವರ್ತನೆಯನ್ನು ಬೆಂಬಲಿಸುತ್ತದೆ.

ಪ್ರತಿ ವರದಿಯನ್ನು ಕುರಿತಂತೆ  ಹೆಚ್ಚಿನ ವಿವರಗಳು ಇಲ್ಲಿವೆ

ವಿಶ್ವ ಸೌರ ಮಾರುಕಟ್ಟೆ ವರದಿಯು ಅಭೂತಪೂರ್ವ ಬೆಳವಣಿಗೆ ಮತ್ತು ಭವಿಷ್ಯದ ಮುನ್ಸೂಚನೆಗಳನ್ನು ಎತ್ತಿ ತೋರಿಸುತ್ತದೆ

ವಿಶ್ವ ಸೌರ ಮಾರುಕಟ್ಟೆ ವರದಿಯು ಸೌರ ವಿದ್ಯುತ್ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆಯ ಪಥವನ್ನು ಪ್ರಮುಖವಾಗಿ ಎತ್ತಿ ತೋರಿಸುತ್ತದೆ.

• ಸೌರ ಸಾಮರ್ಥ್ಯದ ಹೆಚ್ಚಳ: ಕೇವಲ ಎರಡು ದಶಕಗಳಲ್ಲಿ, ಜಾಗತಿಕ ಸೌರ ಸಾಮರ್ಥ್ಯವು 2000 ರಲ್ಲಿ ಇದ್ದ 1.22 ಗಿಗಾವ್ಯಾಟ್ ನಿಂದ 2023 ರಲ್ಲಿ ಆಶ್ಚರ್ಯಕರ 1,418.97 ಗಿಗಾವ್ಯಾಟ್ ಗೆ ಹೆಚ್ಚಳವಾಗಿದೆ - ಇದು 40% ವಾರ್ಷಿಕ ಬೆಳವಣಿಗೆಯ ದರವಾಗಿದೆ. 2023 ರಲ್ಲಿಯೇ 345.83 ಗಿಗಾವ್ಯಾಟ್ ಸೌರ ಶಕ್ತಿಯನ್ನು ಸೇರಿಸಲಾಗಿದೆ, ಇದು ವಿಶ್ವದಾದ್ಯಂತದ ಎಲ್ಲಾ ಹೊಸ ನವೀಕರಿಸಬಹುದಾದ ಸಾಮರ್ಥ್ಯದ ಮುಕ್ಕಾಲು ಭಾಗವಾಗಿದೆ. 2000ನೇ ಇಸವಿಯಲ್ಲಿ 1.03 ಟಿ.ಡಬ್ಲ್ಯು.ಎಚ್ ಇದ್ದ ಸೌರ ವಿದ್ಯುತ್ ಉತ್ಪಾದನೆ 2023ರ ವೇಳೆಗೆ 1,628.27 ಟಿ.ಡಬ್ಲ್ಯು.ಎಚ್ ಗೆ ಏರಿಕೆಯಾಗಿದೆ.

• 2024 ರ ವೇಳೆಗೆ ಸೌರ ಉತ್ಪಾದನೆಯು ಬೇಡಿಕೆಯನ್ನು ಮೀರಿ 1,100 ಗಿಗಾವ್ಯಾಟ್ ಗಿಂತ ಹೆಚ್ಚು ಉತ್ಪಾದನೆಯಾಗಲಿದೆ : 2024 ರ ಅಂತ್ಯದ ವೇಳೆಗೆ, ಜಾಗತಿಕ ಸೌರ ಉತ್ಪಾದನೆಯ ಸಾಮರ್ಥ್ಯವು 1,100 ಗಿಗಾವ್ಯಾಟ್ ಮೀರುವ ನಿರೀಕ್ಷೆಯಿದೆ, ಇದು ಪಿವಿ ಪ್ಯಾನಲ್ ಗಳಿಗೆ ನಿರೀಕ್ಷಿತ ಬೇಡಿಕೆಗಿಂತ ಎರಡು ಪಟ್ಟು ಹೆಚ್ಚು ಬೇಡಿಕೆ ತರಲಿದೆ. ಸೋಲಾರ್ ಸೆಲ್ ಬೆಲೆಗಳು ವ್ಯಾಟೊಂದಕ್ಕೆ $ 0.037 ಗೆ ತಲುಪಿದ್ದರೆ, ಸುಧಾರಿತ ಮೊನೊ ಟಾಪ್ಕಾನ್ ಮತ್ತು ಮೊನೊ ಪಿಇಆರ್ಸಿ ಮಾಡ್ಯೂಲ್ ಬೆಲೆಗಳು  ವ್ಯಾಟೊಂದಕ್ಕೆ  $ 0.10 ಕ್ಕಿಂತಲೂ ಕಡಿಮೆಯಾಗಿವೆ, ಇದು ಸೌರ ತಂತ್ರಜ್ಞಾನದಲ್ಲಿ ಹೆಚ್ಚಿನ ಕೈಗೆಟುಕುವಿಕೆಯ ದರದ  ಪ್ರವೃತ್ತಿಯನ್ನು ಸೂಚಿಸುತ್ತದೆ.

  •  ಸೌರ ಉದ್ಯಮದಲ್ಲಿ  ಉದ್ಯೋಗ ಬೂಮ್: ಶುದ್ಧ ಇಂಧನ ಉದ್ಯಮವು ಈಗ 16.2 ಮಿಲಿಯನ್ ಉದ್ಯೋಗಗಳನ್ನು ಉತ್ತೇಜಿಸುತ್ತಿದೆ, ಇದರಲ್ಲಿ ಸೌರಶಕ್ತಿಯು 7.1 ಮಿಲಿಯನ್ ಉದ್ಯೋಗಾವಕಾಶಗಳೊಂದಿಗೆ  ಮುಂಚೂಣಿಯಲ್ಲಿದೆ - ಇದು 2022 ರ 4.9 ಮಿಲಿಯನ್ ಗೆ ಹೋಲಿಸಿದಾಗ 44% ಹೆಚ್ಚಾಗಿದೆ. ಮತ್ತು ಉದ್ಯೋಗಗಳಲ್ಲಿ 86% ಉದ್ಯೋಗಗಳು ಕೇವಲ ಹತ್ತು ದೇಶಗಳಲ್ಲಿ ಕೇಂದ್ರೀಕೃತಗೊಂಡಿವೆ.
  •  ಭವಿಷ್ಯದ ಮುನ್ಸೂಚನೆಗಳು: ಪ್ಯಾರಿಸ್ ಒಪ್ಪಂದದ ಬದ್ಧತೆಗಳಿಂದ ಪ್ರೇರಿತವಾದ ಜಾಗತಿಕ ಸೌರ ಸಾಮರ್ಥ್ಯವು 2030 ರ ವೇಳೆಗೆ 5457 ರಿಂದ 7203 ಗಿಗಾವ್ಯಾಟ್ ಗೆ ಭಾರೀ ಹೆಚ್ಚಳಗೊಳ್ಳಲಿದೆ. ಈ ಉಲ್ಬಣವು ಹವಾಮಾನ ಗುರಿಗಳನ್ನು ಪೂರೈಸಲು ಅಗತ್ಯವಾದ ಬೃಹತ್ ಮೂಲಸೌಕರ್ಯವನ್ನು ಒತ್ತಿಹೇಳುತ್ತದೆ.

