ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav g20-india-2023

2020-21 ಮತ್ತು 2021-22ರ ರಾಷ್ಟ್ರೀಯ ಆರೋಗ್ಯ ಖಾತೆ ಅಥವಾ ಲೆಕ್ಕಪತ್ರಗಳ(ಎನ್ಎಚ್ಎ) ಅಂದಾಜುಗಳು


ಒಂದು ಸಮಗ್ರ ಅವಲೋಕನ

Posted On: 04 OCT 2024 12:14PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಇತ್ತೀಚೆಗೆ 2020-21 ಮತ್ತು 2021-22ರ ಆರ್ಥಿಕ ವರ್ಷಗಳ ರಾಷ್ಟ್ರೀಯ ಆರೋಗ್ಯ ಖಾತೆ(ಎನ್ಎಚ್ಎ) ಅಂದಾಜು ಸಮಗ್ರ ಅವಲೋಕನಗಳನ್ನು ಬಿಡುಗಡೆ ಮಾಡಿದೆ. ಈ ವರದಿಗಳು ಎನ್ಎಚ್ಎ ಸರಣಿಯ 8ನೇ ಮತ್ತು 9ನೇ ಆವೃತ್ತಿಗಳಾಗಿವೆ. ಇದು ದೇಶದ ಆರೋಗ್ಯ ವೆಚ್ಚದ ಸಮಗ್ರ ಒಳನೋಟ ಒದಗಿಸುತ್ತದೆ. ಈ ದಾಖಲೆಯು ಎನ್ಎಚ್ಎ ಅಂದಾಜಿನ ಪ್ರಮುಖ ಸಂಶೋಧನೆಗಳನ್ನು ಪರಿಶೋಧಿಸುತ್ತದೆ. ಆರೋಗ್ಯದ ಮೇಲಿನ ಹೆಚ್ಚಿದ ಸರ್ಕಾರಿ ವೆಚ್ಚಗಳು, ಜನರ ವೈಯಕ್ತಿಕ ವೆಚ್ಚಗಳಲ್ಲಿ ಆಗಿರುವ ಇಳಿಕೆ ಮತ್ತು ಆರೋಗ್ಯದ ಮೇಲಿನ ಸಾಮಾಜಿಕ ಭದ್ರತಾ ವೆಚ್ಚ ಬೆಳವಣಿಗೆಯಂತಹ ಗಮನಾರ್ಹ ಪ್ರವೃತ್ತಿಗಳನ್ನು ಒತ್ತಿಹೇಳುತ್ತದೆ. ಸಾರ್ವತ್ರಿಕ ಆರೋಗ್ಯ ಸಂರಕ್ಷಣೆ(ಯುಹೆಚ್‌ಸಿ)ಯ ಗುರಿ ಸಾಧಿಸುವತ್ತ ಭಾರತ ತನ್ನ ಪ್ರಯಾಣವನ್ನು ಮುಂದುವರೆಸುತ್ತಿರುವಾಗ, ಈ ವರದಿಗಳು ಆರೋಗ್ಯ ರಕ್ಷಣೆಯ ಪ್ರವೇಶ ಸುಧಾರಿಸಲು, ಹಣಕಾಸಿನ ತೊಂದರೆಗಳನ್ನು ಕಡಿಮೆ ಮಾಡಲು ಮತ್ತು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿಸುತ್ತವೆ.

2020-21 ಮತ್ತು 2021-22 ಎನ್ಎಚ್ಎ ಅಂದಾಜುಗಳ ಪ್ರಮುಖ ಸಂಶೋಧನೆಗಳು

  • ಹೆಚ್ಚುತ್ತಿರುವ ಸರ್ಕಾರಿ ಆರೋಗ್ಯ ವೆಚ್ಚ(ಜಿಎಚ್ಇ): ಆರೋಗ್ಯ ಸಂರಕ್ಷಣೆಗಾಗಿ ಸರ್ಕಾರದ ವೆಚ್ಚವು ಅನೇಕ ವರ್ಷಗಳಲ್ಲಿ ಗಮನಾರ್ಹ ಏರಿಕೆ ಕಂಡಿದೆ. ಜಿಡಿಪಿಯಲ್ಲಿ ಸರ್ಕಾರದ ಆರೋಗ್ಯ ವೆಚ್ಚ(ಜಿಎಚ್ಇ) ಪಾಲು 2014-15ರಲ್ಲಿ ಇದ್ದ 1.13%ನಿಂದ 2021-22ರಲ್ಲಿ 1.84%ಗೆ ಏರಿಕೆ ಕಂಡಿದೆ. ಸಾಮಾನ್ಯ ಸರ್ಕಾರದ ವೆಚ್ಚ(ಜಿಜಿಇ)ದ ಪಾಲಿನ ಪ್ರಕಾರ, ಇದು 2014-15ರಲ್ಲಿ ಇದ್ದ 3.94%ನಿಂದ 2021-22ರಲ್ಲಿ 6.12%ಗೆ ಏರಿದೆ. ಈ ಬೆಳವಣಿಗೆಯು ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಬಲಪಡಿಸುವ ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿಸುತ್ತಿದೆ. ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾದ ಸವಾಲುಗಳಿಗೆ ಪ್ರತಿಕ್ರಿಯೆಯಾಗಿ ತೋರಿದೆ.

ಸರ್ಕಾರದ ಆರೋಗ್ಯ ವೆಚ್ಚ(ಜಿಎಚ್ಇ)ವನ್ನು ಜಿಡಿಪಿಯ ಶೇಕವಾರಿನಲ್ಲಿ ತೋರಿಸಲಾಗಿದೆ.

