ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಹೂಡಿಕೆಗೆ ಸಂಬಂಧಿಸಿದ ಭಾರತ-ಯುಎಇ ಉನ್ನತ ಮಟ್ಟದ ಜಂಟಿ ಕಾರ್ಯಪಡೆಯ 12ನೇ ಸಭೆ
ಭಾರತ ಮತ್ತು ಯುಎಇ ನಡುವೆ ಹೂಡಿಕೆ ಹೆಚ್ಚಳ ಮಾಡುವ ಮತ್ತು ಫುಡ್ ಪಾರ್ಕ್ ನಂತಹ ವಲಯಗಳಲ್ಲಿ ಹೆಚ್ಚಿನ ಸಹಭಾಗಿತ್ವ ಹೊಂದುವ ಅಗತ್ಯವಿದೆ: ಶ್ರೀ ಪಿಯೂಷ್ ಗೋಯಲ್
ಗುಜರಾತಿನ ಗಿಫ್ಟ್ ಸಿಟಿಯಲ್ಲಿ ಅಬುಧಾಬಿ ಇನ್ವೆಸ್ಟ್ ಮೆಂಟ್ ಅಥಾರಿಟಿ(ಎಡಿಐಎ) ತನ್ನ ಅಂಗಸಂಸ್ಥೆ ಸ್ಥಾಪಿಸಲಿದೆ: ಶ್ರೀ ಪಿಯೂಷ್ ಗೋಯಲ್
ಯುಎಇಯಲ್ಲಿ ಇನ್ವೆಸ್ಟ್ ಇಂಡಿಯಾ ಕಚೇರಿ ತೆರೆಯಲಿದೆ: ಶ್ರೀ ಪಿಯೂಷ್ ಗೋಯಲ್
ಎರಡು ರಾಷ್ಟ್ರಗಳ ನಡುವಿನ ಗಡಿಯಾಚೆಗಿನ ವಹಿವಾಟುಗಳನ್ನು ಸುಗಮಗೊಳಿಸಲು 2 ರಾಷ್ಟ್ರೀಯ ಪಾವತಿ ವೇದಿಕೆಗಳಾದ - ಯುಪಿಐ(ಭಾರತ) ಮತ್ತು ಎಎಎನ್ಐ (ಯುಎಇ)ಗಳನ್ನು ಪರಸ್ಪರ ಜೋಡಿಸುವುದು ಅಗತ್ಯ: ಶ್ರೀ ಪಿಯೂಷ್ ಗೋಯಲ್
Posted On:
07 OCT 2024 5:09PM by PIB Bengaluru
ಹೂಡಿಕೆಗೆ ಸಂಬಂಧಿಸಿದ ಭಾರತ-ಯುಎಇ ಉನ್ನತ ಮಟ್ಟದ ಜಂಟಿ ಕಾರ್ಯಪಡೆ(ಎಚ್‌ಎಲ್‌ಜೆಟಿಎಫ್‌ಐ)ಯ 12ನೇ ಸಭೆ ಮುಂಬೈನಲ್ಲಿಂದು ನಡೆಯಿತು. ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಮತ್ತು ಅಬುಧಾಬಿ ಹೂಡಿಕೆ ಪ್ರಾಧಿಕಾರ(ಎಡಿಐಎ)ದ ವ್ಯವಸ್ಥಾಪಕ ನಿರ್ದೇಶಕ ಶೇಖ್ ಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಭಾರತ ಮತ್ತು ಯುಎಇ ನಡುವಿನ ವ್ಯಾಪಾರ, ಹೂಡಿಕೆ ಮತ್ತು ಆರ್ಥಿಕ ಸಂಬಂಧಗಳನ್ನು ಉತ್ತೇಜಿಸಲು ಭಾರತ-ಯುಎಇ ಉನ್ನತ ಮಟ್ಟದ ಜಂಟಿ ಕಾರ್ಯಪಡೆಯನ್ನು 2013ರಲ್ಲಿ ಸ್ಥಾಪಿಸಲಾಯಿತು. ಅದು ಸ್ಥಾಪನೆ ಆದಾಗಿನಿಂದ, ಇದು ಭಾರತ ಮತ್ತು ಯುಎಇಯಲ್ಲಿ ಹೆಚ್ಚಿನ ಹೂಡಿಕೆ ಅವಕಾಶಗಳು ಮತ್ತು ಭವಿಷ್ಯವನ್ನು ಚರ್ಚಿಸಲು ಪರಿಣಾಮಕಾರಿ ಕಾರ್ಯವಿಧಾನವನ್ನು ಒದಗಿಸುತ್ತಿದೆ. ಎರಡು ದೇಶಗಳ ಹೂಡಿಕೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ದಿಟ್ಟ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ.