ವಿಶ್ವ ಹೂಡಿಕೆ ವರದಿಯು ಜಾಗತಿಕ ಇಂಧನ ಹೂಡಿಕೆಗಳಲ್ಲಿ ಕ್ರಿಯಾತ್ಮಕ ಬದಲಾವಣೆಯನ್ನು ಅನಾವರಣಗೊಳಿಸುತ್ತದೆ.

ಇತ್ತೀಚಿನ ವಿಶ್ವ ಹೂಡಿಕೆ ವರದಿಯು ಜಾಗತಿಕ ಇಂಧನ ಹೂಡಿಕೆಗಳನ್ನು ಗಮನಾರ್ಹವಾಗಿ ಪರಿವರ್ತಿಸಿದೆ, ಸುಸ್ಥಿರ ಇಂಧನ ಪರಿಹಾರಗಳತ್ತ ದೃಢವಾದ ಮುನ್ನಡೆಯನ್ನು ಎತ್ತಿ ತೋರಿಸಿದೆ. ಪ್ರಮುಖ ಸಂಶೋಧನೆಗಳು ಇಲ್ಲಿವೆ:

• ಇಂಧನ ಹೂಡಿಕೆಗಳಲ್ಲಿ ಭಾರೀ ಬೆಳವಣಿಗೆ: ಜಾಗತಿಕ ಇಂಧನ ಹೂಡಿಕೆಗಳು 2018 ರಲ್ಲಿ 2.4 ಟ್ರಿಲಿಯನ್ ಡಾಲರ್ ಇದ್ದದ್ದು 2024 ರಲ್ಲಿ 3.1 ಟ್ರಿಲಿಯನ್ ಡಾಲರ್ ಗೆ ಏರುವ ನಿರೀಕ್ಷೆ ಇದೆ - ಇದು ವಾರ್ಷಿಕವಾಗಿ ಸುಮಾರು 5% ರಷ್ಟು ಸ್ಥಿರವಾದ ಏರಿಕೆಯಾಗಿದೆ. ಜಾಗತಿಕ ಶುದ್ಧ ಇಂಧನ ಹೂಡಿಕೆ ಈಗ ಪಳೆಯುಳಿಕೆ ಇಂಧನಗಳಿಗೆ ಹೋಲಿಸಿದಾಗ  ಸುಮಾರು ದ್ವಿಗುಣಗೊಂಡಿದೆ, ಇದು 2018 ರಲ್ಲಿ ಇದ್ದ 1.2 ಟ್ರಿಲಿಯನ್ ಡಾಲರ್ನಿಂದ 2024 ರ ವೇಳೆಗೆ 2 ಟ್ರಿಲಿಯನ್ ಡಾಲರ್ಗೆ ಏರಲಿದೆ.

  • ಸೌರ ಹೂಡಿಕೆ ಹೆಚ್ಚಳ: ಸೌರಶಕ್ತಿಯಲ್ಲಿನ ಹೂಡಿಕೆಗಳು ಒಟ್ಟು ಆರ್ಇ ಹೂಡಿಕೆಗಳಲ್ಲಿ ~ 59% (ಯುಎಸ್ಡಿ 393 ಬಿಲಿಯನ್) ನಷ್ಟಿವೆ (ಯುಎಸ್ಡಿ 673 ಬಿಲಿಯನ್), ಇದು ಹೆಚ್ಚಾಗಿ ಸೌರ ಫಲಕ ವೆಚ್ಚಗಳ ಕುಸಿತದಿಂದ ಪ್ರೇರಿತವಾಗಿದೆ
  • ಜಾಗತಿಕ ಸೌರ ಹೂಡಿಕೆಗಳಲ್ಲಿ ಎಪಿಎಸಿ ಮುಂಚೂಣಿಯಲ್ಲಿದೆ: ವಲಯವಾರು ಸೌರ ಹೂಡಿಕೆಗಳಲ್ಲಿ  ಎಪಿಎಸಿ ಮುಂಚೂಣಿಯಲ್ಲಿದೆ. 2023 ರಲ್ಲಿ ಸೌರಶಕ್ತಿಗೆ 223 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ.  ಇಎಂಇಎ 2023 ರಲ್ಲಿ 91 ಬಿಲಿಯನ್ ಯುಎಸ್ಡಿಯೊಂದಿಗೆ ಸಾಧಾರಣ ಸೌರ ಹೂಡಿಕೆ ಬೆಳವಣಿಗೆಯನ್ನು ಸಾಧಿಸಿದೆ, ಇದನ್ನು ಅನುಸರಿಸಿ ಎಎಂಇಆರ್ ವಲಯವು 78 ಬಿಲಿಯನ್ ಡಾಲರ್ ಸೌರ ಹೂಡಿಕೆಯೊಂದಿಗೆ ನಂತರದ ಸ್ಥಾನದಲ್ಲಿದೆ

ವಿಶ್ವ ತಂತ್ರಜ್ಞಾನ ವರದಿಯು ಸೌರ ಪಿವಿ ದಕ್ಷತೆ ಮತ್ತು ವಸ್ತು ನಾವೀನ್ಯತೆಯಲ್ಲಿನ ಪ್ರಗತಿಯನ್ನು ಎತ್ತಿ ತೋರಿಸುತ್ತದೆ

ವಿಶ್ವ ತಂತ್ರಜ್ಞಾನ ವರದಿಯು ಸೌರ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಕ್ಷಿಪ್ರ ಪ್ರಗತಿಯನ್ನು ಎತ್ತಿ ತೋರಿಸುತ್ತದೆ. ಈ ಆವಿಷ್ಕಾರಗಳು ಸೌರಶಕ್ತಿಯ ದಕ್ಷತೆ ಮತ್ತು ಲಭ್ಯತೆ/ಪ್ರವೇಶವನ್ನು ಹೆಚ್ಚಿಸುವುದಲ್ಲದೆ, ಹೆಚ್ಚು ಸ್ಥಿತಿಸ್ಥಾಪಕ ಮತ್ತು ವೆಚ್ಚ-ಪರಿಣಾಮಕಾರಿ ವಿದ್ಯುತ್ ಮೂಲಸೌಕರ್ಯಕ್ಕೆ ದಾರಿ ಮಾಡಿಕೊಡುತ್ತಿವೆ. ವರದಿಯ ಮುಖ್ಯಾಂಶಗಳು ಈ ಕೆಳಗಿನಂತಿವೆ:

  •  ದಾಖಲೆ ಮುರಿದ ಸೌರ ಪಿವಿ ಪ್ಯಾನಲ್ ದಕ್ಷತೆ: ಸೌರ ಪಿವಿ ಮೊನೊಕ್ರಿಸ್ಟಲೈನ್ ಮಾಡ್ಯೂಲ್ ಗಳು ದಾಖಲೆಯ 24.9% ದಕ್ಷತೆಯೊಂದಿಗೆ ಹೊಸ ಎತ್ತರವನ್ನು ತಲುಪಿವೆ - ಇದು ಸೌರ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಮಲ್ಟಿಜಂಕ್ಷನ್ ಪೆರೋವ್ಸ್ಕಿಟ್ ಕೋಶಗಳು ಸೌರ ಫಲಕ ಉದ್ಯಮದಲ್ಲಿ ಬದಲಾವಣೆ  ತರಲು  ಸಜ್ಜಾಗಿವೆ, ಹೆಚ್ಚಿನ ದಕ್ಷತೆ, ಕಡಿಮೆ ಉತ್ಪಾದನಾ ವೆಚ್ಚಗಳು ಮತ್ತು ವೈವಿಧ್ಯಮಯ ಮೇಲ್ಮೈಗಳೊಂದಿಗೆ ತಡೆರಹಿತ ಏಕೀಕರಣದ/ ಸಂಯೋಜನೆಯ  ಭರವಸೆ ನೀಡುವುದರೊಂದಿಗೆ  - ಸಾಂಪ್ರದಾಯಿಕ ಸಿಲಿಕಾನ್ ಫಲಕಗಳನ್ನು ಅಪ್ರಸ್ತುತಗೊಳಿಸಲಿವೆ.
  • ಸೌರ ಉತ್ಪಾದನೆಯು ಈಗ 2004 ಕ್ಕೆ ಹೋಲಿಸಿದರೆ ಪ್ರತಿ ವ್ಯಾಟ್ ಗೆ  88% ಕಡಿಮೆ ಸಿಲಿಕಾನ್ ಅನ್ನು ಬಳಸುತ್ತದೆ - ಉತ್ಪಾದನಾ ಪ್ರಕ್ರಿಯೆಯು ಗಮನಾರ್ಹ ಸುಧಾರಣೆಗಳಿಗೆ ಒಳಗಾಗಿದೆ, ಇದರ ಪರಿಣಾಮವಾಗಿ ಸಿಲಿಕಾನ್ ಬಳಕೆಯಲ್ಲಿ ತೀವ್ರ ಇಳಿಕೆಯಾಗಿದೆ - 2004 ರಲ್ಲಿ 16 ಗ್ರಾಂ / ಡಬ್ಲ್ಯೂಪಿ ಬಳಕೆಯಿಂದ 2023 ರಲ್ಲಿ 2 ಗ್ರಾಂ / ಡಬ್ಲ್ಯೂಪಿಗೆ ಇಳಿದಿದೆ. ಸಿಲಿಕಾನ್ ಬಳಕೆಯಲ್ಲಿನ ಈ 88% ಇಳಿಕೆಯು ವಸ್ತು ದಕ್ಷತೆಯನ್ನು ಉತ್ತಮಗೊಳಿಸುವಲ್ಲಿ ಮಾಡಿದ ದಾಪುಗಾಲುಗಳನ್ನು ಪ್ರತಿಬಿಂಬಿಸುವುದಲ್ಲದೆ, ಮತ್ತಷ್ಟು ವೆಚ್ಚ ಕಡಿತ ಮತ್ತು ಪರಿಸರ ಪ್ರಯೋಜನಗಳ ಸಾಮರ್ಥ್ಯವನ್ನು ಒತ್ತಿಹೇಳುತ್ತದೆ.
  •  ಯುಟಿಲಿಟಿ-ಸ್ಕೇಲ್ ಪಿವಿ ವೆಚ್ಚಗಳು ಇನ್ನಷ್ಟು ಕನಿಷ್ಠ ಮಟ್ಟವನ್ನು ತಲುಪುತ್ತಿವೆ - ಯುಟಿಲಿಟಿ-ಸ್ಕೇಲ್ ಸೋಲಾರ್ ಪಿವಿಗೆ ಸಂಬಂಧಿಸಿ  ಜಾಗತಿಕ ಸರಾಸರಿ ಎಲ್ಸಿಒಇ 90% ರಷ್ಟು ಕುಸಿದಿದೆ - 2010 ರಲ್ಲಿ ಯುಎಸ್ಡಿ 0.460 / ಕಿಲೋವ್ಯಾಟ್ನಿಂದ 2023 ರಲ್ಲಿ 0.044 / ಕಿಲೋವ್ಯಾಟ್ಗೆ ಇಳಿದಿದೆ. ರಾಷ್ಟ್ರ ಮಟ್ಟದಲ್ಲಿ, ಕುಸಿತವು ಇದೇ ಅವಧಿಯಲ್ಲಿ 76% -93% ರಷ್ಟಿದೆ.

ಐಎಸ್ಎ ಸದಸ್ಯ ರಾಷ್ಟ್ರಗಳ ಸಚಿವರ ನಿಯೋಗಗಳು, ನೀತಿ ನಿರೂಪಕರು, ತಜ್ಞರು ಮತ್ತು ಉದ್ಯಮದ ಮುಖಂಡರು ಸಮ್ಮೇಳನದ ಕಾರ್ಯಕಲಾಪಗಳಲ್ಲಿ ಭಾಗವಹಿಸಿದ್ದರು. ನೈಜ-ಪ್ರಪಂಚದ ಬದಲಾವಣೆಯನ್ನು ಉತ್ತೇಜಿಸಲು ಮತ್ತು ಸಹಯೋಗವನ್ನು ಬೆಳೆಸುವ ಮೂಲಕ ಮತ್ತು ಸಂಬಂಧಿತ ಮಧ್ಯಸ್ಥಗಾರರು/ಭಾಗೀದಾರರು  ಮತ್ತು ಉದ್ಯಮದ ಪ್ರಮುಖರ ನಡುವೆ ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ಜಾಗತಿಕ ಹವಾಮಾನ ಗುರಿಗಳನ್ನು ಸಾಧಿಸುವತ್ತ ಗಮನಾರ್ಹ ಪ್ರಗತಿ ಸಾಧಿಸಲು ಸಮ್ಮೇಳನವನ್ನು 2022 ರಲ್ಲಿ ಆರಂಭಿಸಲಾಯಿತು.