  • ತಲಾವಾರು ಲೆಕ್ಕದಲ್ಲಿ ಜಿಎಚ್ಇ 3 ಪಟ್ಟು ಹೆಚ್ಚಾಗಿದೆ. 2024-15ರಲ್ಲಿ ಇದ್ದ 1,108 ಕೋಟಿ ರೂ.ನಿಂದ 2021-22ರಲ್ಲಿ 3,169 ಕೋಟಿ ರೂ.ಗೆ ಏರಿಕೆ ಕಂಡಿದೆ. ಇದು ಆರೋಗ್ಯ ಸಂರಕ್ಷಣೆಯ ಹೂಡಿಕೆಗಳಲ್ಲಿ ಗಣನೀಯ ಏರಿಕೆಯನ್ನು ಸೂಚಿಸುತ್ತದೆ, ಆರೋಗ್ಯ ಸೇವೆಗಳಿಗಾಗಿ ಪ್ರತಿ ವ್ಯಕ್ತಿಗೆ ಹೆಚ್ಚಿನ ಸಂಪನ್ಮೂಲಗಳು ಲಭ್ಯವಿವೆ ಎಂದು ಖಚಿತಪಡಿಸುತ್ತದೆ. 2019-20 ಮತ್ತು 2020-21ರ ನಡುವೆ ಆರೋಗ್ಯದ ಮೇಲಿನ ಸರ್ಕಾರದ ವೆಚ್ಚದಲ್ಲಿ 16.6% ಹೆಚ್ಚಾಗಿದೆ. ಗಮನಾರ್ಹವಾಗಿ, 2020-21 ಮತ್ತು 2021-22jj ನಡುವೆ ಆರೋಗ್ಯ ವೆಚ್ಚದಲ್ಲಿ 37% ಹೆಚ್ಚಳದೊಂದಿಗೆ ತೀವ್ರ ಏರಿಕೆ ಕಂಡುಬಂದಿದೆ. ಇದು ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಆರೋಗ್ಯ ಬಿಕ್ಕಟ್ಟುನಿರ್ವಹಿಸುವ ಸರ್ಕಾರದ ಪೂರ್ವಭಾವಿ ವಿಧಾನವನ್ನು ಗುರುತಿಸುತ್ತದೆ.

ಸರ್ಕಾರದ ಸಾಮಾನ್ಯ ವೆಚ್ಚ(ಜಿಜಿಇ)ದಲ್ಲಿ ಸರ್ಕಾರದ ಆರೋಗ್ಯ ವೆಚ್ಚ(ಜಿಎಚ್ಇ) ಶೇಕಡಾವಾರು

  • ಪಾಕೆಟ್ ವೆಚ್ಚದಲ್ಲಿ ಇಳಿಕೆ(ಒಒಪಿಇ): ಸಾಂಪ್ರದಾಯಿಕವಾಗಿ ಭಾರತೀಯ ಕುಟುಂಬಗಳ ಮೇಲೆ ಆರೋಗ್ಯದ ವೈಯಕ್ತಿಕ ಖರ್ಚು(ಒಒಪಿಇ) ಗಮನಾರ್ಹ ಹೊರೆಯಾಗಿದೆ. ಆದಾಗ್ಯೂ, 2014-15 ಮತ್ತು 2021-22ರ ನಡುವೆ, ಒಟ್ಟು ಆರೋಗ್ಯ ವೆಚ್ಚ(ಟಿಎಚ್ಇ)ದಲ್ಲಿ ಒಒಪಿಇ ಪಾಲು 62.2%ನಿಂದ 39.4%ಗೆ ಇಳಿದಿದೆ. ಈ ಇಳಿಕೆಯು ಸಾರ್ವಜನಿಕ ಆರೋಗ್ಯ ವೆಚ್ಚ ಹೆಚ್ಚಿಸಲು, ಆರೋಗ್ಯ ಸೇವೆಗೆ ಪ್ರವೇಶ ಸುಧಾರಿಸಲು ಮತ್ತು ವೈದ್ಯಕೀಯ ಆರೈಕೆ ಬಯಸುವ ವ್ಯಕ್ತಿಗಳಿಗೆ ಆರ್ಥಿಕ ಸಂಕಷ್ಟ ಕಡಿಮೆ ಮಾಡುವ ಸರ್ಕಾರದ ಪ್ರಯತ್ನಗಳ ನೇರ ಪರಿಣಾಮವಾಗಿದೆ.

ಒಟ್ಟು ಆರೋಗ್ಯ ವೆಚ್ಚ(ಟಿಎಚ್ಇ)ದಲ್ಲಿ ಸರ್ಕಾರದ ಆರೋಗ್ಯ ವೆಚ್ಚ ಮತ್ತು ಜನರ ವೈಯಕ್ತಿಕ ವೆಚ್ಚ(ಒಒಪಿಇ) ಶೇಕಡಾವಾರು ಪ್ರಮಾಣ