12ನೇ ಎಚ್‌ಎಲ್‌ಜೆಟಿಎಫ್‌ಐ ಸಭೆಯಲ್ಲಿ ಉಭಯ ನಾಯಕರು, ವ್ಯಾಪಾರ ಮತ್ತು ಹೂಡಿಕೆ ಸಂಬಂಧಿತ ವಿಷಯಗಳು ಸೇರಿದಂತೆ ಭಾರತ ಮತ್ತು ಯುಎಇ ನಡುವಿನ ದ್ವಿಪಕ್ಷೀಯ ಸಂಬಂಧದ ಮುಂದುವರಿದ ಬೆಳವಣಿಗೆ ಮತ್ತು ಬಲವರ್ಧನೆ ಆಗಿದೆ ಎಂದು ಒಪ್ಪಿಕೊಂಡರು. 2024 ಫೆಬ್ರವರಿಯಲ್ಲಿ ಯುಎಇಗೆ ಪ್ರಧಾನಿ ಮೋದಿ ಅವರ ಭೇಟಿಯ ಸಂದರ್ಭದಲ್ಲಿ ಸಹಿ ಹಾಕಲಾದ ಭಾರತ-ಯುಎಇ ದ್ವಿಪಕ್ಷೀಯ ಹೂಡಿಕೆ ಒಪ್ಪಂದವನ್ನು ಎರಡೂ ಕಡೆಯವರು ಅನುಮೋದಿಸಿದರು. ಈ ಒಪ್ಪಂದವು 2024 ಆಗಸ್ಟ್ 31ರಿಂದ ಜಾರಿಗೆ ಬರುವಂತೆ ಮಾಡಲಾಗಿದೆ.
2022 ಮೇನಲ್ಲಿ ಜಾರಿಗೆ ಬಂದ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ(ಸಿಇಪಿಎ)ದ ಅಡಿ, ದ್ವಿಪಕ್ಷೀಯ ವ್ಯಾಪಾರದಲ್ಲಿ ಆಗಿರುವ ಕ್ಷಿಪ್ರ ಪ್ರಗತಿಯನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು. ಜಂಟಿ ಕಾರ್ಯಪಡೆಯು ಭಾರತ-ಯುಎಇ ಸಿಇಪಿಎ ಕಾರ್ಯಗಳ ಪರಾಮರ್ಶೆ ನಡೆಸಿತು. ಇದು ಹಿಂದೆಂದೂ ಕಾಣದ ಅತ್ಯಂತ ವೇಗವಾಗಿ ನಡೆದ ಮುಕ್ತ ವ್ಯಾಪಾರ ಒಪ್ಪಂದವಾಗಿದೆ. ಹೆಚ್ಚಿನ ವ್ಯಾಪಾರ ಉತ್ತೇಜಿಸಲು ಮತ್ತು ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧ ಹೆಚ್ಚಿಸಲು ಈ ಮಹತ್ವಾಕಾಂಕ್ಷಿ ಒಪ್ಪಂದ ವಿನ್ಯಾಸಗೊಳಿಸಲಾಗಿದೆ. ಕಳೆದ 2 ವರ್ಷಗಳ ಅವಧಿಯಲ್ಲಿ, ಸಿಇಪಿಎ ಬಹುಪಾಲು ಉತ್ಪನ್ನಗಳ ಮೇಲಿನ ಸುಂಕಗಳನ್ನು