ಐಎಸ್ಎ ಮತ್ತು ಡೆನ್ಮಾರ್ಕ್ ನಿಂದ  ಆಫ್ರಿಕನ್ ದೇಶಗಳಲ್ಲಿ ಹಸಿರು ಹೈಡ್ರೋಜನ್ನಿನ  ಸಿದ್ಧತಾ ಮೌಲ್ಯಮಾಪನ:

ಉಕ್ಕು, ರಸಗೊಬ್ಬರಗಳು, ಸಂಸ್ಕರಿಸಿದ ಗ್ಯಾಸೋಲಿನ್ ಮತ್ತು ಡೀಸೆಲ್ ಇಂಧನದಂತಹ ಸರಕುಗಳನ್ನು ಉತ್ಪಾದಿಸಲು ಕಲ್ಲಿದ್ದಲು, ತೈಲ ಅಥವಾ ನೈಸರ್ಗಿಕ ಅನಿಲದಂತಹ ಪಳೆಯುಳಿಕೆ ಇಂಧನಗಳನ್ನು ಅವಲಂಬಿಸಿರುವ ಕೈಗಾರಿಕೆಗಳ ಡಿಕಾರ್ಬನೈಸೇಶನ್ ಅಗತ್ಯಗಳನ್ನು ನೇರ ವಿದ್ಯುದ್ದೀಕರಣದಿಂದ ಪರಿಹರಿಸಲು ಸಾಧ್ಯವಿಲ್ಲ. ಆದ್ದರಿಂದ, ಗಾಳಿ, ಸೌರ ಮತ್ತು ಭೂಶಾಖದಂತಹ ನವೀಕರಿಸಬಹುದಾದ ವಿದ್ಯುತ್ ಮೂಲಗಳಿಂದ ಹಾಗು ನೀರಿನ ವಿದ್ಯುದ್ವಿಭಜನೆಯ ಮೂಲಕ ಉತ್ಪತ್ತಿಯಾಗುವ ಹಸಿರು ಹೈಡ್ರೋಜನ್, ಪಳೆಯುಳಿಕೆ ಇಂಧನ ಆಧಾರಿತ ಶಕ್ತಿ ಮೂಲಗಳಿಗೆ ಸೂಕ್ತ ಬದಲಿಯಾಗಿರುತ್ತದೆ.

ಶುದ್ಧ ಇಂಧನ ಪರಿವರ್ತನೆಗಾಗಿ ಹೊಸ ತಂತ್ರಜ್ಞಾನಗಳ ಕುರಿತ ಉನ್ನತ ಮಟ್ಟದ ಸಮ್ಮೇಳನ

ಅಂತರರಾಷ್ಟ್ರೀಯ ಸೌರ ಒಕ್ಕೂಟ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ಭಾರತ ಸರ್ಕಾರ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಸೌರ ಶಕ್ತಿ ಸೊಸೈಟಿಯ ಜಾಗತಿಕ ಸಹಯೋಗದೊಂದಿಗೆ, ಶುದ್ಧ ಇಂಧನ ಪರಿವರ್ತನೆಗಾಗಿ ಹೊಸ ತಂತ್ರಜ್ಞಾನಗಳ ಉನ್ನತ ಮಟ್ಟದ ಸಮ್ಮೇಳನದ ಮೂರನೇ ಆವೃತ್ತಿಯನ್ನು ಆಯೋಜಿಸಿತು. ಹೊಸದಿಲ್ಲಿಯಲ್ಲಿ ಇಂದು ನಡೆದ ಐಎಸ್ಎ ಅಸೆಂಬ್ಲಿಯ ಏಳನೇ ಅಧಿವೇಶನದ ನೇಪಥ್ಯದಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು, ಇದು ವಿಶ್ವಾದ್ಯಂತ ಮಧ್ಯಸ್ಥಗಾರರನ್ನು/ಭಾಗೀದಾರರನ್ನು ಒಂದುಗೂಡಿಸಿತು.

ಸಂವಾದವನ್ನು ಕಾರ್ಯರೂಪಕ್ಕೆ ತರುವುದು ಸಮ್ಮೇಳನದ ಪ್ರಮುಖ ಗುರಿಯಾಗಿದೆ. ಹೊಸ ಯುಗದ ಸೌರ ತಂತ್ರಜ್ಞಾನಗಳು, ಉದಯೋನ್ಮುಖ ಶೇಖರಣಾ ತಂತ್ರಜ್ಞಾನಗಳು ಮತ್ತು ಸಮಾನ ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಅಭಿವೃದ್ಧಿಯನ್ನು ವೇಗಗೊಳಿಸುವಲ್ಲಿ ಸೌರಶಕ್ತಿಯ ಪಾತ್ರವನ್ನು ಅನಾವರಣಗೊಳಿಸುವ ಆಳವಾದ ಚಿಂತನಾ  ಅಧಿವೇಶನಗಳು ಚರ್ಚೆಯ ತಿರುಳನ್ನು ರೂಪಿಸಿದ್ದವು.

ಉದ್ಘಾಟನಾ ಭಾಷಣ ಮಾಡಿದ ಐಎಸ್ಎ ಮಹಾನಿರ್ದೇಶಕ ಡಾ.ಅಜಯ್ ಮಾಥುರ್, "ಇಂದಿನ ಸಮ್ಮೇಳನ ಮತ್ತು ಚರ್ಚೆಗಳು ಬಹಳ ಸಮಯೋಚಿತವಾಗಿವೆ. ಒಂದು ವಾರದಲ್ಲಿ, ವಿಶ್ವ ನಾಯಕರು ಸಿಒಪಿ 29 ಆಶ್ರಯದಲ್ಲಿ ಎರಡು ಮಾರ್ಗದರ್ಶಿ ಗುರಿಗಳೊಂದಿಗೆ ಅಜೆರ್ಬೈಜಾನ್ನಲ್ಲಿ ಸಭೆ ಸೇರಲಿದ್ದಾರೆ: ಪಳೆಯುಳಿಕೆ ಇಂಧನಗಳಿಂದ ದೂರವಿರಲು ಒಪ್ಪುವುದು, ನವೀಕರಿಸಬಹುದಾದ ಶಕ್ತಿಯನ್ನು ಮೂರು ಪಟ್ಟು ಮಾಡುವುದು ಮತ್ತು 2030 ರ ವೇಳೆಗೆ ಇಂಧನ ದಕ್ಷತೆಯನ್ನು ದ್ವಿಗುಣಗೊಳಿಸುವುದು ಇದರಲ್ಲಿ ಸೇರಿದೆ. ಎರಡೂ ಗುರಿಗಳನ್ನು ದಕ್ಷ ಮತ್ತು ಶುದ್ಧ ತಂತ್ರಜ್ಞಾನಗಳ ಅಡಿಪಾಯದ ಮೇಲೆ ನಿರ್ಮಿಸಬಹುದು, ಇದು ಇಂದಿನ ಕಾರ್ಯವಿಧಾನಗಳ ಮಹತ್ವವನ್ನು ಒತ್ತಿಹೇಳುತ್ತದೆ” ಎಂದರು.

ಭಾರತದ ಹೊಸ ಮತ್ತು ನವೀಕರಿಸಬಹುದಾದ ಇಂಧನದ ಗೌರವಾನ್ವಿತ ಸಚಿವ ಮತ್ತು ಐಎಸ್ಎ ಅಸೆಂಬ್ಲಿಯ ಅಧ್ಯಕ್ಷರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ, "ಅಂತರರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷರಾಗಿ, ಇಂಧನ ಪರಿವರ್ತನೆಯ ಕಡೆಗೆ ಜಾಗತಿಕ ಪ್ರಯತ್ನಗಳನ್ನು ಸಂಯೋಜಿಸುವ ಮೂಲಕ ಇಂದು ಜಗತ್ತು ಹಿಂದೆಂದಿಗಿಂತಲೂ ಹೆಚ್ಚಿನ ಒಗ್ಗಟ್ಟಿನಿಂದ ನಿಂತಿದೆ ಎಂದು ನಾನು ಒಪ್ಪಿಕೊಳ್ಳಲು ಬಯಸುತ್ತೇನೆ. ನಾವು ಶುದ್ಧ ಇಂಧನ ಪರಿವರ್ತನೆಯತ್ತ ಸಾಗುತ್ತಿರುವಾಗ ಸೌರ ತಂತ್ರಜ್ಞಾನದ ಪ್ರಗತಿಯ ಮಹತ್ವವನ್ನು ನಿರ್ಲಕ್ಷಿಸಲಾಗದು. ಹವಾಮಾನ ಬದಲಾವಣೆಯು ಒಡ್ಡಿರುವ ಸವಾಲುಗಳೊಂದಿಗೆ, ಈ ಸುಸ್ಥಿರ ಪರಿಹಾರವನ್ನು ಆವಿಷ್ಕರಿಸಲು ಮತ್ತು ಕಾರ್ಯಗತಗೊಳಿಸಲು ನಮ್ಮ ಸಾಮೂಹಿಕ ಪ್ರಯತ್ನಗಳು ಹಿಂದೆಂದಿಗಿಂತಲೂ ಹೆಚ್ಚು ಮುಖ್ಯವಾಗಿವೆ ಎಂದರು.  "ಅಂತರರಾಷ್ಟ್ರೀಯ ಸೌರ ಒಕ್ಕೂಟದಲ್ಲಿ, ಬದಲಾವಣೆಗೆ  ಚಾಲನೆ ನೀಡಲು  ಮತ್ತು ಹೆಚ್ಚು ಸುಸ್ಥಿರ ಭವಿಷ್ಯವನ್ನು ರಚಿಸಲು ನಾವು ಒಟ್ಟಾಗಿ ಸೂರ್ಯನ ಶಕ್ತಿಯನ್ನು ಬಳಸಿಕೊಳ್ಳಬಹುದು ಎಂದು ನಾವು ನಂಬುತ್ತೇವೆ. ಈ ರೀತಿಯ ವೇದಿಕೆಯಲ್ಲಿ, ಪ್ರಮುಖ ತಾಂತ್ರಿಕ ಪ್ರಗತಿಗಳನ್ನು ಚರ್ಚಿಸಲಾಗುತ್ತಿದೆ ಎಂಬುದು  ನನಗೆ ಸಂತೋಷ ತಂದಿದೆ. ಈ ಸಮ್ಮೇಳನವು ನೀತಿ ನಿರೂಪಕರು, ತಜ್ಞರು, ಉದ್ಯಮದ ನಾಯಕರನ್ನು ಒಟ್ಟುಗೂಡಿಸಿದೆ, ನಮ್ಮ ಜಾಗತಿಕ ಜಾಗೃತಿಯನ್ನು ಎತ್ತಿ ತೋರಿಸಿದೆ. ನೈಜ-ಪ್ರಪಂಚದ ಬದಲಾವಣೆಗೆ ಚಾಲನೆ ನೀಡುವುದು ಮತ್ತು ಸಹಯೋಗ, ನಾವೀನ್ಯತೆ ಮತ್ತು ಜ್ಞಾನ ಹಂಚಿಕೆಯ ಮೂಲಕ ಹವಾಮಾನ ಗುರಿಗಳನ್ನು ಸಾಧಿಸುವತ್ತ ಗಮನಾರ್ಹ ಪ್ರಗತಿ ಸಾಧಿಸುವುದು ನಮ್ಮ ಇರಾದೆಯಾಗಿದೆ” ಎಂದೂ ಅವರು ಹೇಳಿದರು.

ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಪ್ರಶಾಂತ್ ಕುಮಾರ್ ಸಿಂಗ್, "ಐಎಸ್ಎ ಚಿಂತನೆಯನ್ನು ಕಾರ್ಯರೂಪಕ್ಕೆ ತರಲು ಭಾರತ ಸರ್ಕಾರ (ಜಿಒಐ) ಬದ್ಧವಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ಇಂಧನ ಅಗತ್ಯಗಳನ್ನು ಪೂರೈಸಲು ತಮ್ಮ ಸೌರ ವಿದ್ಯುತ್ ಜಾಲಗಳನ್ನು  ವಿಸ್ತರಿಸಲು ಭಾರತ ಸರ್ಕಾರ ಆರ್ಥಿಕ ಮತ್ತು ತಾಂತ್ರಿಕ ವಿಧಾನಗಳ ಮೂಲಕ ಸಕ್ರಿಯವಾಗಿ ಬೆಂಬಲಿಸುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಸೌರಶಕ್ತಿಯು ಭಾರತೀಯ ಇಂಧನ ಸನ್ನಿವೇಶದ ಮೇಲೆ ಗೋಚರಿಸುವ ಪರಿಣಾಮವನ್ನು ಬೀರಿದೆ. ದೊಡ್ಡ ಪ್ರಮಾಣದ ಸೌರ ವಿದ್ಯುತ್ ಸ್ಥಾವರಗಳ ಜೊತೆಗೆ, ಸೌರ ಶಕ್ತಿ ಆಧಾರಿತ ವಿಕೇಂದ್ರೀಕೃತ ಮತ್ತು ವಿತರಣಾ ಅಪ್ಲಿಕೇಶನ್ಗಳು ಭಾರತೀಯ ಹಳ್ಳಿಗಳಲ್ಲಿನ ಲಕ್ಷಾಂತರ ಜನರಿಗೆ ತಮ್ಮ ಇಂಧನ ಅಗತ್ಯಗಳನ್ನು ಪರಿಸರ ಸ್ನೇಹಿ ರೀತಿಯಲ್ಲಿ ಪೂರೈಸುವ ಮೂಲಕ ಪ್ರಯೋಜನವನ್ನು ನೀಡಿವೆ. ಭಾರತ ಸರ್ಕಾರದ ನೀತಿಗಳು ಮತ್ತು ಸುಧಾರಿತ ಅರ್ಥಶಾಸ್ತ್ರದ ಬೆಂಬಲ ಹೆಚ್ಚಳದೊಂದಿಗೆ, ಸೌರ ಶಕ್ತಿ ಕ್ಷೇತ್ರವು ಹೂಡಿಕೆದಾರರ ದೃಷ್ಟಿಕೋನದಿಂದ ಆಕರ್ಷಕವಾಗಿದೆ” ಎಂದರು.

ಏಷಿಯನ್ ಡೆವಲಪ್ಮೆಂಟ್ ಬ್ಯಾಂಕಿನ ಇಂಡಿಯಾ ರೆಸಿಡೆಂಟ್ ಮಿಷನ್ನ ಕಂಟ್ರಿ ಡೈರೆಕ್ಟರ್ ಮಿಯೋ ಓಕಾ, "ಬೆಳವಣಿಗೆಯು ಹಸಿರಾಗಿರುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು ಮತ್ತು ಹಸಿರು ಬೆಳವಣಿಗೆಯನ್ನು ಸಾಧಿಸಲು ಉದಯೋನ್ಮುಖ ಆರ್ಥಿಕತೆಗಳಿಗೆ ತಂತ್ರಜ್ಞಾನಗಳು ಮತ್ತು ಹಣಕಾಸು ಪ್ರವೇಶವನ್ನು ಸುಗಮಗೊಳಿಸುವುದು ನಮ್ಮ ಎಡಿಬಿಯ ಜವಾಬ್ದಾರಿಯಾಗಿದೆ. ಒಳ್ಳೆಯ ಸುದ್ದಿಯೆಂದರೆ ಶುದ್ಧ ಇಂಧನದ ವೆಚ್ಚವು ಬಹಳ ವೇಗವಾಗಿ ಕುಸಿದಿದೆ ಮತ್ತು ನವೀಕರಿಸಬಹುದಾದ ಇಂಧನದ ಪಾಲು ಹೆಚ್ಚಾಗಿದೆ. ಕಳೆದ ದಶಕದಲ್ಲಿ ಸೌರ ಪಿವಿಯ ವೆಚ್ಚವು 80% ಕ್ಕಿಂತ ಕಡಿಮೆಯಾಗಿದೆ, ಪ್ರತಿ ಕಿಲೋವ್ಯಾಟ್ ಗಂಟೆಗೆ ಸುಮಾರು 0.05 ಡಾಲರ್ಗೆ ತಲುಪಿದೆ” ಎಂದರು.

ಇಂಟರ್ನ್ಯಾಷನಲ್ ಸೋಲಾರ್ ಎನರ್ಜಿ ಸೊಸೈಟಿಯ ಅಧ್ಯಕ್ಷರಾದ ಶ್ರೀಮತಿ ವಿಕ್ಟೋರಿಯಾ ಮಾರ್ಟಿನ್ ರವರು ಮಾತನಾಡಿ, "ತಂತ್ರಜ್ಞಾನದಲ್ಲಿ ಸಮಗ್ರ ಯೋಜನೆಯ ಬಗ್ಗೆ ಚಿಂತಿಸಲು, ಸಂಪರ್ಕಿಸಲು ಅಗತ್ಯವಿರುವ ವೈವಿಧ್ಯಮಯ ಸಂಗ್ರಹಣೆಯ ವ್ಯವಸ್ಥೆಯ ಬಗ್ಗೆ ಯೋಚಿಸಲು ಮತ್ತು ಚರ್ಚೆಗೆ ತಳ್ಳುವ  ವಿಷಯ ಇದಾಗಿದೆ” ಎಂದು ನಾನು ಭಾವಿಸುತ್ತೇನೆ,  ಉದಾಹರಣೆಗೆ ಇತರ ಮಾದರಿಯ ಇಂಧನ ಸೇವೆಗಳಿಗೆ,  ಬಿಸಿಯಾಗಿಸುವ ಮತ್ತು ತಂಪಾಗಿಸುವ ಹಾಗು ಸಾರಿಗೆಗೆ ಅಗತ್ಯವಾದ ಇಂಧನ/ವಿದ್ಯುತ್  ಉತ್ಪಾದನೆಗೆ ನಮ್ಮ ಹಸಿರು ಮತ್ತು ಶುದ್ಧ ಇಂಧನ ವ್ಯವಸ್ಥೆಗಳಲ್ಲಿ ಅದರ ದಾಸ್ತಾನಿನಲ್ಲಿ ಸುಧಾರಣೆಗಳಾಗಬೇಕು” ಎಂದರು.