  • ಒಟ್ಟು ಆರೋಗ್ಯ ವೆಚ್ಚದಲ್ಲಿ ಹೆಚ್ಚಿದ ಸರ್ಕಾರದ ಆರೋಗ್ಯ ವೆಚ್ಚ ಪಾಲು: ಒಟ್ಟು ಆರೋಗ್ಯ ವೆಚ್ಚ(ಟಿಎಚ್ಇ)ದಲ್ಲಿ ಸರ್ಕಾರದ ಪಾಲು 2014-15ರಲ್ಲಿ ಇದ್ದ 29%ನಿಂದ  2021-22ರಲ್ಲಿ 48%ಗೆ ಏರಿಕೆಯಾಗಿದೆ. ಈ ಬದಲಾವಣೆಯು ಸಾರ್ವಜನಿಕ ಆರೋಗ್ಯ ಸೇವೆಗಳ ಮೇಲೆ ಹೆಚ್ಚಿನ ಅವಲಂಬನೆಯನ್ನು ಸೂಚಿಸುತ್ತದೆ. ಜತೆಗೆ, ನಾಗರಿಕರ ಮೇಲಿನ ಆರ್ಥಿಕ ಹೊರೆ ಕಡಿತವನ್ನು ಸೂಚಿಸುತ್ತದೆ. ಜಿಎಚ್ಇಯ ಏರಿಕೆಯು ಆರೋಗ್ಯ ಮೂಲಸೌಕರ್ಯ ಬಲಪಡಿಸುವುದು, ವೈದ್ಯಕೀಯ ಸೇವೆಗಳಿಗೆ ಪ್ರವೇಶ ಸುಧಾರಿಸುವುದು ಮತ್ತು ಆರ್ಥಿಕ ರಕ್ಷಣೆ ಹೆಚ್ಚಿಸುವಲ್ಲಿ ಸರ್ಕಾರ ನೀಡಿರುವ ಗಮನವನ್ನು ಪ್ರತಿಬಿಂಬಿಸುತ್ತದೆ.
  • ಆರೋಗ್ಯದ ಮೇಲಿನ ಸಾಮಾಜಿಕ ಭದ್ರತಾ ವೆಚ್ಚ(ಎಸ್ಎಸ್ಇ) ಬೆಳವಣಿಗೆ: ದೇಶದ ಆರೋಗ್ಯ ಹಣಕಾಸು ಕ್ಷೇತ್ರದಲ್ಲಿ ಮತ್ತೊಂದು ಸಕಾರಾತ್ಮಕ  ಪ್ರವೃತ್ತಿಯು ಸಾಮಾಜಿಕ ಭದ್ರತಾ ವೆಚ್ಚ(ಎಸ್ಎಸ್ಇ) ಹೆಚ್ಚಳವಾಗಿದೆ. ಸಾಮಾಜಿಕ ಭದ್ರತೆಯಲ್ಲಿನ ಈ ಹೆಚ್ಚಳವು ಹಣದ ಹೊರಗಿನ ಪಾವ ಕಡಿಮೆ ಮಾಡಲು ನೇರ ಪರಿಣಾಮ ಬೀರುತ್ತದೆ. ಸದೃಢವಾದ ಸಾಮಾಜಿಕ ಭದ್ರತಾ ಕಾರ್ಯವಿಧಾನವು ಅಗತ್ಯ ಆರೋಗ್ಯ ಸೇವೆಗಳನ್ನು ಪ್ರವೇಶಿಸುವ ಪರಿಣಾಮವಾಗಿ ವ್ಯಕ್ತಿಗಳು ಆರ್ಥಿಕ ಸಂಕಷ್ಟ ಮತ್ತು ಬಡತನದ ಅಪಾಯ ಎದುರಿಸುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ. ಆರೋಗ್ಯದ ಮೇಲೆ ಎಸ್ಎಸ್ಇ ಪಾಲು, ಸರ್ಕಾರಿ-ನಿಧಿಯ ಆರೋಗ್ಯ ವಿಮೆ, ಸರ್ಕಾರಿ ಉದ್ಯೋಗಿಗಳಿಗೆ ವೈದ್ಯಕೀಯ ಮರುಪಾವತಿಗಳು ಮತ್ತು ಒಟ್ಟು ಆರೋಗ್ಯ ವೆಚ್ಚದಲ್ಲಿ ಸಾಮಾಜಿಕ ಆರೋಗ್ಯ ವಿಮಾ ಕಾರ್ಯಕ್ರಮಗಳನ್ನು ಒಳಗೊಂಡಿದೆ, ಇದು 2014-15ರಲ್ಲಿ ಇದ್ದ 5.7%ನಿಂದ 2021-22ರಲ್ಲಿ 8.7%ಗೆ ಏರಿಕೆಯಾಗಿದೆ.
  • 2020-21ರಲ್ಲಿ ಒಟ್ಟು ಆರೋಗ್ಯ ವೆಚ್ಚ: ಭಾರತದ ಒಟ್ಟು ಆರೋಗ್ಯ ವೆಚ್ಚ(ಟಿಎಚ್ಇ) 7,39,327 ಕೋಟಿ ರೂ. ಅಂದರೆ ಜಿಡಿಪಿಯ 3.73% ಪ್ರಮಾಣವನ್ನು ಪ್ರತಿನಿಧಿಸುತ್ತದೆ. 2020-21ರಲ್ಲಿ ತಲಾ ವೆಚ್ಚ 5,436 ರೂ. ಇತ್ತು. ಒಟ್ಟು ಆರೋಗ್ಯ ವೆಚ್ಚವು ಪ್ರಸ್ತುತ ಸರ್ಕಾರಿ ಮತ್ತು ಖಾಸಗಿ ಮೂಲಗಳಿಂದ ಮಾಡಿದ ಬಂಡವಾಳ ವೆಚ್ಚಗಳು ಮತ್ತು ಬಾಹ್ಯ, ದಾನಿಗಳ ಕೊಡುಗೆಗಳನ್ನು ಒಳಗೊಂಡಿದೆ. ಇದರಲ್ಲಿ ಪ್ರಸ್ತುತ ಆರೋಗ್ಯ ವೆಚ್ಚ(ಸಿಎಚ್ಇ) 6,63,417 ಕೋಟಿ ರೂ. ಆಗಿದೆ(89.73% ಟಿಎಚ್ಇ). ಆದರೆ ಬಂಡವಾಳ ವೆಚ್ಚ 75,910 ಕೋಟಿ ರೂ.