ಕಡಿಮೆ ಮಾಡಲು ಸಹಾಯ ಮಾಡಿದೆ, ವ್ಯಾಪಾರಕ್ಕೆ ಇದ್ದ ನಾನಾ ಅಡೆತಡೆಗಳನ್ನು ಪರಿಹರಿಸಲು ಪ್ರಯತ್ನಿಸಿದೆ, ಸಹಕಾರಕ್ಕಾಗಿ ಹೊಸ ಮಾರ್ಗಗಳನ್ನು ಸೃಷ್ಟಿಸಿದೆ. ಒಪ್ಪಂದದ ಪರಿಣಾಮವಾಗಿ, ದ್ವಿಪಕ್ಷೀಯ ವ್ಯಾಪಾರವು ಸ್ಥಿರವಾಗಿ ಏರಿಕೆ ಕಂಡಿದೆ. ತೈಲೇತರ ವ್ಯಾಪಾರ ವಹಿವಾಟು 2024ರ ಮೊದಲಾರ್ಧದಲ್ಲಿ 28.2 ಶತಕೋಟಿ ಡಾಲರ್ ಗೆ ಏರಿಕೆ ಕಂಡಿದೆ. ಇದು ವರ್ಷದಿಂದ ವರ್ಷಕ್ಕೆ 9.8% ಹೆಚ್ಚಳವಾಗಿದೆ. 2023ರ ಹೊತ್ತಿಗೆ ಈ ಒಪ್ಪಂದವು ಎಫ್‌ಡಿಐಗೆ ಉತ್ತೇಜನ ನೀಡಿದೆ. ಯುಎಇ ಭಾರತದ 4ನೇ ಅತಿದೊಡ್ಡ ವಿದೇಶಿ ಹೂಡಿಕೆದಾರ ರಾಷ್ಟ್ರವಾಗಿದ್ದು, ವ್ಯಾಪಕ ಶ್ರೇಣಿಯ ವಲಯಗಳಲ್ಲಿ 3.35 ಶತಕೋಟಿ ಡಾಲರ್ ಹೂಡಿಕೆ ಮಾಡಲು ಬದ್ಧವಾಗಿದೆ, ಇದು 2022ರಲ್ಲಿ ಹೂಡಿಕೆಯ 3 ಪಟ್ಟು ಹೆಚ್ಚಳವನ್ನು ಪ್ರತಿನಿಧಿಸುತ್ತದೆ. 2023ರಲ್ಲಿ ಯುಎಇಗೆ ಭಾರತದ ವಿದೇಶಿ ನೇರ ಹೂಡಿಕೆ ಪ್ರಮಾಣವು 2.05 ಶತಕೋಟಿ ಡಾಲರ್ ಗೆ ಹೆಚ್ಚಳವಾಗಿದೆ. 2021 ಮತ್ತು 2022ರ ಒಟ್ಟು ಹೂಡಿಕೆಗೆ ಹೋಲಿಸಿದರೆ 2023ರಲ್ಲಿ ಹೆಚ್ಚಿನ ಹೂಡಿಕೆ ಮಾಡಲಾಗಿದೆ. ಈ ಅಂಕಿಅಂಶಗಳು ವಾಸ್ತವ ಮತ್ತು ನೆಲೆಗಟ್ಟಿನ ಪ್ರಭಾವದೊಂದಿಗೆ ನೈಜ ಬೆಳವಣಿಗೆಯನ್ನು ಪ್ರತಿನಿಧಿಸುತ್ತವೆ. ಇದಲ್ಲದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ ಮತ್ತು ಕಾರ್ಮಿಕ-ಆಧಾರಿತ ವಲಯಗಳಿಂದ ರಫ್ತು ವೇಗವಾಗಿ ಬೆಳೆಯುತ್ತಿದೆ.