ವರದಿಯ ಬಗ್ಗೆ ತಮ್ಮ ಒಳನೋಟಗಳನ್ನು ಹಂಚಿಕೊಂಡ ಹೊಸದಿಲ್ಲಿಯ ಡೆನ್ಮಾರ್ಕ್ ರಾಯಭಾರ ಕಚೇರಿಯ ಸ್ಟ್ರಾಟೆಜಿಕ್ ಸೆಕ್ಟರ್ ಕೋಆಪರೇಶನ್ ಮುಖ್ಯಸ್ಥರಾದ ಎಮಿಲ್ ಎಸ್ ಲೌರಿಟ್ಸೆನ್, "ಈ ವರದಿಯು ಹಸಿರು ಹೈಡ್ರೋಜನ್ ಪಾಲುದಾರಿಕೆಗಾಗಿರುವ ತಿಳಿವಳಿಕೆ ಒಡಂಬಡಿಕೆಯ ಅಡಿಯಲ್ಲಿ ಮೊದಲ ಯೋಜನೆಯಾಗಿದೆ, ಇದಕ್ಕೆ ಡೆನ್ಮಾರ್ಕ್ ರಾಯಭಾರ ಕಚೇರಿ ಅಂತರರಾಷ್ಟ್ರೀಯ ಸೌರ ಮೈತ್ರಿಕೂಟದೊಂದಿಗೆ  ಸಹಿ ಹಾಕಿದೆ. ನಮ್ಮ ಗುರಿಯ  ದೇಶಗಳಾದ ಈಜಿಪ್ಟ್, ಮೊರಾಕೊ, ನಮೀಬಿಯಾ ಮತ್ತು ಈಜಿಪ್ಟ್ ಸನ್ನದ್ಧತೆಯ ಮೌಲ್ಯಮಾಪನವನ್ನು ನಡೆಸುವುದು ಇದರ ಉದ್ದೇಶವಾಗಿದೆ. ವರದಿಯು ಮೂರು ವಿಭಾಗಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ: ದೇಶ-ನಿರ್ದಿಷ್ಟ ನಿಯತಾಂಕಗಳು, ಹಣಕಾಸು ಅವಶ್ಯಕತೆಗಳು ಮತ್ತು ಸಂಭವನೀಯ ಹಣಕಾಸು ವಿಧಾನಗಳು. ಇದು ಅಪಾಯಗಳನ್ನು ನಿರ್ಣಯಿಸುವುದು ಮತ್ತು ದೇಶಗಳಲ್ಲಿ ಹಸಿರು ಹೈಡ್ರೋಜನ್ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಯೋಜನೆಗಳನ್ನು ಸಿದ್ಧಪಡಿಸುವುದನ್ನು ಸಹ ಒಳಗೊಂಡಿದೆ. ಪಾಲುದಾರಿಕೆಯ ಅಡಿಯಲ್ಲಿ, ಡೆನ್ಮಾರ್ಕಿನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹಸಿರು ಹೈಡ್ರೋಜನ್ ನೀತಿ, ನಿಯಂತ್ರಣ ಮತ್ತು ಹಸಿರು ಹೈಡ್ರೋಜನ್ ಮೌಲ್ಯ ಸರಪಳಿಯ ಇತರ ಘಟಕಗಳ ಮೇಲೆ ಗಮನ ಕೇಂದ್ರೀಕರಿಸುವ ಯೋಜನೆಗಳಿಗೆ ಮೂರು ವರ್ಷಗಳ ಅವಧಿಗೆ  ಐಎಸ್ಎಗೆ ಬೆಂಬಲ ನೀಡುತ್ತದೆ” ಎಂದರು.

ಹಸಿರು ಹೈಡ್ರೋಜನ್ ದೇಶದ ಶ್ರೀಮಂತ ನವೀಕರಿಸಬಹುದಾದ ಸಂಪನ್ಮೂಲಗಳನ್ನು (ಲಭ್ಯವಿರುವಲ್ಲಿ) ಹಣಗಳಿಸಲು, ಉದ್ಯಮ ಡಿಕಾರ್ಬನೈಸೇಶನ್ ಸಾಧಿಸಲು ದೇಶಕ್ಕೆ ಸಹಾಯ ಮಾಡಲು ಮತ್ತು ಪ್ರಕ್ರಿಯೆಯಲ್ಲಿ ಸುಸ್ಥಿರ ಉದ್ಯೋಗಗಳನ್ನು ಸೃಷ್ಟಿಸಲು ಉತ್ತಮ ಮಾರ್ಗವನ್ನು ಒದಗಿಸುತ್ತದೆ. ದೇಶಗಳನ್ನು ಅವುಗಳ ವ್ಯಾಪಕ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಆಧಾರದ ಮೇಲೆ ಗುರುತಿಸಲಾಗಿದೆ ಮತ್ತು ಇದರಿಂದಾಗಿ ಹಸಿರು ಹೈಡ್ರೋಜನ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಗಮನಾರ್ಹವಾಗಿ ಕೊಡುಗೆ ನೀಡಬಹುದು.

ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟದ  ಬಗ್ಗೆ

ಅಂತರರಾಷ್ಟ್ರೀಯ ಸೌರ ಮೈತ್ರಿಕೂಟವು 120 ಸದಸ್ಯ ಮತ್ತು ಸಹಿ ಹಾಕಿದ ದೇಶಗಳನ್ನು ಹೊಂದಿರುವ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ. ಇದು ವಿಶ್ವಾದ್ಯಂತ ಇಂಧನ ಪ್ರವೇಶ/ಲಭ್ಯತೆ ಮತ್ತು ಭದ್ರತೆಯನ್ನು ಸುಧಾರಿಸಲು ಮತ್ತು ಇಂಗಾಲ-ತಟಸ್ಥ ಭವಿಷ್ಯಕ್ಕೆ ಸುಸ್ಥಿರ ಪರಿವರ್ತನೆಯಾಗಿ ಸೌರ ಶಕ್ತಿಯನ್ನು ಉತ್ತೇಜಿಸಲು ಸರ್ಕಾರಗಳೊಂದಿಗೆ ಕೆಲಸ ಮಾಡುತ್ತದೆ. 2030 ರ ವೇಳೆಗೆ ಸೌರಶಕ್ತಿಯಲ್ಲಿ 1 ಟ್ರಿಲಿಯನ್ ಯುಎಸ್ ಡಾಲರ್ ಹೂಡಿಕೆಯನ್ನು ಅನ್ಲಾಕ್ ಮಾಡುವುದು ಐಎಸ್ಎಯ ಧ್ಯೇಯವಾಗಿದೆ, ಅದೇ ಸಮಯದಲ್ಲಿ ತಂತ್ರಜ್ಞಾನ ಮತ್ತು ಅದರ ಹಣಕಾಸು ವೆಚ್ಚವನ್ನು ಕಡಿಮೆ ಮಾಡುವುದೂ ಇದರಲ್ಲಿ ಸೇರಿದೆ. ಇದು ಕೃಷಿ, ಆರೋಗ್ಯ, ಸಾರಿಗೆ ಮತ್ತು ವಿದ್ಯುತ್ ಉತ್ಪಾದನಾ ಕ್ಷೇತ್ರಗಳಲ್ಲಿ ಸೌರ ಶಕ್ತಿಯ ಬಳಕೆಯನ್ನು ಉತ್ತೇಜಿಸುತ್ತದೆ.