(10.27% ಟಿಎಚ್ಇ) ಆಗಿದೆ. ಬಂಡವಾಳ ವೆಚ್ಚ ಒಳಗೊಂಡಿರುವ ಸರ್ಕಾರಿ ಆರೋಗ್ಯ ವೆಚ್ಚ(ಜಿಎಚ್ಇ) 3,16,554 ಕೋಟಿ ರೂ. ಆಗಿದೆ. ಅಂದರೆ ಟಿಎಚ್ಇಯ 42.82%, ಜಿಡಿಪಿಯ 1.60% ಮತ್ತು ತಲಾ ವೆಚ್ಚ 2,328 ರೂ. ಆಗಿದೆ. ಇದು 2020-21ರಲ್ಲಿ ಸಾಮಾನ್ಯ ಸರ್ಕಾರದ ವೆಚ್ಚದ ಸುಮಾರು 4.98% ಆಗಿದೆ. ಜಿಎಚ್ಇನಲ್ಲಿ ಕೇಂದ್ರ ಸರ್ಕಾರದ ಕೊಡುಗೆಯು ಸುಮಾರು 35.7% ಆಗಿದ್ದರೆ, ರಾಜ್ಯ ಸರ್ಕಾರದ ಪಾಲು ಸುಮಾರು 64.3% ಆಗಿದೆ. ಕೇಂದ್ರ ಸರ್ಕಾರದ ವೆಚ್ಚದ ಗಮನಾರ್ಹ ಭಾಗವನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗಳಿಗೆ ವಿನಿಯೋಗಿಸಲಾಗಿದೆ.
  • 2021-22ರಲ್ಲಿ ಒಟ್ಟು ಆರೋಗ್ಯ ವೆಚ್ಚ: ಭಾರತದ ಒಟ್ಟು ಆರೋಗ್ಯ ವೆಚ್ಚವು 9,04,461 ಕೋಟಿ ರೂ. ಆಗಿದ್ದು, ಜಿಡಿಪಿಯ 3.83% ರಷ್ಟಿದೆ. 2021-22ರಲ್ಲಿ ತಲಾ ವೆಚ್ಚ 6,602  ರೂ. ಆಗಿದೆ. ಪ್ರಸ್ತುತ ಆರೋಗ್ಯ ವೆಚ್ಚವು ಪ್ರಮುಖ ಅಂಶವಾಗಿ ಉಳಿದಿದ್ದು, ಒಟ್ಟು 7,89,760 ಕೋಟಿ ರೂ.(87.32% ಟಿಎಚ್ಇ) ಆಗಿದೆ. ಆದರೆ ಬಂಡವಾಳ ವೆಚ್ಚವು 1,14,701 ಕೋಟಿ ರೂ.(12.68% ಟಿಎಚ್ಇ) ಆಗಿದೆ. ಸರ್ಕಾರದ ಆರೋಗ್ಯ ವೆಚ್ಚವು 4,34,163 ಕೋಟಿಗಳು ರೂ.ಗೆ ಗಮನಾರ್ಹ ಏರಿಕೆ ಕಂಡಿದೆ. ಟಿಎಚ್ಇಯ 48% ಮತ್ತು ಜಿಡಿಪಿಯ 1.84% ಒಳಗೊಂಡಿದೆ. ಇದು 2021-22ರಲ್ಲಿ ಸರ್ಕಾರದ ಸಾಮಾನ್ಯ ವೆಚ್ಚದ ಸುಮಾರು 6.12%ರಷ್ಟಿದೆ. ಸರ್ಕಾರದ ವೆಚ್ಚಗಳು ವ್ಯಾಪಕ ವಿತರಣೆಗೆ ಸಾಕ್ಷಿಯಾಗಿವೆ. ಕೇಂದ್ರ ಸರ್ಕಾರವು ಜಿಎಚ್ಇಯ 41.8% ಮತ್ತು ರಾಜ್ಯ ಸರ್ಕಾರಗಳು 58.2%ರಷ್ಟು ಕೊಡುಗೆ ನೀಡುತ್ತವೆ. ರಾಷ್ಟ್ರೀಯ ಆರೋಗ್ಯ ಮಿಷನ್, ರಕ್ಷಣಾ ವೈದ್ಯಕೀಯ ಸೇವೆಗಳು ಮತ್ತು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ಪ್ರಮುಖ ಆರೋಗ್ಯ ಉಪಕ್ರಮಗಳು ವೆಚ್ಚ ಚೌಕಟ್ಟಿನ ನಿರ್ಣಾಯಕ ಅಂಶಗಳಾಗಿ ಉಳಿದಿವೆ.
  • ಪ್ರಸ್ತುತ ಆರೋಗ್ಯ ವೆಚ್ಚದ ವಿತರಣೆ: ಪ್ರಸ್ತುತ ಆರೋಗ್ಯ ವೆಚ್ಚ(ಸಿಎಚ್ಇ) ವಿತರಣೆಯು 2020-21ರಲ್ಲಿ ಕೇಂದ್ರ ಸರ್ಕಾರದ ಪಾಲು 81,772 ಕೋಟಿ ರೂ. (ಸಿಎಚ್ಇಯ 12.33%) ಆದರೆ, ರಾಜ್ಯ ಸರ್ಕಾರಗಳಿಂದ 1,38,944 ಕೋಟಿ ರೂ.(20.94% ಸಿಎಚ್ಇ) ಆಗಿದೆ. 2021-22ರ ವೇಳೆಗೆ ಕೇಂದ್ರ ಸರ್ಕಾರದ ಸಿಎಚ್‌ಇ ಪಾಲು 1,25,854 ಕೋಟಿ ರೂ.(15.94%), ರಾಜ್ಯಗಳ ಕೊಡುಗೆ 1,71,952 ಕೋಟಿ ರೂ.(21.77%). ಹೆಚ್ಚುವರಿಯಾಗಿ, ಉದ್ಯಮಗಳು, ಎನ್‌ಜಿಒಗಳು ಮತ್ತು ಬಾಹ್ಯ ದಾನಿಗಳಿಂದ ಧನಸಹಾಯವು ಈ ಅವಧಿಯಲ್ಲಿ ಭಾರತದ ಆರೋಗ್ಯ ವ್ಯವಸ್ಥೆಗೆ ನಿರ್ಣಾಯಕ ಬೆಂಬಲ ನೀಡಿದೆ.