ಅಬುಧಾಬಿಯ ಯುವರಾಜ ಎಚ್.ಎಚ್. ಶೇಖ್ ಖಾಲಿದ್ ಬಿನ್ ಮೊಹಮದ್ ಅಲ್ ನಹ್ಯಾನ್ ಅವರ ಇತ್ತೀಚಿನ ಅಧಿಕೃತ ಭಾರತ ಭೇಟಿ ಸಂದರ್ಭದಲ್ಲಿ ಸಹಿ ಮಾಡಿದ ಕಾರ್ಯತಂತ್ರ ಒಪ್ಪಂದಗಳು ಮತ್ತು ಉಪಕ್ರಮಗಳನ್ನು ಪರಿಗಣಿಸಿ, ಎರಡು ಕಡೆಯವರು ಭಾರತದ ಪ್ರಮುಖ ಕ್ಷೇತ್ರಗಳಲ್ಲಿ ಯುಎಇ ಕಂಪನಿಗಳ ಹಾಲಿ ಮತ್ತು ಭವಿಷ್ಯದ ಹೂಡಿಕೆಗಳು ಮತ್ತು ಯೋಜನೆಗಳ ಪರಾಮರ್ಶೆ ನಡೆಸಿದರು. ಇಂಧನ, ಕೃತಕ ಬುದ್ಧಿಮತ್ತೆ, ಸರಕು ಸಾಗಣೆ, ಆಹಾರ ಮತ್ತು ಕೃಷಿ ಸೇರಿದಂತೆ ಆರ್ಥಿಕತೆ ವಲಯಗಳಲ್ಲಿ ಒಟ್ಟು 100 ಶತಕೋಟಿ ಡಾಲರ್ ಹೂಡಿಕೆ ಮಾಡಲಾಗಿದ. ಸಭೆಯಲ್ಲಿ ಭಾರತೀಯ ಮೂಲಸೌಕರ್ಯ ಸ್ವತ್ತುಗಳಲ್ಲಿ ಯುಎಇ ಡಿರುವ ಹೂಡಿಕೆಗಳ ಪರಾಮರ್ಶೆ ನಡೆಸಲಾಯಿತು.
ಎಚ್‌ಎಲ್‌ಜೆಟಿಎಫ್‌ಐ ಸಭೆಯಲ್ಲಿ, ಉಭಯ ಕಡೆಯವರು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಈ ಹಿಂದೆ ಘೋಷಿಸಿದ ಕೆಲವು ಪ್ರಮುಖ ಉಪಕ್ರಮಗಳ ಪ್ರಗತಿ ಪರಿಶೀಲಿಸಿದರು, ಕ್ಷಿಪ್ರ ಗತಿಯ ಅನುಷ್ಠಾನಕ್ಕೆ ತೃಪ್ತಿ ವ್ಯಕ್ತಪಡಿಸಿದರು. ಈ ಉಪಕ್ರಮಗಳಲ್ಲಿ ಸ್ಥಳೀಯ ಕರೆನ್ಸಿಗಳಲ್ಲಿ ದ್ವಿಪಕ್ಷೀಯ ವ್ಯಾಪಾರ, ಭಾರತ ಮತ್ತು ಯುಎಇ ಪಾವತಿ ವ್ಯವಸ್ಥೆಗಳ ಏಕೀಕರಣ, ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಗಳ ಸಹಕಾರ, ವರ್ಚುವಲ್ ಟ್ರೇಡ್ ಕಾರಿಡಾರ್‌ಗೆ ಸಂಬಂಧಿಸಿದ ಕೆಲಸದ ಪ್ರಾರಂಭ ಮತ್ತು ಅಹಮದಾಬಾದ್‌ನಲ್ಲಿ ಫುಡ್ ಪಾರ್ಕ್‌ನ ಅಭಿವೃದ್ಧಿ ಇವುಗಳಲ್ಲಿ ಸೇರಿವೆ.
ಫುಡ್ ಪಾರ್ಕ್‌ಗಳು ಭಾರತ ಮತ್ತು ಯುಎಇ ನಡುವಿನ ಹೆಚ್ಚಿನ ಸಹಭಾಗಿತ್ವ ಮತ್ತು ಹೂಡಿಕೆಯ ಕ್ಷೇತ್ರಗಳಲ್ಲಿ ಸೇರಿವೆ. ಇದು ರೈತರಿಗೆ ಹೆಚ್ಚಿನ ಆದಾಯ, ಆಹಾರ ಸಂಸ್ಕರಣಾ ವಲಯದಲ್ಲಿ ಉದ್ಯೋಗ ಸೃಷ್ಟಿ ಮತ್ತು ಯುಎಇಗೆ ಆಹಾರ ಭದ್ರತೆ ಹೆಚ್ಚಿಸುತ್ತದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಯುಎಇ ಸರ್ಕಾರದ ನಡುವಿನ ಸಣ್ಣ ಕಾರ್ಯ ಗುಂಪುಗಳು ಮಿಷನ್-ಮೋಡ್(ಕಾರ್ಯಾಚರಣೆ ಮಾದರಿ) ಆಧಾರದ ಮೇಲೆ 2 ದೇಶಗಳ ನಡುವೆ ಆಹಾರ ಕಾರಿಡಾರ್‌ಗಳನ್ನು ಮುಂದಕ್ಕೆ ಕೊಂಡೊಯ್ಯುತ್ತವೆ. ಈ ಉಪಕ್ರಮಗಳ ಮೇಲೆ ಮಾಡಿದ ಬಲವಾದ ಪ್ರಗತಿಯು ಆಯಾ ನಾಯಕರ ದೃಷ್ಟಿಕೋನಗಳ ಅನುಷ್ಠಾನ ಖಚಿತಪಡಿಸಿಕೊಳ್ಳಲು ಎರಡೂ ಕಡೆಯಿಂದ ಉನ್ನತ ಮಟ್ಟದ ಬದ್ಧತೆಯನ್ನು ದೃಢೀಕರಿಸುತ್ತದೆ.