ಐಎಸ್ಎ ಸದಸ್ಯ ರಾಷ್ಟ್ರಗಳು ನೀತಿಗಳು ಮತ್ತು ನಿಬಂಧನೆಗಳನ್ನು ಜಾರಿಗೆ ತರುವ ಮೂಲಕ, ಉತ್ತಮ ಅಭ್ಯಾಸಗಳನ್ನು/ಪದ್ಧತಿಗಳನ್ನು ಹಂಚಿಕೊಳ್ಳುವ ಮೂಲಕ, ಸಾಮಾನ್ಯ ಮಾನದಂಡಗಳನ್ನು ಒಪ್ಪಿಕೊಳ್ಳುವ ಮೂಲಕ ಮತ್ತು ಹೂಡಿಕೆಗಳನ್ನು ಸಜ್ಜುಗೊಳಿಸುವ ಮೂಲಕ ಬದಲಾವಣೆಗೆ ಚಾಲನೆ ನೀಡುತ್ತಿವೆ. ಈ ಕೆಲಸದ ಮೂಲಕ, ಐಎಸ್ಎ ಸೌರ ಯೋಜನೆಗಳಿಗೆ ಹೊಸ ವ್ಯವಹಾರ ಮಾದರಿಗಳನ್ನು ಗುರುತಿಸಿದೆ, ವಿನ್ಯಾಸಗೊಳಿಸಿದೆ ಮತ್ತು ಪರೀಕ್ಷಿಸಿದೆ; ಸೌರ ವಿಶ್ಲೇಷಣೆ ಮತ್ತು ಸಲಹೆಯ ಮೂಲಕ ತಮ್ಮ ಇಂಧನ ಶಾಸನ ಮತ್ತು ನೀತಿಗಳನ್ನು ಸೌರ ಸ್ನೇಹಿಯನ್ನಾಗಿ ಮಾಡಲು ಸರ್ಕಾರಗಳಿಗೆ ಬೆಂಬಲ ನೀಡಿದೆ; ವಿವಿಧ ದೇಶಗಳಿಂದ ಸೌರ ತಂತ್ರಜ್ಞಾನಕ್ಕೆ ಒಟ್ಟು ಬೇಡಿಕೆಯನ್ನು ಹೆಚ್ಚಿಸಿದೆ ಮತ್ತು ವೆಚ್ಚವನ್ನು ಕಡಿಮೆ ಮಾಡಿದೆ; ಅಪಾಯಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ವಲಯವನ್ನು ಖಾಸಗಿ ಹೂಡಿಕೆಗೆ ಹೆಚ್ಚು ಆಕರ್ಷಕವಾಗಿಸುವ ಮೂಲಕ ಹಣಕಾಸು ಲಭ್ಯತೆಯನ್ನು ಸುಧಾರಿಸುತ್ತಿದೆ; ಸೌರ ಎಂಜಿನಿಯರ್ ಗಳು ಮತ್ತು ಇಂಧನ ನೀತಿ ನಿರೂಪಕರಿಗೆ ಸೌರ ತರಬೇತಿ, ದತ್ತಾಂಶ ಮತ್ತು ಒಳನೋಟಗಳಿಗೆ ಹೆಚ್ಚಿನ ಪ್ರವೇಶ ಒದಗಿಸುತ್ತಿದೆ. ಸೌರಶಕ್ತಿ ಚಾಲಿತ ಪರಿಹಾರಗಳ ಸಮರ್ಥನೆಯೊಂದಿಗೆ, ಐಎಸ್ಎ ಜೀವನವನ್ನು ಪರಿವರ್ತಿಸುವ, ವಿಶ್ವಾದ್ಯಂತದ ಸಮುದಾಯಗಳಿಗೆ ಶುದ್ಧ, ವಿಶ್ವಾಸಾರ್ಹ ಮತ್ತು ಕೈಗೆಟುಕುವ ದರದಲ್ಲಿ ಇಂಧನ ಶಕ್ತಿಯನ್ನು ತರುವ, ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

2017ರ ಡಿಸೆಂಬರ್ 6 ರಂದು 15 ದೇಶಗಳು ಐಎಸ್ಎ ಚೌಕಟ್ಟು ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಮತ್ತು ದೃಢೀಕರಿಸುವುದರೊಂದಿಗೆ, ಐಎಸ್ಎ ಭಾರತದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮೊದಲ ಅಂತರರಾಷ್ಟ್ರೀಯ ಅಂತರ್ ಸರ್ಕಾರಿ ಸಂಸ್ಥೆಯಾಗಿದೆ. ಸೌರಶಕ್ತಿಯ ಮೂಲಕ ವೆಚ್ಚ-ಪರಿಣಾಮಕಾರಿ ಮತ್ತು ಪರಿವರ್ತನೆಯ ಪರಿಹಾರಗಳನ್ನು ನಿಯೋಜಿಸಲು ವಿಶೇಷವಾಗಿ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳು (ಎಲ್ಡಿಸಿಗಳು) ಮತ್ತು ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಜ್ಯಗಳು (ಎಸ್ಐಡಿಎಸ್) ಗಳಲ್ಲಿ ಈ ಕೆಲಸವನ್ನು ನಿಭಾಯಿಸಲು ಐಎಸ್ಎ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳು (ಎಂಡಿಬಿಗಳು), ಅಭಿವೃದ್ಧಿ ಹಣಕಾಸು ಸಂಸ್ಥೆಗಳು (ಡಿಎಫ್ಐ), ಖಾಸಗಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು, ನಾಗರಿಕ ಸಮಾಜ ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ,

ಏಳನೇ ಐಎಸ್ಎ ಅಸೆಂಬ್ಲಿಯ ನೇಪಥ್ಯದಲ್ಲಿ ನಡೆದ ಉನ್ನತ ಮಟ್ಟದ ಸಮ್ಮೇಳನದಲ್ಲಿ ಮಾರುಕಟ್ಟೆಗಳು, ಹೂಡಿಕೆಗಳು ಮತ್ತು ತಂತ್ರಜ್ಞಾನ ಕುರಿತ ವಿಶ್ವ ಸೌರ ವರದಿಗಳ ಬಿಡುಗಡೆ

ಏಳನೇ ಐಎಸ್ಎ ಅಸೆಂಬ್ಲಿಯ ನೇಪಥ್ಯದಲ್ಲಿ  ನಡೆದ ಉನ್ನತ ಮಟ್ಟದ ಸಮ್ಮೇಳನದಲ್ಲಿ ಆಫ್ರಿಕನ್ ದೇಶಗಳಲ್ಲಿ ಹಸಿರು ಹೈಡ್ರೋಜನ್ ಬಳಕೆ ಸಿದ್ಧತಾ ಮೌಲ್ಯಮಾಪನ ವರದಿ ಬಿಡುಗಡೆ

 

*****


(Release ID: 2071114) Visitor Counter : 26


Read this release in: English , Urdu , Hindi , Tamil