ಆರೋಗ್ಯ ರಕ್ಷಣೆಯ ಮೇಲೆ ಹೆಚ್ಚಿದ ಸರ್ಕಾರದ ವೆಚ್ಚ ಪರಿಣಾಮಗಳು

ಸರ್ಕಾರವು ಆರೋಗ್ಯ ವೆಚ್ಚದಲ್ಲಿ ಮಾಡಿರುವ ಸ್ಥಿರವಾದ ಹೆಚ್ಚಳವು ಆರೋಗ್ಯ ಕ್ಷೇತ್ರ ಮತ್ತು ಜನಸಂಖ್ಯೆಯ ಮೇಲೆ ಬಹು ಸಕಾರಾತ್ಮಕ ಪರಿಣಾಮಗಳನ್ನು ಬೀರಿದೆ:

  • ಆರ್ಥಿಕ ಸಂಕಷ್ಟಗಳ ಕಡಿತ: ಒಒಪಿಇ ಇಳಿಕೆಯು ನಾಗರಿಕರಿಗೆ ಆರ್ಥಿಕ ರಕ್ಷಣೆ ಖಾತರಿಪಡಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಸಾರ್ವಜನಿಕ ಆರೋಗ್ಯ ವೆಚ್ಚ ಹೆಚ್ಚಿಸುವ ಮೂಲಕ, ಸರ್ಕಾರವು ಮನೆಗಳ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಿದೆ, ಆರೋಗ್ಯವನ್ನು ಹೆಚ್ಚು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡಿದೆ. ವೈದ್ಯಕೀಯ ಆರೈಕೆ ಪಡೆಯಲು ಹಿಂದೆ ಇದ್ದ ಹಣಕಾಸಿನ ಅಡೆತಡೆಗಳನ್ನು ಎದುರಿಸಿದ ಕಡಿಮೆ ಮತ್ತು ಮಧ್ಯಮ-ಆದಾಯದ ಕುಟುಂಬಗಳಿಗೆ ಇದು ವಿಶೇಷವಾಗಿ ಗಮನಾರ್ಹವಾಗಿದೆ.
  • ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಬಲಪಡಿಸುವುದು: ಜಿಎಚ್ಇಯ ಏರಿಕೆಯು ಆರೋಗ್ಯ ಮೂಲಸೌಕರ್ಯ ಸುಧಾರಿಸಲು, ಆರೋಗ್ಯ ಸೇವೆಗಳಿಗೆ ಪ್ರವೇನ್ನು ವಿಸ್ತರಿಸಲು ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಒದಗಿಸಲಾದ ಆರೈಕೆಯ ಗುಣಮಟ್ಟ ಹೆಚ್ಚಿಸುವ ಸರ್ಕಾರದ ಗಮನವನ್ನು ಪ್ರದರ್ಶಿಸುತ್ತದೆ. ಆರೋಗ್ಯ ರಕ್ಷಣೆಯಲ್ಲಿ ಹೆಚ್ಚಿದ ಹೂಡಿಕೆಗಳು ಉತ್ತಮ ಸುಸಜ್ಜಿತ ಆಸ್ಪತ್ರೆಗಳು, ವಿಸ್ತರಿತ ಲಸಿಕಾ ಕಾರ್ಯಕ್ರಮಗಳು ಮತ್ತು ಸುಧಾರಿತ ತಡೆಗಟ್ಟುವ ಆರೈಕೆ ಸೇವೆಗಳಿಗೆ ಕೊಡುಗೆ ನೀಡಿವೆ.
  • ಸಾರ್ವತ್ರಿಕ ಆರೋಗ್ಯ ಸಂರಕ್ಷಣೆ (ಯುಎಚ್ ಸಿ) ಒದಗಿಸುವಲ್ಲಿ ಪ್ರಗತಿ: ಆರೋಗ್ಯ ವೆಚ್ಚ ಹೆಚ್ಚಿಸುವ ಸರ್ಕಾರದ ಪ್ರಯತ್ನಗಳು ಸಾರ್ವಜನಿಕ ಆರೋಗ್ಯ ಸಂರಕ್ಷಣೆ(ಯುಎಚ್ಸಿ) ಸಾಧಿಸುವ ಗುರಿಯೊಂದಿಗೆ ನಿಕಟವಾಗಿ ಜೋಡಿಸಲ್ಪಟ್ಟಿವೆ. ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳನ್ನು ವಿಸ್ತರಿಸುವ ಮೂಲಕ, ಆರೋಗ್ಯ ಸೇವೆಗಳ ಲಭ್ಯತೆ ಹೆಚ್ಚಿಸುವ ಮೂಲಕ ಮತ್ತು ಒಒಪಿಇ ಕಡಿಮೆ ಮಾಡುವ ಮೂಲಕ, ಸರ್ಕಾರವು ಎಲ್ಲಾ ನಾಗರಿಕರಿಗೆ ಕೈಗೆಟುಕುವ ಆರೋಗ್ಯ ಸೇವೆಯ ಪ್ರವೇಶ ಖಚಿತಪಡಿಸಲು ಗಮನಾರ್ಹ ದಾಪುಗಾಲುಗಳನ್ನು ಹಾಕುತ್ತಿದೆ.
  • ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸ್ಪಂದನೆ: 2020-21 ಮತ್ತು 2021-22ರ ನಡುವೆ ಆರೋಗ್ಯ ವೆಚ್ಚದಲ್ಲಿ ಆಗಿರುವ ತೀವ್ರ ಹೆಚ್ಚಳವು ಕೋವಿಡ್-19 ಸಾಂಕ್ರಾಮಿಕವು ಒಡ್ಡಿದ ಸವಾಲುಗಳನ್ನು ಎದುರಿಸುವಲ್ಲಿ ಸರ್ಕಾರದ ಪೂರ್ವಭಾವಿ ಪಾತ್ರವನ್ನು ಪ್ರತಿಬಿಂಬಿಸುತ್ತದೆ. ಈ ಅವಧಿಯಲ್ಲಿ ನಿಯೋಜಿಸಲಾದ ಹೆಚ್ಚುವರಿ ಸಂಪನ್ಮೂಲಗಳು ಆರೋಗ್ಯ ಮೂಲಸೌಕರ್ಯ ಬಲಪಡಿಸುವಲ್ಲಿ, ಪರೀಕ್ಷೆ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ವಿಸ್ತರಿಸುವಲ್ಲಿ ಮತ್ತು ಲಸಿಕಾ ಕಾರ್ಯಕ್ರಮಗಳನ್ನು ಹೊರತರುವಲ್ಲಿ ನಿರ್ಣಾಯಕವಾಗಿವೆ.