ಗುಜರಾತಿನ ಗಿಫ್ಟ್ ಸಿಟಿಯಲ್ಲಿ ಅಂಗಸಂಸ್ಥೆ ಸ್ಥಾಪಿಸುವ ಅಬುಧಾಬಿ ಹೂಡಿಕೆ ಪ್ರಾಧಿಕಾರ(ಎಡಿಐಎ)ದ ಘೋಷಣೆಯನ್ನು ಎರಡೂ ಕಡೆಯವರು ಸ್ವಾಗತಿಸಿದರು. ಇದು ಭಾರತದ ಬೆಳೆಯುತ್ತಿರುವ ಮತ್ತು ಕ್ರಿಯಾತ್ಮಕ ಆರ್ಥಿಕತೆಯಲ್ಲಿ ಯುಎಇಯ ಸಾಂಸ್ಥಿಕ ಹೂಡಿಕೆದಾರರು ಹೊಂದಿರುವ ಬಲವಾದ ಆಸಕ್ತಿಯನ್ನು ತೋರುತ್ತದೆ. ಗಿಫ್ಟ್ ಸಿಟಿ ವಿಶ್ವ ದರ್ಜೆಯ ಹಣಕಾಸು ಸೇವಾ ಕೇಂದ್ರವಾಗಿ ಖ್ಯಾತಿ ಹೊಂದಿದೆ, ಇದು ಬಲವಾದ ನಿಯಂತ್ರಕ ಮತ್ತು ಸದೃಢ ಕಾನೂನು ಚೌಕಟ್ಟಿನ ಅಡಿ ಕಾರ್ಯ ನಿರ್ವಹಿಸುತ್ತದೆ.
ಎರಡೂ ರಾಷ್ಟ್ರಗಳ ಸಂಬಂಧ ಹೆಚ್ಚಿಸಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(ಎನ್ ಪಿಸಿಐ)ವು ತನ್ನ ಅಂತಾರಾಷ್ಟ್ರೀಯ ಅಂಗಸಂಸ್ಥೆ “ಎನ್ ಪಿಸಿಐ ಇಂಟರ್ ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್(ಎನ್ಐಪಿಎಲ್)” ಯುಎಇಯ ಅಲ್ ಇತಿಹಾದ್ ಪೇಮೆಂಟ್ಸ್(ಎಇಪಿ) ಜತೆ ಸಹಭಾಗಿತ್ವ ಹೊಂದುತ್ತಿದ್ದು, ಯುಎಇಯಲ್ಲಿ ದೇಶೀಯ ಕಾರ್ಡ್ ಯೋಜನೆ ಜಯ್ವಾನ್(JAYWAN) ರಚಿಸಲು ಸಹಕರಿಸುತ್ತಿದೆ. JAYWAN ಕಾರ್ಡ್ ಯೋಜನೆಯು ಎನ್ಐಪಿಎಲ್ ಮತ್ತು ಎಇಪಿ ನಡುವಿನ ಆಳವಾದ ಸಹಭಾಗಿತ್ವದ ಫಲಿತಾಂಶವಾಗಿದೆ. ಇದು ರುಪೇ ಕಾರ್ಡ್ ಸ್ಟಾಕ್ ಆಧರಿಸಿದೆ. ಭಾರತದಲ್ಲಿ ಎನ್ ಪಿಸಿಐನಿಂದ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ನಿಯೋಜಿಸಲಾಗಿದೆ. ಡಿಜಿಟಲ್ ಪಾವತಿಗಳ ಕ್ಷೇತ್ರದಲ್ಲಿ ಯುಎಇ ಸಾರ್ವಭೌಮತ್ವ ಸಕ್ರಿಯಗೊಳಿಸಲು ಎಇಪಿಯೊಂದಿಗೆ ಹಂಚಿಕೊಳ್ಳಲಾಗಿದೆ. ಎರಡು ಸರ್ಕಾರಗಳು ಈಗ ಎರಡು ರಾಷ್ಟ್ರೀಯ ಪಾವತಿ ವೇದಿಕೆಗಳಾದ ಯುಪಿಐ(ಭಾರತ) ಮತ್ತು ಎಎಎನ್ಐ (ಯುಎಇ) ಅನ್ನು ಪರಸ್ಪರ ಜೋಡಿಸಲು ಕೆಲಸ ಮಾಡುತ್ತಿವೆ. ಇದು ಎರಡು ದೇಶಗಳ ನಡುವೆ ಗಡಿಯಾಚೆಗಿನ ವಹಿವಾಟುಗಳನ್ನು ಸುಗಮಗೊಳಿಸುತ್ತದೆ. ಇದು ಯುಎಇಯಲ್ಲಿ ನೆಲೆಸಿರುವ 3 ದಶಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಪ್ರಯೋಜನ ನೀಡುತ್ತದೆ. ಅವರು ಯುಪಿಐ ಮತ್ತು ಎಎಎನ್‌ಐಯ ಸಾಮರ್ಥ್ಯಗಳನ್ನು ನೈಜ-ಸಮಯದ ಗಡಿಯಾಚೆಯ ವ್ಯವಹಾರಗಳಿಗೆ ಬಳಸಲು ಅನುವು ಮಾಡಿಕೊಡುತ್ತದೆ, ಇದು ಗಡಿಯಾಚೆಯ ವ್ಯವಹಾರಗಳಲ್ಲಿ ವೇಗ, ಪಾರದರ್ಶಕತೆ, ಪ್ರವೇಶ ಮತ್ತು ವೆಚ್ಚ ದಕ್ಷತೆ ತರುವ ದೃಷ್ಟಿಗೆ ಅನುಗುಣವಾಗಿರುತ್ತದೆ.
ಭಾರತದಲ್ಲಿ ಹೂಡಿಕೆ ಮಾಡಲು ಬಯಸುವ ಸಂಭಾವ್ಯ ಯುಎಇ ಹೂಡಿಕೆದಾರರಿಗೆ ಮೀಸಲಾದ ಸಂಪರ್ಕ ಕೇಂದ್ರವಾಗಿ ಕಾರ್ಯ ನಿರ್ವಹಿಸಲು ಭಾರತ ಸರ್ಕಾರವು ದುಬೈ, ಯುಎಇಯಲ್ಲಿ ಇನ್ವೆಸ್ಟ್ ಇಂಡಿಯಾದ ಕಚೇರಿ ತೆರೆಯಲು ನಿರ್ಧರಿಸಿದೆ. ಇಂದು ಭಾರತ-ಯುಎಇ ಎಚ್‌ಎಲ್‌ಜೆಟಿಎಫ್‌ಐ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ. ಇದು ಮಧ್ಯಪ್ರಾಚ್ಯ ಪ್ರದೇಶದಲ್ಲಿ ಇನ್ವೆಸ್ಟ್ ಇಂಡಿಯಾದ ಮೊದಲ ಸಾಗರೋತ್ತರ ಕಚೇರಿಯಾಗಲಿದೆ. ಸಿಂಗಾಪುರದ ನಂತರ ಒಟ್ಟಾರೆಯಾಗಿ ಅದರ 2ನೇ ಸಾಗರೋತ್ತರ ಕಚೇರಿಯಾಗಿದೆ.
ಎಚ್‌ಎಲ್‌ಜೆಟಿಎಫ್‌ಐ ಸಭೆಯ ಸಂದರ್ಭದಲ್ಲಿ, ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಮತ್ತು ಅಬುಧಾಬಿ ಹೂಡಿಕೆ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಶೇಖ್ ಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಭಾರತ ಮಾರ್ಟ್ ಸಾಧಿಸುತ್ತಿರುವ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ನೆಲದ ಮೇಲೆ ಕೆಲಸ ಪ್ರಾರಂಭವಾಗಿದೆ, ಬಿಡಿ ಮಾರಾಟ(ಚಿಲ್ಲರೆ) ಸ್ಥಳಗಳು ಮತ್ತು ಗೋದಾಮುಗಳ ವಿನ್ಯಾಸ ಕಾರ್ಯವು ತ್ವರಿತ ಪ್ರಗತಿ ಸಾಧಿಸುತ್ತಿದೆ ಎಂದರು.