ಆರೋಗ್ಯ ಖಾತೆಗಳನ್ನು ಅರ್ಥ ಮಾಡಿಕೊಳ್ಳುವುದು

ಆರೋಗ್ಯ ಖಾತೆಗಳು ಭಾರತದಲ್ಲಿ ಆರ್ಥಿಕ ವರ್ಷಕ್ಕೆ ಆರೋಗ್ಯ ವೆಚ್ಚಗಳು ಮತ್ತು ಹಣದ ಹರಿವನ್ನು ವಿವರಿಸುತ್ತದೆ. ಆರೋಗ್ಯ ವೆಚ್ಚಗಳ ಮೂಲಗಳು ಯಾವುವು, ಇವುಗಳನ್ನು ಯಾರು ನಿರ್ವಹಿಸುತ್ತಾರೆ, ಯಾರು ಆರೋಗ್ಯ ಸೇವೆಗಳನ್ನು ಒದಗಿಸುತ್ತಾರೆ ಮತ್ತು ಯಾವ ಸೇವೆಗಳನ್ನು ಬಳಸುತ್ತಾರೆ ಮುಂತಾದ ಪ್ರಮುಖ ನೀತಿ ಪ್ರಶ್ನೆಗಳಿಗೆ ಇದು ಉತ್ತರ ನೀಡುತ್ತದೆ. ದೇಶಗಳಾದ್ಯಂತ ಅಂದಾಜುಗಳನ್ನು ಹೋಲಿಸಲು ಅನುಕೂಲವಾಗುವಂತೆ, ಆರೋಗ್ಯ ಖಾತೆಗಳ ವ್ಯವಸ್ಥೆ 2011(ಎಸ್ಎಚ್ಎ 2011) ಎಂದು ಕರೆಯಲ್ಪಡುವ ಜಾಗತಿಕ ಗುಣಮಟ್ಟದ ಮಾರ್ಗಸೂಚಿ ಪ್ರಕಾರ, ಆರೋಗ್ಯ ವೆಚ್ಚದ ಅಂದಾಜುಗಳನ್ನು ವಿವರಿಸಲು ಇದು ಒಂದು ಅಭ್ಯಾಸವಾಗಿದೆ. ಎಸ್ಎಚ್ಎ 2011 ಮಾರ್ಗಸೂಚಿಯು ಪ್ರಸ್ತುತ ಮತ್ತು ಬಂಡವಾಳ ವೆಚ್ಚಗಳಾಗಿ ವಿಂಗಡಣೆಯಾದ ವೆಚ್ಚಗಳನ್ನು ಪ್ರಸ್ತುತಪಡಿಸುತ್ತದೆ. ಪ್ರಸ್ತುತ ಆರೋಗ್ಯ ವೆಚ್ಚಗಳು(ಸಿಎಚ್ಇ) ಮತ್ತು ಅವುಗಳ ವಿವರಗಳನ್ನು ಪ್ರಸ್ತುತಪಡಿಸುವುದರ ಮೇಲೆ ಗಮನ ಕೇಂದ್ರೀಕರಿಸಲಾಗಿದೆ:

1. ಆರೋಗ್ಯ ಹಣಕಾಸು ಯೋಜನೆಗಳ ಆದಾಯ - ಆರೋಗ್ಯ ವ್ಯವಸ್ಥೆಯಲ್ಲಿ ಆರೋಗ್ಯ ಸರಕುಗಳು ಮತ್ತು ಸೇವೆಗಳಿಗೆ ಖರ್ಚು ಮಾಡಲು ಸಂಪನ್ಮೂಲಗಳನ್ನು ಒದಗಿಸುವ ಘಟಕಗಳು.

2. ಆರೋಗ್ಯ ಸಂರಕ್ಷಣಾ ಹಣಕಾಸು ಯೋಜನೆಗಳು - ಆರೋಗ್ಯ ಸರಕುಗಳು ಮತ್ತು ಸೇವೆಗಳಿಗೆ ಪಾವತಿಸಲು ಅಥವಾ ಖರೀದಿಸಲು ಹಣಕಾಸು ಮೂಲಗಳಿಂದ ಹಣ ಸ್ವೀಕರಿಸುವ ಮತ್ತು ನಿರ್ವಹಿಸುವ ಘಟಕಗಳು

3. ಆರೋಗ್ಯ ಪೂರೈಕೆದಾರರು - ಆರೋಗ್ಯ ಸರಕುಗಳು ಮತ್ತು ಸೇವೆಗಳನ್ನು ಉತ್ಪಾದಿಸಲು, ಒದಗಿಸಲು ಹಣಕಾಸು ಪಡೆಯುವ ಘಟಕಗಳು.

4. ಆರೋಗ್ಯ ಕಾರ್ಯಗಳು - ವಿವಿಧ ಆರೋಗ್ಯ ಸೇವೆಗಳಾದ್ಯಂತ ನಿಧಿಯ ಬಳಕೆಯನ್ನು ವಿವರಿಸುವುದು.

ರಾಷ್ಟ್ರೀಯ ಆರೋಗ್ಯ ಖಾತೆ

ರಾಷ್ಟ್ರೀಯ ಆರೋಗ್ಯ ಖಾತೆ(ಎನ್ಎಚ್ಎ) ಅಂದಾಜುಗಳು ಜಾಗತಿಕವಾಗಿ ಗುರುತಿಸಲ್ಪಟ್ಟ ಮಾರ್ಗಸೂಚಿ ಆಧಾರದ ಮೇಲೆ ರಚನಾತ್ಮಕವಾಗಿವೆ. ಇದನ್ನು ಆರೋಗ್ಯ ಖಾತೆಗಳ ವ್ಯವಸ್ಥೆ(ಎಸ್ಎಚ್ಎ) 2011 ಎಂದು ಕರೆಯಲಾಗುತ್ತದೆ. ಬೇರೆ ಬೇರೆ ದೇಶಗಳ ಹೋಲಿಕೆಗಳನ್ನು ಸಕ್ರಿಯಗೊಳಿಸಲು ಈ ಮಾರ್ಗಸೂಚಿ ಅತ್ಯಗತ್ಯ. ಏಕೆಂದರೆ ಇದು ಆರೋಗ್ಯ ವೆಚ್ಚಗಳ ಅಂಕಿಅಂಶ ಮತ್ತು ಮಾಹಿತಿ ಪತ್ತೆ ಮಾಡಲು ಮತ್ತು ವರದಿ ಮಾಡಲು ಪ್ರಮಾಣಿತ ಮಾರ್ಗವನ್ನು ಒದಗಿಸುತ್ತದೆ. ಎನ್ಎಚ್ಎ ಭಾರತದ ಆರೋಗ್ಯ ವ್ಯವಸ್ಥೆಯೊಳಗಿನ ಹಣಕಾಸಿನ ಹರಿವಿನ ವಿವರವಾದ ಮಾಹಿತಿ ನೀಡುತ್ತದೆ. ವಿವಿಧ ಮೂಲಗಳಿಂದ ಹಣವನ್ನು ಹೇಗೆ ಸಂಗ್ರಹಿಸಲಾಗುತ್ತದೆ, ಆರೋಗ್ಯ ಕ್ಷೇತ್ರದಾದ್ಯಂತ ಹೇಗೆ ಖರ್ಚು ಮಾಡಲಾಗುತ್ತದೆ ಮತ್ತು ಆರೋಗ್ಯ ಸೇವೆಗಳನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ವಿವರಿಸುತ್ತದೆ.