ಉಭಯ ರಾಷ್ಟ್ರಗಳ ಹೂಡಿಕೆ ಹರಿವಿನ ಮತ್ತಷ್ಟು ಬೆಳವಣಿಗೆ ಉತ್ತೇಜಿಸುವ ಮಾರ್ಗಗಳು ಮತ್ತು ಪ್ರೋತ್ಸಾಹಗಳ ಕುರಿತು ಎಚ್‌ಎಲ್‌ಜೆಟಿಎಫ್‌ಐ ಸಭೆ ವೇದಿಕೆ ಒದಗಿಸಿದೆ. ಈ ಸಂದರ್ಭದಲ್ಲಿ, ನವೀಕರಿಸಬಹುದಾದ ಇಂಧನ, ಹಸಿರು ಜಲಜನಕ, ಔಷಧೀಯ ಮತ್ತು ಜೀನೋಮಿಕ್ಸ್‌ನಂತಹ ಆದ್ಯತೆಯ ವಲಯಗಳಲ್ಲಿ ಇರುವ ಹೂಡಿಕೆ ಅವಕಾಶಗಳನ್ನು ಭಾರತವು ಹಂಚಿಕೊಂಡಿದೆ. ವಾಯುಯಾನ ಮಾರುಕಟ್ಟೆಯ ತ್ವರಿತ ಬೆಳವಣಿಗೆಯಿಂದಾಗಿ ಭಾರತದ ಏರೋಸ್ಪೇಸ್ ವಲಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳನ್ನು ಹೆಚ್ಚಿಸುವುದಾಗಿ ಯುಎಇ ತಿಳಿಸಿತು.
ಅಡೆತಡೆಗಳನ್ನು ನಿವಾರಿಸುವ ಮತ್ತು ಅವುಗಳ ಪರಿಹಾರ ಸುಲಭಗೊಳಿಸುವ ಉದ್ದೇಶದಿಂದ ಎರಡೂ ದೇಶಗಳ ಹೂಡಿಕೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಎರಡೂ ದೇಶಗಳ ಕಂಪನಿಗಳು ಎದುರಿಸುತ್ತಿರುವ ನಿರ್ದಿಷ್ಟ ಸವಾಲುಗಳನ್ನು ಸಹ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಮಸ್ಯೆಗಳನ್ನು ಸಮಯೋಚಿತವಾಗಿ ಮತ್ತು ಪರಸ್ಪರ ಸ್ವೀಕಾರಾರ್ಹ ರೀತಿಯಲ್ಲಿ ಪರಿಹರಿಸಲು, ಎರಡೂ ತಂಡಗಳು ಒಟ್ಟಿಗೆ ಕೆಲಸ ಮಾಡಲು ಮತ್ತು ಸಂಬಂಧಿತ ಸರ್ಕಾರಿ ಘಟಕಗಳೊಂದಿಗೆ ಕೆಲಸ ಮಾಡಲು ಉಭಯ ನಾಯಕರು ಒಪ್ಪಿಕೊಂಡರು.