ಭಾರತದ ಎನ್ಎಚ್ಎ ಅಂದಾಜುಗಳು 2016ರ ಭಾರತದ ರಾಷ್ಟ್ರೀಯ ಆರೋಗ್ಯ ಖಾತೆಗಳ ಮಾರ್ಗಸೂಚಿಗಳಿಗೆ ಬದ್ಧವಾಗಿವೆ.  ಆರೋಗ್ಯ ಸಂರಕ್ಷಣೆ ವಲಯದ ಬದಲಾವಣೆಗಳನ್ನು ಪ್ರತಿಬಿಂಬಿಸಲು ಅಗತ್ಯವಾದ ನವೀಕರಣಗಳೊಂದಿಗೆ ಇದನ್ನು ರೂಪಿಸಲಾಗಿದೆ. ಎನ್ಎಚ್ಎ ಮಾರ್ಗಸೂಚಿಗಳು, ಕಾರ್ಯವಿಧಾನಗಳು ಮತ್ತು ಅಂದಾಜುಗಳನ್ನು ನಿರಂತರವಾಗಿ ಪರಿಷ್ಕರಿಸಲಾಗುತ್ತದೆ. ಏಕೆಂದರೆ ಭಾರತೀಯ ಆರೋಗ್ಯ ವ್ಯವಸ್ಥೆಯು ಕ್ರಿಯಾತ್ಮಕವಾಗಿದೆ ಮತ್ತು ಎನ್ಎಚ್ಎ ಅಂದಾಜುಗಳು ಬದಲಾಗುತ್ತಿರುವ ನೀತಿ, ಕಾರ್ಯಕ್ರಮ ಮತ್ತು ಆರೋಗ್ಯ ವ್ಯವಸ್ಥೆಯ ಸಂದರ್ಭವನ್ನು ಪ್ರತಿಬಿಂಬಿಸಬೇಕು. ಅಲ್ಲದೆ, ದತ್ತಾಂಶ, ಮಾಹಿತಿ ಅಥವಾ ಅಂದಾಜು ಕಾರ್ಯವಿಧಾನದ ಲಭ್ಯತೆ ಅಥವಾ ಆರೋಗ್ಯ ಖಾತೆಗಳ ವಿಧಾನಗಳು, ಮಾರ್ಗಸೂಚಿ ಅಥವಾ ಪಾಲುದಾರರ ಪ್ರತಿಕ್ರಿಯೆ ವ್ಯವಸ್ಥೆಯ ಪರಿಷ್ಕರಣೆಗಳಿಗೆ ಸಂಬಂಧಿಸಿದ ಸುಧಾರಣೆಗೆ ಯಾವಾಗಲೂ ಸಂಭಾವ್ಯತೆ ಇರುತ್ತದೆ. ಈ ಅಪ್‌ಡೇಟ್‌ಗಳು ಎನ್‌ಎಚ್‌ಎ ತಂಡ ಮತ್ತು ಎನ್‌ಎಚ್‌ಎ ತಜ್ಞರ ಗುಂಪು ಈ ನಿಟ್ಟಿನಲ್ಲಿ ಸಮರ್ಥ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಸಂಪೂರ್ಣ ಪರೀಕ್ಷೆಯ ಫಲಿತಾಂಶವಾಗಿದೆ.

ಅಂತಿಮ ತೀರ್ಮಾನ

2020-21 ಮತ್ತು 2021-22ರ ರಾಷ್ಟ್ರೀಯ ಆರೋಗ್ಯ ಖಾತೆಯ ಅಂದಾಜುಗಳು ಭಾರತದ ಆರೋಗ್ಯ ವೆಚ್ಚ ಮಾದರಿಗಳು ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ಸರ್ಕಾರದ ಹೆಚ್ಚುತ್ತಿರುವ ಹೂಡಿಕೆಗಳ ಬಗ್ಗೆ ಮೌಲ್ಯಯುತ ಒಳನೋಟಗಳನ್ನು ಒದಗಿಸುತ್ತವೆ. ಸರ್ಕಾರದ ಆರೋಗ್ಯ ವೆಚ್ಚದಲ್ಲಿ ಸ್ಥಿರವಾದ ಏರಿಕೆ, ಜನರ ವೈಯಕ್ತಿಕ ಖರ್ಚಿನಲ್ಲಿ ಇಳಿಕೆ ಮತ್ತು ಸಾಮಾಜಿಕ ಭದ್ರತಾ ವೆಚ್ಚದಲ್ಲಿನ ಬೆಳವಣಿಗೆಯು ಹೆಚ್ಚು ಹೊಂದಾಣಿಕೆಯ ಮತ್ತು ಎಲ್ಲರನ್ನೂ ಒಳಗೊಂಡ ಆರೋಗ್ಯ ವ್ಯವಸ್ಥೆಯನ್ನು ಸೂಚಿಸುತ್ತದೆ.

ಭಾರತವು ಸಾರ್ವಜನಿಕ ಆರೋಗ್ಯ ಸಂರಕ್ಷಣೆಗೆ ಆದ್ಯತೆ ನೀಡುವುದನ್ನು ಮುಂದುವರೆಸುತ್ತಿರುವುದರಿಂದ, ಈ ಅಂದಾಜುಗಳು ಹಣಕಾಸಿನ ಅಡೆತಡೆಗಳನ್ನು ಕಡಿಮೆ ಮಾಡಲು, ಆರೋಗ್ಯ ಮೂಲಸೌಕರ್ಯ ಸುಧಾರಿಸಲು ಮತ್ತು ಸಾರ್ವತ್ರಿಕ ಆರೋಗ್ಯ ಸಂರಕ್ಷಣೆ ಒದಗಿಸುವ ಗುರಿ  ಸಾಧಿಸುವತ್ತ ಸಾಗುವ ಸರ್ಕಾರದ ಪ್ರಯತ್ನಗಳನ್ನು ಎತ್ತಿ ತೋರಿಸುತ್ತವೆ. ಆರೋಗ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಸುಧಾರಣೆಗಳು, ಬಲವಾದ ಆರ್ಥಿಕ ಬದ್ಧತೆಗಳಿಂದ ಬೆಂಬಲಿತವಾಗಿದೆ, ಎಲ್ಲಾ ನಾಗರಿಕರಿಗೆ ಆರೋಗ್ಯಕರ, ಹೆಚ್ಚು ಸಮಾನ ಭವಿಷ್ಯಕ್ಕಾಗಿ ದಾರಿ ಮಾಡಿಕೊಡುತ್ತಿದೆ.

ಉಲ್ಲೇಖಗಳು:

https://pib.gov.in/PressReleasePage.aspx?PRID=2058791

https://nhsrcindia.org/national-health-accounts-records

https://nhsrcindia.org/sites/default/files/2024-09/NHA%202020-21.pdf

https://nhsrcindia.org/sites/default/files/2024-09/NHA%202021-22.pdf

ಪಿಡಿಎಫ್ ನಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ:

 

*****

 

 



(Release ID: 2062529) Visitor Counter : 6


Read this release in: Manipuri , English , Urdu , Tamil