ಎಚ್‌ಎಲ್‌ಜೆಟಿಎಫ್‌ಐ ಸಭೆಯಲ್ಲಿ ಭಾರತ ಸರ್ಕಾರದ ಉದ್ಯಮ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆ(ಡಿಪಿಐಐಟಿ) ಕಾರ್ಯದರ್ಶಿ ಶ್ರೀ ಅಮರದೀಪ್ ಸಿಂಗ್ ಭಾಟಿಯಾ, ಯುಎಇಯ ಭಾರತದ ರಾಯಭಾರಿ ಶ್ರೀ ಸಂಜಯ್ ಸುಧೀರ್, ಭಾರತದ ಯುಎಇ ರಾಯಭಾರಿ ಡಾ. ಅಬ್ದುಲ್ನಾಸರ್ ಜಮಾಲ್ ಅಲ್ಶಾಲಿ ಮತ್ತು ಎರಡೂ ಸರ್ಕಾರಗಳ ಹಲವಾರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಮಾತನಾಡಿ, “ಭಾರತ-ಯುಎಇ ಪಾಲುದಾರಿಕೆಯು ನಾವೀನ್ಯತೆ, ಹೂಡಿಕೆ ಮತ್ತು ಸುಸ್ಥಿರ ಅಭಿವೃದ್ಧಿಯ ಆಧಾರಸ್ತಂಭಗಳ ಮೇಲೆ ನಿಂತಿದೆ. ಇಂದು ಜಂಟಿ ಕಾರ್ಯಪಡೆ ಸಭೆಯು ಭಾರತ ಮತ್ತು ಯುಎಇ ಜಂಟಿಯಾಗಿ ಕೈಗೊಂಡಿರುವ ಸ್ಥಳೀಯ ಕರೆನ್ಸಿ ಇತ್ಯರ್ಥ, ವರ್ಚುವಲ್ ಟ್ರೇಡ್ ಕಾರಿಡಾರ್, ಭಾರತ್ ಮಾರ್ಟ್ ಮುಂತಾದ ಎಲ್ಲಾ ಶ್ಲಾಘನೀಯ ಉಪಕ್ರಮಗಳನ್ನು ತೆಗೆದುಕೊಳ್ಳಲು ಉಪಯುಕ್ತವಾಗಿದೆ. ಭಾರತ-ಯುಎಇ ಸಿಇಪಿಎ ಮತ್ತು ದ್ವಿಪಕ್ಷೀಯ ಹೂಡಿಕೆ ಒಪ್ಪಂದದಿಂದ ಈಗ ಒದಗಿಸಲಾದ ಬಲವಾದ ಚೌಕಟ್ಟಿನೊಂದಿಗೆ, ಹೂಡಿಕೆ ಅವಕಾಶಗಳು ಮತ್ತು ವ್ಯಾಪಾರ ಸಾಧ್ಯತೆಗಳನ್ನು ಇನ್ನಷ್ಟು ಅನ್ವೇಷಿಸಲು ನಾನು ಎಲ್ಲ ಪಾಲುದಾರರನ್ನು ಪ್ರೋತ್ಸಾಹಿಸುತ್ತೇನೆ ಎಂದರು.
ಅಬುಧಾಬಿ ಹೂಡಿಕೆ ಪ್ರಾಧಿಕಾರ(ಎಡಿಐಎ)ದ ವ್ಯವಸ್ಥಾಪಕ ನಿರ್ದೇಶಕ ಮತ್ತು ಎಚ್‌ಎಲ್‌ಜೆಟಿಎಫ್‌ಐನ ಸಹ-ಅಧ್ಯಕ್ಷ ಗೌರವಾನ್ವಿತ ಶೇಖ್ ಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮಾತನಾಡಿ, “2022 ರಲ್ಲಿ ಸಹಿ ಮಾಡಿದ ಭಾರತ-ಯುಎಇ ಸಿಇಪಿಎ ಆರ್ಥಿಕ ಸಂಬಂಧಗಳನ್ನು ಬಲಪಡಿಸಲು ಈ ಸಭೆ ಪ್ರಮುಖ ವೇಗವರ್ಧಕವಾಗಿದೆ. ಯುಎಇ ಮತ್ತು ಭಾರತ ನಡುವೆ ಗಡಿಯಾಚೆಗಿನ ವ್ಯಾಪಾರ ಹೆಚ್ಚಿಸಲು ಇದು ಸಹಕಾರಿ. ಈ ಸಕಾರಾತ್ಮಕ ಹಿನ್ನೆಲೆಯಲ್ಲಿ, ಜಂಟಿ ಕಾರ್ಯಪಡೆಯು ಹೊಸ ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲು, ಮತ್ತಷ್ಟು ಸಹಕಾರಕ್ಕೆ ಅಡಚಣೆಗಳನ್ನು ತೆಗೆದುಹಾಕಲು ಮತ್ತು ಹಂಚಿಕೆಯ ಗುರಿಗಳ ಅನ್ವೇಷಣೆಯಲ್ಲಿ ಒಟ್ಟಾಗಿ ಕೆಲಸ ಮಾಡಲು ವೇದಿಕೆಯಾಗಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದರು.
*****
(Release ID: 2063138)
Visitor Counter : 31